‘ಮಡಿಲ ನಕ್ಷತ್ರ’ ಪುಸ್ತಕ ಪರಿಚಯ – ಪ್ರಭಾವತಿ ಹೆಗಡೆ



‘ಜಗದ ಕಣಕಣವೂ ಕಳಾಹೀನವಾದೀತು ಪ್ರೀತಿಯಿಲ್ಲದಿರಲು, ಜೀವತಂತುಗಳಲ್ಲಿ ಉಳಿವಿನ ಮಾತೆಲ್ಲಿ ಪ್ರೇಮತಂತುವಿಲ್ಲದಿರಲು‘… ಎಂದು ಪ್ರೀತಿಯ ಮಹತಿಯನ್ನು ಮನಗಾಣಿಸುವ ರೇಖಾ ಭಟ್ಟರ ಕಾವ್ಯ ಸಾಹಿತ್ಯ ಕೃಷಿಯ ಬಗ್ಗೆ ಮತ್ತು ‘ಮಡಿಲ ನಕ್ಷತ್ರ’ ಗಜಲ್  ಸಂಕಲನದ ಬಗ್ಗೆ ಲೇಖಕಿ ಪ್ರಭಾವತಿ ಹೆಗಡೆ ಅವರು ಚಂದವಾಗಿ ವರ್ಣಿಸಿದ್ದಾರೆ. ಮುಂದೆ ಓದಿ…

ಪುಸ್ತಕ : ‘ಮಡಿಲನಕ್ಷತ್ರ’ ಗಜಲ್ ಸಂಕಲನ.
ಕವಿಯತ್ರಿ : ರೇಖಾ ಭಟ್ಟ. ಹೊನ್ನಗದ್ದೆ.
ಪ್ರಕಾಶಕರು : ಅದಿತಿ ಪ್ರಕಾಶನ ಶಿರಸಿ.
ಪ್ರಥಮ ಮುದ್ರಣ : 2019
ಬೆಲೆ : ರೂ. 90/-

‘ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು’ ಇವರ ಧನಸಹಾಯ ಪಡೆದ ಕೃತಿಯಿದು.

* ಮಡಿಲ ನಕ್ಷತ್ರ ನೀಡಿದ ಹಿತಾನುಭೂತಿ *

‘ಮಡಿಲ ನಕ್ಷತ್ರ’ ಇದು- ಗಗನದ ತಾರೆಗಳ ‘ಹೊಂಬೆಳಕನ್ನೂ , ಪ್ರಖರತೇಜವನ್ನೂ’ ಹೊರಸೂಸುವಂತಿರುವ ಗಜಲ್ ಗಳ ಕಾವ್ಯಗುಚ್ಛ.

ವಿಶಿಷ್ಟ ಕಾವ್ಯಪ್ರಕಾರವಾದ ಗಜಲ್ ಬಗ್ಗೆ ನಂಗೆ ತಿಳಿದಿರುವುದು ಅತ್ಯಲ್ಪ. ತಿಳಿದುಕೊಳ್ಳುವ ಆಸಕ್ತಿಯೂ ಇರಲಿಲ್ಲ. ‘ಭಾವತೀವ್ರತೆಯ ಪ್ರೇಮಕವಿತೆಗಳೆಂದು’ ಗುರುತಿಸಿಕೊಂಡ ಈ ಗಜಲ್ ಗಳೆಡೆಗೆ ನಂಗೆ ಅಷ್ಟೇನೂ ಒಲವಿರಲಿಲ್ಲ. ನಮ್ಮ ಕನ್ನಡದ ಛಂದಸ್ಸಿನ ‘ಷಟ್ಪದಿ, ಸುಗಮವಾಗಿ ಹಾಡಬಹುದಾದ ಭಾವಗೀತೆಗಳಿಗಿಂತ ಹೆಚ್ಚುಗಾರಿಕೆ ಇದರಲ್ಲೇನಿದೆ?’ ಅಂತಲೂ ಅನಿಸಿದ್ದಿದೆ. ಆದರೂ ಕೆಲವೊಂದು ಗಜಲ್ ಗಳ ಮೇಲೆ ಬರಿದೇ ಕಣ್ಣು ಹಾಯಿಸುವಾಗ, ಅವುಗಳ ಉತ್ಕೃಷ್ಟ ಭಾವ ನನ್ನ ಮನವನ್ನು ಸೆಳೆದಿತ್ತು. ಆಗ, ಅವುಗಳ ಪರಿಪೂರ್ಣ ಸೊಬಗನ್ನಾಸ್ವಾದಿಸಲು ಗಜಲ್ ಬಗ್ಗೆ ತಿಳಿದುಕೊಳ್ಳಬೇಕು, ಹೆಚ್ಚು ಓದಬೇಕೆಂಬ ಆಸ್ಥೆಯೂ ಮೂಡಿತ್ತು. ಆಗಲೇ ಈ ‘ಮಡಿಲನಕ್ಷತ್ರ’ ವೆಂಬ ಗಜಲ್ ಸಂಕಲನದ ಕುರಿತು ತಿಳಿದು, ಪುಸ್ತಕವನ್ನು ಮನೆಗೆ ಬರಮಾಡಿಕೊಂಡೆ. ನಿಜವಾಗಿಯೂ, ಈ ಸಂಕಲನದಲ್ಲಿರುವ ಕವಿತೆಗಳ ಸೌಂದರ್ಯ ಮತ್ತು ಭಾವಗಳ ಆಳಹರಿವುಗಳು, ಗಜಲ್ ಬಗ್ಗೆ ನನ್ನ ಅಭಿಪ್ರಾಯ ಬದಲಿಸಿದವು. ನಾನು ಬಹಳ ಇಷ್ಟಪಡುವ ಕೆಲವು ಭಾವಗೀತೆಗಳಂತೆಯೇ ರೇಖಾಅವರ ಈ ಗಜಲ್ಗಳು ಸಹ ಮನದಲ್ಲಿ ಅಚ್ಚೊತ್ತಿದವು.

ಈ ಸಂಕಲನದ ಮುನ್ನುಡಿಯಲ್ಲಿ ಗಜಲ್ ಕವಿ ಶ್ರೀಯುತ ಡಾ. ಗೋವಿಂದ ಹೆಗಡೆಯವರು ‘ಗಜಲ್’ ಬಗ್ಗೆ ತಿಳಿಸಿಕೊಟ್ಟ ಕಾಪಿಯಾ, ರದೀಫ್ ಮತ್ಲಾ, ಷೇರ್ ಗಳೆಲ್ಲದರ ನಿಯಮ ಲಕ್ಷಣಗಳನ್ನು ಅರಿತು, ಮುನ್ನಡೆದು ಕಾವ್ಯಗುಚ್ಛವನ್ನು ಸ್ಪರ್ಶಿಸಿದಾಗ …… ಆತ್ಮವಿಶ್ವಾಸ ತುಂಬುವ, ಚಿತ್ತಸುದೃಢಗೊಳಿಸುವ ನುಡಿಗಳು ಮನಮುಟ್ಟುತ್ತವೆ.

ಚಂದದ ಬದುಕು ಕಟ್ಟಿಕೊಳ್ಳಲು ಪೂರಕವಾಗುವಂತಹ ಆಸೆ, ಕನಸುಗಳನ್ನಿರಿಸಿಕೊಳ್ಳುವ ವಿವೇಚನೆ;
ಕಷ್ಟ ದುಗುಡಗಳನ್ನು ಮೆಟ್ಟಿನಿಲ್ಲುವ ಧಾರ್ಷ್ಟ್ಯ;

ಕೆಟ್ಟ ಕೋಪಿಷ್ಟ, ಮೂರ್ಖ ದುರ್ಜನರನ್ನೂ ಸಂಭಾಳಿಸುವ ಸಾಮರ್ಥ್ಯ;
ಕೃತಕತೆಯೇ ಮಿಂಚುತಿರುವ ಎಲ್ಲ ವಿಷಯ ವಸ್ತುಗಳ ನಡುವೆ ನೈಜವಾದುದನ್ನು ಗುರುತಿಸುವ ಜಾಣ್ಮೆ;

ಕರ್ಕಶ ಶಬ್ಧಗಳ ನಡುವೆಯೂ ಮೃದುಸ್ವರಗಳನ್ನು ಆಲಿಸುವ ಸಹೃದಯತೆ;

ಸೋಲಿಗೆ ಅಂಜದೇ ಮುನ್ನಡೆಯುವ ಛಲ..‌‌‌..

ಇವೆಲ್ಲವೂ ಉತ್ತಮ ಬದುಕಿಗೆ ಬೇಕಾಗುವ ಕಲೆಗಳೇ. ಇವುಗಳನ್ನು ನಮ್ಮ ಮನಸ್ಸಿಗೆ ಕಲಿಸಬೇಕು; ಅಂದರೆ ಈ ಕಲೆಗಳಲ್ಲಿ ನಾವು ಪರಿಣತರಾಗಬೇಕು ಎಂಬುದನ್ನು ಹೇಳುವ ಈ ಸಂಕಲನದ ಮೊದಲ ಗಜಲ್ ಎಷ್ಟು ಸೊಗಸಾಗಿ ಮೂಡಿಬಂದಿದೆ ನೋಡಿ–

ಬದುಕ ಕಟ್ಟುವ ಕಲೆಯ ಕನಸುಗಳಿಗೆ ಕಲಿಸಬೇಕು l
ಕತ್ತಲೆಯ ಅಟ್ಟುವ ಕಲೆಯ ಮನಸುಗಳಿಗೆ ಕಲಿಸಬೇಕುl

ಹಾದಿಯ ತುಂಬಾ ಬರಿಯ ಮೊನಚುಗಳೇ ಹಾಸಿದರೇನು l
ಮುಳ್ಳನು ಹೂವಾಗಿಸುವ ಕಲೆಯ ಪಾದಗಳಿಗೆ ಕಲಿಸಬೇಕು l

ಸುತ್ತಲೂ ಹೆಡೆಯೆತ್ತಿದರೇನು ಸಾವಿರ ಘಟಸರ್ಪಗಳು l

ವಿಷವಮಣಿಸಿ ತಣಿಸುವ ಕಲೆಯ ಕೈಗಳಿಗೆ ಕಲಿಸಬೇಕು l

ದೃಷ್ಟಿಗಳ ಕುಕ್ಕುತಿವೆ ತರತರದ ಗಿಲೀಟಿನ ಮಿಂಚುಗಳುl

ವಜ್ರವನ್ನು ಗುರುತಿಸುವ ಕಲೆಯ ಕಂಗಳಿಗೆ ಕಲಿಸಬೇಕು l

ಜಗದಬೀದಿಯಿದು ಅಲ್ಲಲ್ಲಿ ಗದ್ದಲದ ಗದ್ದುಗೆ ತಾನೇ l

ಸುಸ್ವರಗಳ ಆಲಿಸುವ ಕಲೆಯ ಕಿವಿಗಳಿಗೆ ಕಲಿಸಬೇಕು l

ಎಡವಿದರೂ ನಿಲ್ಲಬಾರದು ಸರಳರೇಖೆಯ ಪಯಣ l

ಗಮ್ಯ ತಲುಪುವ ಕಲೆಯ ನಮ್ಮ ನಡೆಗಳಿಗೆ ಕಲಿಸಬೇಕು ll

ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುವ ಈ ಸಾಲುಗಳನ್ನು ಮನನ ಮಾಡಿಕೊಳ್ಳುತ್ತ, ಮುಂದಿನ ಪುಟಗಳನ್ನು ತಿರುವುತ್ತ ಹೋದಂತೆ-

‘ಆಹಾ! ಎಷ್ಟೊಂದು ಆಪ್ತವೆನಿಸುವ ನವಿರು ಕವಿತೆಗಳಿವು’ ಎನಿಸದಿರದು. ಒಮ್ಮೆ ಕಣ್ಣು ಹಾಯಿಸಿದರೂ, ಥಟ್ಟನೆ ಎದೆಗಿಳಿಯುವ ಇವುಗಳ ಆಪ್ತ ಭಾವಗಳಿಗೆ, ಪದ ಲಾಲಿತ್ಯಕ್ಕೆ ಮನಸೋಲದಿರಲಾಗದು.

ಇಲ್ಲಿನ ಗಜಲ್ ಗಳ ಮೆಲುಮಾತು- ಹೆಣ್ಣಿನ ಕೋಮಲ ಭಾವಗಳನ್ನು ಅನಾವರಣಗೊಳಿಸುವಂತೆಯೇ, ದಟ್ಟ ವಿಷಾದವನ್ನೂ ದಿಟ್ಟ ಧ್ವನಿಯಲ್ಲಿ ಪ್ರಚುರಪಡಿಸುತ್ತದೆ. ಇವುಗಳಲ್ಲಿ ಭಾವತೀವ್ರತೆಯೂ ಇದೆ; ಶಾಂತಮನಸ್ಸಿನ ಚಿಂತನೆಯೂ ಇದೆ.

ಪ್ರೇಮ, ಸ್ನೇಹ, ಅಳು, ನಗು, ಹರ್ಷ, ವಿಷಾದ, ತಲ್ಲಣ, ಬೇಗುದಿ , ಬಂಧ, ಅನುಬಂಧ…. ಹೀಗೆ ಎಲ್ಲ ಭಾವತಂತುಗಳನ್ನೂ ಮೀಟುವ ಈ ಹಾಡುಗಬ್ಬಗಳು-

‘ನಮ್ಮಂತರಾಳದ ಧ್ವನಿಗೆ ಜೀವ ತುಂಬಿವೆಯೇನೋ’ ಅನಿಸುವಂತೆ ಆತ್ಮೀಯವೆನಿಸುತ್ತವೆ;

ಇವುಗಳಲ್ಲಿ ಬಳಸಿರುವ ಸುಂದರ ಪ್ರತಿಮೆಗಳು ಸಹ ಗಮನ ಸೆಳೆಯುತ್ತವೆ; ರೇಖಾರ ಸೃಜನಶೀಲತೆಗೆ ಬೆರಗು ಮೂಡುತ್ತದೆ. ಅಂತಹ ಕೆಲವು ಗಜಲ್ ಗಳ ಝಲಕ್ ನಿಮಗಾಗಿ –

‘ಜಗದ ಕಣಕಣವೂ ಕಳಾಹೀನವಾದೀತು ಪ್ರೀತಿಯಿಲ್ಲದಿರಲು, ಜೀವತಂತುಗಳಲ್ಲಿ ಉಳಿವಿನ ಮಾತೆಲ್ಲಿ ಪ್ರೇಮತಂತುವಿಲ್ಲದಿರಲು‘… ಎಂದು ಪ್ರೀತಿಯ ಮಹತಿಯನ್ನು ಮನಗಾಣಿಸುವ ಕವಯಿತ್ರಿ ರೇಖಾ ಈ ಗಜಲ್ ನ ಮುಕ್ತಾದಲ್ಲಿ –

‘ಅಂತರಾಳದಲಿ ಕವಿತೆ ಹುಟ್ಟುವುದೇ ಈ ಬದುಕ ನೆಚ್ಚದಿರಲು?’ ಎಂದು ಕೇಳುತ್ತ, ಪ್ರೀತಿಯನ್ನು ಬದುಕಿಗೇ ಸಮೀಕರಿಸುತ್ತಾರೆ ಮತ್ತು ಈ ಬದುಕನ್ನು ಪ್ರೀತಿಸದಿದ್ದರೆ ಅಂತರಾಳದಿಂದ ಕವಿತೆ ಹುಟ್ಟುವುದು ಕಷ್ಟವೆಂಬುದನ್ನು ಮಾರ್ಮಿಕವಾಗಿ ಹೇಳುತ್ತಾರೆ. ನಿಜವಲ್ಲವೇ….

ಸುಂದರ ಕವಿತೆ ಹುಟ್ಟಬೇಕೆಂದರೆ ಅಂತಃಸ್ಫೂರ್ತಿ, ಆ ಸ್ಫೂರ್ತಿಗೆ ಸ್ರೋತವಾಗುವ ಬದುಕಿನೆಡೆಗಿನ ಪ್ರೀತಿ ಬೇಕಲ್ಲವೇ….

ಪ್ರೀತಿಯ ಬಗೆಗೆ ಮಾತಾಡುವಾಗ ಜೊತೆಗೇ ತ್ಯಾಗವೂ ತಳುಕು ಹಾಕಿಕೊಳ್ಳುತ್ತದೆ. ಪ್ರೀತಿಪಾತ್ರರಿಗಾಗಿ ಮಾಡುವ ತ್ಯಾಗದ ಪರಿಯನ್ನು ಹೃದಯಸ್ಪರ್ಶಿಯಾಗಿಸುವ ಈ ‘ಗಜ‌‍ಲ್ ‘ ಅನ್ನು ಇಲ್ಲಿ ಇಡಿಯಾಗಿ ಪಡಿಮೂಡಿಸುವೆ. ನಿಮ್ಮೆದೆಯನ್ನೂ ಇದು ತಾಕಲಿ-

ನಿನ್ನ ಮಾತುಗಳು ಧ್ವನಿಸಲೆಂದು ನಾ ಮೌನವನ್ನು ತಬ್ಬಿಕೊಂಡೆ,
ನಿನ್ನ ಕನಸುಗಳು ಅರಳಲೆಂದು ನನ್ನ ಬಯಕೆಗಳ ಬಸಿದುಕೊಂಡೆ l

ಮೋಡಗಳ ಮೀರಿ ಆಗಸದಗಲ ಹಬ್ಬುವ ಬಯಕೆಯಿತ್ತು,
ನಿನ್ನೆತ್ತರವ ಮೀರಬಾರದೆಂದು ಚಿಗುರಗಳ ಚಿವುಟಿಕೊಂಡೆ l

ನಡಿಗೆಯಲ್ಲಿ ಕಸುವಿತ್ತು ಎದೆಯಲ್ಲಿ ಹುರುಪಿಗೆಲ್ಲಿ ಕೊರತೆ,

ಮುಂದಾಳು ನೀನಾಗಲೆಂದು ಹೆಜ್ಜೆಗಳ ಹಿಂದೆಗೆದುಕೊಂಡೆ l

ಎಣಿಕೆಗೆ ನಿಲುಕದ ನಕ್ಷತ್ರಗಳ ರಾಶಿಯೇ ಉಡಿಯೊಳಗಿತ್ತು,

ನೀನು ಮಿಂಚಲೆಂದು ನನ್ನ ಹೊಳಹುಗಳ ಮುಚ್ಚಿಟ್ಟುಕೊಂಡೆ |

ಹೊಸ ಮಿಡಿತಗಳೆಡೆಗೆ ಸದಾ ‘ರೇಖೆ’ಯ ಮನದ ತುಡಿತವು,

ನಿನ್ನ ದಾಟಬಾರದೆಂದು ನನ್ನ ಚಲನೆಗಳಿಗೆ ಗಡಿ ಹಾಕಿಕೊಂಡೆ l

– ಈ ಸಾಲುಗಳಲ್ಲಿ ಪ್ರೀತಿ, ತ್ಯಾಗದ ಎಡೆಯಲ್ಲಿ, ‘ಇದು ಹೆಣ್ಣಿಗೆ ಅನಿವಾರ್ಯವೆಂಬಂತಾಗಿರುವ ಅಸಹಾಯಕತೆಯ ಒಳಗುದಿಯೂ, ದಟ್ಟ ವಿಷಾದವೂ’ ಗೋಚರಿಸುತ್ತದಲ್ಲವೇ…..
ಈ ರೀತಿ ತನ್ನವರಿಗಾಗಿ ತನ್ನ ಬಯಕೆಗಳಿಗೆ ಕಡಿವಾಣ ಹಾಕುವ ಹೆಣ್ಣಿನ ಬಗೆಗಿನ–

‘ಬಾಳ ಕವಿತೆಯ ಪ್ರತಿಸಾಲಲ್ಲೂ ಅವಳು ಇಣುಕಿದರೂ, ಸಾಮಾನ್ಯ ರಾಗಾಲಾಪಗಳಿಗೆ ನಿಲುಕದ ಹಾಡು’
‘ಅವಳನ್ನು ಅವಳಾಗಿರಲು ಬಿಡದಿದ್ದರೂ ಹೆಣ್ತನ ಬತ್ತದು’
‘ಅವಳೆಂದರೆ ಅವನಿಗೆ ನೆಮ್ಮದಿಯ ಗೂಡು’
ಈ ಸಾಲುಗಳು ಕಂಡೂ ಕಾಣದ ಅವಳ ಹಿರಿಮೆಯನ್ನು ಬಿಂಬಿಸುತ್ತವೆ.

ಗಜಲ್ ಗಳೆಂದರೆ ‘ಪ್ರೇಮದ ತೀವ್ರತೆ ಮತ್ತು ವಿರಹದ ಭಾವಾರ್ದ್ರತೆ’ ಎನ್ನುತ್ತಾರೆ ಖ್ಯಾತ ಲೇಖಕ ಶ್ರೀಯುತ ಡಾಕ್ಟರ್ ಆನಂದ ಋಗ್ವೇದಿಯವರು. ಅಂತಹ ಭಾವತೀವ್ರತೆಯ ವಿರಹವನ್ನು ಪ್ರತಿಬಿಂಬಿಸುವ ಸಾಲುಗಳು–

‘ಎದೆಬಯಲ ಅಗೆದು ಅದೆಷ್ಟು ಸುಳ್ಳಿನ ಗಿಡ ನೆಟ್ಟೆ ನೀನು,
ಒಂದರಲ್ಲಾದರೂ ಹೂ ಬಿಡಲೆಂದು ಕಾಯುತ್ತಿದ್ದೆ ನಾನು’….
ಎದೆಕಾಡ ಬಿದಿರಮೇಳೆ ನಿನಗಾಗಿ ತುಡಿದು ಕೊಳಲಾಗಿತ್ತು,
ಒಲವನಾದ ಹೊಮ್ಮಿಸದೇ ಮುರಿದು ಹೋದೆ ನೀನು’…..
‘ಮುಗಿಲೆತ್ತರ ಬೆಳೆದು ನಿಂತಿತ್ತು ಒಲವ ಮರವು,
ನಂಬಿಕೆಯ ಬುಡವ ಗೆದ್ದಲು ಕೊರೆಯಲು ಕಾರಣವೇನಿತ್ತು’…..

ಇವು ಅಂತಃಕರಣವನ್ನು ತಟ್ಟಿ ವಿಷಾದ ಮೂಡಿಸಿದರೆ, ಕವಯಿತ್ರಿ ಸಾಂತ್ವನಿಸುವ ಪರಿ ಇದು–

‘ಬರುವುದೆಲ್ಲ ಬರಲಿಬಿಡು ಅಳುಕದಿರು ಮನವೆ
ಇರುವುದೆಲ್ಲ ಅಳಿದರೂ ಮಿಡುಕದಿರು ಮನವೆ’….
ಬೂದಿ ಮುಚ್ಚಿದ ಕೆಂಡ ‘ತಾನೇ ಬೂದಿಯಾಗಲಿ
ನೆಪವ ಹೇಳಿ ಒಳಗುದಿಯ ಬೆದಕದಿರು ಮನವೆ’..‌.

ಎಂದು ಹೇಳುವ ಮೂಲಕ ಹಳೆಯ ಗಾಯವನ್ನು ಕೆದಕದಿರುವ ಸಹನೆಯಿರಲಿ, ಕಾಲವೇ ಅದನ್ನು ಮಾಯಿಸುತ್ತದೆ ಎಂಬ ಭರವಸೆಯನ್ನು ನೀಡುತ್ತಾರೆ. ಜೊತೆಗೆ

‘ಕುಸಿಯಬೇಡ ಬದಲಾಗಿ ಹಾರಿಬಿಡು ಎತ್ತರವು ದಕ್ಕೀತು,
ಕೊರಗಬೇಡ ಹೊರಳಿಬಿಡು ಹೊಸಮಗ್ಗುಲು ಸಿಕ್ಕೀತು’
‘ಬಯಕೆಗಳ ಬದಲಾಯಿಸಿಬಿಡು ಹೊಸದಾರಿ ಸುರುಳಿ ಬಿಚ್ಚಿತು’
‘ಬಿತ್ತಗಳ ಬದಲಾಯಿಸಿಬಿಡು ನನಸೆಂಬ ಫಸಲ ಕೊಟ್ಟೀತು’
ಎಂದು ಉತ್ತಮ ಸಲಹೆಗಳನ್ನೂ ಸೂಚಿಸುತ್ತಾರೆ.

ಹಾಗೆಯೇ-

‘ಹೊರಗೆ ಏರಿದಷ್ಟು ನಮ್ಮೊಳಗೆ ಇಳಿಯಲಾರೆವು ನಾವು,
ನಮ್ಮ ಅಂತಃಸತ್ವದ ಅರಿವು ಮೂಡಿಸಲು ಬೇಕು ಗುರು’….
‘ಕನಸಕುಸುಮ ನಕ್ಕರೆ, ಮಧು ಅತ್ತರೆ ನಂಜಲ್ಲವೆ’…..
‘ನಮ್ಮೊಳಗನು ನಾವು ಅಳೆವುದು ಬಹಳವಿದೆ, ಪರರೊಳಗಿನ ಪಂಕಿಲವ ಹುಡುಕದಿರು ಮನವೆ’…. ಇಂತಹ ಕೆಲ ಸಾಲುಗಳು ಚಿಂತನೆಗೆ ಹಚ್ಚುತ್ತವೆ.

ಇಂತಹ ಒಳಗುದಿ, ವಿಷಾದ, ದುಗುಡ ದುಮ್ಮಾನ, ನೋವು, ನಲಿವು, ಕಷ್ಟ, ಸುಖ, ಚಿಂತನ ಮಂಥನಗಳೆಲ್ಲವನ್ನೂ ಹಂಚಿಕೊಳ್ಳುವ ನಿಷ್ಕಲ್ಮಷ ಸ್ನೇಹಬಂಧದ ಕುರಿತು ಕವಿತೆಗಳಿಲ್ಲದ ಯಾವುದೇ ಕಾವ್ಯಪ್ರಕಾರವೂ ಇರಲಾರದು. ಹಾಗಾಗಿ ಗಜಲ್ ಗಳಲ್ಲೂ ಸ್ನೇಹಕ್ಕೆ ಸ್ಥಾನ ಇದ್ದೇ ಇರುತ್ತದೆ. ಅಂತೆಯೇ ಈ ಸಂಕಲನದಲ್ಲಿ ಸ್ನೇಹದ ಬಗೆಗೆ ರೇಖಾ ಬರೆಯುತ್ತಾರೆ –

‘ಬದುಕಿಗೆ ಹಸಿರುಡಿಸಿ ನಗಿಸುವ ಪತ್ರ ಹರಿತ್ತು ಈ ಸ್ನೇಹ,
ನಂಬಿಕೆಯ ಚಿಪ್ಪಿನೊಳಗಿನ ಆಣಿಮುತ್ತು ಈ ಸ್ನೇಹ’ ಎಂದು ಬಣ್ಣಿಸುತ್ತ,
‘ಏರಲಾಗದ ಘಟ್ಟಗಳಲ್ಲಿ ಊರುಗೋಲಂತೆ ಗೆಳೆತನ,
ದಣಿದು ಕುಸಿದ ಜೀವಕೆ ಭರವಸೆಯ ಕೈತುತ್ತು ಈ ಸ್ನೇಹ’

ಎಂದು ಗೆಳೆತನದ ಆಪ್ತತೆಯನ್ನು ತೋರಿಸುತ್ತ,

‘ಸುಮನಸಿಗೆ ಮಾತ್ರ ಒಲಿವ ಬೆಲೆಕಟ್ಟಲಾಗದ ಸೊತ್ತು ಈ ಸ್ನೇಹ’ವೆಂಬುದನ್ನು ಬಹುಚಂದವಾಗಿ ಹೇಳುತ್ತಾರೆ. ಒಂದಕ್ಕಿಂತ ಒಂದು ಸುಂದರವಾದ ಗಜಲ್ ಗಳ ಈ ಕಾವ್ಯಗುಚ್ಛದಲ್ಲಿ ಅಮ್ಮನ ಕುರಿತಾದ ಒಂದು ಗಜಲ್ ನನಗೆ ಬಹಳವೇ ಆಪ್ಯಾಯವೆನಿಸಿದೆ. (ಬಹುಶಃ ಎಲ್ಲರಿಗೂ ಇದು ಆಪ್ಯಾಯವೆನಿಸುವುದು)

‘ಕಡಲು ಸಿಹಿಯಾಗಿದೆಯೆಂದರೆ ಅಲ್ಲಿ ಅಮ್ಮನಿದ್ದಾಳೆ,
ಆ ಮಡಿಲು ಅತಿ ಹಿತವಾಗಿದೆಯೆಂದರೆ ಅಲ್ಲಿ ಅಮ್ಮನಿದ್ದಾಳೆ’

ಇಂತಹ ಅಪರಿಮಿತ ವಾತ್ಸಲ್ಯದ ಚೊಕ್ಕ ಪ್ರೇಮಮಯಿ ಅಮ್ಮನ ಇರುವಿಕೆಯನ್ನು , ಜೀವಜಗತ್ತಿನ ಎಲ್ಲ ಒಳಿತುಗಳಿಗೂ, ನಲಿವು ನೇವರಿಕೆಗಳಿಗೂ ಸಮೀಕರಿಸುವ ಈ ಗಜಲ್ ಮುಂದುವರಿದು ಹೇಳುತ್ತದೆ-

‘ಕೋಟೆ ಕೊತ್ತಲ, ಅರಮನೆಗಳ ಅಡಿಪಾಯ ಭದ್ರವಾಗಿದೆಯೆಂದರೆ ಅಲ್ಲಿ ಅಮ್ಮನಿದ್ದಾಳೆ’
‘ಕಂದನ ಹಾದಿಯಲ್ಲಿ ಹೂಗಳ ಘಮವಿದೆಯೆಂದರೆ ಅಲ್ಲಿ ಅಮ್ಮನಿದ್ದಾಳೆ’
‘ಜೋಪಡಿಯಲ್ಲೂ ದೀಪ ಬೆಳಗಿದೆಯೆಂದರೆ ಅಲ್ಲಿ ಅಮ್ಮನಿದ್ದಾಳೆ’

ಎಂತಹ ಮಧುರಾನುಭೂತಿಯಲ್ಲವೇ!….

ಈ ಗಜಲ್ ಕೊನೆಯ ಸಾಲು

‘ಆ ಸೂರ್ಯ ತಾರೆಯರು ಬೆಳಗಿವೆಯೆಂದರೆ ಅಲ್ಲಿ ಅಮ್ಮನಿದ್ದಾಳೆ’
ಆಹಾ!! ಇದಕ್ಕಿಂತ ಚೆನ್ನಾಗಿ ಅಮ್ಮನ ಔನ್ನತ್ಯವನ್ನು ಶ್ರುತಪಡಿಸಲು ಸಾಧ್ಯವೇ?

ಹೀಗೆ- ಪ್ರೇಮ, ಮಮತೆ, ವಿರಹ, ನೋವು, ನಲಿವು, ಸ್ನೇಹ, ನಂಬಿಕೆ, ಕವಿತೆ ಹುಟ್ಟುವ ಪರಿ, ಬಾಳಪಯಣದ ಗುರಿ….ಎಲ್ಲವುಗಳ ಬಗ್ಗೆ ವಿವಿಧ ವಸ್ತು, ಆಯಾಮಗಳಲ್ಲಿ ರಚಿತವಾಗಿರುವ, ಒಟ್ಟು ಅರವತ್ತೆರಡು

‘ಮಡಿಲನಕ್ಷತ್ರ’ ಗಜಲ್ ಸಂಕಲನದ ಲೇಖಕಿ ರೇಖಾ ಭಟ್ಟ. ಹೊನ್ನಗದ್ದೆ

#ಗಜಲ್ ಗಳ ಈ ಸಂಕಲನದಲ್ಲಿ ಹೆಣ್ಣಿನ ಸ್ವರವೇ ಹೆಚ್ಚಾಗಿ ಧ್ವನಿಸಿದ್ದರೂ, ಗಂಡಿನ ಪ್ರೇಮಾಲಾಪಗಳೂ, ವಿರಹವೇದನೆಗಳೂ ಇವೆ. ಇಂತಹದೊಂದು ಅತ್ಯುತ್ತಮ ‘ಗಜಲ್ ಸಂಕಲನ’ಕ್ಕೆ, ಶ್ರೀಯುತ ಡಾ. ಗೋವಿಂದ ಹೆಗಡೆಯವರು, ಓದುಗರಿಗೆ ಅರ್ಥವಾಗುವಂತೆ ‘ಗಜಲ್ ನ’ ಗುಣಲಕ್ಷಣಗಳನ್ನೂ ತಿಳಿಸಿ, ಚಂದವಾಗಿ ಮುನ್ನುಡಿ ಬರೆದಿದ್ದಾರೆ. ಅಂತೆಯೇ, ಇದಕ್ಕೆ ಬೆನ್ನುಡಿ ಬರೆದ ಖ್ಯಾತ ಲೇಖಕರಾದ ಶ್ರೀಯುತ ಡಾ. ಆನಂದ ಋಗ್ವೇದಿಯವರು ಹೇಳುವ ಮಾತುಗಳು –

“ಬೇರೆ ಭಾಷೆಯಿಂದ ಬಂದ ಈ ವಿಶಿಷ್ಟ ಕಾವ್ಯಪ್ರಕಾರವನ್ನು ಕನ್ನಡದ್ದೇ ಆಗಿಸುವಲ್ಲಿ, ಬಹಳಷ್ಟು ಕನ್ನಡದ ಮನಸ್ಸುಗಳು ಶ್ರಮಿಸಿ, ಕಾಲು ದಾರಿ ನಿರ್ಮಿಸಿವೆ. ಅಂತಹ ದಾರಿಯಲ್ಲಿ ರೇಖಾ ತಮ್ಮದೇ ಆದ ಗಟ್ಟಿ ಹೆಜ್ಜೆಗುರುತನ್ನು ಮೂಡಿಸಿದ್ದಾರೆ. ಈ ನೆಲದ ಸಾರ ಸತ್ವ ಹೀರಿ, ಮಡಿಲ ನಕ್ಷತ್ರದಲ್ಲಿ ತೆನೆಗಟ್ಟಿದ ಹಾಲ್ಗಾಳು ಬೆಳಸಷ್ಟೇ ಅಲ್ಲ, ಈ ನೆಲದ ಭರವಸೆಯೂ ಹೌದು. ಎಂದೇ ಪುರುಷ ಮನಸ್ಥಿತಿಯ ಈ ಪ್ರಕಾರವನ್ನು ಸ್ತ್ರೀ ಧ್ವನಿಯಾಗಿಸುವಲ್ಲಿ ಯಶಸ್ಸು ಪಡೆದ, ಸುಲಭವಲ್ಲದ ಸರಳವಲ್ಲದ ಈ ‘ರೇಖಾ’ಚಿತ್ರ ಬಾಳ ಅನಂತ ಸಾಧ್ಯತೆಗಳನ್ನು ಇಲ್ಲಿ ರೇಖಿಸಿದೆ.”

ರೇಖಾ ಅವರ ಗಜಲ್ ಸಂಕಲನ ಓದಿದವರಿಗೆ, ಈ ಮಾತುಗಳಲ್ಲಿ ಅತಿಶಯೋಕ್ತಿ ಇಲ್ಲವೆನಿಸುತ್ತದೆ; ರೇಖಾರ ಬಗ್ಗೆ ಅಭಿಮಾನವೂ ಮೂಡುತ್ತದೆ.

ಸಹೋದರಿ ರೇಖಾರ ಕಾವ್ಯ ಸಾಹಿತ್ಯ ಕೃಷಿ ಇನ್ನು ಮುಂದೆಯೂ ಚಂದವಾಗಿ ನಡೆಯುತ್ತಿರಲಿ; ಇಂತಹ ಇನ್ನಷ್ಟು ಸಾಹಿತ್ಯ ಕೃತಿಗಳು ಅವರಿಂದ ರಚಿಸಲ್ಪಟ್ಟು, ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಲಿ ಎಂದು ಹಾರೈಸುತ್ತ, ಈ ‘ಮಡಿಲ ನಕ್ಷತ್ರ’ ನನ್ನೆದೆಯನ್ನು ತಟ್ಟಿದ ಭಾವವನ್ನು, ನನ್ನದೆ ಆದ ಈ ‘ಗಜಲ್’ನಲ್ಲಿ ಹೇಳುವ ಒಂದು ಚಿಕ್ಕ ಪ್ರಯತ್ನದೊಂದಿಗೆ ಈ ಲೇಖನ ಮುಗಿಸುವೆ.

ಈ ಕಾವ್ಯಕುಸುಮದ ಸೊಬಗಿನೈಸಿರಿಗೆ ನಾ ಬೆರಗಾದೆ ಗೆಳತಿ l
ಈ ಸುಮದ ಗಂಧವ ಆಘ್ರಾಣಿಸಿ ನಾ ಹರ್ಷಿತಳಾದೆ ಗೆಳತಿ ll

ನವಿರು ಪದದಲಿ ನೀ ಹೆಣೆದ ಮಾಲೆಯಲಿ ಎನಿತು ಲಾಸ್ಯವಿಹುದು l
ಎದೆಯ ಭಾವಕೆ ನೀ ತುಂಬಿದಾ ರಂಗು ಮನವ ಸೆಳೆದಿದೆ ಗೆಳತಿ ll

ವಿಷಯ ವಸ್ತುವಿಗೆ ಪರಿಧಿ ಇರಿಸದೆ ನೀ ಎಳೆದೆ ಹಾಡುಗಬ್ಬದ ರೇಖೆ l

ನಿಯಮ ಮೀರದೇ, ಮಿನುಗುತಿಹ ಚುಕ್ಕೆಯಿದು ಆಹ್ಲಾದ ನೀಡಿದೆ ಗೆಳತಿ ll

ಗಜಲ್ ಬರೆವುದು ಎಟುಕದ ದ್ರಾಕ್ಷಿಯೆಂದು ನಾ ದೂರ ನಿಂತಿದ್ದೆನಂದು l

ಹುಳಿಯಲ್ಲವಿದು ಸಿಹಿ ಸ್ವಾದವಿಹುದೆಂದು ನೀ ತಿಳಿಸಿದೆ ಗೆಳತಿ ll

ಹೊಸಹೊಳಪಿನ ನಿನ್ನ ಮಡಿಲನಕ್ಷತ್ರವ ಪ್ರಭೆಯು ಮೋಹಿಸಿಹಳು l

ಮಿಂಚುತಿರಲಿ ನಿನ್ನ ಕಾವ್ಯತಾರೆ ಎಂದು ಮನ ಹಾರೈಸಿದೆ ಗೆಳತಿ ll


  • ಪ್ರಭಾವತಿ ಹೆಗಡೆ (ಲೇಖಕರು, ವಿಮರ್ಶಕರು) ಶಿರಸಿ

One thought on “‘ಮಡಿಲ ನಕ್ಷತ್ರ’ ಪುಸ್ತಕ ಪರಿಚಯ – ಪ್ರಭಾವತಿ ಹೆಗಡೆ”

  1. ಮಡಿಲ ನಕ್ಷತ್ರ , ನಾನು ಓದಿರುವೆ.ತುಂಬಾ ಇಷ್ಟವಾದವು ಗಜಲ್ ಗಳು. ರೇಖಾ ಭಟ್ ಪ್ರತಿಭಾವಂತ ಗಜಲ್ ಕವಯಿತ್ರಿ . ಅವಲೋಕನವೂ ಚೆನ್ನಾಗಿ ಮೂಡಿಬಂದಿದೆ. ಇಬ್ಬರಿಗೂ ಅಭಿನಂದನೆಗಳು 💐💐🙏🙏

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading