ಪ್ರೀತಿಯ ‘ಚಿಟ್ಟೆಯ ಬೆನ್ನೇರಿ’ಕೃತಿ ಪರಿಚಯ

ಪ್ರಕೃತಿಯ ಸಹಜ ಸೌಂದರ್ಯದ ನಡುವೆ ಅನುಭವದ ರಸವನ್ನು ಅದ್ದಿ ಅದರಿಂದ ಗೀತೆಗಳನ್ನು ಬರೆಯುವುದರಲ್ಲಿ ನಿಪುಣತೆ ಹೊಂದಿರುವ ಶ್ರೀಮತಿ ಮಂಗಳ ಎಂ ನಾಡಿಗ್ ಅವರು ತಮ್ಮ ಸರಳ ಶೈಲಿಯಲ್ಲಿ ಕವಿತೆಗಳನ್ನು ಬರೆಯುತ್ತಾರೆ. ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಚಿಟ್ಟೆಯ ಬೆನ್ನೇರಿ
ಕವಿಯತ್ರಿ : ಮಂಗಳ ಎಂ ನಾಡೀಗ್
ಪ್ರಕಾಶನ : ಹರಿವು ಬುಕ್ಸ್

ಭಾವ ಕಡಲಿನಲದ್ದಿ
ಮಂಥಿಸುತ ಬರಹವನು
ಅಮೃತವನು ತೆಗೆದಂತೆ ಈ ಹೊತ್ತಗೆ
ಅನುಭವದ ಪುಟ ತಿರುವಿ
ನವ್ಯವು ನವೋದಯವ
ಬೆರೆಸಿ ಬರೆದಿಹ ಕೃತಿಯು ಈ ಹೊತ್ತಗೆ

ಚಿಕ್ಕಮಗಳೂರಿನ ಕೊಪ್ಪ ಗ್ರಾಮದವರಾದ ಶ್ರೀಮತಿ ಮಂಗಳ ಎಂ ನಾಡೀಗ್ ರವರು ಪ್ರಸ್ತುತ ಬೆಂಗಳೂರಿನ ನಿವಾಸಿಗಳು. ಬಾಲ್ಯದಲ್ಲಿಯೇ ಬರಹವನ್ನು ಗೀಳಾಗಿಸಿಕೊಂಡ ಇವರು ಕಾಲೇಜು ದಿನಗಳಲ್ಲಿಯೇ ಹಲವಾರ ಕವಿತೆಗಳನ್ನು ಬರೆದು ಶಿಕ್ಷಕರಿಂದ ಭೇಷ್ ಎನ್ನಿಸಿಕೊಂಡವರು. ಈಗಾಗಲೆ ಸಾಕಷ್ಟು ಕವಿತೆಗಳನ್ನು ನವ್ಯ ಹಾಗು ನವೋದಯ ಮಾದರಿಯಲ್ಲಿ ಬರೆದಿದ್ದು, ಹಲವಾರು ದಿನ ಪತ್ರಿಕೆಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿರುತ್ತವೆ. ಸಾಕಷ್ಟು ಕವಿತೆಗಳು ಗಾಯನದ ರೂಪ ಪಡೆದು ಜನರ ಮನಸ್ಸನ್ನು ಸೂರೆಗೊಳಿಸಿವೆ.

ಪ್ರಕೃತಿಯ ಸಹಜ ಸೌಂದರ್ಯದ ನಡುವೆ ಅನುಭವದ ರಸವನ್ನು ಅದ್ದಿ ಅದರಿಂದ ಗೀತೆಗಳನ್ನು ಬರೆಯುವುದರಲ್ಲಿ ನಿಪುಣತೆ ಹೊಂದಿರುವ ಶ್ರೀಮತಿ ಮಂಗಳ ಎಂ ನಾಡಿಗ್ ಅವರು ತಮ್ಮ ಸರಳ ಶೈಲಿಯಲ್ಲಿ ಕವಿತೆಗಳನ್ನು ಬರೆಯುತ್ತಾರೆ. ಹಾಗು ಓದುಗರಿಗೆ ಸುಲಭವಾಗಿ ಅರ್ಥವಾಗುವಂತಿರುತ್ತವೆ.

ಪ್ರಸ್ತುತ ಪ್ರೀತಿಯ ಚಿಟ್ಟೆಯ ಬೆನ್ನೇರಿ ಕವನ‌ ಸಂಕಲನದಲ್ಲಿ ಸುಮಾರು ಐವತ್ತೊಂದು ಕವಿತೆಗಳಿದ್ದು ಪ್ರತಿ ಕವಿತೆಯು ವಿಭಿನ್ನ ವಿಷಯ ವಸ್ತುವಿನಿಂದ ಕೂಡಿದ್ದು ಒಮ್ಮೆ ಓದಲಾರಂಭಿಸಿದರೆ ಕೊನೆ ಪುಟದ ವರಗೂ ಓದಿಸಿಕೊಂಡೆ ಹೋಗುತ್ತದೆ.

“ಎನ್ನ ಅಂತರಂಗದಲ್ಲೆ
ನಿನ್ನ ಹೊತ್ತು ಮೆರೆಸಿದೆ
ನಿನ್ನ ಕಣ್ಣ ಹೊಳಪಿನಲ್ಲೆ
ಹಣತೆಯು ತಾ ಬೆಳಗಿದೆ”.

ಒಲವ ಧಾರೆ ಎಂಬ ಕವಿತೆಯ ಕೊನೆಯ ಚರಣದಲ್ಲಿ ಮೂಡಿರುವ ಈ ಸಾಲುಗಳು ಕವಯಿತ್ರಿಯ ಭಾವ ಸ್ಫುರಣಕ್ಕೆ ಹಿಡಿದ ಕನ್ನಡಿಯಂತಿದೆ ತನ್ನೊಳಗೆ ಅವಿತ ಭಾವಕ್ಕೊಂದು ಸ್ಫೂರ್ತಿ ಸಿಕ್ಕಾಗ ಅದಕ್ಕೆ ಪ್ರೇರೇಪಿತರಾಗಿ ತನ್ನೊಲವಿನ ತನ್ನ ಪ್ರೀತಿಯನ್ನು ವ್ಯಕ್ತ ಪಡಿಸಿದ ಚರಣ ನಿಜಕ್ಕೂ ಓದುಗರ ಗಮನ ಸೆಳೆಯದೆ ಇರದು.

‘ಒಡಲು ಬೆಂದಿಹ ಭೂಮಿ ತಾಯಿಗೆ
ಮಳೆಯ ಮುತ್ತಿನ ಸಿಂಚನ
ಬಳಲಿ ಬಾಡಿಹ ಎಲೆಗಳಲ್ಲು
ಮೈ ಕೊಡವಿ ಎದ್ದ ಹೊಸತನ”

ಸಾರ್ಥಕ ಎಂಬ ಮೇಲಿನ ಕವಿತೆಯ ಸಾಲುಗಳಲ್ಲಿ ಇಳೆಗೆ ಮಳೆ ಬಿದ್ದು ನಂತರ ಸಂಭವಿಸುವ ಸಂದರ್ಭಗಳನ್ನು ಎಳೆಯೆಳೆಯಾಗಿ ಬಿಡಿಸಿದ್ದಾರೆ.

ಕಾದೊಡಲ ಭೂಮಿಗೆ
ಬಾಧಿಸಿರೆ ಬಿಸಿಯು
ಆದರಿಸಿ ಮಳೆ ಬಿದ್ದು
ತನುವಾಯ್ತು ಇಳೆಯು

ಎನ್ನುವಂತೆ ಪ್ರಕೃತಿಯಲ್ಲಿ ಮಳೆ ಬಿದ್ದು ಭೂಮಿ ತಣಿಯುವ ಸನ್ನಿವೇಶವನ್ನು ಮಳೆಯಿಲ್ಲದೆ ಬಾಡಿದ ಎಲೆಗಳನ್ನು ಉಪಮೆಯಾಗಿ ಬಳಸಿಕೊಂಡು ಮಳೆ ಬಿದ್ದ ನಂತರ ಮೆರುಗುವ ಚೆಲುವನ್ನು ‘ಎದ್ದ ಹೊಸತನ’ವೆಂದು ಬರೆದು ಮೆರುಗು ತಂದಿದ್ದಾರೆ.

“ಕ್ಷಣಕ್ಕೊಂದು ಮಾತು
ಕ್ಷಣಿಕವಾಯಿತು ಈಗ
ಅರ್ಥವಿಲ್ಲದಾ ಮಾತಿಂದ
ವ್ಯರ್ಥವಾಯಿತು ಸಮಯ”

ಮನುಕುಲ ನಿಜವಾಗಿಯೂ ನಿಂತಿರುವುದೇ ಆಡುವ ಮಾತಿನಿಂದ “ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು” ಎನ್ನುವ ಗಾದೆ ಮಾತಿನಂತೆಯೆ ಮಾತಿನ ಮಹತ್ವವನ್ನು ವಿದಾಯ ಎನ್ನುವ ಕವಿತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕಾಲಕ್ಕೆ ತಕ್ಕಂತೆ, ಜನರಿಗೆ ತಕ್ಕಂತೆ ವಾಸ್ತವ ಮಾತು ಬದಲಿಸಬಾರದು ಅದು ನಿರರ್ಥಕವಾಗುತ್ತದೆ, ಯಾವುದೇ ಸಂಬಂಧ ಬಿಗಿಯಾಗಬೇಕಾದರೆ ಮಾತು ಮಹತ್ವಪೂರ್ಣ ಎಂಬುದನ್ನು ವಿದಾಯ ಕವಿತೆಯಲ್ಲಿ ಅರ್ಥಪೂರ್ಣವಾಗಿ ತಿಳಿಸಿದ್ದಾರೆ‌.

“ಕಾಯುತ್ತಿದ್ದಳೆನ್ನ ಮಡದಿ
ಮುಂಬಾಗಿಲ ಬಳಿಯಲೆ
ಮಲ್ಲೆ ಹೂವ ತಾ ಮುಡಿದು
ಮುಗುಳ್ನಗೆಯ ಮೊಗದಲೆ”

ಮುಂಬಾಗಿಲು ಕವಿತೆಯಲ್ಲಿ ಹಗಲೆಲ್ಲ ದುಡಿದು ಸಂಜೆ ಮನೆಗೆ ತಡವಾಗಿ ಬರುವ ಗಂಡನನ್ನು ನೆನೆದು ತವಕಿಸುವ ದೃಶ್ಯ ಅತ್ಯಂತ ವೈಭವವಾಗಿ ಚಿತ್ರಿಸಿದ್ದಾರೆ. ತನ್ನ ಗಂಡನ ಮೈ ದಣಿವನ್ನು ಹೋಗಲಾಡಿಸಲು ತಾನು ಸಿದ್ದಳಾಗಿ ಮಲ್ಲೆ ಹೂ ಮುಡಿದು ನಗುವಿನ ಮೊಗದೊಂದಿಗೆ ಎದುರಾದಾಗ ಎಂತಹ ಗಂಡನಿಗು ತನ್ನ ದಣಿವು ಒಮ್ಮೆಲೆ ಮಾಯವಾಗಿಬಿಡುತ್ತದೆ ಇಂತಹ ಅಮೋಘ ಭಾವದ ಸಾಲುಗಳನ್ನು ನೀವೂ ಓದಬೇಕೆಂದರೆ ಪ್ರೀತಿಯ ಚಿಟ್ಟೆಯ ಬೆನ್ನೇರಿ ಕವನ ಸಂಕಲನವನ್ನು ಓದಿ.

ಕವಯಿತ್ರಿಯ ಎಲ್ಲ ಕವಿತೆಯಲ್ಲಿಯೂ ಬರಹದ ಹಿಡಿತವಿದ್ದು ತಮ್ಮ ಮೊದಲ ಕವನ ಸಂಕಲನದಲ್ಲೆ ಅನುಭವಿ ಕವಯಿತ್ರಿಯಂತೆ ಬರೆದಿದ್ದಾರೆ. ಇನ್ನೂ ಇವರಿಂದ ಹಲವಾರು ಕೃತಿಗಳು ಮೂಡಿ ಬರಲೆಂದು ಹಾರೈಸುವೆ.


  • ಚನ್ನಕೇಶವ ಜಿ ಲಾಳನಕಟ್ಟೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW