ಕಥಾ ಅರಮನೆಯ ಹೆಮ್ಮೆಯ ಸಂಚಾಲಕರಾದ ಡಾ.ರಾಜಶೇಖರ ನಾಗೂರ ಸರ್ ರವರ 3 ಕೃತಿಗಳು ಇತ್ತೀಚೆಗೆ ಸ್ನೇಹ ಸಮ್ಮಿಲನದಲ್ಲಿ ಅತಿಥಿ ದಿಗ್ಗಜರ ಅಮೃತ ಹಸ್ತದಿಂದ ಬಿಡುಗಡೆಗೊಂಡಿತು. ಮನ ಮಂಥನ ಅವರ ಕೃತಿಯ ಕುರಿತು ಸರೋಜಾದೇವಿ ನಿನ್ನೆಕರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಪುಸ್ತಕ : ಮನ ಮಂಥನ
ಲೇಖಕರು : ಡಾ.ರಾಜಶೇಖರ ನಾಗೂರ
ಪ್ರಕಾಶನ: ನವನೀತ್ ಪ್ರಕಾಶನ
ಶ್ರೇಷ್ಠ ಕವಿಗಳು, ಲೇಖಕರು, ಚಿಂತಕರು, ಸಾಹಿತಿಗಳು ಆದ ಡಾ.ರಾಜಶೇಖರ ನಾಗೂರ ಸರ್ ಅವರ ” ಮನ ಮಂಥನ ” ಪುಸ್ತಕವನ್ನು ಓದುತ್ತಾ ಹೋದೆ, ಅದು ಹಾಗೇ ಓದಿಸಿಕೊಂಡು ಹೋಗಿ ಮನ ಮುಟ್ಟಿತು. ಅಷ್ಟು ಅದ್ಭುತ ವಾಗಿ ಮೂಡಿ ಬಂದಿದೆ. ಅದರ ಬಗ್ಗೆ ವಿಮರ್ಶೆ ಮಾಡುವಷ್ಟು ಪ್ರಬುದ್ಧ ಬರಹಗಾರಳಲ್ಲದಿದ್ದರೂ ಮನಸ್ಸಿಗೆ ಹಿತವೆನಿಸಿದ ಪುಸ್ತಕದ ಬಗ್ಗೆ ನನ್ನ ಅನಿಸಿಕೆಯನ್ನು ಹೇಳಲು ಇಷ್ಟಪಡುವೆ.
ಮನ ಮಂಥನ ಒಂದು ಅರ್ಥಪೂರ್ಣ ಕೃತಿ. ಇದು ಧನಾತ್ಮಕ ಚಿಂತನೆಗಳ ಖಜಾನೆ ಎಂದು ಹೇಳಬಹುದು. ಇದರಲ್ಲಿರುವ ಪುಟ್ಟ ಪುಟ್ಟ ಬರಹಗಳು ಮಾನವ ಜೀವನದ ಗತಕಾಲದ ತಪ್ಪುಗಳನ್ನು ಅರ್ಥಮಾಡಿಕೊಳ್ಳಲು, ವರ್ತಮಾನವನ್ನು ವಿಶ್ಲೇಷಿಸಲು ಮತ್ತು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವಂತಹ ಸಕಾರಾತ್ಮಕ ಸಂದೇಶಗಳ ಸುಂದರ ಸಂಕಲನವಾಗಿದೆ. ಓದುಗರ ಮನಸ್ಸಿನಾಳಕ್ಕೆ ಇಳಿದು ಬದುಕನ್ನೆ ಬದಲಿಸುವ ದಿಕ್ಸೂಚಿಯಾಗಿದೆ.

ಎಲ್ಲರಿಗೂ ಗೊತ್ತಿದ್ದ ಹಾಗೆ ಇಂದಿನ ಜೀವನ ಶೈಲಿ ಒತ್ತಡ ಮತ್ತು ವೇಗದಿಂದ ಕೂಡಿದೆ. ಇಂತಹ ಸಂದರ್ಭದಲ್ಲಿ ಮನುಷ್ಯನಿಗೆ ಧನಾತ್ಮಕ ಚಿಂತನೆಯ ಅಗತ್ಯ ಬಹಳಷ್ಟಿದೆ. ಈ ಹಿನ್ನೆಲೆಯಲ್ಲೇ ಡಾ.ರಾಜಶೇಖರ ನಾಗೂರ ಸರ್ ಅವರ ಮನ ಮಂಥನ ಪುಸ್ತಕದಲ್ಲಿರುವ ವಿಚಾರಗಳು ಮನಸ್ಸಿಗೆ ಹಿತ ನೀಡುವ, ಆತ್ಮವಿಶ್ವಾಸ ತುಂಬುವ ಹಾಗೂ ಬದುಕಿನತ್ತ ಹೊಸ ದೃಷ್ಟಿಕೋನವನ್ನು ನೀಡುವ ಭಾವದ್ರವ್ಯವಾಗಿವೆ.
ಇದರಲ್ಲಿನ ಪ್ರತಿ ಬರಹವೂ ಸುಂದರ, ಸರಳ ಭಾಷೆಯಲ್ಲಿದ್ದು ಗಂಭೀರ ಅರ್ಥವನ್ನು ಹೊತ್ತು ನಿಂತಿವೆ. ಪ್ರತಿನಿತ್ಯದ ಬದುಕಿಗೆ ಭರವಸೆಯ ಬೆಳಕಾಗಿವೆ. ಜೀವನದಲ್ಲಿನ ನಿರಾಶೆ, ಸೋಲು, ಆತಂಕ, ಸವಾಲುಗಳನ್ನು ಯಾವ ರೀತಿ ಧೈರ್ಯದಿಂದ ಎದುರಿಸಬೇಕೆಂದು ನೈಜ ಉದಾಹರಣೆಗಳೊಂದಿಗೆ ಹಾಗೂ ನಿಸರ್ಗದೊಂದಿಗೆ ಹೋಲಿಸಿ ಸೂಕ್ಷ್ಮ ಚಿಂತನೆಗಳ ಮೂಲಕ ವಿವರಿಸಿದ್ದಾರೆ. ಸುಮಾರು 170 ರ ಸಮೀಪ ಬರೆದಿರುವ ಪ್ರತಿಯೊಂದು ವಿಚಾರಗಳು ಓದುಗರನ್ನು ಆತ್ಮ ಪರಿಶೀಲನೆಗೆ ಪ್ರೇರೇಪಿಸುತ್ತವೆ.
ಎಲ್ಲಾ ವಿಚಾರಧಾರೆಗಳು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅತಿ ಸರಳ ಮತ್ತು ಪ್ರಾಯೋಗಿಕ ರೀತಿಯಲ್ಲಿ ಮಂಡಿಸಿದ್ದಾರೆ. ವಿಶೇಷವಾಗಿ ಜೀವನದಲ್ಲಿ ದಿಕ್ಕು ಹುಡುಕುತ್ತಿರುವವರಿಗೆ ಮನ ಮಂಥನ ಪ್ರೇರಣೆಯ ದೀಪವಾಗಿದೆ. ಆಶಾವಾದವನ್ನು ಸೃಷ್ಟಿಸಿ, ಓದುಗರ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವಂತೆ ಮತ್ತು ಒಳ್ಳೆಯ ಚಿಂತನೆ ಬೆಳೆಸುವಂತೆ ಸಹಾಯ ಮಾಡುವ ಈ ಸಂಕಲನದ ವಿಶೇಷತೆ ಎಂದರೆ ಪ್ರತಿಯೊಬ್ಬರೂ ಇದನ್ನು ಸುಲಭವಾಗಿ ಓದಿ ಅರ್ಥೈಸಿಕೊಳ್ಳಬಹುದು ಹಾಗೂ ಎಲ್ಲರಿಗೂ ಉಪಯುಕ್ತವಾಗುವಂತಹ ವಿಚಾರಗಳು ಇದರಲ್ಲಿ ಅಡಕವಾಗಿವೆ.

ಒಟ್ಟಿನಲ್ಲಿ ” ಮನ ಮಂಥನ ” ಒಂದು ಒಳ್ಳೆಯ ಪುಸ್ತಕ. ಜೀವನದಲ್ಲಿ ಧನಾತ್ಮಕವಾಗಿ ಯೋಚಿಸಲು ಮತ್ತು ಸಂತೋಷವಾಗಿ ಬದುಕಲು ಬಯಸುವವರು ತಪ್ಪದೇ ಈ ಪುಸ್ತಕ ಓದಿ. ನಿಮ್ಮ ಜೀವನವೇ ಬದಲಾಗಿ ಬಾಳು ಬಂಗಾರವಾಗುವುದು. ಇದರ ಒಟ್ಟಾರೆ ಆಶಯ, ದಿನನಿತ್ಯ ಜೀವನದಲ್ಲಿ ಹಲವಾರು ಸಮಸ್ಯೆಗಳು ಬರುವುದು ಸಹಜ, ಸಮಸ್ಯೆಗಳು ಬಂದಾಗ ಹತಾಶರಾಗದೇ ಆತ್ಮ ವಿಶ್ವಾಸದಿಂದ ಮುಂದುವರಿಯಬೇಕೆನ್ನುವ ಸಂದೇಶವನ್ನು ಲೇಖಕರು ಸ್ಪಷ್ಟವಾಗಿ ಹೇಳುತ್ತಾರೆ. ಓದುಗರು ತಮ್ಮ ದಿನವನ್ನು ಧನಾತ್ಮಕ ಚಿಂತನೆಯೊಂದಿಗೆ ಆರಂಭಿಸಲು ಇದೊಂದು ಅತ್ಯುತ್ತಮ ಅದ್ಭುತ ಪುಸ್ತಕ. ಚಿಕ್ಕ ಚಿಕ್ಕ ಬರಹಗಳಲ್ಲಿ ದೊಡ್ಡ ದೊಡ್ಡ ಅರ್ಥ ತುಂಬಿದ್ದು ಓದುಗರಿಗೆ ಆಪ್ತವಾಗುವುದರಲ್ಲಿ ಸಂದೇಹವಿಲ್ಲ. ಇಂತಹ ಅದ್ಭುತ ವಿಚಾರಧಾರೆಗಳ ಪುಸ್ತಕ ಹೊರ ತಂದ ಲೇಖಕರಾದ ಡಾ.ರಾಜಶೇಖರ ನಾಗೂರ ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
- ಸರೋಜಾದೇವಿ ನಿನ್ನೆಕರ್
