ನವರಸ ನಾಯಕ ಜಗ್ಗೇಶ್ ಅವರನ್ನು ಹತ್ತಿರದಿಂದ ಕಂಡಂತಹ ಖ್ಯಾತ ಸಿನಿ ಪತ್ರಕರ್ತ ಗಣೇಶ ಕಾಸರಗೋಡು ಅವರ ಲೇಖನಿಯಲ್ಲಿ ಕರ್ಣನನ್ನೇ ಮೀರಿಸುವ ದಾನ ಶೂರ ಈ ಜಗ್ಗೇಶ್ ಕುರಿತು ಲೇಖನ.ಮುಂದೆ ಓದಿ …
ಈ ಅಪರೂಪದ ಜೋಡಿ ಬಗ್ಗೆ ನಾನು ಏನು ಹೇಳಲಿ? ಒಬ್ಬರ ಹೆಸರು – ಜಗ್ಗೇಶ್, ಮತ್ತೊಬ್ಬರ ಹೆಸರು – ಪರಿಮಳ. ಚಿತ್ರ ಪತ್ರಿಕೋದ್ಯಮಕ್ಕೆ ನಾನು ಎಂಟ್ರಿ ಕೊಟ್ಟಲ್ಲಿಂದ ನೋಡುತ್ತಿದ್ದೇನೆ ಈ ಜೋಡಿಯ ಮೋಡಿಯನ್ನು! ಲವ್ವು, ಜೈಲು, ಮದುವೆ, ಸಂಸಾರ, ಮಕ್ಕಳು, ಬಂಧುಗಳು, ವೃತ್ತಿ ಸವಾಲುಗಳು…ಎಲ್ಲವನ್ನೂ ಬಲ್ಲೆ. ಒಂದು ದಿನವೂ ಜಗಳವಾಡಿಲ್ಲವಾ ಈ ಜೋಡಿ? ಇಬ್ಬರಲ್ಲೂ ಸಮಾನವಾದ ನಗು. ಈ ನಗುವೇ ಇವರನ್ನು ಇಷ್ಟು ಎತ್ತರಕ್ಕೆ ಏರಿಸಿ ಬಿಟ್ಟಿತಾ? ಅದಕೂ ಇದಕೂ ಎದಕೂ ನಗುವೇ ಮದ್ದು! ಸುಖ ಸಂಸಾರಕ್ಕೆ ಹನ್ನೆರಡು ಸೂತ್ರವಂತೆ. ಆದರೆ ಇವರ ಸುಖ ಸಂಸಾರಕ್ಕೆ ಒಂದೇ ಸೂತ್ರ – ನಗು!

ಹಳೆಯ ಗೆಳೆಯರನ್ನು ಮರೆಯದ ಸಹೃಯಿ ಈ ನವರಸ ನಾಯಕ. ಉದಾಹರಣೆಗೆ ನಮ್ಮ ಅನುಗಾಲದ ಮಿತ್ರ ಕೆ.ಎನ್. ನಾಗೇಶ ಕುಮಾರ್ ಅವರನ್ನೇ ತೆಗೆದುಕೊಳ್ಳಿ. ವೃತ್ತಿ ಬದುಕಿನ ಆರಂಭದ ದಿನಗಳಿಂದಲೂ ಜಗ್ಗೇಶ್ ಅವರನ್ನು ಸಪೋರ್ಟ್ ಮಾಡುತ್ತಾ ಬಂದ ಗೆಳೆಯ ಈ ನಾಗೇಶ ಕುಮಾರ್. ಈಗಲೂ ಅದೇ ಪ್ರೀತಿ ಅದೇ ವಿಶ್ವಾಸ, ಅದೇ ಗೌರವ. ಜಗ್ಗೇಶ್ ಅವರ ಆ ಕಾಲದ ಫೋಟೋಗಳು ಬೇಕಿದ್ದರೆ ನಾವೆಲ್ಲಾ ಇದೇ ನಾಗೇಶ ಕುಮಾರ್ ಅವರನ್ನೇ ಅವಲಂಬಿಸಬೇಕು!
ಕರ್ಣನನ್ನೇ ಮೀರಿಸುವ ದಾನ ಶೂರ ಈ ಜಗ್ಗೇಶ್! ಎಲ್ಲಿ ಯಾರೇ ತೊಂದರೆಗೀಡಾದರೂ ಅಲ್ಲಿ ಹಾಜರ್. ಮೊನ್ನೆ ಮೊನ್ನೆ ತುಮಕೂರಿನ ಬಡ ಗಾಯಕಿ ಸೋದರಿಯರಿಗೆ ಮನೆ ಕಟ್ಟಿ ಕೊಟ್ಟು ಉಪಕಾರ ಮಾಡಿದ ಜಗ್ಗೇಶ್ ಅಲ್ಲೆಲ್ಲೋ ಹಿಮಾಲಯದಲ್ಲಿ ಕನ್ನಡಿಗ ಸೈನಿಕರೊಬ್ಬರು ತೊಂದರೆಯಲ್ಲಿದ್ದಾರೆ ಎಂದು ತಿಳಿದ ತಕ್ಷಣವೇ ಸ್ಪಂದಿಸುತ್ತಾರೆ. ಬುಲ್ಲೆಟ್ ಪ್ರಕಾಶ್ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯಲ್ಲಿ ಮಲಗಿರುವಾಗ ಬಿಲ್ ಪಾವತಿ ಮಾಡುವ ಮೊದಲ ಮೊತ್ತ ಕೊಟ್ಟದ್ದು ಇದೇ ಜಗ್ಗೇಶ್. ಒಂದಾ ಎರಡಾ?

ಫೋಟೋ ಕೃಪೆ : Vijayavani
ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗ ಬಾರದು ಎಂಬ ಮಾತಿದೆ. ಆದರೆ ಜಗ್ಗೇಶ್ ಥಿಯರಿಯೇ ಬೇರೆ : ‘ಆಚಾರ, ವಿಚಾರ, ಪ್ರಚಾರ!!!’ – ಎಂದು ಹೇಳಿ ನಕ್ಕು ಬಿಡುತ್ತಾರೆ ಜಗ್ಗೇಶ್! ‘ಪ್ರಚಾರ ಯಾಕೆ?’ – ಎಂದು ಪ್ರಶ್ನಿಸಿದರೆ ಉತ್ತರ ಸಿದ್ದ : ‘ನಾನು ಮಾಡುವ ದಾನಕ್ಕೆ ಪ್ರಚಾರ ಸಿಕ್ಕರೆ ಮತ್ತಷ್ಟು ದಾನಿಗಳು ಹುಟ್ಟಿಕೊಳ್ಳುವ ಸ್ವಾರ್ಥ…’ – ಇದು ಸ್ವಾರ್ಥವಲ್ಲ ಗುರುವೇ, ನಿಸ್ವಾರ್ಥ!
ಒಂದು ತೀರಾ ವೈಯಕ್ತಿಕ ವಿಚಾರಕ್ಕೆ ಬರುವುದಿದ್ದರೆ : ‘ಹಾಯ್ ಬೆಂಗಳೂರ್’ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟವಾಯಿತು. ಅದರ ಟೈಟಲ್ : ‘ಪೂಜಾಗಾಂಧಿ ಲವ್ವಿ ಡವ್ವಿ ಪ್ರಕರಣಮು’. ಈ ಲೇಖನದಲ್ಲಿ ಜಗ್ಗೇಶ್ ಹೆಸರನ್ನು ಸೇರಿಸಲಾಗಿತ್ತು. ಲೇಖನ ಬರೆದವರ ಹೆಸರು : ಚಿದಾನಂದ ಪಟೇಲ್. ಆದರೂ ಜಗ್ಗೇಶ್ ತಪ್ಪಾಗಿ ಭಾವಿಸಿ ನಾನೇ ಆ ಲೇಖನವನ್ನು ಬರೆದಿದ್ದೇನೆ ಎನ್ನುವ ಕಾರಣಕ್ಕೆ ಲಾಯರ್ ನೋಟೀಸೊಂದನ್ನು ಕಳಿಸಿ ಕೊಟ್ಟರು! ನಗುವುದೋ ಅಳುವುದೋ ನೀವೇ ಹೇಳಿ. ನಾನು ಕೂಡಾ ಲಾಯರ್ ಮೂಲಕ ಉತ್ತರ ಬರೆದು ‘ಈ ನೋಟೀಸಿಗೆ ಖರ್ಚಾಗಿರುವ 15000 ರೂಪಾಯಿಗಳನ್ನು ಕೊಡುವಂತೆ ವಿನಂತಿಸಿಕೊಂಡೆ. ಆ ಲೇಖನವನ್ನು ನಾನು ಬರೆದಿಲ್ಲ ಎನ್ನುವುದು ಮನದಟ್ಟಾಗುತ್ತಲೇ ಜಗ್ಗೇಶ್ ವಿಷಾದ ವ್ಯಕ್ತಪಡಿಸಿದ್ದಲ್ಲದೇ ತಮ್ಮ ಸಹಾಯಕನ ಕೈಲಿ 15000 ರೂಪಾಯಿಗಳನ್ನು ಕಳಿಸಿಕೊಟ್ಟರು!
ಇದನ್ನೆಲ್ಲಾ ಇಲ್ಲಿ ಯಾಕೆ ಬರೆದೆನೆಂದರೆ ಜಗ್ಗೇಶ್ ಅವರ ವ್ಯಕ್ತಿತ್ವವನ್ನು ಪರಿಚಯಿಸುವುದಕ್ಕೋಸ್ಕರ…

ಈಗ ನೋಡಿದರೆ ಜಗ್ಗೇಶ್ ಮತ್ತೆ ಹೊಸ ಹುರುಪಿನೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ. ಹೊಂಬಾಳೆ ಫಿಲಂಸ್’ನ ವಿಜಯ್ ಕಿರಂಗದೂರ್ ನಿರ್ಮಿಸುತ್ತಿರುವ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದಲ್ಲಿ ನಟಿಸಲು ಹೊರಟಿದ್ದಾರೆ. ದೊಡ್ಡ ಹೆಸರು ಮಾಡಿರುವ ನಿರ್ದೇಶಕರಾದ ಸಂತೋಷ್ ಆನಂದರಾಮ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಜಗ್ಗೇಶ್ ಅವರ ಪೊಗದಸ್ತಾದ ತಲೆಗೂದಲ ಬಗ್ಗೆ ಅತ್ಯಂತ ಕುತೂಹಲಿಯಾಗಿರುವ ನಾನು ಮುಂದೆ ಭೇಟಿಯಾದಾಗ ಕೇಳುವ ಪ್ರಶ್ನೆಯೇ ಇದಾಗಿರುತ್ತದೆ! ಮೂರೂವರೆ ದಶಕದ ಗೆಳೆಯರಾದ ಇವರಿಗೆ ನಾನು ಈ ಮೂಲಕ ಶುಭ ಹಾರೈಸುತ್ತಿದ್ದೇನೆ…
- ಗಣೇಶ ಕಾಸರಗೋಡು (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)
