‘ಇಂದಿನ ನಗರ ಮಾನ್ಯತೆ’ ಕವನ

ಹಂಗಿಲ್ಲದ ಮನಕ್ಕೆ ನಗರಕ್ಕೆ ಹೋಗುವುದೋ ಅಥವಾ ಬಿಡುವುದೋ ಎನ್ನುವ ತವಕದ ಭಯ…ಕವಿಯತ್ರಿ ಡಾ. ಕೃಷ್ಣವೇಣಿ. ಆರ್. ಗೌಡ ಅವರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಹೋಗುವುದೋ ಅಥವಾ ಬಿಡುವುದೋ ಎನ್ನುವ
ಮನದ ತವಕದ ಮಧ್ಯ
ಬೆಂಬಿಡದೆ ಕಾಡುತ್ತಿರುವ
ಬಿಸಿಯ ಉಸಿರು,
ಸುತ್ತಲೂ ಹೊಡೆದಾಟದ ಆಟಕ್ಕೆ
ಒಬ್ಬೊಬ್ಬರ ಭಾವನೆಯ ಹತ್ಯೆ,

ಆತ್ಮಹತ್ಯೆಗೂ ಮೀರಿದ ಸಂಕಟದ ಸಾವುಗಳು
ನಗರದ ಏರಿಳಿತದ ದಾರಿಯಲಿ
ಅಗೋ ನನ್ನ ಸಾವು
ಅಗೋ ನನ್ನ ಸಾವು ಎಂದು
ಅಬ್ಬರದ ಬೊಬ್ಬೆ ಹಾಕಿ
ವ್ಯಂಗ್ಯದ ನುಡಿಗಳನ್ನಾಡುತ್ತಿವೆ..

ತುತ್ತು ಚೀಲದ ಅನ್ನಕ್ಕಾಗಿ
ಪರದಾಡಿ ಬೇರೆ ದಾರಿಯತ್ತ
ಮುಖ ಮಾಡಿದಾಗ
ಚಪ್ಪಲಿ ಹರಿದು ತಿರುಗಾಡಿದಾಗ
ಸಿಗದ ಕೆಲಸದ ಭತ್ಯೆ,

ನಿವಾಸದ ನಿಲುವಿಗೆ
ಚರಂಡಿಯ ಮೇಲಿನ
ಚಪ್ಪರದ ಹಂದಿರದಗರಿ
ಇವುಗಳ ಮೇಲೆ ಬಾಳ
ಎಣಿಕೆಯ ನಾರಿನ ಬಿಗಿತ
ಸುತ್ತ ಎತ್ತ ತಿರುಗಿದರೂ
ಹಸಿವಿನ ಭರಾಟೆ,

ಹಂಗಿಲ್ಲದ ಮನಕ್ಕೆ ನಗರಕ್ಕೆ
ಹೋಗುವುದೋ ಅಥವಾ
ಬಿಡುವುದೋ ಎನ್ನುವ
ತವಕದ ಭಯ, ಈ ಭಯಕ್ಕೆ
ಉಸಿರು ಕಟ್ಟುತ್ತಿದೆ..

ಹುಚ್ಚು ಮಾಯೆಯ ಕಪ್ಪು
ಕಾಗೆಗಳ ಭಾದೆ ಅಲ್ಲದೇ
ಕಾ ಕಾ ಎಂದು ಆಗುಳಿಗೂ
ಬಾಯಿಬಿಡುವ ನಗರೀಕರಣದ
ಪೆಟ್ಟು, ಮನುಷ್ಯನನ್ನು
ಹರಿತವಾದ ಕತ್ತಿಯಿಂದ
ತಿವಿಯುತ್ತಿದೆ..

ಹೂಗಳನ್ನು ತೂರುತ್ತಾ
ಮಾರಾಟಕ್ಕೆ ಖರೀದಿ ಹಾಕುವ
ಮನುಷ್ಯ ಜಾತಿ ಮೃಗಗಳು
ಯಾವ ಹೂವಿನ ಭಾವನೆಗೂ
ನೀರೇರೆಯುತ್ತಿಲ್ಲ..

ಚೆಲ್ಲು ಚೆಲ್ಲಾಗಿ ವರ್ತಿಸುವ
ನರ್ತಕಿಯರ ಸೆರಗೂ
ಕೈ ಬೀಸಿ ಕರೆಯುತ್ತಿದೆ.
ಈ ಕರೆಯ ವಾಸನೆಗೆ ಹೋಗುವ ನಾಯಿಗಳು
ಚಿಲ್ಲರೆಯ ನೋಟುಗಳನ್ನು ಎಣಿಸುತ್ತಿವೆ..

ಆಗಸ ನೋಡಿ ಕಣ್ಣೀರಿಡುವ
ಕಣ್ಣುಗಳಿಗೆ,
ನಗರಕ್ಕೆ ಹೋಗುವುದೋ ಅಥವಾ ಬಿಡುವುದೋ
ಎನ್ನುತ್ತಲೇ,
ಮುಗಿಯುತ್ತಿದೆ ಜೀವನದ ಪಯಣತ್ವ.


  • ಡಾ. ಕೃಷ್ಣವೇಣಿ. ಆರ್. ಗೌಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading