ಕೆ ವಿ ನಾರಾಯಣ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೇಂದ್ರ ಸಾಹಿತ್ಯ ಅಕಾಡೆಮಿಯ ವತಿಯಿಂದ ಲೇಖಕರನ್ನು ಮಾತನಾಡಿಸುವ ಕಾರ್ಯಕ್ರಮವಿತ್ತು, ಒಂದು ಸಮಾಹಿತ, ನಿಷ್ಠುರ ಮೆಲುದನಿಯಲ್ಲಿ ಕೆ.ವಿ.ಎನ್ ಮೇಷ್ಟ್ರು ಮಾತನಾಡುತ್ತಿದ್ದರು. – ಡಾ.ಗಿರಿಜಾ ಶಾಸ್ತ್ರಿ , ತಪ್ಪದೆ ಮುಂದೆ ಓದಿ…
“ಸಿಡಿಲ ಪೊಟ್ಟಣವ ಕಟ್ಟಿ ಸೇಕವ ಕೊಡುವರೇ” ಕುಮಾರ ವ್ಯಾಸನ ಈ ಸಾಲು ಓದುವಾಗೆಲ್ಲ ಕೆ.ವಿ.ಎನ್ ಸರ್, ಅವರ ಅಷ್ಟೇನೂ ಆವೇಶವಿಲ್ಲದ ಹಾವ ಭಾವ ಗಳೊಂದಿಗೆ ಕಣ್ಣ ಮುಂದೆ ನಿಲ್ಲುತ್ತಾರೆ. ಇಂತಹ ಕೆಲವು ಸಾಲುಗಳು ಇನ್ನೂ ತಲೆಯಲ್ಲಿ ಉಳಿದಿರುವುದಕ್ಕೆ ಕಾರಣವೂ ಅವರ ಪಾಠ ಪ್ರವಚನದ ಗಾಢ ಪ್ರಭಾವವೇ ಆಗಿದೆ! ಇಂತಹ ವಾಕ್ಯಗಳನ್ನು ಓದುವಾಗಲೂ ಮೇಷ್ಟ್ರು ಸ್ವಲ್ಪವೂ ವಿಚಲಿತರಾದಂತೆ ಕಾಣುತ್ತಿರಲಿಲ್ಲ. ನಮ್ಮ ಬಂಡಾಯದ ಉಳಿದ ಮೇಷ್ಟ್ರುಗಳು “ಅರಸು ರಾಕ್ಷಸ ಮಂತ್ರಿ ಮೊರೆವ ಹುಲಿ” ಎಂದು ಮೇಜು ಕುಟ್ಟಿ ಪುಡಿಮಾಡುತ್ತಿದ್ದರು. ಅವರು ಕುಮಾರವ್ಯಾಸನನ್ನೇ ಕುಟ್ಟಿ ಪುಡಿ ಮಾಡಿಬಿಡುತ್ತಾರೇನೋ ಎಂದು ಭಯವಾಗುತ್ತಿತ್ತು. ಏರು ಹರೆಯದಲ್ಲಿದ್ದ ನಮಗಂತೂ ಅದು, ಅಲ್ಲ ಅದೇ ಬಹು ಪ್ರಿಯವಾಗಿ ಕಾಣುತ್ತಿತ್ತು. ಹಾಗೆಂದು ಕೆ.ವಿ. ಎನ್ ಅವರಿಗೇನೂ ಸಾಮಾಜಿಕ ಕಳಕಳಿ ಇರಲಿಲ್ಲವೆಂದಲ್ಲ. ಅವರು ಅನ್ಯಾಯವನ್ನು ಎದುರಿಸುವ ಬಗೆಯೇ ಬೇರೆಯಾಗಿತ್ತು. ಈಗಲೂ ಹಾಗೆಯೇ ಇದೆ.

ನಾವು ಎಂ.ಎ. ಮಾಡುತ್ತಿದ್ದ ಕಾಲದಲ್ಲಿ ( ೧೯೭೯-೮೧) ಬಂಡಾಯ ಸಂಘಟನೆಗೆ ಮತ್ತು ಸಾಹಿತ್ಯಕ್ಕೆ ಉದಮದದ ಯೌವ್ವನ. ನಮಗೆಲ್ಲ ಕಂಡಕಡೆಗೆ ಕಲ್ಲುತೂರುವ ಆವೇಶ. ಅವರೆಲ್ಲರ ನಡುವೆಯೇ ಇದ್ದ ಕೆ.ವಿ.ಎನ್ ಮೇಷ್ಟ್ರು ಹೇಗೆ ಅವರೆಲ್ಲರಿಗಿಂತ ಬೇರೆಯಾಗಿದ್ದರು? ಎಂದು ಈಗ ಎನಿಸುತ್ತಿದೆ.
ನಮ್ಮ ಗ್ರಹಿಕೆಯ ಸಾಮರ್ಥ್ಯಕ್ಕೂ ಮೀರಿದುದಾಗಿತ್ತು ಅವರ ಸಾಹಿತ್ಯ ನಿರ್ವಚನಗಳು ಎಂದೇ ಎನಿಸುತ್ತದೆ. ಈಗ ಅವರ ವಿದ್ಯಾರ್ಥಿಗಳಾದ ನಾವೇ ಇಂದು “ಅಂತಕನ ನೆರೆಯೂರು ತಲಪಿರುವಾಗ” ( ಇದೂ ಅವರ ಪಾಠದ ಸಾಲುಗಳೇ- ಕುಮಾರವ್ಯಾಸನದು) ಅಂದಿಗಿಂತ ಇಂದು ಇನ್ನೂ ಹತ್ತಿರವಾಗಿದ್ದಾರೆ, ಕೆ.ವಿ.ಎನ್. ಮೇಷ್ಟ್ರು ಚಾಮ್ ಸ್ಕಿ, ಅಭಿನವ ಗುಪ್ತ, ವಿಲ್ ಡ್ಯೂರೆಂಟ್, ಯಾರೆಲ್ಲ ಬಂದು ಹೋದರು ಅವರ ಮಾತಿನಲ್ಲಿ ನಿನ್ನೆ! ಗೆಳತಿ ಭಾಗ್ಯಅವರಂತೂ ಕೆ.ವಿ.ಎನ್ ಮೇಷ್ಟ್ರು ಕನ್ನಡದಲ್ಲಿ ಚಾಮ್ ಸ್ಕಿ ಅಷ್ಟು ಎತ್ತರಕ್ಕೆ ಏರಿದವರೆಂದೇ ಹೇಳುತ್ತಾರೆ!
ಅವರೇ ಬರೆದ ಚಾಮ್ ಸ್ಕಿ ಪುಸ್ತಕ ಕಣ್ಣೆದುರಿಗೇ ಇದೆ. ಇನ್ನಾದರೂ ಓದಬೇಕು. ಆಗಲಾದರೂ ಕೆ.ವಿ.ಎನ್ ಗ್ರಹಿಕೆಗೆ ದಕ್ಕಿಯಾರೇನೋ?

ಅವರ ಬಾಲ್ಯದ ನೆನಪುಗಳನ್ನು ಹೇಳಿಕೊಳ್ಳುವಾಗ ಯಾವುದೇ ಸೋಸುವಿಕೆ ಕಾಣಲಿಲ್ಲ. ಮುಜುಗರಗಳಿರಲಿಲ್ಲ. ಯಾವ ಸಂಗತಿಗಳನ್ನು ಹೇಳಿಕೊಳ್ಳಬೇಕು ಹೇಳಿಕೊಳ್ಳಬಾರದು ಎನ್ನುವುದಕ್ಕೆ ಅವರು ತುತೂರಿ ಕಹಳೆಗಳನ್ನು ತಂದಿರರಲಿಲ್ಲ. ಆ ದನಿ ಅಷ್ಟು ಪ್ರಾಮಾಣಿಕವಾದ ಭಾವವನ್ನು ಕೊಡುತ್ತಿತ್ತು.
ಅವರು ಅಧ್ಯಾಪಕರಾಗಿ ಸೇರಿದ ಹೊಸತರಲ್ಲಿ ಅವರ ಕಟು ವಿಮರ್ಶೆಗಾಗಿ ಸಂಪಾದಕರಿಂದ, ಜಿ.ಎಸ್ ಎಸ್ ಅವರಿಂದ. ಬೈಸಿಕೊಂಡಿದ್ದನ್ನೂ ನಗುತ್ತಲೇ ಹಂಚಿಕೊಂಡರು.
ಕೆಲವರಿಗೆ ತಮ್ಮ ಜಾತಿಯನ್ನು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾದರೆ ಇನ್ನು ಕೆಲವರಿಗೆ ಹಿಂಜರಿಕೆ ಇರುತ್ತದೆ. “ತಂದೆಯವರು ಜಾತಿಗಳಲ್ಲಿ ನಂಬಿಕೆ ಇಟ್ಟವರಾಗಿದ್ದರು. ಜೊತೆಗೆ ಗಾಂಧೀವಾದಿಗಳೂ ಆಗಿದ್ದರು ಒಮ್ಮೆ ಜೈಲಿಗೂ ಹೋಗಿಬಂದಿದ್ದರು ” ಎಂದು ಹೇಳುತ್ತಲೇ ತಾನು ಇಂತಹ ಜಾತಿಗೆ ಸೇರಿದವನೆಂದು ಹೇಳಿಕೊಂಡರು. ಆನಂತರ ಮೇಲು ಜಾತಿಯ ಶ್ರೀಮತಿಯವರನ್ನು ಮದುವೆಯಾದದ್ದು ಅವರಿಗೇ ಹಿಂಜರಿಕೆಯಾಗಿರ ಬಹುದು ಎಂದು ೫೩ ವರ್ಷದ ನೆನಪುಗಳನ್ನು ಕೆದಕುತ್ತಾ ಹಾಸ್ಯದ ಹೊನಲಿನಲ್ಲಿ ಪ್ರೇಕ್ಷಕರನ್ನು ಮುಳುಗಿಸಿದರು. ಎದುರುಗಡೆಯೇ ಪ್ರೇಕ್ಷಕರ ನಡುವೆ ಡಾ ಶ್ರೀಮತಿಯವರೂ ಉಪಸ್ಥಿತರಿದ್ದರು. ಹೀಗೆ ಪ್ರೀತಿಯ ಬಂಧನದಲ್ಲಿ ಅವರಿಬ್ಬರೂ ಪರಸ್ಪರ ಜಾತ್ಯತೀತವಾಗಿ ಬೆಳೆದದ್ದನ್ನು ಲಘು ಶೈಲಿಯಲ್ಲಿಯೇ ಹೇಳಿಕೊಂಡರು.

ಅವರ ಹಿಂದೆ ಇದ್ದ “ಲೇಖಕರೊಡನೆ ಮಾತು” ಎಂಬ ಬ್ಯಾನರ್ ತೋರಿಸಿ ನಾನೇನೂ ಲೇಖಕನಲ್ಲ ಎಂದರು. ಮೇಷ್ಟ್ರ ಈ ಕಿಂಕರ ಭಾವ ಯಾಕೋ ಸ್ವಲ್ಪ ಜಾಸ್ತಿಯಾಯಿತು ಎನಿಸಿ ಕೋಪ ಬಂತು. ವಚನ ಸಾಹಿತ್ಯ ಪಾಠ ಮಾಡಿ ಮಾಡಿ ಬಸವಣ್ಣನೇ ಮೈಮೇಲೆ ಬಂದಿರಬೇಕು.
ಈಗಂತಲ್ಲ , ನಲವತ್ತೈದು ವರುಷಗಳ ಹಿಂದೆಯೂ ನಾನು ಈ ಮೇಷ್ಟ್ರನ್ನು ಕಂಡುದು ಹೀಗೆಯೇ ! ಈಗಂತೂ ಅವರು ಏರಿರುವ ಎತ್ತರ ಅಳೆಯಲು, ಸಮರ್ಥವಾದ ಓದುಗ ವಲಯ, ಪ್ರಶಸ್ತಿ ಪುರಸ್ಕಾರಗಳ ಏಜನ್ಸಿಗಳು ಅಷ್ಟೇ ಎತ್ತರಕ್ಕೆ ಏರಬೇಕು ಅಷ್ಟೇ!
“ಯಾರು ಓದ್ತಾರೆ ಈಗ, ಯಾರಿಗೆ ಬೇಕಿದೆ ಇದೆಲ್ಲ?” ಎಂದು ತೀ.ನಂ.ಶ್ರೀ ಅವರು ಡಿ.ಎಲ್.ಎನ್ ಅವರಿಗೆ ಹೇಳಿದ ಮಾತುಗಳನ್ನು ಅವರು ಉಲ್ಲೇಖಿಸುವಾಗ ತಮ್ಮ ನಿಲುವುಗಳನ್ನೇ ಹೇಳುತ್ತಿದ್ದಾರೇನೋ ಎನಿಸಿತು. ಹಾಗಂತ ಅಲ್ಲಿ ಕೊರಗಿನ ಛಾಯೆ ಇರಲಿಲ್ಲ, ವ್ಯಸನದ ಸುಯ್ಲು ಕಾಣಲಿಲ್ಲ. ಬರಿದೇ ವರ್ತಮಾನವನ್ನು ದರ್ಶಿಸುತ್ತಿರುವ ಸಂತನ ಮಾತುಗಳಂತೆ ಕಂಡವು. ಸಂಕೋಚದಿಂದ ನಾನು “ಓದ್ತೀರಾ ಸರ್ ನನ್ನ ಪುಸ್ತಕ?” ಎಂದು ನೀಡಿದಾಗ “ಖಂಡಿತವಾಗಿ” ಎಂದು ತೆಗೆದು ಕೊಂಡರು. ನನ್ನ ಹಾಗೆ ಅವರಿಗೆ ಅದೆಷ್ಟು ಶಿಷ್ಯಕೋಟಿಯೋ? ಈ ನೆಪದಲ್ಲಿ ಅವರ ಬಳಿ ನಿಂತು ಮಾತನಾಡಿದುದೊಂದೇ ಖುಷಿ.
ಮೂವತ್ತು ಕೃತಿಗಳನ್ನು ಬರೆದ ಮೇಷ್ಟ್ರು ಅವುಗಳಲ್ಲಿ ಒಂದು ಕೃತಿಯ ಹೆಸರನ್ನಾದರೂ ಹೇಳಲಿಲ್ಲ- “ಯಾಕೆ ಬರೆದೆ ಹೇಗೆ ಬರೆದೆ? ಸಂದರ್ಭ ಏನು”? ಉಭ ಶುಭ ಇಲ್ಲ.
ಕಾರ್ಯಕ್ರಮದ ಹೆಸರೇ “ಲೇಖಕರೊಡನೆ ಮಾತು!” ಆದರೆ ಅಲ್ಲಿ ಲೇಖಕನೇ ಗಾಯಬ್!! (ಅಲ್ಲಿ ನಿಂತದ್ದು ಒಬ್ಬ ಅಪ್ಪಟ ಮನುಷ್ಯ)

ಸಮಗ್ರ ಸಾಹಿತ್ಯ “ತೊಂಡು ಮೇವು” ಹೆಸರಿನಲ್ಲಿ ಒಂಬತ್ತು ಸಂಪುಟಗಳು ಬಂದಿವೆ. “ಕೊಳ್ಳಿ ಓದಿ….” ಯಾವ ಚಿಮ್ಮು ಹಲಗೆ ಇಲ್ಲ. ಹೇಳ ಬೇಕೆಂದರೆ, ಅವರಿಗೆ ನೆಲದಿಂದ ನಭಕ್ಕೆ ಚಿಮ್ಮಿರುವ ಅರಿವೇ ಇಲ್ಲ. ಸಾಹಿತ್ಯ ಅಕಾಡೆಮಿ ಗೌ.ಪ್ರಶಸ್ತಿಯಿಂದ ಹಿಡಿದು ಘನವಾದ ಕೆಲವು ಪ್ರಶಸ್ತಿಗಳು ಬಂದಿವೆ. ಆ ಸಂದರ್ಭಗಳ ಬಗ್ಗೆ ಕೂಡ ಮಾತನಾಡಲಿಲ್ಲ. ಅವುಗಳ ಉಲ್ಲೇಖವನ್ನೂ ಮಾಡಲಿಲ್ಲ. ಇನ್ನೂ ಹಲವು ಮಹತ್ವದ ಪ್ರಶಸ್ತಿಗಳಿಗೆ ಅವರು ಅರ್ಹರು. ಆದರೆ ಅವುಗಳೆಲ್ಲವುಗಳಿಗೆ ಮೀರಿದವರಂತೆ ಕಾಣುತ್ತಾರೆ.
ಇಂದಿನ ಸ್ವ- ಬಾಜಾಬಜಾವಣೆಯ , ತುತ್ತೂರಿ, ಕಹಳೆ ಮೊಳಗುತ್ತಿರುವಾಗ ಕೆ.ವಿ.ಎನ್ ಮೇಷ್ಟ್ರು ಎಲ್ಲಿ ನಿಲ್ಲುತ್ತಾರೆ ಎಂಬ ವಿಸ್ಮಯ! ಅದನ್ನು ಕಾಣುವ ಕಣ್ಣುಗಳು ಬೇಕಲ್ಲ?
ಶುಭ್ರವಾದ ಬಿಳಿಯ ಪಂಚೆ, ತುಂಬು ತೋಳಿನ ಬಿಳಿಯ ಅಂಗಿ, ನಿಷ್ಕಲ್ಮಶ ಬಿಳಿ ನಗೆ, ಅಂತಃಕರಣದ ಮಾತು. ಬೆಳಕಿನಂತೆ ಬಿಳಿಯಾಗಿ ಮೇಷ್ಟ್ರು ನಿಂತಿದ್ದರು. ಈಗ ೭೬ ರ ಹರೆಯ. ಸ್ವಲ್ಪ ಕುಗ್ಗಿದ್ದಾರೆ. ಅವರ ಬಳಿ ಕುಳಿತು ಮತ್ತೆ ಕುಮಾರವ್ಯಾಸ, ಕನ್ನಡ ಮೇಘದೂತ ಕೇಳಬೇಕೆನಿಸಿದೆ ಜೊತೆಗೆ ಅಭಿನವ ಗುಪ್ತ, ಚಾಮ್ ಸ್ಕಿ , ಧ್ವನ್ಯಾಲೋಕ ತಿಳಿದುಕೊಳ್ಳುವ ಆಸೆ.
ಆದರೆ ನನ್ನ ಲೆಕ್ಕ? ಇನ್ನೆಷ್ಟು ಬಾಕಿ ಇದೆಯೋ ಯಾರು ಬಲ್ಲರು?
- ಡಾ.ಗಿರಿಜಾ ಶಾಸ್ತ್ರಿ
