ಬಹುತ್ವದೆಡೆಗೆ ಮಂಟೇಸ್ವಾಮಿ : ಗಿರಿಜಾ ಶಾಸ್ತ್ರಿ

ಗ್ರಾಮೀಣ ಚಟುವಟಿಕೆಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡಿರುವ ಕಲಾವಿದೆ ಆಕ್ಷತಾ ಪಾಂಡುಪುರ ಮತ್ತು ಅವರ ಸಂಗಾತಿ ಪ್ರಸನ್ನ ಅವರು ರಾಜರಾಜೇಶ್ವರಿ ನಗರದಲ್ಲಿ ಸ್ಥಾಪಿಸಿರುವ Act- in ಎಂಬ ಸ್ಟೂಡಿಯೋದ ಉದ್ಘಾಟನೆಯ ಭಾಗವಾಗಿ ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ ಮಂಟೇಸ್ವಾಮಿ ಕಾವ್ಯ ಪ್ರಸಂಗವನ್ನು ಪ್ರದರ್ಶನಮಾಡಲಾಗಿತ್ತು. ಗಿರಿಜಾ ಶಾಸ್ತ್ರಿ ಅವರು ನಾಟಕದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಾಟಕ : ಮಂಟೇಸ್ವಾಮಿ ಕಾವ್ಯ ಪ್ರಸಂಗ
ನಿರ್ದೇಶಕ : ಶ್ರೀಪಾದ ಭಟ್ಟ

೧೬ ನೇ ಶತಮಾನದ ಮಂಟೇ ಸ್ವಾಮಿ ಮತ್ತು ಆಧುನಿಕ ಗಿಟಾರ್ ( ಮುನ್ನಾ ಮೈಸೂರು) ಬೇಸ್ ಗಿಟಾರ್ ( ರೋಹಿತ್ ಶ್ರೀಧರ್) ಮತ್ತು ದಕ್ಷಿಣ ಆಫ್ರಿಕಾ ಮೂಲದ ಜಂಬೆ, ಪೆರು ಮೂಲದ ಕಹೂನ್ ಮತ್ತು ದುಡಿ ವಾದ್ಯದ ಹಿನ್ನೆಲೆ ( ಅನುಷ್ ಶೆಟ್ಟಿ) !! ಇವೆಲ್ಲವನ್ನೂ ಒಕ್ಕೊರಲಿಗೆ ಒಂದು ಗೂಡಿಸಿದ ಶ್ರೀಪಾದ ಭಟ್ ಅವರ ಸಮರ್ಥ ಸಂಗೀತ ವಿನ್ಯಾಸ ಮತ್ತು ನಿರ್ದೇಶನ. ನಮ್ಮದೇ ಆದ ದುಡಿಯನ್ನು ಬಿಟ್ಟರೆ, ಈ ವಿದೇಶೀ ವಾದ್ಯಗಳಿಗೂ ಮಂಟೇಸ್ವಾಮಿಗೂ ಎಲ್ಲಿಂದೆಲ್ಲಿಗೆ ಸಂಬಂಧವಯ್ಯಾ? ಈ ಎಲ್ಲವೂ ನಮ್ಮ ಜನಪದ ಮಟ್ಟುಗಳ ಹಾಡುಗಳನ್ನು ಪ್ರಸ್ತುತ ಪಡಿಸಿದ ಶಾಲೊಮ್ ಕೊರಲಿಗೆ ದನಿಗೂಡಿಸಿದ್ದವು.

ಶ್ರೀಪಾದ ಭಟ್ಟರ ನಿರ್ದೇಶನದ ‘ಮಂಟೇಸ್ವಾಮಿ ಕಾವ್ಯ ಪ್ರಸಂಗ’ ನಾಟಕ ಪ್ರದರ್ಶನದಲ್ಲಿ ಇದ್ದುದು ಈ ವಾದ್ಯಗಳು. ಮಂಟೇಸ್ವಾಮಿಯ ಜೊತೆಗೆ ಇವುಗಳ ಸಂಯೋಜನೆ ಕಾಕತಾಳೀಯವೇನಲ್ಲ.

೧೬ ನೇ ಶತಮಾನದ, ಮಂಟೇಸ್ವಾಮಿಯನ್ನು ಜನಪದರು ಅಲ್ಲಮನ ಜೊತೆಗೆ ಸಮೀಕರಿಸುತ್ತಾರೆ. ಅವನು ಸಂವಾದಿಸುವುದು- ಹನ್ನೆರಡನೇ ಶತಮಾನದ ಅಲ್ಲಮ, ಬಸವ, ನೀಲಾಂಬಿಕೆ ಮತ್ತು ಮಡಿವಾಳ ಮಾಚಯ್ಯ, ಮುಂತಾದರೊಂದಿಗೆ ಮುಖಾಮುಖಿ ಯಾಗುವುದರ ಮೂಲಕ.

ಧಾರ್ಮಿಕ ನಂಬಿಕೆಗಳು ಸ್ಥಾವರಗೊಳ್ಳುತ್ತಾ ಢಾಂಬಿಕತೆ ಮುನ್ನೆಲೆಗೆ ಬಂದು ಸಾಮಾಜಿಕ ಅನಿಷ್ಟಗಳು ರಾರಾಜಿಸತೊಡಗಿದಾಗ ಮಂಟೇಸ್ವಾಮಿ ಎಂಬ ಜನಪದ ನಾಯಕ ಧರ್ಮವನ್ನು ತಿಪ್ಪೆಯ ಮೇಲೆ ಕೂರಿಸುವುದರ ಮೂಲಕ ಮತ್ತೊಮ್ಮೆ ಅದರ ಜಂಗಮತ್ವಕ್ಕೆ ನಾಂದಿ ಹಾಡುತ್ತಾನೆ.

ಹಾಗೆಯೇ ಶ್ರೀಪಾದ ಭಟ್ಟರು ಅದನ್ನು ೨೧ ನೆಯ ಶತಮಾನದ ಆಧುನಿಕ ಕಣ್ಣುಗಳಿಂದ ನೋಡುವುದರ ಮೂಲಕ ೨೧ ನೆಯ ಶತಮಾನದಲ್ಲಿ ಮತ್ತೊಮ್ಮೆ ೧೨ ನೆಯ ಶತಮಾನದ ಸಮಾನತೆಯ ಆಶಯಗಳನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ. ಅವರು ಬಳಸಿರುವ ಆಧುನಿಕ ಸಂಗೀತ ವಾದ್ಯಗಳ ಹಿನ್ನೆಲೆ ಅದರ ದ್ಯೋತಕವಾಗಿದೆ. ಮಂಟೇಸ್ವಾಮಿಯ ಕಾವ್ಯ ಹಾಡುವವರನ್ನು ನೀಲಗಾರರು ಎನ್ನುತ್ತಾರಂತೆ. ಈ ಮೂವರು ಕಲಾವಿದರೂ ಆಧುನಿಕ ನೀಲಗಾರರು.

“ಇದೇ!” ಎಂದು ಸ್ಥಾಪಿಸುವರ “ಎದೆಗೆ ಶೂಲವಾಗ ಬಲ್ಲ, ನನ್ನದೆನ್ನುವರ ಒದ್ದು ಕೆಡವ ಬಲ್ಲ, ಹೊನ್ನು ನನ್ನದೆನ್ನುವರ ಹಣ್ಣು ಮಾಡಬಲ್ಲ, ಮಣ್ಣು ನನ್ನದೆನ್ನುವರ ಕಣ್ಣು ಕುರುಡು ಮಾಡಬಲ್ಲ” ಮಂಟೇಸ್ವಾಮಿಯಂತಹ ನಾಯಕನ ಅಗತ್ಯ ನಮಗೆ ಎಂದಿಗಿಂತ ಇಂದು ಹೆಚ್ಚಾಗಿದೆ. ಧರ್ಮದ ಹೆಸರಲ್ಲಿ , ದೇವರ ಹೆಸರಲ್ಲಿ ದೇಶವನ್ನು ಛಿದ್ರಮಾಡುತ್ತಿರುವ, ಬಹುತ್ವವೊಂದು ನಾಶದ ಅಂಚಿನಲ್ಲಿರುವ ಇಂದಿನ ಪರಿಸ್ಥಿತಿಯಲ್ಲಿ ಮಂಟೇಸ್ವಾಮಿಯ ಬಂಡಾಯ ಬಹಳ ಪ್ರಸ್ತುತ.

 

ಗ್ರಾಮೀಣ ಚಟುವಟಿಕೆಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡಿರುವ ಕಲಾವಿದೆ ಆಕ್ಷತಾ ಪಾಂಡುಪುರ ಮತ್ತು ಅವರ ಸಂಗಾತಿ ಪ್ರಸನ್ನ ಅವರು ರಾಜರಾಜೇಶ್ವರಿ ನಗರದಲ್ಲಿ ಸ್ಥಾಪಿಸಿರುವ Act- in ಎಂಬ ಸ್ಟೂಡಿಯೋದ ಉದ್ಘಾಟನೆಯ ಭಾಗವಾಗಿ ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ ಮಂಟೇಸ್ವಾಮಿ ಕಾವ್ಯ ಪ್ರಸಂಗವನ್ನು ಪ್ರದರ್ಶನಮಾಡಲಾಗಿತ್ತು. ‘ನಿರ್ದಿಗಂತ’ದ ಕಲಾವಿದರ ಅಮೋಘ ನಟನೆ ಹನ್ನೆರಡನೇ ಶತಮಾನಕ್ಕೆ ಪ್ರೇಕ್ಷಕರನ್ನು ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು.

ಮಂಟೆ ಸ್ವಾಮಿ ಕಾವ್ಯ ಪ್ರಸಂಗ ನೋಡಿಕೊಂಡು ಹೊರಬಂದಾಕ್ಷಣ ನಾನು ಯಾವುದೋ ಒಂದು Trans ನೊಳಗಿದ್ದೆ. ನನ್ನೊಳಗೆ ಒಂದುರೀತಿಯ ರೂಪಾಂತರ ಗಾಢವಾಗಿ ಗೂಡುಕಟ್ಟುತ್ತಿರುವ ಅನುಭವವಾಯಿತು. ( ಕ್ಷಣಿಕವಾದರೂ ! ಎಲ್ಲ ಅನುಭವಗಳೂ ಆಯಾ ಕ್ಷಣದ ಸತ್ಯಗಳೇ ತಾನೆ?) ಈ ಪ್ರಸಂಗ ನನ್ನ ಬೌದ್ಧಿಕ ಗ್ರಹಿಕೆಯಾಗಿ ನನಗೆ ಸಿಕ್ಕಲಿಲ್ಲ, ಬದಲಾಗಿ ಒಂದು ಅನುಭವ ದ್ರವ್ಯವಾಗಿ ದಕ್ಕಿತು. ಮನೆಗೆ ಬಂದ ಮೇಲೂ “ಸಿದ್ದಯ್ಯಾ ಸ್ವಾಮಿ ದಯ ಮಾಡೋ, ಸಿದ್ಧಯ್ಯಾ ಸ್ವಾಮಿ ಬನ್ನೀ ಬನ್ನಿರೋ” ಎಂಬ ಪ್ರಮುಖ ಪಾತ್ರದ ಶಾಲೊಮ್ ಸನ್ನುತಾ ಎತ್ತರದ ದನಿಯಲ್ಲಿ ಕಿವಿಯಲ್ಲಿ ಮಾತ್ರವಲ್ಲ , ನಖಶಿಖಾಂತ ಹಾಡುತ್ತಿದ್ದಳು. ಆಕೆಯ ಅಭಿನಯದಲ್ಲಿದ್ದ ಹನ್ನೆರಡನೇ ಶತಮಾನದ ‘ತನ್ಮಯ’ತೆ ಮತ್ತು ಅದರ ಆಶಯಗಳನ್ನು ೨೧ ನೇ ಶತಮಾನಕ್ಕೆ ದಾಟಿಸುವ ‘ಎಚ್ಚರ’ ದಂಗು‌ಬಡಿಸಿತು. ಪ್ರೇಕ್ಷಕರನ್ನು ಬೆರಗುಗೊಳಿಸಿತು. ಆಕೆಯ ನಾಟ್ಯದ ಮೆಲು ನಡೆ ಜೊತೆಗೆ ಕೈಯಲ್ಲಿ ಏಕತಾರಿ/ ಕಿನ್ನರಿ! ಮಂಟೇಸ್ವಾಮಿಯ ಆಸ್ತಿಯೆಂದರೆ ( property) ಅದೊಂದೇ ತಾನೇ? ಇದು ಮಂಟೇಸ್ವಾಮಿಯ ನಿರ್ಮೋಹಿಗುಣವನ್ನೂ ಎತ್ತಿ ಸಾರುತ್ತದೆ.

ಬಸವಣ್ಣನಿಗೆ ತಾನು ಬಹಳ ದೊಡ್ಡ ಗುರುವಾದೆ ಎನ್ನುವ ಅಹಂಕಾರ ತಲೆ ಎತ್ತುತ್ತದೆ. ಅವನಿಗೆ ಬುದ್ಧಿ ಕಲಿಸಲೆಂದೇ, ಅವನ ಸಾಮಾಜಿಕ ಕಳಕಳಿಯನ್ನೂ ಅವನ ಭಕ್ತಿಯನ್ನೂ ಪರೀಕ್ಷಿಸಲು ಧರೆಗೆ ದೊಡ್ಡೋನು ಮಂಟೆ ಸ್ವಾಮಿ, ಅತ್ಯಂತ ಕೊಳಕು ರೂಪದಲ್ಲಿ ಬಸವಣ್ಣ ದಾಸೋಹ ನಡೆಸುತ್ತಿದ್ದಲ್ಲಿಗೆ ಬರುತ್ತಾನೆ. ಅವನ ಅಸಹ್ಯ ರೂಪದಿಂದಾಗಿ ಕಾವಲುಗಾರನಿಂದ ಅವಮಾನಿತನಾಗಿ ಆಲ್ಲಿಂದ ತಳ್ಳಿಸಿಕೊಂಡು ಬಂದು ಕಟುಕ ಶರಣನೊಬ್ಬನ ಮನೆಯಲ್ಲಿ, ಚರ್ಮ ನೆನೆಸಿಟ್ಟ ಕೊಳೆತು ನಾರುವ ನೀರಿನ ತೊಟ್ಟಿಯಲ್ಲಿ ಅಡಗಿಕೊಳ್ಳುತ್ತಾನೆ. ಕಾವಲುಗಾರ ಕಣ್ಣುಗಳನ್ನು ಕಳೆದುಕೊಳ್ಳುತ್ತಾನೆ. ಪೂಜೆಯ ಆಡಂಬರದಲ್ಲಿದ್ದ ಬಸವಣ್ಣನ ಬೆನ್ನ ಮೇಲೆ ಛಡಿ ಏಟು ಬೀಳುತ್ತದೆ.

ಒಮ್ಮೆ ಮರುಳ ಶಂಕರ ದೇವ ಪ್ರಸಾದದ ಕುಳಿಯಲ್ಲಿ ( ಎಂಜಿಲೆಲಯ ತೊಟ್ಟಿ) ಅಡಗಿ ಕುಳಿತುಕೊಂಡಿರುವಾಗ ಅದನ್ನು ಬಸವಣ್ಣನ ಗಮನಕ್ಕೆ ತರುವವನು ಅಲ್ಲಮನೇ. ಇಲ್ಲಿ ಅದಕ್ಕಿಂತಲೂ ಹೊಲಸಾದ ಇನ್ನೊಂದು ಕುಳಿಯಲ್ಲಿ ಸ್ವತಃ ಅಲ್ಲಮನೇ ಅಡಗಿ ಕೂತಿದ್ದಾನೆ !

ನೀಲಾಂಬಿಕೆ, ಬಸವಣ್ಣರಿಗೆ, ಆದ ಪ್ರಮಾದದ ಅರಿವಾಗಿ ಕಂಗಾಲಾದಾಗ ನೀಲಾಂಬಿಕೆಯ ಮೊರೆಯ ಮೇರೆಗೆ ಧರೆಗೆದೊಡ್ಡ ಗುರು ಅಡಗಿಕೊಂಡಿರುವ ನೆಲೆಯನ್ನು ಲಿಂಗವೇ ತೋರುತ್ತದೆ.

ಅವರು ಆ ಕೊಳೆತ ನೀರಿನಿಂದ ಹೊರಗೆ ಅವನನ್ನು ಎಳೆಯಲು ಹೋದಂತೆಲ್ಲಾ ಅವನ ಅಂಗಾಂಗಳೇ ಕೈಗೆ ಬರುತ್ತವೆ. ಶಿರ ಮುಟ್ಟಿ ಎಳೆಯಲು ಹೋದರೆ ಶಿರವೇ ಕೈಗೆ ಬಂದು ಬಿಡುತ್ತದೆ. ಹೀಗೆ ಎಳೆದೂ ಎಳೆದು ಕೈಗೆ ಬಂದ ಎಲ್ಲಾ ಅಂಗಾಗಳನ್ನು ಬಾಚಿ ಒಟ್ಟುಮಾಡಿ ಒಂದು ಗಂಟು ಕಟ್ಟಿಕೊಂಡು ಬಸವಣ್ಣ ಮತ್ತು ನೀಲಾಂಬಿಕೆ ತಲೆಯ ಮೇಲೆ ಹೊತ್ತುಕೊಂಡು ಕಲ್ಯಾಣಕ್ಕೆ ಬಂದು ಒಂದು ತಿಪ್ಪೆಯ ಮೇಲೆ ಇರಿಸುತ್ತಾರೆ. ಮಂಟೇ ಸ್ವಾಮಿ ಜೀವಂತನಾಗಿ ಕೊನೆಗೆ ಒಂದು ಜ್ಯೋತಿಯಲ್ಲಿ ಲೀನವಾಗುತ್ತಾನೆ.

ಈ ಜ್ಯೋತಿ ಬಡವರ ಬಲ್ಲಿದವರ,ಹೆತ್ತವರ ಸತ್ತವರ, ಗುರುಮನೆ ಅರಮನೆ ಮನೆಗಳಲ್ಲೂ ಸಮಾನವಾಗಿ ಉರಿಯುವ ಜ್ಯೋತಿ ತಿಪ್ಪೆಯ ಮೇಲೂ ಯಾವುದೇ ಭೇದವಿಲ್ಲದೆ ಬೆಳಕು ಬೀರುವ ಜ್ಯೋತಿ ಎಂದು ಎಲ್ಲರೂ ಹಾಡುತ್ತಾರೆ.

ಮಂಟೇ ಸ್ವಾಮಿ ಕಾವ್ಯ ಪ್ರಸಂಗದ ಈ ಕ್ಲೈಮಾಕ್ಸ್ ಪ್ರೇಕ್ಷಕರನ್ನು ನಡುಗಿಸಿ‌ಬಿಡುತ್ತದೆ. ಆಧುನಿಕರಿಗೆ ಇದು ಭೌತಿಕ ಅಸ್ತಿತ್ವದ ಬಹು ದೊಡ್ಡ ಸವಾಲು. (ಗೋರಕ್ಷನಾಥನ ಎದುರಿಗೆ ಅಲ್ಲಮ ಈ ಸವಾಲನ್ನು ಈಗಾಗಲೇ ಗೆದ್ದಿದ್ದಾನೆ. ಇದು ಅದರ ಇನ್ನೊಂದು ರೂಪ)

ಈ ಪ್ರಸಂಗ ದೇಹ ಗರ್ವಿಯಾದ ಆಧುನಿಕ ಮನುಷ್ಯನ ಶಿಷ್ಟ ಮತ್ತು ಪರಿಶಿಷ್ಟದ ಕಲ್ಪನೆಯನ್ನೇ ಧೂಳೀಪಟ ಮಾಡಿಬಿಡುತ್ತದೆ. ಹೊಲೆ, ಹರಕಲು, ತಿಪ್ಪೆ ,ಕೊಳಕು ಇವೆಲ್ಲಾ ಬಡತನಕ್ಕೆ ಲಗತ್ತಿಸಿಕೊಂಡಿರುವ ಭಾಷೆ, ಅದೇ ಅವರ ಸಂಸ್ಕೃತಿ. ಇಲ್ಲಿ ಸಮಾಜದ ಹೇವರಿಕೆಗೆ ಯಾವುದು ಕಾರಣವಾಗಿದೆಯೋ ಅದೇ ದೈವತ್ವಕ್ಕೆ ಏರಿಬಿಡುತ್ತದೆ. ಅದರ ಮೇಲೆಯೇ ಅಲ್ಲಮ ವಿರಾಜಮಾನನಾಗುತ್ತಾನೆ.

ದಲಿತರು,‌ ನಿಕೃಷ್ಟರು, ಅಸಹಾಯಕರು ಗೆಲ್ಲುತ್ತಾರೆ. ಪ್ರಬಲರು, ತಾವೇ ದೇವರೆಂದು ಮೆರೆಯುವವರು ಚರಿತ್ರೆಯಲ್ಲಿ ಹೇಳ ಹೆಸರಿಲ್ಲದಂತೆ ಹೋಗುತ್ತಾರೆ. ಅಲ್ಲಮನ ಜೊತೆಗೆ ‘ಅಲ್ಲ’ ಕೂಡ ಇದ್ದಾನೆ. ಅವರಿಬ್ಬರೂ “ಬೇರಿಲ್ಲ ಕಾಣಿರೋ” ಎನ್ನುವ ಧ್ವನಿಯೂ ಇದೆ.

ಕಲ್ಯಾಣ ಕೆಟ್ಟು ಕಟುಕರ ಸಂತೆಯಾಗುತ್ತೆ. ಶರಣರೆಲ್ಲ ದಿಕ್ಕು ದಿಕ್ಕಿಗೆ ದಿಕ್ಕಾಪಾಲಾಗಿ ಚೆದುರಿ ಹೋಗುತ್ತಾರೆ. ಎಂದು ಭವಿಷ್ಯ ನುಡಿಯುತ್ತಾನೆ ಧರೆಗೆ ದೊಡ್ಡೋನು. ಕಾವಿ ಕಲ್ಯಾಣ ಹೋಗಿ ಕಾಯಕದ ಕಲ್ಯಾಣವಾಗಬೇಕು, ಕೊಡುವವ ಮೇಲು ಪಡೆದುಕೊಳ್ಳುವ ಕೀಳು ಎನ್ನುವ ದಾನದ ಕಲ್ಪನೆ ಹೋಗಿ ದಾಸೋಹದ ಸೇವೆಯಾಗಬೇಕು.

ಭಕ್ತಿ ಆಡಂಬರದ ಸ್ವರೂಪ ಪಡೆದುಕೊಂಡಾಗೆಲ್ಲಾ ನಿಜ ಭಕ್ತಿಯನ್ನು ಮರುಸ್ಥಾಪಿಸ ಬೇಕಾಗುತ್ತದೆ. ಅದರ ರೂಪಕವಾಗಿ ಮಂಟೆ ಸ್ವಾಮಿ ಬರುತ್ತಾನೆ. ತಾನು ಜ್ಯೋತಿಯಲ್ಲಿ ಲೀನವಾಗುವ ಮುನ್ನ ಬಸವಣ್ಣನೇ‌ ಆದಿಯಾಗಿ ನಿಜವಾದ ಭಕ್ತರಿಗೆ ಮತ್ತೆ ಲಿಂಗ ಧಾರಣೆ ಮಾಡುತ್ತಾನೆ. ಹುಸಿ ಶರಣರೆಲ್ಲ ಚರಿತ್ರೆಯ ದಾಖಲೆಯಿಂದ ಬಿದ್ದು ಹೋಗುತ್ತಾರೆ. ಉಳಿಯುವರು ನಿಜವಾದ ಶರಣರು. ಕುಲಕೊಬ್ಬ -ಶರಣ, ಕೋಟಿಗೊಬ್ಬ ಭಕ್ತ.

ಅವರಲ್ಲಿ ಹೊಲೇರ ಹೊನ್ನಯ್ಯ, ವಡ್ಡರ ಸಿದ್ಧಯ್ಯ, ಅಂಬಿಗರ ಚೌಡಯ್ಯ, ತುರಕರ ಬೀರಯ್ಯ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ, ನುಲಿಯ ಚಂದಯ್ಯ, ಕಟುಕರ ಒಬ್ಬ ಶರಣ ಸತ್ಯಕ್ಕ, ಕಾಳವ್ವೆ , ಸೂಳೆ ಸಂಕವ್ವೆ ಮುಂತಾದ ನಿಮ್ನ ವರ್ಗದವರು.

ಕೆಟ್ಟ ವ್ಯವಸ್ಥೆಯೊಂದನ್ನು ನಾಶಪಡಿಸುವುದೇ ಕ್ರಾಂತಿಯಾಗುವುದಿಲ್ಲ. ನಾಶಗೊಂಡಿದ್ದರ ಜಾಗದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವುದೇ ನಿಜವಾದ ಕ್ರಾಂತಿ ಎನ್ನುವುದನ್ನು ಇದು ರೂಪಕಾತ್ಮಕವಾಗಿ ಹೇಳುತ್ತದೆ.

ಮಂಟೆಸ್ವಾಮಿ ಕಾವ್ಯ ಪ್ರಸ್ತುತಿ. ಪ್ರಸ್ತುತ ಸಾಮಾಜಿಕ ರಾಜಕೀಯದ ಹತ್ತು ಹಲವು ಹಳವಂಡಗಳಿಗೆ ಉತ್ತರವಾಗಿ ನನಗೆ ಕಂಡಿತು. ಅದರೊಳಗೆ ಆಗಾಗ ವ್ಯಕ್ತವಾಗುತ್ತಿದ್ದ ವ್ಯಂಗ್ಯ ಪ್ರಸ್ತುತ ಸಾಮಾಜಿಕ‌‌ ವಿಧಿಯನ್ನು ಗುರಿಯಾಗಿಟ್ಟುಕೊಂಡೇ ಹೊರಟಂತಿತ್ತು. ಸತ್ಯದ ಬೆಳಕಿನ ಮುಂದೆ ಜಿನುಗುವಹಾಗೆ ಮನಸ್ಸು ಆರ್ದ್ರವಾಯಿತು. ಕಣ್ಣುಗಳು ತೇವಗೊಂಡವು.

ದೇವಾಲಯವನ್ನು ಕಟ್ಟುವ ಸಿದ್ಧರಾಮನನ್ನು ಹಂಗಿಸುವ, ಲಿಂಗವು ಬಿದ್ದಿತ್ತೆಂದು ಎನ್ನುವವನನ್ನು ‘ದ್ರೋಹಿ ‘ ಎನ್ನುವ ಅಲ್ಲಮನೇ, ಬಸವಣ್ಣ ಮುಂತಾದವರಿಗೆ ಲಿಂಗಧಾರಣೆ ಮಾಡಿಸುತ್ತಾನೆ. ಈ ವೈರುಧ್ಯವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಎನ್ನುವ ಪ್ರಶ್ನೆ ಏಳುತ್ತದೆ.

ಇದು ಅಲ್ಲಮನ ಕಥೆಯಲ್ಲ. ಮಂಟೇ ಸ್ವಾಮಿಯನ್ನು ಅಲ್ಲನ ರೂಪದಲ್ಲಿ ಕಂಡಿರಿಸಿರುವ ಜಾನಪದ ಕಥೆ. ಜನಪದರಿಗೆ ಬೇಕಾದುದು ಅಮೂರ್ತ‌ ಅದ್ವೈತವಲ್ಲ. ಅಸಹಾಯಕ ಜನಾಂಗದ ಉದ್ಧಾರಕ್ಕೆ ಒಂದು ಅವಲಂಬನೆ ಬೇಕಿದೆ. ಅದಕ್ಕೇ ಅವರಿಗೆ ಪವಾಡಗಳು ಬೇಕು. ಸರ್ವಾಧಿಕಾರಿಯ ಗುಂಡಿಗೆಗೆ ತ್ರಿಶೂಲ ಇಕ್ಕುವ , ಅವರ ಕಣ್ಣನ್ನು ಕೀಳುವ , ಅವರನ್ನು ಬೀದಿಪಾಲು ಮಾಡಬೇಕೆನ್ನುವ‌ ಕನಸು ನನಸಾಗಲೂ ಯಾವುದೋ ಲೋಕದಿಂದ ಅಸಾದೃಶ ಶಕ್ತಿಯ ದೇವ ಮಾನವ ಅವತರಿಸ ಬೇಕು. ಭೂಮಿತಾಯಿಯ ಗೋಳನ್ನು ನಿವಾರಿಸ ಬೇಕು.

ಅದಕ್ಕಾಗಿಯೇ ಶಿಷ್ಟ ಸಮಾಜದ ಎಲ್ಲಾ ನಂಬಿಕೆಗಳೂ ಆಚರಣೆಗಳೂ ನಿಮ್ನ ವರ್ಗದ ನಂಬಿಕೆ ಮತ್ತು ಆಚರಣೆಗಳ‌‌ ನಿಕಷಕ್ಕೆ ಒಡ್ಡಿ‌ಕೊಂಡು ಸೋಲನ್ನಪ್ಪುತ್ತವೆ. ಬಹುತ್ವಕ್ಕೆ‌ ಸಿಕ್ಕ ಗೆಲುವು ಇದು. ಬಹುತ್ವದ ಮಾತುಗಳು ಬಹಳ‌ ಚರ್ಚೆಗೆ ಒಳಗಾಗುತ್ತಿರುವ ಇಂದಿನ ಸಾಮಾಜಿಕ‌ಸ್ಥಿತಿಯಲ್ಲಿ ಮಂಟೇ ಸ್ವಾಮಿ ಕಾವ್ಯ ಪ್ರಸಂಗದ ಮೂಲಕ ಬಹುತ್ವಕ್ಕೆ ಯಶಸ್ಸನ್ನು ತಂದುಕೊಟ್ಟಿದ್ದಾರೆ ಶ್ರೀಪಾದ ಭಟ್ಟರು.

ಮಂಟೇಸ್ವಾಮಿ ನಾಯಕ ಎಂದಾಕ್ಷಣ ಅವನ ಭಜನೆ ಸಹಜವೇ!( hero worship). ಇವನ ಪವಾಡಗಳನ್ನು ವಾಸ್ತವದ ಒರೆಗೆ ತಿಕ್ಕಿ ಬಿಸಾಡುವಂತಿಲ್ಲ. ಯಾಕೆಂದರೆ ಅವನು ಪ್ರತಿನಿಧಿಸುವ ಜನರ ಹಿಂಸೆ ಬವಣೆಗಳು ಅವಾಸ್ತವವಲ್ಲ. ಅದು ಅಂಗೈ ಮೇಲಿನ ಸುಡುವ ಬೆಂಕಿ.

ಈ ಪ್ರಸಂಗ ಪ್ರೇಕ್ಷಕರನ್ನು ಎಷ್ಟು ಪರಿಣಾಮಕಾರಿಯಾಗಿ ಒಂದೂವರೆ ಗಂಟೆಗಳ ಕಾಲ ಹಿಡಿದಿಟ್ಟುಕೊಂಡಿತ್ತೆಂದರೆ, ಸ್ವಲ್ಪ ಹೊತ್ತು ಕುಳಿತು ಹೊರಟು ಬಿಡುವೆ ಎಂದು ಹೇಳುತ್ತಿದ್ದ ಟಿ.ಎನ್. ಸೀತಾರಾಮ್ ಅವರು ನಾಟಕ ಪೂರ್ತಿ ನೋಡಿ, ಮುಗಿದ ಆನಂತರವೂ ಇದಕ್ಕೆ ಕಾರಣರಾದ ಎಲ್ಲರನ್ನು ಅಭಿನಂದಿಸಿ ತೆರಳಿದರು. ಸಿನಿಮಾ ಕಲಾವಿದ ಅಶೋಕ್ “ಈ ಕಲಾವಿದರಿಂದ ತಾನೂ ಕಲಿತು ಕೊಳ್ಳುವುದು ಬಹಳಷ್ಟು ಇದೆ” ಎಂದು ವಿನಯ ಮೆರೆದರು. ರಂಗ ನಿರ್ದೇಶಕಿ ಚಂಪಾಶೆಟ್ಟಿಯವರು, ಮಹಿಳೆಯರಿಗೆ ಪ್ರವೇಶವಿರಲಿಲ್ಲ ಎನ್ನುವ ಕಾರಣಕ್ಕೆ ತಾವು ನೀಲಗಾರರಲ್ಲಿ ಒಬ್ಬರಾಗಲು ಸಾಧ್ಯವಾಗಲಿಲ್ಲ. ಈಗ ಪ್ರಮುಖ ಪಾತ್ರವನ್ನು ಶೊಲೊಮ್ ನಂತಹ ಯುವತಿಯೊಬ್ಬಳು ಮಾಡಿರುವುದು ತಮಗೆ ಹೆಮ್ಮೆ ತರುವ ವಿಷಯ ಎಂದು ಅಭಿಪ್ರಾಯ ಪಟ್ಟರು. ಈ ವಿಷಯದಲ್ಲೂ ಶ್ರೀಪಾದ ಭಟ್ಟರು ದಾಖಲೆಯನ್ನು ಮುರಿದಿದ್ದಾರೆ.

ಈ ಕಾವ್ಯ ಪ್ರಸಂಗದ ಮೂಲಕ ಒಂದು ಅದ್ಭುತ ಲೋಕವನ್ನು ಅನಾವರಣ ಮಾಡಿದ್ದಾರೆ ಶ್ರೀಪಾದ ಭಟ್ಟರು. ಅವರಿಗೆ ಅಭಿನಂದನೆಗಳು.

ಮಂಟೇ ಸ್ವಾಮಿಯೆಂಬ ಜ್ಯೋತಿಯಿಂದ ನೆರೆಮನೆಯ, ಪರಧರ್ಮವ, ಸುಡಬೇಕೋ, ಇಲ್ಲ ಅವನ ಜ್ಯೋತಿಯಿಂದ ಜ್ಯೋತಿಯನ್ನು ಹಚ್ಚುತ್ತಾ ನಮ್ಮೊಳಗಿನ ಅಂಧಕಾರವನ್ನು ನಾವು ಬೆಳಗಿಕೊಳ್ಳಬೇಕೋ ಎನ್ನುವುದನ್ನು ನಾವೇ ನಿರ್ಧಾರ ಮಾಡಬೇಕಾಗಿದೆ.


  • ಗಿರಿಜಾ ಶಾಸ್ತ್ರಿ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW