‘ಮನದ ನೋವು’ ಕವನ – ವಿಜಯಲಕ್ಷ್ಮಿ ನಾಗೇಶ್

‘ಕಂಡಿದ್ದ ಕನಸುಗಳು ಚಿಗುರದೇ ಕಮರಿದವು….ವೈಫಲ್ಯದ ಮಣ್ಣ ಮುಕ್ಕಿ ಕೊಳೆತು ನಾರಿದವು’….ವಿಜಯಲಕ್ಷ್ಮಿ ನಾಗೇಶ್ ಅವರ ಲೇಖನಿಯಲ್ಲಿ ಅರಳಿದ ಕವನದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ….

ಎದೆಯ ಭೇದಿಸಿ ಬಂದುಬಿಡು ಹೊರಗೊಮ್ಮೆ
ಇನ್ನುಳಿದ ಭರವಸೆಗಳೊಂದಿಗೆ ಕಾದಾಡದೇ
ಮುಂದಿನ ದಾರಿಯ ಸುಗಮ ನಡೆಗಾದರೂ
ಅವಕಾಶವ ನೀಡಿ ಅಂತರಂಗವ ಕೆಣಕದೇ.!!

ಸಹಿಸಿದಷ್ಟೂ ನೀನು ದಹಿಸುತ್ತಲೇ ಬಂದೆ
ಮನದ ಶಾಂತಿಯನ್ನು ಬದುಕಿನ ಅಂದವನ್ನು
ಕರುಳ ಹಿಂಡುವ ರಕ್ಕಸನಂತಾಗಿ ಮೆರೆಯದೇ
ದಿಕ್ಕುಗಾಣದಂತೆ ದಾರಿ ತಪ್ಪಿಸದೇ ಬಿಟ್ಟುಬಿಡು.!!

ಕಂಡಿದ್ದ ಕನಸುಗಳು ಚಿಗುರದೇ ಕಮರಿದವು
ವೈಫಲ್ಯದ ಮಣ್ಣ ಮುಕ್ಕಿ ಕೊಳೆತು ನಾರಿದವು
ಇನ್ನುಳಿದ ಆಸೆಯ ಬೀಜಗಳ ಹೊಸಗಿ ಹಾಕಲೆಂದೇ
ಕುಳಿತು ಸಂಭ್ರಮಿಸದಿರು ಮನದ ಸಿಂಹಾಸನದಲ್ಲೇ.!!

ನಿನ್ನ ಅಟ್ಟಹಾಸಕೆ ಹೆದರುವ ಹೇಡಿ ನಾನಾಗಲಾರೆ
ನೋವಿನಲ್ಲೂ ಹಡೆದಮ್ಮ ನನ್ನ ಹೆತ್ತು ನಕ್ಕಿದ್ದಳಂತೆ
ಭರವಸೆಯ ಅಸ್ತ್ರಗಳ ಬತ್ತಳಿಕೆಯೇ ಇರುವಾಗ
ಬಂದಿರುವೆಯೇಕೆ ನೀ ನೆಮ್ಮದಿಯ ಸಂಹಾರಕ್ಕೆ.!!


  • ವಿಜಯಲಕ್ಷ್ಮಿ ನಾಗೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading