ಕೂಡು ಅವಳಿಗಳು (Conjoined Twins) ಹುಟ್ಟುವುದು ಹೀಗೆ? 



ಚಿತ್ರ ವಿಚಿತ್ರ ಬದುಕಿನ ಸುತ್ತಲಿನ ಒಂದು ನೋಟ. ಲೇಖಕಿ ಬಿ ವಿ ಭಾರತಿ ಅವರು ಕೂಡು ಅವಳಿಗಳ ಬಗ್ಗೆ, ವಿಚಿತ್ರ ಅಲರ್ಜಿಯ ಬಗ್ಗೆ ಓದುಗರಿಗೆ ಮಾಹಿತಿ ನೀಡಿದ್ದಾರೆ. ಬದುಕು ಸಾಕೆನ್ನಿಸಿದಾಗ ಈ ಲೇಖನ ಓದಿ…

ಯಾವುದೋ ಒಂದು ದಿನ ಇದ್ದಕ್ಕಿದ್ದಂತೆ ಇಡೀ ಜಗತ್ತಿನಿಂದ ದೂರವಾಗಿ ಸ್ವಲ್ಪ ಹೊತ್ತು ನಮ್ಮೊಡನೆ ನಾವು ಏಕಾಂತದಲ್ಲಿ ಇದ್ದುಬಿಡಬೇಕು ಎನ್ನಿಸಲಾರಂಭಿಸುತ್ತದೆ. ಯಾರದ್ದೇ ಜೊತೆ ಮಾತನಾಡುವುದು ಕೂಡಾ ಬೇಕೆನ್ನಿಸದಂಥ ದಿವ್ಯ ಸುಷುಪ್ತಿಯ ಕ್ಷಣಗಳಿಗೆ ಮನಸ್ಸು ತುಡಿಯಲಾರಂಭಿಸುತ್ತದೆ. ರೂಮಿನ ಬಾಗಿಲು ಜಡಿದು, ಕೈಲೊಂದು ಪುಸ್ತಕ ಹಿಡಿದು, ಕಾಫಿ ಹೀರುತ್ತಾ ಕುಳಿತು ಬಿಡಬೇಕು ಅನ್ನಿಸುತ್ತದೆ. ಎದೆಯಲ್ಲಿನ ದುಃಖ ಎದುರು ಹರಡಿಕೊಂಡು ಏಕಾಂತದಲ್ಲಿ ಮನಸ್ಸು ತೃಪ್ತಿಯಾಗುವವರೆಗೆ ಅತ್ತು ಬಿಡಬೇಕೆನ್ನಿಸುತ್ತದೆ. ತೂಗುಯ್ಯಾಲೆಯ ಮೇಲೆ ಕುಳಿತು ಆಕಾಶದ ನಕ್ಷತ್ರಗಳ ಜೊತೆ ಮಾತಾಡಬೇಕು ಅನ್ನಿಸುತ್ತದೆ. ಹೊರಗೆ ಧೋ… ಎಂದು ಸುರಿವ ಮಳೆಯೊಡನೆ ನೆನಪುಗಳನ್ನು ಹರಿಯಬಿಟ್ಟು ಒಂಟಿಯಾಗಿ ತೋಯಬೇಕು ಅನ್ನಿಸುತ್ತದೆ.

ಇದೆಲ್ಲ ಮನೋಲೋಕಕ್ಕೆ ಸಂಬಂಧಿಸಿದ ವ್ಯಾಪಾರಗಳು. ಇವುಗಳನ್ನೆಲ್ಲ ಒಂದು ಬದಿಗಿಟ್ಟು ದಿನನಿತ್ಯದ ಬದುಕಿನ ಬಗ್ಗೆ ಯೋಚಿಸಿದರೆ ನಮ್ಮ ದಿವ್ಯ ಏಕಾಂತದ ಕ್ಷಣಗಳಲ್ಲಿ ನಾವು ನಾವೇ ಇರುವಾಗ, ಯಾರೂ ಸುತ್ತ ಇಲ್ಲ ಎನ್ನಿಸಿದಾಗ ನಾವು ಏನೇನು ಮಾಡುತ್ತೇವೆ ಅನ್ನುವುದು ಯೋಚಿಸಿ ನೋಡಿ!

ಒಬ್ಬರೇ ಇರುವಾಗ ಮನಸ್ಸು ಬಂದ ಕಡೆ ಹಿತವಾಗಿ ತುರಿಸಿಕೊಳ್ಳಬೇಕು ಅನ್ನಿಸುತ್ತದೆ. ಪ್ರಪಂಚದೆದುರು ತುಂಬ ನಾಗರೀಕವಾಗಿ ನಡೆದುಕೊಳ್ಳುವವರಿಗೆ ಒಬ್ಬರೇ ಇರುವಾಗ ಟೂತ್ ಪಿಕ್ ಹಿಡಿದು ಸುಖವಾಗಿ ಹಲ್ಲಿನ ಕೊಳೆ ತೆಗೆದುಕೊಳ್ಳಬೇಕು ಅನ್ನಿಸುತ್ತದೆ. ಬಾತ್‌ರೂಮಿನಲ್ಲಿ ಲತಾಮಂಗೇಶ್ಕರ್ ಥರ ಹಾಡುತ್ತಿದ್ದೇವೆ ಅನ್ನುವ ಭ್ರಮೆಯಲ್ಲಿ ಕೆಟ್ಟ ಕಂಠದಲ್ಲಿ ಹಾಡಬೇಕು ಅನ್ನಿಸುತ್ತದೆ. ಏಕಾಂತದಲ್ಲಿ ಮೂಗಿನ ಬೋರ್‌ವೆಲ್ ತೋಡಬೇಕು ಅನ್ನಿಸುತ್ತದೆ. ದೇಹದ ಅನಗತ್ಯ ಕೂದಲುಗಳನ್ನು ನಿರಾಳವಾಗಿ ಏಕಾಂತದಲ್ಲಿ ನಿವಾರಿಸಿಕೊಳ್ಳಬೇಕು ಅನ್ನಿಸುತ್ತದೆ. ಎರ್ರಾಬಿರ್ರಿ ತಿಂದು ಹೊಟ್ಟೆ ಉಬ್ಬರಿಸಿಕೊಂಡ ದಿನ ಯಾರೂ ಸುತ್ತ ಇಲ್ಲದಿದ್ದರೆ ಸದ್ದು ಮಾಡುತ್ತ ಹೂಸು ಬಿಡಬೇಕು ಅನ್ನಿಸುತ್ತದೆ! ಬಾಲ್ಯದಲ್ಲಿ ಅಮ್ಮ ಕ್ಷಣಕಾಲ ಕಣ್ಮರೆಯಾದರೆ ರಣೋತ್ಸಾಹದಲ್ಲಿ ಬಕೆಟ್‌ನಲ್ಲಿದ್ದ ನೀರನ್ನು ರಪರಪ ಬಡಿದು ಆಡಬೇಕೆನ್ನಿಸುತ್ತದೆ. ಯೌವನದಲ್ಲಿ ಪ್ರಿಯತಮ/ಪ್ರಿಯತಮೆಯೊಡನೆ ಫೋನಿನಲ್ಲಿ ಒಂದಿಷ್ಟು ಸಲಿಗೆಯಲ್ಲಿ ಪೋಲಿ ಮಾತುಗಳನ್ನಾಡಬೇಕು ಅನ್ನಿಸುತ್ತದೆ. ವೃದ್ಧಾಪ್ಯದಲ್ಲಿ ಮಂಡಿ ನೋವಾದಾಗ ರೂಮಿನ ಬಾಗಿಲು ಮುಚ್ಚಿ ನಿರ್ಭಿಡೆಯಿಂದ ಬಟ್ಟೆ ಮೇಲಕ್ಕೆ ಸರಿಸಿ ಎಣ್ಣೆ ತಿಕ್ಕಿಕೊಳ್ಳಬೇಕೆನ್ನಿಸುತ್ತದೆ.

ಈಗ ಊಹಿಸಿಕೊಳ್ಳಿ, ನಿಮ್ಮ ಬದುಕಿನ ಇಂಥ ಎಲ್ಲ ಘಳಿಗೆಗಳಲ್ಲೂ ಮುಖಕ್ಕೆ ನಾಲ್ಕಾರು ಅಂಗುಲ ದೂರದಲ್ಲೊಂದು ಮುಖ ನಿಮ್ಮ ನೆರಳಿನಂತೆ ಸದಾ ಜೊತೆಗಿದ್ದರೆ …? ಗಾಭರಿಯಾಗುತ್ತದಲ್ಲವೇ? ಚಾಂಗ್-ಎಂಗ್, ಅಬ್ಬಿ-ಬ್ರಿಟ್ಟನಿ ಮತ್ತು ಟಾಟಿಯಾನ-ಕ್ರಿಸ್ಟ ಇಂಥ ಕೆಲವು ‘ಕೂಡು ಅವಳಿಗಳ’ ಬದುಕು ಹೀಗೇ ಇರುತ್ತದೆ ….
*

ಫೋಟೋ ಕೃಪೆ : New York post

ತಾಯಿಯ ಅಂಡಾಣು ಮತ್ತು ತಂದೆಯ ವೀರ್ಯಾಣು ಒಂದರೊಡನೊಂದು ಮಿಲನಗೊಂಡು ಜೀವವೊಂದು ಹುಟ್ಟುತ್ತದೆ ಅಲ್ಲವೇ? ಕೆಲವೊಮ್ಮೆ ಎರಡು ಅಂಡಾಣು, ಎರಡು ವೀರ್ಯಾಣುಗಳ ಜೊತೆ ಒಟ್ಟಿಗೇ ಮಿಲನಗೊಂಡು ಗರ್ಭಕೋಶ ಸೇರಿದಾಗ ಅವಳಿಗಳು ಹುಟ್ಟುತ್ತವೆ. ಇನ್ನೂ ಕೆಲವೊಮ್ಮೆ ಒಂದೇ ಅಂಡಾಣು ಒಂದೇ ವೀರ್ಯಾಣುವಿನ ಜೊತೆ ಮಿಲನಗೊಂಡು, ಆ ನಂತರ ಒಡೆದು ಎರಡು ಭಾಗವಾದಾಗಲೂ ಅವಳಿಗಳು ರೂಪುಗೊಳ್ಳುತ್ತವೆ. ಆದರೆ ಕೆಲವೊಂದು ಅಪರೂಪದ ಸಂದರ್ಭಗಳಲ್ಲಿ ಜೀವಾಣು ಪೂರ್ತಿಯಾಗಿ ಒಡೆದು ದೂರವಾಗದೇ, ಕೆಲವು ಭಾಗ ಮಾತ್ರ ಒಡೆದು, ಮತ್ತೆ ಕೆಲವು ಭಾಗ ಬೇರ್ಪಡದೇ ಹಾಗೆಯೇ ಉಳಿದುಬಿಡುತ್ತವೆ. ಕೂಡು ಅವಳಿಗಳು (Conjoined Twins) ಹುಟ್ಟುವುದು ಹೀಗೆ!

ಮೇಲೆ ಹೇಳಿದ ಜೋಡಿಗಳೆಲ್ಲ ಈ ರೀತಿಯಾಗಿ ಜನ್ಮ ತಳೆದವರೇ. ಈವರೆಗೆ ಇಂಥ ಜೋಡಿಗಳ ಬಗ್ಗೆ ಯೋಚಿಸುವಾಗ ನನಗೆ ‘ಅಯ್ಯೋ ಹೇಗೆ ನಡೆದಾಡ್ತಾರೋ, ಹೇಗೆ ಕೂತುಕೊಳ್ತಾರೋ, ಹೇಗೆ ಮಲಗುತ್ತಾರೋ’ ಅನ್ನುವಂಥ ಯೋಚನೆಗಳು ಮಾತ್ರ ಬರುತ್ತಿದ್ದವು. ಈಗ ಇಂಥವರ ದಿನ ನಿತ್ಯದ ಬದುಕು ಹೇಗಿರಬಹುದು ಅಂತ ತಿಳಿದುಕೊಳ್ಳುವ ಕುತೂಹಲಕ್ಕಿಳಿಯಿತು ಮನಸ್ಸು. ಆಗ ಅವರ ಬದುಕಿನ ಬಗ್ಗೆ ಓದುತ್ತಾ ಹೋದೆ. ನಾನು ಕನಸಿನಲ್ಲಿಯೂ ಊಹಿಸಿಕೊಳ್ಳದಂಥ ಬದುಕದು ….

ಫೋಟೋ ಕೃಪೆ : The Trent online

ಮೇಲ್ನೋಟಕ್ಕೆ ನೋಡಿದರೆ ಇಂಥ ಜೋಡಿಗಳೆಲ್ಲರದ್ದೂ ಅವರವರದ್ದೇ ಆದ ಸಮಸ್ಯೆಗಳಿವೆ. ದೇಹದ ಯಾವ ಭಾಗಗಳು ಅಂಟಿಕೊಂಡಿವೆ ಅನ್ನುವುದರ ಮೇಲೆ ಸಮಸ್ಯೆಗಳ ಮುಖವೂ ಬದಲಾಗುತ್ತಾ ಹೋಗುತ್ತದೆ. ಆದರೆ ಒಟ್ಟಾರೆ ಇಂಥ ಕೂಡು ಅವಳಿಗಳ ಬದುಕಿನಲ್ಲಿ ನಮ್ಮದು ಅನ್ನುವ ಏಕಾಂತದ ಆಯ್ಕೆಯೇ ಇರುವುದಿಲ್ಲ. ಒಬ್ಬರಿಗೆ ಓದಬೇಕು ಅನ್ನಿಸಿ, ಮತ್ತೊಬ್ಬರಿಗೆ ಮಲಗಬೇಕು ಅನ್ನಿಸಿದರೆ ಯಾರೋ ಒಬ್ಬರು ಆಸೆ ಬದಲಿಸಿಕೊಳ್ಳಲೇ ಬೇಕು. ಒಬ್ಬರಿಗೆ ಟಾಯ್ಲೆಟ್‌ಗೆ ಹೋಗಬೇಕು ಅನ್ನಿಸಿದರೆ ಮತ್ತೊಬ್ಬರಿಗೆ ಆಗ ಬೇಡವೆಂದರೂ ಹೋಗಲೇಬೇಕು. ಒಬ್ಬರಿಗೆ ಆರೋಗ್ಯ ತಪ್ಪಿದರೆ, ಜೊತೆಗೆ ಆರೋಗ್ಯ ಸರಿಯಿರುವವರೂ ವಿಧಿಯಿಲ್ಲದೇ ಹಾಸಿಗೆಯಲ್ಲೇ ಮ…

ಒಂದು ಸುಡುಬೇಸಿಗೆಯ ಸಂಜೆ ಬೆವರಿದ ಮೈ ಸುಸ್ತು ಹೆಚ್ಚಿಸಿದಾಗ, ಆ ಕೂಡಲೇ ಎದ್ದು ಶವರ್ ತಿರುಗಿಸಿ ತಣ್ಣನೆಯ ನೀರಿನಲ್ಲಿ ಮೀಯಬೇಕು ಅನ್ನಿಸುವ ಬಯಕೆ ಧಿಗ್ಗನಾವರಿಸುತ್ತದೆ. ಕಡು ಬೇಸಿಗೆಯಲ್ಲಿ ಬಳಲಿ ಸೋತು ಹೋಗಿ ಹೈರಾಣಾದ ದಿನಗಳಲ್ಲಿ, ಯಾವತ್ತೋ ಒಂದು ದಿನ ಇದ್ದಕ್ಕಿದ್ದಂತೆ ಎಲ್ಲಿಂದಲೋ ಮಳೆಯಲ್ಲಿ ತೋಯ್ದ ಮಣ್ಣಿನ ವಾಸನೆ ಮತ್ತೇರಿಸಲಾರಂಭಿಸುತ್ತದೆ. ಮನಸ್ಸು ಗರಿಬಿಚ್ಚಿ ಕುಣಿಯುವುದರಲ್ಲಿ ಆಕಾಶ ಹನಿಯಾಗಲಾರಂಭಿಸುತ್ತದೆ. ಮಳೆ!! ಒಂದರೆಕ್ಷಣವೂ ಯೋಚಿಸದೇ ಮಳೆಯಲ್ಲಿ ನೆಂದು ಮುದ್ದೆಯಾಗಬೇಕು ಅನ್ನಿಸುತ್ತದೆ. ಛಳಿಗಾಲದ ಅದೊಂದು ದಿನ, ತುಂತುರು ತುಂತುರಾಗಿ ಸ್ಪರ್ಶಿಸುವ ಮಂಜಿನಲ್ಲಿ, ಜೇಬಿನಲ್ಲಿ ಕೈಯಿಟ್ಟು ‘ಗೀತಾಂಜಲಿ’ ಸಿನೆಮಾದ ನಾಗಾರ್ಜುನನಂತೆ ನಡೆಯುತ್ತಾ ಭೂಮಿಯ ತುಟ್ಟತುದಿ ಮುಟ್ಟಬೇಕು ಅನ್ನಿಸಿಬಿಡುತ್ತದೆ ….

ಯಾವತ್ತೋ ಒಂದು ದಿನ ಬಳ್ಳಿಯಂತೆ ಬಳುಕುತ್ತಿದ್ದೇವೆ ಎನ್ನುವ ಭ್ರಮೆಯಲ್ಲಿ ಕನ್ನಡಿಯೆದುರು ನಿಂತಾಗ, ಕನ್ನಡಿಯ ಆ ತುದಿಯಿಂದ ಈ ತುದಿಯವರೆಗೆ ದೇಹವು ಆಪಾತೋಪ ಬೆಳೆದು ನಿಂತದ್ದು ಕಂಡು ಯಾವಾಗ ಹೀಗಾಯ್ತು ಅನ್ನುವ ಶಾಕ್ ನಮ್ಮನ್ನು ತಣ್ಣಗಾಗಿಸಿಬಿಡುತ್ತದೆ. ಆ ಕೂಡಲೇ ಸೋಮಾರಿತನ ಝಾಡಿಸಿ ಎದ್ದು, ಧೂಳು ಮುಸುಕಿರುವ ಜಾಗಿಂಗ್ ಶೂ ಹೊರತೆಗೆದು ಕಿಲೋಮೀಟರ್‌ಗಟ್ಟಳೆ ನಡೆದು ಬೆವರಿಳಿಸಿಬೇಕು ಅನ್ನಿಸುತ್ತದೆ. ಗೆಳೆಯನೊಬ್ಬ ಇದ್ದಕ್ಕಿದ್ದಂತೆ ಒಂದು ದಿನ ಕರೆ ಮಾಡಿ ‘ಸಿಕ್ಕು ಅದೆಷ್ಟು ದಿನವಾಯಿತು’ ಎನ್ನುತ್ತಾನೆ. ಆ ಕೂಡಲೇ ಒಟ್ಟಾಗಿ ಅವನೊಡನೆ ಕುಳಿತು ಕಾಫಿ ಹೀರುವ ಆಸೆಯಾಗುತ್ತದೆ ಅಥವಾ ತುಂಬ ಖುಷಿಯಲ್ಲಿದ್ದರೆ ಒಂದು ವೋಡ್ಕಾ ಹಿಡಿದು ಹುಚ್ಚು ಹರಟೆ ಹೊಡೆಯಬೇಕು ಅಂತ ಆ ಕ್ಷಣಕ್ಕೆ ತೀವ್ರವಾಗಿ ಅನ್ನಿಸಿಬಿಡುತ್ತದೆ. ನಿರ್ಲಕ್ಷಿಸಿದ ಗೆಳತಿಯ ಜೊತೆ ಕೂದಲು ಕಿತ್ತಿ ಜಗಳವಾಡಬೇಕು ಅನ್ನಿಸುತ್ತದೆ, ಎದೆಯಲ್ಲಿನ ದುಃಖ ಕರಗುವಂತೆ ಬಿಕ್ಕಿ ಬಿಕ್ಕಿ ಅಳಬೇಕು ಅನ್ನಿಸುತ್ತದೆ. ಖುಷಿಯ ಘಳಿಗೆಯೊಂದರಲ್ಲಿ ಪ್ರಿಯತಮನನ್ನು ಅಪ್ಪಿ ಮುದ್ದಾಡಬೇಕು ಅನ್ನಿಸುತ್ತದೆ. ಅವನೊಡನೆ ಸಂತೃಪ್ತ ಮೈಥುನವೊಂದನ್ನು ಅನುಭವಿಸಿ, ಆ ನಂತರ ಮಾತಿಲ್ಲದೇ ಅವನನ್ನು ಅಪ್ಪಿ ಮಗುವಿನಂತೆ ನಿದ್ರೆ ಮಾಡಬೇಕು ಅನ್ನಿಸುತ್ತದೆ. ಯಾವುದೋ ಜೋಕ್ ಒಂದಕ್ಕೆ, ಕೆನ್ನೆಯ ಮೇಲೆ ನೀರು ಹರಿಯುವಷ್ಟು ನಗಬೇಕು ಅನ್ನಿಸುತ್ತದೆ

ಈಗ ಊಹಿಸಿಕೊಳ್ಳಿ, ಬದುಕಿನ ಇಂಥ ಚಿನ್ನ ಚಿನ್ನ ಆಸೆಗಳನ್ನೂ ಅನುಭವಿಸಲು ಸಾಧ್ಯವಾಗದಂತ ಬದುಕು ಹೇಗಿರಬಹುದು? ಗಾಭರಿಯಾಗುತ್ತದಲ್ಲವೇ ….? ರೇಶಲ್, ನಿಯಾಹ್, ಬಾರ್ಬರಾ, ಸಾರಾ ಮುಂತಾದ ‘ಅಕ್ವಜೆನಿಕ್ ಅರ್ಟಿಕೇರಿಯಾ’ ಮತ್ತು ಇನ್ನಿತರ ಅರ್ಟಿಕೇರಿಯಾ ಪೀಡಿತರ ಬದುಕು ಹೀಗೇ ಇರುತ್ತದೆ!

ಫೋಟೋ ಕೃಪೆ : The Trent online

ನನ್ನ ದೊಡ್ಡಮ್ಮನಿಗೆ ನುಗ್ಗೆಕಾಯಿ ತಿಂದರೆ ಮುಖವೆಲ್ಲ ಊದಿಕೊಂಡುಬಿಡುತ್ತಿತ್ತು. ಹಾಗಾಗಿ ಅವರು ಅದನ್ನು ಮುಟ್ಟುತ್ತಲೇ ಇರಲಿಲ್ಲ. ನನಗೆ ಸಣ್ಣವಳಿರುವಾಗ ಕೆರೆತವೇನಾದರೂ ಉಂಟಾದಾಗ ಉಗುರಿನಿಂದ ಕೆರೆದರೆ ಮುಗಿಯಿತು! ಕೆರೆದ ಕಡೆಯೆಲ್ಲ ಚಾವಟಿಯಲ್ಲಿ ಹೊಡೆದಿದ್ದಾರೇನೋ ಅನ್ನಿಸುವಂಥ ಬಾಸುಂಡೆಗಳು ಏಳುತ್ತಿದ್ದವು. ಆ ನಂತರ ಉಗುರನ್ನು ಪೂರ್ತಿ ಕತ್ತರಿಸಿ ಕೆರೆಯಲಾರದಂತೆ ಮಾಡಿದ ಮೇಲೆ ಈ ಖಾಯಿಲೆ ವಾಸಿಯಾಯಿತು. ಹೀಗೇ ಇನ್ನು ಕೆಲವರಿಗೆ ಯಾವುದೋ ಹಣ್ಣಿನದ್ದೋ, ಹೂವಿನದ್ದೋ, ಎಣ್ಣೆಯದ್ದೋ ಅಲರ್ಜಿ ಆಗುವ ವಿಷಯ ಸಾಮಾನ್ಯ. ಆದರೆ ಈ ‘ಅಕ್ವಜೆನಿಕ್ ಅರ್ಟಿಕೇರಿಯಾ’ – ಅಂದರೆ ನೀರಿನ ಅಲರ್ಜಿಯ ಬಗ್ಗೆ ಕೇಳಿದ್ದೀರಾ?! ಹೌದು, ನೀವು ಸರಿಯಾಗಿಯೇ ಕೇಳಿಸಿಕೊಂಡಿದ್ದೀರಾ … ಅದು ನೀರಿನ ಅಲರ್ಜಿಯೇ!!! ಇಡೀ ಜಗತ್ತಿನ ಇಂಥ ಎಲ್ಲ ಅಕ್ವಜೆನಿಕ್ ಅರ್ಟಿಕೇರಿಯ ಪೀಡಿತರ ಸಂಖ್ಯೆಯನ್ನು ಕೂಡಿದರೆ 50 ದಾಟಲಿಕ್ಕಿಲ್ಲ … ಅಂಥ ವಿಚಿತ್ರದ ಖಾಯಿಲೆಯಲ್ಲದ ಖಾಯಿಲೆಯಿದು! ಅಂದರೆ ೨೩೦ ಮಿಲಿಯನ್‌ನಲ್ಲಿ ಒಬ್ಬರಿಗೆ ಮಾತ್ರ ಈ ತೊಂದರೆ ಬಾಧಿಸುತ್ತದೆ ಎಂದರೆ ಆಶ್ಚರ್ಯವಲ್ಲವೇ? ಹೆಚ್ಚಾಗಿ ಹೆಂಗಸರಿಗೆ – ಅದರಲ್ಲೂ ಆಗ ತಾನೇ ಕೌಮಾರ್ಯಕ್ಕೆ ಕಾಲಿಟ್ಟಿರುವ ಹೆಣ್ಣುಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ ಅರ್ಟಿಕೇರಿಯಾ.

ಇಂಗ್ಲೆಂಡ್ ದೇಶದ ನಿಯಾಹ್ ಸೆಲ್ವಿಗೆ ದಿನನಿತ್ಯ ತಡೆಯಲಾರದ ನೋವು ಬಾಧಿಸುತ್ತದೆ… ಆದರೆ ನೋವಾದಾಗ ಆಕೆ ಅಳುವಂತಿಲ್ಲ! ಅತ್ತರೆ ಮತ್ತಿಷ್ಟು ನೋವಾಗುತ್ತದೆ ಮತ್ತು ಅದರಿಂದ ಮತ್ತಿಷ್ಟು ಅಳು! ಸುಮಾರು ಐದು ವರ್ಷದವಳಿರುವಾಗ ನಿಯಾಹ್‌ಗೆ ಈ ತೊಂದರೆ ಶುರುವಾಗಿದ್ದು. ಎಲ್ಲರ ಹಾಗೆ ಈಜಲೆಂದು ಹೋದರೆ ಬರುವುದರಲ್ಲಿ ಮೈತುಂಬ ಕೆಂಪನೆಯ ಬರೆಗಳಾಗಿರುತ್ತಿದ್ದವು. ಮಳೆಯಲ್ಲಿ ನೆನೆದರಂತೂ ನಾಯಿಪಾಡು. ಆದರೆ ಇದೆಲ್ಲಕ್ಕೂ ನೀರೆಂಬ ನೀರು ಕಾರಣವಿರಬಹುದೆಂದು ಯಾರೂ ಊಹಿಸಲೂ ಇಲ್ಲ. ಬೆಳೆಯುತ್ತಾ ಹೋದಂತೆಯೂ ಈ ಸಮಸ್ಯೆ ಹಾಗೆಯೇ ಉಳಿದಾಗ ನಿಯಾಹ್ ಚರ್ಮತಜ್ಞರ ಸಹಾಯದಿಂದ ಇದಕ್ಕೊಂದು ಹೆಸರನ್ನಂತೂ ಕಂಡುಹಿಡಿದಳು ‘ಅಕ್ವಜೆನಿಕ್ ಅರ್ಟಿಕೇರಿಯ!’ ಆದರೆ ಆ ಚರ್ಮತಜ್ಞ ಅದಕ್ಕೆ ಯಾವ ಔಷಧವೂ ಇಲ್ಲವೆಂದು ಸ್ಪಷ್ಟಪಡಿಸಿದರು. ಅಂದರೆ … ನಿಯಾಹ್ ಆ ತೊಂದರೆಯೊಡನೆ ಬದುಕಲು ಕಲಿಯುವುದೊಂದೇ ಮಾರ್ಗ ಉಳಿದಿತ್ತು.

ನಿಯಾಹ್‌ಗೆ ನೀರಿನ ಅಲರ್ಜಿ ಎಷ್ಟಿದೆಯೆಂದರೆ ಅರಾಮವಾಗಿ ಸ್ನಾನ ಮಾಡುವುದು ಅವಳಿಗೆ ಎಂದೂ ಕನಸೇ ಸರಿ. ಶವರ್ ಅಡಿಯಲ್ಲಿ ನಿಂತ ಐದು ನಿಮಿಷಗಳಲ್ಲಿ ಇಡೀ ಮೈ ತುಂಬ ಬಾವು ಎದ್ದು, ಚರ್ಮ ಬೆಂಕಿ ಸೋಕಿದಂತೆ ಉರಿಯಲಾರಂಭಿಸುತ್ತದೆ. ಅದು ಇಳಿದು ಮತ್ತೆ ಚರ್ಮ ಮೊದಲಿನಂತಾಗಲು ಎಷ್ಟೋ ಸಮಯ ಹಿಡಿಯುತ್ತದೆ. ವಿಚಿತ್ರವೆಂದರೆ ಒಮ್ಮೆ ಚರ್ಮ ಉರಿಯಲಾರಂಭಿಸಿದ ಬಳಿಕ ನೀರು ಆ ಚರ್ಮವನ್ನು ಸ್ವಲ್ಪ ಮಟ್ಟಿಗೆ ತಣ್ಣಗಾಗಿಸಿ ಅವಳಿಗೆ ನೆಮ್ಮದಿಯನ್ನೂ ನೀಡುತ್ತದೆ! ಸ್ನಾನ ಮಾಡುವಾಗ ಈ ಉರಿ ಪ್ರಾರಂಭವಾಗೇ ಬಿಟ್ಟಿತೆಂದರೆ ಮತ್ತೆ ನೀರಿನಲ್ಲೇ ಇದ್ದು ಸ್ವಲ್ಪ ಕಾಲ ತಣ್ಣಗಾದ ಬಳಿಕವೇ ಹೊರಬರಬೇಕು! ಮೇಕಪ್ ತೆಗೆಯಲು ಬಳಸುವ ಮಾಯಿಶ್ಚರೈಸರ್ ಸೋಕಿದರೆ ಕೂಡಾ ಅವಳ ಚರ್ಮ ಉರಿಯುತ್ತದೆ ಅಂದರೆ ಅವಳ ಪರಿಸ್ಥಿತಿ ಊಹಿಸಲೂ ಕಷ್ಟವೆನ್ನಿಸುತ್ತದೆ.

ಫೋಟೋ ಕೃಪೆ : BBC

ಇನ್ನು ಬಾರ್ಬರಾ ವಾರ್ಡ್ ಅನ್ನುವ ೪೫ ವರ್ಷದ ಎರಡು ಮಕ್ಕಳ ತಾಯಿಯ ಕಥೆ ಕೇಳಿ. ಆಕೆಯನ್ನು ಕಾಡುತ್ತಿರುವ ಈ ಅಕ್ವಜೆನಿಕ್ ಅರ್ಟಿಕೇರಿಯಾ ನಿಯಾಹ್‌ಗಿಂತ ಹೆಚ್ಚು ತೀವ್ರ ಥರದ್ದಾಗಿದೆ. ಮಕ್ಕಳಿಗೆ ಸ್ನಾನ ಮಾಡಿಸುವ ಹಾಗಿಲ್ಲ, ಪಾತ್ರೆ ತೊಳೆಯುವ ಹಾಗಿಲ್ಲ, ಬಟ್ಟೆ ಒಗೆಯುವಂತಿಲ್ಲ. ಅಡಿಗೆ ಮಾಡಲೂ ಆಗುವುದಿಲ್ಲ. ಆಕೆಯ ಗಂಡನೇ ಇದೆಲ್ಲ ಕೆಲಸವನ್ನೂ ಮಾಡುತ್ತಾರೆ. ಬಿಸಿ ಟೀ ಅಥವಾ ಕಾಫಿ, ಹಾಗೂ ಹಾಲನ್ನು ಬಿಟ್ಟು ಮತ್ತೇನೂ ಕುಡಿಯುವಂತಿಲ್ಲ. ತೀರಾ ಬಾಯಾರಿದರೆ ಬಿಸಿ ನೀರು ಕುಡಿಯಬಹುದೇ ಹೊರತು, ಕಳೆದ ೨೦ ವರ್ಷಗಳಿಂದ ಒಂದೇ ಒಂದು ತಣ್ಣನೆಯ ಲೋಟ ನೀರನ್ನು ಕುಡಿದಿಲ್ಲ! ಹಾಗೆ ಕುಡಿದಿದ್ದೇ ಆದರೆ ಇಡೀ ಗಂಟಲಿನ ಒಳ ಭಾಗವೆಲ್ಲ ಬಾತುಕೊಂಡಂತಾಗಿ ಅಸ್ತಮಾ ರೀತಿಯ ಎಳೆತ ಉಂಟಾಗಿಬಿಡುತ್ತದೆ. ನೀರೇ ಕುಡಿಯುವಂತಿಲ್ಲ ಅಂದಮೇಲೆ ಬಿಯರನ್ನೂ ಕುಡಿಯುವಂತಿಲ್ಲ. ಹಾಗಾಗಿ ಯಾವುದೇ ಪಾರ್ಟಿ ಇದ್ದರೂ ಬಾರ್ಬರಾ ಅಲ್ಲಿಗೆ ಹೋಗಿ ಒದ್ದಾಡುವುದೇಕೆಂದು ಮನೆಯಲ್ಲೇ ಉಳಿಯುತ್ತಾರೆ. ‘ಶರಪಂಜರ’ ಸಿನೆಮಾ ನೋಡಿ ನನ್ನ ಅಮ್ಮ ಎಷ್ಟು ಅತ್ತಿದ್ದಳೆಂದರೆ ಒದ್ದೆಯಾಗಿದ್ದ ಕರ್ಚೀಫನ್ನು ಮುಂದಿನ ಸೀಟಿನ ಮೇಲೆ ಹಾಕಿ ಒಣಗಿಸಿ ನಂತರ ಮತ್ತೆ ಅಳು ಮುಂದುವರೆಸಿದ್ದಳಂತೆ! ಬಾರ್ಬರಾ ಏನಾದರೂ ಹಾಗೆ ಅತ್ತುಬಿಟ್ಟರೆ ಆ ಕ್ಷಣದಲ್ಲೇ ಇಡೀ ಮುಖದ ತುಂಬ ಹೊಪ್ಪಳೆ ಎದ್ದು ಭಯಾನಕ ಉರಿ, ನೋವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಕಲ್ಪನಾ ಸಿನೆಮಾ ಶರಪಂಜರ ನೋಡುವಂತಿಲ್ಲ ಮತ್ತು ತಾಯಿಯ ಮಡಿಲಲ್ಲಿ ಸಿನೆಮಾವನ್ನಂತೂ ನೋಡುವಂತೆಯೇ ಇಲ್ಲ! ಇದೆಲ್ಲ ಗೋಳು ಸಾಕಾಗಿ ಆಕೆ ಸಿನೆಮಾ ನೋಡುವುದು ಬಿಟ್ಟೇ ಯಾವುದೋ ಕಾಲವಾಯಿತಂತೆ. ಆಕೆ ಅಪ್ಪಿತಪ್ಪಿಯೂ ವ್ಯಾಯಾಮ ಮಾಡುವಂತಿಲ್ಲ, ಬೆವರು ಅವಳ ದೇಹವನ್ನು ಉರಿಯಲ್ಲಿ ಮುಳುಗಿಸುತ್ತದೆ. ಇನ್ನು ಮನಸೋ ಇಚ್ಛೆ ಸ್ನಾನ ಮಾಡುವ ಅದೃಷ್ಟವೂ ಅವಳ ಪಾಲಿಗಿಲ್ಲದೇ ಕೇವಲ ವಾರಕ್ಕೆ ಎರಡು ಸಲ ಒಂದು ನಿಮಿಷದ ಸ್ನಾನದ ಶಾಸ್ತ್ರವನ್ನಷ್ಟೇ ಮಾಡಬಲ್ಲಳು. ಇನ್ನು ಮಳೆಯಲ್ಲಿ ನೆನೆವ ಸುಖವಂತೂ ಕನಸೇ ಸರಿ …

ಫೋಟೋ ಕೃಪೆ : allergy

ದಿನನಿತ್ಯದ ಬದುಕಿನ ಎಲ್ಲ ಸಂಗತಿಗಳೂ ಅತ್ಯಂತ ಕಷ್ಟವೆನ್ನಿಸುವ ಈ ಅಕ್ವಜೆನಿಕ್ ಅರ್ಟಿಕೇರಿಯಾ ಅದೆಷ್ಟು ಕಷ್ಟ ಅಂತ ನಿಟ್ಟುಸಿರು ಬಿಡುವುದರಲ್ಲಿದ್ದರೆ ರೇಶಲ್ ವಿಷಯವಂತೂ ಮತ್ತಿಷ್ಟು ಊಹಿಸಲಸಾಧ್ಯವಾದದ್ದು. ಅವಳ ಅರ್ಟಿಕೇರಿಯ ಎಷ್ಟು ತೀವ್ರ ಥರದ್ದೆಂದರೆ ಅವಳಿಗೆ ಎಂಜಲಿನಿಂದ ಕೂಡಾ ಅಲರ್ಜಿ ಶುರುವಾಗುತ್ತದೆ. ಹಾಗಾಗಿ ಗಂಡು-ಹೆಣ್ಣಿನ ನಡುವಣ ದೈಹಿಕ ಸಂಬಂಧದಲ್ಲಿ ತುಂಬ ಮುಖ್ಯವೆನಿಸುವ ಚುಂಬನ ಅವಳಿಗೆ ಕನಸೇ ಸರಿ. ಅವಳ ಬಾಯ್‌ ಫ್ರೆಂಡ್ ಎಂದೂ ಅವಳನ್ನು ಮುತ್ತಿಕ್ಕುವ ಹಾಗೂ ಇಲ್ಲ! ಹಾಗೆ ಮುತ್ತಿಕ್ಕಿದ್ದೇ ಆದರೆ ಎಂಜಲು ಸೋಕಿದ ಚರ್ಮಭಾಗವೆಲ್ಲ ಕೂಡಲೇ ಉರಿ ಎದ್ದು ಬೆಂಕಿಯಂತಾಗುತ್ತದೆ. ಎಂಜಲೇ ಇಷ್ಟು ತೀವ್ರವಾದ ಪರಿಣಾಮ ಉಂಟುಮಾಡುತ್ತದೆಂದ ಮೇಲೆ ಇನ್ನು ಅವನೊಡನೆ ಮಲಗುವ ಹಾಗೂ ಇಲ್ಲ. ಏಕೆಂದರೆ ಆ ಉತ್ಕಟ ಕ್ಷಣಗಳಲ್ಲಿ ಗಂಡು ಮತ್ತು ಹೆಣ್ಣು ದೇಹದಿಂದ ಬೆವರು ಬರುವುದು ತೀರಾ ಸಾಮಾನ್ಯ ಸಂಗತಿ. ಆದರೆ ರೇಶಲ್‌ ಸಣ್ಣದಾಗಿ ಬೆವರಿದೊಡನೆ ಇಡೀ ಮೈ ಕೆಂಪಗಾಗಿ, ತಡೆಯಲಾರದ ಉರಿ ಏಳುತ್ತದೆ! ಹಾಗಾಗಿ ಆಕೆ ನೆಮ್ಮದಿಯಿಂದ ಸೆಕ್ಸ್ ಕೂಡಾ ಅನುಭವಿಸಲಾರಳು ಎಂದರೆ ಪರಿಸ್ಥಿತಿ ಊಹಿಸಿಕೊಳ್ಳಿ.



ಇದೇ ಅತ್ಯಂತ ಕಷ್ಟ ಅಂದುಕೊಳ್ಳುವವರಿಗೆ ಇಷ್ಟೇ ಅಲ್ಲ ಎನ್ನುತ್ತದೆ ಸಮಸ್ಯೆಗಳ ಈ ಜಗತ್ತು. ಕೆಲವು ಹೆಂಗಸರಿಗೆ ವೀರ್ಯದ ಅಲರ್ಜಿ ಕೂಡಾ ಆಗುತ್ತದೆ ಅಂದರೆ ನೀವು ನಂಬುತ್ತೀರಾ? ಅಂಥದ್ದೊಂದು ಕತೆ ಲಿಯೋನಿಯದ್ದು. ಪ್ರೀತಿಸಿದವನೊಡನೆ ಮದುವೆಯಾದಾಗ ಲಿಯೋನಿಗೆ ೨೩ ವರ್ಷ ಮಾತ್ರ ಆಗಿರುತ್ತದೆ. ಇಬ್ಬರೂ ಮದುವೆಯೊಂದರಲ್ಲಿ ಭೇಟಿಯಾದವರು ಒಂದೂವರೆ ವರ್ಷಗಳ ಕಾಲ ಪ್ರೇಮಿಸಿ ಕೊನೆಗೊಮ್ಮೆ ಮದುವೆಯೂ ಆಗುತ್ತದೆ. ಆದರೆ ಮೊದಲ ದಿನದ ಅವರ ಸೆಕ್ಸ್‌ ಮುಗಿದದ್ದೇ ತಡ ಲಿಯೋನಿಯ ಯೋನಿಯಲ್ಲಿ ಸೂಜಿ ಚುಚ್ಚಿದಂತೆ ಅಸಾಧ್ಯ ಉರಿ ಶುರುವಾಗುತ್ತದೆ. ನಿರಾಶೆಗೊಂಡ ಇಬ್ಬರೂ ಅಂದಿನ ದಿನ ಏನೋ ಸಮಸ್ಯೆ ಆಗಿರಬಹುದು ಎಂದೆಣಿಸಿ ಸುಮ್ಮನಾಗುತ್ತಾರೆ. ಆದರೆ ಪ್ರತಿ ಬಾರಿ ಇಬ್ಬರೂ ಮಲಗಿದಾಗಲೂ ಇದೇ ಸ್ಥಿತಿ ಮುಂದುವರೆದಾಗ ಇಬ್ಬರೂ ಕುಸಿಯುತ್ತಾರೆ. ಅಲ್ಲಿಂದ ಎಷ್ಟೆಲ್ಲ ಡಾಕ್ಟರ್‌ಗಳ ಬಳಿ ಹೋದರೂ ಯಾರೊಬ್ಬರಿಗೂ ಅದರ ಕಾರಣ ಏನೆಂಬುದೇ ತಿಳಿಯುವುದಿಲ್ಲ. ಗಂಡ ಹೆಂಡತಿಯರ ನಡುವಿನ ಸಮಸ್ಯೆ ತೀವ್ರವಾಗುತ್ತಾ ಹೋಗುತ್ತದೆ. ಕೊನೆಗೊಮ್ಮೆ, ಸುಮಾರು ಎರಡು ವರ್ಷಗಳ ನೋವಿನ ನಂತರ ಗೈನಕಾಲಜಿಸ್ಟ್ ಒಬ್ಬರು ಇದು ವೀರ್ಯಾಣು ಅಲರ್ಜಿ ಎಂದಾಗ ಇಬ್ಬರಿಗೂ ಶಾಕ್ ಆಗುತ್ತದೆ. ಆ ನಂತರ ಕಾಂಡೊಮ್ ಉಪಯೋಗಿಸಿ ಮಾಡುವ ಪ್ರಯತ್ನವೂ ನೆಲ ಕಚ್ಚುತ್ತದೆ, ಏಕೆಂದರೆ ಲಿಯೋನಿಗೆ ರಬ್ಬರ್ ಅಲರ್ಜಿ ಕೂಡಾ ಇರುತ್ತದೆ. ಆಕೆಯ ಗಂಡನಿಗೆ ಮಕ್ಕಳೆಂದರೆ ತುಂಬ ಪ್ರೀತಿ. ಅವನಲ್ಲಿ ಏನೂ ತೊಂದರೆ ಇಲ್ಲವೆಂದಾದಾಗ ತಾನೇಕೆ ಒದ್ದಾಡಬೇಕು ಎಂದೆಣಿಸಿ, ಲಿಯೋನಿ ದೂರವಾಗುವ ಪ್ರಸ್ತಾಪ ಇಟ್ಟೊಡನೆಯೇ ವಿಚ್ಛೇದನಕ್ಕೆ ಸಿದ್ಧವಾಗಿಯೇ ಬಿಡುತ್ತಾನೆ. ಕೊನೆಗೆ ೨೫ ವರ್ಷದವಳಿರುವಾಗ ಮತ್ತೆ ಲಿಯೋನಿ ಒಂಟಿಯಾಗುತ್ತಾಳೆ …

ಇದೇ ಅತ್ಯಂತ ಘೋರ ಸಮಸ್ಯೆ ಎಂದಿರಾ? ಇನ್ನೂ ಮುಗಿದಿಲ್ಲ ತಾಳಿ! ಅರ್ಟಿಕೇರಿಯಾದ ವಿಸ್ತಾರ ಎಷ್ಟಿದೆಯೆಂದರೆ ಬದುಕನ್ನೇ ಬುಡಮೇಲು ಮಾಡಿ ಬಿಡುವಷ್ಟು. ಕೆಲವರಿಗೆ ಬಿಸಿಲು, ಸದ್ದು, ಒತ್ತಡ, ಸಂತೋಷ, ಓಟ, ಸ್ಪರ್ಶ ಎಲ್ಲವೂ ಮೈಮೇಲೆ ಕೆಂಪು ಕೆಂಪು ಪ್ಯಾಚ್‌ಗಳನ್ನುಂಟು ಮಾಡಿ ಅಸಾಧಾರಣ ಉರಿ ಭುಗಿಲೇಳುತ್ತದೆ. ಇದನ್ನು ‘ಲೈಫ್ ಅರ್ಟಿಕೇರಿಯಾ’ ಎನ್ನುತ್ತಾರೆ. ಹೀಗೆ ಲೈಫ್ ಅರ್ಟಿಕೇರಿಯಾ ಪೀಡಿತರಾದವರು ಮನೆಯಿಂದ ಹೊರಗೆ ಹೋಗುವುದನ್ನೇ ನಿಲ್ಲಿಸಿ ಬಿಡುತ್ತಾರೆ. ತಮ್ಮ ಮನೆಯ ರೂಮಿನೊಳಗೆ ಬಂಧಿಯಾಗಿ, ಹೊರ ಪ್ರಪಂಚದ ಸಂಪರ್ಕವೇ ಇಲ್ಲದಂತೆ ಇರಬೇಕಾದ ಸ್ಥಿತಿ ಕೂಡಾ ಎದುರಾಗುತ್ತದೆ. ಅದರ ಜೊತೆಗೆ ಮತ್ತೆ ಕೆಲವರಿಗೆ ವಿದ್ಯುಚ್ಛಕ್ತಿ, ಮೈಕ್ರೊವೇವ್ ಇವುಗಳ ಅಲರ್ಜಿ ಕೂಡಾ ಇರುತ್ತದೆ. ಕೆಲವರಿಗೆ ಸಣ್ಣ ವೈಬ್ರೇಷನ್ ಕೂಡಾ ಅಲರ್ಜಿಯನ್ನುಂಟು ಮಾಡುತ್ತದೆ. ಹಾಗಾಗಿ ಮನೆಯಲ್ಲಿಯೇ ಉಳಿದರೂ ನೆಮ್ಮದಿಯ ಬದುಕು ಸಾಗಿಸುವಂತಿಲ್ಲ. ಈಗ ಹೇಳಿ ಯಾವುದನ್ನು ಹೆಚ್ಚಿನ ಸಮಸ್ಯೆ ಅನ್ನುತ್ತೀರಿ? ಯಾವುದನ್ನು ಸರಳ ಸಮಸ್ಯೆ ಎಂದು ತೀರ್ಮಾನಿಸುತ್ತೀರಿ? ಮೇಲೆ ಹೇಳಿದ ಎಲ್ಲವೂ ಬದುಕು ಮುನ್ನಡೆಯಲು ಅಗತ್ಯವಾದಂಥವೇ ಇರುವಾಗ ….


  • ಬಿ ವಿ ಭಾರತಿ (ಕವಯತ್ರಿ, ಸಾಹಿತಿ )

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW