ಹೊರಗೆ ದೇವರನ್ನು ಹುಡುಕುವ ಬದಲು, ನಮ್ಮನ್ನು ನಂಬಿ ದಾರಿ ತೋರಿಸುವ ಕುಟುಂಬದ ಮಾತು ಕೇಳಿದರೆ ಬದುಕೇ ರೂಪಾಂತರಗೊಳ್ಳುತ್ತದೆ, ಕತೆಗಾರ್ತಿ ಬಿ. ಆರ್. ಯಶಸ್ವಿನಿ ಅವರ ಒಂದು ನೀತಿ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ರೀ.. ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಾರೆ, ನೀವು ಹೀಗೆ ಸೋಮಾರಿಯಾಗಿದ್ದರೆ ನಿಮ್ಮ ಮಕ್ಕಳು ಕೂಡ ನಿಮ್ಮ ಹಾಗೆ ಸಮುದ್ರದಲ್ಲಿ ಮೀನು ಹಿಡಿಯಲು ಹೋಗಬೇಕಾಗುತ್ತದೆ. ಯಾವಾಗಲೂ ಮನೆಯಲ್ಲೇ ಮಲಗಿರುತ್ತೀರಾ, ಬರುವ ಒಂದು ಕೆಲಸವನ್ನೆ ಮಾಡುವುದಿಲ್ಲ.
ನಾನೊಬ್ಬಳೇ ಎಷ್ಟು ಕೆಲಸ ಮಾಡಿ ನಿಮ್ಮನ್ನು, ಮಕ್ಕಳನ್ನು ನೋಡಿಕೊಳ್ಳೋಣಾ ನನ್ನ ಜೊತೆ ಕೈಜೋಡಿಸಿ. ಇಬ್ಬರೂ ದುಡಿದು ಮಕ್ಕಳನ್ನ ಚೆನ್ನಾಗಿ ಓದಿಸಿ ವಿದ್ಯಾವಂತರನ್ನಾಗಿ ಮಾಡೋಣ. ನಾನು ಇಷ್ಟೊಂದು ಬಡಕೊಳ್ಳುತ್ತಿದ್ದರು ನೀವೇನು ಮಾತಾಡುತ್ತಿಲ್ಲ. ಕಲ್ಲು ಬಂಡೆ ಮೇಲೆ ನೀರು ಸುರಿದಂತೆ ನನ್ನ ಮಾತುಗಳು.
ಬದಲಾಗುತ್ತಿರೇನೋ ಅಂತ ಅಂದುಕೊಂಡೆ, ಆದರೆ ನೀವು ಬದಲಾಗುವುದಿಲ್ಲ. ಒಂದು ಪಕ್ಷ ಕಲ್ಲು ಬಂಡೆಗಳ ಸಂದಿಯಲ್ಲಿ ಮಣ್ಣಿದ್ದು ಅಲ್ಲಿಗೆ ನೀರು ಬಿದ್ದರೆ ಒಂದು ಸಣ್ಣದೊಂದು ಸಸಿಯಾದರು ಹುಟ್ಟುತ್ತದೆ ಏನೋ ಆದರೆ ಅದಕ್ಕೂ ಕಡೆಯಾಗಿಬಿಟ್ರಿ ನೀವು ನಿಮ್ಮ ಮುಂದೆ ಮಾತಾಡಿ, ಮಾತಾಡಿ ಸುಮ್ಮನೆ ನನ್ನ ಸಮಯವನ್ನು ವ್ಯರ್ಥ ಮಾಡಿಕೊಂಡೆ.. ಯಾವಾಗ ನಿಮಗೆ ಬುದ್ಧಿ ಬರುತ್ತೋ ಏನೋ.
ಅಮ್ಮನ ಮಾತುಗಳನ್ನು ಕೇಳಿಸಿಕೊಂಡು ದುಃಖಪಟ್ಟ ಮಕ್ಕಳು ಅಪ್ಪ ಹೇಗಾದರೂ ದುಡಿಯುವಂತೆ ಮಾಡಬೇಕು ಅಂತ ಅಂದುಕೊಂಡು ಒಂದು ಉಪಾಯವನ್ನು ಮಾಡಿ ಅಮ್ಮನ ಬಳಿ ಹೇಳಿದರು. ಅಮ್ಮ ಸರಿ ಆಯ್ತು ಮಕ್ಕಳೇ ಅದನ್ನು ಒಮ್ಮೆ ಪ್ರಯೋಗ ಮಾಡಿ ನೋಡೋಣಾ ಬನ್ನಿ ಎಂದು ಕರೆದುಕೊಂಡು ಮನೆಯೊಳಗೆ ಹೋದಳು..ಅವರ ಅಪ್ಪ ಮಾಮೂಲಿಯಂತೆ ಟಿವಿ ನೋಡುತ್ತಾ ಕುಳಿತಿದ್ದ. ಮಕ್ಕಳು ತಮ್ಮ ಉಪಾಯವನ್ನು ಪ್ರಯೋಗಿಸಿದರು.
ಅಮ್ಮ ಅಲ್ಲೇ ಬಟ್ಟೆ ಹೊಲಿಯಲು ಶುರುಮಾಡಿದಳು..
ಅಮ್ಮಾ…. ನಮ್ಮ ಶಾಲೆಯಲ್ಲಿ ನಮಗೊಬ್ಬ ಗೆಳೆಯನಿದ್ದಾನೆ..ಅವರಪ್ಪ ದಿನ ಸಮುದ್ರದಲ್ಲಿ ಮೀನು ಹಿಡಿಯಲು ಹೋಗುತ್ತಾರಂತೆ.. ಹೀಗೆ ಒಂದು ದಿನ ಮೀನು ಹಿಡಿಯಲು ಬಲೆ ಹಾಕಿದರಂತೆ,ಆ ಬಲೆಯನ್ನು ಮೇಲಕ್ಕೆತ್ತಲು ಸಾಧ್ಯವಾಗದಷ್ಟು ಭಾರವಾಗಿತ್ತಂತೆ.. ಹೇಗೋ ಕಷ್ಟಪಟ್ಟು ಮೇಲಕ್ಕೆತ್ತಿದ್ರೆ ಬಲೆಯೊಳಗೆ ಒಂದು ದೊಡ್ಡ ಟ್ರಂಕ್ ಸಿಕ್ಕಿಹಾಕಿಕೊಂಡಿತ್ತಂತೆ.. ಟ್ರಂಕ್ ತುಂಬಾ ಬೆಲೆಬಾಳುವ ಒಡವೆಗಳು , ದುಡ್ಡು ಎಲ್ಲ ಇತ್ತಂತೆ.. ಅದನ್ನು ಮನೆಗೆ ತಂದು ಇಟ್ಟುಕೊಂಡರಂತೆ.ಅವತ್ತಿನಿಂದ ಇವತ್ತಿನವರೆಗೂ ಅವರ ಅಪ್ಪ ಮೀನು ಹಿಡಿಯಲು ಹೋಗಲಿಲ್ಲವಂತೆ.
ಅಮ್ಮಾ… ನಿನಗೂ ಮೀನು ಹಿಡಿಯಲು ಬಂದಿದ್ದರೆ ಚೆನ್ನಾಗಿ ಇರುತ್ತಿತ್ತು ಅಲ್ವೇನಮ್ಮ. ಆವಾಗ ಇಷ್ಟೊಂದು ಕಷ್ಟಪಡೋದೆ ಬೇಕಾಗಿರಲಿಲ್ಲ. ಅಪ್ಪಂಗೆ ಮೀನು ಹಿಡಿಯಲು ಬರುತ್ತೆ, ಅಪ್ಪ ಒಂದು ದಿನ ಹೋಗಿ ಮೀನು ಹಿಡಿದುಕೊಂಡು ಬಂದಿದ್ದರೆ ಸಾಕಾಗಿತ್ತು. ಅಪ್ಪ ದಿನ ಮೀನು ಹಿಡಿಯಲು ಹೋಗುವುದೇ ಬೇಡ ಅಲ್ವೇನಮ್ಮ. ಅಂತ ಅಪ್ಪನಿಗೆ ಕೇಳುವಂತೆ ಜೋರಾಗಿ ರಾಗ ಎಳೆಯುತ್ತಾ ಹೇಳಿದರು.
ನಿಮ್ಮಪ್ಪ ಎಲ್ಲಿ ಹೋಗುತ್ತಾರೆ ಬಿಡಿ ಮಕ್ಕಳೇ…ನಾವೀಗೆ ಕಷ್ಟ ಪಡೋದು ತಪ್ಪಲ್ಲ. ಬನ್ನಿ ಊಟ ಮಾಡಿ ಮಲಗೋಣ..ಎಂದಳು…
ಒಂದು ದಿನ ದುಡಿದರೆ ಸಾಕು ಇವಳ ಕೈಯಲ್ಲಿ ಬೈಸಿಕೊಳ್ಳೋದು ತಪ್ಪುತ್ತದೆ ಅಂತ ಮನದಲ್ಲೇ ಲೆಕ್ಕಾಚಾರ ಹಾಕಲು ಶುರುಮಾಡಿದ ಬಸಣ್ಣಿ…
ಅವನ ಲೆಕ್ಕಾಚಾರ ಪದ್ಮಾಳಿಗೆ ತಿಳಿಯಿತು… ಆದರೆ ಮಕ್ಕಳು ಸುಮ್ಮನೆ ಹೇಳಿದ್ರು ಅಂತ ಗೊತ್ತಾದ್ರೆ ಬೈಯುತ್ತಾನೆ ಅಂತ ಅಂದುಕೊಂಡು ಪದ್ಮಾ ಅದಕ್ಕೊಂದು ಮತ್ತೆ ಉಪಾಯ ಮಾಡಿದಳು..
ರಾತ್ರಿ ಬಸಣ್ಣಿ ಮಲಗಿರುವಾಗ ಕನಸಿನಲ್ಲಿ ದೇವತೆ ಬಂದು ಹೇಳುತ್ತಿದ್ದಾಳೆಂದು ಅಂದುಕೊಳ್ಳುವಂತೆ ಪದ್ಮಾ ರಾತ್ರಿ ಎದ್ಬಿಟ್ಟು ದೇವತೆ ಮಾತಾನಾಡುತ್ತಿರುವಂತೆ ಮಾತಾಡಿದಳು..
ಮಗು ಬಸಣ್ಣಿ ಎಚ್ಚರಿಕೆ ಮಾಡಿಕೋ ಮಗನೇ.. ನಿನಗೊಂದು ಸಂತಸದ ವಿಷಯ ತಿಳಿಸುವೆ.. ಕಣ್ಣು ಬಿಡಬೇಡ, ನೀನು ಕಣ್ ಬಿಟ್ಟರೆ ನಾನು ನಿನಗೆ ಸಹಾಯ ಮಾಡುವುದನ್ನು ಬಿಟ್ಟು ಹೊರಟು ಹೋಗುತ್ತೇನೆ ಅಂತ ಹೇಳಿದಳು.ಆ ಮಾತುಗಳನ್ನು ಬಸಣ್ಣಿ ನಂಬಿ ಕಣ್ಣು ಬಿಡದೆ ಕೇಳಿಸಿಕೊಂಡನು.
ನೋಡು ಕಂದಾ ದಿನ ಮನೆಯವರು ಬೈಯ್ಯುವುದನ್ನು ಕೇಳಿಸಿಕೊಳ್ಳುವ ನಿನಗೆ ಬೇಸರವಾಗುತ್ತೆ ಅಂತ ನನಗೆ ಗೊತ್ತು.. ಹಾಗಾಗಿ ಇಂದು ನಿನಗೊಸ್ಕರ ನಾನು ಉಪಾಯವನ್ನು ಹೇಳಿಕೊಡಲು ಬಂದಿರುವೆ.. ನಿನಗೇನು ಬೇಕು ಕೇಳು ಮಗು..
ಅಮ್ಮ ನಿನಗೆ ನನ್ನ ಮೇಲೆ ಕರುಣೆ ಹುಟ್ಟಿ ಬಂದು ನನಗೇನು ವರ ಬೇಕೆಂದು ಕೇಳು ಎನ್ನುತ್ತೀರುವೆ ಸಂತಸವಾಯಿತು ನನಗೆ…
ಧನ್ಯೋಸ್ಮಿ ತಾಯಿ ನಿನಗೆ…
ಒಂದು ನಿಮಿಷ ಕಂದಾ.. ನಾನು ನಿನಗೆ ಉಪಾಯ ಹೇಳಿಕೊಡಲು ಮಾತ್ರ ಬಂದಿರುವೆ..ವರ ಅಲ್ಲ…
ನಾನು ಹೇಳಿದಂತೆ ನೀನು ನಡೆದುಕೊಂಡಾಗ ನಿನಗರಿವಿಲ್ಲದೆ ನಾನು ನಿನಗೆ ವರವನ್ನು ಕರುಣಿಸುತ್ತೇನೆ..
ಅಯ್ಯೋ ನಾನು ಬೈಸಿಕೊಳ್ಳುವುದು ತಪ್ಪುತ್ತೆ..ಬೆಳ್ಳಿಗ್ಗೆಯಾಗುವಷ್ಟರಲ್ಲಿ ಶ್ರೀಮಂತನನ್ನಾಗಿ ಮಾಡು ಅಂತ ಕೇಳುವಷ್ಟರಲ್ಲಿ ವರ ಅಲ್ಲ ಅಂತ ಹೇಳಿ ಬಿಟ್ರು… ಅಂತ ಗೊಣಗುತ್ತಿದ್ದಿದ್ದು ಪದ್ಮಾಳಿಗೆ ಕೇಳಿಸಿತು..ಬಸಣ್ಣಿ ಏನೋ ಕಣ್ಣು ಮುಚ್ಚಿದ್ರೆ ನಮ್ಮ ಪದ್ಮಾ ಏನ್ ಕಣ್ ಮುಚ್ಚಿದ್ದಳಾ.. ಇಲ್ಲ ತಾನೆ ಕೇಳಿಸಿಕೊಳ್ಳುತ್ತಿದ್ದ ಪದ್ಮಾ ಥಟ್ಟಂತ ಹೇಳಿದಳು.
ನೋಡು ಮಗನೇ ನಾನು ಹೇಳಿದ ಮಾತುಗಳಿಗೆ ಒಪ್ಪಿದ್ರೆ ಮಾತ್ರ ನಿನ್ನನ್ನು ಬೆಳ್ಳಿಗ್ಗೆಯಾಗುವಷ್ಟರಲ್ಲಿ ಶ್ರೀಮಂತನನ್ನಾಗಿ ಮಾಡುವುದು.. ನಾನು ಹೇಳಿದ ಕೆಲಸವನ್ನು ನೀನು ಮಾಡಿ ನಂಬಿಕೆ ಉಳಿಸಿಕೊಂಡರೆ ಮಾತ್ರ ನೀನು ಬಯಸಿದಂತೆ ಶ್ರೀಮಂತನಾಗುವುದು ಇಲ್ಲ ಅಂದರೆ ಈ ರೀತಿಯೇ ದಿನ ನಿತ್ಯ ಬೈಯ್ಯಿಸಿಕೊಳ್ಳಬೇಕಾಗುತ್ತದೆ..ಏನು ಮಾಡ್ತೀಯಾ ನೋಡು ಎಂದಳು.
ಕಣ್ ಮುಚ್ಚಿಕೊಂಡಿದ್ದ ಬಸಣ್ಣಿಗೆ ನಾನು ಮನಸ್ಸಿನೊಳಗೆ ಹೇಳಿಕೊಂಡಿದ್ದು ದೇವತೆಗೆ ಕೇಳಿಸಿದೆ ಎಂದರೆ ನಿಜವಾಗಿಯೂ ಅಮ್ಮ ನನಗೆ ಸಹಾಯ ಮಾಡಲು ಬಂದಿರುವಳು. ಈ ಅವಕಾಶ ಕಳೆದುಕೊಂಡರೆ ಕೋಪ ಮಾಡಿಕೊಂಡು ಮತ್ತೆಂದು ಬಾರದೆ ಹೋದರೆ ನನಗೆ ನಷ್ಟವಾಗುತ್ತದೆ. ಅಮ್ಮ ಹೇಳಿದಂತೆ ಕೇಳೋಣ.
ಸರಿ ಆಯ್ತು ತಾಯಿ ನೀನು ಹೇಳಿದಂತೆ ಕೇಳುವೆ ಅದರಂತೆ ನಡೆದುಕೊಳ್ಳುತ್ತೀನಿ ಅದೇನು ಹೇಳು ಅಮ್ಮ. ನೋಡು ಕಂದಾ ಇವತ್ತು ನಿನ್ನ ಮಕ್ಕಳು ಹೇಳಿದ್ದನ್ನು ಕೇಳಿಸಿಕೊಂಡು ನನ್ನ ನೆನೆದುಕೊಂಡು ಮಲಗಿದ್ದಿಯಾ. ನೀನು ನನ್ನನ್ನು ನೆನಪಿಸಿಕೊಂಡಿದಕ್ಕೆ ಬಂದಿರುವೆ. ನಾನು ಹೇಳಿದಂತೆ ನಡೆದುಕೊಂಡರೆ ಸಾಕು ನನಗೆ ಸಂತೃಪ್ತಿಯಾಗುತ್ತದೆ.. ನೀವೆಲ್ಲರೂ ಸಂತಸದಿಂದ ಇದ್ದರೆ ನಾನು ಸಂತಸದಲ್ಲಿರುವೆ. ನಿನ್ನಿಂದ ನಾನು ಏನನ್ನು ನಿರೀಕ್ಷಿಸುವುದಿಲ್ಲ.. ಆದರೆ ನಾನು ಹೇಳಿದಂತೆ ಮಾತ್ರ ನಡೆದುಕೊಳ್ಳಬೇಕು…ಸರಿ ಆಯ್ತು ಕೇಳಿಸಿಕೋ..
ದಿನನಿತ್ಯದಂತೆ ಮನೆಯಲ್ಲಿ ಸೋಮಾರಿಯಾಗಿ ಕಾಲ ಕಳೆಯದೆ ಮೀನು ಹಿಡಿಯಲು ಹೋಗಬೇಕು.
ಅಮ್ಮ ಅದು..ಅದು…
ಏನು ಅದು,ಅದು ಹೇಳು…
ನನಗೆ ಮೀನು ಹಿಡಿಯಲು ಬರುವುದಿಲ್ಲ ಅಂತ ನನ್ನ ಸ್ನೇಹಿತರು ಗೇಲಿ ಮಾಡುತ್ತಾರೆ.ಅದಕ್ಕೆ ನನಗೆ ಅವಮಾನವಾಗಿ ಮೀನು ಹಿಡಿಯುವುದಕ್ಕೆ ಹೋಗಲೇ ಇಲ್ಲ…ಹೋಗುವುದನ್ನು ಬಿಟ್ಟು ಮನೆಯಲ್ಲಿ ಕುಳಿತೆ..
ನೋಡು ಕಂದಾ ಇಲ್ಲಿ ಯಾರು ಎಲ್ಲವನ್ನೂ ಬಲ್ಲವರಾಗಿರುವುದಿಲ್ಲ.. ಪ್ರತಿದಿನವೂ ಕಲಿಯುವುದು ಇದ್ದೆ ಇರುತ್ತದೆ..ಕಲಿಯಬೇಕೆನ್ನುವ ಮನಸ್ಸಿದ್ದರೆ ನೀನು ಅದರ ಮೇಲೆ ಹೆಚ್ಚು ಗಮನ ಕೊಡುತ್ತೀಯಾ. ಆ ಕೆಲಸ ಪೂರ್ತಿಯಾಗಿ ಬರುವವರೆಗೂ ನಿನ್ನ ಗಮನ ಅದರಮೇಲೆ ಇರುತ್ತದೆ..ಆಗ ನೀನು ಅದನ್ನು ಚೆನ್ನಾಗಿಯೇ ಕಲಿಯುತ್ತೀಯಾ.
ಯಾರೋ ಏನೋ ಅಂದ್ರೂ ಅಂದ ಮಾತ್ರಕ್ಕೆ ಸುಮ್ಮನೆ ಮನೆಯಲ್ಲಿ ಕೂರುವ ಬದಲು ನೀನು ಎಲ್ಲಿ ತಪ್ಪು ಮಾಡುತ್ತೀದ್ದಿಯಾ ಅದನ್ನು ತಿಳಿದುಕೊಂಡು ಸರಿಪಡಿಸಿಕೊಂಡು ಮುಂದಕ್ಕೆ ಹೆಜ್ಜೆ ಇಡಬೇಕು..ನನಗಾದರೂ ಇಷ್ಟು ಬರುತ್ತದೆ ಅವರಿಗೆ ಇಷ್ಟು ಬರುವುದಿಲ್ಲ ಅಂತ ತಿಳಿದುಕೊಂಡು ಮುಂದಕ್ಕೆ ಹೆಜ್ಜೆ ಇಡು..ಆಗ ಎಲ್ಲದೂ ಸರಿಯಾಗುತ್ತದೆ.ನಾವು ಉನ್ನತ ಸ್ಥಿತಿಗೆ ಬರುತ್ತೇವೆ ಅಂತ ಗೊತ್ತಾದಾಗ ಸಹಿಸಿಕೊಳ್ಳದ ಮನಸ್ಥಿತಿಯವರು ಹೀಗೆ ಕಾಲೆಳೆಯುವುದು.. ಕಾಲೆಳೆಯುವ ಮನಸ್ಥಿತಿಯವರು ಎಲ್ಲಾ ಕಡೆಯಲ್ಲೂ ಇರುತ್ತಾರೆ.ಅವರಿಗೆಲ್ಲಾ ನೀನು
ಸಾಧಿಸಿ ತೋರಿಸಿ ಉತ್ತರ ಕೊಡಬೇಕೆ ಹೊರತು ಮಾತಿನಲ್ಲಿ ಅಲ್ಲ..ಅರ್ಥವಾಯಿತಾ ?
ಹ್ಞೂಂ ಅಮ್ಮ ಅರ್ಥವಾಯಿತು… ನೀನು ಇಷ್ಟು ಧೈರ್ಯ ನೀಡಿದರೆ ನೀನು ಹೇಳಿದಂತೆ ನಡೆದುಕೊಳ್ಳುವೆ ಅದೇನು ಹೇಳು ತಾಯಿ..
ಸರಿ ಕೇಳು ಮಗು… ದಿನಾಲೂ ನೀನು ಹೇಗೆ ಮೀನು ಹಿಡಿಯಲು ಹೋಗುತ್ತಿದ್ದೊ ಹಾಗೆ ಹೋಗು… ನಿನ್ನ ತಂದೆ,ತಾತ ನಿನಗೆ ಏನು ಹೇಳಿಕೊಟ್ಟಿದ್ದರು ಅದನ್ನು ಮನನ ಮಾಡಿಕೋ, ಒಂದು ತಿಳಿದಿಕೋ ಮಗನೇ, ಇಲ್ಲಿ ನಿನಗೇನಾದರೂ ಸ್ವಾರ್ಥವಿಲ್ಲದೆ ಪರಿಪೂರ್ಣವಾಗಿ ಕಲಿಸುವುದೆಂದರೆ ಅದು ನಿನ್ನ ತಂದೆತಾಯಿ, ಮತ್ತು ನಿನ್ನ ಕುಟುಂಬದವರು ಮಾತ್ರ.. ಅವರನ್ನು ಬಿಟ್ಟು ಯಾರು ಏನೇ ಹೇಳಿದರೂ, ಹೇಳಿಕೊಟ್ಟರು ಅದರಲ್ಲಿ ಸ್ವಲ್ಪವಾದರೂ ಸ್ವಾರ್ಥವಿರುತ್ತದೆ.. ಅದಕ್ಕೆ ನಿನ್ನ ತಾತಾ, ತಂದೆ ಅವರ ಅನುಭವವನ್ನು ನಿನಗೆ ಧಾರೆಯರೆದಿರುತ್ತಾರೆ.ಅವರು ಹೇಳಿಕೊಟ್ಟಿದ್ದನ್ನು ನೆನಪಿಸಿಕೊಂಡು ಅದರಂತೆ ಹೆಜ್ಜೆ ಇಡು.. ನೀನು ಗುರಿ ಮುಟ್ಟುವ ತನಕ ಇಟ್ಟ ಹೆಜ್ಜೆ ಹಿಂದಕ್ಕೆ ಇಡಬೇಡಾ….
ಈಗ ನಿನ್ನ ಹೊಸ ಪ್ರಯತ್ನಕ್ಕೆ ಕಲ್ಲು ಹಾಕಲು ಎಷ್ಟೊ ಮನಸ್ಸುಗಳು ಪ್ರಯತ್ನ ಪಡುತ್ತಾರೆ ಆದಕ್ಕೆಲ್ಲಾ ತಲೆ ಕೇಡಿಸಿಕೊಳ್ಳದೆ ನಿನ್ನ ಕುಟುಂಬಕ್ಕಾಗಿ ದುಡಿಯಬೇಕು. ದುಡಿದಿದ್ದನ್ನು ಅಗತ್ಯವಿರುವುದಕ್ಕಷ್ಟೆ ಖರ್ಚು ಮಾಡು, ಉಳಿದಿದ್ದನ್ನು ಕೂಡಿಡು..ನಂತರ ನಿನ್ನ ಸ್ಥಿತಿಯನ್ನು ಗಮನಿಸಿಕೊ ಆಗ ನಿನಗರಿವಿಲ್ಲದೆ ನಿನಗೆ ಬೇಕಾಗಿರುವುದನ್ನು ನಾನು ಕೊಟ್ಟಿರುತ್ತೇನೆ.
ಮತ್ತೊಂದು ವಿಷಯ ಹೊಸ ಪ್ರಯತ್ನದ ಹೊಸ ಹೆಜ್ಜೆಯ ಗುರುತುಗಳನ್ನು ಗಮನಿಸು ಬದಲಾವಣೆ ಮಾಡಿಕೊಳ್ಳಬೇಕಾಗಿರುವುದು, ಸರಿಯಾಗಿರುವುದು ಎಲ್ಲವೂ ನಿನ್ನ ಗಮನದಲ್ಲಿ ಇರುವುದರಿಂದ ಮುಂದಿನ ಹೆಜ್ಜೆಯನ್ನು ಸರಿಯಾಗಿ ಇಡಲು ಸಹಾಯವಾಗುತ್ತದೆ..ನಾನಿನ್ನು ಹೊರಡುವ ಸಮಯವಾಯಿತು..ನಿನಗೆ ಮುಂದೆ ಸಹಾಯ ಬೇಕಾದಾಗ ನಾನು ಬರುವೆ,ನಾನೇಳಿದಂತೆ ನಡೆದುಕೊ. ನಾನಿನ್ನ ಬರುತ್ತೇನೆ ನಿದ್ರಿಸು ಕಂದಾ.
ಬಸಣ್ಣಿ ಕಣ್ ಬಿಟ್ಟು ನೋಡುವಷ್ಟರಲ್ಲಿ ಪದ್ಮಾ ಮಲಗಿಕೊಂಡು ಗೊರಕೆ ಹೊಡೆಯುತ್ತಿರುವಂತೆ ನಟಿಸುತ್ತಿದ್ದಳು.ಬಸಣ್ಣಿ ನಿಜವಾಗಿಯೂ ದೇವತೆಯೇ ಬಂದು ಹೇಳಿರುವುದು ಅಂತ ಅಂದುಕೊಂಡನು.ಹಾಗೂ ದೇವತೆ ಹೇಳಿದಂತೆ ನಡೆದುಕೊಂಡು ನಂಬಿಕೆ ಉಳಿಸಿಕೊಳ್ಳುವರೆಗೂ ಇದನ್ನು ಯಾರ ಹತ್ತಿರವೂ ಹೇಳಬಾರದು.. ಹೇಳಿದರು ಯಾರು ನಂಬುವುದಿಲ್ಲ,ಮತ್ತೆ ಇದನ್ನೆ ಹೇಳಿಕೊಂಡು ಹೀಯಾಳಿಸುತ್ತಾರೆ.. ತಾಯಿ ಹೇಳಿದಂತೆ ನಡೆದುಕೊಂಡು ಸಾಧಿಸಿ ತೋರಿಸಬೇಕೆಂದು ನಿರ್ಧರಿಸಿದನು.
ನಂತರದ ದಿನಗಳಲ್ಲಿ ತಾಯಿ ಹೇಳಿದಂತೆ ನಡೆದುಕೊಂಡು ಬಡತನದಿಂದ ಸ್ವಲ್ಪ ಉನ್ನತ ಮಟ್ಟಕ್ಕೆ ತಲುಪಿದ್ದನು.ಯಾವಾಗಲೂ ಅವಮಾನಿಸಿ,ಆಡಿಕೊಳ್ಳುತ್ತಿದ್ದವರೆಲ್ಲಾ ಮಾತನಾಡಿಸುವುದಕ್ಕೆ ಹಿಂಜರಿಯುತ್ತಿದ್ದರು. ಬಸಣ್ಣಿಯ ಬಂಧುಮಿತ್ರರು ಗೌರವ ಕೊಟ್ಟು ಮಾತಾನಾಡಿಸಲು ಶುರುಮಾಡಿದ್ದರು. ಬಸಣ್ಣಿಯು ಮತ್ತು ಮಕ್ಕಳು,ಪದ್ಮಾ ಎಲ್ಲರೂ ಖುಷಿಯಿಂದ ಕಾಲ ಕಳೆಯುತ್ತಿದ್ದರು.
ಹೀಗಿರುವಾಗ ಒಂದು ದಿನ ಬಸಣ್ಣಿ ತನ್ನ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ಕುಳಿತ್ತಿದ್ದನು. ನಾನು ಎಷ್ಟೋ ದಿನಗಳಿಂದ ಕೆಲಸ ಮಾಡದೆ ಕುಳಿತ್ತಿದ್ದರಿಂದ ಪದ್ಮಾ, ಮಕ್ಕಳು ಎಷ್ಟು ಕಷ್ಟಪಟ್ಟಿದ್ದಾರೆ. ಅವತ್ತಿನಿಂದಲೇ ನಾನು ಸುಮ್ಮನೆ ಕಾಲಹರಣ ಮಾಡದೆ ದುಡಿದಿದ್ದರೆ ಇನ್ನಷ್ಟು ಆರ್ಥಿಕವಾಗಿ ಉನ್ನತ ಮಟ್ಟಕ್ಕೆ ತಲುಪಿರುತ್ತಿದೆ. ತಾಯಿ ಹೇಳಿದಂತೆ ನಾನು ದಿನನಿತ್ಯವೂ ನನ್ನ ಕೆಲಸವನ್ನು ಮೆಲುಕು ಹಾಕುತ್ತಾ ಮುಂದಿನ ಹೆಜ್ಜೆ ಇಡುತ್ತಾ ಬಂದೆ.. ಇಲ್ಲಿಯವರೆಗೂ ಬಂದಾಗ ನನಗೊಂದು ವಿಷಯ ಅರ್ಥವಾಯಿತು. ನನ್ನ ಕಣ್ಣು ತೆರಸಿದ ದೇವತೆಗೆ ಕೃತಜ್ಞತೆ ಸಲ್ಲಿಸಲೇ ಇಲ್ಲ. ತಾಯಿ ಹೇಳಿದಂತೆ ನನಗರಿವಿಲ್ಲದಂತೆ ನಿನಗೆ ಬೇಕಾಗಿರುವುದನ್ನು ಕರುಣಿಸಿರುತ್ತೇನೆಂದು ಹೇಳಿದ್ದರು.ಅದರಂತೆ ಕರುಣಿಸಿದ್ದಾರೆ ಅವರಿಗೆ ಇಂದು ಕೃತಜ್ಞತೆ ಸಲ್ಲಿಸಬೇಕು.
ರಾತ್ರಿ ಹತ್ತು ಗಂಟೆ ಸಮಯವಾಗಿತ್ತು.. ಮಕ್ಕಳು ಮಲಗಲು ಸಿದ್ದರಾಗಿದ್ದರು, ಆಗ ಬಸಣ್ಢಿ ನಿಮಗೊಂದು ಕಥೆ ಹೇಳುವೆ ಬನ್ನಿ ಎಂದು ಕರೆದನು.. ಅಕ್ಕರೆಯಿಂದ ಕರೆದ ಬಸಣ್ಣಿಯ ಪಕ್ಕದಲ್ಲಿ ಮಕ್ಕಳು ಹೋಗಿ ಕುಳಿತುಕೊಂಡರು.ಅಷ್ಟಕ್ಕೆ ಕಥೆ ಶುರುಮಾಡದೆ ಅಮ್ಮನನ್ನು ಕರೆಯಿರಿ ಅಂತ ಹೇಳಿದನು.ಮಕ್ಕಳು ಅದರಂತೆ ಕರೆದರು..ಆಗ ದೇವತೆ ಬಂದಿದ್ದನ್ನು ಹೇಳುವುದಕ್ಕಿಂತ ಮುಂಚೆ ಮಕ್ಕಳು ಹೇಳಿದ ಟ್ರಂಕ್ ನ ಕಥೆಯಿಂದ ಶುರುಮಾಡಿದ.
ಅಪ್ಪ ಇದನ್ನು ನಾವೇ ಹೇಳಿದ್ವಲಾ?
ಅಯ್ಯೋ ಮಕ್ಕಳೇ ನಾನು ನನ್ನ ಕಥೆಯನ್ನೇ ಹೇಳುತ್ತಿರುವೆ ಮಧ್ಯ ಮಾತಾನಾಡದೆ ಕೇಳಿಸಿಕೊಳ್ಳಿ
ನೀವು ಟ್ರಂಕ್ ನ ಕಥೆ ಹೇಳಿದ ಮೇಲೆ ರಾತ್ರಿ ಮಲಗಿರುವಾಗ ದೇವತೆ ಬಂದು ಹೇಳಿದ್ದನ್ನು ಹೇಳಿದನು..
ಹೌದಾ ಅಪ್ಪಾ …( ಮಕ್ಕಳಿಗೂ ಸಹ ಅವರಮ್ಮನೆ ಅಂತ ಗೊತ್ತಿದ್ದರೂ, ಗೊತ್ತಿಲ್ಲದವರಂತೆ ರಾಗ ಎಳೆಯುತ್ತಾ ಕೇಳಿದರು.)
ಹೌದು ಮಕ್ಕಳೇ.. ನಾವೀಗ ಚೆನ್ನಾಗಿದ್ದೆವೆ ಅದಕ್ಕೆ ನಾವೆಲ್ಲರೂ ದೇವರಿಗೆ ಕೃತಜ್ಞತೆ ಸಲ್ಲೀಸಬೇಕಲ್ಲವೇ ಅದಕ್ಕೆ ನಿಮ್ಮನ್ನು ಕರೆದೆ ಎಂದನು ಬಸಣ್ಣಿ…
ಅಪ್ಪಾ ಈಗ ದೇವರು ಪ್ರತ್ಯಕ್ಷವಾಗುತ್ತಾರಾ?
ಪ್ರತ್ಯಕ್ಷವಾಗಿರುತ್ತಾರೆ ದೇವರು ತಾನೇ ಕಣ್ಣಿಗೆ ಕಾಣುವುದಿಲ್ಲ..
ನೋಡಿ ನನ್ನ ಕಣ್ ತೆರೆಸಿದ ದೇವತೆ ಪ್ರತ್ಯಕ್ಷವಾಗಿ ನಿಮ್ಮ ಮುಂದೆ ಕುಳಿತಿದ್ದಾರೆ.. ನಾನೀಗ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಸ್ವೀಕರಿಸಿ ಅನ್ನುತ್ತಾ ನನ್ನ ಕಣ್ ತೆರೆಸಿದ್ದು ನೀವು ಮತ್ತು ನಿಮ್ಮ ಅಮ್ಮ ಮಕ್ಕಳೇ ನಿಮಗಿದೋ ಪ್ರೀತಿಯಿಂದ ಧನ್ಯವಾದಗಳು ಹೇಳುತ್ತಿರುವೆ ಸ್ವೀಕರಿಸಿ…
ರೀ…..
ಅಪ್ಪಾ….
ಏನ್ ಹೇಳತ್ತಿದ್ದೀರಾ ನೀವು
ಹೌದು ನಿಜವನ್ನೇ ಹೇಳುತ್ತಿರುವೆ, ಸಾಕು ಗೊತ್ತಿಲ್ಲದವರಂತೆ ಇರುವುದು ಒಪ್ಪಿಕೊಳ್ಳಿ…
ಆಯ್ತು ಅಪ್ಪಾ ಒಪ್ಪಿಕೊಳ್ಳುತ್ತೇವೆ. ಅದು ಅಮ್ಮನೇ ದೇವರು ತರಹ ಮಾತಾಡಿದ್ದು..
ರೀ ನಿಮಗೆ ಅವತ್ತೆ ಗೊತ್ತಾಯಿತು. ನಾನು ಅಷ್ಟು ಮಾತಾಡಿದರು ಏಕೆ ಸುಮ್ಮನೆ ಇದ್ರಿ ಅವತ್ತು..ಬೈಯ್ಯಲೇ ಇಲ್ಲ ನೀವು ನನಗೆ…
ಈಗ ಗೊತ್ತಾಗಿದೆ ಅಂತ ಕೆಲಸಕ್ಕೆ ಹೋಗುವುದನ್ನು ಬಿಡುವುದಿಲ್ಲ ತಾನೇ..
ಭಯಪಡಬೇಡ ಪದ್ಮಾ… ನಾನು ಕೆಲಸಕ್ಕೆ ಹೋಗದಂತೆ ಮನೆಯಲ್ಲೇ ಕುಳಿತುಕೊಳ್ಳುವ ದಿನಗಳು ಕಳೆದುಹೋದವು..ಈಗ ಏನಿದ್ದರೂ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವುದಷ್ಟೆ ನನ್ನ ಗುರಿ ಚಿಂತಿಸಬೇಡ ನಾನು ಕೆಲಸಕ್ಕೆ ಹೋಗುತ್ತೇನೆ. ನನಗಾಗುತ್ತಿದ್ದ ಸಂಕಟ, ಭಯ,ನನ್ನಲ್ಲಿದ್ದ ಗೊಂದಲಗಳು, ಎಲ್ಲವೂ ಅಂದು ನೀನು ಆಡಿದ ಮಾತುಗಳನ್ನು ಕೇಳಿದಾಗಲೇ ನನ್ನಿಂದ ಹೊರಟು ಹೋದವು..ಈಗ ನನ್ನಲ್ಲಿದ್ದ ಗೊಂದಲಗಳಿಗೆ ತೆರೆ ಬಿದ್ದಿದೆ..ಈಗ ನಾನು ಹೇಗಿರುವೇನೋ ಹಾಗೆಯೇ ಮುಂದೆನೂ ಕೂಡ ಇರುವೆ…
ಮತ್ತೆ ನಿಮಗೆ ಯಾವಾಗ ಗೊತ್ತಾಯಿತು ನಾನೇ ಮಾತಾಡಿದ್ದು ಅಂತ…
ಇವತ್ತು ಗೊತ್ತಾಯಿತು, ಇಲ್ಲಿಯವರೆಗೂ ಗೊತ್ತಿರಲಿಲ್ಲ..
ಪದ್ಮಾ ಮಕ್ಕಳನ್ನು ನೋಡ್ಬಿಟ್ಟು ನೀವು ಹೇಳಿದ್ರಾ ಅಂತ ಕೇಳಿದಳು..
ಇಲ್ಲ ಅಮ್ಮ.
ಅವರಲ್ಲ ಹೇಳಿದ್ದು… ನೀನು ಅಂದು ಒಂದು ಮಾತು ಹೇಳಿದ್ದೆ ದಿನದಲ್ಲಾದ ಘಟನೆಗಳನ್ನು ಮೆಲುಕು ಹಾಕಿ ತಪ್ಪಿದ್ದನ್ನು ಗುರಿತಿಸಿ ಅದನ್ನು ತಿದ್ದಿಕೊಂಡು ನೆಡೆ ಎಂದು.. ಅದನ್ನೇ ಇವತ್ತು ನೆನಪಿಸಿಕೊಂಡಾಗ ಇಷ್ಟು ದಿನ ನನ್ನ ಕೋರಿಕೆಗಳಿಗೆ ಪ್ರತ್ಯಕ್ಷವಾಗಿ ಉತ್ತರಿಸದ ದೇವರು ಅಂದು ಮಕ್ಕಳು ಟ್ರಂಕ್ ಕಥೆ ಹೇಳಿದ ದಿನವೇ ಪ್ರತ್ಯಕ್ಷವಾಗುವುದೆಂದರೆ ನಂಬಬೇಕಾ ಅನ್ನಿಸಿ ಯೋಚಿಸಿದೆ ಆಗ ಗೊತ್ತಾಯಿತು… ಅಂದಿನಿಂದ ಇಂದಿನವರೆಗೂ ನಂಬಿದ್ದೆ.. ಆದರೆ ಇಂದು ನೆನಪಿಸಿಕೊಂಡಾಗ ಅರ್ಥವಾಯಿತು ಅದು ನೀನೆಂದು.
ನೀನು ದೇವತೆಯಂತೆ ಮಾತಾಡಿ ನನ್ನ ಗೊಂದಲಗಳಿಗೆ ಉತ್ತರ ನೀಡಿದೆ..ನನಗೆ ಬೇಕಾದ ಉತ್ತರಗಳು ಸಿಕ್ಕಿ ನಾನು ಹೊಸ ಮನುಷ್ಯನಾದೇ..ನಿಮ್ಮೆಲ್ಲರಿಂದ ನನಗೆ ತುಂಬಾ ಗೌರವ ಸಿಕ್ಕಿದೆ.. ನೀನು ಮತ್ತು ಮಕ್ಕಳೇ ನನ್ನ ಪಾಲಿನ ದೇವರುಗಳು. ಇಷ್ಟು ದಿನ ಮಾಡಿದ ತಪ್ಪನ್ನು ಮಾಡದೇ, ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಮಾತುಕೊಡುತ್ತಾ ನಿಮಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಸ್ವೀಕರಿಸುತ್ತೀರಾ ತಾನೇ.
ಪದ್ಮಾ ಮತ್ತು ಮಕ್ಕಳು ಬಸಣ್ಣಿಯ ಮಾತುಗಳನ್ನು ಕೇಳಿದೊಡನೆ ಕಣ್ಣಲ್ಲಿ ಆನಂದಭಾಷ್ಪ ಉಕ್ಕಿ ಹರಿಯುತ್ತಿತ್ತು .. ಎಲ್ಲರೂ ಬಸಣ್ಣಿಯನ್ನು ಅಪ್ಪಿಕೊಂಡು ನಿದ್ದೆಗೆ ಜಾರಿದರು… ಅಂದಿನಿಂದ ಚಂದದ ಜೀವನ ನಡೆಸಿ, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕಲ್ಪಿಸಿ ಆಡಿಕೊಂಡವರ ಮುಂದೆ ತಲೆ ಎತ್ತಿ ನಿಂತು ಅತ್ಯುನ್ನತ ಮಟ್ಟಕ್ಕೆ ತಲುಪಿದರು…
ಕಥೆಯ ನೀತಿ:
ಜೀವನದಲ್ಲಿ ಬದಲಾವಣೆ ದೊಡ್ಡ ಅದ್ಭುತದಿಂದಲ್ಲ, ಒಂದು ಸಣ್ಣ ನಿರ್ಧಾರದಿಂದ ಆರಂಭವಾಗುತ್ತದೆ. ಹೊರಗೆ ದೇವರನ್ನು ಹುಡುಕುವ ಬದಲು, ನಮ್ಮನ್ನು ನಂಬಿ ದಾರಿ ತೋರಿಸುವ ಕುಟುಂಬದ ಮಾತು ಕೇಳಿದರೆ ಬದುಕೇ ರೂಪಾಂತರಗೊಳ್ಳುತ್ತದೆ. ಮಾತಿಗಿಂತ ಕಾರ್ಯ ಶ್ರೇಷ್ಠ; ಸೋಲಿನ ಭಯಕ್ಕೆ ನಿಲ್ಲದೇ ಒಂದು ಹೆಜ್ಜೆ ಮುಂದಿಟ್ಟರೆ ಅದೇ ಹೊಸ ಜೀವನಕ್ಕೆ ದಾರಿ.
- ಬಿ. ಆರ್. ಯಶಸ್ವಿನಿ.
