ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಮುಂಬೈಯ ವಿಶ್ವನಾಥ ಕಾರ್ನಾಡ್ ಅವರ ಕಥಾಸಂಕಲನ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಲಿಲ್ಲಿ ಬಂದು ಹೋದಳು
ಲೇಖಕರು : ಡಾ.ವಿಶ್ವನಾಥ ಕಾರ್ನಾಡ್
ಪ್ರಕಾರ : ಕಥಾಸಂಕಲನ
ಬೆಲೆ : 250.00
ಈ ಕಥಾಸಂಕಲನದಲ್ಲಿ ವಿಭಿನ್ನ ರೀತಿಯ ಕಥೆಗಳು ಇವೆ. ಅವನ್ನು ಅವುಗಳ ವಸ್ತುಗಳನ್ನು ಆಧರಿಸಿ, ಮೂರು ಆಯಾಮಗಳನ್ನು ಗುರುತಿಸಬಹುದು. ಅವು:
ಒಂದು – ಪೌರಾಣಿಕ, ಎರಡು ಮುಂಬಯಿ ಕೇಂದ್ರಿತ ಮತ್ತು ಅವರ ಹುಟ್ಟಿದ ದಕ್ಷಿಣ ಕನ್ನಡ ಕೇಂದ್ರಿತ. ಮೊದಲನೆಯ ಪೌರಾಣಿಕದಲ್ಲಿ ಮಹಾಭಾರತದ ಮೂರು ಪ್ರಸಂಗಗಳನ್ನು ಪುನಾರಚನೆ ಮಾಡಲಾಗಿದೆ. ಅದರಲ್ಲಿ ಒಂದು ಕರ್ಣ ಮತ್ತು ಉರ್ವಿಯರ ಪ್ರಸಂಗ. ಎರಡು ಭೀಷ್ಮ ಮತ್ತು ಶಂತನು ಮತ್ತು ಭೀಷ್ಮ ಮತ್ತು ಕರ್ಣ. ಮೊದಲ ಕತೆಯ ಉರ್ವಿ ಮತ್ತು ಕರ್ಣರ ಸಂಕೀರ್ಣ ಸಂಬಂಧದ ಅನಾವರಣ ಇದೆ. ಎರಡನೆಯ ಭೀಷ್ಮ ಮತ್ತು ಶಂತನುರ ಆತ್ಮಾವಲೋಕನದ ಪರಿ ಅನನ್ಯ. ಭೀಷ್ಮನ ಒಂಟಿತನಕ್ಕೆ ತಾನೇ ಕಾರಣ ಎಂಬ ಶಂತನುವಿನ ಪಶ್ಚಾತ್ತಾಪವಿದೆ. ಶರಶಯ್ಯೆಯಲ್ಲಿ ಭೀಷ್ಮ ಮತ್ತು ಕರ್ಣರ ನಡುವಿನ ಸಂಕೀರ್ಣ ಸಂಬಂಧದ ಪುನರಾವಲೋಕನವಿದೆ. ಈ ಕತೆಗಳ ಮೂಲಕ ಕಾರ್ನಾಡ್ ನಮ್ಮ ಭಾರತೀಯ ಮಹಾಕಾವ್ಯದ ಪಾತ್ರಗಳ ಮೇಲೆ ಹೊಸ ಬೆಳಕು ಚೆಲ್ಲುತ್ತಾರೆ.
ಈಚಿನ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲುವ ಅಂತರ್ಧರ್ಮೀಯ ಹಾಗೂ ಅಂತರ್ ಪ್ರಾಂತೀಯ ವೈವಾಹಿಕ ಸುಮಧುರ, ಸಂಕೀರ್ಣ ಸಂಬಂಧದ ಒಂದೆರಡು ಕತೆಗಳು( ಲಿಲ್ಲಿ ಬಂದು ಹೋದಳು ) ಇಲ್ಲಿವೆ. ಅವುಗಳ ಸಕಾರಾತ್ಮಕ ಧೋರಣೆ ಹೊಂದಿರುವುದು ಲೇಖಕರ ಆರೋಗ್ಯಕರ ನಿಲುವಿಗೆ ಸಾಕ್ಷಿ.ಕಾಸ್ಮೊಪಾಲಿಟನ್ ಸಂಕರ ಸಂಸ್ಕೃತಿಯ ಪರಿಣಾಮವೆನ್ನಬಹುದು.

ಅವರ ಬೇರಾದ ದಕ್ಷಿಣ ಕನ್ನಡದ ಬದುಕಿನ ದಾರಿದ್ರ್ಯವೆ, ಅಲ್ಲಿಯವರನ್ನು ಮುಂಬಯಿ ಗೆ ವಲಸೆ ಹೋಗುವುದನ್ನು ಅನಿವಾರ್ಯವಾಗಿಸಿದ ಸಂನಿವೇಶಗಳ ಚಿತ್ರಗಳಿವೆ. ಹೀಗೆ ವಲಸೆ ಹೋದವರು ಎದುರಿಸಬೇಕಾಗಿ ಬಂದ ದುರ್ಬರ ಸವಾಲುಗಳನ್ನು ಇಲ್ಲಿನ ಕತೆಗಳಲ್ಲಿ ಅನಾವರಣ ಮಾಡಿದ್ದಾರೆ. ಮುಂಬಯಿಗೆ ಬಂದ ಮೇಲೆ ರಾತ್ರಿಶಾಲೆಗಳಲ್ಲಿ ಕಲಿತು ಮುಂದೆ ಬಂದವರು ಕೆಲವರಾದರೆ, ಹೆಣ್ಣು ಮಕ್ಕಳು ಅಲ್ಲಿನ ಕುಪ್ರಸಿದ್ದ ಕೆಂಪು ದೀಪಗಳಲ್ಲಿ ನರಳುತ್ತಿರುವ ಭೀಕರ ಚಿತ್ರಣ ಕೂಡ ಇದೆ. ಅದರೊಂದಿಗೆ ಹಣ ಮಾಡುವ ಹುಚ್ಚು ಹಿಡಿದು, ದಾರಿತಪ್ಪಿ ಗ್ಯಾಂಗ್ ಗಳೆಂಬ ಚಕ್ರವ್ಯೂಹ ಸೇರಿ ಹತರಾದ ನತದೃಷ್ಟರ ಕಹಿವಾಸ್ತವದ ಚಿತ್ರ ಕೂಡ ಇಲ್ಲಿದೆ.
ಇವಲ್ಲದೆ, ದಾಂಪತ್ಯ ಜೀವನದ ಸಂಕೀರ್ಣ ಸಂಬಂಧದ ಸುಳಿಗೆ ಸಿಕ್ಕಿ ತೊಳಲಾಡುವ ಚಿತ್ರ ಒಂದು ಕಡೆ ಇದ್ದರೆ ಗೃಹಿಣಿ (ಚಾಳ್ ನ ಹುಡುಗಿಯ ಮೋಹಕ್ಕೆ ಒಳಗಾದ ಶ್ರೀಮಂತ ಗಂಡ ( ಪ್ರೀತಿಯ ಕರೆ), ಅನೈತಿಕ ಸಂಬಂಧದ ಇರಿಸುಮುರಿಸುಗಳು ಇನ್ನೊಂದು ಕಡೆ.ಶ್ರೀಮಂತ ವಿವಾಹಿತ ಭಾವನ ಮೋಹದ ಸುಳಿಗೆ ಸಿಕ್ಕಿ ಹೊರಬರಲು ಪರಿತಪಿಸುವ ವಿವಾಹಿತ ಹೆಣ್ಣು (ಭಾವ ಬಂಧನ) ಇದರೊಂದಿಗೆ ಮುನ್ನುಡಿ ಬರೆದ ಉಮಾರಾವ್ ಗುರುತಿಸುವ ವೃದ್ಧಾಪ್ಯದ ಸವಾಲುಗಳನ್ನು, ಇಲ್ಲಿನ ಕೆಲವು ಕತೆಗಳು ಅನಾವರಣ ಮಾಡುತ್ತವೆ. ಇವುಗಳ ಅಭಿವ್ಯಕ್ತಿಗೆ ಮೂರು ಬಗೆಯ ಭಾಷೆಗಳನ್ನು ಇಲ್ಲಿ ಬಳಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಕೇಂದ್ರಿತ ಕತೆಗಳಲ್ಲಿ ತುಳು ಮಿಶ್ರಿತ ಕನ್ನಡವಾದರೆ, ಮುಂಬಯಿ ಕೇಂದ್ರಿತ ಕತೆಗಳಲ್ಲಿ, ಮರಾಠಿ ಮಿಶ್ರಿತ ಭಾಷೆಯನ್ನು ಮತ್ತು ಉಳಿದ ಕತೆಗಳಲ್ಲಿ ಗ್ರಾಂಥಿಕ ಕನ್ನಡ ಭಾಷೆಯನ್ನು, ಬಳಸುವ ಮೂಲಕ ವಸ್ತುವಿಗೆ ಮತ್ತು ಪ್ರಾದೇಶಿಕ ಸಂಸ್ಕೃತಿಗೆ ತಕ್ಕಂತೆ ಸಂಕರ ಭಾಷೆಯ ಬಳಕೆಯನ್ನು ಯಶಸ್ವಿಯಾಗಿ ಬಳಸಿದ್ದಾರೆ. ಹೀಗೆ ಬಳಸುವುದು ಆಯಾ ಕಥಾವಸ್ತುವಿಗೆ ಅನಿವಾರ್ಯವಾದರೂ ಅವುಗಳ ಪರಿಚಯವಿಲ್ಲದ ಓದುಗರ ಗ್ರಹಿಕೆಗೆ ತೊಡಕನ್ನು ಕೆಲವು ಸಲ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಆ ಪದಗಳಿಗೆ ಕೊನೆಯಲ್ಲಿ ಅನುಬಂಧದಲ್ಲಿ ಟಿಪ್ಪಣಿ ಒದಗಿಸಬಹುದಾಗಿತ್ತು.

ಬಹುಕಾಲದ ನನ್ನ ಹಿರಿಯ ಮಿತ್ರರಾದ ಡಾ. ವಿಶ್ವನಾಥ ಕಾರ್ನಾಡ್ ನಾನು ಮುಂಬಯಿ ಬಿಟ್ಟು ಬಂದರೂ, ನಮ್ಮ ಗೆಳೆತನವನ್ನು ಮರೆಯದೆ, ಬೆಂಗಳೂರಿನ ನನ್ನ ವಿಳಾಸ ಪಡೆದು ಪುಸ್ತಕ ಕಳಿಸುವ ಸೌಜನ್ಯ ಮೆರೆದಿದ್ದಾರೆ. ಇಂತಹ ಕಾರ್ನಾಡ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನಿಸುತ್ತಿರುವುದು ನನಗೆ ವೈಯಕ್ತಿಕವಾಗಿ ಹೆಮ್ಮೆಯ ವಿಷಯ. ಅಭಿನಂದನೆಗಳು.
- ರಘುನಾಥ್ ಕೃಷ್ಣಮಾಚಾರ್
