ಅತ್ಯಂತ ಶಕ್ತಿಯುತವಾದ ಆಯುಧ ‘ಕ್ಷಮೆ’

ಕ್ಷಮೆಯಲ್ಲೂ ಇದೆ ಕರಳು ಹಿಡುವ ಒಂದು ಕತೆ,ಆ ಮಗು ಮೂರೂ ಬಾರಿ ಸಾರೀ ಅಮ್ಮಾ…ಅಂತ ಕೇಳಿದಾಗ ತಾಯಿಯ ಕರಳು ಹಿಡಿತು. ಕ್ಷಮೆ ಮಹತ್ವದ ಕುರಿತು ಅಭಿಜ್ಞಾ ಪಿ.ಎಮ್.ಗೌಡ ಅವರು ಬರೆದಿರುವ ಒಂದು ಲೇಖನವನ್ನು ತಪ್ಪದೆ ಮುಂದೆ ಓದಿ…

ಕ್ಷಮೆ ಎಂಬುದು ಅತ್ಯಂತ ಪ್ರಬಲ ಹಾಗು ಶಕ್ತಿಯುತವಾದ ಆಯುಧದಂತೆ ಆದ್ದರಿಂದ ಪ್ರತಿಯೊಬ್ಬರು ಕೂಡ ಕ್ಷಮೆಯ ಮಹತ್ವವನ್ನು ಅರಿತಿರಲೆ ಬೇಕು. ಏಕೆಂದರೆ ಕ್ಷಮೆಗೆ ಅಷ್ಟೊಂದು ಗತ್ತು, ಗಮ್ಮತ್ತಿದೆ. ಸಂಬಂಧಗಳನ್ನು ಉತ್ತಮವಾಗಿ ಹೊಸೆಯುವ ತಾಕತ್ತಿದೆ. ಮಧುರ ಬಾಂಧವ್ಯಗಳನ್ನು ಉತ್ಕೃಷ್ಟ ಮಟ್ಟದಲ್ಲಿ ಬೆಳೆಸೊ ಕರಾಮತ್ತಿದೆ. ಹಾಗಾಗಿ ಕ್ಷಮೆ ಕೇಳುವ ಹಾಗು ಕ್ಷಮಿಸುವ ಗುಣಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು. ಆಗ ನೋಡಿ ನಮ್ಮ ಬದುಕು ಬಂಗಾರವಾಗುವುದು, ಮನಸ್ಸು ನಿರಾಳವಾಗಿ ,ಹೃದಯ ತಂಪಾಗಿ ,ಸಮಾಜ ಸದೃಢ, ಸಮೃದ್ಧವಾಗಿ ಬೆಳೆಯುವುದಂತು ಪಕ್ಕ. ಈ ಕ್ಷಮೆಯು ಪ್ರೀತಿ ಮತ್ತು ಸ್ನೇಹ ಎರಡನ್ನೂ ಬಂಧಿಸುವ ಸೂಕ್ಷ್ಮ ಎಳೆಯಾಗಿ ತನ್ನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತದೆ.

ಕ್ಷಮಾಗುಣ ನಮ್ಮೊಳಗಿದ್ದರೆ ಮಾತ್ರ ನಾವು ಸದಾ ನಿರ್ಭಯ, ನಿರ್ಭರ, ನಿರ್ಮುಕ್ತ, ನಿರ್ಮಲತೆಯಿಂದ ಕೂಡಿರುತ್ತೇವೆ. ಕ್ಷಮಾಗುಣವಿಲ್ಲದಿದ್ದರೆ ಅಜ್ಞಾನಿಗಳಾಗಿ, ದುಷ್ಟರಾಗಿ, ಗರ್ವಿಗಳಾಗಿ, ಭ್ರಷ್ಟರಾಗಿ, ಮನುಷ್ಯತ್ವವನ್ನೆ ಕಳೆದುಕೊಂಡು ರಾಕ್ಷಸರಂತೆ ವರ್ತಿಸುವ ಸಂಭವವು ಕೂಡ ಸೃಷ್ಟಿಯಾಗಬಹುದು. ನಮ್ಮಲ್ಲಿ  ಕ್ಷಮಿಸುವ ಸಾಮರ್ಥ್ಯವನ್ನು ಹೆಚ್ಚು, ಹೆಚ್ಚು ಬೆಳೆಸಿಕೊಂಡಷ್ಟು ಮನುಷ್ಯ ಮನುಷ್ಯರ ನಡುವೆ ಸಮಾನತೆ, ಸಾಮರಸ್ಯಗಳು ಮೈಗೂಡುವವು.

ಪ್ರೀತಿ, ವಾತ್ಸಲ್ಯ, ಮಮತೆ, ಅಂತಃಕರಣೆ, ಅನುಬಂಧ, ಅನುರಾಗ,ಅಭಿಮಾನ ಅನ್ಯೋನ್ಯತೆಗಳು ಮೈದಳೆಯುವವು. ದ್ವೇಷ, ಅಸೂಯೆಗಳು ಜೊತೆಗೆ ಒಬ್ಬರನ್ನೊಬ್ಬರು ದೂರುವ ಮನೋಭಾವ ಗುಣಗಳು ಕರಗುವವು.

ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : google )

ಆತ್ಮವಿಮರ್ಶೆಗಳು ಹೆಚ್ಚಾಗಿ, ಆತ್ಮತೃಪ್ತಿ ಉಂಟಾಗುವುದು.ಆತ್ಮಾವಲೋಕನದಿಂದಾಗಿ ಉತ್ತಮ ರೀತಿಯಲ್ಲಿ ಚಿಂತನ, ಮಂಥನಗಳ ಬೆಳವಣಿಗೆಯಾಗುವವು. ಕ್ಷಮೆಯು ಅದ್ಭುತವಾದ ವಾತಾವರಣವನ್ನು ಸೃಷ್ಟಿಸುವುದರೊಂದಿಗೆ ಮನುಷ್ಯನೊಳಗೆ ತಾದಾತ್ಮ್ಯತೆಯನ್ನು ಬೆಳೆಸಿ, ಅವನೊಳಗಿರುವ ತಾಮಸವನ್ನು ತೊಲಗಿಸಿ ಸದ್ಗುಣ, ಸದ್ಭಾವಗಳನ್ನು ಹೆಚ್ಚಿಸುವುದು. ಇದರಿಂದಾಗಿ ಪ್ರತಿಯೊಬ್ಬರು ಕ್ಷಮಿಸುವ ಹಾಗು ಕ್ಷಮೆಯಾಚಿಸುವ ಗುಣ ಬೆಳೆಸಿಕೊಳ್ಳಬೇಕು. ಏಕೆಂದರೆ “ಯಾವ ವ್ಯಕ್ತಿಗೆ ಕ್ಷಮಿಸುವ ಗುಣವಿರುವುದಿಲ್ಲವೋ ಅವನಿಗೆ ಪ್ರೀತಿಸೋ ಅರ್ಹತೆಯು ಇರುವುದಿಲ್ಲ”. ಜೀವನದಲಿ ತಪ್ಪುಗಳು ಸಹಜ ಆದರೆ ತಿದ್ದಿ ನಡೆಯುವುದು ಸಹ ಅಷ್ಟೆ ಮುಖ್ಯ.ಅರಿವಿಲ್ಲದೆ ನಡೆದ ತಪ್ಪಿಗೆ ಕ್ಷಮಿಯುಂಟು ಗೊತ್ತಿದ್ದು ಮಾಡುವ ಯಾವುದೆ ತಪ್ಪಿಗೂ ಕ್ಷಮೆಯಿಲ್ಲ.ಹಾಗೆ ಕ್ಷಮೆಯಿದೆ ಎಂದು ಪದೆ ,ಪದೆ ತಪ್ಪುಗಳನ್ನು ಎಸಗುತಿದ್ದರೆ ಕೊನೆಗೊಮ್ಮೆ ಕ್ಷಮೆಯು ತನ್ನ ಮೌಲ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಕ್ಷಮೆ ಕೇಳುವುದರಿಂದ ನಮ್ಮ ಗೌರವ, ಘನತೆಗಳಿಗೇನು ಕುಂದು ಬಾರದು.! ಆದರೆ ಮತ್ತಷ್ಟು ಮರ್ಯಾದೆ ಹೆಚ್ಚಾಗುವುದು.ಕ್ಷಮೆ ಕೇಳುವುದರಲ್ಲಿ ಅಹಂ ಬಿಡಬೇಕು.ಕೇಳಿದಷ್ಟು ದೊಡ್ಡವರಾಗುತ್ತೆವೆಯೇ ಹೊರತು; ಚಿಕ್ಕವರಂತು ಆಗುವುದಿಲ್ಲ. ಆದ್ದರಿಂದ ತಪ್ಪು ಮಾಡಿದಾಗ ಕ್ಷಮೆ ಕೇಳುವುದನ್ನು ಹಾಗೆಯೆ ಮತ್ತೊಬ್ಬರಿಂದ ತಪ್ಪಾದಾಗ ಅವರನ್ನು ಕ್ಷಮಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಆಂತರಿಕ ಶಾಂತಿಯನ್ನು ಪಡೆಯಬಹುದು ಹಾಗು ಸಹನೆಯಿಂದ ಸಮಾಜದ ಸ್ವಾಸ್ಥ್ಯವನ್ನು ಕೂಡ ಕಾಪಾಡಬಹುದು.

ಕ್ಷಮೆ ಅತ್ಯಂತ ಮಹತ್ವಪೂರ್ಣವಾದುದ್ದು ಇದರ ಹಿರಿಮೆ,ಗರಿಮೆ ನಿಜಕ್ಕೂಅದ್ಭುತ, ಅನನ್ಯ, ಅಮೋಘ, ಅನುಸರಣೀಯ ಅನುರೂಪದಿಂದ ಕೂಡಿದ್ದಾಗಿದೆ. ಕ್ಷಮೆಯೆಂಬ ಈ ಒಂದು ಪದವೆ ಮನುಷ್ಯನ ವ್ಯಕ್ತಿತ್ವದ ರೂಪುರೇಷವನ್ನೆ ಬದಲಿಸಬಹುದಾಗಿದೆ. ಅದೇ ಕ್ಷಮೆಯಿಂದಲೆ ವ್ಯಕ್ತಿಯ ಜೀವನವು ಉತ್ತಮ ರೀತಿಯಲ್ಲಿ ಪರಿವರ್ತನೆಗೊಳ್ಳಬಹುದು. ಕೆಟ್ಟ ಪರಿಸ್ಥಿತಿಗಳು ದೂರಾಗಬಹುದು. ಉತ್ತಮ ಕಾರ್ಯಗಳಿಗೆ ಯಶಸ್ಸಿನ ಮಾರ್ಗದರ್ಶಿ ಆಗಬಹುದು.ಆದ್ದರಿಂದ ಕ್ಷಮೆಯೆಂಬ ಎರಡಕ್ಷರ ಮನುಷ್ಯನ ಜೀವನವನ್ನು ಹೇಗೆಲ್ಲ ಪರಿವರ್ತಿಸುವುದು ನೋಡಿ. ಆಗಿ ಹೋದ ತಪ್ಪುಗಳು ಮರುಕಳಿಸದಂತೆ ಮಾಡುವ ತಾಕತ್ತಿರುವುದೆ ಈ ಕ್ಷಮೆಗೆ ಮಾತ್ರ..ಇಡೀ ಜೀವಸಂಕುಲಗಳಿಗೂ ಕ್ಷಮೆಯ ಅರಿವಿದೆ. ಅತಿ ಬುದ್ಧಿವಂತ ಎನಿಸಿಕೊಂಡಿರುವ ಮನುಷ್ಯ ತನ್ನ ನೋವು, ಕಷ್ಟ ,ಸುಖಗಳನ್ನು ಹಂಚಿಕೊಳ್ಳಲು ಹಾಗೆಯೆ ತನ್ನ ಸಂತಸದ ಕ್ಷಣಗಳ ಅನುಭವಿಸಲು ಅವನು ಮೊದಲಿಗೆ ನೆಮ್ಮದಿಯಿಂದಿರಬೇಕು. ಅದಕ್ಕಾಗಿ ಅವನೊಳಗೆ ಕ್ಷಮಿಸುವ ಹಾಗೂ ಕ್ಷಮೆ ಕೇಳುವ ಔದಾರ್ಯತೆ ಇರಬೇಕು.

ಕ್ಷಮೆಯೆಂಬುದು ಅಂತಃಕರಣ ಪ್ರಧಾನವಾದುದ್ದು. ಉದಾರಣೆಗೆ ಧರೆಯೊಡಲನು ಅಗೆದು ಅಗೆದು ಸವೆಸುತಿದ್ದರು ಕೂಡ ನೋವನ್ನೆಲ್ಲ ನುಂಗಿ ಸಹನೆಯಿಂದಿದ್ದು ಕ್ಷಮಯಾಧರಿತ್ರಿಯಾಗಿಹಳು. ಹಾಗೆಯೆ ಮನುಷ್ಯನಾದವನು ಕೂಡ ಈ ಒಂದು ಗುಣವನ್ನು ರೂಢಿಸಿಕೊಳ್ಳಬೇಕು.

ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : google )

ನೀ ನನ್ನನ್ನು ಕ್ಷಮಿಸು

ಪುಟ್ಟ ಕಂದನೊಳಗು ಅಮ್ಮನ ಬಳಿ ಕ್ಷಮೆ ಕೇಳಬೇಕೆಂಬ ಶಕ್ತಿ ಬಂದಿದ್ಹೇಗೆ.?, ಒಂದು ಸತ್ಯ ಕಥೆ ವ್ಯಥೆಯ ಅನಾವರಣ. ಬೆಳೆಯುವ ಸಿರಿ ಮೊಳಕೆಯಲ್ಲೆ ಕಮರುತಿರುವುದನ್ನ ನೋಡಿದರೆ ಎಂತಹ ಹೆತ್ತೊಡಲಾದರೂ ನೋಡಿ ಸುಮ್ಮನಿರಲಾದೀತೆ..? ಆ ಹೆತ್ತೊಡಲು ಕ್ಷಣಕ್ಷಣವು ಕೊರಗಿ, ಸೊರಗಿ, ನಿತ್ರಾಣಗೊಂಡು ಮನದೊಳಗೆಯೆ ನನ್ನೀ ಕಂದನ ನೋವು, ಸಂಕಟ ಮತ್ಯಾವ ಮಕ್ಕಳಿಗೂ ಬಾರದಿರಲೆಂದು ಬೇಡುತ್ತ ಕಣ್ಣೀರ ಕೋಡಿ ಹರಿಸುತಿಹಳು. ಆ ಕಂದನೋ ಸ್ಫುರದ್ರೂಪಿ, ಅತಿ ಬುದ್ಧಿವಂತ, ಸೌಮ್ಯತೆಯಿಂದ ಕೂಡಿದ ದುರಾದೃಷ್ಟ. ಓದಿನಲ್ಲಿ ಚುರುಕು. ಎಂಟು ಒಂಭತ್ತು ವರ್ಷಕ್ಕೆ ನಾಲ್ಕಾರು ಭಾಷೆ ಗ್ರಹಿಸಿಕೊಂಡು ಅರ್ಥೈಸಿಕೊಳ್ಳುವ ಚುರುಕುತನ ಅವನಲ್ಲಿತ್ತು.

ಆ ದೇವರಿಗೆ ಆ ಕಂದನನ್ನು ಕಂಡರೆ ಅದ್ಯಾಕಷ್ಟು ಅಸೂಯೆ ಹೊಟ್ಟೆಕಿಚ್ಚೊ.? ಬಲ್ಲವರಾರು.? ಕಂದ ಹುಟ್ಟಿ ನಾಲ್ಕೈದು ವರ್ಷಗಳವರೆಗೂ ಎಲ್ಲಾ ಮಕ್ಕಳಂತೆ ಆಟ, ಊಟ, ಪಾಠ ಎಲ್ಲಾವು ಸಾಮಾನ್ಯವಾಗಿದ್ದವು. ನಂತರ ಬೆಳೆಯುತ್ತ, ಬೆಳೆಯುತ್ತ ನಿಧಾನಗತಿ ನಡಿಗೆ, ನಡೆಯುವಾಗ ಬೀಳುವುದು ಮಾಡುತ್ತಿದ್ದನ್ನು ಗಮನಿಸಿದ ಮನೆಯವರು ಆಸ್ಪತ್ರೆಗೆ ತೋರಿಸಿ ಪ್ರತಿಯೊಂದು ಪರೀಕ್ಷೆಗಳಿಗೂ ಮಗುವಿನ ದೇಹವನ್ನು ಒಳಪಡಿಸಿದಾಗ ಆಶ್ಚರ್ಯ ಆಘಾತಗಳು ಕಾದಿದ್ದವು. ಈ ರೋಗ ಸಾವಿರ ಮಕ್ಕಳಿಗೆ ಒಬ್ಬರಿಗೆ ಬರುವುದೆಂದು ವೈದ್ಯರು ಹೇಳಿದಾಗ ಮನೆಮಂದಿ ಕಂಗಾಲಾಗಿ ಹೋದರು. “Musclar distrophy” ಎಂಬ ಈ ರೋಗ ಆ ಕಂದನ ಶಕ್ತಿಯನ್ನೆ ಕುಂದಿಸಿ ಹಾಸಿಗೆ ಹಿಡಿಯುವ ಹಾಗೆ ಮಾಡಿತು ಬರಾಬರಿ ಎಂಟು ವರ್ಷಗಳು ಹಾಸಿಗೆ ಹಿಡಿದ. ಆ ವೇಳೆಯಲ್ಲಿ ಕಂದನ ನರಳಾಟ ಹೇಳತೀರದು.ಈ ರೋಗ ಅವನ ಬಾಲ್ಯವನ್ನೆ ನುಂಗಿತು.ಅವನೊಳಗಿನ ಚಿಗುರುವ ಕನಸುಗಳಿಗೆ ಕೊಳ್ಳಿ ಇಟ್ಟಿತು. ಈ ವಯಸ್ಸಿಗೆ ಮಗುವಿನಲ್ಲಿ ಜೀವ, ಜೀವನದ ಮೇಲೆ ಜಿಗುಪ್ಸೆ ಉಂಟಾಗುವಂತೆ ಮಾಡಿತ್ತು. ಎಲ್ಲರಲ್ಲೂ;  ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡು ಟಿವಿ ಹಾಗು ಅಮ್ಮನನ್ನೆ ತನ್ನ ಪ್ರಪಂಚ ಮಾಡಿಕೊಂಡಿತು.

ಟಿವಿಯೊಳಗೆ ಬರುವ ಕಥೆಗಳೊಂದಿಗೆ ತನ್ನ ಕನಸುಗಳನ್ನು ಹೆಣೆಯುತ್ತ ಅಮ್ಮನ ಹಾರೈಕೆ ಅಕ್ಕರೆಯಲಿ ಬೆಳೆಯುತ್ತಿದ್ದ ಕಂದನಿಗೆ ಮನೆ ತುಂಬ ಜನವಿದ್ದರು, ಎಲ್ಲರು ಪ್ರೀತಿ ವಾತ್ಸಲ್ಯಗಳ ಧಾರೆ ಎರೆಯುತ್ತಿದ್ದರು. ತನ್ನೆಲ್ಲ ಕೆಲಸಗಳನ್ನು ಅಮ್ಮನೆ ಮಾಡಬೇಕಿತ್ತು. ಸ್ನಾನದಿಂದಿಡಿದು ರಾತ್ರಿ ಮಲಗುವವರೆಗೂ ಅಮ್ಮನೆ ಅವನ ಇಷ್ಟ ಕಷ್ಟಗಳನ್ನು ನೋಡಬೇಕಿತ್ತು.

ಆ ಹೆತ್ತೊಡಲೋ ಕಂದನ ಈ ದಾರುಣ ಸ್ಥಿತಿಯನ್ನು ನೋಡಿ ಹೈರಾಣಾಗಿ ಹೋಗಿದ್ದಳು. ಕಂದನ ಮುಂದೆ ಅಳುವ ಆಗಿಲ್ಲ.ಅತ್ತರೆ ಎಲ್ಲಿ ನೊಂದುಕೊಳ್ಳುವುದು ಆ ಜೀವವೆಂದು ತನ್ನೆಲ್ಲ ದುಃಖ ದುಮ್ಮಾನಗಳನ್ನು ತನ್ನೊಳಗೆ ಅಡಗಿಸಿ ಸಂಕಟ ಅನುಭವಿಸುತಿದ್ದಂತಹ ಅವಳ ವೇದನೆ ಹೇಳತೀರದಾಗಿತ್ತು.ಅವಳು ಊಟ, ತಿಂಡಿಗಳನ್ನು ಬಿಟ್ಟು ಮಗನಿಗಾಗಿ ಚಿಂತಿಸಿ ಮೂಲೆ ಸೇರಿ ತನ್ನ ಕೈಯಿಂದ ಸೇವೆ ಮಾಡಲಾಗದಿದ್ದರು ತಾನೆ ನನ್ನ ಕಂದನ ಸೇವೆ ಮಾಡುತಿದ್ದಳು.

ತನ್ನ ಕಂದ ತುಂಬಾ ದಪ್ಪನಿದ್ದ ಕಾರಣ ಕಂದನಿಗೆ ತಾಯಿ; ಮಗನೆ ನನ್ನಿಂದ ಎತ್ಕೊಂಡು ಹೋಗಕ್ಕೆ ಆಗಲ್ವೋ ಇವತ್ತು ಒಂದು ದಿನ ಸ್ನಾನ ಬೇಡ ನಾಳೆ ಮಾಡಿಸುವೆ ಎಂದಾಗ ತಕ್ಷಣ ಆ ಕಂದ ಅಮ್ಮ ನನಗೆ ನಾಳೆಯಿಂದ ಊಟ ಸ್ವಲ್ಪ ಕೊಡೊಮ್ಮ ನಾನು ಸಣ್ಣ ಹಾಕ್ತಿನಿ ಅಂದಾಗ ಹೆತ್ತು ಕರುಳಲಿ ಜ್ವಾಲಾಮುಖಿಯೆ ಸಿಡಿದಷ್ಟು ಯಾತನೆ, ಹೆತ್ತೊಡಲು ಕೂಗಿ ಕೂಗಿ ಚೀರುವಂತಾಯಿತು ಕಣ್ಣಾಲಿಗಳ ಕಟ್ಟೆ ಒಡೆದು ಧಾರಾಕಾರವಾಗಿ ಈ ದುಃಖದ ಜ್ಞಾಲೆ ಕಣ್ಣೀರಾಗಿ ಕೆನ್ನೆಯ ಮೇಲೆ ಇಳಿಯುತ್ತಿದ್ದವು.

ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : google )

ಅಯ್ಯೋ.! ನನಗೆ ಇವತ್ತಷ್ಟೆ..! ಕಣೋ ಮಗನೆ ಆಗಲ್ಲ ಅಂದಿದ್ದು.. ದಿನಾ ಅಲ್ಲಪ. ನಾನು ಇರುವವರೆಗೂ ನಿನ್ನನ್ನ ನಾನೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವೆ.ಮತ್ತೊಮ್ಮೆ ಊಟ ಕಡಿಮೆ ಕೊಡು ಅಂತ ಹೇಳಬೇಡ್ವೊ ಅನ್ನುವಾಗ ಅವಳ ಒಡಲ ಸಂಕಟ ಹೇಳತೀರದು. ಹೃದಯವಿದ್ರಾವಕ ಕಥೆಯಿದು ಕರಳು ಕತ್ತರಿಸುವಂತೆ ಒತ್ತರಿಸಿ ಬರುವ ದುಃಖ ದುಮ್ಮಾನಗಳು ಅವಳನ್ನ ನಿರ್ಘಾತಗೊಳಪಡಿಸುತಿದ್ದವು…

ಅದ್ಯಾವ ಬಾಯಲ್ಲಿ ಹೇಳಿತೋ ಆ ಕಂದ ಊಟ ಕಮ್ಮಿ ಕೊಡು ಅಂತ ಅಂದಿನಿಂದ ಇದ್ದಕಿದ್ದಂತೆ ಊಟ ಕಡಿಮೆ ಮಾಡಿಬಿಟ್ಟ ಎಷ್ಟು ಹೇಳಿದರು ನನಗೆ ಸೇರಲ್ಲ ಅಂತ.ಹೀಗೆ ಊಟ ಕಡಿಮೆ ಮಾಡಿದವನು ಮೂಳೆ ಚಕ್ಲವಾದ.ಕೂತು ಕೊಳ್ಳಲು ಆಗದೆ ಮಲಗಿಕೊಂಡೆ ಟಿವಿ ನೋಡುತಿದ್ದ.ಹಾಗೆಯೆ ಟಿವಿಯನ್ನು ನೋಡಿ ನೋಡಿ ನಾಲ್ಕೈದು ಭಾಷೆಗಳನ್ನು ಕಲಿತು ಅರ್ಥೈಸಿಕೊಂಡು ನೋಡಿದ ಕಥೆಗಳನ್ನು ಅಮ್ಮನಿಗೆ ಹೇಳುತಿದ್ದ.ಅಷ್ಟೇ ಅಲ್ಲ ಕೈಯಲ್ಲಿ ಪೆನ್ಸಿಲ್ ಹಿಡಿಯಲು ಸಾಧ್ಯವಿಲ್ಲದಿದ್ದರು ಕೂಡ ಅದ್ಭುತವಾಗಿ ಚಿತ್ರ ಬಿಡಿಸುತಿದ್ದ. ಹಿಂದಿಯನ್ನು ಸೊಗಸಾಗಿ ಬರೆಯುತಿದ್ದ. ಅವನ ಮನಸ್ಸಿಗೆ ಎಂದೂ ಬೇಜಾರು ಆಗದೆ ನೋಡಿಕೊಂಡ ಅಮ್ಮ ಮೊಬೈಲ್ ಮುಟ್ಟಿದಾಗ ಬೈಯ್ಯುತಿದ್ದಳು.ಬೇಕು ಅಂತೇನು ಅಲ್ಲ. ಅವನಿಗೆ ನಂಬರ್ ಒತ್ತಲು ಆಗುತಿರಲಿಲ್ಲ ಕಷ್ಟಪಟ್ಟು ಒತ್ತುವಾಗ ಯಾರು ಯಾರಿಗೊ ಕಾಲ್ ಕನೆಕ್ಟಾಗಿ ತೊಂದರೆಯಾಗುತದೆಂದು ಗದರುತಿದ್ದಳು ಅದು ಬಿಟ್ಟರೆ ಅವಳಿಗೆ ಅವನೆಂದರೆ ಪಂಚಪ್ರಾಣ. ಅದೆಷ್ಟೊ ದೇವರಿಗೆ ಹರಕೆ ಹೊತ್ತಳೋ.? ಅದೆಷ್ಟು ವೈದ್ಯರನು ಭೇಟಿ ಮಾಡಿದಳೋ.? ಅವಳಿಗೆ ಗೊತ್ತು ಕಂದನ ಉಳಿಸಿಕೊಳ್ಳಲು ತಾನೆ ಜೀವಂತ ಶವವಾಗಿ ಬಿಟಟಿದಳು.ಅವಳ ಯಾವ ಪ್ರಾರ್ಥನೆಗಳು, ಅವಳ ದೈವಭಕ್ತಿ ,ಅವಳ ತ್ಯಾಗ ಯಾವುದು ಫಲಿಸಲೆ ಇಲ್ಲ.

ಕಂದ ತನ್ನ ಪ್ರಾಣ ಬಿಡುವ ಹಿಂದಿನ ರಾತ್ರಿ ನರಳಾಡಿ ಹೋದ ಮಲಗಲು ಆಗದೆ, ಕೂರಲು ಆಗದೆ ನರಳಾಡುತಿದ್ದ ಸಂಕಟ ಯಾವ ಮಕ್ಕಳಿಗೂ ಬೇಡಪ್ಪ ಅನ್ನಿಸುತಿತ್ತು….ಅವನಮ್ಮ ಅವನ ಸಂಕಟ, ನೋವು ನೋಡಲಾಗದೆ ಒಂದೆ ಸಮನೆ ಅಳತೊಡಗಿದಳು. ಮಧ್ಯರಾತ್ರಿ ಕಂದನಿಗೆ ಮಾತನಾಡಲೂ ಆಗದಷ್ಟು ನಿತ್ರಾಣ ಸ್ಥಿತಿಯಲ್ಲಿದ್ದರು ಕೂಡ ಆ ಕಂದ ಅಮ್ಮ… ” ತಪ್ಪಾಯಿತು ಕ್ಷಮಿಸಿ ಬಿಡಮ್ಮ” ಎಂದು ಮೂರು ಭಾರಿ ಕೇಳಿದಾಗ ಕರುಳು ಕಿತ್ತು ಬಂದ ಹಾಗಿತ್ತು. ಅಯ್ಯೋ..! ಮಗನೆ ನೀನೇನೊ ತಪ್ಪು ಮಾಡಿದಿಯಾ.? ಯಾಕೆ ನನ್ನತ್ರ sorry ಕೇಳುತಿರುವೆ? ಎಂದು ಎಷ್ಟು ಕೇಳುತ್ತಿ ದ್ದರು ಅವನಿಗೆ ಅರಿವಿಲ್ಲದೆ ಪದೆ ಪದೆ ಸ್ವಾರಿ ಕೇಳುತ್ತಲೆ ಇದ್ದ.ಅವನೊಳಗೆ ನನ್ನಮ್ಮನಿಗೆ ಇದ್ದಷ್ಟು ದಿನಾ ನೋವು ಕೊಟ್ಟಿರುವೆ ಎಂಬ ಭಾವನೆ ಬಂದಿತ್ತೊ ಏನೋ .?ಗೊತ್ತಾಗಲಿಲ್ಲ .ಈ ಕ್ಷಣವಂತು ಹೃದಯವಿದ್ರಾವಕವಾಗಿತ್ತು.ಮಾರನೆ ದಿನ ಮಧ್ಯಾಹ್ನ 12 ಗಂಟೆ ಅಮ್ಮನ ಮಡಿಲಲ್ಲಿ ಮಲಗಿ ಅಮ್ಮ.. ಅಮ್ಮನೆಂದು ಅಮ್ಮನ ಮುಖವೆ ನೋಡಿ ಉಸಿರು ಬಿಟ್ಟಾಗಲಂತು ಆ ತಾಯಿಯ ಹೃದಯ ಚೂರಾಗಿ ಹೆಪ್ಪುಗಟ್ಟಿದ ದುಃಖದ ಕಡಲು ಹೊಡೆದುಹೋಯಿತು. ಅಷ್ಟು ದಿನದಿಂದ ತೋರ್ಪಡಿಸದ ದುಃಖವನ್ನು ತಡೆಯಲಾಗದೆ ಕಂದ ನೀನೆ ನನ್ನ ಕ್ಷಮಿಸು ಮಗನೆ …ನನ್ನ ನೀ ಕ್ಷಮಿಸು ಬಿಡಪ್ಪ …ನಿನ್ನ ಉಳಿಸಿಕೊಳ್ಳಲು ನನ್ನಿಂದಾದ ಎಲ್ಲಾ ಪ್ರಯತ್ನಗಳು ವ್ಯರ್ಥವಾದವು.

ಅಹೋರಾತ್ರಿ ನಿನ್ನ ಹಾರೈಕೆ ಮಾಡಿದೆ ಆದರು ನಿನ್ನನ್ನ ಉಳಿಸಿಕೊಳ್ಳಲಾಗಲಿಲ್ಲ ಕಣೋ..!ಎಂದು ಗೊಳಾಡುವ ಆ ತಾಯಿಯ ಸ್ಥಿತಿ ಮತ್ಯಾವ ತಾಯಂದಿರಿಗೂ ಬೇಡ ದೇವ್ರೆ…! ಆ ಹೆತ್ತೊಡಲು ಈಗಲೂ ಅತ್ತು ಅತ್ತು ಹೈರಾಣಾಗಿ ತನ್ನ ಕಂದನನ್ನು ನೆನೆದು ಕಂಗಾಲಾಗಿಹಳು….


  • ಅಭಿಜ್ಞಾ ಪಿ.ಎಮ್.ಗೌಡ, ಮಂಡ್ಯ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW