ಪ್ರೀತಿಯ ಅನಂತತೆ, ಲವ್ ಎಂಬ ಸಂಕುಚಿತತೆ.!



ಪ್ರೀತಿಯನ್ನು ಹೆಚ್ಚು ಹೆಚ್ಚು ಹಂಚಿದಷ್ಟೂ ಬದುಕಿನ ಆನಂದ ಹೆಚ್ಚೆಚ್ಚು ನಿಮ್ಮಲ್ಲಿ ಡೆಪಾಸಿಟ್ ಆಗುತ್ತಲೇ ಹೋಗುತ್ತದೆ.ಪ್ರೀತಿ ಈ‌ ಭೂಮಿ ಮೇಲೆ ಯಾಕಿದೆ‌? ಪ್ರೀತಿಯ ಮಹತ್ವವನ್ನು ಲೇಖಕ ಹಿರಿಯೂರು ಪ್ರಕಾಶ್ ಓದುಗರ ಮುಂದೆ ಇಟ್ಟಿದ್ದಾರೆ, ಮುಂದೆ ಓದಿ …

“ಪ್ರೀತಿ ” ಅನ್ನೋ ಎರಡಕ್ಷರಕ್ಕೆ ಏನೆಲ್ಲಾ ಅರ್ಥ ಅನರ್ಥ, ವಿಶಾಲಾರ್ಥ, ಮಹತ್ವದರ್ಥ, ಗೂಡಾರ್ಥ, ಗಹನಾರ್ಥ ಇದೆಯಲ್ಲವೇ..? ಈ ಜಗತ್ತಿನ‌ ಎಲ್ಲಾ‌ ಜೈವಿಕ ಸಂಬಂಧಗಳ ಮೂಲ ಸೆಲೆಯೇ ಪ್ರೀತಿ ! ಪರಸ್ಪರರಲ್ಲಿ ನಂಬಿಕೆ, ಆತ್ಮೀಯತೆ, ವಿಶ್ವಾಸ, ಅಭಿಮಾನ, ಹೆಮ್ಮೆ‌ ಮೂಡಲು ಮೂಲತಃ‌ #ಪ್ರೀತಿ ಇರಲೇಬೇಕು. ಸಿಂಪಲ್ಲಾಗಿ ಹೇಳಬೇಕಂದ್ರೆ ಪ್ರೀತಿಯಿಲ್ಲದ‌ ಜೀವನ ‌ತಾರೆ‌-ಚಂದ್ರನಿಲ್ಲದ‌ ಬಾನಿನಂತೆ ಅಲ್ಲವೇ‌….! ಇನ್ನೂ ಒಂದು‌ ಹೆಜ್ಜೆ ಮುಂದೆ ಹೋಗಿ ಹೇಳಬೇಕಾದರೆ ‌”ಪ್ರೀತಿ ನೀ‌ ಇಲ್ಲದೆ ನಾನು‌ ಹೇಗಿರಲಿ ” ಎಂಬಂತೆ ಪ್ರೀತಿಯಿಲ್ಲದೆ‌ ಜೀವನದ ಸಾರವೇ ಇಲ್ಲ.! ಸೋ…. ಪ್ರೀತಿಯೇ ಎಲ್ಲಾ… ಅದಿಲ್ಲದೇ ಜೀವನವಿಲ್ಲ, ಇದ್ದರೂ ಅದರಲ್ಲಿ ಸಾರವಿಲ್ಲ. ಹೀಗಾಗಿ ಪ್ರೀತಿ ನಮ್ಮೊಳಗಿನ ಒಂದು ಪವರ್ ಫ಼ುಲ್ ಟೂಲ್ ಇದ್ದಂತೆ .

ಫೋಟೋ ಕೃಪೆ : talontribune

ನಿಮ್ಮಲ್ಲಿ‌ ಕೋಟ್ಯಾಂತರ ಹಣ ,ಆಸ್ತಿ ,ಒಡವೆ- ವಸ್ತು ಕಾರು, ಬಂಗಲೆ, ಆಳು- ಕಾಳು ಎಲ್ಲವೂ ಇರಬಹುದು .ಆದರೆ ಮನೆಯಲ್ಲಿ ನಿಮ್ಮನ್ನು ಹೃದಯದಿಂದ ಪ್ರೀತಿಸುವ ಮನಸೊಂದಿಲ್ಲದಿದ್ದರೆ ಅವೆಲ್ಲವೂ ಜಸ್ಟ್ ವೇಸ್ಟ್ ! ಸಂತಸದ ಕ್ಷಣಗಳಲ್ಲಿ ಪ್ರೀತಿಯಿಂದ ಸಂಭ್ರಮಿಸುವ ಮನಸು , ಕಷ್ಟದ ಸಮಯದಲ್ಲಿ ಅಷ್ಟೇ ಪ್ರೀತಿಯಿಂದ ಸಾಂತ್ವಾನ‌ ಹೇಳಿ ಸಂತೈಸುವ ಹೃದಯಗಳಿದ್ದಲ್ಲಿ ಮಿಕ್ಕೆಲ್ಲವೂ ಸೆಕೆಂಡರಿ ಕಣ್ರೀ….. ಸೋಲಲ್ಲೂ- ಗೆಲುವಲ್ಲೂ ನೋವಲ್ಲೂ- ನಲಿವಲ್ಲೂ, ಬಡತನದಲ್ಲೂ- ಸಿರಿತನದಲ್ಲೂ ಹಂಚಿಕೊಳ್ಳಲು ‌ಬೇಕಾದದ್ದು‌ ಪ್ರೀತಿ‌ಭರಿತ ಭಾವನೆಗಳೇ‌ ಹೊರತು ಅವೆಷ್ಟೇ ಬೆಲೆಯಿರುವ ನಿರ್ಭಾವುಕ ವಸ್ತುಗಳಲ್ಲ. ಹಾಗಾದರೆ ಇಷ್ಟೆಲ್ಲಾ ಮೌಲ್ಯವುಳ್ಳ ಈ ಪ್ರೀತಿಯನ್ನು‌ ಸಂಪಾದಿಸುವುದು ಅಷ್ಟು ಕಷ್ಟವೇ?

ನೋ… ವೇ……‌‌! ಖಂಡಿತಾ ಅದು ನಿಮ್ಮಲ್ಲೇ ಸೂಕ್ತವಾಗಿದೆ. ಮೊಗೆದಷ್ಟೂ ಮುಗಿಯದ ನಿಧಿಯಂತೆ ! ನೀಡಿದಷ್ಟೂ ಉದ್ಭವಿಸುವ ಅಕ್ಷಯದಂತೆ ! ಹಂಚಿದಷ್ಟೂ ದ್ವಿಗುಣವಾಗುವ ವಿಸ್ಮಯದಂತೆ ! ಇಷ್ಟೆಲ್ಲಾ ಫ಼್ರೀಯಾಗಿ ಅದು ನಮ್ಮಲ್ಲೇ ಸುಪ್ತವಾಗಿದ್ದರೂ ಎಲ್ಲರೂ ಅದನ್ನು ಹಂಚಿಕೊಂಡು ಬಾಳಲು ಜಿಪುಣತನವೇಕೆ ? ಎಂಬ ಪ್ರಶ್ನೆ ಲಾಗಾಯ್ತಿನಿಂದಲೂ ಪ್ರಶ್ನೆಯಾಗಿಯೇ ಕಾಡುತ್ತಿದೆ..! ಕಾರಣ ಸಿಂಪಲ್….ನಾವು ಈ ಪ್ರಶ್ನೆಯನ್ನು ನಮಗೆ ನಾವೇ ಪ್ರಾಮಾಣಿಕವಾಗಿ ಕೇಳಿಕೊಂಡು ಅದಕ್ಕೆ ಬದ್ದತೆಯಿಂದ ಉತ್ತರಿಸಲು ಹೋಗಿಲ್ಲ ಅಷ್ಟೇ ! ಪ್ರೀತಿಯ ಅನಂತತೆಯನ್ನು ಲವ್ ನ ಸಂಕುಚಿತತೆಯೊಂದಿಗೆ ಸಮೀಕರಿಸಿ ನೋಡುವ ಸಾಮಾನ್ಯ ವ್ಯಾಪ್ತಿಯಿಂದ ಕೊಂಚ ಆಚೆ ಬಂದಾಗಲಷ್ಟೇ ಪ್ರೀತಿಯ ಆಳ ಅಗಲ ಅರಿವಿಗೆ ಬಂದೀತು !

ಈ ಪ್ರೀತಿ ಅನ್ನೋದು ಜೀವವಿರುವ ಎಲ್ಲಾ ಸಂಬಂಧಗಳಲ್ಲೂ ಒಂದಲ್ಲಾ ಒಂದು ರೂಪದಲ್ಲಿ ಬೆಸೆದುಕೊಂಡಿರುತ್ತೆ. ಪ್ರೀತಿ ಸಾಮಾನ್ಯವಾಗಿ ಸಂತಸವನ್ನೇ ಹರಿಸಿದರೂ ಕೆಲವು ಸಂಧರ್ಭದಲ್ಲಿ
ಪ್ರೀತಿ ತಂದೊಡ್ಡುವ ನಿರಾಶೆಯನ್ನು ಅನುಭವಿಸಿದ ಕೆಲವರಲ್ಲಿ ಪ್ರೀತಿಯಲ್ಲಿನ ದೋಷವೂ, ಆಕ್ರೋಷವೂ ಕಂಡಿದ್ದಿರಬಹುದು. ಹೀಗಾಗಿಯೇ ಒಮ್ಮೊಮ್ಮೆ ಪ್ರೀತಿ ಕಡಿಮೆಯಾದರೂ ಕಷ್ಟ, ಹೆಚ್ಚಾದರೂ ಕಷ್ಟ.

ಫೋಟೋ ಕೃಪೆ : iNEWS

ವಿಶೇಷವೆಂದರೆ ತಾಯಿ- ಮಗುವಿನ ಪ್ರೀತಿಯಲ್ಲಿ ಮಾತ್ರ ಕಳಂಕ, ಕೃತಕ, ಕಲ್ಮಷ, ಕೆಡುಕು, ಇರಲಾರದು . ಅದೊಂದು ಪದಗಳಿಗೆ‌ ನಿಲುಕಲಾರದ ದಿವ್ಯಾನುಬಂಧ , ಅಮೋಘ ‌ಅನುಭೂತಿ ಹಾಗೂ ನಿಸ್ವಾರ್ಥ ಪ್ರೀತಿಯ ಪರಾಕಾಷ್ಠೆ. ತಾಯಿ ಮಗುವಿನ‌ ಪ್ರೀತಿಗೆ ಜಗತ್ತಿನ‌ ಬೇರಾವುದೇ , ಬೇರೆ ಯಾರ ಪ್ರೀತಿಯ ತೂಕವೂ ಸರಿದೂಗಲಾರದು. ತಾಯಿ ಮಗುವಿನ ಪ್ರೀತಿಯ ಈ #ಅನುಬಂಧ ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ಧಾರಾಳವಾಗಿ ಕಾಣಬಹುದು.

ವಿಷಾದವೆಂದರೆ ಅದೇ ಮಟ್ಟದ ಈ ಪ್ರೀತಿಯ ನಿರಂತರ ಭಾವ ಇನ್ನಿತರೆ ಸಂಬಂಧಗಳಲ್ಲಿ‌ ಸಲೀಸಾಗಿ ಕಾಣಸಿಗುವುದಿಲ್ಲ . ಗಂಡ- ಹೆಂಡತಿ, ಅಣ್ಣ ತಮ್ಮ, ಅಕ್ಕ ತಂಗಿ, ಅಜ್ಜ ಅಜ್ಜಿ, ಅತ್ತೆ- ಸೊಸೆ, ಮಾವ ಅಳಿಯ, ಗೆಳೆಯ ಗೆಳತಿ, ಸಂಬಂಧಿಕರು ಬಂಧುಗಳು ಈ ಎಲ್ಲಾ ಸಂಬಂಧಗಳಲ್ಲಿನ ಪ್ರೀತಿಗೆ ಆಗಾಗ್ಗೆ‌ ಬಿರುಕು, ಕಸ ಕಡ್ಡಿ ಧೂಳು ಸೇರುತ್ತಲೇ ಇರುತ್ತವೆ. ಬಹುಶಃ ‌ಮಾನವ ಸಂಬಂಧಗಳೇ ಹಾಗೆ ಅನ್ಸುತ್ತೆ‌. ಹಾಗಂತ ಅಂತಹಾ ಧೂಳನ್ನೊರೆಸಿ ಮುಂದಡಿಯಿಡುವ ಪ್ರಯತ್ನವೂ ನಮ್ಮಲ್ಲೇ ಇದೆಯಲ್ಲವೇ…?? ಏನೇ ಅಡೆತಡೆ ಬಂದರೂ ಪರಸ್ಪರ ಪ್ರೀತಿಯ ಬಂಧ ಸ್ಟ್ರಾಂಗ್ ಆಗಿದ್ದಾಗ ಯಾವ ಸಂಬಂಧಗಳೂ ಅಷ್ಟು ಸುಲಭಕ್ಕೆ ಕಳಚಿ ಬೀಳೋಲ್ಲ. ಇಸ್ಫೀಟ್ ಎಲೆಗಳಂತೆ ಉದುರುವ ಸಂಬಂಧಗಳಿಗೆ ಪ್ರೀತಿಯ ಬೆಲೆ ಗೊತ್ತೇ ಇರೋಲ್ಲ.

ಪ್ರೀತಿ ಹೃದಯದಿಂದ‌ ಹೊಮ್ಮಿದಾಗಲಷ್ಟೇ ಅದಕ್ಕೆ ಮಿಲಿಯನ್ ಗಟ್ಟಲೆ ಮೌಲ್ಯವಿರಲು ಸಾಧ್ಯ. ಮನದೊಳಗೆ ಹುಸಿಪ್ರೀತಿ ತುಂಬಿಕೊಂಡು ಕೇವಲ‌ ಬಾಯಿ ಮಾತಿಗೆ ಅಥವಾ ತೋರಿಕೆಗೆ ಪ್ರೀತಿ ವ್ಯಕ್ತಪಡಿಸಿದಲ್ಲಿ ಅದು ಪ್ರೀತಿಯಾಗಲಾರದು, ಬದಲಿಗೆ ಅದು ಸ್ವಾರ್ಥ ಸಾಧನೆಯ ತೋರಿಕೆಯ ಪ್ರೀತಿ. ಹೀಗಾಗಿಯೇ ನಿಜವಾದ ಪ್ರೀತಿಯೆನ್ನುವುದು ಅನಂತದಷ್ಟು‌ ಆಳವಾದರೆ, ನಕಲಿ ಪ್ರೀತಿ ಕಾಲದಷ್ಟೇ ಕ್ಷಣಿಕ.

ಫೋಟೋ ಕೃಪೆ : lamag

ನೈಜ ಪ್ರೀತಿ ಹೊರಬರುವುದು ಪರಸ್ಪರ ಮನಸುಗಳು ಪರಿಶುದ್ಧವಾಗಿದ್ದಾಗ ಮಾತ್ರವೇ ! ಮನಸುಗಳು ಬಗ್ಗಡವಿರದ ತಿಳಿನೀರಿನಂತೆ‌ ಪಾರದರ್ಶಕವಾಗಿದ್ದಾಗ ಮಾತ್ರ ಮೌಲ್ಯಯುತವಾದ ಪ್ರೀತಿ ತಾನೇತಾನಾಗಿ‌ ಉಕ್ಕುತ್ತದೆ. ಇಷ್ಟೆಲ್ಲಾ ಪ್ರೀತಿಗೆ ಮಹತ್ವವಿದ್ದರೂ, ಅದೊಂದು ಬಹುಮೌಲ್ಯಯುತವಾದ ಭಾವನೆ ಎಂದು‌ ತಿಳಿದಿದ್ದರೂ ಅದನ್ನು ಪರಸ್ಪರ ಹಂಚಿಕೊಳ್ಳಲು ಏಕೆ ಚೌಕಾಸಿ ಮಾಡುತ್ತೇವೆ‌? ಬಹುತೇಕ ಸಂಬಂಧಗಳಲ್ಲಿ ಬಾಲ್ಯದಲ್ಲಿರುವ ಪ್ರೀತಿಯ ಅಗಾಧತೆ ದೊಡ್ಡವರಾದಂತೆ ಕಳೆಗುಂದಲು ಕಾರಣವೇನು ? ಎಂಬ ಸಂಕೀರ್ಣ ಪ್ರಶ್ನೆಗೆ…..

” ಮನುಷ್ಯನಿಗೆ ನೆಮ್ಮದಿ ಸುಖ ದಕ್ಕುವುದು ಭೌತಿಕ ವಸ್ತುಗಳ ಮೇಲಾಟ ಬಯಲಾಟಗಳ ಹಾರಾಟಗಳಿಂದಲ್ಲ! ಬದಲಿಗೆ ಜೈವೀಕ ಸಂಬಂಧಗಳ ಮಧುರ ಭಾವನೆಗಳ ಹುಡುಕಾಟದಿಂದ ಅಥವಾ ಪ್ರೀತಿಯೆಂಬ‌ ಜೋಕಾಲಿಯಲ್ಲಿ ಮನದುಂಬಿ ಜೀಕುವುದರಿಂದ..”.

ಈ ಸಾಲುಗಳ ಸಾರ ಅರ್ಥವಾಗದಿರುವುದೇ ಉತ್ತರವಿದ್ದೀತೇ….??

ಇಂತಹಾ ಪ್ರೀತಿ ಈ‌ ಭೂಮಿ ಮೇಲೆ ಯಾಕಿದೆ‌? ಎಂಬ‌ ಪ್ರಶ್ನೆಗೆ ಒಬ್ಬೊಬ್ಬರದು ಒಂದೊಂದು ರೀತಿಯ ಉತ್ತರವಿರಬಹುದು. ಭೂಮಿ ಮೇಲೆಯೇ ಎಲ್ಲಾ ಜೀವಿಗಳು ಇರುವುದರಿಂದ ಅವುಗಳ‌ ನಡುವೆ ಪ್ರೀತಿ ಇರಲಿ ಎಂದೇ ಅದು ಭೂಮಿ‌ ಮೇಲಿರಬಹುದು. ಬೇರೆ ಎಲ್ಲೂ‌ ಜಾಗ‌ ಇಲ್ಲದೆಯೂ ಇರಬಹುದು. ಮಾನವ ಜನ್ಮ‌ ದೊಡ್ಡದು. ಅದನ್ನು ಸ್ವಾರ್ಥ ದ್ವೇಷ ದುರಾಸೆ ಮುಂತಾದ ಕೆಡುಕುಗಳಿಂದ ರಕ್ಷಿಸಲು ಮತ್ತು ಮನುಷ್ಯನನ್ನು ಮನುಷ್ಯ ನನ್ನಾಗಿ ನೋಡುವಂತಹ ವಾತಾವರಣ ನಿರ್ಮಿಸಲು ಪ್ರೀತಿ ಭೂಮಿ ಮೇಲಿರಬಹುದು. ಒಂದೇ ಮಾತಲ್ಲಿ ಹೇಳೋದಾದರೆ ನಾವು ನೀವೆಲ್ಲಾ ಭೂಮಿ ಮೇಲೆ ಇರೋದರಿಂದಲೇ ಅದೂ ಸಹಾ ಭೂಮಿ ಮೇಲಿರಬಹುದಲ್ಲವೇ..? ಅದು ನಮಗಾಗಿಯೇ ಇದೆ ಎಂದಂತಾಯಿತು. ತನ್ನದಲ್ಲದ ವಸ್ತುಗಳಿಗೆ ಬಾಯ್ ಬಾಯ್ ಬಿಡುವ ಮನುಷ್ಯ ತನಗಾಗಿಯೇ ಅಗಾಧವಾಗಿ ಇರುವ ಪ್ರೀತಿಯನ್ನು ಪಡೆಯಲು- ಕೊಡಲು ತಿಣುಕಾಡುತ್ತಾನೆ ಎಂಬುದು ಸಹ ಆಧುನಿಕ ಒತ್ತಡ ಜೀವನದ ಫಲವೇ… .

ನಮಗೆ ಕಾರು, ಬಂಗಲೆ, ಹಣ, ಒಡವೆ, ಐಶ್ವರ್ಯ ಅಧಿಕಾರ ,ಪದವಿ, ಸಾಧನೆಗಳಷ್ಟೆ ಮುಖ್ಯವಾಗಿ ಅಥವಾ ಅದಕ್ಕಿಂತಲೂ ಮಿಗಿಲಾಗಿ ನಮ್ಮನ್ನು‌ ಮನಸಾರೆ ಪ್ರೀತಿಸುವ ನಿಷ್ಕಲ್ಮಶ ಮನಸುಗಳು,‌ ನಿರ್ಮಲಂತಃಕರಣದಿಂದ ಆರಾಧಿಸುವ ‌ಹೃದಯಗಳು ಇರಲೇ ಬೇಕಿವೆ. ನಮ್ಮ ಭೌತಿಕ ಸಂಪತ್ತಿನ‌ ಜೊತೆ ಜೊತೆಗೆ ಪ್ರಾಮಾಣಿಕವಾಗಿ ಪ್ರೀತಿಸುವ ಹೃದಯ‌ವೂ ಇದ್ದಲ್ಲಿ ಸ್ವರ್ಗಕ್ಕೆ ಕಿಚ್ವು ಹಚ್ಚೆಂದ ಸರ್ವಜ್ಞ.



** ಮರೆಯುವ ಮುನ್ನ**

ಅಂದಹಾಗೆ ಪ್ರೀತಿ ಅಂದಾಕ್ಷಣ ಅದರರ್ಥ ಕೇವಲ‌ ಹುಡುಗ ಹುಡುಗಿಯರ ನಡುವಿನ‌ ಲವ್ ಎಂದಷ್ಟೇ ಸಂಕುಚಿತಗೊಂಡಿರುವ ಇಂದಿನ‌ ಜ಼ಮಾನಾದಲ್ಲಿ ಪ್ರೀತಿಯನ್ನು ಪಾವಿತ್ರ್ಯತೆ ಅನುಬಂಧ ಬೆಸುಗೆಗಳ ವಿಶಾಲಾರ್ಥದಲ್ಲಿ ‌ನೋಡುವ ನೋಟ‌, ಹುಡುಕಾಟ ಕೂಡಾ ಕಡಿಮೆಯೇ . ಪ್ರೀತಿ ಕೇವಲ ಹರೆಯದ ಮನಸುಗಳ‌ ನಡುವಿನ ಭಾವನೆ ಮಾತ್ರವಲ್ಲ. ಅದು ಪ್ರತಿಯೊಂದು ಜೀವಿಗಳ ನಡುವಿನ ಪವಿತ್ರ ಬಂಧ.

ಪ್ರೀತಿಗೂ ಪ್ರೇಮಕ್ಕೂ ಸೂಕ್ಷ್ಮವಾದ ವ್ಯತ್ಯಾಸವಿದೆ. ಪ್ರೀತಿ ಅನ್ನೋದು ಯೂನಿವರ್ಸಲ್ ಇದ್ದಂತೆ. ಆದರೆ ಪ್ರೇಮಕ್ಕೆ ಇದೇ ಭಾಷ್ಯ ಬರೆಯಲಾಗಲ್ಲ. ಅದೇನಿದ್ದರೂ ಕೆಲವು ಸಂಬಂಧಗಳಿಗೆ ಮಾತ್ರ ಸೀಮಿತ. ಪ್ರೇಮವಿಲ್ಲದ ಪ್ರೀತಿಯನ್ನು‌ ನೋಡಬಹುದು ಆದರೆ ಪ್ರೀತಿಯಿಲ್ಲದ ಪ್ರೇಮ ಅದು ಪ್ರೇಮವೇ ಅಲ್ಲ.

ಫೋಟೋ ಕೃಪೆ : amarujala

ಪ್ರೀತಿ ಇಲ್ಲೇ #ಭೂಮಿ‌ ಮೇಲೆ ನಮ್ಮ ನಿಮ್ಮೆಲ್ಲರ ನಡುವೆ ಬೇಕಾದಷ್ಟಿದೆ. ನೀವು ಎಷ್ಟು ಪಡೆದು ಎಷ್ಟು ಕೊಡುತ್ತೀರಿ ಅನ್ನೋದು ನಿಮಗೇ ಬಿಟ್ಟದ್ದು. ಸಾಮಾನ್ಯವಾಗಿ ನನ್ನ ಬರಹದ ಕೊನೆಯಲ್ಲಿ ಸದಾ
” ಪ್ರೀತಿಯಿಂದ ” ಎನ್ನುವ ಟ್ಯಾಗ್ ಲೈನ್ ನನಗೆ ಗೊತ್ತಿಲ್ಲದಂತೆಯೇ ಹಾಕಿರುತ್ತೇನೆ…!! ಪ್ರೀತಿ ಪ್ರೇಮ ಮುಂತಾದ ಭಾವನೆಗಳು ನಮ್ಮ ಉಸಿರಿನೊಂದಿಗೇ ಬೆರೆತಿರುವ ಅವಿಚ್ಛಿನ್ನ ಭಾವಗಳು. ಅದು 24x 7 ನಮ್ಮೊಂದಿಗೇ ಇರುತ್ತೆ ಹಾಗೂ ಅದಕ್ಕೇ ಅಂತ ವಿಶೇಷ ಸಮಯ-ದಿನ ಅಂತೇನಿಲ್ಲ. ಇದೇ ಅಂತಾ ಯಾರಾದ್ರೂ ವ್ಯಾಲೆಂಟೈನ್ ಡೆ ಆಚರಿಸಿಕೊಂಡ್ರೆ ಅದಕ್ಕೆ ಬೇರಾರೂ ವೈಲೆಂಟ್ ಆಗೋ
ಅವಶ್ಯಕತೆಯೂ ಇಲ್ಲ.!

ನೆನಪಿರಲಿ……! ಪ್ರೀತಿಯನ್ನು ಹೆಚ್ಚು ಹೆಚ್ಚು ಹಂಚಿದಷ್ಟೂ ಬದುಕಿನ ಆನಂದ ಹೆಚ್ಚೆಚ್ಚು ನಿಮ್ಮಲ್ಲಿ ಡೆಪಾಸಿಟ್ ಆಗುತ್ತಲೇ ಹೋಗುತ್ತದೆ………!

ಇಷ್ಟು ಮಾತ್ರವೇ ಪ್ರೀತಿ ಬಗೆಗೆ ನನಗೆ ಗೊತ್ತಿರೋ ಸಿಂಪಲ್ Definition , ಮಿಕ್ಕಿದ್ದಾವುವೂ…. ರಿಯಲೀ Not known….!!

ಪ್ರೀತಿಯಿಂದ ಪ್ರೀತಿಸುವ ಎಲ್ಲಾ ಹೃದಯಗಳಿಗೂ ಪ್ರೀತಿಯ ಶುಭಾಶಯಗಳು.

ಪ್ರೀತಿಯಿಂದ…


  • ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW