‘ಮೂಚಿಮ್ಮ’ ಪುಸ್ತಕ ಪರಿಚಯ – ಪ್ರಭಾವತಿ ಹೆಗಡೆ



ಸೂಕ್ಷ್ಮ ನೋಟವನ್ನೂ, ಆಳವಾದ ಓದಿನ ಹರಹನ್ನೂ ಹೊಂದಿರುವ ಪ್ರಭಾವತಿಯವರು ಡಾ. ಅಜಿತ್ ಹರೀಶಿ ಅವರ ‘ಮೂಚಿಮ್ಮ’ ಕಥಾಸಂಕಲನದ ಕುರಿತು ವಿಸ್ತೃತವಾಗಿ ಬರೆದಿದ್ದಾರೆ. ಮುಂದೆ ಓದಿ…

ಪುಸ್ತಕ – ಮೂಚಿಮ್ಮ
ಲೇಖಕರು– ಡಾ. ಅಜಿತ್ ಹರೀಶಿ
ಪ್ರಕಾಶನ – ಮೈಲ್ಯಾಂಗ್ ಬುಕ್ಸ್ ಪ್ರಕಾಶನ
ಮೊದಲ ಮುದ್ರಣ-2020
ಬೆಲೆ – ರೂ. 170/-

‘ಮೂಚಿಮ್ಮ’

ನನ್ನ ತಿಳಿವಳಿಕೆಗೆ ನಿಲುಕಿದ ಪರಿ ಕಥೆ, ಕವಿತೆ, ಲೇಖನವೆಲ್ಲವನ್ನೂ ಚಂದವಾಗಿ ಬರೆಯುವ ಡಾ. ಅಜಿತ್ ಹರೀಶಿಯವರ ‘ಮೂಚಿಮ್ಮ’ ಕಥಾಸಂಕಲನದ ಬಗ್ಗೆ ನನ್ನ ತಿಳಿವಿಗೆ ದಕ್ಕಿದಷ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಹತ್ತು ವಿಭಿನ್ನ ಕಥೆಗಳಿರುವ ಈ ಸಂಕಲನದಲ್ಲಿನ ಎಲ್ಲ ಕಥೆಗಳೂ ಚಂದವಾಗಿ ಓದಿಸಿಕೊಳ್ಳುವದರ ಜೊತೆಗೆ ಆಳವಾದ ಒಳನೋಟವನ್ನೂ ನೀಡುತ್ತವೆ. ಇದರಲ್ಲಿ ಮಲೆನಾಡಿನ ಗ್ರಾಮ್ಯ ಪರಿಸರದ ಹಿತವಾದ ಸಂವೇದನೆಯ ಕಥೆಯೂ ಇದೆ; ಉನ್ನತ ಸ್ತರದ ಆಧುನಿಕ ಜೀವನದ ಆವರಣದಿಂದ ಹೊರಬರಲು ತವಕಿಸುವ ಕಥೆಯೂ ಇದೆ. ಪ್ರೇಮದ ಪರಿಮಳವೂ ಇದೆ; ತಣ್ಣನೆಯ ಕ್ರೌರ್ಯವೂ ಇದೆ.

ಮೂಚಿಮ್ಮ ಕಥಾ ಸಂಕಲನದ ಮುಖಪುಟ

ಸಂಕಲನದ ಮೊದಲ ಕಥೆ ಆವಿ -ಇಷ್ಟಪಟ್ಟು ಮೆಡಿಕಲ್ ಓದಿಯೂ ವೈದ್ಯವೃತ್ತಿ ಮಾಡಲಾಗದೆ ಖಿನ್ನತೆಯಿಂದ ಬಳಲುವ ಶರತ್ ‘ಓದಿಗೆ ತಕ್ಕ ಕೆಲಸ ಸಿಗದೆ ಪರಿತಪಿಸುವ ಅನೇಕ ಯುವಜನರ’ ಪ್ರತಿನಿಧಿಯಾಗಿ ತೋರುತ್ತಾನೆ. ಅವನ ಅದೃಷ್ಟವೆಂಬಂತೆ ಬಾಲ್ಯಗೆಳತಿ ದಿಶಾ ಬಾಳಸಂಗಾತಿಯಾಗಿ ಅವನ ಹಳಿ ತಪ್ಪಿದ ಜೀವನವನ್ನು ಸರಿದಾರಿಗೆ ತರುತ್ತಾಳೆ. ಆದರೆ, ವಿಧಿಯ ಹೊಡೆತದಿಂದ ಬಾಳಲ್ಲಿ ಕತ್ತಲಾವರಿಸಿದಾಗ ದಿಶಾಗೆ ‘ತನ್ನನ್ನು ಬಿಟ್ಟು ಹೊಸಬೆಳಕಿನೆಡೆಗೆ ಹೋಗುವಂತೆ ಶರತ್ ಉದಾರತೆ ತೋರಿದರೂ’ ಶರತ್ ಜೊತೆಯಲ್ಲೆ ಬೆಳಕನ್ನರಸಲು ನಿರ್ಧರಿಸುವ ದಿಶಾಳ ಪಾತ್ರ ಇಷ್ಟವಾಗುತ್ತದೆ. ಇದರಿಂದಾಗಿ ಡಾಕ್ಟರ್ ಸುನಿಲ್ ಕಣ್ಣಿಂದ ಮೊದಲಬಾರಿಗೆ ಹನಿಯೊಂದು ಜಾರುತ್ತದೆ. ಈ ಸಂವೇದನೆ ಏಕೆಂದು ತಿಳಿಯಲು ಕಥೆಯನ್ನು ಪೂರ್ಣವಾಗಿ ಓದಬೇಕು. ನೆಲದಲ್ಲಿ ಇಂಗುವ ಅವಕಾಶವಿಲ್ಲದೆ ಆವಿಯಾಗುವ ಈ ಹನಿ ನಮ್ಮ ಹೃದಯವನ್ನು ಸ್ಪರ್ಶಿಸುತ್ತದೆ. ಕಥೆಯನ್ನು ಮತ್ತಷ್ಟು ಆಪ್ತವಾಗಿಸುತ್ತದೆ.

ನಟ – ನಟನೆಯನ್ನೆ ವೃತ್ತಿಯಾಗಿಸಿಕೊಂಡ ಯುವಂತಿಕಾ ಬಣ್ಣದ ಬದುಕಿನಾಚೆ ಒಬ್ಬ ಒಳ್ಳೆಯ ಗೆಳೆಯನನ್ನು ನಟರಾಜನಲ್ಲಿ ಕಂಡುಕೊಳ್ಳುತ್ತಾಳೆ. ಯಾವ ಅನಿವಾರ್ಯತೆ, ಸ್ವಾರ್ಥವಿಲ್ಲದೆ ಅಥವಾ ವಿಕೃತವಾಂಛೆಯೂ ಅಲ್ಲದೇ ತನ್ನನ್ನು ಪ್ರಾಮಾಣಿಕವಾಗಿ ಗೆಳೆಯನಿಗೆ ಸಮರ್ಪಿಸಿಕೊಳ್ಳುವ ನಟಿ, ತನ್ನಲ್ಲಿನ್ನೂ ಉಳಿಸಿಕೊಂಡಿರುವ ಸಹಜ ನವಿರುಭಾವಗಳಿಂದಲೆ ಗಮನ ಸೆಳೆಯುತ್ತಾಳೆ. ಆದರೆ ನಟನಲ್ಲದ ನಟರಾಜ ನಟನೆಯಿಂದಲೆ ಯುವಂತಿಕಾಳನ್ನು ಒಲಿಸಿಕೊಳ್ಳುತ್ತ, ತನ್ನ ಅಹಂಅನ್ನು ತೃಪ್ತಿಪಡಿಸುತ್ತಾನೆ. ನಂತರ– ತಾನು ಸಾಕಿಕೊಂಡಿದ್ದ ಜಿಂಕೆಮರಿಯನ್ನು ಬಂಧಮುಕ್ತಗೊಳಿಸುವೆನೆಂಬಂತೆ ಕಾಡಿಗೆ ಬಿಟ್ಟು ಬರುತ್ತಾನೆ. ಜಿಂಕೆಮರಿಯನ್ನು ಪ್ರತಿಮಾರೂಪವಾಗಿ ಬಳಸಿ ಹೆಣೆದ ಈ ಕಥೆ ಸೂಚ್ಯವಾದ ಗೂಢಾರ್ಥದೊಂದಿಗೆ ಕೊನೆಯಾಗುವುದು. ಇದು ‘ನಟನೆಯಿಂದ ಯುವಂತಿಕಾಳನ್ನು ಗೆದ್ದ ಪರಿ ಒಳಗೆಲ್ಲೋ ಚುಚ್ಚಿದ ಪರಿಣಾಮವೇನೋ…’ ಅನಿಸುವುದು.

ಮೂಚಿಮ್ಮ ಕಥಾ ಸಂಕಲನದ ಲೇಖಕರು ಡಾ. ಅಜಿತ್ ಹರೀಶಿ

ಸಂಕಲನದ ಶೀರ್ಷಿಕೆಯ ಕಥೆ ಮೂಚಿಮ್ಮ– ತುಂಬಾ ಇಷ್ಟವಾಗುವ ಕಥೆಯಿದು. ಹವ್ಯಕ ಭಾಷೆಯಸೊಗಡು, ಚಂದದ ನಿರೂಪಣೆ ಖುಷಿ ಕೊಡುತ್ತದೆ.

ಮೂಚಿಮ್ಮ, ರವೀಶ, ಸುಲೋಚನಾ ಇವರೆಲ್ಲ ಎಷ್ಟೊಂದು ಸಹಜವಾದ ಪಾತ್ರಗಳೆಂದರೆ…. ಇವು ಕಥೆಯ ಪಾತ್ರಗಳು ಅನಿಸದೆ, ನಮಗೆ ಗೊತ್ತಿರುವವರೇನೊ ಅನಿಸುವುದು. ನಮ್ಮ ಅಣ್ಣನೋ ತಮ್ಮನೋ ಹತ್ತಿರ ಕುಳಿತು, ಯಾರಿಗೂ ಗೊತ್ತಿಲ್ಲದಿರೋ ಒಂದು ಗುಟ್ಟಿನ ವಿಷಯ ಆತ್ಮೀಯವಾಗಿ ಹಂಚಿಕೊಂಡಹಾಗೆ ಅನಿಸುವುದು. ಕಥಾನಾಯಕ ರವೀಶ ಒಂದು ಕ್ಷಣ ಮೂಚಿಮ್ಮ, ತನಗೆ ನಿಧಿ ಕೊಡದಿರುವುದಕ್ಕೆ ಬೇಸರಪಟ್ಟರೂ ತಕ್ಷಣ ಮನಸ್ಸನ್ನು ನಿಯಂತ್ರಣಕ್ಕೆ ತಂದುಕೊಂಡು, ‘ಅದಕ್ಕೂ ಹೆಚ್ಚಿನ ಅವಳದಾದ ವಿದ್ಯೆ ಧಾರೆಎರೆದದ್ದಕ್ಕೆ’ ಖುಷಿಪಡುವುದು ಈ ಕಥೆಯನ್ನ ಮತ್ತಷ್ಟು ಉತ್ತಮ ಸ್ಥಾನಕ್ಕೆ ಏರಿಸುವುದು.

ವಿಲಿಪ್ತ– ಈ ಕಥೆಗೆ ವಿಶಾಲವಾದ ಸಾಮಾಜಿಕ ಆಯಾಮವೂ ಇದೆ… ಇದರ ಬಗ್ಗೆ ಒಂದೆರಡು ಸಾಲಲ್ಲಿ ಹೇಳೋದು ಸ್ವಲ್ಪ ಕಷ್ಟ. ಈ ಕಥೆ ಓದುವಾಗ–ನಮ್ಮ ಎಷ್ಟೋ ಮಠಗಳ ಸ್ವಾಮೀಜಿಗಳು, ಗುರುಗಳ ಬಗೆಗಿನ ವಿವಾದಗಳ ಹಿಂದೆ ಕಾಣದ ಕೈಗಳು ನಡೆಸುವ ಮೋಸದಜಾಲ, ಅದಕ್ಕೆ ಬಲಿಯಾಗುವ ಸ್ವಾಮೀಜಿಗಳು, ಇಂತಹ ವಿವಾದಗಳು ಅತಿರಂಜಿತವಾಗುವ ಸುದ್ದಿಗಳು ……ಎಲ್ಲವೂ ಕಣ್ಮುಂದೆ ಬರುತ್ತವೆ. ಈ ತರಹದ ಕಥೆಯೊಂದು ಚಂದದ ನಿರೂಪಣೆ ಹಾಗೂ ಉತ್ತಮ ಪಾತ್ರಪೋಷಣೆಯಿಂದ ‘ಎಲ್ಲಿಯೂ ಬೋರೆನಿಸದೆ, ರೇಜಿಗೆಯಾಗದೆ ಓದಿಸಿಕೊಳ್ಳುತ್ತದೆ. ಸಹಾನುಭೂತಿಯನ್ನೂ ಪಡೆಯುತ್ತದೆ.

(ಡಾ. ಅಜಿತ್ ಹರೀಶಿ ಅವರಿಗೆ ಸಾಹಿತ್ಯಪ್ರೇಮಿಗಳಿಂದ ಸನ್ಮಾನ)

ದಹನ – ಇದು ಸಹ ಸ್ವಾಮೀಜಿ ಕಥೆಯೆ ಆದರೂ ‘ವಿಲಿಪ್ತ’ಕ್ಕಿಂತ ವಿಭಿನ್ನವಾಗಿದ್ದು , ಅವಧೂತ ಸ್ವಾಮಿಯವರ ವಿಶಿಷ್ಟ ಕನಸುಗಳ ಬಗ್ಗೆ ಕುತೂಹಲ ಮೂಡಿಸುತ್ತದೆ.
ಜನಾರ್ದನ ಈ ಸಂಕಲನದ ಬಹಳ ಸಿಂಪಲ್ ಕಥೆ. ನನ್ನಂತಹ ಸಾಮಾನ್ಯ ಓದುಗರಿಗೆ ಸುಲಭದಲ್ಲಿ ಜೀರ್ಣ ಆಗುವಂತಹುದು. ದೇವರ ಪೂಜೆ, ಪುನಸ್ಕಾರಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡು ನೆಮ್ಮದಿ ಕಂಡುಕೊಳ್ಳುತ್ತಿದ್ದವರು ಜನಾರ್ದನ ಭಟ್ಟರು. ಇಂತಹವರು– ಊರಿಗೆ ಕರೊನಾ ಮಾರಿ ಕಾಲಿಟ್ಟಾಗ, ತಮ್ಮ ಜಪತಪ ಮಡಿಮೈಲಿಗೆಯೆಲ್ಲ ಬಿಟ್ಟು, ಕರೊನಾ ಪೀಡಿತರ ಸೇವೆ ಮಾಡುತ್ತ, ಮಾನವೀಯ ಧರ್ಮವನ್ನು ಮೆರೆಯುತ್ತಾರೆ. ಜನಸೇವೆಯ ಕಾಯಕದಲ್ಲೆ ಕೈಲಾಸ ಕಾಣುತ್ತಾರೆ. ಹೃದಯಪೂರ್ವಕವಾಗಿ ಕೈ ಎತ್ತಿ ನಮಿಸುವ ಪಾತ್ರವಿದು.

ಇಂತಹ ಸುಗುಣಿ ಭಟ್ಟರ ಮಗ- ಪುಂಡನಾಗಿ ಬೆಳೆದು ಹಾದಿ ತಪ್ಪುವುದು ಮನವನ್ನು ಕಲಕಿದರೂ, ಕೊನೆಗೆ ಅಪ್ಪನ ಅನಾರೋಗ್ಯದಿಂದಾಗಿ ಅವನಲ್ಲಿ ಬದಲಾವಣೆ ಆಗುವುದು ಸಮಾಧಾನ ತರುತ್ತದೆ. ಕಥೆಯ ಈ ತಿರುವು ಬಹಳ ಇಷ್ಟವಾಗುತ್ತದೆ.

ಪರಿವರ್ತನೆ, ಬೆಸುಗೆ ಸಹ ಸುಲಭ ಓದಿನ ಚಂದದ ಕಥೆಗಳು. ಬೆಸುಗೆ– ನವಿರು ಪ್ರೇಮದ ಮುದ ಕೊಡುತ್ತದೆ. ಪ್ರೇಮದ ಸವಿನೆನಪುಗಳನ್ನು ಮೆಲುಕಾಡೋಹಾಗೆ ಮಾಡುವುದು. ‘ಹಳ್ಳಿ ಜೀವನವನ್ನ ಹೊರಗಿಂದ ನೋಡಿ ಪ್ರೀತಿಸೋದೆ ಬೇರೆ, ಆ ಜೀವನದಲ್ಲಿ ಭಾಗಿ ಆಗಿ ಪ್ರೀತಿಸೋದೆ ಬೇರೆ’ …ಕಥಾನಾಯಕಿ ಸಿರಿ ಬಗ್ಗೆ ಇದನ್ನೆ ಯೋಚಿಸ್ತಾ ಓದುತ್ತಿದ್ದರೆ… ಆ ಮಾತು ನಾಯಕ ಪ್ರಶಾಂತ್ ಬಾಯಿಂದ ಬರುತ್ತದೆ. (ಓದುಗರ ನಾಡಿಮಿಡಿತ ಅರಿಯುವ ಕಥೆಗಾರರು ಇದನ್ನು ಹೇಳದಿರುತ್ತಾರೆಯೆ? ) ಕಥೆಗೆ ಇದು ಪ್ಲಸ್ ಪಾಯಿಂಟ್. ಕೊನೆಯಲ್ಲಿನ ಸಾಲುಗಳು ಕಥೆಗೆ ಕವಿತೆಯ ಮೆರುಗನ್ನೂ ನೀಡಿವೆ.

‘ನನ್ನ ಮನದಾಳಕ್ಕೆ ನೀನು ಇಳಿದುದೇ ಚಂದ
ಸುಳಿದಂತೆ ಮಲೆನಾಡ ಗಾಳಿ ಗಂಧ,
ಎಳೆಗರಿಕೆ ಮೇಲೇಳುವಂತೆ ಸುಡುನೆಲದಿಂದ
ಸಂಜೆ ಹಣ್ಣಾದಂತೆ ಬಾನ ತುಂಬ’….

ಓದುಗರ ಮನದಾಳಕ್ಕೂ ಇಳಿಯುವ ಈ ಸಾಲುಗಳು ಮಧುರಾನುಭೂತಿಯುಂಟುಮಾಡುತ್ತವೆ.



ಪರಿವರ್ತನೆ ಕಥೆಯಲ್ಲಿ – ಸಂಜಯ್ ನ ದೌರ್ಬಲ್ಯ ಗೊತ್ತಿದ್ದೂ ಮದುವೆಯಾಗುವ ಶಿಲ್ಪಾ ದೈಹಿಕ ಕಾಮನೆಗೆ ಹೊರತಾದ ಪ್ರೇಮದಾಂಪತ್ಯವನ್ನು ಆಯ್ದುಕೊಂಡವಳು. ಈ ಬಗ್ಗೆ ಮೆಚ್ಚುಗೆ, ಅಭಿಮಾನ ಮೂಡುವುದರ ಜೊತೆಗೆ ‘ಇಂತಹ ಅಮೋಘ ಪ್ರೇಮ ಕಥೆಯಲ್ಲಿ ಮಾತ್ರ ಸಾಧ್ಯವೇನೋ’ ಅಂತಲೂ ಒಂದುಕ್ಷಣ ಅನಿಸುವುದು. ಇಂತಹವರು ಇರಲಾರರೆಂದಲ್ಲ. ಯಾವುದೇ ಅನಿವಾರ್ಯತೆಯೋ ಅಥವಾ ಲೌಕಿಕ/ಅಲೌಕಿಕ ಸಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾಮನೆಯನ್ನು ಗೆಲ್ಲಬಲ್ಲವರಿಗೆ ಇದು ಕಷ್ಟವೂ ಅಲ್ಲ. ಆದರೆ ಈ ಕಥೆಯಲ್ಲಿ ಶಿಲ್ಪಾ ಒಬ್ಬ ಸಾಮಾನ್ಯ ಹೆಣ್ಣಾಗಿದ್ದರೂ ‘ಅತಿ ಎತ್ತರಕ್ಕೆ ನಿಂತು’, ಅನಂತಹೆಗಡೆಯವರ… ಗಂಡು ಹೆಣ್ಣಿನ ಸಂಬಂಧದ ಬಗೆಗಿನ ನಂಬಿಕೆ, ಸಿದ್ಧಾಂತಗಳು ಸುಳ್ಳು ಅಂತ ತೋರಿಸಿಕೊಡುವುದು ಮಹತ್ವದ್ದೆನಿಸುತ್ತದೆ. ಉತ್ತಮ ಸಂದೇಶದ, ಸರಳವಾದ ಕಥೆ ಚಂದದ ನಿರೂಪಣೆಯಿಂದ ಬಹಳ ಇಷ್ಟ ಆಗುತ್ತದೆ.

ತಾನೊಂದು ಬಗೆದರೆ- ಮಳೆ, ನೆರೆ ಸಂಕಷ್ಟದೊಂದಿಗೆ ಜೀವನದ ಏರಿಳಿತಗಳನ್ನು ಜೋಡಿಸುವ ಕಥೆ. ದಶಕಗಳ ಹಿಂದಿನ ಹಳ್ಳಿಗಳಲ್ಲಿ ಮೇಲ್ವರ್ಗದ ಪುರುಷರು ಮತ್ತು ಕೆಳವರ್ಗದ ಹೆಣ್ಣುಗಳೊಂದಿಗಿನ ‘ತೀರಾ ಸಾಮಾನ್ಯವೆನಿಸುವಂತಿದ್ದ ವಿವಾಹಬಾಹಿರ ಸಂಬಂಧದ ಎಳೆಯನ್ನು ಈ ಕಥೆಯಲ್ಲಿ ಬಹು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಶಂಕರ ಮತ್ತು ಗಂಗಾಳ ಸಂಬಂಧ ಯಾವುದೇ ಕಳಂಕವಿಲ್ಲದಂತೆ, ಅಸಹ್ಯವೆನಿಸದಂತೆ ಕಥೆ ಹೆಣೆದಿರುವ ಅಜಿತ್ ಅವರ ಕೌಶಲ ಇಷ್ಟವಾಗುತ್ತದೆ. ಗಂಗಾ ಶಂಕರನಿಂದ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ, ಶಂಕರನೆಡೆಗಿನ ಪ್ರೇಮವನ್ನು ಆರಾಧನಾ ಮಟ್ಟದಲ್ಲಿರಿಸುವುದು ಮೆಚ್ಚುಗೆಯಾಗುತ್ತದೆ. ಹಾಗೆಯೆ ಶಂಕರನ ಹೆಂಡತಿ ಸಹನಾಳ ಪಾತ್ರವೂ ಇಷ್ಟವಾಗುತ್ತದೆ. ಆ ಕಾಲಘಟ್ಟದಲ್ಲಿ ಗಂಡಸರ ಇಂತಹ ಸಂಬಂಧಗಳನ್ನು ಹೆಂಗಸರು ದಿಟ್ಟತನದಿಂದ ಪ್ರಶ್ನಿಸುವುದು ಸಾಧ್ಯವಿಲ್ಲವಾಗಿದ್ದರೂ, ಅವರೊಳಗೊಂದು ಅಸಹನೆ ಇದ್ದೇ ಇರುತಿತ್ತು, ಮತ್ತು ಅವರ ಬಗೆಗೆ ಔದಾರ್ಯದ ಮನೋಭಾವ ಇರುತ್ತಿರಲಿಲ್ಲವೇನೋ…ಎಂದು ನನ್ನ ಅನಿಸಿಕೆ.

ಗಂಗಾ ತನ್ನ ಮಗ ಹಾಗೂ ತಾಯಿಯೊಂದಿಗೆ ನೆರೆಯ ಸಂಕಷ್ಟದಲ್ಲಿ ಸಿಲುಕಿ ಸಹಾಯ ಬಯಸಿದಾಗ, ತನ್ನ ಮನೆಯಲ್ಲೇ ಆಶ್ರಯ ಕೊಡಲು ಶಂಕರ ಮುಂದಾಗುತ್ತಾನೆ. ಇದನ್ನು ಚೂರೂ ವಿರೋಧಿಸದೆ, ಗಂಜಿಕೇಂದ್ರಕೆ ಕಳುಹಿಸಲು ಒತ್ತಾಯಿಸದೇ ಮನೆಲಿಟ್ಟುಕೊಳ್ಳೋದು, ಅವರ ಕೆಲಸದ ಸಹಾಯಕೆ ಮಿಡಿಯೋದು ಸಹನಾಳ ದೊಡ್ಡತನವೆನಿಸುತ್ತದೆ. ಇದು ಗಂಗಾಳ ನಿರ್ಮಲ ಪ್ರೇಮಕ್ಕೆ, ಸಹನಾ ಕೊಡೋ ಗೌರವವೆನಿಸುತ್ತದೆ.

ಪತನ- ಈ ಕಥೆ ತುಂಬಾ ತುಂಬಾ ಚಂದವಿದೆ. ಬಹಳಕಾಲ ಮನಸ್ಸಲ್ಲುಳಿಯುವಂತಹುದು. ಕಥಾವಸ್ತು, ನಿರೂಪಣೆ, ಆರಂಭ, ಮುಕ್ತಾಯ ಎಲ್ಲವೂ ಚೆನ್ನ. ಇದರಲ್ಲಿರೊ ಅಂತರ್ಗತ ಸೂಕ್ಷ್ಮ ಸಂವೇದನೆಗಳು ಮನಸ್ಸನ್ನು ಕಾಡುತ್ತವೆ; ಚಿಂತಿಸುವಂತೆ ಮಾಡುತ್ತವೆ. ಹೆಣ್ಣಿನ ಸೂಕ್ಷ್ಮಭಾವನೆಗಳನ್ನ ಅನಾವರಣಗೊಳಿಸಿದ ರೀತಿ ಹೃದಯವನ್ನು ತಟ್ಟುತ್ತದೆ. ವಿನಯನಂತಹ ಗಂಡಸರ ಅಹಂನ ಮದವನ್ನ ನಿರೂಪಿಸಿದ ರೀತಿಯೂ ಗಮನ ಸೆಳೆಯುತ್ತದೆ.

ನಾಯಕಿ ಮಾಲಾ- ಗಂಡನ ಕ್ರೂರತೆ ಎದುರಿಸಿದ ರೀತಿ, ಅವನು ಸೋತುಕುಸಿದಾಗ ಅವನನ್ನು ಒಪ್ಪಿಕೊಳ್ಳುವ ಪರಿ ಎಲ್ಲವೂ ಇಷ್ಟ ಆಗುತ್ತದೆ. ನನ್ನ ದೃಷ್ಟಿಯಲ್ಲಿ – ಈ ಕಥಾ ಸಂಕಲನದ ‘ಅತ್ಯುತ್ತಮ ಕಥೆಗಳಲ್ಲಿ ಸರ್ವೋತ್ತಮ’ ಅಂದರೆ ‘ಪತನ’. ಆದರೆ ಓದಲು ಮುದ ಕೊಡೋ ಕಥೆ ಮೂಚಿಮ್ಮ.

ಒಟ್ಟಾರೆಯಾಗಿ ಈ ಸಂಕಲನದಲ್ಲಿ ಮಲೆನಾಡಿನ ಪರಿಸರದ ಆಪ್ತತೆ, ವನಸಿರಿ ಮತ್ತೆ ಮಿದುಮಣ್ಣಿನ ಆಹ್ಲಾದತೆ, ಹವ್ಯಕ ಭಾಷೆಯ ಸೊಗಡು, ಶಿರಸಿ ಸಿದ್ದಾಪುರದವರ ಗರಿಗರಿ ತೆಳ್ಳೇವಿನ ಸ್ವಾದ, ಅಪ್ಪೆಮಿಡಿ ಉಪ್ಪಿನಕಾಯಿಯ ಘಮ, ಜೀವನದಿಗಳ ಮಾರ್ದವತೆ-ಭೀಕರತೆ, ಎಲ್ಲವೂ ಇದ್ದು, ಮನಸ್ಸನ್ನು ಸೆಳೆಯುತ್ತವೆ. ಒಂದೊಳ್ಳೆ ಪುಸ್ತಕ ಓದಿದ ಖುಷಿ ಸಿಗುತ್ತದೆ. ಜೊತೆಗೆ ನಮ್ಮ ಓದುವಿಕೆಯ ಒಳನೋಟದ ಅರಿವಿನಮಟ್ಟವೂ ವಿಸ್ತರಣೆಯಾಗುತ್ತದೆ.

ಸೂಕ್ಷ್ಮ ಸಂವೇದನೆಯ, ಉತ್ತಮ ಬರಹಗಾರರಾದ ಡಾ. ಅಜಿತ್ ಅವರಿಂದ ಇಂತಹ ಚಂದದ ಸಾಹಿತ್ಯ ಫಸಲುಗಳು ಹುಲುಸಾಗಿ ಬರುತ್ತಿರಲಿ; ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಲಿ ಎಂಬ ಹಾರೈಕೆಯೊಂದಿಗೆ…


  • ಪ್ರಭಾವತಿ ಹೆಗಡೆ, ಶಿರಸಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading