ರತ್ನಗಿರಿ ಕೋಟೆ ಗತ ಚರಿತ್ರೆಯ ವೈಭವದ ಕುರುಹುಗಳು ಅಲ್ಲಿನ ನೆಲದಲ್ಲಿ ದೇಹವೊಂದರ ಕೈಕಾಲು ರುಂಡ ಮುಂಡ ಕಿವಿಕಣ್ಣುಗಳು ಕತ್ತರಿಸಿ ಚೆಲ್ಲಾಪಿಲ್ಲಿಯಾಗಿ ಚೆಲ್ಲಾಡಿ ಬಿದ್ದಿರುವಂತೆ ಕಾಣಿಸುತ್ತಿದ್ದವು. ಸರ್ಕಾರ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಹೊಣೆಗೇಡಿತನದಿಂದಾಗಿ ಕೋಟೆ ನಂದುತ್ತಿರುವುದು ನೋಡಿ ತೀರಾ ಬೇಸರವಾಯಿತು – ಡಾ.ವಡ್ಡಗೆರೆ ನಾಗರಾಜಯ್ಯ .ಮುಂದೆ ಓದಿ…
#ರತ್ನಗಿರಿ_ಕೋಟೆಯ ಹೆಸರನ್ನು ನೀವು ಕೇಳಿರಬಹುದು. ಏಳು ಸುತ್ತಿನ ರತ್ನಗಿರಿ ಕೋಟೆಯನ್ನು ನೋಡಬೇಕೆಂಬ ನನ್ನ ಆಸೆ ಕಳೆದ ಭಾನುವಾರ ಈಡೇರಿತು. ರಾಯಲಸೀಮೆ ಸೀಮಾಂಧ್ರದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕು, ರೊಳ್ಳ ಮಂಡಲದ ರತ್ನಗಿರಿ ಕೋಟೆಯು ಬಯಲುಸೀಮೆಯ ಗಿರಿದುರ್ಗಗಳ ಸಾಲಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಪೂರ್ವದಲ್ಲಿ ರತ್ನಗಿರಿಯು ಮುತ್ತುರತ್ನಗಳನ್ನು ಮಾರುತ್ತಿದ್ದ ಒಂದು ಪುರಾತನ ಮಾರುಕಟ್ಟೆ ನಗರವಾಗಿತ್ತೆಂದು ಹೇಳಲಾಗುತ್ತದೆ. ಆಗಿನ ಕಾಲದ ರಾಜರು ರತ್ನಗಿರಿ ಕೋಟೆಯಲ್ಲಿ ಅಮೂಲ್ಯವಾದ ಮುತ್ತು ರತ್ನಗಳನ್ನು ದಾಸ್ತಾನು ಮಾಡುತ್ತಿದ್ದ ಕಾರಣದಿಂದಲೇ ಈ ಸ್ಥಳಕ್ಕೆ ರತ್ನಗಿರಿ ಎಂಬ ಹೆಸರು ಬಂದಿತೆಂದು ಇಲ್ಲಿನ ಸ್ಥಳಪುರಾಣದಿಂದ ತಿಳಿದುಬರುತ್ತದೆ. ರತ್ನಗಿರಿ ಕೋಟೆಯ ಬಗ್ಗೆ ಅನೇಕ ರೀತಿಯ ಕುತೂಹಲಕರ ದಂತಕಥೆಗಳು ಹಬ್ಬಿಕೊಂಡಿವೆ. ಅಂಥಾದ್ದೊಂದು ದಂತಕಥೆಯನ್ನು ನಾನು ಬಾಲ್ಯದಲ್ಲಿ ರೊಳ್ಳೆಯ ವಲಸೆಕುರಿಯ ಕುರಿಗಾರರ ಬಾಯಲ್ಲಿ ಕೇಳಿದ್ದೆನು. ಆಗಿನಿಂದಲೂ ರತ್ನಗಿರಿ ನನ್ನನ್ನು ನಿಗೂಢವಾಗಿ ಸೆಳೆದಿತ್ತು.
ನಮ್ಮೂರಿನ ಹೊಲಮಾಳಕ್ಕೆ ವಲಸೆ ಕುರಿಗಳನ್ನು ಮೇಯಿಸಲು ಕುರಿಮಂದೆಗಳೊಂದಿಗೆ ಕಾಡುಗೊಲ್ಲರು, ಕುರುಬರು ಮುಂತಾದ ಕುರಿಗಾರರು ಬಂದು ಬೀಡುಬಿಡುತ್ತಿದ್ದರು. ‘ಯಾವೂರು ಕಡೆಯ ಕುರಿಯೋರು ನೀವು?’ ಎಂದು ಕೇಳಿದಾಗ ‘ರೊಳ್ಳೆ – ರತ್ನಗಿರಿ’ ಎಂದು ಉತ್ತರಿಸುತ್ತಲೇ ಕುರಿಗಳನ್ನು ಸೋವಿಕೊಂಡು ನಡೆದುಬಿಡುತ್ತಿದ್ದರು.

ನಮ್ಮೂರಿನ ಸಮೀಪದಲ್ಲಿ ಮಾತಗಾನಹಳ್ಳಿ ಬೇಚಿರಾಕ್ ಗ್ರಾಮದ ಹೆಸರಿನಲ್ಲಿರುವ ಮಾತಗಾನಹಳ್ಳಿ ಕೆರೆಯ ಹತ್ತಿರದ ಬಯಲಿನಲ್ಲಿ ವಲಸೆ ಕುರಿಗಳ ಮಂದೆಯೊಂದಿಗೆ ಬೀಡುಬಿಟ್ಟು ತಂಗಿದ್ದ ರೊಳ್ಳೆ- ರತ್ನಗಿರಿ ಸೀಮೆಯ ಕುರಿಗಾರರೊಂದಿಗೆ ಒಡನಾಡುವ ಅವಕಾಶ ನನಗೂ ಮತ್ತು ನನ್ನ ಅಪ್ಪನಿಗೂ ಸಿಕ್ಕಿತ್ತು. ರತ್ನಗಿರಿ ಕೋಟೆ ಎಂಬ ಹೆಸರನ್ನು ನಾನು ಮೊದಲು ಕೇಳಿದ್ದು ಅವರ ಬಾಯಲ್ಲಿ. ರತ್ನಗಿರಿ ಕೋಟೆಯ ಹೊಲಬಿನಲ್ಲಿ ಜೋರಾಗಿ ಮಳೆ ಸುರಿದಾಗ ಕೊಚ್ಚಾಣಿಕೆಯಾಗುವ ಮಣ್ಣಿನಲ್ಲಿ ಬೆಳ್ಳಿ ಬಂಗಾರದ ನಾಣ್ಯಗಳು ಈಗಲೂ ತೇಲುತ್ತವೆ. ಅಂತಹ ಹಂಡೆಗಟ್ಟಲೆ ಬೆಳ್ಳಿ ಬಂಗಾರ ಸಿಕ್ಕಿದ ಕೆಲವರು ಗುಪ್ತವಾಗಿ ಬಳಸಿ ಶ್ರೀಮಂತರಾಗಿದ್ದಾರೆ. ಕೆಲವು ಸಲ ಸರ್ಕಾರ ವಶಪಡಿಸಿಕೊಂಡದ್ದನ್ನು ನಾವೇ ಕಣ್ಣಾರೆ ನೋಡಿದ್ದೇವೆ. ಕೆಲವರು ತಮಗೆ ದೊರಕಿದ ಸಂಪತ್ತಿನೊಂದಿಗೆ ಊರುಬಿಟ್ಟು ಬೇರೆ ಪಟ್ಟಣಗಳಲ್ಲಿ ಆಸ್ತಿಪಾಸ್ತಿಗಳನ್ನು ಮಾಡಿಕೊಂಡು ನೆಲೆಸಿದ್ದಾರೆ ಎಂದು ಆ ಕುರಿಗಾರರು ಹೇಳಿದರು. ನಿಧಿಯ ಆಸೆಗಾಗಿ ನಿಧಿಚೋರರು ಬೆಟ್ಟದ ಅನೇಕ ಕಡೆಗಳಲ್ಲಿ ಬಗೆದು ತೆಗೆದು ನರಬಲಿ ಪ್ರಾಣಿಬಲಿ ನೀಡಿರುವ ಕೆಲವು ವಾಮಾಚಾರಗಳ ಬಗ್ಗೆಯೂ ಅವರು ಕಥೆಗಳನ್ನು ಹೇಳಿದರು. ಅವತ್ತು ಆ ವಲಸೆ ಕುರಿಗಾರರು ಕುರಿಹಾಲು ಬಿಟ್ಟು ತಯಾರಿಸಿದ್ದ ಸೊಪ್ಪಿನ ಸಾರು – ರಾಗಿಮುದ್ದೆ ಊಟವನ್ನು ಮುತ್ತುಗದೆಲೆ ಪತ್ರಾವಳಿಯಲ್ಲಿ ನನಗೂ ನನ್ನಪ್ಪನಿಗೂ ಉಣಲಿಕ್ಕಿದ್ದರು. ಅಂದಿನಿಂದಲೂ ರತ್ನಗಿರಿ ನನ್ನೆದೆಯೊಳಗೆ ಉಳಿದುಬಿಟ್ಟಿತ್ತು. ಯಾಕಾಗಿಯೋ ಗೊತ್ತಿಲ್ಲ, ನನ್ನ ಹಿರಿಯ ತಮ್ಮನಾದ ವೀರನಾಗಪ್ಪನನ್ನು ಕೆಲವು ಕಾಲ ನಮ್ಮ ಹಟ್ಟಿಕೇರಿಯ ಜನ ‘ರೊಳ್ಳೆ’ ಎಂಬ ಹೆಸರಿನಿಂದ ಅಡ್ಡಹೆಸರು ಕಟ್ಟಿ ಕರೆಯುತ್ತಿದ್ದರು. ಇದೇ ರೊಳ್ಳೆ ಮಂಡಲಕ್ಕೆ ಸೇರಿರುವ ಗ್ರಾಮವೇ ರತ್ನಗಿರಿ. ಸೀಮಾಂಧ್ರ- ಕರ್ನಾಟಕದ ಗಡಿ ಪ್ರದೇಶದ ಮಧುಗಿರಿ ಪಟ್ಟಣಕ್ಕೆ ಹತ್ತಿರದಲ್ಲಿರುವ ರತ್ನಗಿರಿ ನಮ್ಮೂರಿನಿಂದ ಕೇವಲ ಹದಿನೇಳು ಮೈಲಿಗಳ ದೂರದಲ್ಲಿದೆ.

ಎಂಟನೇ ತರಗತಿಯಿಂದ ನನ್ನ ಸಹಪಾಠಿಯಾಗಿದ್ದ ರತ್ನಗಿರಿಯ ನನ್ನ ಬಾಲ್ಯದ ಗೆಳೆಯ ಎನ್.ನಾಗರಾಜ್ ನನ್ನನ್ನು ಮತ್ತು ನಮ್ಮ ಸಹಪಾಠಿ ವಾರಿಗೆ ಗೆಳೆಯರಾದ ಜಂಪೇನಹಳ್ಳಿ ರಾಜಣ್ಣ, ಡಿ.ಆರ್.ನಾಗರಾಜ್, ಶಿವಲಿಂಗಯ್ಯ ನವಿಲಡಕು, ಇರಕಸಂದ್ರ ಕೆಂಚಪ್ಪ, ಕಾಮರಾಜನಹಳ್ಳಿ ನಾರಾಯಣಪ್ಪ, ಚಂದ್ರು ಕೊಡತಕಲ್ಲು ಮುಂತಾದ ಗೆಳೆಯರನ್ನು ರತ್ನಗಿರಿ ಕೋಟೆ ನೋಡಲು ತುಂಬಾ ದಿನಗಳಿಂದಲೂ ಆಹ್ವಾನಿಸಿದ್ದರ ಮೇರೆಗೆ ರತ್ನಗಿರಿಗೆ ಹೋದೆವು. ಶನಿವಾರ ರಾತ್ರಿ ರತ್ನಗಿರಿಯ ಪ್ರವಾಸಿ ಮಂದಿರದಲ್ಲಿ ಎಲ್ಲರೂ ತಂಗಿದೆವು. ಬೆಳಗ್ಗೆಯೇ ಎದ್ದು ಎಲ್ಲರೂ ರತ್ನಗಿರಿ ಏಳು ಸುತ್ತಿನ ಕಲ್ಲಿನ ಕೋಟೆಯನ್ನು ನೋಡಲು ಹೊರಟೆವು.
ಹಸಿ ಬೆಳಗ್ಗೆಯೇ ಎಳೆ ಬಿಸಿಲಿನಲ್ಲಿ ಬೆಟ್ಟ ಹತ್ತುವ ಸುಖವನ್ನು ಅಕ್ಷರಗಳಲ್ಲಿ ಹಿಡಿದುಕೊಡಲಾಗದು. 2004 ನೇ ಇಸವಿಯ ಜನವರಿಯಲ್ಲಿ ಯಾವುದೋ ಒಂದು ದಿನ ಕೋಲಾರದ ಅಂತರಗಂಗೆ ಬೆಟ್ಟವನ್ನು ಬೆಳಗಿನ ಜಾವದ ನಾಲ್ಕು ಗಂಟೆಯ ಹೊತ್ತಿನಲ್ಲಿ ತಿಂಗಳ ಬೆಳಕಿನಲ್ಲಿ ನಾನೊಬ್ಬನೇ ಹತ್ತುವಾಗ ಹಾವು ಚೇಳು ನರಿ ಕರಡಿಗಳಿದ್ದಾವೆಂಬ ವಿಚಿತ್ರವಾದ ಭಯ ಕಾಡುತ್ತಿತ್ತು. ಮೌನವೂ ಸಂಗೀತವೆಂಬ ಅನುಭವ ನನಗೆ ಆ ಇರುಳು ಜಾವ ಇಡೀ ಬೆಟ್ಟದ ಮೌನ ಸಂಗೀತದ ತರಂಗಗಳಿಂದ ಅನುಭವಕ್ಕೆ ಬಂದಿತ್ತು.

ಈ ದಿನ ರತ್ನಗಿರಿ ಬೆಟ್ಟವನ್ನು ಹತ್ತಲು ಹೊರಟಾಗ ಗತವೈಭವದ ಭಗ್ನಾವಶೇಷಗಳ ಸಂಕೇತವಾಗಿ ರತ್ನಗಿರಿ ಕೋಟೆ ನನಗೆ ಕಾಣಿಸಿತು. ಗತ ಚರಿತ್ರೆಯ ವೈಭವದ ಕುರುಹುಗಳು ಅಲ್ಲಿನ ನೆಲದಲ್ಲಿ ದೇಹವೊಂದರ ಕೈಕಾಲು ರುಂಡ ಮುಂಡ ಕಿವಿಕಣ್ಣುಗಳು ಕತ್ತರಿಸಿ ಚೆಲ್ಲಾಪಿಲ್ಲಿಯಾಗಿ ಚೆಲ್ಲಾಡಿ ಬಿದ್ದಿರುವಂತೆ ಕಾಣಿಸುತ್ತಿದ್ದವು. ಈ ಕುರುಹುಗಳು ಕ್ರಮೇಣವಾಗಿ ಒಂದೊಂದೇ ಮಣ್ಣಲ್ಲಿ ಮಣ್ಣಾಗಿ ಮರೆಯಾಗುತ್ತಿವೆ ಅನ್ನಿಸಿತು.
ಒಂದು ಕಾಲಕ್ಕೆ ಮುತ್ತುರತ್ನಗಳ ಮಾರುಕಟ್ಟೆ ಮತ್ತು ದಾಸ್ತಾನು ಕೇಂದ್ರವಾಗಿದ್ದ ಸಿರಿಸಂಪದಗಳ #ರತ್ನಗಿರಿ_ಪಟ್ಟಣ ಈಗ ಅತ್ಯಂತ ಹಿಂದುಳಿದ ಒಂದು ಸಾಧಾರಣ ಚಿಕ್ಕ ಗ್ರಾಮವಾಗಿ ರೂಪಾಂತರ ಹೊಂದಿದೆ. ಗಚ್ಚುಗಾರೆ, ಸುಟ್ಟ ಇಟ್ಟಿಗೆ, ಕಲ್ಲು ದಿಂಡುಗಳು, ಮಣ್ಣೆಂಟೆಗಳು, ಕಾಡು ಮರಗಳು, ಕಲ್ಲಿನ ಕಂಬಗಳು, ಮರದ ಕಂಬಗಳು ಮುಂತಾದ ಸಲಕರಣೆಗಳನ್ನು ಬಳಸಿ ಕಟ್ಟಿರುವ ಪುರಾತನ ವಾಸದ ಮನೆಗಳು ಕೂಡಾ ಅಂಗಾಂಗಗಳು ಮುರಿದು ಬಿದ್ದಂತೆ ಕಾಣಿಸುತ್ತಿವೆ. ಇಂತಹ ಭಗ್ನಾವಶೇಷಗಳೇ ಕೋಟೆಯ ಒಳಬದಿಯಲ್ಲಿರುವ ಈ ಊರಿನಲ್ಲಿ ಹಾಗೂ ಇಡೀ ಬೆಟ್ಟದ ತುಂಬಾ ತುಂಬಿಕೊಂಡು ನೋಡುಗರ ಹೃದಯವನ್ನು ಆರ್ದ್ರಗೊಳಿಸುತ್ತವೆ. ಈ ಮೊದಲು ಕೋಟೆಯ ಒಳಬದಿಯಲ್ಲಿಯೇ ಇದ್ದ ಜನವಸತಿ ನೆಲೆಯು ಜನಸಂಖ್ಯೆಯು ಹೆಚ್ಚಾದಂತೆ ಕೋಟೆಯ ಹೊರಬದಿಯಲ್ಲಿಯೂ ಜನವಸತಿ ನೆಲೆಗಳನ್ನು ನಿರ್ಮಿಸಲಾಗಿದೆ. ಪುರಾತನ ಕಾಲದಿಂದಲೂ ಅಳಿದುಳಿದು ಅಸ್ತಿತ್ವದಲ್ಲಿರುವ ರತ್ನಗಿರಿ ಊರಿನೊಳಕ್ಕೆ ಪ್ರವೇಶಿಸಲು ರತ್ನಗಿರಿ ಬೆಟ್ಟದ ಸುತ್ತಲೂ ಕಟ್ಟಲಾಗಿರುವ ಕೋಟೆಯ ಬೃಹತ್ ದಿಡ್ಡಿಬಾಗಿಲಿನ ಮೂಲಕವೇ ಪ್ರವೇಶಿಸಬೇಕು. ಅಂದರೆ ರತ್ನಗಿರಿ ಎಂಬ ಊರನ್ನು ನಮ್ಮ ಪೂರ್ವಿಕರು ಬೆಟ್ಟದ ಮಡಿಲಿನಲ್ಲಿಯೇ ಕಟ್ಟಿದ್ದಾರೆ. ಪುರ ಪ್ರವೇಶ ದ್ವಾರದ ಕೋಟೆಯ ದಿಡ್ಡಿಬಾಗಿಲನ್ನು ಬೃಹತ್ ಗಾತ್ರ ಮತ್ತು ಎತ್ತರದ ಕಲ್ಲುಗಂಬಗಳಿಂದ ನಿರ್ಮಿಸಲಾಗಿದೆ. ದ್ವಾರಕ್ಕೆ ಬಾಗಿಲು ರೆಕ್ಕೆ ಮತ್ತು ಲಾವಂಡಿಗೆ ಹಾಕಿ ಬೀಗಮುದ್ರೆ ಮಾಡುತ್ತಿದ್ದರೆಂಬುದಕ್ಕೆ ಹಾಗೂ ಪಹರೆ ಕಾವಲುಗಾರರು ದ್ವಾರದಲ್ಲಿ ಇರುತ್ತಿದ್ದರೆಂಬುದಕ್ಕೆ ಗುರುತುಗಳಿವೆ. ಏಳು ಸುತ್ತಿನ ಕೋಟೆಯ ಏಳೂ ದ್ವಾರಗಳಲ್ಲಿ ಕಾವಲುಗಾರರ ಸಣ್ಣ ಅಡಗು ಮನೆಗಳಿವೆ. ರತ್ನಗಿರಿ ಕೋಟೆಯೂರಿನ ಒಳಕ್ಕೆ ಪ್ರವೇಶ ಪಡೆದ ಕೂಡಲೇ ಎಡಬದಿಯಲ್ಲಿ ಒಂದು ಪುರಾತನ #ಜೈನ_ಬಸದಿ ಸಿಗುತ್ತದೆ. ದಿಗಂಬರ ತೀರ್ಥಂಕರನಾದ ಪಾರ್ಶ್ವನಾಥನ ಬಸದಿ ಇದು. ಬಸದಿಯ ಎದುರು ಎತ್ತರದ ಮಾನಸ್ತಂಭ ಇದೆ. ಬಸದಿಯ ಒಳಬದಿಯ ಸುಕನಾಸಿಯ ಕೆಳಗೆ ಜಂಬೂದ್ವೀಪಚಕ್ರ- ಅಂಡಾಕಾರದ ಸಭಾ ಭವನವಿದೆ. ಚಂದ್ರಮೌಳೀಶ್ವರ ದೇವಸ್ಥಾನ, ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಕೊಲ್ಲಾಪುರದಮ್ಮನ ದೇವಸ್ಥಾನ ಮುಂತಾದ ದೇವಸ್ಥಾನಗಳು ಇಲ್ಲಿವೆ. ಕಲಾತ್ಮಕ ಕಲ್ಲು ಕೆತ್ತನೆಯ ವಾಸ್ತುಶಿಲ್ಪ ಮತ್ತು ಇಂಜಿನಿಯರಿಂಗ್ ಜ್ಞಾನಕ್ಕೆ ಸಾಕ್ಷಿ ಎಂಬಂತೆ ವಿಸ್ತಾರವಾದ ಮಜ್ಜನ ಬಾವಿಗಳು, ಕಲ್ಯಾಣಿಗಳು ಹಾಗೂ ಕುಡಿನೀರು ಗರಂಡಿ ಸೇದುಬಾವಿಗಳು ಇಲ್ಲಿವೆ.

ಚೋಳರು, ಪಾಂಡ್ಯರು, ಬಾಣರು, ಚಾಳುಕ್ಯರು, ಹೊಯ್ಸಳರು, ನೊಳಂಬರು, ವಿಜಯನಗರ ಅರಸರ ಅಧೀನ ನಾಯಕತನದ ಪಾಳ್ಳೆಗಾರರು, ತುಂಡರಸರು ಮುಂತಾದವರು ಆಳಿದ್ದು ಬಹುಮುಖ್ಯವಾಗಿ ಧಾರ್ಮಿಕ ಮತ್ತು ವಾಸ್ತುಶಿಲ್ಪದ ದೃಷ್ಟಿಯಿಂದ ಜೈನರು ಮತ್ತು ಶೈವಾರಾಧಕ ಚೋಳರ ಕೊಡುಗೆಗಳು ಇಲ್ಲಿ ಹೆಚ್ಚಾಗಿವೆ. ವೈಷ್ಣವರ ಕೊಡುಗೆಗಳಾದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಕೋಟೆ ಆಂಜನೇಯ ರೇಖಾಚಿತ್ರ ಕೆತ್ತನೆ, ಗವಿ ರಂಗನಾಥನ ಗುಡಿ, ವೆಂಕಟಗಿರಿ ಬೆಟ್ಟದ ವೆಂಕಟರಮಣ ಸ್ವಾಮಿ ದೇವಸ್ಥಾನ ಮುಂತಾದವು ಸಾಕ್ಷಿಯಾಗಿವೆ. ಹಂಪಿಯು ವೈಷ್ಣವರು ಮತ್ತು ಶೈವರ ನಡುವೆ ನಡೆದ ಕದನದಲ್ಲಿ ಹಾಳಾದಂತೆ ರತ್ನಗಿರಿ ಕೂಡಾ ವೈಷ್ಣವರು ಮತ್ತು ಶೈವರ ಕದನದಲ್ಲಿ ಹಾಳಾಗಿರಬಹುದೆಂದು ಊಹಿಸಲು ಸಾಕಷ್ಟು ಆಧಾರಗಳು ಇಲ್ಲಿ ಕಾಣಸಿಗುತ್ತವೆ. ವೈಷ್ಣವವು ಮಣಿದು ಶೈವವು ವಿಜಯ ಸಾಧಿಸಿರುವುದಕ್ಕೆ ಕುರುಹೆಂಬಂತೆ ಶೈವ ಶಿಲ್ಪಗಳು ಮಾತ್ರ ಹೆಚ್ಚಾಗಿ ಉಳಿದುಕೊಂಡಿವೆ. ಇಲ್ಲಿ ಯಾವುದೇ ಶಿಲಾ ಶಾಸನ ನನಗೆ ಕಾಣಸಿಗಲಿಲ್ಲ. 2005 ನೇ ಇಸವಿಯಲ್ಲಿ ನಾನು ನಾನು ಆಂಧ್ರಪ್ರದೇಶದ ಪುರಾತನ ಗೊಲ್ಕೊಂಡ ಕೋಟೆಯನ್ನು ನೋಡಿಬಂದ ಇಷ್ಟು ವರ್ಷಗಳ ನಂತರದಲ್ಲಿ ಗೋಲ್ಕೊಂಡ ಕೋಟೆಯಂತೆಯೇ ನನಗೆ ರತ್ನಗಿರಿ ಕೋಟೆಯು ಕಾಣಿಸಿತು. ರತ್ನಗಿರಿಯು ರಾಯಲಸೀಮೆಯಲ್ಲಿರುವ ಗೋಲ್ಕೊಂಡ. ಆಂಧ್ರದ ಗೋಲ್ಕೊಂಡ ಪುರಾತನ ಬೌದ್ಧ ನೆಲೆಯಾಗಿದೆ. ರತ್ನಗಿರಿಯಲ್ಲಿ ಬೌದ್ಧದ ನೇರವಾದ ಗುರುತುಗಳು ಕಾಣಿಸದಿದ್ದರೂ ಇಲ್ಲಿನ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಧಾರ್ಮಿಕ ಆಚರಣೆಗಳು ಮತ್ತು ರಿವಾಜುಗಳ ಬಗ್ಗೆ ಕೇಳಿ ತಿಳಿದಾಗ ಬೌದ್ಧವು ಬೆರೆತುಹೋಗಿರುವಂತೆ ಕಾಣಿಸಿತು.
ವಿಜಯನಗರದ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಅಷ್ಠದಿಗ್ಗಜ ಕವಿಗಳಲ್ಲಿ ಪ್ರಮುಖ ಕವಿಯಾಗಿದ್ದ ಅಲ್ಲಸಾನಿ ಪೆದ್ದನ್ನನು ವಿಜಯನಗರ ಸಾಮ್ರಾಜ್ಯದ ಪತನಾನಂತರ ಹಂಪಿಯನ್ನು ತೊರೆದು 500 ಬ್ರಾಹ್ಮಣ ಕುಟುಂಬಗಳೊಂದಿಗೆ ರತ್ನಗಿರಿಗೆ ಬಂದು ನೆಲೆಸಿದನೆಂಬ ಐತಿಹ್ಯ ಇಲ್ಲಿದೆ. ಟಿಪ್ಪು ಸುಲ್ತಾನ್ ಬ್ರಿಟಿಷರ ಬಳಿ ಒತ್ತೆಯಾಳುಗಳನ್ನಾಗಿ ಇರಿಸಿದ್ದ ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಿಂದ ಬಿಡಿಸಿಕೊಂಡು ಬರಲು ಆತನ ಬೊಕ್ಕಸದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ ಇರಲಿಲ್ಲವಂತೆ. ರತ್ನಗಿರಿ ಕೋಟೆಯ ಮೇಲೆ ದಂಡೆತ್ತಿ ಹೋದರೆ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆಯಬಹುದೆಂದು ದಿವಾನ್ ಪೂರ್ಣಯ್ಯನು ನೀಡಿದ ಸಲಹೆಯ ಮೇರೆಗೆ ಟಿಪ್ಪು ಸುಲ್ತಾನ್ ರತ್ನಗಿರಿ ಕೋಟೆಗೆ ಮುತ್ತಿಗೆ ಹಾಕಿದನಂತೆ. ಇಪ್ಪತ್ತೆಂಟು ದಿನಗಳ ಕಾಲ ಯುದ್ಧ ಮಾಡಿ ಕೊನೆಗೂ ರತ್ನಗಿರಿ ಕೋಟೆಯನ್ನು ತನ್ನ ವಶಪಡಿಸಿಕೊಂಡನಂತೆ. ಅಲ್ಲಿ ಸಂಪತ್ತು ಸಿಗದಿದ್ದಾಗ ನಿರಾಶನಾದ ಟಿಪ್ಪು ಸುಲ್ತಾನ್ ರತ್ನಗಿರಿಯನ್ನು ಮೆಹಬೂಬ್ ಬಾದ್ ಎಂದು ಮರುನಾಮಕರಣ ಮಾಡಿ ಸ್ಥಳೀಯ ಆಡಳಿತ ನಿರ್ವಹಣೆಗೆ ಪೌಜುದಾರರನ್ನು ನೇಮಿಸಿದನೆಂದು ಸ್ಥಳೀಯ ಜನರ ನಾಲಗೆಯ ಮೇಲಿನ ಮೌಖಿಕ ಚರಿತ್ರೆ ನುಡಿಯುತ್ತದೆ. ರತ್ನಗಿರಿ ಕಲ್ಲಿನ ಕೋಟೆಯ ಮೇಲೆ ಪಿರಂಗಿ ದಾಳಿ ನಡೆದ ಕುರುಹಾಗಿ ಛಿದ್ರವಾಗಿರುವ ಕೋಟೆಯ ಕಲ್ಲುಗಳು ಸಾಕ್ಷಿಯಾಗಿವೆ. ಟಿಪ್ಪು ಸುಲ್ತಾನನ ಮರಣಾನಂತರ ರತ್ನಗಿರಿ ಕೋಟೆ ಆಂಗ್ಲರ ಕೈವಶವಾಯಿತು.

ರತ್ನಗಿರಿ ಬೆಟ್ಟದ ಪಾದದಲ್ಲಿ ಕೋಟೆಯೊಳಗಿರುವ ಊರಿನ ಜನರಿಗೆ ಬೆಟ್ಟದ ತಪ್ಪಲಿನಲ್ಲಿ ಮತ್ತು ಕಣಿವೆಯಲ್ಲಿ ಬೇಸಾಯದ ಭೂಮಿ ಇದೆ. ಈಗಲೂ ಈ ಭೂಮಿಯಲ್ಲಿ ಅನೇಕ ಕುಟುಂಬಗಳು ಭೂಹಿಡುವಳಿ ಹೊಂದಿದ್ದು ಸಾಗುವಳಿ ಮಾಡುತ್ತಿದ್ದಾರೆ. ಅಪ್ಪಟ ಕನ್ನಡ ಭಾಷಿಕ ಮತ್ತು ಕನ್ನಡ ಸಾಂಸ್ಕೃತಿಕ ಜನರೇ ಇರುವ ರತ್ನಗಿರಿ ಭಾಷಾವಾರು ಪ್ರಾಂತಗಳ ರಚನೆಯಾದ ಬಳಿಕ ಆಂಧ್ರಪ್ರದೇಶಕ್ಕೆ ಸೇರಿಹೋಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಗಡಿಯಲ್ಲಿರುವ ಈ ಸೀಮೆಯ ನೂರಾರು ಹಳ್ಳಿಗಳು ಕನ್ನಡಿಗರೇ ನೆಲೆಸಿರುವ ಅಪ್ಪಟ ಕನ್ನಡ ಗ್ರಾಮಗಳಾಗಿವೆ. ಅಷ್ಟಾಗಿ ಕನ್ನಡ ಶಾಲೆಗಳಿರದ ಇಲ್ಲಿನ ಕನ್ನಡಿಗರು ಕಾನೂನಿನ ಹೇರಿಕೆಯಿಂದಾಗಿ ಶಾಲೆಗಳಲ್ಲಿ ತೆಲುಗು ಭಾಷೆಯನ್ನು ಕಲಿಯುತ್ತಿದ್ದಾರೆ. ಸಾವಿರಾರು ಕುಟುಂಬಗಳಲ್ಲಿ ಸಾವಿರಾರು ಹಿರೀಕರಿಗೆ ಈಗಲೂ ಕನ್ನಡವಲ್ಲದೇ ಬೇರೆ ಭಾಷೆಯಲ್ಲಿ ವ್ಯವಹರಿಸುವುದು ತಿಳಿದಿಲ್ಲ. ಇಂತಹ ರತ್ನಗಿರಿ ಗ್ರಾಮವು ಬೆಂಗಳೂರು ನಗರಕ್ಕೆ ಕೇವಲ 140 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರು- ತುಮಕೂರು ಮಾರ್ಗದಲ್ಲಿ ಸಿಗುವ ದಾಬಸ್ ಪೇಟೆ ಗ್ರಾಮದಲ್ಲಿ ಕೊರಟಗೆರೆ- ಮಧುಗಿರಿ – ಪಾವಗಡ ರಸ್ತೆಯಲ್ಲಿ ಪ್ರಯಾಣಿಸಬೇಕು. ಮಧುಗಿರಿ ಪಟ್ಟಣದ ನಂತರದಲ್ಲಿ ಸಿಗುವ ಹೊಸಕೆರೆ ಗ್ರಾಮದಿಂದ ಉತ್ತರ ದಿಕ್ಕಿಗೆ ಎಂಟು ಕಿಲೋಮೀಟರ್ ದೂರದಲ್ಲಿದೆ ರತ್ನಗಿರಿ.
ರತ್ನಗಿರಿ ಕೋಟೆ ಸುತ್ತಲೂ ಬೆಟ್ಟಗಳ ಸಮುಚ್ಚಯವೇ ಇದೆ. ಬಹುತೇಕ ಎಲ್ಲಾ ಬೆಟ್ಟಗಳ ಮೇಲೂ ಪುರಾತನ ಕೋಟೆ ಮತ್ತು ದೇವಾಲಯಗಳಿವೆ. ರತ್ನಗಿರಿ ಕೋಟೆಯನ್ನು ಹತ್ತಲು ಬಳಸುವ ಮೆಟ್ಟಿಲುಗಳ ಮೇಲೆ ಹಾಗೂ ಕೋಟೆಯ ದ್ವಾರಗಳಲ್ಲಿಯೇ ಮಳೆ ನೀರು ಹರಿಯುವುದರಿಂದಾಗಿ ಅಲ್ಲಲ್ಲಿ ಮೆಟ್ಟಿಲು ಕಲ್ಲುಗಳು ನೀರಿನ ಕೊಚ್ಚಾಣಿಕೆಯಿಂದ ಕಳಚಿಕೊಂಡು ಬಿದ್ದುಹೋಗಿವೆ. ಬೆಟ್ಟದ ಮೇಲೆ ಪೂರ್ವಿಕರು ನೀರಾಶ್ರಯಕ್ಕೆಂದು ಬಳಸುತ್ತಿದ್ದ ಪ್ರಾಕೃತಿಕ ಜಲಕೋಶಗಳಾದ ದೊಣೆಗಳು, ಕಲ್ಯಾಣಿಗಳು, ಮಜ್ಜನ ಭಾವಿಗಳು ಪಾಚಿ ಕಳೆಕಂಟಿ ಲಂಟಾನ ಗಿಡಗಳಿಂದ ತುಂಬಿಕೊಂಡಿವೆ. ಅಕ್ಕತಂಗಿ ದೊಣೆಗಳು, ಮಲ್ಲಮನ ದೊಣೆ, #ಸುರಂಗ ಬಾಗಿಲು ದೊಣೆ ಇವೆಲ್ಲವೂ ಒಂದು ಕಾಲದಲ್ಲಿ ನೀರತಾಯಿಗಳಾಗಿ ಜನರನ್ನು ಹಾಗೂ ಪ್ರಾಣಿ ಪಕ್ಷಿಗಳನ್ನು ಸಲಹಿದ್ದವು. ಪ್ರಾಕೃತಿಕ ದೊಣೆಗಳ ಸುತ್ತಲೂ ಗಚ್ಚುಗಾರೆ ಸುಟ್ಟ ಇಟ್ಟಿಗೆ ಹಾಗೂ ಸೈಜುಗಲ್ಲುಗಳಿಂದ ನಿರ್ಮಿಸಿದ್ದ ಗೋಡೆಗಳು ಈಗಲೂ ಸುಭದ್ರವಾಗಿವೆ. ಎಲ್ಲೆಲ್ಲಿ ಗಚ್ಚುಗಾರೆ ಗೋಡೆಗಳಿವೆಯೋ ಅಲ್ಲೆಲ್ಲಾ ಜನರು ತಮ್ಮ ಹೆಸರುಗಳನ್ನು ಕೆತ್ತಿ ಕೊರೆದು ಗಾರೆ ಗೋಡೆಗಳು ನಾಶವಾಗಿವೆ. ಕಲ್ಲಿನ ಕಟ್ಟಡಗಳಾದ ಶಸ್ತ್ರಾಗಾರಗಳು, ಧಾನ್ಯದ ಕಣಜಗಳು, ಉಗ್ರಾಣಗಳು, ಬಂದಿಖಾನೆ ಬರಿದಾಗಿದ್ದು ಒಳಭಾಗದಲ್ಲಿ ನಿಧಿಗಳ್ಳರು ತೋಡಿರುವ ಗುಂಡಿಗಳಿವೆ. ಇವು ಈಗ ಹಲ್ಲಿ ಹಾವು ತೋಳ ಕರಡಿ ಮುಂತಾದ ಪ್ರಾಣಿಗಳ ವಾಸದ ನೆಲೆಗಳಾಗಿವೆ. ಮೊದಲ ಸುತ್ತಿನ ಕೋಟೆಯೊಳಗಿನ ರತ್ನಗಿರಿ ಗ್ರಾಮವನ್ನು ದಾಟಿಕೊಂಡ ಬಳಿಕ ಎರಡನೇ ಸುತ್ತಿನ ಕೋಟೆಯಾಚೆಗಿನ ಬೇಸಾಯದ ಹೊಲಮಾಳ ಸೇರುತ್ತೇವೆ. ಹೊಲಮಾಳದ ನಂತರ ಕೋಟೆಯ ಮುಖ್ಯ ದ್ವಾರಕ್ಕೆ ಬಂದಾಗ, ಅಸಲಿಯಾಗಿ ಬೆಟ್ಟವನ್ನು ಹತ್ತುವ ಮೊದಲು ಸಿಗುವುದೇ ಕೋಟೆಯ ನಾಭಿದ್ವಾರ. ಈ ಹೆಬ್ಬಾಗಿಲಿನ ಕಲಾತ್ಮಕ ನಿರ್ಮಾಣ ನನ್ನನ್ನು ಅಪಾರವಾಗಿ ಸೆಳೆಯಿತು.
ಕೋಟೆಗೋಡೆಯ ಹೊರಮುಖವನ್ನು ಕೆಂಪಾಳ ಸುಟ್ಟ #ಕೆಂಪು_ಇಟ್ಟಿಗೆ, ಗಚ್ಚುಗಾರೆ ಮತ್ತು ಬೃಹತ್ ಕಲ್ಲುಗಳಿಂದ ನಿರ್ಮಿಸಲಾಗಿದೆ. ಕೋಟೆಗೋಡೆಯ ಒಳಮುಖವು ಕಲ್ಲುಗಳು ಮತ್ತು ಗಚ್ಚುಗಾರೆಯನ್ನು ಬಳಸಿ ಕಟ್ಟಲಾಗಿದೆ. ಈ ಜಾಗದಲ್ಲಿ ತಣ್ಣಗೆ ಬೀಸುವ ಗಾಳಿಗೆ ಮೈಯೊಡ್ಡಿ ಕುಳಿತಾಗ ಮತ್ತಷ್ಟು ಪ್ರಾಯವು ನನ್ನಲ್ಲಿ ಡಿಪಾಜಿಟ್ ಆದಂತೆ ಅನುಭವವಾಯಿತು. ಇಂತಹ ಪ್ರಾಯ ತುಂಬಬಲ್ಲ ಕೋಟೆಯು ಸರ್ಕಾರದ ಮತ್ತು ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಹೊಣೆಗೇಡಿತನದಿಂದಾಗಿ ನಮ್ಮ ಹಜ್ಜಿಯ ಜೀರ್ಣಗೊಂಡ ಸೀರೆಯಂತೆ ದಾರದೆಳೆಗಳು ಕಳಚಿಕೊಂಡು ನಂದುತ್ತಿರುವುದು ತೀರಾ ಬೇಸರದ ಸಂಗತಿ.
- ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು)
