ಉದಯಶಂಕರ್ ಜನ್ಮದಿನ ಶುಭಾಶಯಗಳು



ಸಾಹಿತ್ಯ ರತ್ನ ಚಿ.ಉದಯಶಂಕರ್ ಅವರ 88ನೆಯ ಜನ್ಮದಿನ (ಜನನ 18 ಫೆಬ್ರವರಿ 1934), ಅವರಿಗೆ ಹುಟ್ಟುಹಬ್ಬದ ಶುಭಕೋರುತ್ತಾ ಅವರ ಹಾಡುಗಳು ಸದಾ ನಮ್ಮ ಹೃದಯದಲ್ಲಿ ಹಸಿರಾಗಿದೆ. ಖ್ಯಾತ ಪತ್ರಕರ್ತರಾದ ಶ್ರೀಧರ ಮೂರ್ತಿ ಅವರು ತಮ್ಮ ಲೇಖನದ ಮೂಲಕ ಉದಯಶಂಕರ್ ಅವರನ್ನು ಮತ್ತೆ ನೆನೆಪಿಸಿದ್ದಾರೆ. ಮುಂದೆ ಓದಿ …

ಇತ್ತೀಚೆಗೆ ವಿಜಯನಾರಸಿಂಹ ಅವರ ಮೊಮ್ಮಗ ಸುದತ್ತಾ ವಿಜಯ ನಾರಸಿಂಹ ಮತ್ತು ಉದಯಶಂಕರ್ ಇಬ್ಬರೂ ಸಂತೋಷದಲ್ಲಿ ಇರುವ ಪೋಟೋ ಕೊಟ್ಟರು. ಅವರಿಬ್ಬರನ್ನು ನಿಕಟವಾಗಿ ಬಲ್ಲ ನನಗೆ ಇದನ್ನು ನೋಡುತ್ತಲೇ ಹಲವು ಪ್ರಸಂಗಗಳು ನೆನಪಾದವು.

‘ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲಿ’ ಎಂದು ವಿಜಯನಾರಸಿಂಹ ಬರೆದ ಸಾಲನ್ನು ಇಟ್ಟುಕೊಂಡು ಉದಯಶಂಕರ್ ‘ಖಂಡಿತಾ ಬೇಡ.. ವಿಷ ಆದರೂ ಪರವಾಗಿಲ್ಲ ಸಿಹಿ ಬೇಡ ಏಕೆಂದರೆ ನಾನು ಡಯಾಬಿಟಿಕ್’’ ಎನ್ನುತ್ತಿದ್ದರು. ‘ಮಾಂಗಲ್ಯ ಭಾಗ್ಯ’ ಚಿತ್ರ ಬಂದ ಹೊಸದು. ಉದಯಶಂಕರ್, ವಿಜಯನಾರಸಿಂಹ ಅವರಿಗೆ ಪೋನ್ ಮಾಡಿದ್ದಾರೆ. ಮೊಮ್ಮಗಳು ಅರ್ಚನಾ ಪೋನ್ ತೆಗೆದು ಕೊಂಡಿದ್ದಾಳೆ. ‘ಆಸೆಯ ಭಾವ ಇದ್ದಾರೇನಮ್ಮ’ ಎಂದು ಧ್ವನಿ ಬದಲಾಯಿಸಿ ಉದಯಶಂಕರ್ ಕೇಳಿದ್ದಾರೆ. ಅವಳಿಗೆ ತಬ್ಬಿಬ್ಬಾಗಿ ಅಜ್ಜಿಗೆ ಪೋನ್ ಕೊಟ್ಟಿದ್ದಾಳೆ. ವಿಜಯನಾರಸಿಂಹ ಅವರ ಮಡದಿ ಸರಸ್ವತಿಯವರ ಬಳಿ ಕೂಡ ಹೀಗೆ ಕಾಡಿಸಿ ಕೊನೆಗೆ “ಏನು ಸರಸ್ವತಿಯವರೇ ಸಿಂಹ ಬೇಟೆಗೆ ಹೋಗಿದೆಯೋ’ ಎಂದು ಕೇಳಿದ್ದಾರೆ. ಆಗ ಅರ್ಥವಾಗಿ ಸರಸ್ವತಿ ‘ಏನೋ ಶಂಕರ ನಿನ್ನ ಹುಡುಗಾಟ’ ಎಂದು ರೇಗಿದ್ದಾರೆ. ಉದಯಶಂಕರ್, ವಿಜಯನಾರಸಿಂಹ ಅವರನ್ನು ‘ಮಿಸ್ಟರ್ ಲಯನ್’ ಎಂದು ಕರೆಯುತ್ತಿದ್ದರು. ಜಯಗೋಪಾಲ್ ಅವರನ್ನು ತ್ರಿಬ್ಬಲ್ ವಿ ಎಂದು ಕರೆಯುತ್ತಿದ್ದರು. (ಜಯಗೋಪಾಲ್ ಅವರ ಶಾಲೆಯ ಹೆಸರು ವಿದ್ಯಾ ವಿನಯ ವಿನೋದ) ಉದಯಶಂಕರ್ ಎಂದರೆ ಅಲ್ಲಿ ನಗು ಇರಲೇ ಬೇಕು.

ಒಂದರ ಹಿಂದೆ ಒಂದು ಜೋಕ್ ಕಟ್ ಮಾಡುತ್ತಲೇ ಇರುತ್ತಿದ್ದರು. ಅದರಲ್ಲಿಯೂ ಅವರದೇ ವಿಶಿಷ್ಟತೆ..ಯಾವ ಜೋಕ್ ಕೂಡ ರಿಪೀಟ್ ಆಗ್ತಾ ಇರಲಿಲ್ಲ . ಸದಾ ನಗುತ್ತಾ ನಗಿಸುತ್ತಾ ಇರುವುದು ಅವರ ಸ್ವಭಾವ. ಅವರು ಹಾಡು ಬರೆಯಲು ಕುಳಿತರೆ ಅಲ್ಲೊಂದು ಸಂಭ್ರಮದ ವಾತಾವರಣ ಇರುತ್ತಿತ್ತು. ಟ್ಯೂನ್ ಕೊಟ್ಟ ಕೂಡಲೇ ಬರೆಯಲು ಆರಂಭ.. ನೋಡಿದರೆ ಅಲ್ಲಿ ಇಡ್ಲಿ, ವಡೆ, ದೋಸೆ, ಸಾಂಬಾರ್ ಹೀಗೆ ಇರುತ್ತಿತ್ತು.ಡೆಮ್ಮಿ ವರ್ಡ್ಗಳಾಗಿ ಉದಯಶಂಕರ್ ತಿಂಡಿಗಳ ಹೆಸರು ಬಿಟ್ಟು ಬೇರೆ ಬರೆಯುತ್ತಿರಲಿಲ್ಲ. ಆದರೆ ಕ್ಷಣಾರ್ಧದಲ್ಲಿ ಅವೆಲ್ಲವೂ ಮೋಹಕ ಗೀತೆಗಳಾಗಿ ಬಿಡುತ್ತಿದ್ದವು. ಈ ಕೌತಕವನ್ನು ನೋಡುವುದೇ ಒಂದು ಸಂಭ್ರಮ.

This slideshow requires JavaScript.

 

1994 ಕ್ಕೆ ಉದಯಶಂಕರ್ ಅವರಿಗೆ ಅರವತ್ತು ವರ್ಷ ತುಂಬುತ್ತಾ ಇತ್ತು. ಈ ಸಮಯಕ್ಕೆ ಅವರ ಹಾಡುಗಳ ಹಿಂದಿನ ಕಥೆ ಸೇರಿದಂತೆ ಜೀವನ ಚರಿತ್ರೆ ಬರೆಯುವ ಬಹು ದೊಡ್ಡ ಜವಾಬ್ದಾರಿಯನ್ನು ಅವರು ನನಗೆ ವಹಿಸಿದರು. ಅದನ್ನು ಬರೆದು ಕೊಳ್ಳುವಾಗ ಎಷ್ಟು ನಕ್ಕಿದ್ದೋನೋ ಲೆಕ್ಕವಿಲ್ಲ. ಒಂದೊಂದು ಹಾಡು ಹುಟ್ಟಿದ ಕಥೆ, ಸಿನಿಮಾ ರೂಪುಗೊಂಡ ಬಗೆ, ವ್ಯಕ್ತಿಗಳ ಹಿಂದಿನ ಸತ್ಯಗಳು ಎಲ್ಲವನ್ನೂ ತಮ್ಮದೇ ಆದ ಹಾಸ್ಯ ಶೈಲಿಯಲ್ಲಿ ಹೇಳಿ.. ಇದು ಆಫ್ ದಿ ರೆಕಾರ್ಡ್ ಎಂದು ಕೆಲವಕ್ಕೆ ಎಚ್ಚರಿಕೆ ಕೊಡುತ್ತಾ ಇದ್ದರು. ಒಂದು ಸಲ ಹೀಗೆ ಬರೆದು ಕೊಳ್ಳುವಾಗ ಇದ್ದಕಿದ್ದ ಹಾಗೆ ‘ನಾನು ಹರಿಶ್ಚಂದ್ರ ನಾಟಕ ಬರೆದಿದ್ದೆ, ಅದರಲ್ಲಿ ಒಮ್ಮೆ ಹರಿಶ್ಚಂದ್ರನ ಪಾತ್ರ ಕೂಡ ಮಾಡಿದ್ದೆ. ಮಗ ಲೋಹಿತಾಶ್ವನ ಶವ ಕಂಡು ಹರಿಶ್ಚಂದ್ರ ವಿಲಾಪಿಸುವುದನ್ನು ಕರುಣಾಭರಿತವಾಗಿ ಬರೆದಿದ್ದೆ. ನೋಡಿದ ಪ್ರೇಕ್ಷಕರೂ ಎಲ್ಲಾ ಅಳುತ್ತಿದ್ದರು. ಆದರೆ ಅದು ನಾಟಕ ಪರದೆ ಎಳೆದ ಕೂಡಲೇ ಮಗ ಎದ್ದೇಳುತ್ತಿದ್ದ. ಅದರೆ ಜೀವನದಲ್ಲಿ ಯಾರೂ ಪರದೆ ಎಳೆಯುವುದಿಲ್ಲ. ಮಗ ಮತ್ತೆ ಏಳುವುದಿಲ್ಲ’ ಎಂದು ಕಣ್ಣೀರಿಡಲು ಆರಂಭಿಸಿದರು. ಅವರ ಸಮಸ್ಥಿತಿಗೆ ಬರಲು ಅರ್ಧ ಗಂಟೆಯ ಮೇಲೆ ಬೇಕಾಯಿತು. ಅಲ್ಲಿಗೆ ಬರವಣಿಗೆ ನಿಂತಿತು. ಶಾಶ್ವತವಾಗಿಯೇ ನಿಂತಿತು. ಏಕೆಂದರೆ ನಾನು ಉದಯಶಂಕರ್ ಅವರನ್ನು ಜೀವಂತ ನೋಡಿದ್ದು ಅವತ್ತೇ ಕೊನೆ. ಆಡಿಸಿದಾತ ಬೇಸರ ಮೂಡಿ ಆಟವನ್ನು ಅಕಾಲಿಕವಾಗಿ ಮುಗಿಸಿದ್ದ.



ಉದಯಶಂಕರ್ ತಮ್ಮ ಅರವತ್ತನೇ ವರ್ಷ ನೋಡಲೇ ಇಲ್ಲ… ಆ ಪುಸ್ತಕವೂ ಬರಲಿಲ್ಲ. ನಾನು ಬಹಳ ಕಾಲ ಬರೆದು ಕೊಂಡಿದ್ದ ಪುಟಗಳನ್ನು ಹಾಗೇ ಇಟ್ಟು ಕೊಂಡಿದ್ದೆ. ಪ್ರಕಟಿಸುವ ಎಂದಾಗಲೆಲ್ಲ… ಕೊನೆಯ ದಿನ ನೆನಪಾಗಿ ಹೃದಯ ಹಿಂಡಿದಂತೆ ಆಗುತ್ತಿತ್ತು. ಕೊನೆಗೆ ಅವರ 75 ನೆಯ ವರ್ಷದಲ್ಲಿ ಅಂದರೆ 2009 ರಲ್ಲಿ ಆ ಪುಸ್ತಕ ‘ಚಿರಂಜೀವಿ’ ಪ್ರಕಟವಾಯಿತು. ಈಗ ಅದರ ಪ್ರತಿಗಳೆಲ್ಲವೂ ಖಾಲಿಯೂ ಆಗಿ ಬಿಟ್ಟಿವೆ.

ಹುಟ್ಟಿದ ಹಬ್ಬ ಅಂತಲ್ಲ.. ಉದಯಶಂಕರ್ ಸರ್.. ನಿಮದೇ ನೆನಪು ದಿನವೂ ಮನದಲ್ಲಿ… ಕೊಟ್ಟು ಹೋದ ಒಡನಾಟಕ್ಕೆ.. ಬಿಟ್ಟು ಹೋದ ನೆನಪುಗಳಿಗೆ ನಾನು ಸದಾ ಋಣಿ.


  • ಶ್ರೀಧರ ಮೂರ್ತಿ (ಹಿರಿಯ ಸಾಹಿತಿಗಳು, ಪತ್ರಕರ್ತರು, ಲೇಖಕರು) ಬೆಂಗಳೂರು 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading