ಉತ್ತರಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ಬೇಕು – ಕಿರಣ್ ಭಟ್



ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲದೆ ಸಾಕಷ್ಟು ಜನ ರಸ್ತೆಗಳ ಮಧ್ಯೆದಲ್ಲೇ ಪ್ರಾಣ ಬಿಡುತ್ತಿದ್ದಾರೆ. ಸುಸಜ್ಜಿತ ಆಸ್ಪತ್ರೆಯನ್ನು ಕಲ್ಪಿಸುವುದರಿಂದ ಸಾಕಷ್ಟು ಜೀವಗಳು ಉಳಿಯಬಹುದೆಂದು ಅಲ್ಲಿಯ ಜನರ ಅಳು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿ – ಕಿರಣ್ ಭಟ್.

ಇದೇ ಜಿಲ್ಲೆಯ, ಮಂಗಳೂರಿನಲ್ಲಿ ವೈದ್ಯರಾಗಿರುವ ಸಂಬಂಧಿಯೊಬ್ಬರ ಜೊತೆ ಯಾವುದೋ ಸಂದರ್ಭದಲ್ಕಿ ಹಾರ್ಟ್ ಅಟ್ಯಾಕ್ ಗಳ ಬಗ್ಗೆ ಚರ್ಚಿಸುತ್ತಿರುವಾಗ ಅವರೊಂದು ಮಾತು ಹೇಳಿದ್ದರು
” ಇಲ್ಲಿಗೆ ತಲುಪಿದರೆ ಏನಾದರೂ ಮಾಡಿ ಉಳಿಸಬಹುದು. ಆದರೆ ಅಲ್ಲಿಂದ ಇಲ್ಲಿಗೆ ಶಿಪ್ಟ್ ಮಾಡೋದೇ ಸಮಸ್ಯೆ. ”

ನಿನ್ನೆ ಶಿರೂರು ಗೇಟ್ ನಲ್ಲಿಯ ಆ್ಯಂಬುಲೆನ್ಸ್ ಅಪಘಾತ ನೋಡಿದ ಮೇಲೆ ಅವರ ಮಾತುಗಳು ನೆನಪಾದವು.

ಫೋಟೋ ಕೃಪೆ :google

ಎಷ್ಟೋ ಕಾಲದಿಂದಲೂ ನೋಡುತ್ತ ಬಂದಿದ್ದೇವೆ. ಘಟ್ಟ ಏರು ಇಳಿಜಾರುಗಳಿಂದ ಕೂಡಿದ, ವೇಗದ ಹೈವೇಗಳಿರುವ ಸಾಕಷ್ಟು ವಿಸ್ತೀರ್ಣವಾದ ಈ ಜಿಲ್ಲೆ ಕಂಡ ಅಪಘಾತಗಳ ಸಂಖ್ಯೆ ಅಸಂಖ್ಯ. ಅದರಲ್ಲೂ ಮ್ಯಾಂಗನೀಸ್ ಲಾರಿಗಳು ಓಡಾಡುತ್ತಿದ್ದ ಕಾಲದಲ್ಲಂತೂ ಇದಕ್ಕೆ ಲೆಕ್ಕವೇ ಇರಲಿಲ್ಲ. ಈ ಅಪಘಾತಗಳು ಸಾವುಗಳಲ್ಲಿ ಪರ್ಯಾವಸಾನವಾದದ್ದೇ ಹೆಚ್ಚು. ಇನ್ನು ಹೃದಯಾಘಾತದ ಪ್ರಕರಣಗಳಲ್ಲಿ ಅನೇಕ ರೋಗಿಗಳು ಮಂಗಳೂರನ್ನೋ, ಮಣಿಪಾಲವನ್ನೋ ತಲುಪದೆಯೇ ಅಥವಾ ತಡವಾಗಿ ತಲುಪಿ ಪ್ರಾಣ ಕಳೆದುಕೊಂಡಿದ್ದಾರೆ.

ಇಂಥ ಸಾವಿರಾರು ಸಾವುಗಳಿಗೆ ಕಾರಣ ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆಯೊಂದು ಇಲ್ಲದಿರುವದು. ಜನ ಹೆಚ್ಚಿನ ಚಿಕಿತ್ಸೆಗೆ ಪಕ್ಕದ ಮಂಗಳೂರನ್ನೋ, ಗೋವಾವನ್ನೋ, ಹುಬ್ಬಳ್ಳಿಯನ್ನೋ ಅವಲಂಬಿಸಬೇಕಾಗಿ ಬಂದಿರುವದು. ಎಮರ್ಜೆನ್ಸಿಯ ಕಾಲದಲ್ಲಿ ಐದಾರು ಗಂಟೆಗಳು ರಸ್ತೆಯಲ್ಲೇ ಕಳೆಯುವದು ರೋಗಿಯ ಜೀವಕ್ಕೆ ಸಂಚಕಾರ ತರುವದು ಸಹಜವೇ?

ಫೋಟೋ ಕೃಪೆ :google

ಜಿಲ್ಲೆಯಲ್ಲೆರಡು ಸುಸಜ್ಜಿತ ಆಸ್ಪತ್ರೆಗಳಿದ್ದರೆ ಈ ಜೀವಗಳೆಲ್ಲ ಬಚಾವಾಗುತ್ತಿದ್ದವು. ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕೆಂಬುದು ದಶಕಗಳ ಕೂಗು. ಇತ್ತೀಚೆಗಂತೂ ಅಪಘಾತಗಳು ತುಂಬ ಹೆಚ್ಚಾಗಿವೆ. ಜೊತೆಗೆ ಮೂರು ವರ್ಷಗಳಿಂದೀಚೆಗೆ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕೆಂಬ ಕೂಗು ಗಟ್ಟಿಯಾಗೇ ಕೇಳುತ್ತಿದೆ. ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೂ ಶುರುವಾಗಿದೆ. ಆದರೆ ಈ ಕೂಗು ಕೇಳಬೇಕಾದವರಿಗೆ ಕೇಳುತ್ತಲೇ ಇಲ್ಲವೋ ಅಥವಾ ಜಾಣ ಕಿವುಡೋ.

ಇಂಥ ಆಸ್ಪತ್ರೆಯನ್ನ ತರಲೇಬೇಕಾದ ಜವಾಬ್ದಾರಿ ಹೊರಬೇಕಾದ ಜನಪ್ರತಿನಿಧಿಗಳಾರೂ ಇದನ್ನು ಗಂಭಿರವಾಗಿ ಪರಿಗಣಿಸಿದಂತೆಯೇ ಇಲ್ಲ. ಯಾರೂ ಪ್ರತಿಕ್ರಯಿಸಿದ್ದನ್ನ ನಾನರಿಯೆ. ಇವರುಗಳೇ ನುಣುಚಿಕೊಂಡರೆ ಈ ಕೆಲಸ ಮಾಡುವವರ್ಯಾರು?.



ಸಾಕಷ್ಟು ವಿಸ್ತಾರವಾದ ಈ ಜಿಲ್ಲೆಗೆ ಘಟ್ಟದ ಮೇಲೊಂದು ಘಟ್ಟದ ಕೆಳಗೊಂದು ಸುಸಜ್ಜಿತ ಆಸ್ಪತ್ರೆ ಬೇಕೇಬೇಕು. ಮತ್ತು ಜನಪ್ರತಿನಿಧಿಗಳು ಈ ಜವಾಬ್ದಾರಿ ಹೊರಲೇಬೇಕು. ಮತ್ತೆ ಗಣಿಗಾರಿಕೆ ಪ್ರಾರಂಭಗುವ ಸುದ್ದಿಯಿದೆ. ರಕ್ಕಸ ಲಾರಿಗಳು ಮತ್ತೆ ಸಂಚಾರ ಶುರು ಮಾಡಲಿವೆ. ಹಿಂದಿನ ಕರಾಳ ಅನುಭವ ನಮ್ಮ ಜೊತೆಗಿದೆ. ಇದು ಮತ್ತೆ ಮರುಕಳಿಸದಂತೆ ತಡೆಯಬೇಕಿದೆ.
ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿಯೂ ಸಮಸ್ಯೆಗಳ ಆಗರವಾಗಿರುವ ಈ ‘ ಉತ್ತರ ಕಾಣದ ಜಿಲ್ಲೆ’ ಗೆ ಇದಕಾದರೂ ಉತ್ತರ ಕಂಡುಕೊಳ್ಳಲೇಬೇಕಿದೆ. ಮುಂದಿನ ಚುನಾವಣೆಯಲ್ಲಿ ಮತಕ್ಕಾಗಿ ಬಾಗಿಲಿಗೆ ಬರುವವರನ್ನು ಈ ಕುರಿತು ಕೇಳಬೇಕಿದೆ.


  • ಕಿರಣ್ ಭಟ್  (ನಾಟಕಕಾರರು, ರಂಗಭೂಮಿ ಕಲಾವಿದರು, ಸಂಘಟನಾಕಾರರು) ಹೊನ್ನಾವರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading