ಮನುಷ್ಯ ಇರಬೇಕು… ಆಸರೆ ನೀಡಿದವರ ನೆನಪು ಮಾಡಿಕೊಂಡು,ಮನುಷ್ಯ ಇರಬೇಕು… ಕುಸಿದು ಬೀಳುವಾಗ ಕೈ ಹಿಡಿದವರನ್ನು ನೆನೆಯಬೇಕು ಎನ್ನುವ ಅರ್ಥಭರಿತ ಅದ್ಬುತ ಸಾಲುಗಳನ್ನು ಕವಿ ವೈ.ಎಂ.ಯಾಕೊಳ್ಳಿ ತಮ್ಮ ಕವನದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ.ಮುಂದೆ ಓದಿ…
ಎಲ್ಲೋ ಹೋಗಿರುವ ಮಳೆಯ ಮಾತು
ಎಲ್ಲರೂ ಆಡುತ್ತೇವೆ ಅದಕ್ಕೇನು
ಪರಿವೆ ಇಲ್ಲ ನಮ್ಮ ಬಗೆಗೆ
ನಮ್ಮ ಹಿರಿಯರನ್ನೇ ನಾವು ಮರೆತಿರುವಾಗ
ಅದು ನಮ್ಮನ್ನಾದರೂ ನೆನಪಿಸಿತು ಹೇಗೆ
ಇದ್ದೇ ಇದೆ ನಮಗೆಲ್ಲ ಋಣಭಾರ ಒಂಟಿಯಾಗಿ
ಬೆಳೆದಿಲ್ಲ ಯಾವುದೇ ಮರ
ಬೀಜ ಬಿತ್ತಿದವರಾರೋ,ನೀರನೆರೆದವರು ಯಾರೊ
ಕೊನೆಗೆ ಬೇಲಿ ಹಚ್ಚಿ ಕಾವಲು ಕಾದವರ ನೆನಪೂ ಇಲ್ಲ
ಇರಬೇಕು ಆಸರೆ ನೀಡಿದವರ ನೆನಪು
ಕುಸಿದು ಬೀಳುವಾಗ ಕೈ ನೀಡಿ ಎತ್ತರಿಸಿದವರಿಗೊಂದು
#ಕೃತಜ್ಞತೆಯ ನೋಟ
ಇಲ್ಲದಿರೆ ನಾವಾದೆವು ಸ್ವಾರ್ಥಮಯ ಕೂಟ
ನೀಡಿದವರ,ನೀಗಿದವರಿಗೆ ಪ್ರತಿಯಾಗಿ ಸಲ್ಲಿಸದಿರೆ
ಕೃತಜ್ಞತೆಯ ನಾವು ಸಲ್ಲುವದಿಲ್ಲ ಇಲ್ಲಿಯೂ ಅಲ್ಲಿಯೂ
ಉಪಕಾರ ನೆನೆಯುವದು ಮರೆತಾವೆ ಈ ಭೂಮಿ
ಆ ಬಾನು ಎಂದಾದರೂ
ಈ ಮಾತು ಮರೆತ ನಮಗೆ ಎಲ್ಲಿದೆ ಮಳೆಯ ಶಪಿಸುವ
ಅಧಿಕಾರ
ಅಂತೆಯೇ ಈಗ ಎಲ್ಲೆಲ್ಲಿಯೂ ನೀರಿಗೂ ಪ್ರೇಮಕೂ ಬಂದಿದೆ ಸಂಚಕಾರ
- ಡಾ. ವೈ.ಎಂ.ಯಾಕೊಳ್ಳಿ (ಹಿರಿಯ ಸಾಹಿತಿಗಳು, ಚಿಂತಕರು )ಸವದತ್ತಿ
