ಬಸ್ …ಬಂತು…ಬಸ್. ಯಾವ ಊರ ಬಸ್?…ಇಲ್ಲಿಗ್ಯಾಕೆ ಬಂತು?… ಕತೆ ಹೇಳೋಕೆ ಬಂತು. ಹೌದು, ಯಾರ ಕತೆ ಹೇಳೋಕೆ ಬಂತು. ಶಾಲಿನಿ ಹೂಲಿ ಪ್ರದೀಪ್ ಕತೆ ಹೇಳೋಕೆ ಬಂತು. ಇದು ಕೆಂಪು ಹಾಗೂ ಫ್ರೀ ಬಸ್ ನ ಅನುಭವದ ಕಥನ, ತಪ್ಪದೆ ಮುಂದೆ ಓದಿ…
ಬಾಲ್ಯದಲ್ಲಿ ಅಜ್ಜಿ ಊರಿಗೆ ಹೋಗ್ಬೇಕಾದ್ರೆ ಕೆಂಪು ಬಸ್ ನ್ನ ಅವಾಗ ಹತ್ತಿದ್ದು ಬಿಟ್ರೆ ಆಮೇಲೆ ಕೆಂಪು ಬಸ್ ಹತ್ತುವ ಪ್ರಸಂಗವೇ ಬಂದಿರಲಿಲ್ಲ. ಇದರರ್ಥ ಕೆಂಪು ಬಸ್ ಹತ್ತದಷ್ಟು ಶ್ರೀಮಂತಿಕೆಯೇನು ಬಂದಿಲ್ಲ. ದ್ವಿಚಕ್ರ ವಾಹನ, ಕಾರ್ ಬಂದ್ಮೇಲೆ ಕೆಂಪು ಬಸ್ ಹತ್ತಲು ಉದಾಸೀನ, ಸೋಂಬೇರಿತನ.
ಮೊನ್ನೆ ಮರಸನಾಡಮ್ಮನ ಜಾತ್ರೆಗೆ ನಾನು, ನನ್ನ ಗೆಳತಿಯರೆಲ್ಲ ಸೇರಿ ಫ್ರೀ ಬಸ್ ಹತ್ತೋಣ ಅಂತ ವಾಕಿಂಗ್ ನಲ್ಲಿ ಟಾಕಿಂಗ್ ಮಾಡ್ಕೊಂಡು ನಿರ್ಧಾರ ಮಾಡಿದೆವು. ಮನೆಗೆ ಬಂದು ಪದ್ದಣ್ಣನಿಗೆ ಹೇಳಿದೆ, “ಪದ್ದಣ್ಣ, ನಾಳೆ 12 ಗಂಟೆಗೆ ಜಾತ್ರೆಗೆ ಹೋಗ್ಬೇಕು. ತಿಂಡಿ, ಮಧ್ಯಾಹ್ನಕ್ಕೆಲ್ಲ ಅಡುಗೆ ಮಾಡಿಟ್ಟು ಹೋಗ್ತೀನಿ” ಅಂದೆ. ಅದನ್ನ ಕೇಳಿಸಿಕೊಂಡ ನನ್ನ ಮಕ್ಳು ನಮ್ಮಮ್ಮ ಏನೂ ಪಿಜ್ಜಾ, ಬರ್ಗರಾ ಮಾಡ್ತಾಳೆ..ಅದೇ ಅನ್ನ- ಸಾರು…ಅದೇ ಪುಳಿಯೋಗರೆ… ಸುಮ್ನೆ ಏನು ಬೇಡ ಅಂತ ಹೇಳಿ, ಆಮೇಲೆ ಆರ್ಡರ್ ಮಾಡಕೊಂಡ್ರಾಯ್ತು ಅನ್ನೋ ಲೆಕ್ಕಾಚಾರದಲ್ಲಿ ನನ್ನನ್ನು ದಾಟಿಸೋಕೆ “ಅಡುಗೆಯೆಲ್ಲ ಮಾಡ್ಬೇಡಾ, ಆರಾಮ ಆಗಿ ಫ್ರೆಂಡ್ಸ್ ಜೊತೆಗೆ ಹೋಗಿ ಬಾ ಅಮ್ಮಾ”… ಅಂತ ನಯವಾಗಿ ಹೇಳಿದ್ರು. ನನಗೂ ಅವರ ಲೆಕ್ಕಾಚಾರ ಮೊದಲೇ ಗೊತ್ತಿದ್ದರಿಂದ ಬೆಳಿಗ್ಗೆ ತಿಂಡಿ ಮಾಡಿಟ್ಟು ಕೆಂಪು ಬಸ್ ಹತ್ತಿದರಾಯ್ತು ಅಂದುಕೊಂಡೆ.
ರಾತ್ರಿ ಪದ್ದಣ್ಣನಿಗೆ ಹೇಳಿದೆ “ನಾಳೆ ಕೆಂಪು ಬಸ್ ಲ್ಲಿ ಹೋಗ್ತಿದ್ದೀನಿ”…ಅಂತ ಖುಷಿಯಿಂದ ಮತ್ತೊಮ್ಮೆ ಹೇಳಿದೆ. ಅದಕ್ಕೆ ಪದ್ದಣ್ಣ “ಹೋಗ್ತಿರೋದು ಕೆಂಪು ಬಸ್ ಇಂಟರ್ನ್ಯಾಷನಲ್ ಫ್ಲೈಟ್ ಅಲ್ಲ… ಜಾಗ್ರತೆ ಇರಲಿ” ಅಂದ. ನನ್ನ ಖುಷಿ ನನಗಾಗಿತ್ತು. ಅವನ ಮಾತಿಗೆ ತಲೆ ಕೆಡ್ಸಕೊಳ್ಳದೆ ರಾತ್ರಿ ಬೇಗ ಮಲಗಿದೆ.
ಬೆಳಗ್ಗೆ ಬೇಗ ಎದ್ದವಳೇ ತಿಂಡಿ ಮಾಡಿ, ಪಾತ್ರೆ ತೊಳೆದು ಅಡುಗೆ ಮನೆ ಅಚ್ಚುಕಟ್ಟಾಗಿಟ್ಟು, ಪದ್ದಣ್ಣನಿಗೆ ಹೇಳಿದೆ “ನಾನು ಹೊರಟಿದ್ದೀನಿ ಪದ್ದಣ್ಣ… ವಾಪಾಸ್ ಮನೆಗೆ ಬಂದಾಗ ಅಡುಗೆ ಮನೆ ಹೀಗೆ ಕ್ಲೀನ್ ಇರಬೇಕು ಅಂತ ವಾರ್ನಿಂಗ್ ಕೊಟ್ಟು… ಬರ್ತೀನಿ” ಅಂದೆ.
“ಎಲ್ಲಿ ಕೆಂಪು ಬಸ್ ಗಾ?”… ಅಂದ. ನಿನ್ನೆಯಿಂದ ಹೇಳ್ತಾನೆ ಇದ್ದೀನಿ “ಕೆಂಪು ಬಸ್, ಫ್ರೀ ಬಸ್ ಅಂತ… ತಲೆ ಎಲ್ಲಿರುತ್ತೋ”… ಅಂತ ಬೈಯುತ್ತಾ ಹು ಅದೇ ಕೆಂಪು ಬಸ್ ಅಂದೆ.
“ಕೆ ಎಸ್ ಆರ್ ಟಿ ಸಿ ಬಸ್ ಅನ್ನು, ಅದೇನು ಪೆದ್ದಿ ತರ ಕೆಂಪು, ಫ್ರೀ ಬಸ್ ಅಂತೀಯಾ”… ಅಂದ ಪದ್ದಣ್ಣ. ಅಷ್ಟೂದ್ದ ಹೇಳೋಕ್ಕಿಂತ ಎರಡು ಅಕ್ಷರ ಕೆಂಪು, ಒಂದು ಅಕ್ಷರ ಫ್ರೀ ಬಸ್ ಅಂದ್ರೆ ಏನಾಗುತ್ತೆ… ನಿಮಗೆ ಅರ್ಥಾಯಿತು ಅಲ್ವಾ ಅಂದೆ. ಪದ್ದಣ್ಣ ನನ್ನೊಂದಿಗೆ ತಲೆ ಚಚ್ಚಿಕೊಳ್ಳದೆ “ರಶ್ ಇರುತ್ತೆ ಹುಷಾರಾಗಿ ಹೋಗಿ ಬಾ… ಆಗಿಲ್ಲ ಅಂದ್ರೆ ಹೇಳು ಕಾರ್ ಲ್ಲಿ ಬಿಟ್ಟು ಬರ್ತೀನಿ”…ಅಂತ ಎಕ್ಸ್ಟ್ರಾ ಲೈನ್ ಸೇರಸಿದ.
“ಕಾರ್ ಏನು ಬೇಡ ನಾನು ಕೆಂಪು, ಫ್ರೀ ಬಸ್ ಲ್ಲೇ ಹೋಗೋದು…. ನೀನೇನೂ ತೊಂದ್ರೆ ತಗೋಬೇಡ” ಅಂದೆ.
ಅಷ್ಟೋತ್ತಿಗಾಗಲೇ ಗೆಳತಿಯರು ಮನೆ ಬಾಗಿಲಿಗೆ ಬಂದು ನಿಂತಿದ್ದರು. ಆಟೋ ಹತ್ತಿ ಕೋಣನಕುಂಟೆ ಕ್ರಾಸ್ ಲ್ಲಿ ಫ್ರೀ ಕೆಂಪು ಬಸ್ ಗಾಗಿ ಕಾಯುತ್ತಿದ್ದೆವು. ಒಂದೊಂದೆ ಕೆಂಪು ಬಸ್ ಗಳು ಬಂತು, ಕಾರ್ ಲ್ಲಿ ಓಲಾಡುತ್ತಾ ಕೂತವರಿಗೆ ಮೈ ಉಜ್ಜುತ್ತಾ ಕೂಡೋಕೆ ಆಗೋಲ್ಲ ನೋಡಿ… ಬಂದ ಕೆಂಪು ಬಸ್ ನೆಲ್ಲ ಹೊರಗಿನಿಂದಲೇ ನೋಡಿ ಸೀಟ್ ಫುಲ್ ಇದೆ ಬೇಡಾ…ಈ ಬಸ್ ಲ್ಲಿ ತುಂಬಾ ಸ್ಟಾಪ್ ಕೊಡುತ್ತೆ ಬೇಡಾ…ಈ ಬಸ್ non stop ಅಲ್ಲ ಬೇಡಾ… ಅಂತೇಲ್ಲ ಲೆಕ್ಕಾ ಹಾಕುತ್ತಾ ಒಂದು ತಾಸ್ ಬಸ್ ಸ್ಟಾಪ್ ಲ್ಲೇ ಕಳದ್ವಿ. ಯಾವಾಗ ರಣ ರಣ ಬಿಸಿಲು ತಲೆಗೆ ಚುರುಗುಟ್ಟೋಕೆ ಶುರುವಾಯಿತೋ “ಇನ್ನ ಯಾವ ಬಸ್ ಬಂದ್ರು ಹತ್ತೋದೆ”… ಅಂತ ಟೀಮ್ ಲ್ಲಿ ಡಿಸ್ಕಶನ್ ಆಯಿತು. ಸ್ವಲ್ಪ ಹೊತ್ತಿಗೆ ಕೆಂಪು ಬಸ್ ವೊಂದು ಬಂತು. ಎಲ್ಲರೂ ಈ ಬಸ್ ಗೆ ಮೂಗು ಮುರಿಯೋ ಹಾಗಿಲ್ಲ ಹತ್ತೋದೆ ಅಂತ ಮೂರು ಜನ ಹತ್ತೇ ಬಿಟ್ವಿ. ಸದ್ಯಕ್ಕೆ ಮೂರು ಸೀಟ್ ಜಾಗ ನಮಗಾಗಿಯೇ ಕಾಯ್ತಾ ಇತ್ತು. ಹೋಗಿ ಮೂರು ಜನ ಕೂತ್ವಿ.
ಕಂಡಕ್ಟರ್ ಪ್ಪಾ ಎಲ್ಲಿಗೆ ಹೋಗ್ಬೇಕು…ಅಂದ.
“ಕನಕಪುರಕ್ಕೆ ಹೋಗ್ಬೇಕು… ಮೂರು ಟಿಕೆಟ್ ಕೊಡಿ” ಅಂದೆ. ಆಧಾರ್ ಕಾರ್ಡ್ ಇದೇನಾ ಅಂದ ಕಂಡಕ್ಟರ್ ಪ್ಪಾ. ಹಿಂದೆ ಆಧಾರ್ ಕಾರ್ಡ್ ಇಲ್ಲದೆ ಬಿ ಎಂ ಟಿ ಸಿ ಫ್ರೀ ಬಸ್ ಲ್ಲಿ ದುಡ್ಡು ಕೊಟ್ಟು ಟಿಕೆಟ್ ತಗೊಂಡು ಪ್ರಯಾಣಿಸಿದ್ದ ಕಹಿ ಅನುಭವ ನನಗಿತ್ತು. ಈ ಬಾರಿ ನನ್ನ ಗೆಳತಿಯರಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ತರುವಂತೆ ನೆನಪಿಸಿದ್ದೆ. ಮೂರು ಜನರ ಹತ್ರ ಆಧಾರ್ ಕಾರ್ಡ್ ಇತ್ತು. ಕೈಗೆ ಟಿಕೆಟ್ ಕೊಟ್ಟ ಕಂಡಕ್ಟರ್ ಪ್ಪಾ. ನಾವು ಬಸ್ ಲ್ಲಿ ಫ್ರೀ ಆಗಿ ಕೂತ ಖುಷಿಗೆ ಊರಿನ ಕತೆಗಳನ್ನೆಲ್ಲ ಮಾತಾಡಿದ್ದೆ ಮಾತಾಡಿದ್ದು… ಬಸ್ ಲ್ಲಿ ಕನಕಪುರ ಬಂದದ್ದು ಗೊತ್ತಾಗುತ್ತೋ ಇಲ್ವೋ ಅಂತ ಕನಕಪುರ ಬಂತಾ ಅಂತ ಮೂರು ನಾಲ್ಕು ಬಾರಿ ಎದ್ದೆದ್ದು ಕೂತ್ವಿ. ನಮ್ಮ ಕಷ್ಟ ನೋಡಲಾಗದೆ ಊರಿನ ವ್ಯಕ್ತಿಯೊಬ್ಬ ಕನಕಪುರ ಇನ್ನೂ ಮುಂದಿದೆ ಕುತ್ಕೋಳ್ರವ್ವ ನಾನು ಹೇಳ್ತಿನಿ ಅವಾಗ ಎದ್ದು ನಿಲ್ರಿ ಅಂದ. ಆ ವ್ಯಕ್ತಿ ಮೇಲೆ ಭಾರಿ ನಂಬಿಕೆ ಇಟ್ಟು ಧೈರ್ಯವಾಗಿ ಕೂತ್ವಿ. ಮತ್ತೆ ನಮ್ಮ ಏರಿ ಕೇರಿ ಸುದ್ದಿ ಶುರುವಾಯ್ತು. ಮಾತಾಡಿ ಮಾತಾಡಿ ಸುಸ್ತಾಗಿ ಮಧ್ಯೆ ಮಧ್ಯೆ ಕನಕಪುರ ಬಂತಾ ಕೇಳ್ತಿದ್ವಿ. ನಮ್ಮ ಪ್ರಶ್ನೆಗೆ ಬಸ್ ನೊಳಗಿನ ಅರ್ಧ ಜನ ಇನ್ನೂ ಬಂದಿಲ್ಲ… ಅಂತ ಉತ್ತರ ಕೊಡೋರು. ಕೂತು ಕೂತು ಮೈ ಕೈ ನೋವಿಗೆ ಮೂರು ಜನರ ಸೊಂಟ, ಬೆನ್ನು ನುಲಿಯೋಕೆ ಶುರು ಮಾಡಿದವು. ಕಾರ್ ಲ್ಲಿ ಎಷ್ಟು ಬೇಗ ಕನಕಪುರಕ್ಕೆ ಬರ್ತಿದ್ವಿ… ಬಸ್ ಲ್ಲಿ ಇಷ್ಟು ದೂರ ಆಗುತ್ತಾ ಅಂತ ಪಿಕಿ ಪಿಕಿ ಒಬ್ಬರನೊಬ್ಬರು ನೋಡ್ತಾ ಇದ್ವಿ ಕೊನೆಗೆ ಕನಕಪುರ ಬಂತು ಇಳೀರಿ ಅಂತ ಧ್ವನಿಯೊಂದು ಕೇಳಿಸಿತು.
ಮೂರು ಜನ ಅವಸರವಸರವಾಗಿ ಬಸ್ ಇಳಿದೆವು. ಇಳಿದು ಎಲ್ಲಿಗೆ ಹೋಗ್ಬೇಕು ಅಂತ ಸುತ್ತಲೂ ನೋಡಿದೆವು. ಅಷ್ಟೋತ್ತಿಗೆ ಆಟೋ ಡ್ರೈವರ್ ಎಲ್ಲಿಗೆ ಹೋಗ್ಬೇಕು ಅಂದ. ಗಂಡ, ಮಕ್ಳು ಬಿಟ್ಟು ಅದರಲ್ಲಿಯೂ ಕೆಂಪು ಫ್ರೀ ಬಸ್ ಲ್ಲಿ ಬಂದ ಖುಷಿ ಅಷ್ಟೇ ಇತ್ತು … ಆದರೆ ಮುಂದೆ ಎಲ್ಲಿ ಹೋಗ್ಬೇಕು ಅಂತ ಹೇಳೋಕೆ ನಮಗೇನೇ ಗೊತ್ತಿಲ್ಲ, ಇನ್ನೂ ಆಟೋ ಡ್ರೈವರ್ ಗೆ ಏನ್ ಹೇಳೋದು ಅಂತ ಫೋನ್ ಮಾಡಿ ಅವನ ಕೈಗೆ ಕೊಟ್ವಿ. ಫೋನ್ ಲ್ಲಿರೋರು ಎಲ್ಲಿ ಹೇಳ್ತಾರೋ ಅಲ್ಲಿ ಕರಕೊಂಡು ಹೋಗಿ ಬಿಡು ಅಂದೆವು.
ಫೋನ್ ಲ್ಲಿ ಅಡ್ರೆಸ್ ಹೇಳಿದ ಗೆಳತಿಯ ಮನೆಯ ಮುಂದೆ ಆಟೋ ಡ್ರೈವರ್ ಹೋಗಿ ಇಳಿಸಿದ.ನಾವು ಬರುವುದು ಗೊತ್ತಾಗಿ ಗೆಳತಿ ಮೊದಲೇ ಬಾಗಿಲಲ್ಲಿ ಕಾಯುತ್ತಾ ನಿಂತಿದ್ದಳು. ಪ್ರಯಾಣ ಸುಖಕರವಾಗಿತ್ತಾ ಅಂತ ಆಟೋದಿಂದ ಇಳಿಯುತ್ತಿದ್ದಂತೆ ಕೇಳಿದ್ಲು, ಮೂರು ಜನ ಬಸ್ ಸ್ವಲ್ಪನೂ ರಶ್ ಇರಲಿಲ್ಲ….ಖಾಲಿ ಇತ್ತು…. ಸೀಟ್ ಲ್ಲಿ ಕೂತು ಕೂತು ಸಾಕಾಗಿ ಹೋಯ್ತೆ….ಅಂತ ಬಾಯಿ ಒಣಗೋ ತರ ಬಸ್ ಕತೆ ಹೇಳ್ತಾ ಇದ್ವಿ, ಮಧ್ಯೆದಲ್ಲಿ ನಮ್ಮ ಎನರ್ಜಿ ಬೂಸ್ಟ್ ಮಾಡೋಕಂತ ಒಳಗಿನಿಂದ ಪಾನಕ ಬಂತು… ಗಟ ಗಟನೆ ಕುಡಿದವರೇ ಫ್ಯಾನ್ ಕೆಳಗೆ ತಣ್ಣಗೆ ಕೂತ್ವಿ. ಆಮೇಲೆ ಊಟ ಆಯ್ತು. ಮೈಯೆಲ್ಲಾ ಭಾರ ಕಣ್ಣು ನಿದ್ದೆಯಲ್ಲಿ ತೇಲಾಡುತ್ತಿತ್ತು, ಜಾತ್ರೆಗಂತ ಬಂದು ನಿದ್ದೆ ಮಾಡೋಕೆ ಬಂದಿದ್ದೀರಾ ಅಂತ ಮನಸ್ಸು ತೀವಿದಾಗಲೇ ಮೂರು ಜನ ಕಷ್ಟ ಪಟ್ಟು ಫ್ಯಾನ್ ಕೆಳಗಿಂದ ಎದ್ದು ಬಿಸಿಲಿನಲ್ಲಿ ಮರಸನಾಡಮ್ಮನ ದರ್ಶನ ಪಡೆಯೋಕೆ ಹೊರೆಟೆವು. ಜಾತ್ರೆಯಿದ್ರೂ ಯಾವುದೇ ಗಲಾಟೆಗಳಿಲ್ಲದೆ ಅಮ್ಮನವರ ದರ್ಶನ ಪಡೆದೆವು. ದೇವಿಯ ಅಲಂಕಾರ ಅದ್ಭುತವಾಗಿತ್ತು. ಕಣ್ತುಂಬಿಕೊಂಡೇವು. ದೇವಿಗೆ ಭಕ್ತಿಯಿಂದ ನಮಸ್ಕರಿಸಿ ಹೊರಗೆ ಬರೋವಷ್ಟರಲ್ಲಿ ಬೆವರ ಹನಿಗಳೆಲ್ಲ ಸೇರಿ ಫಾಲ್ಸ್ ತರ ಹರಿಯ ತೊಡಗಿತು. ಬಹು ದಿನದಿಂದ ಬಿಸಿಲಿಗೆ ಮನೆ ಬಿಟ್ಟು ಓಡಾಡದೆ ಇದ್ದ ದೇಹಗಳೆಲ್ಲ ಕನಕಪುರ ಬಂಡೆಗೆ ನಲುಗಿ, ಬೆಂಡಾಗಿ ಹೋಗಿದ್ದವು. ಎಲ್ಲೆಯೂ ಗಾಳಿ ಇಲ್ಲಾ ಬರೀ ರಣ ರಣ ಬಿಸಿಲು. ಬರಿಗಾಲಲ್ಲಿ ನಿಂತ್ರೆ ಡಾನ್ಸ್ ಆಡಿಸುವಷ್ಟು ನೆಲ ಕುದಿಯುತ್ತಿತ್ತು. ಒಂದು ವಾರ ಏನಾದ್ರೂ ಈ ಬಿಸಿಲಿನಲ್ಲಿ ನಾವು ನಿoತ್ರೆ ಕುರುಕಲು ತಿಂಡಿ ಆಗೋದಂತೂ ನಿಜ ಅನಿಸುವಷ್ಟು ಭರ್ಜರಿ ಬಿಸಿಲಿತ್ತು. ದೇವರ ದರ್ಶನ ಪಡೆದವರೇ ಎಲ್ಲೂ ನಿಲ್ಲದೆ ಸೀದಾ ಗೆಳತಿಯ ಮನೆಗೆ ಓಡೋಡಿ ಬಂದವರೇ ಫ್ಯಾನ್ ನೋಡಿದೆವು, ಖುಷಿಯಾಯಿತು… ಆದರೆಅದರ ಕೆಳಗೆ ಕೂರಲು ಸೀಟ್ ಎಲ್ಲ ಭರ್ತಿ ಆಗಿ ಹೋಗಿತ್ತು. ನಾವು ಮುಖ ನೋಡಿಕೊಳ್ಳುತ್ತಾ ಬ್ಯಾಗ್ ನಲ್ಲಿಟ್ಟಿದ್ದ ದೊಡ್ಡದೊಂದು ಕರ್ಚಿಫ್ ನಿಂದ ಉಕ್ಕುತ್ತಿದ್ದ ಬೆವರಹನಿಯನ್ನು ಒರೆಸಿಕೊಂಡು ಬಿಸಿಲಿಗೆ ನಾಲ್ಕು ಮಾತು ಕಪ್ಪೆಯಂತೆ ಲೋಚ್ ಗುಟ್ಟುತ್ತಾ ಫ್ಯಾನ್ ನಿಂದ ಸ್ವಲ್ಪ ದೂರದಲ್ಲಿದ್ದ ಕುರ್ಚಿ ಮೇಲೆ ಕೂತೆವು. 5 ಗಂಟೆ ಆಗ್ತಿದ್ದ ಹಾಗೆ ಮೂರು ಜನ ಮನೆಗೆ ಹೊರಡುವುದಾಗಿ ಎದ್ದು ನಿಂತೇವು. ಜಾತ್ರೆ ಸಂಭ್ರಮ ಸಾಯಂಕಾಲ ಜೋರಾಗಿತ್ತು. ಮನಸ್ಸಿಗೆ ಅಲ್ಲೇ ಇದ್ದು ಜಾತ್ರೆ ಕಣ್ತುಂಬಿಕೊಳ್ಳುವ ಆಸೆ ಇದ್ದರೂ ಕೆಂಪು ಬಸ್ಸಿನ ಭಯಕ್ಕೆ ನಿಲ್ಲದೆ ಹೊರಟು ನಿಂತೇವು. ತುಂಬು ಹೃದಯದಿಂದ ಗೆಳತಿ ಅರಶಿಣ ಕುಂಕುಮ ಕೊಟ್ಟು ಬೀಳ್ಕೊಟ್ಟಳು. ಕೈಯಲ್ಲಿ ಬ್ಯಾಗ್ ಹಿಡಿದು ಮತ್ತೆ ಆಟೋಪ್ಪನ ಹಿಡಿದು ಬಸ್ ಸ್ಟ್ಯಾಂಡ್ ಗೆ ಬಂದು ಇಲ್ಲಿದೆವು. “ನೋಡಿ ಮೇಡಂ, ಅಲ್ಲಿ ನಿಂತಿದೆಯಲ್ಲ ಅದು ಬೆಂಗಳೂರು ಕಡೆ ಹೋಗೋ ಬಸ್ ಬರುತ್ತೆ, ಅದರ ಪಕ್ಕಾ ಹೋಗೋಕೆ ಹೋಗ್ಬೇಡಿ ಮಂಡ್ಯಕ್ಕೆ ಹೋಗ್ತೀರಾ” ಅಂತ ಹಲ್ಲು ಕಿರಿಯುತ್ತಾ ಹೊರಟೆ ಹೋದ.
“ಆ ಆಟೋ ಡ್ರೈವರ್ ದೃಷ್ಠಿಯಲ್ಲಿ ನಾವೇನು ಪೆದ್ದರಂತೆ ಕಾಣ್ತಿದ್ದಿವಾ ಏನ್ ಕತೆ…ಏನೋಪಾ ಮೊದಲ ಬಾರಿಗೆ ಕೆಂಪು, ಫ್ರೀ ಬಸ್ ಹತ್ತಿರ ಬಹುದಷ್ಟೇ… ಬಸ್ ಬೋರ್ಡ್ ಓದೋಕೆ ಬಾರದಷ್ಟು ದಡ್ಡರೇನು ಅಲ್ಲ ಅಲ್ವಾ” ಅಂದಳು ಗೆಳತಿ. ಅದಕ್ಕೆ “ಹುಂ ಮತ್ತೆ…. ದಡ್ಡರಾಗಿದ್ರೆ ಬಸ್ ಹಿಡ್ಕೊಂಡು ಸರಿಯಾಗಿ ಕನಕಪುರಕ್ಕೆ ಬರ್ತಿದ್ವಾ” ಅಂದೆ.ಅದೆಲ್ಲಾ ಬಿಟ್ಟು ಮನೆ ಮುಟ್ಟೋಕೆ ನೋಡೋಣ ಅಂದಳು ಇನ್ನೊಬ್ಬ ಗೆಳತಿ.
ಸರಿ ಅಂತ ಮೂರು ಜನ ಬೆಂಗಳೂರು ಕಡೆ ಹೋಗೋ ಬಸ್ ಹತ್ರ ನೋಡಿದ್ರೆ ಒಂದು ಕ್ಷಣ ಗಲಿಬಿಲಿ ಆಗಿ ಹೋಯಿತು. ಒಂದು ಬಸ್ ಗೆ ಒಂದು ಬಾಗಿಲು ಆ ಬಾಗಿಲಿಗೆ ಜೋತು ಬಿದ್ದ ಜನರನ್ನು ನೋಡಿ ಇದರ ಮಧ್ಯೆ ನಾವು ಹತ್ತೋದು ಹೇಗೆ ಎಂದು ನೆನಸಿಕೊಂಡು ಬಿಸಿಲು ಇಳಿದರೂ ಮೈ ಬೆವರ ತೊಡಗಿತು. ಜನರ ನೂಕು ನುಗ್ಗುಲಿನಲ್ಲಿ ನಾವು ಮೂರು ಜನ ಕೆಂಪು ಬಸ್ ಹತ್ತಲು ಮುಂದಾದೆವು. ನಾವು ಬಸ್ ಹತ್ತುವುದಿರಲಿ, ಬಸ್ಸಿನ ಬಾಗಿಲು ಕೂಡಾ ಮುಟ್ಟಲೂ ಆಗಲಿಲ್ಲ. ಅಷ್ಟೊಂದು ಜನರ ಮಧ್ಯೆ ನಾಲ್ಕು ಹೆಜ್ಜೆ ಮುಂದಿಡಲು ಸೆಣಸಾಡಿದೆವು.
“ಮುಂದಿನ ಬಸ್ ಗೆ ಹೋಗೋಣ. ಮುಂದಿನ ಬಸ್ ಖಾಲಿ ಬರಬಹುದು. ಈ ಜನರ ಮಧ್ಯೆ ಒಳಗೆ ಹೋಗೋದು ಅಸಾಧ್ಯ” ಎಂದು ದೂರ ಸರೆದು ನಿಂತೆ. ಗೆಳತಿಯರಿಬ್ಬರೂ ಹೌದೌದು ಮುಂದಿನ ಬಸ್ ನೋಡೋಣ ಎಂದು ಅವರು ಕೂಡಾ ದೂರ ಸರಿದು ನಿಂತರು. ತುಂಬಿದ ಬಸ್ ಅಲ್ಲಿಂದ ಹೊರಟು ಹೋಯಿತು. “ಯಪ್ಪಾ… ಜನ ಹೇಗೆ ಅಲ್ವಾ.. ಅಂತೂ ಬಸ್ ಹತ್ತಕೊಂಡು ಹೋದ್ರು… ಸೋ ಕ್ರೇಜಿ ಪ್ಪಾ”… ಅಂದಳು ಗೆಳತಿ. ಹೀಗೆ ಮಾತಾಡುತ್ತಾ ನಿಂತಿದ್ದೆವು. ಮತ್ತೊಂದು ಕೆಂಪು ಬಸ್ ಬಂತು.
ಬಸ್ ಬಂತು.. ಬಂತು… ಅನ್ನುವಷ್ಟರಲ್ಲಿ ಜನ ಎಲ್ಲಿಂದ ಬಂದು ತುಂಬಿಕೊಂಡೋರೋ ಗೊತ್ತೇ ಆಗಲಿಲ್ಲ. ನೋಡ್ ನೋಡ್ತಿದ್ದ ಹಾಗೆ ಆ ಬಸ್ ಕೂಡ ಫುಲ್ ಆಗಿಯೇ ಹೋಯಿತು. ಆ ಬಸ್ಸನ್ನು ಕೂಡಾ ಹತ್ತಲು ಸಾಧ್ಯವಾಗಲಿಲ್ಲ. “ಬರೋ ಬಸ್ ಗೆಲ್ಲ ಸಿಕ್ಕಾಪಟ್ಟೆ ಕಾಂಪಿಟೇಷನ್ ನಲ್ಲಿ ಜನ ಓಡೋಡಿ ಹೋಗಿ ಹತ್ತುತ್ತಿದ್ದಾರಲ್ಲ”…ಎಂದಳು ಸಪ್ಪೆ ಮೊರೆ ಹಾಕಿಕೊಂಡು ಗೆಳತಿ. ಖಾಲಿ ಬಸ್ ಬರುತ್ತೆ ಬರುತ್ತೆ ಅಂತ ಕಾಯ್ದು ನಿಂತಿದ್ದ ನಮಗೆ ನಿರಾಸೆಯೇ ಕಾದಿತ್ತು. ಎಲ್ಲ ಬಸ್ ಹೀಗೆ ತುಂಬಿಕೊಂಡು ಉಸಿರು ಹಾಕುತ್ತಾ ಹೋಗುತ್ತಿದ್ದವು. “ಈಗ ಖಾಲಿ ಬಸ್ ಅಂತ ನಿಂತ್ರೆ ಇಲ್ಲೇ ಕತ್ತಲಾಗುತ್ತೇ…ಮಗ ಬೇರೆ ಕಾಲೇಜಿನಿಂದ ಬಂದಿರತ್ತಾನೆ”… ಅಂತ ಒಬ್ಬ ಗೆಳತಿ ಗೋಳಾಡಿದ್ರೆ, “ಅಯ್ಯೋ… ಯಜಮಾನ್ರು ಆಫೀಸ್ ಕೆಲಸದ್ಮೇಲೆ ಚೆನ್ನೈಗೆ ಹೋದವರು ರಾತ್ರಿ ಊಟಕ್ಕೆ ಬಂದು ಬಿಡ್ತಾರೆ, ಅಷ್ಟರೊಳಗೆ ಅಡುಗೆ ಮಾಡಬೇಕು ಎಂದಳು ಇನ್ನೊಬ್ಬ ಗೆಳತಿ. ನಾನು ಮಾತ್ರ ಮನೆ ಮಠ ಜವಾಬ್ದಾರಿ ಇಲ್ಲದವಳಂತೆ ಧೈರ್ಯವಾಗಿ ನಿಂತಿದ್ದೆ. ನಿಜ ಹೇಳ್ಬೇಕು ಅಂದ್ರೆ ಒಳಒಳಗೆ ನನಗೂ ಮನೆ ಕೆಲಸ ಕರೆಯುತ್ತಿತ್ತು. ಈಗ ಗೋಳಾಡುವುದು ಮುಖ್ಯವಾಗಿರಲಿಲ್ಲ. ಬಸ್ಸಿನೊಳಗೆ ಹೇಗೆ ಹೋಗುವುದು ಎನ್ನುವುದೇ ದೊಡ್ಡ ತಲೆ ನೋವಾಗಿ ಹೋಗಿತ್ತು. ಬರೋ ಬಸ್ಸುಗಳೆಲ್ಲ ಜನರಿಂದ ತುಂಬಿ ತುಳುಕಾಡುತ್ತಿತ್ತು. ಎಲ್ಲರ ಮುಖದಲ್ಲಿಯೂ ಗಾಬರಿ ಎದ್ದು ಕಾಣುತ್ತಿತ್ತು. ಈಗ ಬರೋ ಬಸ್ ಗೆ ನಾವೇ ಮೊದಲು ಪ್ರಯಾಣಿಕರಾಗಬೇಕು. ಆ ಮಟ್ಟಕ್ಕೆ ಓಡಿ ಬಸ್ ಹತ್ತಬೇಕು, ಇಲ್ಲಾಂದ್ರೆ ಕೆಂಪು ಬಸ್ ಹತ್ತೋದು ಕನಸ್ಸಲ್ಲೇ ಕಾಣಬೇಕು ಅಂತ ನಿರ್ಧಾರ ಮಾಡಿ ಮುಂದಿನ ಬಸ್ ಗೆ ಕಾಯುತ್ತಾ ನಿಂತೇವು.
ಬಸ್ ಬಂತು. ಮೂರು ಜನ ಒಂದೊಂದು ದಿಕ್ಕಿನಿಂದ ಓಡುತ್ತಾ ಬಸ್ ಬಾಗಿಲು ಮುಟ್ಟಲು ನೋಡಿದ್ವಿ. ಅನುಭವಿ ಪ್ರಯಾಣಿಕರ ಮುಂದೆ ಫ್ರೆಶರ್ ಆಟ ನಡೆಯುತ್ತಾ?… ಊಹುo ಹು… ಇಲ್ಲಾ… ದಿನ ಕನಕಪುರ ಬೆಂಗಳೂರು ಓಡಾಡುವ ಅನುಭವಿಗಳ ಮಧ್ಯೆದಲ್ಲಿ ನಾವು ತಳ್ಳಿಸಿಕೊಂಡು ಬಸ್ ಬಾಗಿಲಿನತ್ತ ಹೋಗುವ ಬದಲು ಹಿಂದೆ ಬಂದು ನಿಂತೇವು. ಗೆಳತಿಯರಿಬ್ಬರೂ ಬಿಡಲಿಲ್ಲ, ರೊಚ್ಚಿಗೆದ್ದು ಅನುಭವಿ ಪ್ರಯಾಣಿಕರ ನಡುವೆ ಜಿದ್ದಾಜಿದ್ದಿಗಿಳಿದು ಬಸ್ ನೊಳಕ್ಕೆ ನುಗ್ಗಿಯೇ ಬಿಟ್ಟರು. ನಾನು ಮಾತ್ರ ಗಲಿಬಿಲಿಯಾಗಿ ದೂರದಲ್ಲಿಯೇ ನಿಂತು ನೋಡುತ್ತಿದ್ದೆ, ಅವರಿಬ್ಬರೂ “ಶಾಲಿನಿ, ತಳ್ಳಿ ಹತ್ತು, ಇಲ್ಲಾದ್ರೆ ಆಗೋಲ್ಲ”… ಅಂತ ಕಿಟಕಿಯಿಂದ ನನ್ನನ್ನು ಗೆಳತಿಯರು ಚಿಯರ್ ಮಾಡಿದರು. ಅವರ ಕೊಟ್ಟ ಹುಮ್ಮಸ್ಸಿಗೆ ಆ ನೂಕು ನುಗ್ಗಲನ್ನು ಹೊಕ್ಕಿದೆ. ಮೊದಲು ನನ್ನ ಬ್ಯಾಗನ್ನು ಮುಂದೆ ಎಳೆದುಕೊಂಡೆ, ಆಮೇಲೆ ಮೊಬೈಲ್ ನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದೆ. ಬಾಗಿಲಿನಿಂದ ನನ್ನನ್ನು ಆಕಡೆ ಈ ಕಡೆ ತಳುವಾಗ ಫುಟ್ ಬಾಲ್ ಆಟ ನೆನಪಾಯಿತು. ಬಸ್ಸಿನ ಬಾಗಿಲು ನನಗೆ ಗೋಲ್ ತರ ಕಾಣಿಸಿತು. ಅದರೊಳಗೆ ಬಾಲ್ ತರ ನಾನು ನುಸುಳಿ ಹೋಗಬೇಕಿತ್ತು. ಆ ಕಡೆ ಈ ಕಡೆ ಗುದ್ದಾಟದಲ್ಲಿ ಅಂತೂ ಬಾಗಿಲಲ್ಲಿ ಇದ್ದ ರಾಡ್ ನ್ನು ಗಟ್ಟಿಯಾಗಿ ಹಿಡಿದು ಕಾಲನ್ನು ಮೆಟ್ಟಿಲಿನ ಮೇಲಿಟ್ಟೆ. . ಇನ್ನೇನು ಪೂರ್ತಿಯಾಗಿ ಒಳಕ್ಕೆ ಬರಬೇಕು ಅನ್ನುವಷ್ಟರಲ್ಲಿ ಮುಖಕ್ಕೆ ಅಡ್ಡಲಾಗಿ ಎರಡು ಮೂರು ಕೈಗಳು ಬಂದವು. ನನ್ನ ಕಾಲುಗಳು ಮೆಟ್ಟಿಲಿನ ಮೇಲಿದ್ದರೇ, ನನ್ನ ದೇಹ ಹೊರಕ್ಕೆ ಒದ್ದಾಡುತ್ತಿತ್ತು. ಎಂತ ಜನರೆಂದರೆ ತಾವು ಹತ್ತೋದು ಹೋಗ್ಲಿ ಹತ್ತಿದವಳ ಪೂರ್ತಿ ದೇಹವನ್ನು ಒಳಕ್ಕೆ ಬಿಡುತ್ತಿಲ್ಲವಲ್ಲ ಅನ್ನುವ ಕೋಪ ಉಕ್ಕಿ ಬಂತು.
ಬಸ್ಸನೊಳಕ್ಕೆ ನುಗ್ಗಲು ಹೆಣ್ಣು ಗಂಡು ಎನ್ನುವ ಭೇದವಿಲ್ಲದೆ ಜಗಳವಾಡುತ್ತಾ, ಬೈಯುತ್ತಾ ನಿಂತಿದ್ದರು. ನನ್ನ ಪೂರ್ತಿ ದೇಹವನ್ನು ಒಳಕ್ಕೆ ನುಗ್ಗಿಸುವಷ್ಟರಲ್ಲಿ ಹಣ್ಣಗಾಯಿ ನೀರಗಾಯಿಯಾಗಿ ಹೋದೆ. ಒಳಕ್ಕೆ ಪೂರ್ತಿ ಬಂದಿರಲಿಲ್ಲ. ಡ್ರೈವರಪ್ಪಾ ಬಸ್ ಸ್ಟಾರ್ಟ್ ಮಾಡಿಯೇ ಬಿಟ್ಟ. “ಎಲಾ… ಇವ್ನ. ಇರಪ್ಪಾ ಇನ್ನೂ ಜನ ಹತ್ತುತ್ತಿದ್ದಾರೆ “…ಅಂತ ಹೊರಗಿನಿಂದ ಕೂಗಿದ್ರು ಕೇಳಲಿಲ್ಲ. ಬಸ್ ನಿಧಾನಕ್ಕೆ ಮುಂದಕ್ಕೆ ಹೊರಟಿತು, ಹೆಣ್ಮಕ್ಕಳಿಗೆ ಬಸ್ ಫ್ರೀ ಆದ್ಮೇಲೆ ಡ್ರೈವರ್ ಗಳು ಬಸ್ ನಿಲ್ಲಸೋದೆ ಇಲ್ಲಾ ಅಂತ ಬಸ್ಸಿನಲ್ಲಿದ್ದ ಹುಡುಗುರು ಹೇಳಿ ಕಿಸಿ ಕಿಸಿ ನಗುತ್ತಿದ್ದದ್ದು ಕಿವಿಗೆ ಬಿತ್ತು. ಆಗ ಹೀಗೂ ಉಂಟೆ ಅಂದುಕೊಂಡೆ.
ಬಸ್ ನೊಳಗೆ ಸೀಟ್ ಸಿಗೋದು ಇರಲಿ ಜನರನ್ನ ತಳ್ಳಿ ನಿಲ್ಲೋಕೆ ಜಾಗ ಮಾಡಿಕೊಳ್ಳುವುದು ದೊಡ್ಡ ಸಾಹಸವೇ ಆಗಿತ್ತು. ಒಬ್ಬೊಬ್ಬರನ್ನೇ ತಳ್ಳಿ ಹಿಂದಕ್ಕೆ ಹೋಗುವಾಗ ಗಂಡು ಮಕ್ಳ ಮೈ, ಯಾರ್ ಯಾರದೋ ಬೆವರು ನಮ್ಮ ಮೈಗೆ ತಾಕಿದಾಗ ವಾಕ್ ಅಂತ ಬಾಯಲ್ಲಿ ಒಮ್ಮೆ ಬಂದು ಹೋಯಿತು. ನನ್ನ ಗೆಳತಿಯರಿಬ್ಬರಿಗೆ ಎಲ್ಲೋ ಒಂದೊಂದು ಕಡೆ ಹೇಗೋ ಸೀಟು ಸಿಕ್ಕಿತ್ತು. ನಾನು ಮಾತ್ರ ಒಂದು ಮೂಲೆಯಲ್ಲಿ ಯಾರ ಮೈ ತಾಕದಂತೆ ಜಾಗ ಮಾಡಿಕೊಂಡು ನಿಂತೆ. ಕಂಡಕ್ಟರ್ ಪ್ಪಾ ಟಿಕೆಟ್… ಟಿಕೆಟ್… ಅನ್ನುತ್ತಾ ಬಂದ. ನನ್ನ ಮುಂದೆ ನಿಂತಿದ್ದ ಹೆಣ್ಮಗಳನ್ನು ನೋಡಿ ಈ ನಿನ್ನ ಮಗ ಹಿಂದಿನ ಸ್ಟಾಪ್ ಲ್ಲಿ ಹತ್ತಿದ್ದು, ಈಗ ಟಿಕೆಟ್ ತಗೊತ್ತಿದ್ದೀಯಾ ಅಂತ ಸುಮ್ಮನೆ ಗ್ಯಾತೆ ತಗೆದ. ಆಕೆ “ಓಹ್… ಬಂದ್ಬಿಡು… ಹಿಂದೆ ಹತ್ತಿದ್ರೆ ಅಲ್ಲೇ ಟಿಕೆಟ್ ತಗೊತ್ತಿದ್ದೆ, ಇಲ್ಲಿಗೆ ಬಂದು ಯಾಕೆ ತಗೊಳ್ಳಿ” ಎಂದು ಅವಾಜ್ ಹಾಕಿ ಮಾತಾಡಿದಳು, ಘಾಟಿ ಹೆಂಗಸಿನ ಬಾಯಿಗೆ ಹತ್ತೋಕೆ ಕಂಡಕ್ಟರ್ ಪ್ಪ ಹೋಗಲಿಲ್ಲ. ಅಲ್ಲಿಂದ ದಾಟಿ ಮುಂದೆ ಟಿಕೆಟ್ ಹರಿಯೋಕೆ ಹೋದ. ಆ ಹೆಣ್ಮಗಳ ಮುoಗೋಪ ಮೂಗಿನ ತುದಿಯಿಂದ ಇನ್ನೂ ಇಳಿದಿರಲಿಲ್ಲ “ಸರ್ಕಾರ ಹೆಣ್ಮಕ್ಕಳಿಗೆ ಬಸ್ ಫ್ರೀ ಬಿಟ್ರೆ ನಾವೇನು ಮಾಡೋದು. ನಾವೇನು ಕೇಳಿದ್ವಾ…ಸುಮ್ ಸುಮ್ನ ಟಿಕೆಟ್ ಗೆ ದುಡ್ಡು ಕೇಳಿದ್ರೆ ಬಿಡ್ತೀನಾ” ಅಂತ ತನ್ನ ಸಿಟ್ಟಿನಲ್ಲಿ ಒಬ್ಬಳೇ ಬಡ ಬಡಸ್ತಿದ್ದಳು. ವಾರೆಗಣ್ಣಲ್ಲಿ ನೋಡುತ್ತಿದ್ದ ನಾನು, ಆಕೆ ನನ್ನತ್ತ ನೋಡುತ್ತಿದ್ದಂತೆ ಹೆದರಿ ಬೇರೆ ಕಡೆ ನೋಡ ತೊಡಗಿದೆ. ಸಿಟ್ಟಲ್ಲಿ ಸರ್ಕಾರವನ್ನೇ ಬಿಡದ ಆ ಹೆಣ್ಣು ಮಗಳು ಇನ್ನೂ ನಾನು, ಸಾಮಾನ್ಯ ಮಹಿಳೆಯನ್ನ ಬಿಡ್ತಾಳಾ?…ಅಂತ ಹೆದರಿ ಬೇರೆ ಕಡೆ ನೋಡುತ್ತಾ ನಿಂತೆ.
ಆ ಉರಿ ಬಿಸಿಲಿಗೆ ಎಲ್ಲರೂ ಬೆವರಿದ್ದರು. ಜೊತೆಗೆ ಯಾರ್ ಯಾರೂ ಏನೇನ್ ತಿಂದಿದ್ರೋ ಗ್ಯಾಸ್ ಸಿಕ್ಕಾಪಟ್ಟೆ ಲೀಕ್ ಆಗಿ ನನ್ನ ಮೂಗು ಬಡಿದಾಗ ಒಂದು ನಿಮಿಷ ತಲೆ ದಿಮ್ಮ್ ಅಂದಿತು. ಒಂದು ಕಡೆ ಬೆವರಿನ ವಾಸನೆ, ಇನ್ನೊಂದು ಕಡೆ ಗ್ಯಾಸ್ ವಾಸನೆ ಯಪ್ಪಾ ನಮ್ಮ ಸ್ಟಾಪ್ ಆದಷ್ಟು ಬೇಗ ಬಂದ್ರೆ ಸಾಕಪ್ಪಾ… ಸಾಕು ಅನ್ನಿಸಿ ಹೋಯಿತು.
ಡ್ರೈವರ್ ಪ್ಪಾ ಬ್ರೇಕ್ ಒತ್ತಿದಾಗಲೆಲ್ಲ ಜನರ ಮೈ ಕೈ ತಾಕುತ್ತಿತ್ತು. ಕನಕಪುರದಿಂದ ಕೋಣನಕುಂಟೆ ಬಸ್ ಸ್ಟಾಪ್ ಬರುವಷ್ಟರಲ್ಲಿ ಒಂದು ತಾಸಿನ ಮೇಲೆಯೇ ಆಗಿಯಿತು. ನಾವು ಕೋಣನಕುಂಟೆ ಬರುವಷ್ಟರಲ್ಲಿ ಪದ್ದಣ್ಣ ಮನೆಗೆ ಕರೆಯಲು ಕಾರ್ ತಂದಿದ್ದ. ಬಸ್ ನಿಂದ ಎಲ್ಲರ ಮೈ ಉಜ್ಜುತ್ತಾ ಬೆವರ ಹನಿಗಳನ್ನೆಲ್ಲ ಒರೆಸಿ ಕೊಳ್ಳುತ್ತಾ ಪದ್ದಣ್ಣನ ಕಾರ್ ಹತ್ತಿದಾಗ ಮೂರು ಜನರ ಬಾಯಲ್ಲಿ ಮೊದಲು ಬಂದ ಮಾತು “AC ಹಾಕಿ ಪ್ಲೀಸ್”….AC ಹಾಕುತ್ತಿದ್ದಂತೆ ಬಾಡಿದ ಮೂರು ಜನರ ಮುಖ ಅರಳಿತು. ಕಾರ್ ಎಷ್ಟು ತಣ್ಣಗೆ ಇದೆ ಅಲ್ವಾ ಎಂದಾಗ ಪದ್ದಣ್ಣನಿಗೆ ನಮ್ಮ ಮಾತು ವಿಚಿತ್ರವೇನಿಸಿತು. ಅವನಿಗೆ ಬಸ್ ಅನುಭವ ಹೇಳುವಷ್ಟು ತಾಳ್ಮೆ ಇರಲಿಲ್ಲ. ಮನೆ ಮುಟ್ಟಿದ ಪ್ರತಿನಿತ್ಯ ಬಸ್ ಲ್ಲಿ ಓಡಾಡುವ ವಿದ್ಯಾರ್ಥಿಗಳು, ಹಿರಿಯರು, ಕಿರಿಯರು, ಗಂಡು ಮಕ್ಳು, ಹೆಣ್ಮಕ್ಕಳು ಎಲ್ಲ ಪ್ರಯಾಣಿಕರಿಗೆ ದೊಡ್ಡ ಸೆಲ್ಯೂಟ್ ಎಂದೆ.
ಮುಕ್ತಾಯ….
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ
