ಬರೀ ಕೈಯಲ್ಲಿ ಏನೇ ಮಾಡಿದರೂ, ಎಷ್ಟೇ ಒಳ್ಳೆಯದು ಮಾಡಿದರೂ, ಎಷ್ಟೇ ಒಳ್ಳೆಯದನ್ನು ಬಯಸಿ, ಹರಸಿ ಹಂಬಲಿಸಿದರೂ ಅದು ಯಾರ ಕಣ್ಣಿಗೂ ಕಾಣಿಸಲ್ಲ. ಈ ಪ್ರಪಂಚದಲ್ಲಿ ಹಣವಿಲ್ಲದೆ ಯಾವುದೇ ಸಂಬಂಧಗಳಿಲ್ಲ. ಚಂದನ್ ಅವರ ಮನಸ್ಸಿನ ಪಿಸುಮಾತಿನ ಮುಂದಿನ ಸಂಚಿಕೆಯನ್ನು ತಪ್ಪದೆ ಮುಂದೆ ಓದಿ…
ಗುಣ ನಡತೆಗಳು ಚೆನ್ನಾಗಿರಬೇಕು ಅಂತ ಎಲ್ಲರೂ ಹೇಳುತ್ತಾರೆ ಹಾಗು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ. ಆದರೆ ಅದಕ್ಕಿಂತ ಮುಖ್ಯವಾಗಿ ಈ ಪ್ರಪಂಚದಲ್ಲಿ ಅವಶ್ಯಕತೆ ಹಾಗು ಅನಿವಾರ್ಯತೆಗೆ ತಕ್ಕಂತೆ ಪ್ರತಿಯೊಬ್ಬರು ಬಯಸುವುದು, ನಿರೀಕ್ಷಿಸುವುದು ಹಾಗು ಹಂಬಲಿಸುವುದು ಸಿರಿತನ, ಹಣ, ಆಸ್ತಿ, ಅಂತಸ್ತು ಹಾಗು ಸಮಾಜದಲ್ಲಿ ಉನ್ನತ ಸ್ಥಾನಮಾನದಲ್ಲಿ ಬದುಕುವುದನ್ನ ಅನ್ನೋದು ಎಲ್ಲರೂ ಒಪ್ಪಲೇಬೇಕಾದ ವಿಷಯ.
ಬದುಕಿನಲ್ಲಿ ಕೇವಲ ಹಣ, ಆಸ್ತಿ, ಅಂತಸ್ತು ಜೊತೆಗೆ ಉತ್ತಮ ಉದ್ಯೋಗ ಇದ್ದರೆ ಈ ಜೀವನದಲ್ಲಿ ಸ್ವರ್ಗವನ್ನೇ ಸೃಷ್ಟಿಸಬಹುದು. ಅಂತಹ ಸ್ವರ್ಗದಲ್ಲಿನ ಬದುಕು ನಮ್ಮದಾಗಿಸಿಕೊಳ್ಳಬಹುದು ಅನ್ನುವ ಭ್ರಮೆ ಹಾಗು ಆಸೆ ಅನ್ನೋದು ಎಲ್ಲರಲ್ಲಿಯೂ ಸಹಜ.
ಅಂತಹ ಬದುಕಲ್ಲಿ ಬೇಡವೆಂದುಕೊಂಡರೂ ಮನಸ್ಸು ಹಾಗು ಜೀವನದಲ್ಲಿ ಬಯಸುವುದನ್ನೆಲ್ಲಾ ಹೇರಳವಾಗಿ ಪಡೆದುಕೊಳ್ಳಬಹುದು ಹಾಗು ನೆಮ್ಮದಿಯಾಗಿ ಜೀವನಪರ್ಯಂತ ಬದುಕಿಬಿಡಬಹುದು ಅನ್ನುವ ಮನುಷ್ಯನ ಆಸೆ ಎಷ್ಟರ ಮಟ್ಟಿಗೆ ಈಡೇರುತ್ತದೆ ಹಾಗು ನನಸಾಗುತ್ತದೆ ಅನ್ನೋದು ಕೇವಲ ಆ ಭಗವಂತನಿಗೆ ಮಾತ್ರ ಗೊತ್ತು.
ಹಣವೊಂದಿದ್ದರೆ ಸದಾ ಜನರ ಮನದಲ್ಲಿ ಹಾಗು ಮಾತುಗಳಲ್ಲಿ ಸುದ್ದಿಯಾಗಿರಬಹುದು. ಈ ಪ್ರಪಂಚದಲ್ಲಿ ನಮ್ಮಲ್ಲಿನ ಗುಣಕ್ಕಿಂತ ನಮ್ಮಲ್ಲಿನ ಹಣಕ್ಕೆ ಮಾತ್ರ ಬೆಲೆ. ನಾವು ಸಂಪಾದಿಸುವ ಅಥವಾ ಗಳಿಸುವ ಪ್ರತಿಯೊಂದು ರೂಪಾಯಿ ನಮ್ಮ ಬೆಲೆ ನಿರ್ಧರಿಸುವಂತಾಗುತ್ತದೆ. ಅದೇ ರೀತಿ ನಾವು ವ್ಯಯಿಸುವ ಪ್ರತಿಯೊಂದು ರೂಪಾಯಿಯೂ ನಮ್ಮ ಬೆಲೆ ಹಾಗು ಗೌರವವನ್ನು ಸಂಪಾದಿಸಿಕೊಡುತ್ತದೆ.

ಯಾಕೆಂದರೆ ಬರೀ ಕೈಯಲ್ಲಿ ಏನೇ ಮಾಡಿದರೂ, ಎಷ್ಟೇ ಒಳ್ಳೆಯದು ಮಾಡಿದರೂ, ಎಷ್ಟೇ ಒಳ್ಳೆಯದನ್ನು ಬಯಸಿ, ಹರಸಿ ಹಂಬಲಿಸಿದರೂ ಅದು ಯಾರ ಕಣ್ಣಿಗೂ ಕಾಣಿಸಲ್ಲ, ಯಾರಿಗೂ ಅರ್ಥವಾಗುವುದಿಲ್ಲ ಕೊನೆಗೆ ಯಾರ ಮನಸ್ಸಿನಲ್ಲಿಯೂ ಉಳಿದಿರಲ್ಲ.
ಕಷ್ಟ ಅಂದಾಗ ಕೈ ಚಾಚುವ ಕೈಗಳು ಸಹಾಯಹಾಸ್ತಕ್ಕಾಗಿ ಹುಡುಕಾಡಿ ಅಂತವರನ್ನು ಹರಸಿ ಹೋಗುವ ಈ ಪ್ರಪಂಚದಲ್ಲಿ ಕಷ್ಟ ಅಂತ ಕೈ ಚಾಚಿ ಸಹಾಯಹಸ್ತವ ಬಯಸಿ ಬೇಡುವ ಕೈಗಳು ಸದಾ ಬರಿದಾಗಿಯೇ ಉಳಿಯುತ್ತದೆ.
ಈ ಪ್ರಪಂಚದಲ್ಲಿ ಹಣವಿಲ್ಲದೆ ಯಾವುದೇ ಸಂಬಂಧಗಳಾಗಲಿ ಅಥವಾ ಯಾವುದೇ ಆತ್ಮೀಯತೆಗಳಾಗಲಿ ಉಳಿಯಲ್ಲ ಹಾಗು ಬೆಳೆಯಲ್ಲ. ಬರೀ ಹೆಸರಿಗೆ ಉಳಿದಂತೆ ಕಂಡರೂ ಅಥವಾ ಬೆಳೆಯುತ್ತಿರುವಂತೆ ಕಂಡರೂ ಅದು ನಿಜವಾಗಿರಲ್ಲ. ಯಾಕೆಂದರೆ ಹಣವು ಜನರನ್ನು ಬೇಗ ಆಕರ್ಷಿಸಿದಂತೆ ನಮ್ಮಲ್ಲಿನ ಉತ್ತಮ ಗುಣ ಹಾಗು ನಡತೆಗಳು ಜನರನ್ನು ಆಕರ್ಷಿಸಲಾರೆವು.
ಒಳ್ಳೆಯದನ್ನು ಅನುಮಾನದಿಂದ ನೋಡುವ ಪ್ರಪಂಚದಲ್ಲಿ ಒಳ್ಳೆಯದು ಜನರನ್ನು ಆಕರ್ಷಿಸಲಾರದು. ಅದೇ ಸಿರಿತನ ಯಾರನ್ನು ಬೇಕಾದರೂ ತನ್ನೆಡೆಗೆ ಆಕರ್ಷಿಸುವಂತೆ ಮಾಡಿಬಿಡುತ್ತದೆ. ಕೇವಲ ಹಣಬಲದ ಮುಂದೆ ಈ ಪ್ರಪಂಚವೇ ಶರಣಾರ್ಥಿ….
ಹಿಂದಿನ ಸಂಚಿಕೆಗಳು :
- ಮನಸ್ಸಿನ ಪಿಸುಮಾತು – (ಭಾಗ-೧)
- ಮನಸ್ಸಿನ ಪಿಸುಮಾತು – (ಭಾಗ-೨)
- ಮನಸ್ಸಿನ ಪಿಸುಮಾತು – (ಭಾಗ-೩)
- ಮನಸ್ಸಿನ ಪಿಸುಮಾತು – (ಭಾಗ-೪)
- ಮನಸ್ಸಿನ ಪಿಸುಮಾತು – (ಭಾಗ-೫)
- ಚಂದನ್
