ಏನೇ ಮಾಡಿದ್ರೂ ನಿಮ್ಮ ಟೈಮ್ ಸರಿ ಇಲ್ವಾ..



ಜ್ಯೋತಿಷ್ಯ ಹೇಳುವವರಿಗೆ ನಮ್ಮ ಕೈ‌ ನೋಡಿಯೇ ಹೇಳೋ ಅಗತ್ಯ ಇರೋಲ್ಲ, ಬದಲಿಗೆ ಸೋತು ಬಳಲಿದ ನಮ್ಮ ಮುಸುಡಿ ನೋಡಿದರೇ ಸಾಕು ಯಾರು‌ ಬೇಕಾದ್ರೂ ನಮ್ ಕಥೆ ಹೇಳಬಹುದು. ಜೀವನದಲ್ಲಿ ಬಹಳಷ್ಟು ಸಾರಿ ನಾವಂದು ಕೊಂಡಂತೆ ಏನೂ ಆಗೋಲ್ಲ ಅನ್ನೋದೇನೋ ಸರಿ. ಲೇಖಕ ಹಿರಿಯೂರು ಪ್ರಕಾಶ್ ಅವರ ಒಂದು ಸುದೀರ್ಘ ಚಿಂತನಾ ಲೇಖನ, ಮುಂದೆ ಓದಿ…

ಜೀವನದಲ್ಲಿ ಬಹಳಷ್ಟು ಸಾರಿ ನಾವಂದು ಕೊಂಡಂತೆ ಏನೂ ಆಗೋಲ್ಲ ಅನ್ನೋದೇನೋ ಸರಿ. ಇದು ಎಲ್ಲರ ಬಾಳಲ್ಲೂ ಕಾಮನ್ ! ಜೊತೆಗೆ ಆ ರೀತಿ ಆದಾಗಲೆಲ್ಲಾ ಎಲ್ಲರೂ ಹೇಳುವ ಹಳೇ ಡೈಲಾಗು ಬೇರೆ ! ಆದ್ರೆ ಕೆಲವೊಮ್ಮೆ ವರ್ಷಾನು ಗಟ್ಟಲೆ ಯಾವ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ನಿರಾಶೆ ಮೂಡಿಸುವಂತಹಾ ಘಟನೆಗಳೇ ಸರಣಿ ಯೋಪಾದಿಯಲ್ಲಿ ಜರುಗುತ್ತಲಿದ್ದರೆ, ವೈಫಲ್ಯ ಕಾಣುತ್ತಿದ್ದರೆ, ಅಂದುಕೊಂಡದ್ದಕ್ಕೆ ವಿರುದ್ಧವಾಗಿ ಜರುಗುತ್ತಿದ್ದರೆ, ಇಡೀ ವಿಶ್ವವೇ ತನಗೆದುರಾಗಿದೆಯೇನೋ ಎಂಬಂತಹ ಸನ್ನಿವೇಶಗಳು ಪುನಾರವರ್ತನೆಯಾಗುತ್ತಿದ್ದರೆ ಅದಕ್ಕೆ ಏನೆಂದು ಹೆಸರಿಡುವುದು ? ಗ್ರಹಚಾರವೋ , #ಶನಿ ಪ್ರಭಾವವೋ, ದುರದೃಷ್ಟವೋ, ಕೆಟ್ಟ ಘಳಿಗೆಯೋ, ಕೆಟ್ಟ ನಕ್ಷತ್ರವೋ, ಹಣೆಬರಹವೋ, ಸಾಡೇ ಸಾತೋ.., ಮಾಟ ಮಂತ್ರವೋ, ಕಾಲ್ಗುಣವೋ ಒಟ್ಟಿನಲ್ಲಿ ಹಾಗೆಲ್ಲಾ ಆದಾಗ ಕೊನೆಗೆ ಯಾಕೋ ನಮ್ಮ ಟೈಮ್ ಸರಿಯಿಲ್ಲವೆಂದು ತಿಪ್ಪೆ ಸಾರಿಸಿ ಸಮಾಧಾನ ಪಟ್ಟುಕೊಳ್ಳುತ್ತೇವೆ…!

ಈ ತರಹದ ಕೆಟ್ಟ ಟೈಮ್ ಹೇಗಿರುತ್ತದೆಯೆಂದರೆ ನಿಮಗೆ ಕೆಲಸ ಮಾಡುವ ಜಾಗದಲ್ಲೂ ಕಿರಿಕಿರಿ ,ಅಪಮಾನ‌, ನಿಂದನೆ , ಮನೆಯಲ್ಲೂ ಅಶಾಂತಿಯ ವಾತಾವರಣ, ನೆಮ್ಮದಿಯೆನ್ನುವುದು ಮೈಲುದ್ದ ದೂರ, ಮಾಡಿದ ವ್ಯವಹಾರ ದಲ್ಲೆದರಲ್ಲೂ ನಷ್ಟ, ಸಾಲ ಪಡೆದವರು ಹಿಂದಿರುಗಿಸೋದು ಇರಲಿ, ನಿಮ್ಮ ಫೋನ್ ಕಾಲೂ ತೆಗೆಯಲ್ಲ, ಸಹಾಯ ಮಾಡಲು ಯಾರೂ ಮುಂದೆ ಬರೋಲ್ಲ, ನಿಮ್ಮಿಂದ ಉಪಕಾರ ಪಡೆದವರಿಂದಲೇ ನೀವು ನಿಷ್ಠುರ ಅನುಭವಿಸ ಬೇಕು, ಮಾಡದ ತಪ್ಪಿಗೆ‌ ನಿಂದನೆ ಹೊರಬೇಕು, ಯಶಸ್ಸು ಎನ್ನುವುದು ಮರೀಚಿಕೆಯಾಗಿ ತೋರುತ್ತೆ, ಮೊಗದಲ್ಲಿ ನಗು ಬಾಡಿ ಬೆಂಡಾಗಿರುತ್ತೆ, ಮನೆಯಲ್ಲಿ ಯಾರಾದರೂ ಮಾತನಾಡಿಸಿದರೆ ಸಾಕು ರೇಗಿ ಬೀಳುವ ಹಾಗಾಗುತ್ತೆ, ಕೈಯಲ್ಲಿದ್ದ ಅದೃಷ್ಟ ಫಕ್ಕನೇ ಜಾರಿ ಮತ್ತೆಲ್ಲಿಗೋ ಓಡಿ ಹೋಗಿರುತ್ತೆ ಅಥವಾ ನಮ್ಮ ಅಸಡ್ಡೆ ಅಥವಾ ಸೋಮಾರಿತನದಿಂದ ನಮ್ಮ ವಶದಲ್ಲಿದ್ದ ಸ್ವತ್ತು ಬೇರೆಯವರ ಪಾಲಾಗುತ್ತೆ.

ಫೋಟೋ ಕೃಪೆ : indiatvnews

ಒಟ್ಟಾರೆ…… ಕಷ್ಟಪಟ್ಟು ವರ್ಷವೆಲ್ಲಾ ಓದಿಯೂ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಯ ಮನದೊಳಗಿನ ದುಗುಡದಂತೆ, ಮನಸಲ್ಲಿ ಎಷ್ಟೇ ಒಳ್ಳೆಯತನವಿದ್ದು ಒಳ್ಳೆಯದನ್ನೇ‌ ಬಯಸಿದರೂ ಜನ ನಮ್ಮನ್ನು ವಿಲನ್ ಗಳಂತೆಯೇ ಟ್ರೀಟ್ ಮಾಡುವ ರೀತಿಯಂತೆ, ಎಲ್ಲಾ ಇದ್ದೂ ಏನೂ ಇಲ್ಲದಂತೆ, ಬದುಕಿನ ಗೊತ್ತು‌ ಗುರಿಯೇ ದಿಕ್ಕು ತಪ್ಪಿದಂತೆ, ನಮ್ಮ ನೆರಳೇ ನಮಗೆ ಶತ್ರುವಾದಂತೆ, ಹಗ್ಗವೇ ಹಾವಾಗಿ ಬುಸುಗುಟ್ಟಿದಂತೆ, ಇಡೀ ಪ್ರಪಂಚವೇ ನಮ್ಮತ್ತ ಅಸಹನೆಯ ನೋಟ‌ ಬೀರಿದಂತೆ, ಅಕ್ಕಪಕ್ಕದಲ್ಲಿದ್ದವರೇ ಫಕ್ಕನೇ ಪಕ್ಕೆಗೆ ತಿವಿದಂತೆ, ಆತ್ಮೀಯರೆಂದು ಕೊಂಡವರೇ ಹಿತಶತ್ರುಗಳಾದಂತೆ, ಒಟ್ಟಾರೆ ನಮ್ಮಂತಹಾ ಅನ್ ಲಕ್ಕಿಗಳು ಈ‌ ಭೂ ಮಂಡಲದಲ್ಲಿ‌ ಬೇರಾರೂ ಇಲ್ಲವೇನೋ ಎಂಬ ಭಾವನೆ‌ ಬರುವಂತೆ ಜೀವನೋತ್ಸಾಹವೆಲ್ಲಾ ಬರಡಾಗಿ ಬಗ್ಗಡವಾದಂತೆ ಅನಿಸಿಬಿಡುತ್ತದೆ ….!
ಈ ಥರಾ ನಮಗೆ ಮಾತ್ರವೇ ಆಗೋದಾ..ಅಥವಾ ‌ಇತರರಿಗೂ ಹಾಗೇನಾ…? ಎಂಬ‌ ಜಿಜ್ಞಾಸೆಯ ಮೂಸೆಯಲ್ಲಿ ಯೋಚಿಸಿ, ಶೋಧಿಸಿ, ಅತ್ತೂ ಕರೆದು ತಲೆ ಕೆರೆದು ಕೊನೆಗೆ ಇದಕ್ಕೆ ಕಾರಣ, ಕರ್ತೃ , ಪರಿಹಾರ ಅಂತೆಲ್ಲಾ ಹುಡುಕಲು ಶುರು ಮಾಡ್ತೀವಿ…ಅಲ್ಲವೇ !

ಫೋಟೋ ಕೃಪೆ : zee news

ಜ್ಯೋತಿಷ್ಯ ಶಾಸ್ತ್ರ, #ಸಂಖ್ಯಾ_ಶಾಸ್ತ್ರ, ವಾಸ್ತು, ಭವಿಷ್ಯ… ಇತ್ಯಾದಿಗಳ ಬಗೆಗೆ‌ ನಂಬಿಕೆಯಿರುವವರು ನೇರವಾಗಿ ಅವರಲ್ಲಿಗೆ ಹೋಗಿ ಕೈ ಕೊಟ್ಟೋ , ಜಾತಕ ಇಟ್ಟೋ ತಮ್ಮ ಭವಿಷ್ಯ ಮತ್ತದಕ್ಕೆ ಪರಿಹಾರ ತಿಳಿಯುತ್ತಾರೆ. ತಮಾಷೆ ಅಂದ್ರೆ ಜ್ಯೋತಿಷ್ಯ ಹೇಳುವವರಿಗೆ ನಮ್ಮ ಕೈ‌ ನೋಡಿಯೇ ಹೇಳೋ ಅಗತ್ಯ ಇರೋಲ್ಲ… ಬದಲಿಗೆ ಬದುಕಲ್ಲಿ ಪೂರಾ ಸೋತು ಬಳಲಿದಂತೆ, ಸಾಕಷ್ಟು ಹೋರಾಡಿ ಹೈರಾಣಾದಂತೆ ಕಾಣುವ ನಮ್ಮ ಮುಸುಡಿ ನೋಡಿದರೇ ಸಾಕು ಯಾರು‌ ಬೇಕಾದ್ರೂ ನಮ್ ಕಥೆ ಹೇಳಬಹುದು. ಆದ್ರೂ ಅವರು ಕವಡೆ , #ಪಂಚಾಂಗ ಅಂತೆಲ್ಲಾ ನೋಡಿ ತಿರುವಿ ಒಂದಷ್ಟು ಸಮಾಧಾನ, ಸಾಂತ್ವಾನ , ಆಶಾಭಾವನೆ‌, ಭರವಸೆ, ಪರಿಹಾರ ಅದೂ ಇದೂ ಅಂತೆಲ್ಲಾ ಈಗಾಗಲೇ ಕೆಂಡದಂತಿರುವ ನಮ್ ಮಂಡೆಗೆ ಸ್ವಲ್ಪ ಐಸ್ ಇಟ್ಟು ಕಳಿಸ್ತಾರೆ. ಅದರಿಂದ ಕೊಂಚವಾದ್ರೂ ರಿಲೀಫ಼್ ಸಿಕ್ರೆ ಅಷ್ಟೇ ಸಾಕು ಎಂಬ ಮಾನಸಿಕ ಸಮಾಧಾನದೊಂದಿಗೆ ನಾವೂ ಬರ್ತೀವಿ. ಕೆಲವರಿಗೆ ಪರಿಹಾರವೂ ಸಿಕ್ಕಿರಬಹುದು…!

ಫೋಟೋ ಕೃಪೆ : India Tv Hindi

ಇನ್ನೂ ಕೆಲವು ಭಯಂಕರ ಭಕ್ತರು ಟಿವಿ #ಜ್ಯೋತಿಷಿಗಳು ಹೇಳುವ ಅನೇಕ ಪರಿಹಾರ ಕಾರ್ಯಗಳನ್ನು ಕಣ್ಣಿಗೊತ್ತಿಕೊಂಡು ವರ್ಷಾನುಗಟ್ಟಲೆ ಮಾಡುತ್ತಲೇ ಬಂದಿದ್ದಾರೆ. ಟಿವಿಗಳ ಮಾಡೆಲ್ ಹತ್ತಾರು ರೂಪದಲ್ಲಿ ಬದಲಾದರೂ ಆದರೂ ಇವರ ಬದುಕಿನಲ್ಲಿ ಬದಲಾವಣೆ ಬರಲೇ ಇಲ್ಲ !

ಮತ್ತೇ ಕೆಲವು ಸಕತ್ ದೈವಭಕ್ತರು ತಾವು ನಂಬಿರೋ ದೇವರು, ದಿಂಡರು, ಗುಡಿ- ಪುಣ್ಯಸ್ಥಳ ಅಂತೆಲ್ಲಾ ಸುತ್ತಾಡಿ ಏನೇನೋ ಹರಕೆ- ಬಯಕೆ ಗಳನ್ನು ‌ದೇವರ ಮುಂದೆ ಅರುಹಿ, ಅನುಗ್ರಹಿಸಿ ಎಂದು ಕೇಳಿ ತಮ್ಮೆಲ್ಲಾ ಕಷ್ಟಗಳನ್ನು ಅವನ ಮಡಿಲಿಗೇ ಸುರಿದು ದೊಡ್ಡ ಅಪ್ಲಿಕೇಷನ್ ಹಾಕಿ ಮನಸು ಹಗುರವಾಯಿತೆಂದು ಬರುತ್ತಾರೆ. ಸಂಕಟ ಬಂದಾಗ ವೆಂಕಟರಮಣ ಅಂತೀವಲ್ಲಾ ಹಾಗೆ !
ಮತ್ತೇ ಅನೇಕರು ತಮ್ಮ ನೆಂಟರು- ಬಂಧುಗಳು ಸ್ನೇಹಿತರು ಭಗವಂತನ ರೂಪದಲ್ಲಿ ಧರೆಗೆ ಬಂದಿಳಿಯಬಹುದೇನೋ ಎಂಬ ಅಗಾಧ ಕನಸುಗಳನ್ನು ಹೊತ್ತು ತಮ್ಮೆಲ್ಲಾ ಕಷ್ಟ ಪರಿಹಾರಕ್ಕಾಗಿ ಸಹಾಯಕ್ಕಾಗಿ ಅವರಲ್ಲಿ ಯಾಚಿಸುತ್ತಾರೆ.



ಇನ್ನೂ ಹಲವರು ತಮ್ಮ ಸಮಸ್ಯೆಗಳ ಪರಂಪರೆಯನ್ನು ಕಂಡ ಕಂಡವರಲ್ಲಿ ಅವಲತ್ತುಕೊಂಡು ಗೋಳಾಡುತ್ತಾರೆ. ಕಷ್ಟಗಳನ್ನು ಮತ್ತೊಬ್ಬರಲ್ಲಿ ಹೇಳಿಕೊಂಡರೆ ಹೃದಯ ಹಗುರವಾದೀತೆಂಬ ಸಣ್ಣ‌ ಆಸೆಯನ್ನಿಟ್ಟು ಕೊಂಡಿರುವವರಿಗೆ ಅದರಿಂದ ಕೇವಲ ಮಾನಸಿಕ‌ವಾಗಿ ಒಂದಷ್ಟು ಸ್ವಯಂ ಭ್ರಮೆಯ ನೆಮ್ಮದಿ ಸಿಗಬಹುದೇನೋ….ಆದರೆ ಸಿಕ್ಕ ಸಿಕ್ಕವರಲ್ಲಿ ಕಷ್ಟ ಹೇಳಿಕೊಳ್ಳೋದರಿಂದ ಪರಿಹಾರ ದಕ್ಕಿಸಿಕೊಂಡವರ ಸಂಖ್ಯೆ ವಿರಳ. In fact , ಅದರಿಂದ ತೊಂದರೆಯೇ ಹೆಚ್ಚು !

ಇನ್ನೂ ಕೆಲವರು ಇಡೀ ಪ್ರಪಂಚದಲ್ಲಿ ಯಾರಿಗೂ ಇಲ್ಲದ ತೊಂದರೆ ತಾಪತ್ರಾಯ ಕಷ್ಟ, ನಷ್ಟ, ಅಪಮಾನ , ನಿಂದನೆ ತನಗೆ ಮಾತ್ರವೇ ಆಯಿತೆಂಬ ಅತೀವ ದುಃಖದಲ್ಲಿ ತನಗೆ‌ ಜೀವನವೇ ಸಾಕೆಂಬ‌ ನಿರ್ಧಾರ ತೆಗೆದುಕೊಂಡು‌ ಬದುಕಿಗೇ ಶಾಶ್ವತ ಇತಿಶ್ರೀ ಹಾಡಿಕೊಳ್ಳುವ ಹೇಡಿಗಳಾಗಿಬಿಡುತ್ತಾರೆ. ಆತ್ಮಹತ್ಯೆ ತಮ್ಮೆಲ್ಲಾ ಕಷ್ಟಗಳಿಗೆ ಅಂತಿಮ ಪರಿಹಾರ ಎಂಬ‌ ಇವರ ತರ್ಕ ಸರಿಯೋ ತಪ್ಪೋ ಎಂದು ವಿವೇಚಿಸಲು ಬೇರಾರಿಗೂ ಅವಕಾಶವನ್ನೇ ಕೊಡದಷ್ಟು ಮುಂದಕ್ಕೆ ಹೋಗಿದ್ದವರು ತಿರುಗಿ ಬರೋದೇ ಇಲ್ಲ ! ವಿಪರ್ಯಾಸವೆಂದರೆ ಆತ್ಮಹತ್ಯೆಯ ನಂತರ ಇವರನ್ನು ಸುತ್ತುವರೆದಿದ್ದ ಸಮಸ್ಯೆಗಳ ನೆರಳು ಅವರನ್ನು ನಂಬಿ ಕೊಂಡಿರುವವರ ಮೇಲೆ ಮತ್ತಷ್ಟು ಹೆಚ್ಚಾಗುತ್ತವೆಯೇ ವಿನಃ ಅಳಿಸಿ ಹೋಗೋಲ್ಲ.! ಹೀಗಿದ್ದೂ ನಿಮಿಷಕ್ಕೊಂದರಂತೆ ಆತ್ಮಹತ್ಯೆಗಳು ದೇಶದಲ್ಲಿ ನೆಡೆಯುತ್ತಲೇ ಇರುತ್ತವೆ.
ಹಾಗಾದ್ರೆ ಇಂತಹಾ ದಿಕ್ಕೇ ತೋಚದ ಸಂಧರ್ಭದಲ್ಲಿ ಏನು ತಾನೇ ಮಾಡಲಾದೀತು…???

ಫೋಟೋ ಕೃಪೆ : The Indian Express

ನೆನಪಿರಲಿ, ಸಮಸ್ಯೆಗೆ ಹೆದರಿ ಸಾವಿಗೆ ಶರಣಾಗುವುದು, ಕಂಡಕಂಡವರಲ್ಲಿ ನಂಬಿಕೆಯಿಟ್ಟು ಕಷ್ಟ ಹೇಳಿಕೊಳ್ಳುವುದು, ಜ್ಯೋತಿಷ್ಯ ಶಾಸ್ತ್ರದಲ್ಲಿಯೇ ಶಾಶ್ವತ ಪರಿಹಾರ ಹುಡುಕುವುದು, ಅವರ ಭವಿಷ್ಯವೇ ಗೊತ್ತಿಲ್ಲದವರಲ್ಲಿ ನಿಮ್ಮ ಭವಿಷ್ಯ ಹುಡುಕುವುದು, ಬಂಧು- ಬಳಗ ಸ್ನೇಹಿತರುಗಳೇ ಎಲ್ಲವನ್ನೂ ಪರಿಹರಿಸುವರೆಂಬ ಹುಸಿ ನಂಬಿಕೆಯಿಡುವುದು, ದುಶ್ಚಟಗಳಿಗೆ ದಾಸರಾಗುವುದು, ಬದುಕನ್ನು ಸ್ವಯಂ ಅಂತ್ಯಗೊಳಿಸಿಕೊಳ್ಳುವುದು…. ಇದಾವುದೂ ಸಮಸ್ಯೆಗಳ ಅಂತಿಮ ಅಥವಾ ತಕ್ಕ ಪರಿಹಾರವಲ್ಲ . ಇದು ನಮ್ಮ ಸಮಸ್ಯೆಗಳಿಗೆ ನಾವೇ ಕಂಡುಕೊಳ್ಳುವ ಶಾರ್ಟ್ ಕಟ್ ನ ಸಮಾಧಾನವಷ್ಟೇ ! ಈ‌ ಮೇಲೆ‌ ತಿಳಿಸಿದ ವಿಧಾನಗಳಿಂದ ಕೆಲವರಿಗೆ ಪರಿಹಾರ ಗೋಚರಿಸಿದ್ದಿರಲೂಬಹುದು. ಆದರೆ ಅಂತಹಾ ಪರಿಹಾರಗಳ ಹಿಂದೆ ಅವರ ಶ್ರಮ, ಭರವಸೆ, ವಿಶ್ವಾಸ ಇದ್ದೇ ಇರುತ್ತದೆಯೇ ವಿನಃ ಅವು ತಾವಾಗಿಯೇ ಹುಡುಕಿ ಬಂದು‌ ನಮ್ಮ‌ ಮಡಿಲು ಸೇರೋಲ್ಲ !

ವಿಚಿತ್ರ ಅಂದ್ರೆ ಈ ಸತ್ಯ ಗೊತ್ತಿದ್ದರೂ ಬಹುತೇಕರು ಅಂತಹಾ ಸಂಧರ್ಭಗಳಲ್ಲಿ ಇವುಗಳ ಬೆನ್ನ ಹಿಂದೆಯೇ ಅನಾಮತ್ತಾಗಿ ಬೀಳೋದೇ ಲೈಫ಼್ ನ‌ ನಿಯಮಾನಾ…ಅಥವಾ ಲೈಫ಼ು ಇಷ್ಟೇನಾ..!

** ಮರೆಯುವ ಮುನ್ನ **

ಕಷ್ಟಗಳು ನಮ್ಮ ಜೀವನದಲ್ಲಿ ಬರುವುದು ನಮ್ಮನ್ನು ಹಾಳು ಮಾಡಲೆಂದಲ್ಲ. ಬದಲಿಗೆ ನಮ್ಮಲ್ಲಿರುವ ಅಂತರ್ಗತ ತಾಕತ್ತು ಮತ್ತು ಶಕ್ತಿಯನ್ನು ಪರೀಕ್ಷೆ ಮಾಡಲು ! ನಾವೆಷ್ಟು ಧೃಡ ಎನ್ನುವುದು ಕಷ್ಟಗಳಿಗೂ ಗೊತ್ತಾಗುವ ಹಾಗೆ ಅವುಗಳನ್ನು ಎದುರಿಸಬೇಕು……. ಹಾಗೆ ಹೀಗೆ ಅಂತೆಲ್ಲಾ ಥಿಯರಿ ಹೇಳೋದು ಸುಲಭ. ಆದರೆ ಆಚರಿಸೋದು ಅನುಭವಿಸೋದು ಮಾತ್ರವೇ ಕಷ್ಟ ! ಹಾಗಾದ್ರೆ ಇಂತಹಾ ಸಮಯದಲ್ಲಿ ತಾಳ್ಮೆಗೆಡದೇ ಧೃತಿಗೆಡದೆ ಮಂಕಾಗದೇ, ಭರವಸೆಯನ್ನು ಕೊಂದುಕೊಳ್ಳದೇ, ಆತ್ಮವಿಶ್ವಾಸವನ್ನು ಹರಾಜಿಗಿಡದೇ ಗಟ್ಟಿ ಮನಸಿನಿಂದ ನಿಧಾನಕ್ಕೆ ಒಂದೊಂದಾಗಿ ಸವಾಲುಗಳನ್ನು ಎದುರಿಸುವ ಮನಸ್ಥಿತಿ ನಮ್ಮದಾಗಿಸಿ ಕೊಳ್ಳಲೇ ಬೇಕು ! ನಮಗಿಂತಲೂ ಹೆಚ್ಚಿನ ಕಷ್ಟದಲ್ಲಿರುವವರು ಅವುಗಳನ್ನು ಹೇಗೆಲ್ಲಾ ಎದುರಿಸಿ ನಿಂತಿದ್ದಾರೆಂಬುದು ನಮಗೆ ಉದಾಹರಣೆಯಾಗಬೇಕು. ನಿಮ್ಮ ಮುಂದಿರುವ ಸಮಸ್ಯೆಗಳು ಮತ್ತು ಅವುಗಳನ್ನೆದುರಿಸಲು ನಿಮ್ಮಲ್ಲಿರುವ ಪರಿಕರಗಳು ಹಾಗೂ ಅವಕಾಶಗಳು ಇವುಗಳನ್ನು ಜಾಣತನದಿಂದ ಉಪಯೋಗಿಸಿಕೊಳ್ಳುವತ್ತ ಯೋಚಿಸಬೇಕು.

ಫೋಟೋ ಕೃಪೆ : BBC

ಸದಾ ಧನಾತ್ಮಕ ವಾಗಿ ಯೋಚಿಸುವವರ ಪ್ರಾಮಾಣಿಕವಾಗಿ ಸಲಹೆ ನೀಡುವವರ ದನಿಗೆ ಮಾತ್ರವೇ ಕಿವಿಯಾಗಬೇಕು. ಎಲ್ಲಕ್ಕಿಂತ ಮಿಗಿಲಾಗಿ ಸಮಸ್ಯೆಗಳನ್ನು ಎದುರಿಸಿ ನಿಲ್ಲುವೆನೆಂಬ ಆತ್ಮವಿಶ್ವಾಸ, ಎದೆಗುಂದದ ತಾಳ್ಮೆ ಹಾಗೂ ಪ್ರಾಮಾಣಿಕ ಬದ್ದತೆ ಬಹುಮುಖ್ಯ.

ಇವೆಲ್ಲವೂ ಇಲ್ಲಿ ಸರಾಗವಾಗಿ ಟೈಪಿಸಿದಷ್ಟು ಸಲೀಸಲ್ಲ ಎಂಬ ಸರಳ ಸಂಗತಿ ನನಗೆ ಗೊತ್ತಿದೆ. ಅವರವರ ಸಮಸ್ಯೆಯ ಆಳ ಅಗಲ ಗಾತ್ರ…. ಅದನ್ನು ಅನುಭವಿಸಿದವರಿಗಷ್ಟೇ ಗೊತ್ತಿರುತ್ತದೆ. ಬದುಕಲ್ಲಿ ಪೂರಾ ಸೋತು, ಕೈ ಚೆಲ್ಲಿ ಅಪಮಾನ‌- ನೋವು ನುಂಗಿದವರಿಗೆ ಮಾತ್ರವೇ ಅದರ ಎಫ಼ೆಕ್ಟ್ ಏನೂ ಅಂತ ತಿಳಿದಿರುತ್ತದೆ.



ಹೀಗಿದ್ದೂ….. ಎಂತಹ ಸಮಸ್ಯೆಗಳನ್ನಾದರೂ ಎದುರಿಸಬಲ್ಲೆನೆಂಬ‌ ಕೆಚ್ಚೆದೆ ಹಾಗೂ ಆತ್ಮ ವಿಶ್ವಾಸ‌ ನಿಮ್ಮ ಎದೆ‌ಗೂಡಿನಲ್ಲಿ‌ ಭದ್ರವಾಗಿದ್ದಲ್ಲಿ ಅದರಿಂದ ಎಂತಹಾ ಸವಾಲುಗಳನ್ನಾದರೂ ಎದುರಿಸಬಹುದು. ಆ ನಂಬಿಕೆ ಮಾತ್ರ ಕಳೆದುಕೊಳ್ಳಬೇಡಿ. ಅದಕ್ಕಾಗಿ ನಮ್ಮ ಟೈಂ ಸರಿಯಿಲ್ಲವೆಂದು‌ ಕೊರಗಲೂ ಬೇಡಿ ! ಏಕೆಂದರೆ ಟೈಂ ಅನ್ನೋದು ನರರಿಂದ‌ ಹಿಡಿದು ಪಶು ಪಕ್ಷಿ ಪ್ರಾಣಿಗಳಿಗೂ ಭೂಮಿ‌ ಮೇಲಿರುವ ಎಲ್ಲಾ ಜೀವಿಗಳಿಗೂ ಒಂದೇ !

ಲಾಸ್ಟ್ ಪಂಚ್ :

ಜೀವನದಲ್ಲಿ ಎಲ್ಲವೂ ನಿಮ್ಮ ವಿರುದ್ಧವಾಗಿ ಘಟಿಸಿದಾಗ ಒಂದು ಮಾತು ನೆನಪಲ್ಲಿಡಿ.
” ವಿಮಾನವು ಗಾಳಿಗೆ ವಿರುದ್ಧವಾದ ದಿಕ್ಕಿನಲ್ಲಿ ಹಾರುತ್ತದೆಯೇ ಹೊರತು ಗಾಳಿಯ ಜೊತೆಗಲ್ಲ…”


  • ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು), ಹಿರಿಯೂರು

4 1 vote
Article Rating

Leave a Reply

1 Comment
Inline Feedbacks
View all comments

[…] ವಿಶ್ವಾಸ, ಅಭಿಮಾನ, ಹೆಮ್ಮೆ‌ ಮೂಡಲು ಮೂಲತಃ‌ #ಪ್ರೀತಿ ಇರಲೇಬೇಕು. ಸಿಂಪಲ್ಲಾಗಿ ಹೇಳಬೇಕಂದ್ರೆ […]

All Articles
Menu
About
Send Articles
Search
×
1
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW