ಅಕ್ಷತಾ ಪಾಂಡವಪುರ ಅವರ ‘ಲೀಕ್ ಔಟ್’ ನಾಟಕದಲ್ಲಿ ಮಧ್ಯೆ ಮಧ್ಯೆದಲ್ಲಿ ‘ನಾಟಕ ಶುರುಮಾಡೋಣ’… ಎನ್ನುವಾಗ ಅರ್ಥವಾಗುವುದಿಲ್ಲ. ಶುರುವಾದ ಮೇಲೆ ಕೂತವರೆಲ್ಲ ನಟರಾದರು, ನಿರ್ದೇಶಕರಾದರು. ಹೊಸ ರಂಗ ಪ್ರಯೋಗವನ್ನು ಆನಂದಿಸಿದ ಕ್ಷಣವನ್ನು ತಪ್ಪದೆ ಮುಂದೆ ಓದಿ…
ಸಾಮಾನ್ಯವಾಗಿ ನಾಟಕವೆಂದರೆ ಕಲಾವಿದರು ರಂಗದ ಮೇಲೆ, ಪ್ರೇಕ್ಷಕರು ರಂಗದ ಕೆಳಗೆ ಇರುತ್ತಾರೆ. ಪ್ರದರ್ಶನದ ವೇಳೆ ನಟರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶಕ್ಕೆ ರಂಗದ ಒಳಗೆ ಸದ್ದುಗದ್ದಲವನ್ನು ನಿಷೇಧಿಸಲಾಗಿರುತ್ತದೆ. ನಾಟಕ ಒಮ್ಮೆ ಶುರುವಾದರೆ ಮುಗಿಯುವವರೆಗೂ ಪ್ರೇಕ್ಷಕ ಬಾಯಿಗೆ ಬೀಗ ಹಾಕಿಕೊಂಡರೆ, ಮಕ್ಕಳಂತೂ ರಂಗ ಮಂದಿರದ ಆಚೆಗೆ ಕೂಡಬೇಕು. ಸೋಜಿ ಬಿದ್ದರೂ ಸದ್ದು ಕೇಳುವಷ್ಟು ಶಾಂತತೆಯನ್ನು ಪ್ರೇಕ್ಷಕ ಕಾಪಾಡಿಕೊಳ್ಳಬೇಕು. ಇವು ನಾವು ನೋಡಿದ ನಾಟಕಗಳಲ್ಲಿ ಕಾಣುವ ಸಾಮಾನ್ಯ ದೃಶ್ಯ.
ಆದರೆ ರಂಗ ಕಲಾವಿದರ ಜೊತೆ ಪ್ರೇಕ್ಷಕರೂ ಸೇರಿ ನಾಟಕ ಮಾಡಿದರೆ… ನಾಟಕದ ಮಧ್ಯೆ ಮಧ್ಯೆ ಪ್ರೇಕ್ಷಕನಿಂದ ಪ್ರಶ್ನೋತ್ತರಗಳು ನಡೆಸಿದರೆ… ಪ್ರೇಕ್ಷಕ ನಾಟಕದ ಮಧ್ಯೆ ಪಾತ್ರದ ಕುರಿತು ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರೆ… ರಂಗ ಕಲಾವಿದರು ಮತ್ತು ಪ್ರೇಕ್ಷಕರು ಇಬ್ಬರೂ ಸೇರಿ ಒಂದೆ ವೇದಿಕೆಯಲ್ಲಿ ಅಭಿನಯಿಸಿದರೆ?…ಆ ನಾಟಕ ಕೊನೆಯದಾಗಿ ಹೇಗೆ ಕಾಣುತ್ತದೆ ಎಂದರೆ ನೋಡುಗನ ಕಣ್ಣಲ್ಲಿ ವಿಭಿನ್ನ, ವಿನೂತನ, ಸಂತೋಷವನ್ನು ಕೊಡುತ್ತದೆ.
ಇಂತಹ ವಿಭಿನ್ನ ಆಲೋಚನೆಯನ್ನು ಹೊತ್ತ ಪ್ರಯೋಗವನ್ನು ರಂಗದ ಮೇಲೆ ತಂದದ್ದು ಅಕ್ಷತಾ ಪಾಂಡವಪುರ ಅವರು. ತಮ್ಮ “ಲೀಕ್ ಔಟ್” ಕಥಾ ಸಂಕಲನದಲ್ಲಿ ಆಯ್ದ ಎರಡು ಕಥೆಗಳಿಗೆ ರಂಗರೂಪ ಕೊಟ್ಟು, ನಿರ್ದೇಶನ ಮಾಡುವುದಷ್ಟೇ ಅಲ್ಲ… ಮುಖ್ಯ ಭೂಮಿಕೆಯಲ್ಲಿ ಅಕ್ಷತಾ ಅವರೇ ಕಾಣಿಸಿಕೊಂಡದ್ದು ರೋಚಕವಾಗಿತ್ತು.
ಅವರ ಈ ಲೀಕ್ ಔಟ್ ನಾಟಕದ 90 ನೇ ಪ್ರಯೋಗವನ್ನು ಬೆಂಗಳೂರಿನಲ್ಲಿ ನೋಡುವ ಅವಕಾಶ ಬೆಂಗಳೂರು ಜನಕ್ಕೆ ಸಿಕಿತ್ತು.
ಈ ನಾಟಕ ಮೇಲ್ನೋಟಕ್ಕೆ ಏಕವ್ಯಕ್ತಿ ನಾಟಕ ಪ್ರದರ್ಶನ ಎನ್ನಿಸಿದರೂ, ನಾಟಕ ಶುರುವಾದಂತೆ ನಾಟಕದಲ್ಲಿನ ಪಾತ್ರಗಳು ನಿಧಾನವಾಗಿ ಪ್ರೇಕ್ಷಕನನ್ನು ಆವರಿಸತೊಡಗಿತು.
ಇನ್ನೂ ಲೀಕ್ ಔಟ್ ನಲ್ಲಿ ಏನು ಲೀಕ್ ಆಯ್ತು ಅಂದ್ರೆ, ನಾಟಕದಲ್ಲಿ ಎರಡು ಕಥೆಗಳಿದ್ದು, ಮೊದಲ ಕತೆಯಲ್ಲಿ ಬರುವ ಮಂಜುಳಾ ಪಾತ್ರ ಅಕ್ಷತಾ ಅವರು ನಿಭಾಯಿಸಿದರೆ, ಡಾಕ್ಟರ್ ಪಾತ್ರವನ್ನು ಪ್ರೇಕ್ಷಕ ನಿಭಾಯಿಸಿದ್ದ. ಇಬ್ಬರ ಪಾತ್ರಧಾರಿಗಳ ಮನಸ್ಸಿನಲ್ಲಿ ಮೂಡುವ ತಲ್ಲಣಗಳ ಜೊತೆಗೆ ಪ್ರೇಕ್ಷಕರು ತಮ್ಮ ಭಾವನೆಗಳನ್ನು ಸೇರಿಸುವುದರ ಮೂಲಕ ಒಂದೇ ವೇದಿಕೆಯಲ್ಲಿ ನೂರಾರು ಕಲಾವಿದರನ್ನು ನೋಡಿದಂತಾಯಿತು.

ನಮ್ಮ ಕಟ್ಟು ಪಾಡು ಸಮಾಜದಲ್ಲಿ ವಿಧವೆ ಎಂದರೆ ಅವಳ ಉಡುಗೆ ತೊಡುಗೆಗಳು ಹೀಗೆಯೇ ಇರಬೇಕು, ಅವಳು ಹೀಗೆಯೇ ಬದುಕಬೇಕು ಎಂದು ನಿರ್ಧರಿಸಿದವರ್ಯಾರು ?… ಹೆಣ್ಣಿನ ಭಾವನೆಗಳನ್ನು ಕಟ್ಟಿ ಮೂಲೆಯಲ್ಲಿ ಕೂರಿಸಿದವರು ಮತ್ಯಾರು ಅಲ್ಲ ಈ ಸಮಾಜ. ಹೆಣ್ಣು ಹೀಗೆ ಇರಬೇಕು ಎಂದು ಬಯಸುವ ಸಮಾಜದಲ್ಲಿ ಹೆಣ್ಣು ಹೇಗೆ ಬತ್ತಿ ಹೋಗುತ್ತಾಳೆ ಎಂದು ಮಂಜುಳಾ ಪಾತ್ರದ ಮೂಲಕ ನೋಡಿದಾಗ ಪ್ರೇಕ್ಷಕ ವೃಂದದಲ್ಲಿ ನೀರವ ಮೌನ ಅವರಿಸಿತು.
ನಾಟಕದಲ್ಲಿ ಬರುವ ಇನ್ನೊಂದು ಕತೆಯಲ್ಲಿ ಅಮ್ಮ ಮಗಳ ಬಾಂಧವ್ಯ. ಕಾಂಕ್ರೀಟ್ ನಗರಿಯಲ್ಲಿ ಭಾವನೆಯನ್ನು ಹುಡುಕುವ ಪ್ರಯತ್ನವನ್ನು ಕ್ಯಾನ್ಸರ್ ಗೆ ತುತ್ತಾದ ಅಮ್ಮ ಮಾಡುತ್ತಿರುತ್ತಾಳೆ. ಇನ್ನೊಂದು ಕಡೆ ಮಗಳು ಮತ್ತು ಗಂಡ ಓಡುವ ಕುದುರೆಯಂತೆ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅನಾರೋಗ್ಯದಿಂದ ನರುಳುವ ಜೀವದತ್ತ ಯಾರಿಗೂ ಲಕ್ಷವಿಲ್ಲ. ತನ್ನ ಕೊನೆಯ ದಿನಗಳಲ್ಲಿ ಆಕೆಗೆ ಆಸರೆಯಂತ್ತಿದ್ದದ್ದು ಅವಳ ಹಳೆಯ ನೆನಪುಗಳು ಮಾತ್ರ. ಅಮ್ಮನ ಪಾತ್ರದಲ್ಲಿ ಅಕ್ಷತಾ ಕಾಣಿಸಿಕೊಂಡರೆ, ಮಗಳ ಪಾತ್ರದಲ್ಲಿ ಪ್ರೇಕ್ಷಕರು ಕಾಣಿಸಿಕೊಂಡರು. ಕತೆ ಮನಸ್ಸಿಗೆ ಹತ್ತಿರವಾದಾಗ ಪ್ರೇಕ್ಷಕರ ಕಣ್ಣಲ್ಲಿ ನೀರು ತುಂಬಿತು.
ಮನೆ ಮನೆಯ ಕತೆಗಳನ್ನು ಇಟ್ಟುಕೊಂಡು ಬರೆದಂತಹ ಕೃತಿಯೇ ‘ಲೀಕ್ ಔಟ್’. ಅದನ್ನು ಜನರ ಮನಸ್ಸಿಗೆ ಇಳಿಯುವಂತೆ ರಂಗರೂಪ ಕೊಟ್ಟು ಸ್ವತಃ ಪ್ರೇಕ್ಷಕನೇ ಪಾತ್ರಧಾರಿಯಾದಾಗ ಪ್ರೇಕ್ಷಕನ ಹೃದಯ ಭಾರವಾಗಿದ್ದು ಸುಳ್ಳಲ್ಲ. ಸ್ವಾರ್ಥಕ್ಕಾಗಿ ಬದುಕುವ ಮನುಷ್ಯನ ಜೀವನದಲ್ಲಿ ಭಾವನೆಗಳು ನೂರಾಬಟ್ಟೆಯಾಗಿ ಹೋಗಿದೆ. ಅದನ್ನು ಅಕ್ಷತಾ ಅವರು ಚಂದವಾಗಿ ಪ್ರಸ್ತುತ ಪಡಿಸಿದರು.
ಈ ನಾಟಕ ಆರಂಭದಲ್ಲಿ ಸ್ವಲ್ಪ ಗೊಂದಲಗಳನ್ನುಂಟು ಮಾಡಿದರೂ ಆಮೇಲೆ ನಟನೆಗೆ ಭಯ ಪಡುವ ಎಷ್ಟೋ ಪ್ರೇಕ್ಷಕರು, ಈ ಹೊಸ ಪ್ರಯೋಗದಿಂದ ತಮಗೆ ಗೊತ್ತಿಲ್ಲದೇ ನಟರಾದರೂ, ಕಥೆಗಾರರಾದರು, ವಿಮರ್ಶಕರಾಗಿ ಹೋದರು. ಮನೆಗೆ ಹೊರಡುವಾಗ ಪ್ರತಿಯೊಬ್ಬ ಪ್ರೇಕ್ಷಕ ಕಲಾವಿದನಾಗಿದ್ದ ಎನ್ನುವುದು ಸಂತಸದ ವಿಷಯ.
ಅಕ್ಷತಾ ಯಾವಾಗಲು ಹೊಸತನ್ನು ಹುಡುಕುವ ಸೃಜನಾತ್ಮಕ ಕಲಾವಿದೆ. ಅವರ ಸರಳ ನಟನೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳು ಸಂದಿವೆ. ಈ ಲೀಕ್ ಔಟ್ ನಿಂದ ಜನರ ಮನಸ್ಸಲ್ಲಿ ಸದಾ ಉಳಿಯುತ್ತಾರೆ. ಅವರಿಗೆ ಎಂದು ಆಕೃತಿಕನ್ನಡದ ಪರವಾಗಿ ಶುಭಕೋರುತ್ತೇನೆ.
- ಶಾಲಿನಿ ಹೂಲಿ ಪ್ರದೀಪ್ – ಆಕೃತಿ ಕನ್ನಡ ಸಂಪಾದಕಿ, ಬೆಂಗಳೂರು.
