‘ಹಣವಿದ್ದರೆ ಕಾರಿಗೆ ಒಬ್ಬ ಡ್ರೈವರನ್ನು ನೇಮಿಸಬಹುದು. ಆದರೆ ಆರೋಗ್ಯ ಹದಗೆಟ್ಟಿದರೆ ಅದರ ನೋವನ್ನು ನಾವೇ ಅನುಭವಿಸಬೇಕು’ – ಸ್ಟೀವ್ ಜಾಬ್ಸ್. ರಾಜಶೇಖರ ಎಸ್.ಬಿರಾದಾರ ಅವರ ಬರಹದಲ್ಲಿ ಮೂಡಿ ಬಂದ APPLE ಸಂಸ್ಥೆಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಕೊನೆಯ ದಿನಗಳಲ್ಲಿ ಆಡಿದ ಅರ್ಥಪೂರ್ಣ ಮಾತುಗಳು…
ತಾನು ಸಾಯೋ ಮುಂಚೆ ಹೇಳಿದ ಈ ಕಟ್ಟಕಡೆಯ ಮಾತು ನಮಗೆಲ್ಲರಿಗೂ “ಜೀವನ ದರ್ಶನ” ಮಾಡಿಸುತ್ತೆ. ಜಗತ್ತಿನಲ್ಲೇ ಸುಪ್ರಸಿದ್ಧ APPLE ಸಂಸ್ಥೆಯನ್ನು ಹುಟ್ಟುಹಾಕಿದ ಸ್ಟೀವ್ ಜಾಬ್ಸ್ ಅವರ ಸಾಧನೆ ಮತ್ತು ಸಂಪತ್ತು ಅಪಾರ ಮತ್ತು ಅಗಾಧ. ಈ ಮನುಷ್ಯ ಯಶಸ್ಸಿಗೆ ಇನ್ನೊಂದು ಹೆಸರೇ ಎಂಬ ಹಾಗೇ ಬದುಕಿ ತೋರಿಸಿದವರು. ಇಂದು ನಾವೆಲ್ಲರೂ ಅಂಗೈ ಅಗಲದ ಸ್ಮಾರ್ಟ್ ಫೋನ್ ಬಳಸಿ ಜಗತ್ತನ್ನೇ ಅದರಲ್ಲಿ ನೋಡುತ್ತಿದ್ದೇವೇ ಎಂದರೆ,ಈ ಪುಣ್ಯಾತ್ಮನಿಂದ ಎಂಬುದು ಬಹು ಜನರಿಗೆ ಗೊತ್ತಿಲ್ಲ. ಆದರೆ ತಮ್ಮ ಸಾವಿನ ಕೊನೆಯ ದಿನಗಳಲ್ಲಿ ಸ್ಟೀವ್ ಜಾಬ್ಸ್ ಅವರ ಮನದಾಳದ ಮಾತು ಹೇಗಿತ್ತು ಎನ್ನುವುದನ್ನು ನಿಜೆಲ್ ಡಂಕನ್ ಸ್ಮಿತ್ ಎನ್ನುವವರು ಫೇಸ್ಬುಕ್ಕಿನಲ್ಲಿ ಹಂಚಿಕೊಂಡಿದ್ದರು.

ಸ್ಟೀವ್ ಜಾಬ್ಸ್ ಅವರ ಹಳೆಯ ಫೋಟೋ (ಫೋಟೋ ಕೃಪೆ : cnbc)
ಅದನ್ನು ಓದಿದಾಗ ಜಗತ್ತನ್ನೇ ನಿಬ್ಬೆರಗಾಗಿಸಿದ ಒಬ್ಬ ಸಾಧಕನ ಅಂತರಾಳದಲ್ಲಿ ಏನಿತ್ತು ಎನ್ನುವುದು ಅರಿವಾಗುತ್ತದೆ.ಹಾಗಾದಾರೇ… ಓದಿರಿ. “ನಾನು ನನ್ನ ಬಿಸಿನೆಸ್ಸಿನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದೇನೆ. ಜಗತ್ತಿನ ಕಣ್ಣಿಗೆ ನನ್ನ ಜೀವನವು ಒಂದು ಯಶಸ್ಸಿನ ಯಶೋಗಾಥೆಯಂತೆ ಕಾಣುತ್ತದೆ. ಆದರೆ, ನನ್ನ ಉದ್ಯೋಗದ ಪರಿಮಿತಿಯ ಹೊರಗೆ ನನ್ನ ಬಾಳಿನಲ್ಲಿ ಅಷ್ಟೇನೂ ನಲಿವಿಲ್ಲ. ಕೊನೆಗೆ, ನನ್ನ ಸಂಪತ್ತಿನೊಂದಿಗೆ ನನ್ನ ಜೀವನವನ್ನು ಗುರುತಿಸಿಕೊಳ್ಳುವುದು ರೂಢಿಯಾಗಿ ಹೋಗಿದೆ. ನನ್ನ ಜೀವನದ ಕೊನೆಯ ಕ್ಷಣಗಳನ್ನು ಆಸ್ಪತ್ರೆಯ ಹಾಸಿಗೆಯ ಮೇಲೆ ಕಳೆಯುತ್ತಿರುವ ನನಗೆ, ನನ್ನ ಬಾಳಿನುದ್ದಕ್ಕೂ ನಾನು ಸಂಪತ್ತನ್ನು ಸಾಧನೆಯೆಂದು ಕೊಂಡು ಬೀಗುತ್ತಿದ್ದೆನೋ, ಅವೆಲ್ಲಾ ಏನೂ ಅಲ್ಲವೇನೋ ಅನ್ನಿಸುತ್ತಿದೆ.
ಈ ಕತ್ತಲ ಹೊತ್ತಿನಲ್ಲಿ ಕೃತಕ ಉಸಿರಾಟದ ಈ ಮಶೀನುಗಳಿಂದ ಬರೋ ಹಸಿರು ದೀಪ ಮತ್ತು ಗುಂಯ್ಗುಟ್ಟುವ ಸದ್ದಿನಿಂದ ನನಗೆ ನನ್ನ ಸಾವು ನನ್ನನ್ನು ಆವರಿಸಿಕೊಳ್ಳುತ್ತಿರುವುದು ಕಾಣುತ್ತಿದೆ. ನನಗೀಗನ್ನಿಸುತ್ತಿದೆ, ಒಬ್ಬ ಮನುಷ್ಯ ಒಮ್ಮೆ ಜೀವನಕ್ಕೆಲ್ಲಾ ಆಗುವಷ್ಟು ದುಡ್ಡು ದುಡಿದಿಟ್ಟುಕೊಂಡ ಮೇಲೆ, ಹಣದ ಸಂಪಾದನೆಗೂ ಮೀರಿದ ಸಾಧನೆಗೆ ಇಳಿಯಬೇಕು. ಹಣಕ್ಕಿಂತ ತುಂಬಾ ಮುಖ್ಯವಾದುದಾಗಿರಬೇಕು ಆ ಸಾಧನೆ.
ಉದಾಹರಣೆಗೆ: ಪ್ರೇಮ ಕಥೆಗಳು, ಕಲೆ, ಬಾಲ್ಯದ ಕನಸುಗಳನ್ನು ಮೆಲುಕು ಹಾಕುವುದು.

(ಫೋಟೋ ಕೃಪೆ : google)
ಕೇವಲ ಹಣದ ಸಂಪಾದನೆಯ ಹಿಂದೆ ಬೀಳಬೇಡಿ. ಅದರಿಂದ ನೀವೂ ನನ್ನಂತೆ ಕೆಲಸಕ್ಕೆ ಬಾರದವರಂತೆ ಆಗುತ್ತೀರಿ. ದೇವರು ನಮ್ಮೆಲ್ಲರನ್ನೂ ಯಾವುದೋ ಒಂದು ಬಗೆಯಲ್ಲಿ ಮಾಡಿದ್ದಾನೆ. ನಾವು ಒಬ್ಬರೆದೆಯಲ್ಲಿ ಇನ್ನೊಬ್ಬರ ಒಲವನ್ನು ಕಾಣಬಹುದೇ ಹೊರೆತು ನಾನು ಮಾಡಿದಂತೆ ಹೆಸರು, ದುಡ್ಡು ಇವುಗಳಿಂದ ಯಾರದೇ ಮನಸಿನಲ್ಲೂ ನೆಲೆಸಲು ಆಗುವುದಿಲ್ಲ.
ಆ ಸಂಪತ್ತನ್ನು ನಾನು ಹೋಗುವಾಗ ನನ್ನೊಡನೆ ಕೊಂಡು ಹೋಗಲೂ ಆಗದು. ನಾನು ನನ್ನೊಂದಿಗೇನಾದರೂ ಕೊಂಡು ಹೋದರೆ ಅದು ಕೇವಲ ಒಲವಿನಿಂದ ಬೆಸೆದ ನೆನಪುಗಳನ್ನು ಮಾತ್ರ. ನಮ್ಮನ್ನು ಹಿಂಬಾಲಿಸುವ ಬಹುದೊಡ್ಡ ಸಂಪತ್ತೂ ಅದೇ… ನಮ್ಮೊಡನೆ ಸದಾ ಇರುವಂಥದ್ದು.ನಮಗೆ ಶಕ್ತಿ ತುಂಬುವಂಥದ್ದು… ದಾರಿ ದೀಪವಾಗುವಂಥದ್ದು.
ಪ್ರೇಮವೆನ್ನುವುದು ಸಾವಿರಾರು ಮೈಲಿ ಸಾಗಬಲ್ಲದು,ಬಾಳಲ್ಲಿ ಪ್ರೇಮವನ್ನು ತುಂಬಿಕೊಂಡಾಗ ಬಂಧನಗಳಿಂದ ಮುಕ್ತಿ ಸಿಗುತ್ತದೆ.ನಿಮಗೆ ಹೋಗಬೇಕೆನಿಸಿದಲ್ಲಿ ಹೋಗಿ. ನೀವು ಸಾಧಿಸಬೇಕೆನಿಸಿದ್ದನ್ನು ಸಾಧಿಸಿ. ಎಲ್ಲವೂ ನಿಮ್ಮೊಳಗೇ ಇದೆ…

ಸ್ಟೀವ್ ಜಾಬ್ಸ್ ಅವರ ಕೊನೆಯ ಫೋಟೋ (ಫೋಟೋ ಕೃಪೆ : google)
ನಿಮ್ಮ ಕೈಯ್ಯಲ್ಲೇ ಇದೆ. ಈ ಜಗತ್ತಿನಲ್ಲೇ ಅತ್ಯಂತ ದುಬಾರಿ ಹಾಸಿಗೆ ಯಾವುದು ಗೊತ್ತೇ? ಅದು ಆಸ್ಪತ್ರೆಯ ಹಾಸಿಗೆ. ನಿಮ್ಮ ಬಳಿ ಹಣವಿದ್ದರೆ ಅದರಿಂದ ನಿಮ್ಮ ಕಾರಿಗೆ ಒಬ್ಬ ಡ್ರೈವರನ್ನು ನೇಮಿಸಬಹುದು. ಆದರೆ ನಿಮ್ಮ ಅನಾರೋಗ್ಯವನ್ನು ಎರವಲು ಪಡೆಯಲು ಯಾರಾದರೂ ಮುಂದೆ ಬರುತ್ತಾರೆಯೇ…? ವಸ್ತುಗಳು ಒಮ್ಮೆ ಕಳೆದು ಹೋದರೆ ಮತ್ತೆ ಪಡೆದುಕೊಳ್ಳಬಹುದು. ಆದರೆ ಒಮ್ಮೆ ಕಳೆದುಕೊಂಡರೆ ಹಿಂಪಡೆಯಲಾಗದ್ದು ಯಾವುದಾದರೂ ಇದ್ದರೆ ಅದು “ಜೀವನ” ಮಾತ್ರ.

(ಫೋಟೋ ಕೃಪೆ : pinterest)
ನಾವು ಈಗ ಜೀವನದ ಯಾವುದೇ ಘಟ್ಟದಲ್ಲಿದ್ದರೂ ಮುಂದೊಂದು ದಿನ ತೆರೆಯು ಮುಚ್ಚಿ ಆಟ ಮುಗಿಯುವ ದಿನವನ್ನು ಎದುರಿಸಲೇಬೇಕು.ಇದು ಶಾಶ್ವತ ಪರಮ ಸತ್ಯ.
ನಿಮ್ಮ ಮನೆಯವರ ಪ್ರೀತಿ, ಗಂಡ/ಹೆಂಡತಿಯ ಪ್ರೀತಿ, ಗೆಳೆಯರ ಪ್ರೀತಿ ಇವೆಲ್ಲವೂ ಅಮೂಲ್ಯವಾದವು. ಅವನ್ನು ಕಾಪಾಡಿಕೊಳ್ಳಿ. ಎಲ್ಲರೊಡನೆ ಸಜ್ಜನಿಕೆಯಿಂದ ನಡೆದುಕೊಳ್ಳಿ, ಬಂಧು-ಬಳಗ,ಬಡವ-ಬಲ್ಲಿದ ಎನ್ನದೇ ನಿಮ್ಮ ಸುತ್ತಲ ಜನರೊಂದಿಗೆ ಒಳ್ಳೆಯ ಸಂಬಂಧವಿಟ್ಟುಕೊಳ್ಳಿ.
ಇಂಥ ಮಹಾನ್ ಮೇಧಾವಿಯ ಸಾವಿನ ಕೊನೆಯ ಮಾತುಗಳು ನಮ್ಮಗೆಲ್ಲ ಅರ್ಥವಾದರೆ… ಸಾಕು.
- ರಾಜಶೇಖರ ಎಸ್.ಬಿರಾದಾರ ( ಲೇಖಕರು )ಬಬಲೇಶ್ವರ.