ಬಾದಾಮಿ” ಧಾರ್ಮಿಕವಾಗಿ ಬನಶಂಕರಿ ದೇವಾಲಯ, ಐತಿಹಾಸಿಕವಾಗಿ ಗುಹಾಂತರ ದೇವಾಲಯಗಳಿಗೆ ಪ್ರಸಿದ್ಧಿ ಪಡೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಲಿ ಅನ್ನ ಬಡಿಸುವ “ಅನ್ನಪೂರ್ಣೇಶ್ವರಿ”ಯರ ಬಗ್ಗೆ ಲೇಖಕ ರಾಜಶೇಖರ ಎಸ್.ಬಿರಾದಾರ ಅವರು ಬರೆದ ಲೇಖನ, ಮುಂದೆ ಓದಿ…
ಬಾದಾಮಿಯ ಶಾಂಭವಿ ದೇವಳದ ಸುತ್ತಲೂ ಜಗನ್ಮಾತೆಯ ದರುಶನಕ್ಕೆ ಬಂದ ಭಕ್ತರಿಗೆ ,ಅನ್ನ ಬಡಿಸುವ “ಅನ್ನಪೂರ್ಣೇಶ್ವರಿ”ಯರಿಂದಲೂ ಇದು ಪ್ರಸಿದ್ಧಿ ಪಡೆದಿದೆ. ಹೌದು, ಬನಶಂಕರಿ ಅಮ್ಮನವರ ದೇಗುಲದ ಸುತ್ತಲೂ ಈ ಅಮ್ಮಂದಿರು ಕಾಣಸಿಗುತ್ತಾರೆ. ಬಿಳಿಜೋಳ ರೊಟ್ಟಿ, ಸಜ್ಜೆ ರೊಟ್ಟಿ,ಕಾರ್ಯಾಳ ಹಿಂಡಿ, ಅಗಸಿ ಹಿಂಡಿ, ಕೆಂಪು ಮೆಣಸಿನಕಾಯಿ ಚಟ್ನಿ ಹಾಗೂ ಗಟ್ಟಿ ಮೊಸರು,ಮಜ್ಜಿಗೆ, ಎರಡ್ಮೂರು ವಿಧದ ಕಾಳು ಪಲ್ಯ ಬುಟ್ಟಿಯಲ್ಲಿಟ್ಟುಕೊಂಡು ಸಂಚರಿಸುತ್ತಿರುತ್ತಾರೆ.
ಅತಿ ಕಡಿಮೆ ಹಣದಲ್ಲಿ ಈ ತಾಯಂದಿರ ಹತ್ತಿರ ಊಟ ಸವಿಯಬಹುದಾಗಿದೆ. ಕೇವಲ ಇಪ್ಪತ್ತು ರೂಪಾಯಿಗಳಿಗೆ ಎರಡು ರೊಟ್ಟಿ,ಒಂದು ಲೋಟ ಮೊಸರು,ಮಜ್ಜಿಗಿ,ಎರಡು ಪ್ರಕಾರದ ಚಟ್ನಿ,ಕಾಳು ಪಲ್ಯ ಹಾಗೂ ಅನ್ನ ಬಡಿಸುತ್ತಾರೆ. ಅಲ್ಲದೇ, ನಮ್ಮ ಊಟ ಮುಗಿಯುವವರೆಗೂ ನಮ್ಮ ಹತ್ತಿರವೇ ಮಾತನಾಡುತ್ತಾ ಬಡಿಸುತ್ತಾರೆ. ಇದು ತಾಯಿ, ಸಹೋದರಿಯರ ಅವಿನಾಭಾವ ಸಂಬಂಧದಂಥ ಭಾವನಾತ್ಮಕ ಅನುಭೂತಿ.
ಅಲ್ಲದೇ, ಯಾವುದೇ ಆಧುನಿಕ ಡೈಯನಿಂಗ್ ಟೇಬಲ್ಗಳಿಗಿಂತಲೂ ಕಡಿಮೆ ಇಲ್ಲದ ಸಾಲು ಮಂಟಪದಲ್ಲಿ ಕುಳಿತು, ಪುಷ್ಕರಣಿಯನ್ನು ನೋಡುತ್ತಾ, ಊಟ ಮಾಡುವುದೇ ಒಂದು ರೋಮಾಂಚನ ಸಂಗತಿ.
ಬಹುತೇಕ ಮಹಿಳೆಯರು ಬಾದಾಮಿ ಸಮೀಪದ ಹಳ್ಳಿಗಳಿಂದ ಊಟ ತಯಾರಿಸಿಕೊಂಡು ಬರುತ್ತಾರೆ. ನಿಜಕ್ಕೂ ಇವರ ಜವಾರಿ ಊಟದ ರುಚಿಯನ್ನು ಜೀವನದಲ್ಲಿ ಒಂದೊಮ್ಮೆಯಾದರೂ ಸವಿಯಬೇಕು.ಈ ಸಾಕ್ಷಾತ: “ಅನ್ನಪೂರ್ಣೇಶ್ವರಿ”ಯರಿಗೆ ನನ್ನದೊಂದು ಸಲಾಮ್.
- ರಾಜಶೇಖರ ಎಸ್.ಬಿರಾದಾರ, (ಲೇಖಕರು) ಬಬಲೇಶ್ವರ