ಖ್ಯಾತ ಸಾಹಿತಿ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಅಕ್ಷರ ನಮನ



ಬೆಳಗಾಗೆದ್ದು ನಮ್ಮ ಭಾವಗೀತೆಯ ಕವಿ ಲಕ್ಷ್ಮೀನಾರಾಯಣ ಭಟ್ಟರು ನಮ್ಮನ್ನಗಲಿದ್ದಾರೆ ಎಂಬ ಸುದ್ಧಿ ತೇಲಿ ಬರುತ್ತಿದೆ (ಮಾರ್ಚ್ ೬, ೨೦೨೧ ). ಭಾವಕ್ಕೆ ಮಂಕುಬಡಿದ ಭಾವ ಅಂದರೆ ಏನು ಅಂತ ಅಂತರಂಗವನ್ನು ತಟ್ಟುತ್ತಿರುವ ಕ್ಷಣ ಅಂದರೆ ಇಂಥ ಸುದ್ಧಿಗಳೇ.

ಕನ್ನಡದಲ್ಲಿ ಭಾವಗೀತೆಗಳೆಂದರೆ ನೆನಪಾಗುವ ಒಂದು ಪ್ರಮುಖ ಹೆಸರು ‘ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು’.

ನಮ್ಮ ಭಾವಗೀತೆಗಳ ಲಕ್ಷ್ಮೀನಾರಾಯಣ ಭಟ್ಟರು ಜನಿಸಿದ್ದು ೧೯೩೬ ರ ಅಕ್ಟೋಬರ್ ೨೯  ರಂದು. ಶಿವಮೊಗ್ಗದಲ್ಲಿ ಜನಿಸಿದ ಭಟ್ಟರು, ಮೈಸೂರಿನಲ್ಲಿ ಕಾಲೇಜು ವ್ಯಾಸಂಗ ನಡೆಸಿ, ಬೆಂಗಳೂರಿನಲ್ಲಿ ಅಧ್ಯಾಪನ ವೃತ್ತಿ ನಡೆಸಿದವರು. ನಂತರದಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹಾ ಕೆಲಸ ನಿರ್ವಹಿಸಿದ್ದರು.

ತಮ್ಮ ಗೀತೆಗಳಲ್ಲಿ ಸೊಗಸಾದ ನವಯೌವನವನ್ನು ತುಂಬಿತುಳುಕಿಸುವ ಈ ಹಿರಿಯ ಕವಿ ತಮ್ಮ ಕಾವ್ಯದಲ್ಲಿ ಸುಮಧುರ ವಸಂತಗಳ ಹರ್ಷಭಾವಗಳನ್ನು ನಿರಂತರ ಚೆಲ್ಲುತ್ತ ಸಾಗಿದ್ದವರು.

ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ ಅಂದ ತಕ್ಷಣ ನೆನಪಿಗೆ ಬರುವುದು ಸುಂದರ ಭಾವ ಗೀತೆಗಳು. ಶಿಶುನಾಳ ಷರೀಫ್ ಅಂತಹ ಮಹಾನ್ ಪಾರಮಾರ್ಥಿಕ ಕವಿಯ ಹಾಡುಗಳನ್ನು ನಮಗೆಲ್ಲ ಪರಿಚಯಿಸಿ ‘ಷರೀಫ್ ಭಟ್ರು’ ಎಂದೇ ವಿದ್ವಾಂಸರಿಂದ ಕರೆಸಿಕೊಳ್ಳುತ್ತಿದ್ದ ಕವಿವರೇಣ್ಯರಿವರು. ಅಂದಿನ ‘ಭಾವ ಸಂಗಮ’ದಲ್ಲಿ ‘ಈ ಬಾನು ಈ ಚುಕ್ಕಿ, ಈ ಹೂವು ಈ ಹಕ್ಕಿ, ತೇಲಿಸಾಗುವ ಮುಗಿಲು ಹರುಷ ಉಕ್ಕಿ’ ಎಂದು ಹರುಷ ಹಂಚುತ್ತ ಬಂದ ಭಟ್ಟರು, ಸಾಹಿತ್ಯ ಗೊತ್ತಿಲ್ಲದೆ ಲಘು ಸಂಗೀತದ ರುಚಿಯಿಂದ ಸಾಹಿತ್ಯದ ಬಾಗಿಲಾಚೆ ಓಡಾಡುತ್ತಿದ್ದ ನಮ್ಮಂತವರಿಗೂ ಒಂದಿಷ್ಟು ಸಾಹಿತ್ಯದ ನಶೆ ಹತ್ತುವಂತೆ ಮಾಡಿದ್ದನ್ನು ಮರೆಯುವಂತೆಯೇ ಇಲ್ಲ.

ಫೋಟೋ ಕೃಪೆ : Udayavani

ಮುಂದೆ ‘ದೀಪಿಕಾ’, ’ಭಾವೋತ್ಸವ’, ‘ಬಾರೋ ವಸಂತ’, ‘ನೀಲಾಂಜನ’, ‘ಅರುಣಗೀತೆ’, ‘ಹೊಳೆ ಸಾಲಿನ ಮರ’, ‘ಬೆಳಕಿನ ಹಾಡು’ ಹೀಗೆ ಹಲವಾರು ಕ್ಯಾಸೆಟ್ಗಳ ಮೂಲಕ ಮಾತ್ರವಲ್ಲದೆ, ಅದನ್ನು ಕೇಳಿದ ಮೇಲೆ ಗುನುಗಲಿಕ್ಕಾಗಿ ಹುಡುಕಿ ಹೊರಟ ಆ ಪದ್ಯ ಪುಸ್ತಕಗಳ ಮೂಲಕ ಕೂಡಾ ಹತ್ತಿರವಾಗುತ್ತಲೇ ಬಂದವರು. ಶಿಶುನಾಳ ಶರೀಫ್ ಸಾಹೇಬರ ಹಾಡುಗಳನ್ನು ಅವರು ಪ್ರಖ್ಯಾತಿ ಪಡಿಸಿದ ರೀತಿಯಂತೂ ಅನನ್ಯವಾದದ್ದು. ಕವಿತೆಗಳ ರಚನೆಯಲ್ಲದೆ, ನುರಿತ ವಿಮರ್ಶಕಾರಾಗಿ, ಸಮರ್ಥ ಅನುವಾದಕರಾಗಿ, ಅಪ್ರತಿಮ ವಾಗ್ಮಿಗಳಾಗಿ ಸಹಾ, ಭಟ್ಟರು ಅಪಾರವಾಗಿ ಕೆಲಸ ಮಾಡಿದ್ದಾರೆ.

ಭಟ್ಟರ ಮೊದಲ ಕಾವ್ಯ ಸಂಕಲನ ‘ವೃತ್ತ’. ಹಲವು ವರ್ಷಗಳ ಹಿಂದೆ ಬಿಡುಗಡೆಯಾದ ಅವರ ‘ಸಮಗ್ರ ಕಾವ್ಯ ಸಂಪುಟ’ ೮೩೦ ಪುಟಗಳಷ್ಟು ವಿಸ್ತಾರವಾದುದು. ಅದರಲ್ಲಿ ‘ವೃತ್ತ’, ‘ಸುಳಿ’, ‘ನೆನ್ನೆಗೆ ಮಾತು’, ‘ಚಿತ್ರಕೂಟ’, ‘ಹೊಳೆ ಸಾಲಿನ ಮರ’, ‘ಅರುಣ ಗೀತೆ’, ‘ದೆವ್ವದ ಜತೆ ಮಾತುಕತೆ’, ಎಂಬ ಏಳು ಸ್ವತಂತ್ರ ಕವನ ಸಂಗ್ರಹಗಳೂ, ‘ಬೇಲಿಯಾಚೆಯ ಹೂವು’ ಎಂಬ ಬಂಗಾಳಿ ಕವಿತೆಗಳ ಅನುವಾದವೂ, ಅಂಗ್ಲ ಕವಿಗಳ ಕವಿತಾನುವಾದಗಳೂ ಸೇರಿವೆ. ಇದರೊಂದಿಗೆ ಅವರ ನಾನೂರಕ್ಕೂ ಹೆಚ್ಚು ಭಾವಗೀತೆಗಳೂ, ನೂರಕ್ಕೂ ಹೆಚ್ಚು ಮಕ್ಕಳ ಪದ್ಯಗಳೂ ಇವೆ. ಶೇಕ್ಸ್ಪಿಯರ್, ಯೇಟ್ಸ್ ಮತ್ತು ಎಲಿಯಟ್ ಮುಂತಾದ ಅಪ್ರತಿಮ ಕವಿತೆಗಳನ್ನು ಕನ್ನಡೀಕರಿಸಿದ ಕೀರ್ತಿ ಕೂಡಾ ಭಟ್ಟರಿಗೆ ಸಲ್ಲುತ್ತದೆ.

ಫೋಟೋ ಕೃಪೆ : prajavani

ಬಹುಭಾಷಾ ವಿದ್ವಾಂಸರಾದ ಲಕ್ಷ್ಮೀನಾರಾಯಣ ಭಟ್ಟರು ಸಂಸ್ಕೃತದ ಪ್ರಸಿದ್ಧ ನಾಟಕ ಶೂದ್ರಕನ ‘ಮೃಚ್ಚಕಟಿಕ’ವನ್ನು ಕನ್ನಡದಲ್ಲಿ ಸೊಗಸಾಗಿ ಮೂಡಿಸಿದ್ದು ಆ ಕೃತಿ ಅಪಾರ ಮೆಚ್ಚುಗೆ ಗಳಿಸಿದೆ. ಅವರ ‘ಊರ್ವಶೀ’ ಕಾವ್ಯ ನಾಟಕವು ‘’ಪೌರಾಣಿಕ, ಸಮಕಾಲೀನ, ಸಾಮಾಜಿಕ ಚಿಂತನೆಗಳ ಸ್ವರೂಪಗಳನ್ನು ಒಳಗೊಂಡಿದ್ದು, ಕಾವ್ಯ-ಸೌಂದರ್ಯ-ಶಕ್ತಿಗಳ ಪ್ರತೀಕವಾಗಿವೆ’ ಎಂದು ಮಹಾನ್ ಪಂಡಿತರುಗಳು ಅಭಿಪ್ರಾಯ ಪಡುತ್ತಾರೆ. ಕನ್ನಡದಲ್ಲಿ ಮೂಡಿಬಂದ ನವ್ಯಕಾವ್ಯದ ಅಲೆಗಳ ರಭಸಕ್ಕೆ ಭಾವಗೀತೆಗಳ ಕಾಲ ಆಗಿಹೊಯಿತೇನೋ ಎಂಬಂತಹ ಸಮಯದಲ್ಲಿ ಅದಕ್ಕೆ ‘ಕಾಯಕಲ್ಪ’ ನೀಡಿ ನೂರಾರು ಭಾವಗೀತೆಗಳನ್ನು ರಚಿಸಿದವರು ಭಟ್ಟರು.



ಭಟ್ಟರು ಧ್ವನಿಮುದ್ರಿಕೆಗಳ ಮೂಲಕ ಭಾವಗೀತೆಗಳನ್ನು ಮಾತ್ರವಲ್ಲದೆ, ‘ಕನ್ನಡ ಸಾಹಿತ್ಯ ಚರಿತ್ರೆಯನ್ನು’ ಸಹಾ ಧ್ವನಿಮುದ್ರಿಕೆಗಳ ಮೂಲಕ ಪರಿಚಯ ಮಾಡಿಕೊಟ್ಟಿದ್ದಾರೆ. ಸಿ.ಡಿ ಯಲ್ಲಿ ಕನ್ನಡ ಭಾಷೆ ಕ್ರಿ.ಶ. 250ರಿಂದ ಇಂದಿನವರೆಗೂ ಹಾದು ಬಂದಿರುವ ವಿಷಯದ ದಿಗ್ದರ್ಶನವಿದೆ. ಇದರಲ್ಲಿ ಒಂದು ಸಾವಿರ ವರ್ಷಕ್ಕೂ ಹೆಚ್ಚಿನ ಕನ್ನಡ ಸಾಹಿತ್ಯವನ್ನು ನಾಲ್ಕು ಮಜಲುಗಳಲ್ಲಿ ಚಿತ್ರಿಸಲಾಗಿದೆ. ‘ಕವಿರಾಜಮಾರ್ಗ’ದ ಹಿಂದಿದ್ದ ಪೂರ್ವದ ಹಳೆಗನ್ನಡ ಕಾಲ, ಪಂಪ, ರನ್ನ, ಪೊನ್ನರ ಹಳಗನ್ನಡ ಕಾಲ, ವಚನಕಾರರಿಂದ ಆರಂಭಿಸಿ ಕುಮಾರವ್ಯಾಸ, ಚಾಮರಸ, ಲಕ್ಷ್ಮೀಶ, ಷಡಕ್ಷರಿ, ಮುದ್ದಣ್ಣರ ನಡುಗನ್ನಡ ಕಾಲ, ನಂತರದ ಹೊಸ ಕನ್ನಡ ಬೆಳವಣಿಗೆಯ ಸವಿಸ್ತಾರ ಚಿತ್ರಣ ಈ ಧ್ವನಿಮುದ್ರಿಕೆಗಳ ವಸ್ತು. ಇವುಗಳ ನಿರೂಪಣೆಯಲ್ಲಿ ಲಕ್ಷ್ಮೀನಾರಾಯಣ ಭಟ್ಟರು ಹಲವಾರು ಬಾರಿ ಆಹ್ವಾನಿತರಾಗಿ ಅಮೆರಿಕಾಗೆ ತೆರಳಿ ನೂರಾರು ಸಾಹಿತ್ಯೋಪನ್ಯಾಸಗಳನ್ನು ನೀಡಿದ್ದರು.

ಭಟ್ಟರಿಗೆ ಹಲವಾರು ಗೌರವಗಳು ಸಂದಿದ್ದವು. ರಾಜ್ಯ ಸಾಹಿತ್ಯ ಅಕಾಡೆಮಿಯು ಮೂರು ಬಾರಿ ಪ್ರಶಸ್ತಿ ನೀಡಿ ಗೌರವಿಸಿತ್ತು. ರಾಜ್ಯೋತ್ಸವ ಪ್ರಶಸ್ತಿ, ಶಿವಾರಾಮ ಕಾರಂತ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಹೀಗೆ ಬಹಳಷ್ಟು ಪ್ರಶಸ್ತಿಗಳೂ ಸಂದಿದ್ದವು. ಇವೆಲ್ಲಕ್ಕೂ ಮಿಗಿಲಾಗಿ ಕನ್ನಡಿಗರ ಪ್ರೀತಿಯ ಸಿಂಹಾಸನದಲ್ಲಿ ಅವರು ಸದಾ ವಿರಾಜಮಾನರಾಗಿದ್ದವರು.

“ಸಾಗಿದೆ ದಿನ ದಿನವೂ ನೀರವ ಧ್ಯಾನ” ಎಂಬ ಭಟ್ಟರ ಕವಿತೆ ನೆನಪಾಗುತ್ತಿದೆ. ಇನ್ನು ಭಟ್ಟರು ನಮ್ಮೊಡನಿರುವುದಿಲ್ಲ ಎಂಬ ಭಾವ ಕೂಡಾ ಅಂತರಂಗದಲ್ಲಿ ನೀರವತೆ ತಂದಿದೆ. ಭಟ್ಟರ ಕವಿತೆಗಳ ಭಾವಧ್ಯಾನದಲ್ಲಿನ ನಮ್ಮ ಪಯಣ ನಾವಿರುವ ವರೆಗೂ ನಮ್ಮೊಡನೆ ನಿರಂತರ.


  • ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW