‘ಕುಂತಿ ಭಾರತ’ ಕೃತಿ ಪರಿಚಯ  

ಲೇಖಕಿ ಬಿಟ್ಟೀರ ಚೋಂದಮ್ಮ ಅವರ ‘ಕುಂತಿ ಭಾರತ’ ಕೃತಿಯ ಕುರಿತು ರಾಜೇಶ್ವರಿ ದೇವೇಂದ್ರ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಕುಂತಿ ಭಾರತ
ಲೇಖಕರು : ಬಿಟ್ಟೀರ ಚೋಂದಮ್ಮ

ಪ್ರಕಾಶನ : ಹೆಚ್ ಎಸ್ ಆರ್ ಎ ಪ್ರಕಾಶನ
ಬೆಲೆ : ೧೨೦.೦೦

ಲಲಿತಮ್ಮನವರ ಕುಂತಿ ಭಾರತ ಓದಿದ ನಂತರ ನನ್ನನ್ನು ಕಾಡಿದ ಭಾವನೆಗಳು. ನಮ್ಮ ಜನಪದರು ಬಹುಷಃ ಕುಂತಿಯ ಜೀವನವನ್ನು ಅರಿತೇ ” ಹೆಣ್ಣಾಗಿ ಬಾಳ ಹೊರಬೇಡ” ಎಂದು ಹಾಡಿರಬಹುದು.

ಅತಿ ವಿಸ್ತಾರವಾದ ಮಹಾ ಭಾರತ ಕಥೆಯನ್ನು ಸರಳ ಗೊಳಿಸಿ ಸಂಕ್ಷಿಪ್ತವಾಗಿಸಿ ಓದುಗರ ಮುಂದಿಟ್ಟಿದ್ದಾರೆ ಪ್ರಬುದ್ಧ ಲೇಖಕಿ ಬಿಟ್ಟೀರ ಚೋಂದಮ್ಮನವರು.

ಅಧ್ಯಾಯ ೧ ಮತ್ತು ೨.

ಕುಂತಿ ಭಾರತದಲ್ಲಿ ಕುಂತಿಯೇ ನಾಯಕಿ. ಕೆಲವೊಮ್ಮೆ ಖಳನಾಯಕಿಯ ಪಾತ್ರ ಬೇಡದಿದ್ದರೂ ವಹಿಸಬೇಕಾದ ಅನಿವಾರ್ಯತೆಯ ಉರುಳಿಗೆ ತನ್ನ ಕೊರಳು ಕೊಡ ಬೇಕಾದ ಪರಿಸ್ಥಿತಿ. ಯಾವ ಜೀವಿಗೂ ಬೇಡವೆನಿಸುವಷ್ಟು ನೋವು ನೀಡುವ ಪಾತ್ರವಾಗಿದೆ.

ವಾನಪ್ರಸ್ಥ ಜೀವನ ಸಾಗಿಸುತ್ತಿದ್ದ ತನ್ನ ಇಳಿ ವಯಸ್ಸಿನಲ್ಲಿ ಕುಂತಿಯ ಜೀವನದ ಪೂರ್ವ ಘಟನೆಗಳ ಸಿಂಹಾವಲೋಕನ, ಕುಂತಿಯ ಅಂತರಂಗದ ಸ್ವಗತ ಓದುಗರಿಗೆ ಕಥೆಯನ್ನು ಉಣಬಡಿಸುತ್ತಾ ಸಾಗುತ್ತದೆ.

ಬಾಲ್ಯದಿಂದಲೇ ಆಕೆಯ ನೋವಿನ ಅಧ್ಯಾಯ ಪ್ರಾರಂಭ. ಹೆತ್ತ ತಂದೆ ಮತ್ತೊಬ್ಬರಿಗೆ ‌ದತ್ತು ಕೊಟ್ಟಾಗ ಅಪ್ಪ ತನ್ನನ್ನೊಂದು ಮಾತೂ ಕೇಳದೇ ಕೊಟ್ಟರಲ್ಲಾ ಎನ್ನುವ ಎನ್ನುವ ನೋವಿನ ಸರಣಿಯ ಮೊದಲ ಕೊಂಡಿಯ ಪ್ರಾರಂಭ. ಹುಟ್ಟಿದ ಮನೆ, ಜೊತೆಗಾತಿಯರನ್ನು ಆಡಿ ಬೆಳೆದ ತಾಣವನ್ನು, ಬಿಡುವ ನೋವಿನ ಕೊಂಡಿಯ ಬೆಸುಗೆ, ಎಲ್ಲ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಒಮ್ಮೆ ತವರನ್ನು ತೊರೆಯುವುದು ಲೋಕ ಪದ್ಧತಿ ಆದರೆ ನಮ್ಮ ಕಥಾ ನಾಯಕಿಗೆ ಎರಡು ಬಾರಿ ತವರನ್ನು ತೊರೆಯುವ ನೋವಿನ ಕೊಂಡಿಯ ಸೇರ್ಪಡೆ. ಋಷಿಯಾಗ್ರಹ… ನಿಗ್ರಹಿಸಿ ಅನುಗ್ರಹಿತಳಾಗಿ ಪಡೆದ ಆರು ಮಂತ್ರಗಳು. ಆದರೆ ಬಾಲಿಶತನದ ದುರಾದೃಷ್ಟದ ಹಿಂಬಾಲಿಕೆ. ಕರ್ಣನಿಗೆ ಜನ್ಮ ನೀಡಿ ಹೆತ್ತ ಮರುಕ್ಷಣವೇ ಪರಿತ್ಯಾಗದ ನೋವಿನ ಕುಣಿಕೆಯ ಸೇರ್ಪಡೆ. ಕುಂತಿಯ ನೋವಿನ ರೋದನ ಅರಣ್ಯ ರೋದನ. ಹೆತ್ತ ಮಗನನ್ನು ತಾಯಿಯೇ ಗಂಗೆಯಲ್ಲಿ ಕೈಯಾರೆ ತೇಲಿಬಿಡುವ ದುರ್ಗತಿ ಶತ್ರುಗಳಿಗೂ ಬೇಡ.

ಕುಂತಿಯ ಚತುರತೆ ರಾಜಕಾರಣದಲ್ಲಿ ಆಕೆ ತೋರುವ ಮುತ್ಸದ್ದಿತನ ವೀರತನದ ಪರಿಚಯವೂ ಸಹ ಓದುಗನಿಗೆ ಆಗುತ್ತದೆ. ಸಾಕು ತಂದೆ ಅತಿ‌‌ ಪ್ರೀತಿಯಿಂದ ಬೆಳೆಸಿ ಲೋಕವೀರ ಸುಂದರ ಪುರುಷ ಪಾಂಡುರಾಜನ ಮಡದಿಯಾಗಿ ಕುರುವಂಶದ ಸೊಸೆಯಾಗಿ, ಆರ್ಯಾವರ್ತದ ಮಹಾರಾಣಿಯಾಗುವ ಯೋಗ ಕೊಡಿಸುತ್ತಾನೆ ಆದರೆ ಅಲ್ಲಿಯೂ ಆಕೆಗೆ ನೋವಿನೆಳೆ ಗರಗಸದಂತೆ ಕತ್ತರಿಸುತ್ತದೆ. ಜೀವನದ ಮಹತ್ವದ ಘಟ್ಟವಾದ ವಿವಾಹದ ವಿಷಯದಲ್ಲೂ ತನಗೆ ಸ್ವತಂತ್ರವಿಲ್ಲವೇ!? ಎನ್ನುವ ಖೇದದ ಜೊತೆಗೆ ಸದಾ ಕಿತ್ತು ತಿನ್ನುವ ಕರುಳ ಕುಡಿ ಕರ್ಣನ ನೆನೆಪಿನ ನೋವು.

ಅಧ್ಯಾಯ ೩

ಆರ್ಯಾವರ್ತದ ಚಕ್ರವರ್ತಿಯನ್ನು ವರಿಸಿದರೂ ಸಂಸಾರ ಸುಖದಿಂದ ದೂರಾದ ನೋವು, ನಂತರ ಸವತಿ ಮಾದ್ರಿಯ ಆಗಮನ ಪತಿಯ ನಿರ್ಲಕ್ಷ್ಯದ ನೋವು ನುಂಗುವುದಷ್ಟೇ ಕುಂತಿಯ ಕೆಲಸವಾಗಿತ್ತು. ಮಾದ್ರಿಯ ದುರಹಂಕಾರ ಸಹಿಸಿದ ನೋವು ಭೂಮಿ ತೂಕದ ” ಪೃಥೆಗೆ” ಯಾವ ತಪ್ಪನ್ನೂ ಮಾಡದ ತನಗೇಕೆ ಈ ಶಿಕ್ಷೆ ಎನ್ನುವ ನೋವು ಸದಾ ಭಾರವಾದ ಹೃದಯ ಹೊತ್ತೇ ತಿರುಗುವ ಕುಂತಿಯ ಬಗ್ಗೆ ಮರುಕ ಪಡದ ಮನವಿಲ್ಲ. ಅಂಬೆಯ ಶಾಪ ತಪ್ಪನೆಸಗದ ಕುಂತಿಯು ಭೋಗಿಸುವ ನೋವು.

ಅಧ್ಯಾಯ ೪

ಸುಂದರ ಪ್ರಕೃತಿಯ ನಡುವೆ ಬಾನಾಡಿಯಂತೆ ಹಾರಾಡುವ ಸಂತಸ ವನವಾಸದಲ್ಲೂ ಕುಂತಿಗೆ ಅಲಭ್ಯ. ಚಂಚಲ ಚಿತ್ತಳಾದ ಮಾದ್ರಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಕಾಯಕದಲ್ಲಿ ಪತಿಯ ಪ್ರಾಣವನ್ನೂ ಕಾಯುವ ಹೊಣೆ. ನೆಮ್ಮದಿ ಮರೀಚಿಕೆಯೇ ಹೌದು ಕುಂತಿಗೆ. ಮಾದ್ರಿಗೆ ತನಗೆ ಸಿದ್ದಿಸಿದ ಮಂತ್ರಗಳನ್ನು ಧಾರೆಯೆರೆದು ಸವತಿ ಮಾತ್ಸರ್ಯಕ್ಕತೀತಳಾಗಿ ಮೆರೆದ ಕುಂತಿ, ನಂತರ ಮಂತ್ರ ಬಲದಿಂದ ಪಡೆದ ಮಕ್ಕಳ ಲಾಲನೆ ಪಾಲನೆಯಿಂದ ಬಹುಷಃ ಕುಂತಿಗೆ ಸ್ವಲ್ಪ ನೆಮ್ಮದಿ ಸಿಕ್ಕಿರಬಹುದು ಕುಂತಿಗೆ. ಆದರೂ ಹೆತ್ತ ಕರುಳು ಹಿರಿಯ ಮಗನ ನೆನೆಪಲ್ಲಿ ಮಿಡುಕುತ್ತಲೇ ಇತ್ತು. ಪತಿಯ ಮರಣ, ಆರ್ಯಾವರ್ತದ ಮಹಾರಾಣಿಯ ಪಟ್ಟದಿಂದ ವೈಧವ್ಯದ ಪಟ್ಟಕ್ಕೆ ಇಳಿಕೆ. ನೋವಿಗೆ ಮುಕ್ತಿ ಸಿಗಲೆಂದು ಸಹಗಮನಕ್ಕೆ ಮನಸ್ಸು ಮಾಡಿದರೂ ವಿಧಿ ಆಕೆಗೆ ಅವಕಾಶ ನೀಡದೆ ಮುಂದಿನ ಮಹಾ ನೋವುಗಳಿಗೆ ನಾಂದಿ ಹಾಡಿತು.

ಅಧ್ಯಾಯ ‌೭

ಮಕ್ಕಳ ಪರೀಕ್ಷಾರ್ಥ ಪ್ರದರ್ಶನದಲ್ಲಿ ಹಿರಿಯ ಪುತ್ರನ ಜಾಡು ತಿಳಿದರೂ, ಸೂತಪುತ್ರನೆಂಬ ಅವಮಾನ ಆತ ಅನುಭವಿಸುತ್ತಿದ್ದರೂ ಅವನು ಸೂರ್ಯದೇವನ ಅಂಶಜನೆಂದು ಹೇಳಲಾರದ ದುಸ್ಥಿತಿ ಕುಂತಿಯದು. ಆಕೆಯ ಒಡಲ ನೋವು ಶತ್ರುಗಳಿಗೂ ಬೇಡವೆನ್ನಿಸುವ ಮನೋಭಾವ ಓದುಗರಿಗೆ ಮೂಡುವಂತೆ ಕುಂತಿ ಭಾರತದಲ್ಲಿ ಲೇಖಕಿ ಮನೋಜ್ಞವಾಗಿ ಚಿತ್ರಿಸಿದ್ದಾರೆ.

ಅಧ್ಯಾಯ ೮

ತನ್ನ ಮಕ್ಕಳಿಗಾಗಿ ದುರ್ಯೋಧನ ವೈಭವೋಪೇತವಾದ ಅರಮನೆ ನಿರ್ಮಾಣ ಮಾಡಿಸಿ ಕೊಟ್ಟ ಹಿಂದಿನ ಸಂಚನ್ನು ಕುಂತಿಯ ಚಾಣಾಕ್ಷ ಬುದ್ದಿ ಷಡ್ಯಂತ್ರದ ವಾಸನೆಯನ್ನು ಗ್ರಹಿಸಿತ್ತು.

ಅಧ್ಯಾಯ ೯

ವಿದುರನ ಮಾರ್ಮಿಕ ಮಾತುಗಳಲ್ಲಿ ಕುಂತಿ ಗ್ರಹಿಸಿ ಯುಧಿಷ್ಠಿರನೊಂದಿಗೆ ಎಚ್ಚರಿಕೆ ವಹಿಸುತ್ತಾಳೆ.

ಅಧ್ಯಾಯ ೧೦

ಹಿಡಿಂಬಿಯು ರಾಕ್ಷಸ ಕುಲದವಳಾದರೂ ಆಕೆಯ ನಯವಿನಯಕ್ಕೆ ಬೆಲೆ ನೀಡಿ ಭೀಮ ಪತ್ನಿಯಾಗಿ ಸ್ವೀಕರಿಸುವ ಆಕೆಯ ಹಿರಿಭಾವ ಮೆಚ್ಚುವಂಥದ್ದು.

ಅಧ್ಯಾಯ ೧೧

ಏಕಚಕ್ರ ನಗರದಲ್ಲಿ ತಮ್ಮ ಆಶ್ರಯ ದಾತರ ನೋವಿಗೆ ‌ಸ್ಪಂದಿಸಿ ಇಡೀ ಏಕಚಕ್ರ ನಗರವನ್ನೇ ಕಾಪಾಡಿದ ಧೈರ್ಯ ಶಾಲಿ ಕುಂತಿಗೆ, ರಾಜರಾಗಿ ಮೆರೆಯಬೇಕಾಗಿದ್ದ ತನ್ನ ಮಕ್ಕಳು ಭಿಕ್ಷೆ ಬೇಡುವ ಪರಿಸ್ಥಿತಿಯ ನೋವು.‌

ಅಧ್ಯಾಯ ೧೨

ಪಾಂಚಾಲದಲ್ಲಿ ಅರ್ಜುನ ಗೆದ್ದು ಪಡೆದ ಪಾಂಚಾಲಿಯನ್ನು ಹಣ್ಣೆಂದು ಭಾವಿಸಿ ಮಕ್ಕಳಿಗೆ ಹಂಚಿಕೊಳ್ಳಿರೆಂದು ಹೇಳಿ ಆದ ಅಭಾಸಕ್ಕೆ ಅದು ಶಿವನಿಂದಲೇ ಪೂರ್ವ ನಿಯೋಜಿತವಾದದ್ದು ಎಂದು ಅರಿವಾದ ನಂತರವೂ ತಪ್ಪಿತಸ್ಥ ಭಾವದಲ್ಲಿ ನರಳುತ್ತಾಳೆ.

ಅಧ್ಯಾಯ ೧೩

ದ್ರುಪದ ತನ್ನಳಿಯಂದಿರಿಗೆ ವೈಭವೋಪೇತವಾದ ಸಕಲ ಸೌಲಭ್ಯಗಳನ್ನು ಮಾಡಿದ್ದರೂ ಸ್ವಾಭಿಮಾನಿಯಾದ ಕುರುವಂಶದ ಸೊಸೆಯಾದ ಕುಂತಿಗೆ ತನ್ನ ಮಕ್ಕಳು ಸ್ವಾವಲಂಬಿಯಾಗಿರಲೆನ್ನುವ ಮನಸ್ಥಿತಿ ಇಲ್ಲಿ ಕಾಣುತ್ತಾರೆ ಓದುಗರು.

ಅಧ್ಯಾಯ ೧೪

ಭೀಷ್ಮರು ಪಾಂಡವರ ಜೊತೆ ಹೋಗುವ ಇಚ್ಛೆ ವ್ಯಕ್ತಪಡಿಸುವುದು ಹೊಸ ಮಾಹಿತಿ. ಮೂಲದಲ್ಲಿ ಗಜಗೌರಿ ವ್ರತದ ಉತ್ಸವ ಹಸ್ತಿನಾವತಿಯಲ್ಲಿ ಕುಂತಿಯ ಮನೆಯಮುಂದೆ ಸಾಗಿದಾಗ ತನಗೆ ಆಹ್ವಾನ ಕೊಟ್ಟಿಲ್ಲವೆಂಬ ನೋವಿಗೆ ಪರಿಹಾರವಾಗಿ ಭೀಮಾರ್ಜುನರು ಇನ್ನೂ ಬಾಲರಾಗಿದ್ದರೂ ಸ್ವರ್ಗದಿಂದ ಐರಾವತ ತರಿಸಿ ವ್ರತ ಸಂಪನ್ನ ಗೊಳಿಸಿದರೆಂದು ಓದಿದ ನೆನೆಪು. ಆದರೆ ಕುಂತಿ ಭಾರತದಲ್ಲಿ ವ್ರತವನ್ನು ಇಂದ್ರಪ್ರಸ್ಥದಲ್ಲಿ ಕುಂತಿ ನೆರವೇರಿಸಿದ್ದು ಎಂಬ ಉಲ್ಲೇಖ ಗಮನಾರ್ಹ. ಕುಂತಿ ಮಕ್ಕಳ ಜೊತೆ ಹಸ್ತಿನಾವತಿಗೆ ಬಂದಾಗ ಆದರದಿಂದ ಅವರನ್ನು ಬರಮಾಡಿಕೊಂಡ ಗಾಂಧಾರಿ ಈ ರೀತಿ ವರ್ತಿಸಿ ವಿಧವೆ ಎಂದು ಕಟು ನುಡಿಯಾಡುವುದು ಓದುಗರನ್ನು ಅಚ್ಚರಿ ಪಡಿಸುವುದು.

ಅಧ್ಯಾಯ ೧೫

ರುಕ್ಮಿಣಿಯ ಕರೆಗೆ ಓಗೊಟ್ಟು ಕೃಷ್ಣನೊಬ್ಬನೇ ಬರುವನೆಂದು ಓದಿದ ನೆನೆಪು ಆದರೆ ಕುಂತಿ ಭಾರತದಲ್ಲಿ ಕೃಷ್ಣನ ಜೊತೆ ಅರ್ಜುನ ಬಲರಾಮರಿದ್ದ ಸಂಗತಿ ಹೊಸದು.

ಅಧ್ಯಾಯ ೧೬

ಪಾಂಡವರ ಮಿಕ್ಕ ಮಡದಿಯರ ಮಕ್ಕಳ ಮಾಹಿತಿ ಕುತೂಹಲಕಾರಿಯಾಗಿದೆ. ಪಾಂಚಾಲಿಯ ಹೆಣ್ಣು ಮಕ್ಕಳ ಉಲ್ಲೇಖವೂ ಕುತೂಹಲಕರ. ಖಾಂಡವ ದಹನದ ಹಿಂದಿನ ಕಥೆಯಲ್ಲಿ ವಿಶೇಷ ಮಾಹಿತಿಯಿದೆ.

ಅಧ್ಯಾಯ ೧೭

ಕಪಟ ದ್ಯೂತ ಚಿತ್ರಣ.

ಅಧ್ಯಾಯ ೧೮

ಪಾಂಡವರ ವನವಾಸದಾರಂಭದ ಘಟನೆಗಳು. ಪಾರ್ಥನು ಪಾಶುಪಥ ಪಡೆವ ಪ್ರಯತ್ನ.

ಅಧ್ಯಾಯ ೧೯

ನಕುಲ ಸಹದೇವರ ಬಗ್ಗೆ ಹೆಚ್ಚಿನ ಕಾಳಜಿ. ಕರ್ಣನ ಜಾಡು ತಿಳಿದು ಸಮಾಧಾನ ಪಡುವಿಕೆ. ದುರ್ಯೋಧನನಿಗೆ ವಂದಿಸುವ ಭಾವ ವಿಶಿಷ್ಟವಾಗಿದೆ. ಪಾರ್ಥನಿಗೆ ತಪೋಭೂಮಿಯಲ್ಲಿ ಋಷಿಯ ಮಾತು “ಇಲ್ಲಿ ತಮ್ಮನ್ನು ತಾವು ಗೆಲ್ಲಬೇಕೇ ಹೊರತು ಬೇರೆಯವರನ್ನಲ್ಲ” ಎಂಬ ಮಾತು ಅತ್ಯುತ್ತಮವಾಗಿದೆ. ಪ್ರಹ್ಲಾದನ ತಮ್ಮನ ಮಾಹಿತಿ, ಹಿರಣ್ಯ ಕಶಿಪುವಿನ ಮೊಮ್ಮಕ್ಕಳ ಮಾಹಿತಿ ಕುಂತಿ ಭಾರತದಲ್ಲಿ ವಿಶೇಷವೆನಿಸಿತು.

ಅಧ್ಯಾಯ ೨೦

ಪಾಂಡವರ ತೀರ್ಥ ಯಾತ್ರೆ ಧೌಮ್ಯರಿಂದ,ನಾರದರಿಂದ ಪುರಾಣ ಕಥೆಗಳು, ಜ್ಞಾನಾರ್ಜನೆ ಧರ್ಮ ವ್ಯಾಧನ ಪ್ರಕರಣ, ದ್ವೈತ ಸರೋವರದ ಬಳಿ ಜಯದ್ರಥನ ಅನುಚಿತ ವರ್ತನೆ ದ್ರೌಪದಿಯ ಬಳಿ. ದುರ್ಯೋಧನನ ಬಂಧನ. ಬಿಡುಗಡೆ ಯಕ್ಷ ಪ್ರಶ್ನೆ.

ಅಧ್ಯಾಯ ೨೧

ಅಜ್ಞಾತ ವಾಸ, ಗೋಗ್ರಹಣ

ಅಧ್ಯಾಯ ೨೨

ಮಹಾಯುದ್ಧದ ಬಗ್ಗೆ ಪಾಂಡವರ ಆಲೋಚನೆ, ವಿದುರನ ಹಿತೋಕ್ತಿ ಕೃಷ್ಣ ಸಂಧಾನ.

ಅಧ್ಯಾಯ ೨೩

ಕರ್ಣನ ಜನ್ಮ ವೃತ್ತಾಂತ, ಗೀತೋಪದೇಶ, ಮಹಾ ಯುದ್ದದ ಪ್ರಾರಂಭ, ಪ್ರತಿದಿನದ ಯುದ್ಧ ಸಂಗತಿಗಳು, ಜಯದ್ರಥನ ಜೀವ ಹರಣ.

ಅಧ್ಯಾಯ ೨೪

ಯುದ್ಧಾನಂತರದ ದೃಶ್ಯಗಳ ಚಿತ್ರಣ . ಮೃತರ ‌ಸಂಸ್ಕಾರ ಕ್ರಿಯೆ ಮನ ಕಲಕುವ ದೃಶ್ಯ ಕಣ್ಮುಂದೆ ಗೋಚರಿಸುವ ಭಾವ ತರಿಸಿದ್ಧಾರೆ ಲೇಖಕಿಯವರು. ಧರ್ಮಜನ ಪಟ್ಟಾಭಿಷೇಕ, ಪರೀಕ್ಷಿತನ ಜನನ ಅಶ್ವಮೇಧ ಯಾಗ.

ಅಧ್ಯಾಯ ೨೫

ಪರೀಕ್ಷಿತನ ಬಾಲ್ಯ, ವಿದುರ ಧೃತರಾಷ್ಟ್ರಾದಿಗಳ ವಾನಪ್ರಸ್ಥ ಜೀವನ.ಬಡಬಾಗ್ನಿಗೆ ಎಲ್ಲ ಹಿರಿಯರ ಆಹುತಿ.
ಉಪ ಸಂಹಾರ ನಾರದರಿಂದ ಹಿರಿಯರ ಅಂತ್ಯದ ಪ್ರಕರಣ ವಿವರಣೆ. ಯಾದವೀ ಕಲಹ ಕೃಷ್ಣಾವತಾರದ ಅಂತ್ಯ. ಶ್ರೀಕೃಷ್ಣನ ಮಹಾ ಪ್ರಸ್ಥಾನ. ಪಾಂಡವಾದಿಗಳು ದ್ರೌಪದೀ ಸಮೇತ ಮಹಾಪ್ರಸ್ಥಾನ. ಸಶರೀರನಾಗಿ ಶ್ವಾನದ ಜೊತೆ ಧರ್ಮಜನ ಸ್ವರ್ಗಾರೋಹಣ.‌

ಹೀಗೆ ಹಂತ ಹಂತವಾಗಿ ಕೆಲವು ಅಜ್ಞಾತ ಮಾಹಿತಿಗಳನ್ನು ಸಂಗ್ರಹಿಸಿ ಓದುಗರಿಗೆ ಸವಿಯೂಟ ಉಣಬಡಿಸಿದ ಲಲಿತಮ್ಮ ನವರ ಇನ್ನಷ್ಟು ಕಾವ್ಯ ಕನ್ನಿಕೆಯರು ಹೊರಬರಲಿ ಎನ್ನುವ ಹಾರೈಕೆ ನನ್ನದು

ಶುಭವಾಗಲಿ ಲಲಿತಮ್ಮನವರಿಗೆ


  • ರಾಜೇಶ್ವರಿ ದೇವೇಂದ್ರ – ತುಮಕೂರು
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW