ಯಾವ ಜಾತಿ ಧರ್ಮದ ಬೇಧವಿಲ್ಲದೆ ನೋಡಿದಂತಹ ಏಕೈಕ ಧಾರವಾಹಿ ಮಹಾಭಾರತ. ಅರ್ಜುನನ ಪಾತ್ರಕ್ಕಾಗಿ ಸುಮಾರು ೮೦೦೦ ಕ್ಕೂ ಹೆಚ್ಚು ಕಲಾವಿದರು ಚೋಪ್ರಾ ಕಛೇರಿಗೆ ಮುಗಿಬಿದ್ದದ್ದು ಇಂದಿಗೂ ದಾಖಲೆ. ಹಿಂದಿ ಚಿತ್ರರಂಗದ ದಿಗ್ಗಜ ನಿರ್ಮಾಪಕ-ನಿರ್ದೇಶಕರಾದ ಬಿ. ಆರ್ ಚೋಪ್ರಾ, ರವಿ ಚೋಪ್ರಾ, ಉರ್ದು ಕವಿ ಡಾ.ರಾಹೀ ಮೊಹಮ್ಮದ್ ಮಾಸೂಮ್ ರಝಾ,ಸರಬ್ ಜಿತ್ ಗೂಫೀ ಪೈಂಟಾಲ್ ರವರಂತಹ ಮಹಾನ್ ಕಲಾವಿದರಿಂದ ನಿರ್ಮಾಣವಾದಂತಹ ಧಾರಾವಾಹಿ ಮಹಾಭಾರತ.ಇನ್ನಷ್ಟು ಕುತೂಹಲಕಾರಿ ವಿಷಯಗಳಿವೆ, ಮುಂದೆ ಓದಿ …
ಒಂದಿಡೀ ಪೀಳಿಗೆಯ ಮನಸೂರೆಗೊಂಡ ಆ ಮಹಾ ಧಾರಾವಾಹಿ ” ಮಹಾಭಾರತ ”
ಮಹಾಭಾರತ್ ಮಹಾಭಾರತ್।
ಅಥಶ್ರೀ ಮಹಾಭಾರತ್ ಕಥಾ॥
ಮಹಾಭಾರತ್ ಕಥಾ॥
ಕಥಾ ಹೈ ಪುರುಷಾರ್ಥ್ ಕಿ। ಸ್ವಾರ್ಥ ಕಿ ಪರಮಾರ್ಥ್ ಕಿ।
ಸಾರಥಿ ಜಿಸಕೇ ಬನೆ।
ಶ್ರೀಕೃಷ್ಣ್ ಭಾರತ ಪಾರ್ಥ್ ಕಿ।
ಶಬ್ಧ್ ದಿಘ್ಘೋಷಿತ್ ಹುವಾ।
ಜಬ್ ಸತ್ಯ್ ಸಾರ್ಥಕ್ ಸರ್ವಥಾ।
ಶಬ್ಧ್ ದಿಘ್ಘೋಷಿತ್ ಹುವಾ।
ಯದಾ ಯದಾ ಹಿ ಧರ್ಮಸ್ಯ। ಗ್ಲಾನಿರ್ಭವತಿ ಭಾರತ। ಅಭ್ಯತ್ಥಾನಮಧರ್ಮಸ್ಯ।
ತದಾತ್ಮಾನಂ ಸ್ರಜಾಮ್ಯಹಂ।
ಪರಿತ್ರಾಣಾಯಾ ಸಾಧೂನಾಂ।
ವಿನಾಶಾಯ ಚ ದುಷೃಕೃತಾಂ।
ಧರ್ಮಸಂಸ್ಥಾಪನಾರ್ಥಾಯೇ ಸಂಭವಾಮಿ ಯುಗೇ ಯುಗೇ॥

ಫೋಟೋ ಕೃಪೆ : newsbytesapp
1988 ರಿಂದ 1990ರವರೆಗೆ ಪ್ರತೀ ಭಾನುವಾರ ಭಾರತದ ಮನೆಮನೆಗಳ ಟಿವಿಗಳಲ್ಲಿ ಬೆಳಗ್ಗೆ ಸರಿಯಾಗಿ 10 ಗಂಟೆಗೆ ಮಹೇಂದ್ರ ಕಪೂರ್ ಹಾಡಿದ ಈ ಮೇಲಿನ ಶ್ಲೋಕ ಸಹಿತವಾದ ಹಾಡು ಬರುತ್ತಿದ್ದಂತೆ ಇಡೀ ದೇಶ ಟಿವಿ ಇರುವ ಮನೆಯೊಳಗೆ ನುಸುಳಿಕೊಂಡು ಬಿಡುತ್ತಿತ್ತು. ಬೆಳಿಗ್ಗೆ 10 ರಿಂದ 11 ಗಂಟೆಯ ಸಮಯ ದೇಶದ ಬೀದಿಗಳು ಅಕ್ಷರಶಃ ನಿರ್ಜನವಾಗಿರುತ್ತಿದ್ದವು. ಯಾವ ಜಾತಿ ಧರ್ಮದ ಬೇಧವಿರಲಿಲ್ಲ. #ಮಹಾಭಾರತ ಧಾರಾವಾಹಿ ನೋಡುವವರದ್ದೇ ಒಂದು ಧರ್ಮ ಆಗಿತ್ತು. ” ಮೈ ಸಮಯ್ ಹೂಂ ” ಎನ್ನುತ್ತಾ, ಸಮಯವನ್ನು ಸೂತ್ರಧಾರಿ ಮತ್ತು ಸಾಕ್ಷಿಯಾಗಿರಿಸಿಕೊಂಡು ಹಿಂದಿ ಚಿತ್ರರಂಗದ ದಿಗ್ಗಜ ನಿರ್ಮಾಪಕ-ನಿರ್ದೇಶಕರಾದ ಬಿ. ಆರ್ ಚೋಪ್ರಾ, ರವಿ ಚೋಪ್ರಾ, ಉರ್ದು ಕವಿ ಡಾ.ರಾಹೀ ಮೊಹಮ್ಮದ್ ಮಾಸೂಮ್ ರಝಾ, ಪಂಡಿತ್ ನರೇಂದ್ರ ಶರ್ಮಾ, ಸರಬ್ ಜಿತ್ ಗೂಫೀ ಪೈಂಟಾಲ್ ರವರ ತಂಡ ಮಹಾ ಧಾರಾವಾಹಿ ಮಹಾಭಾರತವನ್ನು ರಚಿಸಿತು.

(ಮಹಾಭಾರತ ಧಾರಾವಾಹಿ ನಿರ್ಮಾಪಕ-ನಿರ್ದೇಶಕರಾದ ಬಿ. ಆರ್ ಚೋಪ್ರಾ)
ಶತಮಾನದ ಈ ಮಹಾ ಧಾರಾವಾಹಿಯ ಪಾತ್ರಗಳಿಗೆ ಪಾತ್ರಧಾರಿಗಳ ಆಯ್ಕೆಯ ಜವಾಬ್ದಾರಿ ಹೊತ್ತಿದ್ದು, ಚೋಪ್ರಾ ಬಳಗದ ಸಹಾಯಕ ನಿರ್ದೇಶಕ ಗೂಫಿ ಪೈಂಟಾಲ್..ಇಡೀ ಮಹಾಭಾರತ ಧಾರಾವಾಹಿಯ ಪಾತ್ರಗಳ ಆಯ್ಕೆಯು ಜಗತ್ತಿನಾದ್ಯಂತ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು. ಪೌರಾಣಿಕವಾದ ಅತೀ ಚಿರಪರಿಚಿತ ಮಹಾಭಾರತದ ಪಾತ್ರಗಳಿಗೆ ಜೀವ ತುಂಬುವ ಮತ್ತು ಭವಿಷ್ಯದ ಜಗತ್ತು ಆ ಪಾತ್ರಗಳನ್ನು ಕಲ್ಪಿಸಿಕೊಂಡಾಗ, ತಾವು ಆರಿಸಿದ ಕಲಾವಿದರ ಮುಖವೇ ಕಣ್ಣೆದುರು ಬರಬೇಕು ಎಂಬ ವ್ಯವಸ್ಥಿತ ದೂರಾಲೋಚನೆಯೊಂದಿಗೆ, ಎಂದಿಗೂ ಮರೆಯದ ಪಾತ್ರಧಾರಿಗಳನ್ನು ಗೂಫಿ ಪೈಂಟಾಲ್ ಆಯ್ಕೆ ಮಾಡಿದ್ದೇ ಒಂದು ರಣರೋಚಕವಾದ, ಅಧ್ಯಯನ ಮಾಡಬೇಕಾದ ವಿಷಯವಾಗಿದೆ. ಒಂದೊಂದು ಪಾತ್ರವನ್ನು ಆಯ್ಕೆ ಮಾಡುವ ಮುನ್ನ ಗೂಫಿ ಪೈಂಟಾಲ್ ದೇಶದ ಚಿತ್ರರಂಗದ, ರಂಗಭೂಮಿಗಳ ಸಾವಿರಾರು ಕಲಾವಿದರ ಆಡಿಷನ್ ತೆಗೆದುಕೊಳ್ಳುತ್ತಿದ್ದರು. ಪಾತ್ರಧಾರಿಗಳ ಆಯ್ಕೆ ಪ್ರಕ್ರಿಯೆಗೇ ಒಂದು ವರ್ಷ ಹಿಡಿಯಿತು. ಮಹಾಭಾರತ ಧಾರಾವಾಹಿಯ ಒಂದೆರಡು ಕಂತುಗಳಲ್ಲಷ್ಟೇ ಪ್ರಸಾರವಾಗುವ ಸಣ್ಣ ಪಾತ್ರಗಳಲ್ಲಿ ಒಂದಾದ ಅಭಿಮನ್ಯುವಿನ ಪಾತ್ರಕ್ಕೆ ಚಿತ್ರನಟ ಗೋವಿಂದ ಮತ್ತು ಚುಂಕಿಪಾಂಡೆಯಂತಹ ಆ ಕಾಲದ ಮಹಾನ್ ಪ್ರತಿಭಾವಂತ ಯುವ ಕಲಾವಿದರೇ ಆಡಿಷನ್ ನಲ್ಲಿ ವಿಫಲರಾಗಿ ಅದು ನವ ಕಲಾವಿದರೊಬ್ಬರ ಪಾಲಾಯಿತು. ದ್ರೌಪದಿಯ ಪಾತ್ರಕ್ಕೆ ಸೂಪರ್ ಹಿಟ್ ಹಿಂದಿ ಚಿತ್ರ ಖಯಾಮತ್ ಸೇ ಖಯಾಮತ್ ತಕ್ ಚಿತ್ರದ ಆ ಕಾಲದ ಜನಪ್ರಿಯ ನಟಿ ಜೂಹಿ ಚಾವ್ಲಾಗೂ ಕೂಡ ಅವಕಾಶ ನಿರಾಕರಿಸಲಾಯಿತು. ತಿಂಗಳುಗಟ್ಟಲೆ ದ್ರೌಪದಿಯ ಪಾತ್ರಕ್ಕೆ ನಟಿಯರು ಚೋಪ್ರಾರ ಕಛೇರಿಗೆ ತಂಡೋಪತಂಡವಾಗಿ ಬಂದರು. ಯಾರೂ ಕೂಡ ಗೂಫಿ ಪೈಂಟಾಲ್ ಮತ್ತು ರಾಹೀ ಮಾಸೂಮ್ ರಝಾರ ಕಣ್ಣಲ್ಲಿ ದ್ರೌಪದಿಯಾಗಿ ಕಾಣಲೇ ಇಲ್ಲ. ಆದರೆ ಅದೊಂದು ದಿನ ಗೂಫಿ ಪೈಂಟಾಲ್ ಅಪರಿಚಿತ ಬಂಗಾಳಿ ಹುಡುಗಿಯೊಬ್ಬಳನ್ನು ತಂದು ಬಿ. ಆರ್ ಚೋಪ್ರಾರ ಎದುರು ನಿಲ್ಲಿಸಿ, ಇವಳೇ ದ್ರೌಪದಿ ಎಂದರು. ಇಡೀ ಹಿಂದಿ ಚಿತ್ರರಂಗ ಜಾಲಾಡಿದರೂ ಸಿಗದ ದ್ರೌಪದಿ, ಹಿಂದಿ ಬಾರದ ಬಂಗಾಳಿ ಭಾಷೆಯಲ್ಲಿ ಸಿಕ್ಕಿದ್ದು ಕಂಡು ಚೋಪ್ರಾ ಒಮ್ಮೆಗೆ ಹೌಹಾರಿದರು. ಚೋಪ್ರಾರ ಮನಸ್ಸಿನ ತಳಮಳ ಗಮನಿಸಿದ ಗೂಫಿ ಪೈಂಟಾಲ್, ಹಸ್ತಿನಾವತಿಯ ಅರಮನೆಯಲ್ಲಿ ವಸ್ತ್ರಾಪಹರಣದ ಸಂದರ್ಭದಲ್ಲಿ ಆಚಾರ್ಯತ್ರಯರನ್ನು ಅವರ ಮೌನಕ್ಕಾಗಿ ಪ್ರೆಶ್ನಿಸುವ ದೃಶ್ಯದ ಸಂಭಾಷಣೆಯ ತುಣುಕೊಂದನ್ನು ಅಭಿನಯಿಸಿ ತೋರಿಸಲು ಆ ಬಂಗಾಳಿ ನಟಿ ರೂಪಾ ಗಂಗೂಲಿಗೆ ಸೂಚಿಸಿದರು. ರೂಪಾ ಗಂಗೂಲಿ ಭೀಷ್ಮನ ಪಾತ್ರವಾಗಿ ನಿರ್ಮಾಪಕ ಚೋಪ್ರಾರನ್ನು ಕಲ್ಪಿಸಿಕೊಂಡು, ತನ್ನ ತೀಕ್ಷ್ಣ ಮೊನಚು ಮಾತುಗಳಿಂದ ಕೂಡಿ ಮಾಡಿದ ನಟನೆ ಮತ್ತು ಕಣ್ಣಲ್ಲಿ ಕಣ್ಣಿಟ್ಟು ಆಡಿದ ಮಾತುಗಳಿಗೆ ಚೋಪ್ರಾ ಕುಂತಲ್ಲೇ ಕಂಪಿಸಿದರು. ಪಾಂಚಾಲಾಧೀಶ ದ್ರುಪದನ ಮಗಳಾಗಿ ರಾಜಕುಮಾರಿಯೊಬ್ಬಳ ಮುಖದ ಮೇಲಿನ ಗಾಂಭೀರ್ಯ, ತೇಜಸ್ಸಿನ ಪ್ರತಿಫಲನ ಮತ್ತು ಕುರುವಂಶದ ಸೊಸೆಯಾಗಿ, ಪಂಚ ಪತಿಯರ ಪತ್ನಿಯಾಗಿ, ಗಂಗೂಲಿಯ ಬಹುರೂಪಿಯಾದ ಅಭಿನಯ ಯಾರಿಂದಲೂ ಮಾಡಲಾರದಷ್ಟು ಉತ್ಕೃಷ್ಟ ಮಟ್ಟದಲ್ಲಿತ್ತು. ಆಕೆಯ ಕಣ್ಣುಗಳು ಪಾಂಚಾಲದ ಸ್ವಯಂವರ ಮಂಟಪದ ಘಟನೆಗಳಿಂದ ಹಿಡಿದು, ಅಂತಿಮ ಚರಣದ ವೈಶಂಪಾಯನ ಸರೋವರದ ದಡದ ಮೇಲೆ ದುರ್ಯೋಧನನ ಸಾವಿನವರೆಗಿನ ಸಮಸ್ತ ತೀವ್ರ ಭಾವಗಳ ಸಂದರ್ಭ, ಸಂವೇದನೆ, ಸೂಕ್ಷ್ಮತೆಗಳಿಗೆ ಹೊಂದಿಕೊಳ್ಳುವುದನ್ನು ಚೋಪ್ರಾ ಕೆಲವೇ ಕ್ಷಣಗಳಲ್ಲಿ ಅರಿತುಕೊಂಡರು. ಇಡೀ ದೇಶ ಹುಡುಕಿದರೂ ಸಿಗದೆ ಬಹುದಿನಗಳಿಂದ ಕಗ್ಗಂಟಾಗಿ ಉಳಿದಿದ್ದ, ಗೂಫಿಯ ದ್ರೌಪದಿಯ ಪಾತ್ರದ ಆಯ್ಕೆಯಿಂದ ಸಂತಸಗೊಂಡ ಬಿ. ಆರ್ ಚೋಪ್ರಾ, ಇನ್ನು ಮುಂದಿನ ಪಾತ್ರಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ತಮಗೆ ಪಾತ್ರಧಾರಿಗಳನ್ನು ಪರಿಚಯಿಸುವ ಅಗತ್ಯವಿಲ್ಲ, ನೀವೇ ಅಂತಿಮಗೊಳಿಸಿ ಎಂದು ಗೂಫಿಗೆ ಮೆಚ್ವುಗೆಯ ಮೂಲಕ ತಿಳಿಸಿದರು.

(ಶ್ರೀಕೃಷ್ಣನ ಪಾತ್ರಧಾರಿ ನಿತೀಶ್ ಭಾರಧ್ವಾಜ್) ಫೋಟೋ ಕೃಪೆ : tellychakkar
ಒಂದೊಂದು ಪಾತ್ರವನ್ನು ಗೂಫಿ ಪೈಂಟಾಲ್, ಪಂಡಿತ್ ನರೇಂದ್ರ ಶರ್ಮಾ ಮತ್ತು ಮಾಸೂಮ್ ರಝಾರ ತಂಡ ಬಹಳ ಶ್ರಮವಹಿಸಿ ಚಾಣಾಕ್ಷತನದಿಂದ ಆಯ್ಕೆ ಮಾಡಿತು. ಶ್ರೀಕೃಷ್ಣನ ಪಾತ್ರಕ್ಕೆ ಬಹಳಷ್ಟು ಕಲಾವಿದರು ಉತ್ಸಾಹ ತೋರಿದರು. ಸ್ವತಃ ಮಹಾಭಾರತ ಧಾರಾವಾಹಿಯ ಧರ್ಮರಾಯನ ಪಾತ್ರಧಾರಿ ಗಜೇಂದ್ರ ಚೌಹಾನ್ ಮತ್ತು ಭೀಷ್ಮನ ಪಾತ್ರಧಾರಿ ಮುಖೇಶ್ ಖನ್ನಾ ಕೃಷ್ಣನ ಪಾತ್ರ ಮಾಡಲು ಉತ್ಸಾಹ ತೋರಿದರು. ಆದರೆ ಯಾರಿಗೂ ಅವಕಾಶ ಸಿಗಲಿಲ್ಲ. ಭಗವದ್ಗೀತೆಯನ್ನು ಸರಾಗ, ಸ್ಪಷ್ಟ ಮತ್ತು ಆಕರ್ಷಕ ರೀತಿಯಲ್ಲಿ ಪ್ರಸ್ತುತಪಡಿಸುವುದು ಮಾತ್ರವಲ್ಲದೆ, ಗೀತೆಯ ಕ್ಲಿಷ್ಟಕರವಾದ ಉಚ್ಚಾರದ ಸಂದರ್ಭದಲ್ಲಿ ನಟನೆಯೊಂದಿಗೂ ಸಮತೋಲನ ಸಾಧಿಸಬಲ್ಲ ನಟ ಇಡೀ ಕಲಾಲೋಕದಲ್ಲಿ ಗೂಫಿ ಪೈಂಟಾಲ್ ಗೆ ಕಾಣಲಿಲ್ಲ. ಬಹಳ ಪ್ರಯತ್ನದ ನಂತರ ಸಂಸ್ಕೃತವನ್ನು ಸ್ಪಷ್ಟವಾಗಿ ಉಚ್ಚರಿಸುವ ಮತ್ತು ಲವಲವಿಕೆಯಿಂದ ಕೂಡಿ ನೋಡಲು ಸ್ಫುರದ್ರೂಪಿಯಾಗಿರುವ ದೆಹಲಿಯ ಪಶುವೈದ್ಯ ನಿತೀಶ್ ಭಾರಧ್ವಾಜ್ ಮಹಾಭಾರತದ ಶ್ರೀಕೃಷ್ಣನ ಪಾತ್ರಕ್ಕೆ ಆಯ್ಕೆಯಾದರು. ಬಹಳ ಕಷ್ಟಪಟ್ಟು ಕೃಷ್ಣನ ಪಾತ್ರಧಾರಿ ಸಿಕ್ಕಿದ. ಆದರೆ ಅರ್ಜುನ ಯಾರು? ಮತ್ತದೇ ಹುಡುಕಾಟ. ಸಾವಿರಾರು ಕಲಾವಿದರು ದೇಶದ ಮೂಲೆಮೂಲೆಯಿಂದ ಬಂದರು.

( ಧರ್ಮರಾಯನ ಪಾತ್ರಧಾರಿ ಗಜೇಂದ್ರ ಚೌಹಾನ್ ) ಫೋಟೋ ಕೃಪೆ : ibtimes.
ನಿಮಗೆ ಗೊತ್ತಿರಲಿ, ಮಹಾಭಾರತದ ಅರ್ಜುನನ ಪಾತ್ರಕ್ಕೆ ಸುಮಾರು ೮೦೦೦ ಕ್ಕೂ ಹೆಚ್ಚು ಜನರು ಚೋಪ್ರಾ ಕಛೇರಿಯನ್ನು ಸಂಪರ್ಕಿಸಿದರು. ಜಗತ್ತಿನಲ್ಲಿ ಯಾವುದಾದರು ಮನರಂಜನಾ ಕ್ಷೇತ್ರದ ಪಾತ್ರಕ್ಕೆ ಇಷ್ಟು ಕಲಾವಿದರು ಮುಗಿಬಿದ್ದದ್ದು ಇಂದಿಗೂ ದಾಖಲೆ. ದೇಶದ ಅದೆಷ್ಟೋ ಖ್ಯಾತನಾಮ ಕಲಾವಿದರ ಬಗ್ಗೆಯೂ ಗೂಫಿ, ನರೇಂದ್ರ ಶರ್ಮ, ಮಾಸೂಮ್ ರಝಾರ ತಂಡ ತಿಂಗಳುಗಟ್ಟಲೆ ಚರ್ಚೆ ನಡೆಸಿತು. ಬರೀ ಕಣ್ಣಿಗೆ ಮಾತ್ರವಲ್ಲ ಯೋಚನೆಯಲ್ಲೂ ಆ ಪಾತ್ರಕ್ಕೆ ಯಾರೂ ಗೋಚರಿಸಲಿಲ್ಲ. ಆಗಿನ ಜನಪ್ರಿಯ ಹಿಂದಿ ಚಿತ್ರನಟ ರಾಜ್ ಬಬ್ಬರ್ ಅರ್ಜುನನ ಪಾತ್ರಕ್ಕೆ ಒಲವು ತೋರಿಸಿದರು. ಅಡಿಷನ್ ನಲ್ಲಿ ಯಾರೂ ಯಾವ ಕೋನದಿಂದಲೂ ಅರ್ಜುನನಾಗಿ ಕಾಣಿಸಲೇ ಇಲ್ಲ. ರಾಜ ಬಬ್ಬರ್ ಕೂಡ ಆಯ್ಕೆಯಾಗಲಿಲ್ಲ. ನಿರ್ಮಾಪಕ ಬಿ ಆರ್ ಚೋಪ್ರಾ ಬಹಳ ಚಿಂತಿತರಾದರು. ಹೀಗಿರುವಾಗ ಒಂದು ದಿನ ಚೋಪ್ರಾ ಕಛೇರಿಯ ಸಿಬ್ಬಂದಿಯೊಬ್ಬರು, ಅರ್ಜುನನ ಪಾತ್ರಕ್ಕಾಗಿ ಮಹಾಭಾರತದ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ಫಿರೋಜ್ ಖಾನ್ ಎಂಬ ಮುಂಬಯಿಯ ಹವ್ಯಾಸಿ ಮುಸ್ಲಿಮ್ ಕಲಾವಿದನೊಬ್ಬನನ್ನು ಗೂಫಿ ಪೈಂಟಾಲ್ ತರುವ ಪ್ರಯತ್ನದಲ್ಲಿದ್ದಾರೆ ಎಂದು ನಿರ್ದೇಶಕ ಚೋಪ್ರಾಗೆ ಹೇಳುತ್ತಾರೆ. ವಿಷಯ ತಿಳಿದು ಆಶ್ಚರ್ಯಗೊಂಡ ಚೋಪ್ರಾ ನೇರ ಗೂಫಿ ಪೈಂಟಾಲ್ ರ ಆಡಿಷನ್ ಸೆಂಟರ್ ಗೆ ಬರುತ್ತಾರೆ. ಆಡಿಷನ್ ಸೆಂಟರಿನ ಒಳಬರುತ್ತಿದ್ದಂತೆ ನೇರ ಕಣ್ಣಿಗೆ ಬಿದ್ದದ್ದು ಅರ್ಜುನನ ಬಿಳಿ ಬಣ್ಣದ ಬಟ್ಟೆ ತೊಟ್ಟ ಫಿರೋಜ್ ಖಾನ್.

(ಅರ್ಜುನನ ಪಾತ್ರಧಾರಿ ಫಿರೋಜ್ ಖಾನ್) ಫೋಟೋ ಕೃಪೆ : Times of India
ಅರ್ಜುನನ ಪಾತ್ರದ ಬಗ್ಗೆ ವಿಶೇಷ ಕಲ್ಪನೆ ಇದ್ದ ಚೋಪ್ರಾಗೆ ಎದುರು ನಿಂತ ಫಿರೋಜ್ ಮುಖ ಕಾಣುತ್ತಿದ್ದಂತೆ ಈತ ಮೊದಲು ಅರ್ಜುನ ನಂತರ ಫಿರೋಜ್ ಅಂದರು. ಹಿಂದಿನಿಂದ ಬಂದು ಚೋಪ್ರಾರ ಹೆಗಲ ಮೇಲೆ ಕೈಯಿಟ್ಟ ಗೂಫಿ ಈತ ಅರ್ಜುನ ಮಾತ್ರವಲ್ಲ ಬೃಹನ್ನಳೆಯು ಹೌದು ಎಂದರು. ಅಲ್ಲಿ ಶಿಖಂಡಿಯನ್ನು ಮಂದೆ ನಿಲ್ಲಿಸಿಕೊಂಡು ಪಿತಾಮಹ ಭೀಷ್ಮನನ್ನು ಶರಶಯ್ಯೆಯಲ್ಲಿ ಮಲಗಿಸುವ ಮಹಾಭಾರತ ಯುದ್ಧದ 10 ನೇಯ ದಿನದ ದೃಶ್ಯವನ್ನು ಹೇಗೆ ಮಾಡಬಹುದು ಮತ್ತು ಆ ಮಹಾ ದೃಶ್ಯದಲ್ಲಿ ಆಯ್ಕೆ ಮಾಡಿದ ಪಾತ್ರಧಾರಿಗಳು ಹೇಗೆ ಅಭಿನಯಿಸುತ್ತಾರೆ ಎಂಬುದನ್ನು ಪ್ರಾಯೋಗಿಕವಾಗಿ ಪರಿಶೀಲಿಸಲಾಗುತ್ತಿತ್ತು. ಕೃಷ್ಣಾರ್ಜುನರ ರಥದಲ್ಲಿ ಏಕಾಏಕಿ ಶಿಖಂಡಿಯನ್ನು ಕಾಣುತ್ತಿದ್ದಂತೆ ಶಸ್ತ್ರತ್ಯಜಿಸಿ ತಟಸ್ಥನಾದ ಸೇನಾಪತಿ ಭೀಷ್ಮನ ಮೇಲೆ, ವಾತ್ಸಲ್ಯವನ್ನು ಮೀರಿ ಒಲ್ಲದ ಮನಸ್ಸಿನಿಂದ ಬಾಣ ಹೂಡುವಾಗ ಅರ್ಜುನ ಪಾತ್ರಧಾರಿ ಫಿರೋಜ್ ಖಾನ್ ಮುಖದಿಂದ ಹೊರಹೊಮ್ಮಿದ ಆ ಅವರ್ಣನೀಯ ಯಾತನೆ, ಬಾಣ ನಾಟುವಾಗ ವಯೋವೃದ್ಧ ನಿರಾಯುಧ ಭೀಷ್ಮನ ನರಳಾಟ, ಭೀಷ್ಮ ಶರಗಳ ಸಮೇತ ಧರೆಗುರುಳಿದ್ದು ಕಂಡು ಗೆಲುವಿನ ನಗೆ ಬೀರಿದ ಚಮ್ಮಟಿಗೆ ಹಿಡಿದು ಸಾರಥಿಯ ಸ್ಥಾನದಲ್ಲಿ ಕೂತ ನಿತೀಶ್ ಭಾರದ್ವಾಜರ ಕೃಷ್ಣ, ವಿಕೃತವಾಗಿ ಸಂತೋಷಪಟ್ಟ ಶಿಖಂಡಿ, ಯಾವ ಗ್ಲಿಸರಿನ್ ಕಣ್ಣಿಗೆ ಹಾಕದೆ ಅಳುತ್ತಿದ್ದ ಭೀಷ್ಮ ಪಾತ್ರಧಾರಿ ಮುಖೇಶ್ ಖನ್ನಾ ಮತ್ತು ಅರ್ಜುನ ಫಿರೋಜ್ ಖಾನ್ , ಹೀಗೆ ಒಂದೇ ದೃಶ್ಯದಲ್ಲಿ ಸಮ್ಮಿಶ್ರವಾದ ಬಹುರೂಪಿ ಭಾವಗಳ ನೈಜತೆ ಮತ್ತು ದೃಶ್ಯದ ಅಭಿವ್ಯಕ್ತಿಯ ಸೊಬಗನ್ನು ಕಂಡು” ನಾವು ಇತಿಹಾಸ ನಿರ್ಮಿಸಲಿದ್ದೇವೆ” ಎಂದು ಚೋಪ್ರಾ ಆಡಿಷನ್ ಸೆಂಟರ್ ನಲ್ಲಿ ಕುಣಿದು ಕುಪ್ಪಳಿಸಿದರು.
ತದನಂತರದ ದಿನಗಳಲ್ಲಿ ದ್ರೋಣಾಚಾರ್ಯ ಪಾತ್ರಕ್ಕೆ ಸುರೇಂದ್ರ ಪಾಲ್, ಕೌರವನ ಪಾತ್ರಕ್ಕೆ ಪುನೀತ್ ಇಸ್ಸಾರ್, ಕರ್ಣನ ಪಾತ್ರಕ್ಕೆ ಪಂಕಜ್ ಧೀರ್, ನಕುಲ- ಸಹದೇವರ ಪಾತ್ರಕ್ಕೆ ನಿಜ ಜೀವನದಲ್ಲೂ ಸಹೋದರರಾದ ಸಂಜೀವ ಚಿತ್ರೆ ಮತ್ತು ಸಮೀರ್ ಚಿತ್ರೆಯವರನ್ನು ಆರಿಸಲಾಯಿತು. ಧರ್ಮೇಶ್ ತಿವಾರಿ ಕೃಪಾಚಾರ್ಯನಾಗಿ ಕಾಣಿಸಿಕೊಂಡರು. ಒಲಂಪಿಯನ್ ಹಾಗೂ ಏಷ್ಯಾಡ್ ನಲ್ಲಿ 2 ಬಾರಿ ಚಿನ್ನದ ಪದಕ ಗೆದ್ದಿದ್ದ ಕ್ರೀಡಾಪಟು ಪ್ರವೀಣ್ ಕುಮಾರ್ ಭೀಮನ ಪಾತ್ರವನ್ನು ಮಾಡಿದರು. ವಿರೇಂದ್ರ ರಾಜ್ದಾನ್ ವಿದುರನಾದರು. ನಾಝನೀನ್ ಬೇಗಮ್ ಕುಂತಿಯಾದರೆ, ರೇಣುಕಾ ಇಸ್ರಾನಿ ಗಾಂಧಾರಿಯಾದರು. ಅದು ಹೇಗೋ ಎಲ್ಲ ಪಾತ್ರಗಳು ಸಿದ್ಧವಾದವು. ಆದರೆ, ಸ್ವತಃ ಶ್ರೀಕೃಷ್ಣ, ಆಚಾರ್ಯತ್ರಯರು, ಧೃತರಾಷ್ಟ್ರ-ಗಾಂಧಾರಿ, ಕುಂತಿ, ಮಹಾಮಂತ್ರಿ ವಿದುರ ಮುಂತಾದ ಪ್ರಭಾವಿಗಳ ಉಪಸ್ಥಿತಿಯಲ್ಲಿ, ಅವರೆಲ್ಲರ ಭೂಮಿಕೆಯನ್ನು ಧಿಕ್ಕರಿಸಿ ದಾಯಾದಿ ಕಲಹಕ್ಕೆ ವೇದಿಕೆ ಸಜ್ಜುಗೊಳಿಸಿ, ಕಾಲಕಾಲಕ್ಕೆ ಕುಟಿಲ ರಣತಂತ್ರ ರೂಪಿಸಿ, ಕಲಹದ ರಣಕಹಳೆ ಊದುವುದರ ಮೂಲಕ ಇಡೀ ಚಂದ್ರವಂಶವನ್ನೇ ಅಲ್ಲೋಲಕಲ್ಲೋಲಗೊಳಿಸಿದ ಶಕುನಿಯ ಪಾತ್ರಕ್ಕೆ ಯಾರು? ಎಂಬ ಪ್ರೆಶ್ನೆ ಆರಂಭವಾಯಿತು. ಅದಕ್ಕೂ ಬಹಳಷ್ಟು ಕಲಾವಿದರನ್ನು ಪರೀಕ್ಷಿಸಲಾಯಿತು.

(ಶಕುನಿಯ ಪಾತ್ರಧಾರಿ ಗೂಫಿ ಪೈಂಟಾಲ್) ಫೋಟೋ ಕೃಪೆ : indiatimes
ನೂರು ಕೌರವರ ಮಾವನಾಗಿ ಮಹಾಭಾರತದ ಸಮಸ್ತ ಸಾತ್ವಿಕ ಪಾತ್ರಗಳ ರೋಷ- ಕಿಚ್ಚುಗಳಿಗೆ ಗುರಿಯಾಗುವ ಮತ್ತು ಆ ಎಲ್ಲ ಪಾತ್ರಗಳ ನಿರ್ವಹಣೆಗೆ ನಿರ್ಣಾಯಕವಾಗುವ ಶಕುನಿಯ ಪಾತ್ರ ಮಹಾ ಸವಾಲಿನದ್ದಾಗಿತ್ತು. ಸಮಸ್ತ ಧಾರಾವಾಹಿಯ ತಂಡ ಒಂದು ಕಡೆ ಕುಳಿತು ಬಹುದಿನಗಳಿಂದ ಕಗ್ಗಂಟಾಗಿ ಉಳಿದಿದ್ದ ಶಕುನಿಯ ಪಾತ್ರಕ್ಕೆ ಯಾರು ಯಾರು ಎಂದು ಗಹನ ಆಲೋಚನೆ ಮತ್ತು ಚರ್ಚಾನಿರತರಾಗಿರುವ ಸಂದರ್ಭದಲ್ಲಿ ಸಭೆಯ ಅದ್ಯಾವುದೋ ಮೂಲೆಯಿಂದ ಅದ್ಯಾರೋ ಸಣ್ಣ ಧ್ವನಿಯಲ್ಲಿ ಗೂಫಿ ಪೈಂಟಾಲ್ ಎಂದರು. ಆ ಕ್ಷೀಣ ಧ್ವನಿಗೆ ಪ್ರತಿಯಾಗಿ ಸರ್ವಸಮ್ಮತವಾದ ಹೋ ಎನ್ನುವ ಒಕ್ಕೊರಲಿನ ಆ ಪ್ರತಿ ಶಬ್ದಕ್ಕೆ ಇಡೀ ಆಡಿಷನ್ ಸೆಂಟರ್ ನಡುಗಿತು. ಸಂತಸಗೊಂಡ ನಿರ್ಮಾಪಕ ಚೋಪ್ರಾ, ಶಕುನಿ ಗೂಫಿಯಲ್ಲದೇ ಇನ್ನಾರು? ಎಂದರು. ಇತಿಹಾಸ ಸೃಷ್ಟಿಸಿದ ಶಕುನಿಯ ಪಾತ್ರಕ್ಕೆ ಗೂಫಿಯ ಹೆಸರು ಸೂಚಿಸಿದ ಅಂದಿನ ಸಭೆಯಲ್ಲಿನ ಆ ಕ್ಷೀಣ ಧ್ವನಿ ಯಾರದ್ದು ಎಂದು ಚೋಪ್ರಾ ಸಭೆಗೆ ಪ್ರಶ್ನಿಸಿದಾಗ ಸಭೆಯಲ್ಲಿ ಯಾರಿಂದಲೂ ಉತ್ತರ ಬರಲಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ ಅಂದು ಆ ವಿಶಾಲ ಸಭೆಯಲ್ಲಿ ಗೂಫಿಯ ಹೆಸರು ಗಾಳಿಯಲ್ಲಿ ತೇಲಿಬಿಟ್ಟ ವ್ಯಕ್ತಿಯ ಹೆಸರು ಇಂದಿಗೂ ನಿಗೂಢ. ಶಕುನಿಯ ಪಾತ್ರಕ್ಕೆ ಗೂಫಿಯಷ್ಟು ಸಮರ್ಥ ಈ ಭೂಮಿಯ ಮೇಲೆ ಬೇರಾರೂ ಇಲ್ಲ ಎಂಬುದು ಎಲ್ಲರಿಗೂ ಅಂದೇ ತಿಳಿದದ್ದು. ಮಹಾಭಾರತ ಧಾರಾವಾಹಿಯ ಶೂಟಿಂಗ್ ಸಂಪೂರ್ಣ ಮುಗಿದ ಮೇಲೂ ಚೋಪ್ರಾ ಕುತೂಹಲ ಅದುಮಿಡಲಾರದೆ ಅಂದು ಗೂಫಿಯ ಹೆಸರು ತೇಲಿ ಬಿಟ್ಟದ್ದು ಯಾರು? ನಾನವರನ್ನು ಸಮ್ಮಾನಿಸಬೇಕಿದೆ ಎಂದಾಗಲೂ ಸಭೆಯ ಉತ್ತರ ಮೌನವೇ ಆಗಿತ್ತು. ಮಹಾಭಾರತ ಧಾರಾವಾಹಿಯಲ್ಲಿ ನೈಜ ಪಾತ್ರ ಸ್ವರೂಪಕ್ಕೆ ತುಸು ಭಿನ್ನವಾಗಿ ಸ್ವಲ್ಪ ಕುಂಟಿಕೊಂಡು ಮಾಡಿದ ಗೂಫಿಯ ಶಕುನಿಯ ಪಾತ್ರ ಜಗತ್ತಿನಾದ್ಯಂತ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು. “ಭಾಂಜೇ” ಎಂದು ದುರ್ಯೋಧನನನ್ನು ಕರೆಯುತ್ತಾ, ಸಮಸ್ತ ಸೌಹಾರ್ದ, ಸದಾಶಯ, ಸಂದರ್ಭ, ಸಂಬಂಧಗಳನ್ನು ಧಿಕ್ಕರಿಸುವ ಆ ಖಳ ಪಾತ್ರವನ್ನು ಅದ್ಭುತವಾಗಿ ಗೂಫಿ ಪೈಂಟಾಲ್ ಮಂಡಿಸಿದರು.
ಗೂಫಿಯ ಪಾತ್ರ ಅದೆಂತಹ ಸಂಚಲನ ಸೃಷ್ಟಿಸಿತು ಎಂದರೆ, ಅದೊಂದು ದಿನ ಶೂಟಿಂಗ್ ತಾಣಕ್ಕೆ ಒಂದು ಪತ್ರ ಬಂದಿತ್ತು. ಅದರಲ್ಲಿ ಶಕುನಿಯನ್ನು ಉದ್ದೇಶಿಸಿ” ಏಯ್ ಶಕುನಿ, ಯಾಕೋ ನಿನ್ನ ಆಟ ಬಹಳವಾಯಿತು. ನೀನು ಮತ್ತು ನಿನ್ನ ಅಳಿಯಂದಿರ ಹುಚ್ಚಾಟ ಹೇಗೋ ಈ ವಾರ ಸಹಿಸಿಕೊಂಡಿದ್ದೇವೆ. ಈಗಾಗಲೇ ಒಂದು ಕಾಲಿನಲ್ಲಿ ನಡೆಯುತ್ತಿದ್ದಿಯಾ. ಮುಂದಿನ ವಾರವೂ ಇದೇ ಚಾಳಿ ಮುಂದುವರಿಸಿದರೆ ಅದನ್ನೂ ಕತ್ತರಿಸಿ ಹಾಕುತ್ತೇವೆ” ಎಂದು ಬರೆದಿತ್ತು. ಇನ್ನೂ ರೋಚಕ ಸಂಗತಿಯೆಂದರೆ, ದ್ರೌಪದಿಯ ವಸ್ತ್ರಾಪಹರಣದ ವಿರುದ್ಧ ವಾರಣಾಸಿಯ ಪೋಲಿಸ್ ಸ್ಟೇಶನ್ ಒಂದರಲ್ಲಿ ಪ್ರಕರಣ ದಾಖಲಾಗಿ, ಸ್ಥಳೀಯ ನ್ಯಾಯಾಲಯ ಶಕುನಿ ಗೂಫಿ ಪೈಂಟಾಲ್, ದುರ್ಯೋಧನ ಪುನೀತ್ ಇಸ್ಸಾರ್, ದುಶ್ಯಾಸನ ವಿನೋದ್ ಕಪೂರ್, ಕರ್ಣ ಪಂಕಜ್ ಧೀರ್ ರನ್ನು ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ಜಾರಿ ಮಾಡಿತು.

ಫೋಟೋ ಕೃಪೆ : hindirush
ಕೊನೆಯ ಬಾರಿ 2017 ರಲ್ಲಿ ವಾರಂಟ್ ಜಾರಿಯಾಗಿ ನಂತರ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಳಿಸಲಾಗಿತ್ತು. ಧಾರಾವಾಹಿಯ ಪ್ರಸಾರ ಮುಗಿದು ಕೆಲದಿನಗಳ ನಂತರ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಒಂದು ವಿಶಾಲ ವೇದಿಕೆಯ ಮೇಲೆ ಈ ಎಲ್ಲ ಕಲಾವಿದರನ್ನು ಅವರ ಪಾತ್ರದ ಉಡುಗೆಗಳೊಂದಿಗೆ ಸಮ್ಮಾನಿಸುವ ಕಾರ್ಯಕ್ರಮ ಸ್ಥಳೀಯ ಸಂಸ್ಥೆಯೊಂದು ಹಮ್ಮಿಕೊಂಡಿತು. ಕಾರ್ಯಕ್ರಮ ಆರಂಭವಾಗುವ ಮುನ್ನ ವೇದಿಕೆಯ ಒಂದು ಬದಿಯಲ್ಲಿ ಭೀಮ ಪಾತ್ರಧಾರಿ ಪ್ರವೀಣ್ ಕುಮಾರ್ ಮತ್ತು ಶಕುನಿ ಗೂಫಿ ಹೆಗಲ ಮೇಲೆ ಕೈಹಾಕಿಕೊಂಡು ಹರಟುತ್ತಿದ್ದರು. ಇದನ್ನು ಗಮನಿಸಿದ ಒಂದು ಗುಂಪು ಭೀಮ ಪಾತ್ರಧಾರಿಗೆ” ನಾಚಿಕೆಯಾಗುವುದಿಲ್ಲವೆ ನಿನಗೆ? ನಿನ್ನ ಹೆಂಡತಿಯನ್ನು ನಗ್ನಳಾಗಿಸಲು ಪ್ರಯತ್ನಪಟ್ಟಿದ್ದೂ ಅಲ್ಲದೇ ನಿಮ್ಮನ್ನು ಕಾಡಿಗಟ್ಟಲು ಕಾರಣನಾದವನ ಜೊತೆ ಹೀಗೆ ತಿರುಗುತ್ತಿದ್ದಿಯಲ್ಲ. ಥೂ ಮನೆಹಾಳ” ಎಂದಿತು. ಗೂಫಿಯ ಖಳನಾಯಕತ್ವದ ಮೇಲೆ ಸಾರ್ವಜನಿಕ ಆಕ್ರೋಶವು ಅಷ್ಟು ಆಳವಾಗಿತ್ತು. ಸ್ವತಃ ತಾವೇ ಆ ಮಹಾ ಧಾರಾವಾಹಿಯ ಅಮರ ಪಾತ್ರವಾಗಿದ್ದು ಮಾತ್ರವಲ್ಲದೆ, ಅಹರ್ನಿಶಿ ಕಷ್ಟಪಟ್ಟು ಜಗತ್ತು ನಿಬ್ಬೆರಗಾಗುವಂತಹ ಮಹಾಭಾರತದ ಪಾತ್ರಧಾರಿಗಳ ಅಮರ ಸಂಪುಟ ರಚಿಸಿದ ಸರಬ್ ಜಿತ್ ಗೂಫಿ ಪೈಂಟಾಲ್ ಭಾರತೀಯ ಟೆಲಿವಿಷನ್ ನ ಮನರಂಜನಾ ಇತಿಹಾಸದ ಧ್ರುವತಾರೆಯಾದರು.

(ಮಹಾಭಾರತ ಸಂಭಾಷಣಾಕಾರ ಉರ್ದು ಕವಿ ಡಾ.ರಾಹೀ ಮೊಹಮ್ಮದ್ ಮಾಸೂಮ್ ರಝಾ) ಫೋಟೋ ಕೃಪೆ : biographies.lekhakkilekhni.
ಈ ಧಾರಾವಾಹಿಯ ಸಂಭಾಷಣೆ ಬರೆದಿದ್ದು ಉತ್ತರ ಪ್ರದೇಶದ ಉರ್ದು ಕವಿ ಡಾ.ರಾಹೀ ಮೊಹಮ್ಮದ್ ಮಾಸೂಮ್ ರಝಾ. 4000 ವರ್ಷ ಹಿಂದೆ ನಡೆದಿರಬಹುದಾದ ಘಟನಾವಳಿಗಳ ಗ್ರಂಥರೂಪದ ಪಾತ್ರಗಳನ್ನು ಆಕರ್ಷಕ ಸಂಭಾಷಣೆಗಿಳಿಸಿ ಆಕರ್ಷಿಸುವುದು ಸುಲಭದ ಮಾತಲ್ಲ. ಆರಂಭದಲ್ಲಿ ಆಂಧ್ರ ಪ್ರದೇಶದ ಜನಪ್ರಿಯ ಚಿತ್ರನಟ ಎನ್ ಟಿ ರಾಮರಾವ್ ಅಥವ ಹಿಂದಿ ಚಿತ್ರರಂಗದ ದಂತಕಥೆ ದಿಲೀಪ್ ಕುಮಾರ್ ರನ್ನು ತಂದು ಸೂತ್ರಧಾರಿಯಾಗಿಸಿ, ಪ್ರತೀ ಕಂತುಗಳ ಕಥೆ ಆರಂಭಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಮಾಸೂಮ್ ರಝಾ ” ಮೈ ಸಮಯ್ ಹೂಂ” ಎಂಬ ಪರಿಕಲ್ಪನೆಯನ್ನು ಪರಿಚಯಿಸಿದರು. ಜೀವಂತಿಕೆಯಲ್ಲಿ ಸೀಮಾತೀತ ಮತ್ತು ಕಾಲಾತೀತವಾದ ಕಾಲವು ತಾನು ದ್ವಾಪರಯುಗದಲ್ಲಿ ಕಂಡಿದ್ದನ್ನು ಜೀವಂತವಾಗಿ ವಿವರಿಸಿ ಈ ಧಾರಾವಾಹಿಯ ಸೂತ್ರಧಾರಿಯಾಯಿತು. ಈ ವಿಶಿಷ್ಟ ಪ್ರಯೋಗ ಸರ್ವತ್ರ ಮೆಚ್ಚುಗೆಗೆ ಪಾತ್ರವಾಯಿತು. ಮಾಸೂಮ್ ರಝಾ ಬರೆದ ಸಂಭಾಷಣೆಗಳು ಮತ್ತು ಅದನ್ನು ಪಾತ್ರಗಳಿಗೆ ಪೋಣಿಸಿದ್ದು ಅದೆಷ್ಟು ಜನಪ್ರಿಯಗೊಂಡವೆಂದರೆ, ಅವರನ್ನು “ಕಲಿಯುಗದ ಅಭಿನವ ವೇದವ್ಯಾಸ” ಎಂದು ಕರೆಯಲಾಯಿತು.

(ನಿರ್ದೇಶಕ ರವಿ ಚೋಪ್ರಾ )ಫೋಟೋ ಕೃಪೆ : India tv News
1988ರ ಹೊತ್ತಿಗೆ ಈ ಧಾರಾವಾಹಿಯ #ಶೂಟಿಂಗ್ ರಾಜಸ್ಥಾನದ ಜೈಪುರದಿಂದ 40 ಕಿ.ಮೀ ದೂರದ ಹಳ್ಳಿಯಲ್ಲಿ ಮುಗಿಯಿತು. 94 ಕಂತುಗಳೊಂದಿಗೆ 3 ವರ್ಷ ನಿರಂತರ ನಡೆದ ಶೂಟಿಂಗಿನ ಅಂತಿಮ ದಿನ ಶೂಟಿಂಗ್ ಮುಗಿಸಿ” ಪ್ಯಾಕ್ ಅಪ್” ಎನ್ನುವುದರ ಬದಲಿಗೆ” ದೋಸ್ತೊಂ, ಮಹಾಭಾರತ್ ಸಂಪನ್ ಹುವಾ”ಎಂದು ನಿರ್ದೇಶಕ ರವಿ ಚೋಪ್ರಾ ಹೆಗಲ ಮೇಲಿನ ಶಾಲು ಕೊಡವಿ ಘೋಷಿಸುತ್ತಿದ್ದಂತೆ ಇಡೀ ಶೂಟಿಂಗ್ ತಾಣದಲ್ಲಿ ಭಾವುಕ ವಾತಾವರಣ ನಿರ್ಮಾಣವಾಯಿತು. ಕಲಾವಿದರು, ತಂತ್ರಜ್ಞರು ಸೇರಿದಂತೆ ಸಮಸ್ತ ಧಾರಾವಾಹಿಯ ತಂಡ ಮಾತ್ರವಲ್ಲದೇ, ತಂಡೋಪತಂಡವಾಗಿ ಈಟಿ ಹಿಡಿದುಕೊಂಡು ಮಹಾಭಾರತ ಯುದ್ಧದಲ್ಲಿ ಪಾತ್ರಧಾರಿಗಳಾಗಿ ಪಾಲ್ಗೊಂಡ ಸ್ಥಳೀಯರೂ ಕೂಡ ಕಣ್ಣೀರಾದರು. ಮಹಾಭಾರತ ಧಾರಾವಾಹಿಯೇ ಹಾಗೆ, ಅದು ಎಲ್ಲರನ್ನು ಆವರಿಸಿಕೊಂಡಿತ್ತು. ಅರ್ಜುನ ಪಾತ್ರಧಾರಿ ಫಿರೋಜ್ ಖಾನ್ ದೇಶದ ಜನರಿಗೆ ಮಾತ್ರವಲ್ಲ, ಸ್ವತಃ ತನ್ನ ತಾಯಿ ಜುಬೇದಾ ಬಾನುವಿಗೂ ಶಾಶ್ವತವಾಗಿ ಅರ್ಜುನನಾದರು.

(ದ್ರೌಪದಿ ಪಾತ್ರಧಾರಿ ರೂಪ ಗಂಗೂಲಿ) ಫೋಟೋ ಕೃಪೆ : idiva
ದುರ್ಯೋಧನ ಪುನೀತ್ ಇಸ್ಸಾರ್ ,”ನನ್ನದು ತಪ್ಪೇನಿದೆ? ಪಾಂಚಾಲದ ಅರಮನೆಯಲ್ಲಿ ದ್ರೌಪದಿ ಅವಮಾನ ಮಾಡಿದಳು. ವಿಚಿತ್ರವೀರ್ಯನ ಹಿರಿಯ ಮಗನ ಹಿರಿಯ ಮಗ ನಾನು. ನ್ಯಾಯಯುತವಾಗಿಯೇ ಹಸ್ತಿನಾವತಿಯ ಉತ್ತರಾಧಿಕಾರಿ ನಾನೇ.ನಾನು ಮಾಡಿದ್ದು ಸರಿ” ಎಂದು ಇಂದಿಗೂ ಆಗಾಗ ಟಿವಿ ಚರ್ಚೆಗಳಲ್ಲಿ ವಾದಿಸುತ್ತಿದ್ದಾರೆ. ಭೀಷ್ಮ ಮುಖೇಶ್ ಖನ್ನಾ, ಅರ್ಜುನ ಫಿರೋಜ್ ಎದುರಿಗೆ ಸಿಕ್ಕರೆ ಯಾವತ್ತೂ ತಬ್ಬಿಕೊಂಡು ಕಣ್ಣೀರಾಗುತ್ತಾರೆ. ಜನಪ್ರಿಯ ಚಿತ್ರನಟ ಜಾಕಿಶ್ರಾಫ್ ಅರ್ಜುನ ಪಾತ್ರ ತನಗೆ ದಕ್ಕದೇ ಹೋಯಿತಲ್ಲ ಎಂದು ಇಂದಿಗೂ ಪರಿತಪಿಸುತ್ತಾರೆ. ಸೂತ್ರಧಾರಿಯ ಪಾತ್ರಕ್ಕೆ ತನ್ನನ್ನು ಪರಿಗಣಿಸದ್ದಕ್ಕೆ ಸಾಯುವವರೆಗೆ ಹಿಂದಿ ಚಿತ್ರರಂಗದ ಮೇರು ನಟ ದಿಲೀಪ್ ಕುಮಾರ್ ಗೆ ಸಿಟ್ಟಿತ್ತು. ಈ ಧಾರಾವಾಹಿಯನ್ನು ಅನುಕರಿಸಿ ಕಳೆದ 30 ವರ್ಷಗಳಿಂದ ಅದೆಷ್ಟೋ ಧಾರಾವಾಹಿ, ಚಲನಚಿತ್ರಗಳು ಬಂದವು. ಆದರೆ ಅದ್ಯಾವುದೂ ಬಿ ಆರ್ ಚೋಪ್ರಾರ ಮಹಾಭಾರತದ ಸನಿಹವೂ ಸುಳಿಯಲಿಲ್ಲ. ಇಂದು ಅಭಿನವ ವೇದವ್ಯಾಸ ಡಾ. ರಾಹೀ ಮೊಹಮ್ಮದ್ ಮಾಸೂಮ್ ರಝಾ, ಬಿ.ಆರ್.ಚೋಪ್ರಾ, ಪಂಡಿತ್ ನರೇಂದ್ರ ಶರ್ಮ ಬದುಕಿಲ್ಲ. ಪಾತ್ರಗಳ ಆಯ್ಕೆ ಮತ್ತು ಪಾತ್ರದ ಮೂಲಕ ಶತಮಾನದ ಸಂಚಲನ ಸೃಷ್ಟಿಸಿದ ಗೂಫಿ ಪೈಂಟಾಲ್ ತಮ್ಮ ಬಾಳ ಮುಸ್ಸಂಜೆಯಲ್ಲಿದ್ದಾರೆ. ಅಂದಿನ ಆ ಶಕುನಿಯ ಉಡುಗೆ ತೊಟ್ಟು ವೇದಿಕೆಯಲ್ಲಿ ಗೂಫಿ ಕಾಣಿಸಿಕೊಂಡರೆ ಇಂದಿಗೂ ವಾಚಾಮಗೋಚರ ಬೈಗುಳ..ಈ ಧಾರಾವಾಹಿಯ ಜೀವಂತವಿರುವ ಪಾತ್ರಧಾರಿಗಳು ಇಂದಿಗೂ ಪಾತ್ರದೊಳಗಿಂದ ಹೊರಗೆ ಬಂದಿಲ್ಲ. ಈ ಮಹಾ ಧಾರಾವಾಹಿಯನ್ನು ಆ ಕಾಲದಲ್ಲಿ ಕಂಡವರೆಲ್ಲರ ಮನಸ್ಸಿನಲ್ಲಿ ಮಹಾಭಾರತದ ಅದ್ಯಾವುದೇ ಪಾತ್ರದ ಕಲ್ಪನೆ ಮೂಡಲಿ, ಇಂದಿಗೂ ಇದೇ ಪಾತ್ರಧಾರಿಗಳ ಮುಖವೇ ಕಾಣಿಸುವುದು.
- ಮುಷ್ತಾಕ್ ಹೆನ್ನಾಬೈಲ್ (ಚಿಂತನಕರಾರು, ಲೇಖಕರು) ಕುಂದಾಪುರ
