ಪ್ರಕಾಶಕರಾದ ಪ್ರಕಾಶ್ ಕಂಬತ್ತಳ್ಳಿ ಅವರ ‘ಮನಸ್ಸಿಗೆಷ್ಟು ಮುಖಗಳು’ ಅವರ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಮನಸ್ಸಿಗೆಷ್ಟು ಮುಖಗಳು
ಲೇಖಕರು : ಪ್ರಕಾಶ್ ಕಂಬತ್ತಳ್ಳಿ
ಪ್ರಕಾಶಕರು : ಅಂಕಿತ ಪುಸ್ತಕ
ಬೆಲೆ : ೪೦.೦೦
ಸಂಸ್ಕಾರ ಕಾದಂಬರಿಯ ಚಂದ್ರಿ, ನಾರಣಪ್ಪ ತನಗೆ ಕೊಟ್ಟ ಒಡವೆಗಳನ್ನು, ಅವನ ಸಂಸ್ಕಾರಕ್ಕೆ ಎಂದು ಬ್ರಾಹ್ಮಣರಿಗೆ ಕೊಟ್ಟಾಗ, ಅಲ್ಲಿಯವರೆಗೆ ಅವನಿಗೆ ಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಿದ್ದವರು, ಈಗ ಒಬ್ಬೊಬ್ಬರಾಗಿ ಅವನಿಗೆ ಸಂಸ್ಕಾರ ಮಾಡಲು ಮುಂದೆ ಬರುವುದಲ್ಲದೆ, ಒಡವೆಗಳಿಗಾಗಿ ಕೋರ್ಟ್ ಗೆ ಇಲ್ಲದ ಸಂಬಂಧಗಳನ್ನು ಸೃಷ್ಟಿಸಿಕೊಂಡು ಹೋಗಲು ಸಿದ್ಧರಾಗುತ್ತಾರೆ.

ಅಲ್ಲಿ ಅವಳು ಸೂಳೆ ಆದರೆ, ಇಲ್ಲಿ ಸ್ವತಃ ಅವರ ಅಮ್ಮ. ಅವಳಲ್ಲಿ ಇರುವ ಒಡವೆ ಮತ್ತು ಹಣಕ್ಕಾಗಿ ಅಣ್ಣ ತಮ್ಮಂದಿರು, ಪರಸ್ಪರ ಒಬ್ಬರ ವಿರುದ್ಧ ಇನ್ನೊಬ್ಬರು ಕೋರ್ಟ್ಗೆ ಹೋಗಲು ಸಿದ್ಧರಾಗುವುದು, “ಹುಟ್ಟಿದಾಗ ಸೋದರರು, ಬೆಳೆಯುತ್ತಾ ದಾಯಾದಿಗಳು ” ಎಂಬ ಗಾದೆಯನ್ನು ನಿಜ ಮಾಡುವ ರೂಪಕವಾಗಿದೆ. ಇದನ್ನು ನಿರೂಪಿಸಲು ಮಧ್ಯಮವರ್ಗದ ಕುಟುಂಬವನ್ನು ಆಯ್ಕೆ ಮಾಡಿಕೊಂಡು ಇರುವುದು, ಲೇಖಕರ ವಾಸ್ತವಿಕತೆಯ ಗ್ರಹಿಕೆಗೆ ನಿದರ್ಶನ.
ಅಲ್ಲಿ ಬರುವ ಪ್ರತಿಯೊಂದು ಪಾತ್ರವೂ ಪ್ರಾತಿನಿಧಿಕವಾಗಿದೆ. ಸ್ವತಃ ಮದುವೆಯಾಗಲಿರುವ ಗಿರಿಜಾಗೆ ಆ ಒಡವೆಗಳ ಮೋಹ ಇಲ್ಲದಿರುವಾಗ, ಅವಳ ತಂದೆ ತಾಯಿಗಳು ಅದಕ್ಕಾಗಿ ಪರದಾಡುವುದು , ತಮಗೆ ಸೇರಬೇಕೆಂದು ಹಟ ಹಿಡಿಯುವುದು,ಅವರು ತಲುಪಿರುವ ಅಧೋಗತಿಗೆ ನಿದರ್ಶನ. ಅದರಂತೆ ಇನ್ನೊಬ್ಬ ಮಗನಿಗೆ,ಮಗನನ್ನು ಡಾಕ್ಟರ್ ಮಾಡಲು ಕೂಡ ಅಮ್ಮನ ಬಳಿ ಇರುವ ಹಣ, ಒಡವೆ ಬೇಕು. ಅಜ್ಜಿಯನ್ನು ನೋಡಲು ಬರುವ ಡಾಕ್ಟರ್ ಕೂಡ ಇಲ್ಲಿ ಅವಕಾಶವಾದಿಯೇ ಸರಿ.
ಅಜ್ಜಿ ಸಾಯುವ ಮುನ್ನವೆ ,ಸತ್ತರೆಂದು ತಂತಿ ಕೊಡಲು ಸಿದ್ಧವಿರುವ, ಮಕ್ಕಳ ಅಮಾನುಷತೆ, ಮನುಷ್ಯ ಸಂಬಂಧಗಳ ಕೃತಕತೆಗೆ ಸಾಕ್ಷಿ. ನಾಳೆ ಬೆಳಿಗ್ಗೆ ಅಜ್ಜಿ ಇಲ್ಲ ಎಂದು ನಿದ್ದೆಯಲ್ಲಿ ಇದ್ದ ಮಕ್ಕಳಿಗೆ, ಬೆಳಿಗ್ಗೆ ಎದ್ದು ಕಾಫಿ ಮಾಡಿಕೊಂಡು ಕುಡಿಯುತ್ತಿದ್ದ ಅಜ್ಜಿಯನ್ನು ನೋಡಿ ಆಘಾತವಾಗುವ ದೃಶ್ಯ, ವಿಡಂಬನೆಯ ದ್ಯೋತಕವಾಗಿದೆ.

ಈ ಎರಡೂ ಕೃತಿಗಳು, ವಿಭಿನ್ನ ಚಲನಚಿತ್ರ ಮತ್ತು ರಂಗ ಮಾಧ್ಯಮಗಳ ಮೂಲಕ ಜನಪ್ರಿಯವಾಗಿವೆ. ಎಲ್ಲರನ್ನೂ ಒಟ್ಟಿಗೆ ತಂದು ಅನಾವರಣ ಮಾಡಿರುವ ಲೇಖಕರು, ಆ ಮೂಲಕ ಮನುಷ್ಯ ಸ್ವಭಾವಕ್ಕೆ ಕನ್ನಡಿ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಅಭಿನಂದನೆಗಳು ಗೆಳೆಯರಾದ ಪ್ರಕಾಶ್ ಕಂಬತ್ತಳ್ಳಿ ಅವರಿಗೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
