‘ಮಾಧುರಿಯ ಮಿಡಿತಗಳು’ ಪುಸ್ತಕ ಪರಿಚಯ

ಗಜಲ್ ಕವಯತ್ರಿ ಸರ್ವಮಂಗಳಾ ಜಯರಾಂ ಅವರ ‘ಮಾಧುರಿಯ ಮಿಡಿತಗಳು’ ಗಜಲ್ ಸಂಕಲನದ ಕುರಿತು ರುಕ್ಮಿಣಿ ಎಸ್ ನಾಯರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ :ಮಾಧುರಿಯ ಮಿಡಿತಗಳು
ಲೇಖಕರು : ಸರ್ವಮಂಗಳಾ ಜಯರಾಂ
ಪ್ರಕಾರ : ಗಜಲ್ ಸಂಕಲನ

ಸರ್ವಮಂಗಳಾ ಜಯರಾಂ ರವರ ಈ ಸಂಕಲನವು ಅತಿ ಸುಂದರ ಹಾಗೂ ಅದ್ಭುತವಾದ ಗಜಲ್ಗಳನ್ನು ಒಳಗೊಂಡಿರುವ ಒಂದು ಸೊಗಸಾದ ಹೂದಾನಿ. ಮುನ್ನುಡಿಯಲ್ಲಿ ಯು.ಸಿರಾಜ್ ಅಹಮದ್ ಸೊರಬ ಸಾಹಿತಿ ಗಜಲ್ ಕವಿ ಇವರು ಬರೆದಿರುವಂತೆ ಗಜಲ್ ಕಾವ್ಯವು ಕೋಮಲ ಭಾಷೆಯಲ್ಲಿ ಇರುವ ಅನಿರ್ವಚನೀಯ ಸಾತ್ವಿಕ ತಿರುಳು. ಜ್ಞಾನದ ಸಭಿರುಚಿಯ ನಯ ನಾಜೂಕಿನ ಭಾವ ತೀವ್ರತೆ , ಪಾತ್ರಗಳಲ್ಲಿ ಇಳಿದು ಬರೆಯುವಂತಹ ಕಲೆಯಾಗಿದೆ ಈ ಗಜಲ್ಗಳು.

ಅನಸೂಯ ಯತೀಶ್ ವಿಮರ್ಶಕಿ ನೆಲಮಂಗಲ ಇವರು ಸರ್ವಮಂಗಳ ಜಯರಾಂ ರವರು ಬರೆದಿರುವ ಗಜಲ್ಗಳ ಆಳಕ್ಕೆ ಇಳಿದು ಅತ್ಯುತ್ತಮ ವಿಮರ್ಶೆ ಬರೆದಿದ್ದಾರೆ. ಸದಾಶಯ ಬರೆದಿರುವ ಸೂರ್ಯ ಸಖ ಪ್ರಸಾದ್ ಕುಲಕರ್ಣಿ ಬೆಳಗಾವಿಯವರು ಕೂಡಾ ಗಜಲ್ ನ ತಾಯಿ ಉರ್ದು ಆದರೆ ಉರ್ದು ಭಾಷೆಯ ಸಾಂಗತ್ಯ ಇಲ್ಲದೆಯೂ ಕನ್ನಡ ಮಯವಾದ ಗಜಲ್ಗಳನ್ನು ಬರೆದ ಕವಯಿತ್ರಿ ಸರ್ವಮಂಗಳಾ ರವರ ತನುಮನದಲ್ಲಿ ಕನ್ನಡತನವಿದೆ ಎನ್ನುವುದು ಅಕ್ಷರಶಃ ನಿಜ.

ನಾರಾಯಣ ಸ್ವಾಮಿ (ನಾನಿ) ವಕೀಲರು ಮತ್ತು ಸಾಹಿತಿಗಳು ಈ ಗಜಲ್ ಸಂಕಲನ ಕೃತಿಯ ಬಗ್ಗೆ ಒಂದಿಷ್ಟು ಮಾತುಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಗಜಲ್ ಕಾವ್ಯವನ್ನು ಎಲ್ಲರಿಂದಲೂ ಬರೆಯಲು ಸಾಧ್ಯವಿಲ್ಲ ಎನ್ನುವ ಅವರ ಮಾತು ನೂರರಷ್ಟು ಸತ್ಯವಾದದ್ದು.

ಕವಯಿತ್ರಿಯವರು ಅವರ ಮಿಡಿತಕ್ಕೂ ಮುನ್ನದಲ್ಲಿ ಅವರು ಗಜಲ್ ಸಾಹಿತ್ಯವನ್ನು ಅಭ್ಯಾಸ ಮಾಡಿ ಪೂರ್ವ ತಯಾರಿ ಮಾಡಿಕೊಂಡು ಬರೆದಿರುವ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಅವರ ಕಾವ್ಯದ ಮೇಲಿನ ಆಸಕ್ತಿ ಎಷ್ಟಿದೆ ಎಂದು ನಮಗೆ ಅರಿವಾಗುತ್ತದೆ. ಇವರ ಮೂರನೆಯ ಹಾಗೂ ಮೊದಲ ಗಜಲ್ ಸಂಕಲನವು ನನ್ನ ಕೈ ಸೇರಿ ಒಂದು ಉತ್ತಮ ಕೃತಿ ಓದುವ ಸುಯೋಗವು ನನ್ನದಾಗಿದೆ.

ಅರ್ಪಣೆಯಲ್ಲಿ ಭೂಮಿಯಷ್ಟು ಸಹನೆಯುಳ್ಳವಳು ತನ್ನ ಅಮ್ಮ, ಒಡಲಲ್ಲಿ ಇರುವ ಕುಡಿಗಾಗಿ ತನ್ನ ಗರ್ಭವನ್ನು ಸೀಳಿದರೂ ಸಹಿಸಿದಂತ ಕ್ಷಮಯಾಧರಿತ್ರಿ ಎಂದು ತಾಯಿಯ ಪ್ರೀತಿ ತಾಳ್ಮೆಯನ್ನು ವಿವರಿಸಿರುವ ರೀತಿ ತಾಯಿಯ ಮಮತೆಯ ಪರಾಕಾಷ್ಠೆಯನ್ನು ಪ್ರತಿಬಿಂಬಿಸುತ್ತದೆ.

ಗಜಲ್ – 14 “ಸದ್ದಿಲ್ಲದೆ ಹರಿಯುವ ಚೇತನವಿದು ಜೀವ ದ್ರವ್ಯ ಪಾಪವ ಕಳೆಯುವ ಜೀವ ದ್ರವ್ಯ” ಈ ಗಜಲ್ನಲ್ಲಿ ಜೀವ ಜಲದ ಉಗಮ ಹಾಗೂ ಅದರ ಮಹತ್ವವನ್ನು ಸಾರುವ ಮೂಲಕ ಓದುಗರ ಮುಂದೆ ಜೀವ ಜಲದ ಅರಿವನ್ನು ಬಣ್ಣಿಸಿದ್ದಾರೆ.

ಗಜಲ್ -17 “ನಾಗರಿಕತೆಯ ನೆಪದಿಂದ ನೂರಾರು ಮರಗಳ ಮಾರಣಹೋಮ ನಿಸರ್ಗದ ವನಸಿರಿಗೆ ಚೈತನ್ಯ ತುಂಬುವ ಹಸಿರಲ್ಲಿ ಉಸಿರಿದೆ” ಎಂಬ ಗಜಲ್ನಲ್ಲಿ ಹಸಿರಿದ್ದರೆ ಉಸಿರು ಸಕಲ ಜೀವ ಸಂಕುಲಗಳು ಜೀವಂತವಾಗಿ ಇರಬೇಕಾದರೆ ಹಸಿರನ್ನು ನಾವು ಉಳಿಸಿಕೊಳ್ಳಲೇಬೇಕು ಎಂಬ ಕವಯಿತ್ರಿಯವರ ಕಾಳಜಿ ನಗರೀಕರಣಕ್ಕಾಗಿ ಹಸಿರೆಲ್ಲವ ಬೋಳು ಮಾಡುತ್ತಾ ಇರುವ ಎಲ್ಲ ನಾಗರಿಕರ ಕಣ್ಣನ್ನು ತೆರೆಸುವಂತಿದೆ.

ಗಜಲ್ – 20 “ಜಾತಿ ಧರ್ಮ ಯಾವುದಾದರೇನು ಇರಲಿ ಸದಾ ಭಾವೈಕ್ಯತೆ ವೇಷ ಭಾಷೆ ಯಾವುದಾದರೇನು ಇರಲಿ ಸದಾ ಭಾವೈಕ್ಯತೆ” ನಮ್ಮ ಸುತ್ತಲಿರುವ ಪ್ರಕೃತಿಯೇ ಎಲ್ಲರೂ ಭಿನ್ನವಾದರೂ ನಾವೆಲ್ಲ ಒಂದು ಎನ್ನುವ ಸಂದೇಶ ಸಾರುತ್ತಿದೆ. ಆದರೂ ನಾವೇಕೆ ಧರ್ಮದ ಹೆಸರಲ್ಲಿ ಸಹನೆ ತಾಳ್ಮೆ ಕಳೆದುಕೊಳ್ಳುತ್ತೇವೆ? ಎಲ್ಲಕ್ಕಿಂತ ಶ್ರೇಷ್ಠ ಧರ್ಮವು ಮಾನವತೆಯ ಧರ್ಮ ಅಲ್ಲವೇ ಎನ್ನುವ ಕವಯಿತ್ರಿಯವರ ಈ ಗಜಲ್ ಅವರ ಮನಸ್ಸಿನ ಆಳದಲ್ಲಿ ಇರುವ ದೇಶಕ್ಕಾಗಿ ಮಿಡಿವ ಹೃದಯದ ನೋವನ್ನು ಬಿಂಬಿಸುತ್ತದೆ.

ಗಜಲ್ – 24 “ಬ್ರಹ್ಮ ಗೀಚಿದ ಹಣೆಯಲಿ ಬಡತನವನು ಗಾಲೀಬ್ ಹೊತ್ತು ತಂದನು ಹುಟ್ಟುತಲಿ ದಾರಿದ್ರವನು ಗಾಲೀಬ್” ತುತ್ತಿನ ಚೀಲ ಚಿಕ್ಕದಾದರೂ ಅದನ್ನು ತುಂಬಿಸಲು ದೇಹದಲ್ಲಿ ದುಡಿಯುವ ಶಕ್ತಿ ಇಲ್ಲದಿದ್ದರೂ ಹೆಣಗಾಡುವ ಹೋರಾಟದ ಹೊಯ್ದಾಟದ ಬದುಕಿನ ಚಿತ್ರಣವನ್ನು ತಮ್ಮ ಈ ಗಜಲ್ನಲ್ಲಿ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ.

ಗಜಲ್ -33 “ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ ಗೆಳೆಯ ನಿರುದ್ಯೋಗದ ಕತ್ತಿ ಬೀಸುತ್ತಿದೆ ಗೆಳೆಯ” ಎನ್ನುವ ಗಜಲ್ ಎಷ್ಟು ಪದವಿ ಶಿಕ್ಷಣ ಪಡೆದರೇನು ಉದ್ಯೋಗ ಸಿಗದೇ ಪರದಾಡುವ ಹಾಗೂ ಉದ್ಯೋಗ ಸಿಗದೇ ನಿರಾಸೆ ತುಂಬಿದ ಸ್ಥಿತಿಯಲ್ಲಿ ಬದುಕು ನಡೆಸುವುದು ಎಷ್ಟು ಕಷ್ಟ ಎನ್ನುವುದನ್ನು ಮನ ಮುಟ್ಟುವಂತೆ ಇಲ್ಲಿ ಕವಯಿತ್ರಿ ಬರೆದಿದ್ದಾರೆ. ಈ ಗಜಲ್ನ ಒಂದೊಂದು ಸಾಲೂ ನಿರುದ್ಯೋಗಿ ಅನುಭವಿಸುತ್ತಿರುವ ಮೂಕ ವೇದನೆಯನ್ನು ಎಳೆ ಎಳೆಯಾಗಿ ಬಿಡಿಸಿ ನಮ್ಮ ಮುಂದೆ ಇಟ್ಟಿದೆ.

ಗಜಲ್ – 43 “ಮನಸ್ಸು ಖಾಲಿ ಜೋಕಾಲಿಯಾಗಿ ಬರೀ ನೆನಪೀಗ ಜೊತೆಯಲಿ ಅಳಿದ ಆಸೆಗಳಿಗೆ ಕನಸುಗಳ ಆಧಾರವಾಗಿ ಬರೀ ನೆನಪೀಗ ಜೊತೆಯಲಿ” ಬಯಕೆಯ ಹೂ ಗೊಂಚಲು ಅರಳುವ ಮುನ್ನವೇ ಬಾಡಿಹೋಗಿ ಬರೀ ನೆನಪುಗಳು ಆಗಿವೆ. ಅರಿಯದೇ ಪಡೆದದ್ದು ತಿಳಿಯದೇ ಕಳೆದು ಕೊಂಡದ್ದು ಇಂದು ಅರಿತು ತಿಳಿದು ಮೌನವಾಗಿ ಬರೀ ನೆನಪಾಗಿ ಉಳಿದು ಹೋಯ್ತು. ಈ ದಾರಿ ಕಾಣದ ಬದುಕಿನ ಪಯಣವು ಮನಸ್ಸನ್ನು ದಿಟ್ಟವಾಗಿಸಿ ಮುಂದೆ ಇಡುವ ಹೆಜ್ಜೆಯನ್ನು ಗಟ್ಟಿಯಾಗಿ ಇಡುವಂತೆ ಮಾಡಿದೆ ಎನ್ನುವ ಈ ಗಜಲ್ ಮನಸ್ಸನ್ನು ಮುಟ್ಟಿ ನಮ್ಮನ್ನು ಕೂಡಾ ನೆನಪಿನ ಅಂಗಳಕ್ಕೆ ಕರೆದುಕೊಂಡು ಹೋಗುತ್ತದೆ.

ಮೊಗೆದಷ್ಟೂ ತೀರದ ಒರತೆಯಂತೆ. ಎಷ್ಟು ಓದಿದರೂ ಸಾಲದು ಸರ್ವಮಂಗಳ ಜಯರಾಂರವರು ಬರೆದಿರುವ ಈ ಬತ್ತದ ಗಜಲ್ ಸಂಕಲನದ ಒರತೆ. ಮಾಧಿರಿಯ ಮಿಡಿತ ಗಜಲ್ ಕವನ ಸಂಕಲನವನ್ನು ಉಡುಗೊರೆಯಾಗಿ ಅವರಿಂದ ಪಡೆದದ್ದು ಒಂದು ಸೌಭಾಗ್ಯ ಎಂದು ತಿಳಿದಿರುವೆ. ಅಚಾನಕ್ಕಾಗಿ ಆದ ಭೇಟಿ ನಮ್ಮದು.
ಇಂತಹ ಅದ್ಭುತ ಸಂಕಲನವನ್ನು ಓದುವ ಹಾಗೂ ನನ್ನ ಅನಿಸಿಕೆಗಳನ್ನು ಬರೆಯುವ ಭಾಗ್ಯ ನನ್ನದಾಯಿತು. ಅವರ ಈ ಸಂಕಲನ ನನ್ನ ಕೈ ಸೇರಿ ತಿಂಗಳುಗಳೇ ಕಳೆದಿವೆ. ಗಡಿಬಿಡಿಯಲ್ಲಿ ಓದಿ ನನ್ನ ಅನಿಸಿಕೆಗಳನ್ನು ಬರೆಯುವ ಮನಸ್ಸು ಇರಲಿಲ್ಲ. ಹಾಗಾಗಿ ಸಾವಕಾಶವಾಗಿ ಒಂದೊಂದೇ ಗಜಲ್ ಓದಿದ್ದೇನೆ.

ಅದರಲ್ಲೂ ನಾನು ಆಯ್ದುಕೊಂಡ ಗಜಲ್ಗಳು ಅತೀ ಅಪೂರ್ವ ಎನಿಸಿದವು. ಅವರು ಬರೆದಿರುವ ಪ್ರತಿಯೊಂದು ಗಜಲ್ಗಳು ಅದ್ಭುತವಾಗಿವೆ. ದಯವಿಟ್ಟು ಈ ಅದ್ಭುತ ಗಜಲ್ ಸಂಕಲನವನ್ನು ಪಡೆದು ಓದಿ ಅವರನ್ನು ಪ್ರೋತ್ಸಾಹಿಸಿ. ಈವರೆಗೆ ಅವರ ಮೂರು ಪುಸ್ತಕಗಳು ಬಿಡುಗಡೆ ಆಗಿವೆ. ಇನ್ನೂ ಒಂದು ಪುಸ್ತಕ ಬಿಡುಗಡೆಯ ಹಂತದಲ್ಲಿ ಇದೆ. ಎಲ್ಲವನ್ನೂ ಅವರಿಂದ ಪಡೆದು ಓದುವ ಸೌಭಾಗ್ಯ ನನ್ನದಾಗಲಿ. ಅವರ ಸಾಹಿತ್ಯ ಸೇವೆ ಬಿಡುವಿಲ್ಲದೇ ನಿರಂತರವಾಗಿ ಸಾಗಲಿ ಎಂದು ಹಾರೈಸುವೆ.


  • ರುಕ್ಮಿಣಿ ಎಸ್ ನಾಯರ್ – ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW