ಶೃಂಗೇರಿ ಸಮೀಪದಲ್ಲಿರುವ ಮಘೇಬೈಲು ಜಲಪಾತದ ಸೊಬಗು ಸ್ವರ್ಗ ದ ದಾರಿ ತೋರಿಸಿದರೆ, ಅಲ್ಲಿನ ಇಂಬಳಗಳು ನರಕದ ದಾರಿ ತೋರಿಸುತ್ತವೆ. ಎರಡರ ಅನುಭವವನ್ನು ಬದುಕಿದ್ದಾಗಲೇ ಪಡೆಯಬೇಕು ಎನ್ನುವವರು ಒಮ್ಮೆ ಈ ಜಲಪಾತಕ್ಕೆ ಭೇಟಿ ನೀಡಿ. ಲೇಖಕ, ಪತ್ರಕರ್ತರಾದ ನೆಂಪೆ ದೇವರಾಜ್ ಅವರು ಈ ಜಲಪಾತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಗೆದ ಫೋಟೋಗಳು ಮತ್ತು ಲೇಖನ, ಮುಂದೆ ಓದಿ…
ಭೀಭತ್ಸ, ಘನಘೋರ, ಅಬೇಧ್ಯ, ಭೀಮಾಕಾರ ಎಂಬಿತ್ಯಾದಿ ಪದಗಳನ್ನು ಸೃಷ್ಟಿಸಿದ್ದೇ ಮಘೇಬೈಲು ಜಲಪಾತ ನೋಡಿಯೇ ಇರಬೇಕು. ಜಲಪಾತ ನೋಡಲು ಹೋಗುವವರಿಗೆ ಸಿಮೆಂಟಿನ ಮೇಲ್ಚಾವಣಿ ಇಲ್ಲ,ಇಳಿಯಲು ಮೆಟ್ಟಿಲುಗಳಿಲ್ಲ, ಗೂಡಿನೊಳಗೆ ಕೂತು ಚೀಟಿಹರಿದು ತಲೆಗೆ ಹತ್ತು ರೂಪಾಯಿ ಪಡೆವ ಹುಡುಗಿ ಇಲ್ಲ.
ಪ್ರವೇಶ ದ್ವಾರದಲ್ಲೆ ಕುಳಿತು ತಿಂಡಿ, ತಿನಿಸು, ಆಟಿಕೆ ಮಾರುವವರಿಲ್ಲ. ಆಕಾಶದೆತ್ತರಕ್ಕೆ ಬೆಳೆದ ವೃಕ್ಷ ಸಂಕುಲಗಳ ಜೊತೆ ಕಮರಿಯ ಬದಿಯಲ್ಲೇ ಜಾರುತ್ತಾ ಬೀಳುತ್ತ ಮುಗಿಲೆತ್ತರದ ಮರಗಳ ಆಕಾರಕ್ಕೆ ತಲೆ ದೂಗುತ್ತಾ ಹೋದರೆ ಕಿವಿಗಡಚಿಕ್ಕುವ ಸದ್ದು.ಕಾಲಿನ ತುಂಬಾ ಮುತ್ತಿಕೊಳ್ಳುವ ಇಂಬಳಗಳು. ತಮ್ಮ ಪುಟ್ಟ ದೇಹವನ್ನೆಲ್ಲ ರಕ್ತಕ್ಕಾಗಿ ಹಲುಬಿಸುವುದೂ… ಸದ್ದಿಲ್ಲದೆ ಗುಪ್ತಾಂಗಳವರೆಗೆ ಹೋಗಿ ರಕ್ತ ಹೀರುವುದು ಗಮನಿಸಿದರೆ ಇಂಬಳವೆಂಬ ಮೂಳೆ ಮಾಂಸವಿಲ್ಲದ ಸಣಕಲು ಜೀವಿಯ ಮಹಾನ್ ಶಕ್ತಿಗೆ ತಲೆ ದೂಗಲೇಬೇಕು.
ಇಲ್ಲೇ ಎಲ್ಲೋ ಧುಮ್ಮಿಕ್ಕುತ್ತಿದೆ ಎಂದರೆ ಎಲ್ಲೂ ಕಾಣ ಸಿಗದು. ಸಕಲೈಶ್ವರ್ಯಗಳು ನಿವಾಳಿಸುವಂತೆ ನಾಲ್ಕು ಕಿಲೋ ಮೀಟರ್ ದೂರ ಸವೆಸಿದೊಡನೆ ದುತ್ತನೆ ಬೆಳ್ನೊರೆಯಲ್ಲಿ ಕಣ್ಣು ತುಂಬಿಕೊಳ್ಳುತ್ತಾಳೆ ಮಘೇ ಬೈಲು ಜಲಪಾತ.
ಬಯಲು ಎಂಬ ಹೆಸರು ಅದೇಕೆ ಬಂತೆಂಬುದು ವಿಸ್ಮಯಕಾರಕ ವಿಚಾರ. ಏಕೆಂದರೆ ಸುತ್ನಾಲ್ಕು ದಿಕ್ಕೂ ಲಕ್ಷಾಂತರ ಮರಗಳಿಂದ ಮುಚ್ಚಿಕೊಂಡು ಜಾನುವಾರುಗಳು ಬುಡದಲ್ಲ ಮೇಯಲು ಏನೂ ಉಳಿಯದ ಪ್ರದೇಶ. ಕೋಟಿ ಸೂರ್ಯರಿದ್ದರೂ ಜಲಪಾತ ನೋಡಲು ಹರಸಾಹಸ ಪಡುವ ರೀತಿಯೇ ಮೋಜಿನ ಸಂಗತಿ. ಜಲಪಾತದ ಬುಡದಿಂದ ಜಾರು ಬಂಡೆಗಳ ಮೇಲೆ ಕಾಲಿಡುತ್ತಾ ಎಂದೋ ಬಿದ್ದ ರಾಕ್ಷಸಾಕಾರದ ಮರಗಳ ಮೇಲೆ ಹತ್ತುತ್ತಾ, ಬೀಳುತ್ತಾ, ಏಳುತ್ತಾ ,ಮಂಜಿನಲ್ಲಿ ಮೀಯುತ್ಥಾ, ಮೇಲೆ ನೋಡಬೇಕು. ಶರವೇಗದಲ್ಲಿ ಹತ್ತಾರು ಬಿಳಿಯಯ ಚಿತ್ರಗಳನ್ನು ಬಿಡಿಸುತ್ತಾ ಧುಮ್ಮಿಕ್ಕುವ ಜಲಪಾತದ ಮುಖ್ಯ ಭಾಗದಿಂದ ತಲೆ ಎತ್ತಿದರೆ ದೊರೆವ ಆನಂದ ಹೇಳತೀರದು.
ಈ ಜಲಪಾತದ ಒಟ್ಟು ಬೇಡಿಕೆ ನನ್ನನ್ನು ಹೀಗೇ ಬಿಡಿ ಎಂಬುದು. .ನೆಣವಿದ್ದವರು ನಡೆದು ಬರಲಿ. ಇಲ್ಲದವರು ದೂರದಿಂದಲೇ ಅನಂದಿಸಲಿ ಎನ್ನುತ್ತಿತ್ತು.ಜೊತೆಗೆ ಬೇಡಾ …ಬೇಡಾ… ಕರೆಂಟು ಬೇಡಾ..ಬೇಡಾ ಬೇಡಾ..ರಸ್ತೆ ಬೇಡಾ – ಎಂಬ ಕೂಗು ಜಲಪಾತದ ಭೋರ್ಗರೆತದಲ್ಲಿ ಮುಗಿಲು ಮುಟ್ಟುತ್ತಿತ್ತು.
- ಕ್ಯಾಮೆರಾ ಹಿಂದಿನ ಕಣ್ಣು ಮತ್ತು ಲೇಖನ : ನೆಂಪೆ ದೇವರಾಜ್
