ಕೃಪಾ ಬಿ ಎಂ ಅವರ ‘ಮ್ಯಾಜಿಕ್ ಮಕ್ಕಳು’ ಕೃತಿಯಲ್ಲಿ ಮಕ್ಕಳ ಮನಸಿಗೆ ಮನರಂಜನೆಯ ಜೊತೆ ವಿಜ್ಞಾನದ ಭೋದನೆಯನ್ನು ಮಾಡಿರುವುದರಿಂದ ಮಕ್ಕಳ ಜೊತೆಗೆ ಪೋಷಕರು ಕೂಡ ಈ ಪುಸ್ತಕವನ್ನು ಓದಬಹುದಾಗಿದೆ.ಈ ಕಾದಂಬರಿಯ ಕುರಿತು ಚೇತನ್ ಗವಿಗೌಡ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಮ್ಯಾಜಿಕ್ ಮಕ್ಕಳು
ಲೇಖಕರು : ಕೃಪಾ ಬಿ ಎಂ
ಪ್ರಕಾಶನ : ಅವ್ವಾ ಪುಸ್ತಕಾಲಯ
ಪ್ರಕಾರ : ಮಕ್ಕಳ ಕಾದಂಬರಿ
ಮಲ್ಲಿಗೆಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಕುವೆಂಪು, ಬೇಂದ್ರೆ,ಕಾರಂತಜ್ಜರ ಬಣ್ಣಬಣ್ಣದ ಚಿತ್ರಗಳಿಂದ ಕೂಡಿದ್ದ ಶಾಲೆಯ ಗೋಡೆ, ಊರಿನ ಪರಿಸರ ಇವೆಲ್ಲಾ ಪುಸ್ತಕದ ಪುಟ ತಿರುಗಿಸುತಿದ್ದಂತೆ ಎಂಥವರನ್ನು ಕೂಡ ತಮ್ಮ ಬಾಲ್ಯಕ್ಕೆ ಮರಳಿ ಕರೆದೊಯ್ಯೋದರಲ್ಲಿ ಡೌಟೇ ಇಲ್ಲ. ಅಷ್ಟು ಚೆಂದವಾಗಿ ಕಥೆಗೆ ಪೂರಕವಾಗಿ ಆಕರ್ಷ್ ಎಂ.ಆರ್ ಅವರು ಚೆಂದವಾಗಿ ಚಿತ್ರಗಳ ಬಿಡಿಸಿದ್ದಾರೆ.
ತರಲೇ ಕಿತಾಪತಿ ತುಂಟಾಟಗಳಿಗೆ ಎತ್ತಿದ ಕೈ, ಓದುವುದರಲ್ಲೂ ಕೂಡ ಅಷ್ಟೇ ಫೇಮ್ಮಸ್ಸಾದ ಆರನೇ ತರಗತಿಯ ಐವರು ಮಕ್ಕಳು ಸೇರಿ ಒಂದು ತಂಡ ಕಟ್ಟಿಕೊಂಡು ಶಾಲೆಯ ಪ್ರತಿಭಾ ಕಾರಂಜಿಯಲ್ಲಿ ಸೋಲಾರ್ ಪ್ಯಾನೆಲ್ ತಯಾರಿಸಿ, ಗೆದ್ದು ಇಡೀ ಊರಿಗೆ ಮಾದರಿಯಾದ ಮಕ್ಕಳ ಸಾಹಸಮಯ ಎಳೆ ಹೊಂದಿರುವ ಕಾದಂಬರಿ ಮೂರರಿಂದ ಹನ್ನೆರಡನೇ ವಯಸ್ಸಿನ ಮಕ್ಕಳವರೆಗೂ ಒಂದೊಳ್ಳೆ ಕಥೆಯ ಜೊತೆಗೆ ಸೋಲಾರ್ ಪ್ಯಾನಲ್ ಹೇಗೆ ತಯಾರಿಸುತ್ತಾರೆ, ಅದರ ಕಾರ್ಯವೈಖರಿ ಹೇಗೆ? ಪ್ಯಾನಲ್ನ ಮುಖ್ಯ ಕೆಲಸವೇನು? ಈರುಳ್ಳಿ ಕತ್ತರಿಸಿದಾಗ ಕಣ್ಣಲ್ಲೇಕೆ ನೀರು ಬರುತ್ತೆ ಹೀಗೆ ವಿಜ್ಞಾನದ ಪಾಠವನ್ನು ತಿಳಿಸುತ್ತದೆ.

ಓದೋಕೆ ಬರೆಯೋಕೆ ಬಾರದ ಹುಡುಗನೊಬ್ಬ ಶಾಲೆಯಿಂದ ಹೊರ ಹಾಕಿದರೂ ಮುಂದೊಂದು ದಿನ ಶ್ರಮ ಪಟ್ಟು ಓದಿ, 2774 ಬಾರಿ ಸೋತರೂ ಕೊನೆಗೂ ಛಲಬಿಡದೇ ವಿದ್ಯುತ್ ಬಲ್ಬ್ ಆವಿಷ್ಕಾರ ಮಾಡಿದ ಸಾಹಸೀಯ ಕಥೆಯ ನೀತಿ ಮನಮುಟ್ಟುತ್ತೆ. ಪರಿಸರ ವೀಕ್ಷಣೆಗೆಂದು ಶಾಲೆಯಿಂದ ಪ್ರವಾಸಕ್ಕೆ ಹೋದಾಗ ಮರದ ಮೇಲಿದ್ದ ಜೇನುಗೂಡಿಗೆ ಕಲ್ಲೊಡೆದು ಜೇನುಹುಳಗಳ ಎಬ್ಬಿಸಿದ್ದು, ಚುರುಕುಳಿ ಸೊಪ್ಪನ್ನು ಮೈಗೆ ತಾಕಿಸಿ ಗುಳ್ಳೆ ಏಳುವಂತೆ ಮಾಡಿದ್ದ ಪ್ರಸಂಗವನ್ನ ಓದಿದ್ದಾಗ ಹಳೆಯ ದಿನಗಳು ನೆನಪಾಗಿ ಬೇಸಿಗೆ ರಜಾಗಳಲ್ಲಿ ಅಜ್ಜಿಯ ಊರಿಗೆ ಹೋದಾಗ ಬಾಲ್ಯ ಸ್ನೇಹಿತರೊಡನೆ ಆಡಿದ ತುಂಟಾಟ, ತರಲೆ ಕೀಟಲೆಗಳು ಕಣ್ಮುಂದೆ ಬಂದು ನಗು ತರಿಸಿದವು.
ಮ್ಯಾಜಿಕ್ ಮಕ್ಕಳು ಕಾದಂಬರಿಯೂ ಮಕ್ಕಳಿಗಾಗಿ ಕಥೆಗಳ ಮೂಲಕ ಸೃಷ್ಟಿಸಿದ ವೈಜ್ಞಾನಿಕ ವಿಚಾರಗಳನ್ನ ಒಳಗೊಂಡು, ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ಸಂಭಾಷಣೆ, ಸನ್ನಿವೇಶದಿಂದ ಕೂಡಿದೆ. ಮಕ್ಕಳ ಮನಸಿಗೆ ಮನರಂಜನೆಯ ಜೊತೆ ವಿಜ್ಞಾನದ ಭೋದನೆಯನ್ನು ಮಾಡಿರುವುದರಿಂದ ಮಕ್ಕಳ ಜೊತೆಗೆ ಪೋಷಕರು ಕೂಡ ಈ ಪುಸ್ತಕವನ್ನು ಓದಬಹುದಾಗಿದೆ. ಅಷ್ಟೇ ಅಲ್ಲದೇ ಶಾಲಾ ವಾರ್ಷಿಕೋತ್ಸವದಂದು ಮಕ್ಕಳಿಗೆ ಡ್ರಾಮ ಮಾಡಿಸುವ ಮೂಲಕವು ವಿಜ್ಞಾನದ ದೀವಿಗೆಯನ್ನ ಪಸರಿಸಬಹುದಾದ ಕಂಟೆಂಟ್ ಅನ್ನು ಕೂಡ ಈ ಕಾದಂಬರಿ ಹೊಂದಿದೆ.

ಮೊದಲ ಪುಸ್ತಕದಲ್ಲೇ ಇಷ್ಟೆಲ್ಲಾ ಕುತೂಹಲ ಮೂಡಿಸಿರುವ ಕೃಪಾ ಮಿಸ್ ರವರಿಂದ ಇನ್ನೂ ಹೆಚ್ಚಿನ ವೈಜ್ಞಾನಿಕ ಕಾದಂಬರಿಗಳು ಮೂಡಲಿ ಎಂದು ಬಯಸುತ್ತೇನೆ. ಮಕ್ಕಳಿಗಾಗಿ ಬರೀ ಚಿತ್ರಗಳ ಪುಸ್ತಕಗಳನ್ನ ಬಿಟ್ಟು, ಕಲಿಕೆಗೆ ಪೂರಕವಾಗುವ ವೈಜ್ಞಾನಿಕ, ತಂತ್ರಜ್ಞಾನ, ಗಣಿತ ವಿಷಯಾಧಾರಿತ ಕಥಾಮಾಲೆಯ ಸರಣಿಯನ್ನ ಪ್ರಕಟಿಸಲು ಮುಂದಾಗಿರುವ ಅವ್ವ ಪುಸ್ತಕಾಲಯಕ್ಕೆ ಶುಭವಾಗಲಿ.
ಮಕ್ಕಳಿಗೆ ಆಟ, ಊಟದ ಜೊತೆಗೆ ಇಂತಹ ಕಥೆಗಳ ಪಾಠ ಮಾಡಿದಾಗ ಮೊಬೈಲ್ ಹಾವಳಿಯಿಂದ ತಪ್ಪಿಸಲು ದಾರಿ ಸಿಕ್ಕಿದ ಹಾಗೆಯೇ ಸರಿ.. ವೀರಕಾಪುತ್ರ ಎಂ ಶ್ರೀನಿವಾಸ ಅವರು ಹೇಳಿದ ಹಾಗೇ “ಇಂದಿನ ಮಕ್ಕಳಿಗೆ ಓದಿನ ರುಚಿ ತೋರಿಸಿಬಿಟ್ಟರೆ.. ಮುಂದಿನ ಎರಡು ತಲೆಮಾರುಗಳಿಗೆ ಓದುಗರ ಕೊರತೆ ಇರುವುದಿಲ್ಲ” ಎಂಬುದು ಅಕ್ಷರಶಃ ಕಾರ್ಯರೂಪಕ್ಕೆ ಬಂದಂತೆಯೇ ಹೌದು..
- ಚೇತನ್ ಗವಿಗೌಡ
