12ನೇ ಶತಮಾನದ ನಿಜಕಥೆಯೇನೋ ಎನಿಸುವ ‘ಮಾಯೆ’: 

ಕಾದಂಬರಿಗಾರ್ತಿ ಆಶಾ ರಘುರವರ ‘ಮಾಯೆ’ ಕಾದಂಬರಿಯ ಕುರಿತು ಲೇಖಕಿ ವಾಣಿಶ್ರೀ ಕೊಂಚಾಡಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಮಾಯೆ
ಲೇಖಕಿ :  ಆಶಾ ರಘುರ
ಪ್ರಕಾಶನ : ಸಾಹಿತ್ಯಲೋಕ ಪಬ್ಲಿಕೇಷನ್
ಬೆಲೆ : ೨೫೦.೦೦

ಇದು ನಾನು ಓದುತ್ತಿರುವ ಆಶಾ ರಘುರವರ ಮೂರನೇ ಪುಸ್ತಕ. ಎರಡನೆಯ ಕಾದಂಬರಿ. ಈ ಮೊದಲು ಬಹುಮಾನವಾಗಿ ದೊರೆತ ‘ಅಪರೂಪದ ಪುರಾಣ ಕಥೆಗಳು’ ಓದಿದ್ದೆ. ಇಷ್ಟವಾಗಿ ಮತ್ತೆ ಪುಸ್ತಕಗಳನ್ನು ಕೊಂಡೆ. ‘ಗತ’ ಕಾದಂಬರಿಯನ್ನು ಓದಿ ಅನಿಸಿಕೆಯನ್ನು ಹಂಚಿಕೊಂಡಿದ್ದೆ. ಇದೀಗ ‘ಮಾಯೆ’ ಕಾದಂಬರಿಯ ಪರಿಚಯದ ಜೊತೆಗೆ ನನಗೆ ಅನ್ನಿಸಿದ್ದನ್ನು ಹಂಚಿಕೊಳ್ಳುತ್ತಿದ್ದೇನೆ. ಯಾಕೋ ಈ ‘ಮಾಯೆ’ ಎಂಬ ಶೀರ್ಷಿಕೆ ಹಾಗೂ ಮುಖಪುಟದ ಆಕರ್ಷಕ ಚಿತ್ರ ಪುರಾಣದ ಕಥೆಗಳನ್ನು ನನಗೆ ನೆನಪಿಸಿ, ನನ್ನನ್ನು ಮಾಯೆಯೊಳಗೆ ಸಿಲುಕಿಸಿ ಓದುವಂತೆ ಪ್ರೇರೇಪಿಸಿತ್ತು.

ಸುಮಾರು ೧೨ನೇ ಶತಮಾನದ ಕಾಲದ ಕಾಲ್ಪನಿಕ ಕಥೆ ಇದು. ಸ್ಥಳಗಳೂ ಕಾಲ್ಪನಿಕವೇ. ಲೇಖಕಿಯೇ ಹೇಳುವಂತೆ ಇಲ್ಲಿಯ ವಸ್ತು ಅಲ್ಲಮನ…

“ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆ ಎಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೇ ಮಾಯೆ
ಕಾಣಾ ಗುಹೇಶ್ವರಾ “

ಎಂಬ ಪ್ರಸಿದ್ಧವಾದ ವಚನದಿಂದ ಪ್ರೇರಿತವಾಗಿದೆ. ಕಥೆ ಹನ್ನೆರಡನೇ ಶತಮಾನದ್ದಾದರೂ ಅದರಲ್ಲಿ ಬರುವ ಪಾತ್ರಗಳು ಅದರ ಸೋಲು, ಗೆಲುವು… ಆ ಮೂಲಕ ಅದು ಹೇಳುವ ಮೌಲ್ಯಗಳು ಇಂದಿಗೂ ಪ್ರಸ್ತುತವಾದದ್ದು. ಯೋಚಿಸಿದರೆ ಹೌದಲ್ವಾ?! ಅಂದೂ ಇಂದೂ ಕೂಡ ಮನದ ಆಸೆ ಎನ್ನುವುದು ಬದುಕಿನ ಎಲ್ಲಾ ಆಗು ಹೋಗುಗಳಿಗೆ ಕಾರಣವಾಗಿ ಸಂತೋಷಕ್ಕಿಂತ ಹೆಚ್ಚು ದುಃಖವನ್ನೇ ತರುತ್ತದೆ.

ಗೌತಮ ಬುದ್ಧನೂ ಇದನ್ನೇ ಹೇಳಿದ್ದಾನೆ. ಕಾದಂಬರಿಯ ಬಗ್ಗೆ: ತಾರುಪುರವನ್ನು ರಾಜಧಾನಿಯನ್ನಾಗಿಸಿಕೊಂಡ ಹಯವದನ ಸಂಸ್ಥಾನದ ಅರಸ ಚಂದ್ರಸೇನರ ತಂದೆ ಪ್ರಭುಸೇನ. ಅವರ ಕಾಲದಲ್ಲಿ ಬಲ್ಲಪ್ಪಣ್ಣ ಎಂಬವರು ಯುದ್ಧದಲ್ಲಿ ಮಡಿದಾಗ ಅವರ ಕುಟುಂಬಕ್ಕೆಂದು ಭೂದತ್ತಿ ಕೊಡುತ್ತಾರೆ. ಅವರ ಆ ಮಕ್ಕಳೇ ಮೇರುಕಯ್ಯ ಮತ್ತು ಸಾನಗ. ಇವರಿಬ್ಬರೂ ಚಿಕ್ಕವರಾದ ಕಾರಣ ಬಲ್ಲಪ್ಪಣ್ಣನ ಪತ್ನಿ ನಾಗಮ್ಮ ಭೂಮಿಯನ್ನು ಗೇಣಿಗೆ ಕೊಟ್ಟು ಸಾಗುವಳಿ ಮಾಡುತ್ತಿರುತ್ತಾರೆ. ಬೆಳೆಯುತ್ತಾ ಹೋದಂತೆ ಗೇಣಿಕಾರರೊಂದಿಗೆ ಹೆಚ್ಚು ನಿಕಟವಾಗಿರುವ ಮೇರುಕಯ್ಯನವರಿಗೆ ವಿಸ್ತಾರದ ಭೂಮಿಯ ಮೇಲೆ ಇದ್ದ ವ್ಯಾಮೋಹ ಹೆಚ್ಚಾಗುತ್ತದೆ. ನಾಗಮ್ಮ ತಾನು ತೀರಿಹೋಗುವ ಮೊದಲು ಹಿರಿಮಗ ಮೇರುಕಯ್ಯನ ಬಳಿ “ತಂದೆಯ ಬಲಿದಾನದಿಂದ ಬಂದ ಭೂಮಿ ಇದು, ಇನ್ನು ನೀವಿಬ್ಬರೂ ಭಾಗ ಮಾಡಿ, ತಮ್ಮ ಸಾನಗ ಮೆದು ಸ್ವಭಾವದವನು, ಅವನಿಗೆ ಮೋಸ ಮಾಡಬೇಡ” ಎಂದು ಹೇಳಿ ಭಾಷೆ ತೆಗೆದುಕೊಂಡು ತೀರಿ ಹೋಗುತ್ತಾಳೆ. ಆ ಸಮಯದಲ್ಲಿ ವೈದ್ಯರನ್ನು ಕರೆ ತರಲು ಹೋಗಿದ್ದ ಸಾನಗನಿಗೆ ಇದು ತಿಳಿಯಲಾರದೇ ಹೋದರೂ ಅವನ ಮಗನಾದ ಜಯಕೀರ್ತಿ ಇದನ್ನು ಕೇಳಿಸಿಕೊಂಡಿರುತ್ತಾನೆ. ತಾಯಿಯ ಕಾರ್ಯಗಳು ಮುಗಿದ ಮೇಲೆ ಮೇರುಕಯ್ಯ ತಮ್ಮನೊಡನೆ “ನನಗೆ ನಾಲ್ಕು ಜನ ಮಕ್ಕಳು. ನಿನ್ನಗೊಬ್ಬನೇ ಮಗ, ಅದರಂತೆ ಆಸ್ತಿ ಹಂಚಿಕೊಳ್ಳಿ ಅಂದಿದ್ದಾರೆ ಅಮ್ಮ” ಎನ್ನುತ್ತಾನೆ. ಮೆದು ಸ್ವಭಾವದವನಾದ ಸಾನಗ ವಿಧೇಯದಿಂದ ಒಪ್ಪುತ್ತಾನೆ. ಪರಿಣಾಮವಾಗಿ ಮೇರುಕಯ್ಯ ವಿಸ್ತಾರವಾದ ಕೃಷಿ ಭೂಮಿ, ತೋಟ, ಮನೆಗಳಿಗೆ ಮುಳ್ಳಿನ ಬೇಲಿ ಹಾಕಿಸಿಕೊಂಡು ತಮ್ಮದಾಗಿಸಿಕೊಳ್ಳುತ್ತಾನೆ, ಅಷ್ಟೇ ಅಲ್ಲದೆ ಹಂತ ಹಂತವಾಗಿ ಆ ಬೇಲಿ ಕಾಲಕಾಲಕ್ಕೆ ಮತ್ತಷ್ಟು ಜರುಗುತ್ತಾ ಬರುತ್ತದೆ.

ಸಾನಗ ತನ್ನ ಮಗ ಜಯಕೀರ್ತಿ ಹಾಗೂ ಪತ್ನಿಯೊಡನೆ ತುಂಡು ಭೂಮಿಯೊಂದಿಗೆ ತಾರುಪುರದ ಅಂಚಿಗೆ ಇದ್ದ ಪೂರ್ವಿಕರ ಹಳೆಯ ತೋಟದಲ್ಲಿ ನೆಲೆಸುತ್ತಾನೆ. ಅದರ ಪಕ್ಕದಲ್ಲಿರುವುದೇ ಅನಂತನಾಥರ ಮನೆ. ಅವರ ಮಗಳೇ ವೈಶಾಲಿ. ಜಯಕೀರ್ತಿ ಹಾಗೂ ವೈಶಾಲಿಯ ಬಾಲ್ಯ ಕಳೆದದ್ದು ಜೊತೆಯಲ್ಲಿಯೇ. ವೈಶಾಲಿಯ ಅಂಗರಕ್ಷಕ ಜಯಕೀರ್ತಿ ಎಂದರೂ ಸರಿಯೇ. ಬಾಲ್ಯ ಸ್ನೇಹಿತರು ಬೆಳೆಯುತ್ತಿದ್ದಂತೆ ಅವರ ಭಾವನೆಗಳೂ ಬದಲಾಗುತ್ತ ಹೋಗುತ್ತದೆ. ಸ್ನೇಹಿತರಾದವರು ಪ್ರೇಮಿಗಳಾಗುತ್ತಾರೆ. ಇವರಿಬ್ಬರ ಪ್ರೇಮಕ್ಕೆ ಸೇತುವಾಗಿ, ನೀರೆರೆದು ಪೋಷಿಸಿದವನು ಮದನ ಕುಮಾರ.

ಗರಡಿ ಮನೆಗೆ ಹೋಗುತ್ತಿದ್ದ ಜಯಕೀರ್ತಿಗೆ ಅಲ್ಲಿನ ಗುರು ಸಿದ್ಧವೀರಪ್ಪನವರು ಒಮ್ಮೆ ಮಲ್ಲವಿದ್ಯೆ ಪ್ರವೀಣ ದಾಂಡಿಗ ಸೋಣಪ್ಪನೊಡನೆ ಸೆಣೆಸುವಂತೆ ಸವಾಲೊಡ್ಡುತ್ತಾರೆ. ಆ ಕದನದಲ್ಲಿ ಜಯಕೀರ್ತಿ ಗೆಲುವಾದಾಗ ಹೆಚ್ಚು ಖುಷಿಪಟ್ಟು ಜಯಕೀರ್ತಿಯ ಸ್ನೇಹವನ್ನು ಮಾಡಿದವನು ಈ ಮದನ ಕುಮಾರ. ಕೀರಲು ಧ್ವನಿ ಹಾಗೂ ಸ್ವಲ್ಪ ದುರ್ಬಲ ಶರೀರ ಹೊಂದಿದ ಮದನ ಆ ಗರಡಿಯ ವಿದ್ಯಾರ್ಥಿಯೇ. ಯಾವುದೋ ಹಳೆಯ ಘಟನೆಗೆ ಸಂಬಂಧಿಸಿದ ದಾಂಡಿಗ ಸೋಣಪ್ಪನೆಂದರೆ ಮದನನಿಗೆ ಮುನಿಸು. ಇದೀಗ ಆತನನ್ನು ಸೋಲಿಸಿದ ಜಯಕೀರ್ತಿಯನ್ನು ಕಂಡರೆ ಅಕ್ಕರೆ.

ಗೆಳೆಯನ ಸಹಕಾರ, ಮನೆಯವರ ಪ್ರೋತ್ಸಾಹ ಇದ್ದರೂ ಜಯಕೀರ್ತಿಗೆ ವೈಶಾಲಿಯನ್ನು ದಕ್ಕಿಸಿಕೊಳ್ಳಲಾಗುವುದಿಲ್ಲ. ಧಾರೆಯೆರೆದು ಕೊಡುವ ಭಾಗ್ಯ ಹೆತ್ತವರಿಗಿರುವುದಿಲ್ಲ. ತಾರುಪುರದ ಅರಸ ಚಂದ್ರಸೇನರ ಆಸ್ಥಾನದಲ್ಲಿ ಕರಣಿಕರಾಗಿದ್ದ ವೈಶಾಲಿಯ ತಂದೆ ಮಾಡಿದ ತಪ್ಪು ಲೆಕ್ಕದಿಂದ ಬೊಕ್ಕಸಕ್ಕೆ ನಷ್ಟವಾಗಿರುತ್ತದೆ. ಹಿಂದಿನ ಲೆಕ್ಕ ಸರಿ ಮಾಡಿ ಯಾರಿಂದ ವಸೂಲು ಮಾಡಬೇಕಾಗಿದೆಯೋ ಅವರನ್ನು ಸಂಪರ್ಕಿಸಿದಾಗ ಆತ ತೀರಿಹೋಗಿರುವುದು ಗಮನಕ್ಕೆ ಬರುತ್ತದೆ. ಆತನ ಮಗ ‘ಆಗಲ್ಲ’ ಎನ್ನುತ್ತಾನೆ. ಹೀಗಾಗಿ ಇದೆಲ್ಲಾ ವೈಶಾಲಿಯ ಅಪ್ಪನ ತಲೆಗೆ ಸುತ್ತಿಕೊಂಡು ತಮ್ಮ ತುಂಡುಭೂಮಿಯನ್ನು ಬರೆದುಕೊಟ್ಟರೂ ಸರಿದೂಗಿಸಲಾಗುವುದಿಲ್ಲ. ಕಡೆಗೆ ಯಾರದೋ ಮೂಲಕ ಸಾಂಗತ್ರಿಯ ತಮ್ಮಣ್ಣ ಶೆಟ್ಟಿಯವರ ವಿಚಾರ ತಿಳಿದು ಅವರ ಮಗನಿಗೆ ವೈಶಾಲಿಯನ್ನು ಮದುವೆ ಮಾಡಿಕೊಡುತ್ತಾರೆ. ಏಕೆಂದರೆ ಕನ್ಯಾ ಶುಲ್ಕ ಕೊಟ್ಟು ಹೆಣ್ಣು ತರುವುದು ಅವರ ಮನೆಯ ಪದ್ಧತಿಯಾಗಿರುತ್ತದೆ. ಇಷ್ಟೆಲ್ಲಾ ಕಾರ್ಯಗಳು ನಡೆಯಬೇಕಾದರೆ, ಜಯಕೀರ್ತಿ ಮನೆಯಲ್ಲಿದ್ದರೆ ಅಡ್ಡಿಯಾಗುತ್ತಾನೆಂದು, ಇಬ್ಬರ ಹೆತ್ತವರೂ ಮುಂದಾಲೋಚಿಸಿ ಆತನನ್ನು ಮೊದಲೇ ಯಾವುದೋ ಕೆಲಸ ಹಚ್ಚಿ ಬೇರೆ ಊರಿಗೆ ಕಳಿಸಿರುತ್ತಾರೆ.

ಆ ಊರಲ್ಲಿದ್ದ ಜಯಕೀರ್ತಿಗೆ ಮದನದಿಂದ ಈ ವಿಚಾರ ತಿಳಿದಾಗ ನೋವಾಗುತ್ತದೆ. ಮರಳಿ ಬಂದ ಆತನಿಗೆ ವೈಶಾಲಿ ಅಪ್ಪ ಸ್ವತಃ ಕಥೆಯನ್ನು ಹೇಳುತ್ತಾರೆ. ಈ ಘಟನೆಯ ನಂತರ ಜಯಕೀರ್ತಿ ಬದಲಾಗುತ್ತಾನೆ. ಎಲ್ಲಾ ವಿಷಯಗಳಲ್ಲೂ ಅನಾಸಕ್ತಿಯನ್ನು ಬೆಳೆಸಿಕೊಂಡು ಸರಿಯಾಗಿ ಉಣ್ಣದೆ, ಸುರೆಯ ದಾಸನಾಗಿ, ಪೊದೆಯಂತೆ ಗಡ್ಡ ಮೀಸೆಗಳನ್ನು ಬಿಟ್ಟು ಹುಚ್ಚನಂತೆ ತಿರುಗುತ್ತಿರುತ್ತಾನೆ. ಇದನ್ನು ಕಂಡ ಹೆತ್ತವರಿಗೆ ದಿಗಿಲಾಗುತ್ತದೆ. ತಂದೆ ಉಪಾಯದಿಂದ ಜಯಕೀರ್ತಿಗೆ ಗೊತ್ತಾಗದಂತೆ ಸೇನಾ ನಾಯಕರಾದ ರುದ್ರಬಾಹುವಿನ ಜೊತೆ ಮಾತನಾಡಿ ಮನೆಗೆ ಬರುವಂತೆ ಮಾಡುತ್ತಾರೆ. ಅವರು ಜಯಕೀರ್ತಿಯನ್ನು ಸೇನೆಗೆ ಸೇರಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಸೇನೆಗೆ ಸೇರಿದ ಜಯಕೀರ್ತಿ ಮೊದಲಿನಂತೆ ಮನುಷ್ಯನಾಗುತ್ತಾನೆ. ಕ್ರಮೇಣ ಮನೆಯವರು ಆತನಿಗೆ ಮುತ್ತಳ್ಳಿಯ ಮಂಗಳೆಯ ಜೊತೆ ಮದುವೆ ಮಾಡುತ್ತಾರೆ. ಕೆಲಸಮಯದಲ್ಲಿ ಮಗುವೂ ಜನಿಸುತ್ತದೆ. ಆದರೆ ಬಾಣಂತನಕ್ಕೆ ತವರು ಮನೆಗೆ ಹೋದ ಮಂಗಳೆ ಮನೆಗೆ ಬರಲು ಒಪ್ಪುವುದಿಲ್ಲ. ತೊಟ್ಟಿಲ ಶಾಸ್ತ್ರಕ್ಕೆಂದು ಹೋದ ಜಯಕೀರ್ತಿಯ ಬಳಿ ಆಕೆ “ನಿಮ್ಮ ತಂದೆ ತಾಯಿಗಳ ಕಾಲ ಮುಗಿಯಿತು. ನಿಮ್ಮ ಪಾಲಿಗೆ ಸೇರಬೇಕಾದ ಭೂಮಿ ಮೊದಲು ನಿಮ್ಮದಾಗಲಿ. ಆಮೇಲೆ ಈ ವಾರಸುದಾರನನ್ನು ಕರೆದುಕೊಂಡು ಬರ್ತೀನಿ ಅಲ್ಲಿವರೆಗೂ ನಾನು ಈ ತವರು ಬಿಟ್ಟು ಕದಲಲ್ಲ” ಅನ್ನುತ್ತಾಳೆ.

‘ಆಸೆ’ ಎಂಬ ಪದದಿಂದ‌ ತುಸು ದೂರವೇ ಇದ್ದ ಜಯಕೀರ್ತಿಗೆ ಈ‌ ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡಾಗ ಮಂಗಳೆಯ ಮಾತುಗಳು ನ್ಯಾಯಯುತವಾದದ್ದೇ ಅನ್ನಿಸತೊಡಗುತ್ತದೆ. ಪ್ರಭಾವ ಹೆಂಡತಿಯದ್ದಾದರೂ, ಇಲ್ಲಿಂದ ಪ್ರಾರಂಭವಾದ ಜಯಕೀರ್ತಿಯ ಆಸೆ ಬೆಳೆಯುತ್ತಾ ಹೋಗುತ್ತದೆ. ಕೂಡಲೇ ಕಾರ್ಯಪ್ರವೃತ್ತನಾಗುತ್ತಾನೆ. ತನ್ನ ಗಂಡ ದಾಯಾದಿಗಳಿಂದ ತಮ್ಮದೆನಿಸಿದ ಭೂಮಿಯನ್ನು ದಕ್ಕಿಸಿಕೊಂಡ ಸುದ್ದಿ ಕೇಳಿದ ಮಂಗಳೆ ಕೊನೆಗೂ ಗಂಡನ ಜೊತೆ ಮನೆಗೆ ಮರಳುತ್ತಾಳೆ.

ಫಲವತ್ತಾದ ಭೂಮಿಯಲ್ಲಿ ರಾಶಿ ರಾಶಿ ಧವಸ ಧಾನ್ಯಗಳು, ಬಂದ ಲಾಭದಲ್ಲಿ ಮುಂದಿನ ಸಲವೇ ಜಯಕೀರ್ತಿ ಭವ್ಯವಾದ ಮಹಲನ್ನು ಕಟ್ಟಿ ಅಲ್ಲೇ ವಾಸ ಮಾಡುತ್ತಾರೆ. ಮಗಳೂ ಜನಿಸುತ್ತಾಳೆ. ಆಸ್ತಿಯಿಂದ ಬಂದ ಸುಖದಲ್ಲಿ ತೇಲಿಹೋದ ಜಯಕೀರ್ತಿಗೆ ಇನ್ನಷ್ಟು ಭೂಮಿಯನ್ನು ಒತ್ತರಿಸಿಕೊಳ್ಳುವ ಆಸೆಯಾಗುತ್ತದೆ. ಎಷ್ಟೇ ಜಗಳ ಚರ್ಚೆಯಾದರೂ ಬಿಡದೆ ಒಟ್ಟು ಭೂಮಿಯಲ್ಲಿ ದಾಯಾದಿಗಳಿಗೆ ಕಾಲು ಭಾಗ ಮಾತ್ರ ಉಳಿಸಿ ಉಳಿದದ್ದನ್ನೆಲ್ಲ ತನ್ನ ವಶಕ್ಕೆ ಮಾಡಿಕೊಳ್ಳುತ್ತಾನೆ. ಅಷ್ಟಕ್ಕೇ ನಿಲ್ಲುವುದಿಲ್ಲ. ಹೀಗೆ ಒಂದರ ಹಿಂದೊಂದು, ಅಕ್ಕ ಪಕ್ಕದವರ ಭೂಮಿಯ ಮೇಲೆ ಕಣ್ಣು ಬೀಳತೊಡಗಿ ಬೇಲಿಯನ್ನು ಹಾಕಿಸುತ್ತಾ, ದಬಾಯಿಸುತ್ತಾ ತನ್ನ ಶಕ್ತಿ ಪ್ರದರ್ಶನ ಮಾಡಿ ಇಡೀ ವಿಸ್ತಾರವಾದ ಭೂಮಿಗೆ ಒಡೆಯನಾಗಿ ಯಾರೇನೇ ಅಂದರೂ, ಶಾಪ ಹಾಕಿದರೂ ಜೀರ್ಣಿಸಿಕೊಂಡು ಬದುಕುತ್ತಾನೆ.

ಇಷ್ಟೇ ಅಲ್ಲದೆ ಕುರುಡು ಅಜ್ಜಿಯ ತುಂಡು ಭೂಮಿಗೆ ಕಣ್ಣು ಹಾಕಿ ವಶಪಡಿಸಿ ಆಕೆ ಬೆಂಕಿಗೆ ಹಾರುವಂತೆ ಮಾಡುತ್ತಾನೆ, ರಕ್ಷಿಸಿದರೂ ಆಕೆ ಬದುಕುವುದಿಲ್ಲ. ಊರ ಪ್ರಮುಖರ ಮುಂದೆ ನಿಜಾಂಶ ಮುಚ್ಚಿಟ್ಟು ಹೇಳಿಕೆ ನೀಡುತ್ತಾನೆ. ಯುವನಾಯಕ ಎಂಬ ಆಯಕಟ್ಟಿನ ಸ್ಥಾನಮಾನ ದೊರೆತ ಮೇಲೆ ಸೇನೆಯ ಹಿರಿಯ ತಲೆಗಳಿಗೆ ಆಪ್ತನಾಗಿ ತನ್ನ ವಿರುದ್ಧ ಚಕಾರವೆತ್ತದಂತೆ ಮಾಡುತ್ತಾನೆ. ಸುಖದ ಅಮಲಿನಲ್ಲಿ, ಉತ್ತುಂಗದಲ್ಲಿದ್ದ ಭಾವದಲ್ಲಿ ತೇಲಾಡುತ್ತಾ ಇರುತ್ತಾನೆ.

ಇವನ ಈ ವರಸೆಯನ್ನು ನೋಡುತ್ತಿದ್ದ ಮಂಗಳೆ “ಈ ಬುದ್ಧಿ ನಿಮಗೆ ಮೊದಲೇ ಇದ್ದಿದ್ದರೆ ಆ ವೈಶಾಲಿ ನಿಮ್ಮನ್ನು ಬಿಟ್ಟೇ ಹೋಗುತ್ತಿರಲಿಲ್ಲ” ಎನ್ನುತ್ತಾಳೆ. ಇಷ್ಟು ದಿನ ಹೊಳೆಯದ ಪ್ರಶ್ನೆಗೆ ಉತ್ತರವನ್ನು ಯೋಚಿಸತೊಡಗಿದಾಗ ಸ್ವತಃ ಜಯಕೀರ್ತಿಗೆ… ಹೌದಲ್ಲಾ, ಆಗ ತನ್ನ ಬಳಿಯೂ ಹಣ ಇದ್ದಿದ್ದರೆ? ಬದುಕೇ ಬದಲಾಗುತ್ತಿತ್ತಲ್ಲವೇ? ಪ್ರೀತಿಸಿದ ಹುಡುಗಿಯೇ ಬಾಳಸಂಗಾತಿಯಾಗಿ… ಆದರೇನಂತೆ ಈಗ ತನ್ನಲ್ಲಿ ಅಪಾರ ಧನವಿದೆ, ಪ್ರೀತಿಸಿದ ಹೆಣ್ಣೇ ಬಳಿಯಲ್ಲಿಲ್ಲದಿದ್ದರೆ? ಅದೂ ಒಂದು ಬದುಕೇ? ಎಂದು ಕಾಣಲು ತೊಡಗಿ ವೈಶಾಲಿಯನ್ನು ಅಪರಿಸಲು ಕಾರ್ಯ ಪ್ರವೃತ್ತನಾಗುತ್ತಾನೆ, ಜಯವೂ ಸಿಗುತ್ತದೆ.

ಆನಂತರ ಆಕೆಯನ್ನು ತನ್ನ ಮನೆಗೆ ಕರೆತಂದು ಕೂಡಿಹಾಕಿ, ನೋಡಿಕೊಳ್ಳಲು ನಂಬಿಕಸ್ಥ ಆಳಾದ ಮಹೇಶ್ವರಿಯನ್ನು ನೇಮಿಸುತ್ತಾನೆ. ಆಕೆಯನ್ನು ವಿವಾಹವಾಗುವ ಬಯಕೆ ಜಯಕೀರ್ತಿಯದು. ಆದರೆ ಎಲ್ಲೂ ಆಕೆಯನ್ನು ಬಲಾತ್ಕಾರ ಮಾಡದೆ ತಾನಾಗಿಯೇ ಒಪ್ಪುವಂತೆ ಬೇಕಾದ ಹುನ್ನಾರಗಳನ್ನು ಮಾಡುತ್ತಾನೆ.

ಇಷ್ಟೆಲ್ಲ ನಡೆಯುತ್ತಿದ್ದಾಗ ಕೆಲ ದಿನಗಳಿಂದ ಹಾಸಿಗೆ ಹಿಡಿದ ಮದನನ ತಂದೆ ದೇವಪ್ಪನವರು ತೀರಾ ಅಸ್ವಸ್ಥರಾಗುತ್ತಾರೆ. ಅವರು ಮದನನ ಬಳಿ ಜಯಕೀರ್ತಿಯನ್ನು ಕರೆದುಕೊಂಡು ಬರಲು ಹೇಳುತ್ತಾರೆ. ಮಗನ ಕೋರಿಕೆಯ ಮೇರೆಗೆ ಮನೆಗೆ ಹೋದ ಜಯಕೀರ್ತಿ ಮತ್ತು ಮದನ ಇಬ್ಬರನ್ನು ಮಾತ್ರ ದೇವಪ್ಪನವರು ತನ್ನ ಕೋಣೆಯೊಳಗೆ ಇರಲು ಹೇಳಿ ಇಷ್ಟು ವರ್ಷಗಳಿಂದ ಬಚ್ಚಿಟ್ಟ ಮದನನ ಜನ್ಮರಹಸ್ಯವನ್ನು ಬಿಚ್ಚಿಡುತ್ತಾರೆ .

ಗತಿಸಿದ ಹರ್ಷವರ್ಧನನ ಮಕ್ಕಳು ಕೀರ್ತಿದೇವ ಮತ್ತು ನಿತ್ಯದೇವ. ಹಿರಿಯ ರಾಣಿಯ ಮಗನಾದ ಅಣ್ಣ ಕೀರ್ತಿದೇವ ವಿದ್ಯಾವಂತ, ಬುದ್ಧಿವಂತ, ಸಜ್ಜನನಾದರೆ, ಕಿರಿಯ ರಾಣಿಯ ಮಗನಾದ ತಮ್ಮ ನಿತ್ಯದೇವನದು ಕುಬ್ಜ ಮನಸ್ಸು, ಕೃತ್ರಿಮ ಬುದ್ಧಿ. ಮಹಾರಾಜರ ಕಾಲಾನಂತರ ಇವರ ಭಿನ್ನ ಸ್ವಭಾವದಿಂದಾಗಿ ಕಾಲಕ್ರಮೇಣ ಇಬ್ಬರಲ್ಲೂ ವೈಮನಸ್ಸು, ಮನಸ್ತಾಪಗಳು, ಜಗಳಗಳು ಉಂಟಾಗುತ್ತದೆ. ಹೀಗಿರುವಾಗ ವಿಭಾನಗರಿಯ ಅರೆಮನೆಯ ಅಂತಃಪುರದ ನೆಲಮಾಳಿಗೆಯಲ್ಲಿದ್ದ ಪೂರ್ವಿಕರ ನಿಧಿಯ ಮೇಲೆ ತಮ್ಮನ ಕಣ್ಣು ಬಿದ್ದ ವಿಷಯ ಕೀರ್ತಿದೇವರಿಗೆ ತಿಳಿಯುತ್ತದೆ. ಹಾಗಾದರೆ ಮುಂದೆ ಇಬ್ಬರ ನಡುವೆ ಯುದ್ಧ ನಡೆದೀತೆಂದು ಮನಗಂಡು ಅವರು ನಿಧಿಯನ್ನು ಸುರಕ್ಷಿತವಾದ ಜಾಗಕ್ಕೆ ತಲುಪುವ ವ್ಯವಸ್ಥೆ ಮಾಡುತ್ತಾರೆ.
ಆನಂತರ ಅವರ ಎಣಿಕೆಯಂತೆ ಸತತ ನಾಲ್ಕು ದಿನಗಳ ಕಾಲ ನಡೆದ ಯುದ್ಧದಲ್ಲಿ ಅಣ್ಣ ಕೀರ್ತಿದೇವ ಮರಣಿಯುತ್ತಾರೆ. ರಾಣಿ ಸುಗುಣಾದೇವಿ ತನ್ನ ಕಂದನಾದ ಸುಧನ್ವನನ್ನು ದಾಸಿ ಪಾರ್ವತಿಯ ವಶಕ್ಕೆ ಒಪ್ಪಿಸಿ ಚೂರಿಯಿಂದ ತನ್ನನ್ನು ತಾನು ಇರಿದುಕೊಂಡು ಸಾಯುತ್ತಾಳೆ. ದಿಕ್ಕು ಕಾಣದ ಪಾರ್ವತಿ ಹಾಗೂ ಸುಧನ್ವನನ್ನು, ಮಹಾರಾಜರ ಪಾದ ಒತ್ತುವ ದಾಸ ಗಣ ನೋಡುತ್ತಾನೆ. ಅವರಿಬ್ಬರನ್ನು ಕರೆದುಕೊಂಡು, ನಿತ್ಯದೇವನಿಂದ ರಾಜಕುಮಾರನನ್ನು ಕಾಪಾಡುವ ಉದ್ದೇಶದಿಂದ, ಸಾಯುವ ಮೊದಲು ರಾಣಿ ಹೇಳಿದ ಸುರಂಗದ ಹಾದಿಯಲ್ಲಿ ಪ್ರಯಾಣಿಸಿ ತಾರುಪುರ ತಲುಪುತ್ತಾರೆ. ಇಷ್ಟು ಕಥೆ ಹೇಳಿದ ದೇವಪ್ಪನವರು ಇದೀಗ ಆ ಸುಧನ್ವನೇ ಈ ಮದನನೆಂದೂ, ತಾನೇ ಗಣ ಹಾಗೂ ಮನೆಯಲ್ಲಿರುವ ಹೊನ್ನಜ್ಜಿಯೇ ಪಾರ್ವತಿಯೆಂದೂ ಹೇಳುತ್ತಾರೆ. ಹಾಗೂ “ಇಷ್ಟು ದಿನಗಳ ಕಾಲ ಮದನನ ಕ್ಷೇಮದ ದೃಷ್ಟಿಯಿಂದ ನಿಧಿಯ ರಹಸ್ಯವನ್ನು ಮುಚ್ಚಿಟ್ಟೆ. ಇನ್ನು ನನ್ನ ಕಾಲವಾಯಿತು. ಹಾಗಾಗಿ ಹೇಳಿದೆ” ಎನ್ನುತ್ತಾ ತಾವು ಕುಳಿತಿದ್ದ ಮಂಚದ ಕೆಳಗಿದ್ದ ಒಂದು ಲೋಹದ ಪೆಟ್ಟಿಗೆ ತೆರೆದು ಅದರೊಳಗಿದ್ದ ಉಂಗುರವನ್ನು ಮದನನಿಗೆ ಕೊಡುತ್ತಾ ‘ತಗೋ ಇದು ನಿಮ್ಮ ತಂದೆಯವರ ಮುದ್ರೆಯುಂಗುರ, ರಾಜಲಾಂಛನದ ಅಶ್ವನೇತ್ರದ ಚಿತ್ರವಿದೆ” ಎನ್ನುತ್ತಾ ಇನ್ನೊಂದು ಸಣ್ಣ ಕೊಳವೆಯನ್ನು ಹೊರತೆಗೆದು, ಅದನ್ನೂ ಕೊಟ್ಟು “ಕೊಳವೆಯ ಬಿರಡೆ ತೆಗೆದು, ಅದರೊಳಗಿರುವ ಓಲೆಯನ್ನು ಹೊರಕ್ಕೆ ಎಳೆದು, ‘ನೋಡು ಇದರಲ್ಲಿ ನಿಮ್ಮ ತಂದೆಯವರು ನಿನಗೆ ಬರೆದಿರುವ ಪತ್ರವಿದೆ’ ಎನ್ನುತ್ತಾರೆ. ಆನಂತರ ಮದನನೊಡನೆ “ನಿಕ್ಷೇಪದ ಹಿಂದೆ ಬಿದ್ದು ದಕ್ಕಿಸಿಕೊಳ್ಳುವ ಕೆಲಸ ಸಾಮಾನ್ಯವಲ್ಲ. ದೈಹಿಕ ದೌರ್ಬಲ್ಯ ಹೊಂದಿದ ನಿನಗೆ ಅದು ಅಸಾಧ್ಯ” ಎನ್ನುತ್ತಾ ಜಯಕೀರ್ತಿಯಲ್ಲಿ “ಅವನಲ್ಲಿ ಇರದ ಶಕ್ತಿ ನೀನಾಗಿ ಆತನ ರಕ್ಷಣೆಯ ಭಾರವನ್ನು ಹೊರಬೇಕು” ಎನ್ನುತ್ತಾ ತನಗೆ ಹೋಗಲು ಅನುಮತಿ ನೀಡಿ, ಎಂದು ಹೇಳಿ ಕೆಲವೇ ಗಂಟೆಗಳಲ್ಲಿ ಸಾಯುತ್ತಾರೆ.

ದೇವಪ್ಪನವರ ಕಾರ್ಯ ಮುಗಿದ ಮೇಲೆ ಜಯಕೀರ್ತಿ, ಮದನ ಇಬ್ಬರೂ ಕೂಡಿ ಪತ್ರವನ್ನು ಓದುತ್ತಾರೆ. ನಂತರ ಜಯಕೀರ್ತಿ ಮದನನ ಜೊತೆ ನಿಧಿಯ ಹುಡುಕಾಟಕ್ಕೆ ಹೋಗಬೇಕಾದ್ದರಿಂದ ಮುಂಜಾಗ್ರತೆಯಾಗಿ ಭದ್ರತಾ ವ್ಯವಸ್ಥೆಗಳ ಜೊತೆಗೆ ವೈಶಾಲಿಯನ್ನು ನೀರುಗುಪ್ಪೆಯ ಕೊಂಡಜ್ಜಿಯ ಮನೆಗೆ ಸಾಗಿಸುತ್ತಾನೆ.
ಮುಂದೇನಾಯಿತು? ….

ಕಥೆ ಇನ್ನೂ ತುಂಬಾ ಇದೆ,

ಸುಮಾರು ಮಾಸಗಳ ಕಾಲ ನಿಧಿಯ ಹುಡುಕಾಟಕ್ಕೆ ಜಯಕೀರ್ತಿ ಮದನನ ಜೊತೆ ಹೋದಾಗ ಇತ್ತ ವೈಶಾಲಿ ಏನಾದಳು? ಮದನನ ಜೊತೆಯಾದ ಜಯಕೀರ್ತಿ ನಿಕ್ಷೇಪವನ್ನು ಭೇದಿಸಲು ಜೊತೆಯಾದನೇ? ಅಥವಾ ಆಸೆಯೆಂಬ ‘ಮಾಯೆ’ಯೊಳಗೆ ಸಿಲುಕಿ ಸ್ನೇಹಿತನಿಗೇ ದ್ರೋಹ ಬಗೆದನೇ? ಸ್ಥಿತಪ್ರಜ್ಞ ಮನೋಭಾವದ ಮದನನ ಬದುಕು ಏನಾಯಿತು? ತನ್ನ ದೈಹಿಕ ಸಾಮರ್ಥ್ಯದಿಂದ ಹಾಗೂ ಅಪಾರ ಧನದಬಲದಿಂದ ಇನ್ನೇನು ನಿಧಿಯನ್ನು ಪಡೆದೇ ಪಡೆಯುತ್ತೇನೆಂಬ ಜಯಕೀರ್ತಿಯ ಅಹಂಕಾರಕ್ಕೆ ಕೊನೆಯಾಯಿತೇ? ಪತ್ರದಲ್ಲಿದ್ದಂತೆ ರಾಜಗುರುಗಳ ಬಳಿ ಹೋದಾಗ ಅವರು ಹೇಳಿದ ನಿಧಿಯ ರಹಸ್ಯ ಅಡಗಿರುವ ಗೀತೆಯನ್ನು ಬಲ್ಲ ಜನಪದ ಜಕ್ಕಮ್ಮನಿಂದ ಗೀತೆ ಬಯಲಾಯಿತೇ? ಕೊನೆಗೂ ಮೂರು ಚರಣಗಳ ಗೀತೆಯಲ್ಲಿ ಮೊದಲೆರಡನ್ನು ಜಯಕೀರ್ತಿ ಭೇದಿಸಿದರೂ, ಅಷ್ಟೇನೂ ಮಹತ್ತ್ವ ಕೊಡದ ಕೊನೆಯ ಸಾಲು ಆತನಿಗೆ ಶಾಪವಾಗಿ ಅಪಾರ ನಿಧಿ ಕನ್ನಡಿಯೊಳಗಿನ ಗಂಟಾಯಿತೇ? ಮಣ್ಣು, ಹೊನ್ನು, ಹೆಣ್ಣು ಈ ಮೂರರ ಆಸೆಯೆಂಬ ಬಿಸಿಲು ಕುದುರೆಯ ಬೆನ್ನು ಹತ್ತಿ ಹೋದ ಜಯಕೀರ್ತಿಗೆ ಬದುಕು ಸುಖವನ್ನು ಕೊಟ್ಟಿತೇ? ಎಲ್ಲವನ್ನೂ ತಿಳಿಯುವ ಹಂಬಲ ನಿಮ್ಮದಾದರೆ ಈ ಕೃತಿಯನ್ನು ಓದಿ. ಕ್ಷಣಕ್ಷಣಕ್ಕೂ ಕುತೂಹಲ ಹುಟ್ಟಿಸುವುದಲ್ಲದೆ ತಣಿಸುತ್ತದೆ ಕೂಡಾ.

ತಮ್ಮ ಸುತ್ತವೇ ಇದ್ದ ಸುಖವನ್ನು ಅರ್ಥೈಸಿಕೊಳ್ಳಲಾರದ ಮನುಷ್ಯನಿಗೆ ಸುಖವೆಂಬ ಮರೀಚಿಕೆಯ ಬೆನ್ನು ಹತ್ತಿದಾಗಲಷ್ಟೇ ಅದು ಭ್ರಮೆಯೆಂದು ಅರಿವಿಗೆ ಬರುವುದೆಂಬ ಸತ್ಯವನ್ನು ಜಯಕೀರ್ತಿಯ ಪಾತ್ರದ ಮೂಲಕ ಓದುಗರಿಗೆ ತಿಳಿಸುತ್ತಾರೆ ಲೇಖಕಿ. ಕಾದಂಬರಿಯ ಕೇಂದ್ರ ಪಾತ್ರವಾದ ‘ಜಯಕೀರ್ತಿ’ ಬರೀ ಪಾತ್ರವಷ್ಟೇ ಅಲ್ಲ. ಹೆಣ್ಣು, ಹೊನ್ನು, ಮಣ್ಣು ಈ ಮೂರರ ಮಾಯೆಯೊಳಗೆ ಸಿಲುಕಿದ ಪ್ರತಿಯೊಬ್ಬ ಮನುಷ್ಯನ ಪ್ರತಿನಿಧಿ. ಬಹುಶ: ಹೆಚ್ಚಿನ ಮಾನವರ ಮನಸ್ಸುಗಳು ಇರುವುದು ಹೀಗೆಯೇ. ಇವನಿಗೆ ತೀರಾ ವಿರುದ್ಧವಾದ ಪಾತ್ರವೇ ಮದನನದು. ಇಂತವರು ಇರುವುದು ವಿರಳ. ಸ್ಥಿತಪ್ರಜ್ಞನಾದ ಆತ, ತನ್ನ ಸುತ್ತುಮುತ್ತಲಿದ್ದ ಸುಖವೇ ನಿಜವಾದ ಸುಖವೆಂದು ಅರ್ಥೈಸಿಕೊಂಡ ಕಾರಣ ಬದುಕಿನ ಸಂಜೆಯಲ್ಲಿ ಆತನಿಗೆ ಯಾವುದೇ ಪಶ್ಚಾತ್ತಾಪವಾಗಲೀ, ವಿಷಾದವಾಗಲೀ ಇರದೆ ಸರಳವಾದ, ಸುಂದರವಾದ ನೆಮ್ಮದಿಯ ಜೀವನವನ್ನು ನಡೆಸುತ್ತಾನೆ.

ಒಟ್ಟಿನಲ್ಲಿ ಹೇಳಬೇಕಾದರೆ ಇಲ್ಲಿನ ಪ್ರತಿಯೊಂದು ಪಾತ್ರಗಳು ಕೆಲವೊಮ್ಮೆ ಸ್ವಗತದಲ್ಲೂ, ಮತ್ತೊಮ್ಮೆ ಸಿಂಹಾವಲೋಕನ ಕ್ರಮದಲ್ಲೂ ಮುಂದೆ ಹೋಗುತ್ತದೆ. ವಾಸ್ತವದ ಜೊತೆ ಜೊತೆಗೆ ನೆನಪುಗಳ ಮೆರವಣಿಗೆಯೊಂದಿಗೆ ಕಥೆ ಸಾಗುವ ರೀತಿ ನಿಜಕ್ಕೂ ಅದ್ಭುತವೇ ಸರಿ. ಎರಡು ವಿರುದ್ಧ ಪಾತ್ರಗಳ ಮೂಲಕ ಬದುಕಿನ ಹಲವಾರು ಸತ್ಯಗಳನ್ನು, ಸುಂದರವಾದ ಕಾಲ್ಪನಿಕ ಕಥೆಯೊಂದಿಗೆ ಹೆಣೆದು ಯಶಸ್ವಿಯಾಗಿದ್ದಾರೆ ಲೇಖಕಿ. ಓದುವಾಗ ೧೨ನೇ ಶತಮಾನದಲ್ಲಿ ಇಂತಹ ಒಂದು ನಿಜವಾದ ಘಟನೆ ನಡೆದಿದೆಯೇನೋ ಅನ್ನಿಸುತ್ತದೆ. ನಮ್ಮ ಪುರಾಣ ಕಥೆಗಳ ಬಗ್ಗೆ ಲೇಖಕಿಗೆ ಇರುವ ಅಪಾರವಾದ ಜ್ಞಾನವೇ ಇಂತಹ ಒಂದು ಅಪರೂಪದ ಮಹತ್ತ್ವದ ಕೃತಿಯನ್ನು ರಚಿಸಲು ಸಾಧ್ಯವಾಯಿತೇನೋ? ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುವ ಕಥೆಯನ್ನು ಒಳಗೊಂಡಿರುವ ‘ಮಾಯೆ’ ಅಂದಿಗೂ, ಇಂದಿಗೂ, ಎಂದಿಗೂ ಪ್ರಸ್ತುತವೇ. ಇಂತಹ ಇನ್ನಷ್ಟು ಒಳ್ಳೆಯ ಕೃತಿಗಳು ಆಶಾ ರಘುರವರು ಬರೆಯುವಂತಾಗಿ ಕನ್ನಡ ಸಾಹಿತ್ಯಲೋಕ ಬೆಳಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ.


  • ವಾಣಿಶ್ರೀ ಕೊಂಚಾಡಿ – ಲೇಖಕಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW