ಉಪ್ಪು ಹೇಗೆ ಸಿದ್ಧವಾಗುತ್ತೆ?…ಅಂತ ನನಗೆ ಮೊದಲು ಗೊತ್ತಿರಲಿಲ್ಲ. ಗೋಕರ್ಣಕ್ಕೆ ಹೋದಾಗ “ಸಾಣಿಕಟ್ಟಾ ಸೊಸೈಟಿ ಉಪ್ಪು” ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿದಾಗ ಉಪ್ಪಿನ ಮಹಿಮೆ ಅರ್ಥವಾಯಿತು, ಮುಂದೆ ಓದಿ ..
ಉಪ್ಪಿಗಿಂತ ರುಚಿ ಬೇರೆ ಇಲ್ಲಾ…
ಒಪ್ಪಿಕೊಂಡೋರು ದಡ್ಡರಲ್ಲ…
ಉಪೇಂದ್ರ ಸಿನಿಮಾದ ಈ ಹಾಡನ್ನು ಕೇಳಿರಬಹುದು. ಅದರಂತೆ ಉಪ್ಪಿಲ್ಲದ ಅಡುಗೆ ಅಡುಗೆಯೇ ಅಲ್ಲ, ಉಪ್ಪಿಲ್ಲದ ಊಟ ಊಟವೇ ಅಲ್ಲ. ಉಪ್ಪಿನ ಬಗ್ಗೆ ಇಷ್ಟೆಲ್ಲಾ ಯಾಕೆ ಪೀಠಿಕೆ ಹಾಕಿದೆ ಅಂದ್ರೆ ಮೊನ್ನೆ ಗೋಕರ್ಣಕ್ಕೆ ಹೋದಾಗ ಉಪ್ಪಿನ ಗದ್ದೆಗೆ ಹೋಗಿದ್ದೆ. ಇದೇನಿದು, ಭತ್ತದ ಗದ್ದೆ… ಜೋಳದ ಗದ್ದೆ…. ಕೇಳಿದುಂಟು ಆದರೆ ಉಪ್ಪಿನ ಗದ್ದೆ ಇದೇನಾ? ಅಂತ ಆಶ್ಚರ್ಯ ಪಡುತ್ತಿದ್ದರೇ ಉತ್ತರ ಇಲ್ಲಿದೆ ‘ಹೌದು… ನಾನು ಗೋಕರ್ಣದಲ್ಲಿ ಉಪ್ಪಿನ ಗದ್ದೆ ನೋಡಿದ್ದೇನೆ. ಗೋಕರ್ಣದ ಸುತ್ತಮುತ್ತಲಿನ ಜನಕ್ಕೆ ಇದರ ಬಗ್ಗೆ ಮಾಹಿತಿ ಇದೆ. ಪಟ್ಟಣದಲ್ಲಿ ಬೆಳೆದ ಎಷ್ಟೋ ಜನಕ್ಕೆ ಉಪ್ಪು ಹೇಗೆ ಬೆಳೆಯುತ್ತಾರೆ ಅನ್ನೋದು ತಿಳಿದಿಲ್ಲ. ಗೋಕರ್ಣಕ್ಕೆ ಹೋಗುವ ಮೊದಲು ನನಗೂ ಕೂಡಾ ಗೊತ್ತಿರಲಿಲ್ಲ, ಉಪ್ಪು ಸಮುದ್ರಲ್ಲಿ ಸಿಗುತ್ತೆ, ಅದನ್ನು ಹೆಕ್ಕಿ ತಂದು ಪ್ಯಾಕೆಟ್ ಮಾಡಿ ಅಂಗಡಿಗೆ ಹಾಕುತ್ತಾರೆ, ಅದನ್ನ ನಾವು ತಂದು ತಿನ್ನುತ್ತೇವೆ ಅನ್ನುವ ಒಂದು ಅಂದಾಜು ಅಷ್ಟೇ ನಮಗೆಲ್ಲ ಇತ್ತು. ಆದರೆ ಗೋಕರ್ಣದ ಸುತ್ತಲೂ ನೀರಿನ ಮಧ್ಯೆ ಬಿಳಿ ಬಿಳಿ ರಾಶಿಯನ್ನು ನೋಡಿದಾಗ ಕುತೂಹಲದ ಜೊತೆಗೆ ಆಶ್ಯರ್ಯವು ಬೆಳೆಯಿತು.
ಪ್ರವಾಸಿಗರು ಗೋಕರ್ಣದಲ್ಲಿನ ಸಮುದ್ರ, ದೇವಸ್ಥಾನಕ್ಕೆ ನಿರಂತರವಾಗಿ ಭೇಟಿ ಕೊಡುತ್ತಲೇ ಇರುತ್ತಾರೆ, ಉಪ್ಪು ಬೆಳೆಯುವ ಸ್ಥಳಕ್ಕೆ ಭೇಟಿ ಕೊಡುವುದು ಅಪರೂಪ. ಆದರೆ ನನಗೆ ನಾವು ತಿನ್ನುವ ಉಪ್ಪು ಹೇಗೆ ಸಿದ್ದವಾಗುತ್ತೆ ಅನ್ನುವ ಕುತೂಹಲವಿತ್ತು, ಅದಕ್ಕಾಗಿ ಗೋಕರ್ಣದ ‘ಗಡಿಜಟಗ’ ದಲ್ಲಿದ್ದ “ಸಾಣಿಕಟ್ಟಾ ಸೊಸೈಟಿ ಉಪ್ಪು” ಬೆಳಿಯುವ ಜಾಗಕ್ಕೆ ಭೇಟಿ ನೀಡಿದೆ.
ದೊಡ್ಡದಾದ ಕಾಂಪೌಂಡ್ ನ ಒಳಗೆ ಅಲ್ಲಲ್ಲಿ ನೀರಿಗೆ ಚೌಕಾಕಾರದ ಕಟ್ಟೆ ಕಟ್ಟಿ ನೀರು ಹಿಡಿದಿಡಿಲಾಗಿತ್ತು. ದೂರದಲ್ಲಿ ಹೆಣ್ಣುಮಕ್ಕಳ ದಿಂಡು ಉಪ್ಪಿನ ಪ್ಯಾಕೆಟ್ ಮಾಡುವಲ್ಲಿ ಬ್ಯುಸಿ ಆಗಿದ್ದರು. ಬಿಡುವಿಲ್ಲದಷ್ಟು ಅವರ ಕೈಗಳು ಸರಸರನೇ ಓಡಾಡುತ್ತಿತ್ತು. ಇದರ ಮಧ್ಯೆ ನಾನು ಹೋಗಿ ಉಪ್ಪು… ಹೇಗೆ ಮಾಡ್ತಾರೆ?… ಅಂತ ವಿವರಣೆ ಕೇಳಿದ್ರೆ ಸರಿಯಾಗಿ ಮಾತಾಡೋದು ಹೋಗಲಿ ಮುಖನೂ ನೋಡ್ತಾರಾ ಅನ್ನುವ ಅನುಮಾನವಿತ್ತು. ಅಲ್ಲಿ ಸುತ್ತಲೂ ಯಾರಾದರೂ ಖಾಲಿ ಇದ್ದಾರಾ? ಅಂತ ನೋಡಿದಾಗ ನನ್ನ ಕೈಗೆ ಸಿಕ್ಕಿದ್ದು ಹನುಮಂತವರು. ಪಾಪ ಅವರೇನು ಖಾಲಿ ಇರಲಿಲ್ಲ. ನನ್ನ ಕುತೂಹಲ ಪ್ರಶ್ನೆಗಳು ಅವರ ಕೆಲಸಕ್ಕೆ ಸ್ವಲ್ಪ ಹೊತ್ತು ವಿರಾಮ ನೀಡಿತ್ತಷ್ಟೆ.
‘ಹನುಮಂತ ಅವರೇ, ಉಪ್ಪುನ್ನ ಬೆಳಿತೀರಾ? ಬೆಳೆಯೋದು ಅಂದ್ರೆ ಹೇಗ್ರಿ ಅದು ಅಂದೆ?… ಶುರು ಆಯ್ತು ಹನುಮಂತಪ್ಪಾ ಅವರ ಉಪ್ಪಿನ ಕತೆ.
ಸಮುದ್ರದ ನೀರನ್ನು ಶಲ್ಲೋಪಿಟ್ಸ್ ಮೂಲಕ ಇಂತಿಷ್ಟು ಪ್ರಮಾಣದಲ್ಲಿ ನೀರನ್ನು ಒಂದೇ ಸ್ಥಳದಲ್ಲಿ ೧೨ ಇಂಚು ಆಳದಲ್ಲಿ ನೀರನ್ನು ಬಿಡಲಾಗುತ್ತದೆ. ನೀರನ್ನು ಒಂದೆಡೆಯೇ ಹಿಡಿದು ಇಡುವುದಿಲ್ಲ, ೮ ಇಂಚು ಅನಂತರ ೬ ಇಂಚು ಆಳಕ್ಕೆ ನೀರನ್ನು ಹರಿ ಬಿಡಲಾಗುತ್ತದೆ. ಹೀಗೆ ಹಂತ ಹಂತವಾಗಿ ನೀರು ಕಡಿಮೆ ಆದಂತೆ ಸೂರ್ಯನ ಶಾಖಕ್ಕೆ ನೀರು ಆವಿಯಾಗಿ ಉಪ್ಪಿನಾoಶ ಮಾತ್ರ ಹಾಗೆ ಉಳಿದುಕೊಳ್ಳುತ್ತದೆ. 25 ದಿನ ಕಳೆದ ಮೇಲೆ ನಿತ್ಯ ಉಪ್ಪು ಸಿಗುತ್ತಾ ಹೋಗುತ್ತದೆ. ಅಲ್ಲಿಂದ ಉಪ್ಪು ಸಿಕ್ಕ ಮೇಲೆ ಅದನ್ನು ಮಿಷಿನ್ ನಲ್ಲಿ ಆಯೋಡಿನ ಸೇರಿಸಿ, ಪ್ಯಾಕೆಟ್ ಗಳನ್ನಾಗಿ ಮಾಡಿ ದೊಡ್ಡ ಮೂಟೆ ಮಾಡಿ ಬೇರೆ ಬೇರೆ ಕಡೆಗೆಲ್ಲ ಸರಬರಾಜು ಮಾಡಲಾಗುತ್ತದೆ.
ಇದು ನಾನು ತಿಳಿದ ಕೊಂಡ ಸಂಕ್ಷಿಪ್ತ ವರದಿ. ಹೆಚ್ಚಿನ ವಿವರವನ್ನು ನನ್ನ ಸ್ನೇಹಿತರಾದ ಅರುಣ್ ಪ್ರಸಾದ್ ಹಾಗೂ ಅಂಜಲಿ ದೇರಾಜೆ ಅವರು ತಮ್ಮ ಲೇಖನದಲ್ಲಿ ವಿಡಿಯೋದಲ್ಲಿ ಮಾಡಿದ್ದಾರೆ. ತಪ್ಪದೆ ನೋಡಿ.
ಇನ್ನು ಈ ಉಪ್ಪು ನಾವು ಬಳಸುವ ಸಾಮಾನ್ಯ ಉಪ್ಪಿನಂತೆ ಬೆಳ್ಳಗೆ ಇಲ್ಲ, ಗುಲಾಬಿ ಬಣ್ಣದ ಕಲ್ಲುಪ್ಪಾಗಿದೆ.
ನಾನು ಇದರ ರುಚಿ ನೋಡಣ ಅಂತ ನಂಗೂ ಎರಡು ಪ್ಯಾಕೆಟ್ ಕೊಡ್ತೀರಾ ಅಂತ ಕೇಳಿದೆ. ‘ಇಲ್ಲಾ ಮೇಡಂ, ತಗೊಂಡ್ರೆ ಮೂಟೆ ತಗೋಬೇಕು. ಎರಡು ಮೂರೂ ಕೊಡೋಲ್ಲ’ ಅಂತ ಅಲ್ಲಿದ್ದ ಒಬ್ಬ ಮಹಿಳೆ ಹೇಳಿದಳು, ಅದಕ್ಕೆ ಮೂಟೆ ತಗೊಂಡು ಬೆಂಗಳೂರಲ್ಲಿ ”ಗೋಕರ್ಣ ಉಪ್ಪು ಬೇಕಾ …ಅಂತ ರಸ್ತೆಯಲ್ಲಿ ಕೂಗಕೊಂಡು ಮಾರಬೇಕು ಅಷ್ಟೇ. ಅಷ್ಟು ನಂಗೆ ಖರ್ಚ್ ಆಗೋಲ್ಲ , ಸದ್ಯಕ್ಕೆ ಎರಡು ಪ್ಯಾಕೆಟ್ ಕೊಡಿ, ರುಚಿ ನೋಡ್ತೀನಿ’ ಅಂದೇ….ಆ ಮಹಿಳೆಗೆ ನನ್ನ ಮುಖ ನೋಡಿ ಅಯ್ಯೋ ಪಾಪ ಅಂತ ಎರಡು ಪ್ಯಾಕೆಟ್ ನ್ನ ನನ್ನ ಮುಂದೆ ಇಟ್ಟಳು. ‘ನಾನು ಸರಿ ಇದರ ದುಡ್ಡು ಎಷ್ಟಾಮ್ಮ’…ಅಂದೇ. ‘ಬೇಡ ಮೇಡಂ, ಪರವಾಗಿಲ್ಲ’ ಅಂದ್ಲು…’ಏನ್ ಬೇಕಾದ್ರು ಫ್ರೀ ತಗೋಬಹುದು, ಆದ್ರೆ ಉಪ್ಪನ್ನ ಫ್ರೀ ತಗೋಬಾರದು’ ಅಂತ ನಮ್ಮ ಹಿರಿಯರು ಹೇಳಿದ್ದಾರೆ. ಅದಕ್ಕೆ ‘ನೋಡಮ್ಮ… ಉಪ್ಪನ್ನ ನೀನು ಹಾಗೆ ಕೊಡಬೇಡ. ನಾನು ತಗೋಳೋಲ್ಲ. ಇದರ ಮೇಲೆ ೨೦ ರೂಪಾಯಿ ಅಂತ ಇದೆ ಎರಡು ಪ್ಯಾಕೆಟ್ ಗೆ ೪೦ ರೂಪಾಯಿ ಆಯ್ತು ಅಂತ ೪೦ ರೂಪಾಯಿ ಅವಳ ಕೈಗೆ ಇಟ್ಟು, ಪಿಂಕ್ ಉಪ್ಪುನ್ನು ಕೈಯಲ್ಲಿ ಹಿಡಿದೆ. ‘ನಿಮ್ಮ ದೇಹದಲ್ಲಿ ಆಯೋಡಿನ್ ಕೊರತೆ ಇದೆಯೇ ಹಾಗಿದ್ದರೆ ಸಾಣೆಕಟ್ಟಾ ಸೊಸೈಟಿ ಉಪ್ಪನ್ನೇ ಬಳಸಿ’ ಅಂತ ರೂಪದರ್ಶಿಯಂತೆ ಸೆಲ್ಫಿಗೆ ಒಂದು ಪೋಸ್ ಕೊಟ್ಟೆ, ಖುಷಿ ಆಯ್ತು.
ನೋಡಲು ಗುಲಾಬಿ ಬಣ್ಣದ ಈ ಉಪ್ಪು ಮರಳಿನಂತೆ ಉದುರುದುರಾಗಿದ್ದರೂ ರುಚಿಯಾಗಿದೆ, ಗೋಕರ್ಣ ಜನರಿಗೆ ಅದರಲ್ಲಿಯೂ ಮಹಿಳೆಯರಿಗೆ ಉದ್ಯೋಗವನ್ನು ಸೃಷ್ಟಿಸಿಕೊಟ್ಟಿದೆ. ಗೋಕರ್ಣಕ್ಕೆ ಹೋದಾಗ ತಪ್ಪದೆ ಸಾಣೆಕಟ್ಟಾ ಸೊಸೈಟಿ ಉಪ್ಪನ್ನು ಬೆಳೆಯುವುದನ್ನು ತಪ್ಪದೆ ನೋಡಿ ಬನ್ನಿ.
- ಶಾಲಿನಿ ಹೂಲಿ ಪ್ರದೀಪ್