ಕನ್ನಡ ಸಾಹಿತ್ಯದ ಹೊಸಗನ್ನಡ ಯುಗದಲ್ಲಿ ವಚನ ಸಾಹಿತ್ಯದ ಪರಂಪರೆಯನ್ನು ಆಧುನಿಕತೆಗೆ ತಂದು ಸೇರಿಸಿದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಮಧುರಚೆನ್ನರ (ಚೆನ್ನಮಲ್ಲಪ್ಪ ಗಲಿಗಲಿ) 122 ನೇ ಜಯಂತಿಯನ್ನು ಮೊನ್ನೆ ಜುಲೈ 31, 2025 ರಂದು ಆಚರಿಸಲಾಯಿತು. ಮಧುರಚೆನ್ನರ ವಚನ ಸಾಹಿತ್ಯದ ಕುರಿತು ಡಾ ದೇವಿಕ. ಎಸ್ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಮಧುರ ಚೆನ್ನರೆಂದರೆ ನನಗೆ ತುಂಬಾ ದಿನಗಳ ಹಿಂದೆ ಪದವಿ ಮಟ್ಟದಲ್ಲಿದ್ದ “ದೇವತಾ ಪೃಥ್ವಿ” ಕವಿತೆಯನ್ನ ಅನುಭಾವಿಕ ನೆಲೆಯಲ್ಲಿ , ವಿದ್ಯಾರ್ಥಿಗಳಿಗೆ ವಿಶ್ಲೇಷಿ ಮತ್ತು ವಿಮರ್ಶಿಸುವ ಮೂಲಕ ಸೀಮಿತವಾಗಿ ಪರಿಚಯಿಸಿಕೊಟ್ಟ ನೆನಪು. ಆದರೆ ಸಾಹಿತ್ಯವೆಂಬುವುದು ಸೀಮಾತೀತವಾಗಿರಬೇಕು ಎಂಬುದನ್ನು ಇಂದು ಮಧುರಚೆನ್ನರ “ನನ್ನ ನಲ್ಲ” ಕವನ ಸಂಕಲನವನ್ನು ಓದುವುದರ ಮೂಲಕ ಗ್ರಹಿಸಿಕೊಂಡೆ. ಆದರೆ ಇಂದಿನ ಕಾಲಘಟ್ಟದಲ್ಲಿ ಸಾಹಿತ್ಯವು ಕೆಲವೊಂದು ಸಾಹಿತ್ಯ ಕಾಲಘಟ್ಟಗಳಿಗೆ ಹಾಗೂ ಸೀಮಿತವಾದ ಕಾಲಘಟ್ಟದ ಕವಿಗಳ, ಲೇಖಕರ ರಚನೆಗಳನ್ನು ಮಾತ್ರ ಪಠ್ಯದಲ್ಲಿ ಬೋಧಿಸಲು ಅನುವು ಮಾಡಿಕೊಡುತ್ತಿದ್ದಾರೆ. ಇದರಿಂದ ಈ ಕಾಲಘಟ್ಟದ ವಿದ್ಯಾರ್ಥಿಗಳನ್ನು ನಾವು ಸೀಮಿತವಾದ ಸಾಹಿತ್ಯ ಚರಿತ್ರೆಗೆ ಕಟ್ಟಿ ಹಾಕುತಿದ್ದೇವೆ. ಮಧುರಚೆನ್ನರಷ್ಟೇ ಅಲ್ಲದೆ ಹಲವು ಕವಿಗಳು ತಮ್ಮ ಸಾಹಿತ್ಯದ ರಚನೆಯ ಮೂಲಕ ಹೊಸದಾದಂತಹ ಜೀವನ ತತ್ವಗಳನ್ನು ಒಳಗೊಂಡ ಸಾಹಿತ್ಯ ಕೃಷಿಯ ಸತ್ವವನ್ನು ಬಿಟ್ಟು ಹೋಗಿದ್ದಾರೆ.
ಆ ಸಾಹಿತ್ಯ ತತ್ವದ ಬೀಜವನ್ನು ಬಿತ್ತರಿಸುವಂತಹ ಕೆಲಸವನ್ನು ನಾವು ಮಾಡಬೇಕಾಗಿದೆ. ಅದು ವಿದ್ಯಾರ್ಥಿಗಳಿಗೆ ಪಠ್ಯದ ಮೂಲಕವೂ, ಸಂಶೋಧನೆಯ ಮೂಲಕವೂ, ಚರ್ಚೆಯ ಮೂಲಕವೋ, ಮುಸುಕಿನ ಮೋಡದಲ್ಲಿ ಮರೆಯಾದಂತಹ ಕವಿಗಳ ಸಾಹಿತ್ಯವನ್ನು ಪುನರ್ಮನನ ಮಾಡಿಕೊಂಡು ಸಾಹಿತ್ಯವನ್ನು ಬಿತ್ತರಿಸುವ ಕಾರ್ಯವು ನಾವು ಮಾಡಬೇಕಾಗಿದೆ.

ಮಧುರಚೆನ್ನರು ಕೇವಲ ಕವಿ ಮಾತ್ರರಲ್ಲದೆ, ದಾರ್ಶನಿಕ ಮತ್ತು ಚಿಂತಕರಾಗಿದ್ದ ಹಾಗೂ ತಮ್ಮ ಕಾವ್ಯದ ಮೂಲಕ ಬದುಕಿನ ಸಂಕೀರ್ಣತೆಗಳನ್ನು ಮತ್ತು ಆಧ್ಯಾತ್ಮಿಕ ತುಡಿತಗಳನ್ನು ಸರಳ ಹಾಗೂ ಸುಂದರ ಭಾಷೆಯಲ್ಲಿ ವ್ಯಕ್ತಪಡಿಸಿದವರು.
ಮಧುರಚೆನ್ನ ಅವರ ಮೂಲ ಹೆಸರು ಚೆನ್ನಮಲ್ಲಪ್ಪ ಗಲಗಲಿ. 1907ರ ಜುಲೈ 31ರಂದು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಸಮೀಪದ ಹಿರೇಲೋಣಿಯಲ್ಲಿ ಜನಿಸಿದರು. ತಂದೆ ಸಿದ್ಧಲಿಂಗಪ್ಪ, ತಾಯಿ ಅಂಬವ್ವ. 12 ವರ್ಷದ ಬಸಮ್ಮ ಅವರೊಂದಿಗೆ 16 ವರ್ಷದ ಮಧುರ ಚೆನ್ನ ಅವರೊಂದಿಗೆ ವಿವಾಹವಾಯಿತು. 14ನೇ ವಯಸ್ಸಿನಲ್ಲೇ ಮಧುರಚೆನ್ನರು ಸಾಹಿತ್ಯಸೃಷ್ಟಿ, 19ನೇ ವಯಸ್ಸಿಗೆ ಶಿಲಾಶಾಸನಗಳು ಹಾಗೂ ಜನಪದ ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿದರು. ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ, ಪಿ ಧೂಲ್ಲಾ ಅವರೊಂದಿಗೆ ಸೇರಿ ಹಲಸಂಗಿಯಲ್ಲಿ ಗೆಳೆಯರ ಬಳಗವನ್ನು ಕಟ್ಟಿದರು.
ಬಾಲ್ಯದಿಂದಲೂ ಅವರದು ಆಧ್ಯಾತ್ಮಿಕತೆಯ ಕಡೆಗೆ ಒಲೆದ ಮನಸ್ಸು . ಶ್ರೀ ಅರವಿಂದರನ್ನು ತಮ್ಮ ಗುರುಗಳೆಂದು ಭಾವಿಸಿದರು. ಜಡಸೃಷ್ಟಿಯಿಂದ ಜೀವನ ಸೃಷ್ಟಿಯತ್ತ ಹರಿದು ಜೀವನಸಾಮಂಜಸ್ಯದ ಪ್ರಯೋಗಗಳಲ್ಲಿ ತೊಡಗಿ ಐಕ್ಯಸಾಧನೆಯಲ್ಲಿ ಸಫಲರಾಗಿದ್ದರಿಂದ ಚೆನ್ನಮಲ್ಲಪ್ಪನವರು ‘ಮಧುರಚೆನ್ನ ರಾದರು. ‘ನನಗೆ ನೀನತಿ ಮಧುರ’ ಎಂದು ಯಾವ ಸ್ನೇಹಿತನನ್ನು ಕುರಿತು ಹಾಡಿದರೋ ಅದೇ ಸ್ನೇಹಿತನ ಹೆಸರು ಮೊದಲಾಗಿ, ‘ನಿನಗೆ ನಾ ಬಲು ಚೆನ್ನ ಎನಿಸಿದವರ ಹೆಸರು ಕಡೆಯಲ್ಲಿ ಬಂದಿತು.
‘ಪೂರ್ವರಂಗ’, ‘ಕಾಳರಾತ್ರಿ’, ‘ಬೆಳಗು’ ಮತ್ತು ‘ಆತ್ಮಸಂಶೋಧನೆ’ ಇವು ಅವರ ಆಧ್ಯಾತ್ಮಿಕ ಸಾಧನೆಯ ಕಥನ ಗದ್ಯಕೃತಿಗಳು. ‘ಸಲಿಗೆಯ ಸಲ್ಲಾಪ’, ‘ನೋಂಪಿ’, ‘ಕೆಸರೊಳಗಿನ ಕಮಲ’, ‘ಸುಖದುಃಖ’, ‘ಸುಖ ಜೀವನ’, ‘ಧ್ರುವ’, ‘ಉಷಾದೇವಿ’, ‘ರೋಹಿಣಿ’, ‘ಮಾವಿನಗೊಲ್ಲೆ-ಇವು ಮಧುರಚೆನ್ನರ ಭಾವಗೀತೆಗಳು.
ಮಧುರಚೆನ್ನರ ಕಾವ್ಯವು ಮುಖ್ಯವಾಗಿ ವಚನ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿದೆ. ೧೨ನೇ ಶತಮಾನದ ಶರಣರಂತೆ, ಇವರು ತಮ್ಮ ಭಾವನೆಗಳನ್ನು ನೇರವಾಗಿ, ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಅಭಿವ್ಯಕ್ತಪಡಿಸಿದ್ದಾರೆ. ಇವರ ಕವನಗಳಲ್ಲಿ ಬರುವ ಸರಳ ಭಾಷೆ, ನೇರವಾದ ಮಾತು ಮತ್ತು ದಾರ್ಶನಿಕ ಚಿಂತನೆಗಳು ವಚನಗಳ ಗುಣಲಕ್ಷಣಗಳನ್ನು ನೆನಪಿಸುತ್ತವೆ. ಆದರೆ, ಇವರು ಕೇವಲ ವಚನಗಳನ್ನು ಪುನರಾವರ್ತಿಸದೆ, ಆಧುನಿಕ ಕನ್ನಡ ಕಾವ್ಯದ ಸೂಕ್ಷ್ಮ ಸಂವೇದನೆಗಳನ್ನು ತಮ್ಮ ರಚನೆಗಳಲ್ಲಿ ಸೇರಿಸಿದ್ದಾರೆ.
ಮಧುರಚೆನ್ನರ ಪ್ರಮುಖ ಕೃತಿಗಳಲ್ಲಿ ‘ನನ್ನ ನಲ್ಲ’ ಕವನ ಸಂಕಲನವು ಒಂದು ಮೈಲಿಗಲ್ಲು. ಈ ಸಂಕಲನದಲ್ಲಿರುವ ಕವಿತೆಗಳು ಪ್ರೇಮದ ವಿವಿಧ ಆಯಾಮಗಳನ್ನು ಪರಿಚಯಿಸುತ್ತವೆ. ಇಲ್ಲಿ ಪ್ರೇಮ ಕೇವಲ ಲೌಕಿಕ ಸಂಬಂಧವಾಗಿರದೆ, ಅಲೌಕಿಕವಾದ ಆಧ್ಯಾತ್ಮಿಕ ಅನುಭವಕ್ಕೆ ಏರುತ್ತದೆ. ಇವರು ತಮ್ಮ ಪ್ರಿಯಕರನನ್ನು ಕೇವಲ ಒಬ್ಬ ವ್ಯಕ್ತಿಯಾಗಿ ನೋಡದೆ, ಆಂತರ್ಯದ ದೈವಿಕ ಶಕ್ತಿಯ, ಶಿವನ, ಸಾಕಾರ ರೂಪವಾಗಿ ನೋಡುತ್ತಾರೆ. ಈ ಭಾವವು ಇವರ ಕಾವ್ಯವನ್ನು ಹೊಸಗನ್ನಡದ ಭಕ್ತಿ ಕಾವ್ಯದ ಹಂತಕ್ಕೆ ಕೊಂಡೊಯ್ಯುತ್ತದೆ.
ಇವರ ಕಾವ್ಯದಲ್ಲಿ ಪ್ರಕೃತಿಯ ವಿವರಣೆಗಳು, ಮನುಷ್ಯನ ಅಂತರಂಗದ ಸಂಕಷ್ಟಗಳು ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಇರುವ ಕಳಕಳಿಗಳು ಸ್ಪಷ್ಟವಾಗಿ ಕಾಣುತ್ತವೆ. ಇವರು ಪ್ರಕೃತಿಯನ್ನು ಕೇವಲ ಸೌಂದರ್ಯಕ್ಕಾಗಿ ಬಳಸಿಕೊಳ್ಳದೆ, ಅದನ್ನು ತಮ್ಮ ಆಧ್ಯಾತ್ಮಿಕ ಭಾವನೆಗಳನ್ನು ಹೊರಹೊಮ್ಮಿಸಲು ಸಾಧನವಾಗಿಸಿಕೊಂಡಿದ್ದಾರೆ. ಉದಾಹರಣೆಗೆ ಹೂವು, ಪಕ್ಷಿಗಳು, ನದಿ ಮತ್ತು ಬೆಟ್ಟಗಳನ್ನು ತಮ್ಮ ದಾರ್ಶನಿಕ ಚಿಂತನೆಗಳಿಗೆ ರೂಪಕಗಳಾಗಿ ಬಳಸಿದ್ದಾರೆ.
ಕವಿ ಋಷಿಯಾಗಿ, ನನ್ನ ನಲ್ಲನ , ನಲ್ಲೆಯಾಗಿ, ಜಗದಂಬಿಕೆಯ ಶಿಶುವಾಗಿ, 1953ನೇ ಆಗಸ್ಟ್ 15ಕ್ಕೆ ದೇಹಬಿಟ್ಟು ನಮ್ಮನ್ನುಅಗಲಿದರು.
ಅಂದು ಭಾರತ ಸ್ವಾತಂತ್ರ್ಯದ ದಿನ, ಶ್ರೀ ಅರವಿಂದರ ಜಯಂತಿ, ಅಲ್ಲದೆ ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯತಿಥಿ. ಅಂಥ ಪರ್ವ ಕಾಲದಲ್ಲಿ ಗುರುಪಾದ ಕಮಲಗಳನ್ನು ಅಲಂಕರಿಸಿದ ಅರಳುಮಲ್ಲಿಗೆಯಂತೆ ಕವಿಯ ಜೀವನದ ಧನ್ಯತೆಯಿಂದ ನೆನೆಯುವುದು ಅನಿವಾರ್ಯವಾಗಿದೆ. ಕೊನೆಯದಾಗಿ ಇಂತಹ ಮಹಾನ್ ದಾರ್ಶನಿಕ ಕವಿಋಶಿಯು ನಮ್ಮ ಪ್ರದೇಶದಲ್ಲಿ ಅವತರಿಸಲು ಇಲ್ಲ ಮತ್ತು ಇಲ್ಲಿನ ಸಾಹಿತ್ಯಾಸಕ್ತರು ಇವರನ್ನು ಆವರಿಸಿಕೊಳ್ಳಲಿಲ್ಲಿವೆಂಬುವ ವಿಷಾದ ಸದಾ ನನ್ನನ್ನು ಕಾಡುತ್ತಲೇ ಇರುತ್ತದೆ.
- ಡಾ ದೇವಿಕ. ಎಸ್
