“ಮರಸುತ್ತು” ಇಂತಹದ್ದೊಂದು “ಕಾಯಿಲೆ” ಇರುತ್ತದೆ ಎಂದು ಅನೇಕರು ಊಹಿಸಿರಲಿಕ್ಕಿಲ್ಲ!. ಪಶು ವೈದ್ಯರಾದ ಡಾ.ಎನ್.ಬಿ.ಶ್ರೀಧರ ಮರಸುತ್ತು ಕಾಯಿಲೆಯ ಕುರಿತು ಓದುಗರ ಮುಂದೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಇಂತಹದ್ದೊಂದು “ಕಾಯಿಲೆ” ಇರುತ್ತದೆ ಎಂದು ಅನೇಕರು ಊಹಿಸಿರಲಿಕ್ಕಿಲ್ಲ!. ಅದರ ವಿವರ ನೀಡುವೆ. ಪಶುವೈದ್ಯನಾಗಿ ಕೆಲಸ ನಿರ್ವಹಿಸುತ್ತಿದ್ದಾಗ ಅದೊಂದು ದಿನ ಮಧ್ಯಾಹ್ನ ಗೋಪಾಲಕರೊಬ್ಬರ ದೂರವಾಣಿ ಕರೆ. `ಡಾಕ್ಟ್ರೇ! ನಮ್ಮ ಎಮ್ಮೇನ ಮೇಯೋಕೆ ಅಂತ ಬೆಟ್ಟಕ್ಕೆ ಬಿಟ್ಟಿದ್ದೆ. ಈಗ ತಾನೇ ಅದು ಮನೆಗೆ ಬಂತು, ನೋಡಿದ್ರೆ ಅದರ ಬಾಲ ಮುಕ್ಕಾಲು ಭಾಗ ತುಂಡಾಗಿಬಿಟ್ಟಿದೆ. ರಕ್ತ ಭಾರಿ ಸೋರ್ತಾ ಇದೆ. ಸ್ವಲ್ಪ ಬಂದು ಟ್ರೀಟ್ಮೆಂಟ್ ಮಾಡ್ಬೇಕಿತ್ತಲ್ಲಾ”.
ಅಲ್ಲಿ ಹೋಗಿ ನೋಡಿದರೆ ಗುಂಡು ಗುಂಡಾಗಿರುವ ಎಮ್ಮೆಯ ಬಾಲ ರಕ್ತ ಸಿಕ್ತವಾಗಿದ್ದು, ಅದನ್ನು ಪದೇ ಪದೇ ಮೈಮೇಲೆ ಎಳೆದು ಹೊಡೆದುಕೊಂಡಿದ್ದರಿಂದ ಎಮ್ಮೆಯ ಶರೀರವೆಲ್ಲಾ ರಕ್ತಮಯವಾಗಿತ್ತು. ಮೊದಲೇ ಗಾಬರಿ ಸ್ವಭಾವದ ಎಮ್ಮೆ ನನ್ನನ್ನು ಕಂಡ ಕೂಡಲೇ ಯಕ್ಷಗಾನದಲ್ಲಿ ಗಿರಗಿಟ್ಟಿ ಹೊಡೆಯುವಂತೆ ನರ್ತನ ಆರಂಬಿಸಿತು. ಅದರ ಮೊಂಡಾದ ಬಾಲದಿಂದ ಪ್ರೋಕ್ಷಣೆಗೊಂಡ ರಕ್ತ ಮತ್ತು ಮೂತ್ರ ಬೆರೆತ ವಿಚಿತ್ರವಾದ ವಾಸನೆಯ ಕಮಟು ದ್ರವ ನನ್ನ ದಿರಿಸನ್ನು ಒದ್ದೆ ಮಾಡಿದರೂ ಬಿಡದೇ ಎಮ್ಮೆಯನ್ನು ಕಟ್ಟಿಸಿ, ಅದರ ಬಾಲದ ಗಾಯಕ್ಕೆ ಹೊಲಿಗೆ ಹಾಕಿ,ಬ್ಯಾಂಡೇಜ್ ಕಟ್ಟಿ ಅವಶ್ಯಕ ಚುಚ್ಚುಮದ್ದು ನೀಡಿ ಬಂದೆ.

ಫೋಟೋ ಕೃಪೆ : ಗೂಗಲ್
ಮತ್ತೊಂದು ಮನೆಗೆ ಚಿಕಿತ್ಸೆಗೆ ಹೋದಾಗ ಒಂದು ಮೊಂಡು ಬಾಲದ ಎಮ್ಮೆ ಕಟ್ಟಿದ್ದರು. ನಮ್ಮ ಬೈಕಿನ ಶಬ್ಧ ಕೇಳಿಯೇ ಕೆರಳಿದ ಸರ್ಪದ ತರ ಬುಸುಗುಡುತ್ತಾ ನಿಂತಿತ್ತು ಎಮ್ಮೆ. ಮೋಟು ಬಾಲದ ಎಮ್ಮೆ ಅದರ ಮೊಂಡು ಬಾಲದ ಬುಡವನ್ನು ಮನುಷ್ಯನ ಬೆರಳಿನಂತೆ ಸುರುಳಿ ತಿರುಗಿಸುತ್ತಾ ಇಲ್ಲದ ಬಾಲದಿಂದ ಬಾಲ ಕಟ್ಟಾದ ಡಾಬರ್ಮನ್ ನಾಯಿಯ ತರ ನೊಣ ಓಡಿಸೋ ಪ್ರಯತ್ನ ಮಾಡ್ತಾ ಇತ್ತು. “ ಏನಾಯ್ತ್ರೀ ಈ ಎಮ್ಮೆ ಬಾಲಕ್ಕೆ ?” ಎಂದೆ. ನಮ್ಮನೇ ದನಕ್ಕೆ ಮರಸುತ್ತಾಗಿತ್ತು ಡಾಕ್ಟ್ರೇ…. ಅದಕ್ಕೆ ಅದನ್ನು ಕಾಯುವ ಎಣ್ಣೆಯಲ್ಲಿ ಅದ್ದಿ ಕತ್ತಿಯಿಂದ ಕಟ್ ಮಾಡಿ ಅಂದಿದ್ರು.. ಮಾಡ್ಸಿದೆ.. ಅನ್ನ ಬೇಕೆ ರಣವೈದ್ಯದ ವಿವರ ನೀಡಿದ ಮಹಿಷ ಮಾಲಕ ಮಹಾಶಯ !!
ನಾನಿನ್ನೂ ಶಿವಮೊಗ್ಗದ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರದ ಮುಖ್ಯಸ್ಥನಾಗಿ ಬಂದುದರ ಹೊಸದು. ಈ ನಿಗೂಢ ಕಾಯಿಲೆಗಳ ಪಟ್ಟಿ ನೋಡುತ್ತಿದ್ದಾಗ ಈ “ಮರಸುತ್ತು” ಅದರಲ್ಲಿತ್ತು. ಅದರ ಜಾಡು ಹಿಡಿದು ಸಿರ್ಸಿಗೆ ಹೊರಟೆ. ಸಿರ್ಸಿಯ ಹಿರಿಯ ಪಶುವೈದ್ಯ ಸ್ನೇಹಿತರನೇಕರಿಗೂ ನನಗೂ ಈ ವಿಷಯದ ಬಗ್ಗೆ ಜಿಜ್ಞಾಸೆ ನಡೆದಿತ್ತು. ಜಾನುವಾರು ಮತ್ತು ಎಮ್ಮೆಗಳಲ್ಲಿ ಈ “ಮರಸುತ್ತು” ಎಂಬ ನಿಗೂಢವಾದ ಕಾಯಿಲೆಯ ಕಾರಣವನ್ನು ತಿಳಿಯಲೇ ಬೇಕಿತ್ತು. ಈ ಕಾಯಿಲೆಯಲ್ಲಿ ಕಾಡಿನಲ್ಲಿನ ಯಾವುದೋ ಮರವೊಂದು ಒಂದು ರೀತಿಯ “ನರಭಕ್ಷಕ” ವಾಗಿ ಮಾರ್ಪಾಟುಗೊಂಡ ಮರವೊಂದು ಉದಯವಾಗಿ ಜಾನುವಾರುಗಳು ಅದರ ಹತ್ತಿರ ಹೋದ ಕೂಡಲೇ “ಲಬಕ್” ಅಂತ ಅವುಗಳ ಬಾಲವನ್ನೇ “ಸ್ವಾಹಾ” ಮಾಡಿ ಅವುಗಳನ್ನು ಮೊಂಡು ಬಾಲದ ದನಗಳನ್ನಾಗಿ ಮಾರ್ಪಡಿಸುತ್ತವೆ ಎಂಬುದು ಆ ಭಾಗದ ಅನೇಕ ಗೋಪಾಲಕರ ಮಾತು. ದನ ಅಥವಾ ಎಮ್ಮೆ ಕೊಟ್ಟಿಗೆಗೆ ಬರುವಾಗ ರಕ್ತ ಸಿಕ್ತ ಬಾಲದೊಂದಿದೆ ಬಂದವು ಅಂದರೆ ಅದರ ಬಾಲವನ್ನು “ಮರ” ತಿಂದಿದೆ ಎಂದು ತಿಳಿದು ರಣವೈದ್ಯದಿಂದ ಹಿಡಿದು ಪಶುವೈದ್ಯದ ತನಕ ಅದಕ್ಕೆ ತರಹೇವಾರಿ ಚಿಕಿತ್ಸೆ ಮಾಡುವುದು ವಾಡಿಕೆಯಾಗಿ ಬಿಟ್ಟಿತ್ತು. ಬಹಳ ವಿಶ್ವಾಸಿ ಗೋಪಾಲಕರು ಹೇಳಿದ್ದರಿಂದಲೋ ಬಹುತೇಕ ಪಶುವೈದ್ಯರು ಸಹ ಇದನ್ನೇ ನಂಬಿದ್ದರು. ನನಗೋ ಒಂದು “ಮರ” ಮಾಂಸಾಹಾರಿಯಾಗಿ ಪರಿವರ್ತನೆಗೊಂಡು ಪುಷ್ಕಳ ಮಾಂಸ ಹೊಂದಿದ ತೊಡೆ, ಎದೆಗುಂಡಿಗೆ ಇತ್ಯಾದಿ ಪಾರ್ಟುಗಳನ್ನು ಬಿಟ್ಟು ಅತಿ ಕಡಿಮೆ ಮಾಂಸವಿರುವ “ಬಾಲ” ದಂತ ಅಂಗವನ್ನು ಖಂಡಿತಾ ಮರ ಹಿಡಿಯಲಾರದು ಎಂಬ ನಂಬುಗೆ ಇತ್ತು!!. ಅಥವಾ “ಗಾಳಿ ಪಟ” ಸಿನಿಮಾದಲ್ಲಿ ನಾಯಕ ಗಣೇಶ್ ಅನಂತ್ನಾ ಗ್ ಹಂದಿಯ ಬೇಟೆಗೆ ಹೊರಟಾಗ ಅದರ “ಬಾಲ” ದ ಮಾಂಸದ ಮಾಂಸವನ್ನು ನೆನಪಿಸಿಕೊಂಡು ಬಾಯಲ್ಲಿ ನೀರು ತರಿಸಿಕೊಂಡ ಹಾಗೇ ದನದ ಬಾಲಕ್ಕೆ ಆಸೆ ಪಡುವ ಮರಗಳು ಇರಬಹುದಲ್ಲ ಅನಿಸಿದ್ದು ಕಾಕತಾಳೀಯ!!.

ಫೋಟೋ ಕೃಪೆ : ಗೂಗಲ್
ಇದೆಲ್ಲ ಬರಿ ಬುರುಡೆ ಎಂದು ಅಂದುಕೊಂಡೇ ಈ ಕಾಯಿಲೆಯ ಬೆನ್ನು ಹತ್ತಿದಾಗ ಗೊತ್ತಾಗಿದ್ದು ಅನೇಕ ಕುತೂಹಲದ ವಿಷಯಗಳು. ಎಲ್ಲೆಲ್ಲಿ ಮರಸುತ್ತು ಆಗಿದೆಯೋ ಅದರ ಸಂಪೂರ್ಣ ವಿವರ ಪಡೆಯಲು ಪ್ರಾರಂಭಿಸಿದೆ.
ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಭಾಗದ ಮಲೆನಾಡಿನ ಬಹುತೇಕ ರೈತರೆಲ್ಲರಿಗೂ ಜಾನುವಾರುಗಳ “ಮರಸುತ್ತಿ” ನ ಬಗ್ಗೆ ಗೊತ್ತು. ಆಸ್ಟ್ರೇಲಿಯಾದ ಉತ್ತರ ಭಾಗದ ಅನ್ನಾಬುರೋ ಸ್ಟೇಶನ್ ಎಂಬಲ್ಲಿಯೂ ಸಹ ಮರಸುತ್ತಿನ ಪ್ರಕರಣಗಳು ವರದಿಯಾಗಿದೆ. ನಮ್ಮಲ್ಲಿ ಇದಕ್ಕೆ ಹಲವಾರು ವಿಧದ ಕಥೋಪಾಖ್ಯಾನಗಳು ಚಾಲ್ತಿಯಲ್ಲಿದ್ದವು. ಕೆಲವರ ಪ್ರಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬರುವ ಕಳ್ಳತನ ಮಾಡುವ “ಬೂರೆ” ಹಬ್ಬದ ದಿನದಂದು ಅಥವಾ “ ಖಗ್ರಾಸ ಗ್ರಹಣ”ದಂದು ಮೊಳಕೆ ಒಡೆದ ಯಾವುದೇ ಜಾತಿಯ ಗಿಡವಿರಲಿ ಅದಕ್ಕೆ ಈ ವಿಸ್ಮಯ ಶಕ್ತಿ ಬರುತ್ತದೆ ಎಂದು ಅಂಬೋಣ! ಈ “ಮರಸುತ್ತು” ಹಿಡಿದುಕೊಂಡ ಸಂದರ್ಭದಲ್ಲಿ ಅದರಿಂದ ತೊಂದರೆಗೊಳಗಾದ ಹಸು ಅಥವಾ ಎಮ್ಮೆಯನ್ನು ಪಾರು ಮಾಡಲು ಕಬ್ಬಿಣದ ಕತ್ತಿಯಿಂದ ಆ ಮರಕ್ಕೆ ಒಂದು ಕಚ್ಚನ್ನು “ಕಚಕ್” ಎಂದು ಕುರಿಯ ರುಂಡ ಹಾರಿಸಿದಂತೆ ಹಾಕಬೇಕಂತೆ!. ಆಗ ಮರವು ಬಾಲವನ್ನು ಬಿಟ್ಟುಬಿಡುತ್ತದಂತೆ. ಆದರೆ ಮರವು ತಾನೇ ಹಿಡಿದುಕೊಂಡಿದ್ದನ್ನು ಪ್ರತ್ಯಕ್ಷ ಕಂಡವರೂ ಇಲ್ಲ. ಅದಕ್ಕೆ ಕತ್ತಿಯಿಂದ ಏಟು ಹಾಕಿ ಬಿಡಿಸಿದವರೂ ಇಲ್ಲ!. ಅಂತೆ ಕಂತೆಗಳ ಈ ರೀತಿ ಯೇತಿ ಪ್ರೇತಿಗಳನ್ನು ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಹೋಗಿತ್ತು.

ಫೋಟೋ ಕೃಪೆ : ಗೂಗಲ್
ಹೀಗಿದ್ದಾಗ ಒಂದು ಹೃದಯ ವಿದ್ರಾವಕ ಸುದ್ಧಿ ಬಂದಿತು. ಒಂದು ಉತ್ತಮ ಜರ್ಸಿ ಜಾನುವಾರೊಂದು ಮರಸುತ್ತಿನಿಂದ ಸ್ಥಳದಲ್ಲೇ ಮರಣ ಹೊಂದಿದೆ ಎಂದು. ಯಾವುದೇ ಕಾರಣಕ್ಕೂ ಅಲ್ಲೇ ದನ ಇರಲಿ. ತೆಗೆಯಬೇಡಿ ಎಂದು ಸ್ಥಳಕ್ಕೆ ಧಾವಿಸಿದೆ. ಅಲ್ಲಿತ್ತು ಮರಸುತ್ತಿನ ಗುಟ್ಟು ರಟ್ಟು. ಕಟ್ಟು ಮಸ್ತಾದ ಜರ್ಸಿ ಆಕಳೊಂದರ ಬಾಲ ಗಿಡವೊಂದಕ್ಕೆ ಕಚ್ಚಿಕೊಂಡಿತ್ತು. ಜಾನುವಾರು ಅದರಿಂದ ತಪ್ಪಿಸಿಕೊಳ್ಳಲು ಶಕ್ತಿ ಮೀರಿ ಒದ್ದಾಡಿದ ಗುರುತಾಗಿ ಮಣ್ಣಿನಲ್ಲಿ ದೊಡ್ಡ ಹೊಂಡವೇ ಬಿದ್ದಿತ್ತು. ತಪ್ಪಿಸಿಕೊಳ್ಳಲು ಹೆಣಗಾಡಿ ಸಾಧ್ಯವಾಗದೇ ಜಾನುವಾರು ಸತ್ತಿದೆ ಎಂದು ತಿಳಿದು ಬಂತು. ಸರಿ.. ಆ ಮರ ಬಾಲವನ್ನು ಹಿಡಿದ್ದ್ಯಾಕೆ? ಅದಕ್ಕೆ “ ಅತಿಮಾನುಷ” ಶಕ್ತಿ ಇದೆಯೋ ಎಂದು ತಿಳಿಯಲು ಮತ್ತೊಂದು ದನವನ್ನು ತಂದು ಹತ್ತಿರ ಬಿಟ್ಟರೂ ಬಾಲದ ಸಹವಾಸಕ್ಕೆ ಬರಲಿಲ್ಲ. ಕೊನೆಗೂ ರಹಸ್ಯ ಬಯಲಾಯ್ತು.
ಮರವು ಬಾಲ ತುಂಡಾಗುವ ಘಟನೆಯನ್ನು ವಿಶ್ಲೇಷಿಸಿದಾಗ ಮರಕ್ಕೆ ಅಂಥದ್ದೇನೂ ಅತಿಮಾನುಷ ಶಕ್ತಿ ಇಲ್ಲ ಎಂಬುದು ತಿಳಿಯುತ್ತದೆ. ಇದರಲ್ಲಿ ತಪ್ಪು ಜಾನುವಾರಿನದ್ದೇ ಹೊರತು ಪಾಪದ ಮರದ್ದಲ್ಲ.
ಪಶ್ಚಿಮ ಘಟ್ಟದ ಮಲೆನಾಡು ಪ್ರದೇಶದಲ್ಲಿ ಕಾಡಿಗೆ ಮೇಯಲು ಬಿಟ್ಟ ಜಾನುವಾರು ಮನೆಗೆ ಮರಳಿದಾಗ ಅದರ ಬಾಲ ನಿಗೂಢವಾಗಿ ತುಂಡಾಗಿರುತ್ತದೆ. ಯಾವುದೋ ಜಾತಿಯ ವಿಶೇಷ ಶಕ್ತಿ ಹೊಂದಿದ ಮರ ಅಥವಾ ಗಿಡವು ತನ್ನ ಬಳಿ ಬಂದ ಜಾನುವಾರುಗಳ ಬಾಲವನ್ನು ಹಿಡಿದು ತುಂಡರಿಸುತ್ತದೆ ಎಂದು ಜನ ನಂಬುತ್ತಾರೆ. ಇದನ್ನೇ ಮರಸುತ್ತು ಎನ್ನುತ್ತಾರೆ.ಆದರೆ ಇದರಿಂದ ಜಾನುವಾರುಗಳ ಪ್ರಾಣಕ್ಕೇನೂ ಅಪಾಯವಿಲ್ಲ ಎಂದು ಕಳೆದ ಹಲವಾರು ವರ್ಷಗಳಿಂದ ಮಲೆನಾಡಿನಲ್ಲಿ ಕೆಲಸ ಮಾಡಿದ ಅನುಭವದಿಂದ ಅನೇಕ ಪಶುವೈದ್ಯರು ಹೇಳುತ್ತಾರೆ. ಅನೇಕ ಪಶುವೈದ್ಯರು ಇಂತಹ ಅನೇಕ ಜಾನುವಾರುಗಳನ್ನು ಚಿಕಿತ್ಸೆ ಮಾಡಿದ ಅನುಭವ ಹೇಳಿ ಆ ಕುರಿತ ಛಾಯಾ ಚಿತ್ರಗಳನ್ನೂ ಸಹ ಹಂಚಿಕೊಂಡರು.

ಫೋಟೋ ಕೃಪೆ : ಗೂಗಲ್
ಈ ರೀತಿ ಬಾಲ ತುಂಡಾದಾಗ ಜಾನುವಾರು ಅಸಾಧ್ಯ ನೋವು ಅನುಭವಿಸುತ್ತದೆ. ಬಾಲವಿಲ್ಲದೇ ಅದರ ಅಂದ ಕೆಡುತ್ತದೆ. ಬಾಲ ಇರುವುದೇ ದೇಹದ ಮೇಲಿನ ಕ್ರಿಮಿಕೀಟಗಳನ್ನು ಓಡಿಸಲು. ಅಲ್ಲದೇ ದೇಹದ ಬ್ಯಾಲನ್ಸ್ ಕಾಪಾಡಿಕೊಳ್ಳಲೂ ಸಹ ಬಾಲ ಅತ್ಯವಶ್ಯ. ತನ್ನ ಬಾಲದಿಂದ ನೊಣ ಇತ್ಯಾದಿಗಳನ್ನು ಓಡಿಸಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ದೇಹದ ಮೇಲೆ ಕಜ್ಜಿ, ಗಾಯ, ಹುಳುಗಳು ಆಗುವ ಸಾಧ್ಯತೆ ಹೆಚ್ಚು. ಬಾಲವಿಲ್ಲದ ದನಕ್ಕೆ ಮಾರುಕಟ್ಟೆ ಮೌಲ್ಯವಿಲ್ಲ.
ಮರಸುತ್ತಿನಲ್ಲಿನ ಎಲ್ಲಾ ವಿದ್ಯಮಾನಗಳನ್ನು ಗಮನಿಸಿ ಘಟನೆಗಳನ್ನು ಜೋಡಿಸುತ್ತಾ ಹೋದಾಗ ಸಿಕ್ಕಿದ್ದು ಒಂದು ಸಮಗ್ರ ಚಿತ್ರಣ ಈ ಮರಸುತ್ತು ದನಗಳಿಗಿಂತ ಎಮ್ಮೆಗಳಲ್ಲಿ ಜಾಸ್ತಿ. ಎಮ್ಮೆಗಳಿಗೆ ನೀರಿನಲ್ಲಿ ಬಿದ್ದು ಹೊರಳಾಡುವುದೆಂದರೆ ತುಂಬಾ ಇಷ್ಟ. ರಾಡಿ ನೀರು (ಅರಲು) ತುಂಬಿದ ಹೊಂಡವಿದ್ದರಂತೂ ಸ್ವರ್ಗ ಸಮಾನ. ಈ ಎಮ್ಮೆ ಮೇಯಲು ಹೋದಾಗ ಅಲ್ಲಿ ಕಂಡ ರಾಡಿ ನೀರಿನ ಹೊಂಡದಲ್ಲಿ ಮಲಗಿ ಹೊರಳುತ್ತವೆ.
ಸಾಮಾನ್ಯವಾಗಿ ಚಿಕ್ಕ ಕಾಂಡದ ಮರಗಳೇ ಮರಸುತ್ತು ಉಂಟು ಮಾದುವುದು. ಏಕೆಂದರೆ ಜಾನುವಾರುಗಳು ಕಾಡಿನಲ್ಲಿ ಓಡಾಡುವಾಗ ಬಾಲವನ್ನು ನೊಣ ಸೊಳ್ಳೆಗಳನ್ನು ಓಡಿಸಲು ಆಗಾಗ ಹೊಡೆದು ಕೊಳ್ಳುತ್ತಾ ಇರುವುದು ಅವುಗಳ ಸಹಜ ಗುಣಧರ್ಮ.
ಹೀಗೆ ಮಾಡುವಾಗ ಬಾಲ ಗಿಡದ ಸುತ್ತಲೂ ಒಂದು ಸುತ್ತು ಸುತ್ತಿಕೊಳ್ಳುತ್ತದೆ. ಗಿಡದ ತೊಗಟೆ ಒರಟಾಗಿರುವುದರಿಂದ ಮತ್ತು ಬಾಲಕ್ಕೆ ಹಸಿ ಮಣ್ಣಿನ ರಾಡಿ ಮೆತ್ತಿಕೊಂಡಿರುವುದರಿಂದ ಗಿಡಕ್ಕೆ ಸುತ್ತಿದ ಬಾಲವು ತಕ್ಷಣದೇ ಬಿಡದೇ ಹಿಡಿದುಕೊಂಡು ಬಿಟ್ಟಿದೆ. ಬಾಲದ ತುದಿಯಲ್ಲಿ ರೋಮಭರಿತ ಕುಚ್ಚು ಇರುವುದರಿಂದ ಈ ಹಿಡಿದುಕೊಳ್ಳುವಿಕೆ ಇನ್ನೂ ಗಟ್ಟಿಯಾಗುತ್ತದೆ.
ಮರಸುತ್ತು ಹಿಡಿಯಲು ಇಂತಹದೇ ಜಾತಿಯ ಗಿಡ ಮರ ಆಗಬೇಕೆಂದಿಲ್ಲ. ಈ ಮರ ಯಾವ ಗ್ರಹಣ ಕಾಲದ ಅಥವಾ ಹಬ್ಬದ ಕಾಲದಲ್ಲಿ ಹುಟ್ಟಬೇಕೆಂದೂ ಇಲ್ಲ. ಇದೊಂದು ಶುದ್ಧ ಮೂಢನಂಬಿಕೆ. ಕಾಂಡದ ಸುತ್ತಲೂ ಬಾಲವು ಒಂದೆರಡು ಸುತ್ತು ಸುತ್ತಲು ಬರುವಷ್ಟು ಸುತ್ತಳತೆಯ ಮರ ಅಗತ್ಯ. ಬಹಳ ದಪ್ಪನೆಯ ಮರವಾದರೆ ಬಾಲ ಇಡೀ ಮರದ ಸುತ್ತಲೂ ಬರಲಾರದು. ಆಗ ಹಿಡಿದುಕೊಳ್ಳುವ ಸಂಭವವಿಲ್ಲ. ಗಿಡದ ತೊಗಟೆ ಕೊಂಚ ಒರಟಾಗಿರುವುದೂ ಅಗತ್ಯ. ಒರಟಾದ ತೊಗಟೆಗೆ ಬಾಲದ ಕುಚ್ಚಿನಲ್ಲಿರುವ ಕೂದಲುಗಳು ಸುಲಭವಾಗಿ ಹಿಡಿದುಕೊಳ್ಳುತ್ತದೆ. ಜಾನುವಾರಿನ ಬಾಲಕ್ಕೆ ಇರುವ ಮಣ್ಣಿನ ರಾಡಿ ಅಂಟಿನಂತೆ ಕೆಲಸ ಮಾಡುತ್ತದೆ ಅಥವಾ ಜಾನುವಾರು ಮೈ ತುರಿಸಿಕೊಳ್ಳಲು ಮರಕ್ಕೆ ಉಜ್ಜುತ್ತ ನಿಂತಾಗ ಅಲ್ಲಿ “ಸ್ಥಿರ ವಿದ್ಯುತ್” ಉತ್ಪಾದನೆಯಾಗುತ್ತದೆ. ಇದರಿಂದಾಗಿ ಬಾಲ ಮರಕ್ಕೆ ಹಿಡಿದುಕೊಳ್ಳುತ್ತದೆ.

ಫೋಟೋ ಕೃಪೆ : ಗೂಗಲ್
ತನ್ನ ಬಾಲ ಮರಕ್ಕೆ ಅಂಟಿಕೊಂಡು ಬಿಟ್ಟಿದ್ದರಿಂದ ಸಹಜವಾಗಿಯೇ ಜಾನುವಾರು ಗಾಬರಿಗೊಂಡು ಕೊಸರಾಡಿ ಕೊಳ್ಳುತ್ತದೆ. ಬಾಲವನ್ನು ತಪ್ಪಿಸುವ ರಭಸದಲ್ಲಿ ಗಿಡದ ಸುತ್ತಲೂ ಒಂದು ಸುತ್ತು ತಿರುಗಿರಲೂಬಹುದು.
ಈ ಕೊಸರಾಟದಲ್ಲಿ ಬಾಲವು ಬಿಡಿಸಿಕೊಳ್ಳುವುದರ ಬದಲು ಒಂದು ಸುತ್ತಿನ ಮೇಲೆ ಇನ್ನೊಂದು ಸುತ್ತು ಬಂದು ಲಾಕ್ ಆಗಿ ಬೀಡುತ್ತದೆ. ಇನ್ನೂ ಗಾಬರಿಯಿಂದ ತನ್ನ ಬಾಲವನ್ನು ಎಳೆಯುತ್ತಿದ್ದಂತೆ ಈ ಬಂಧನ ಇನ್ನೂ ಬಿಗಿಗೊಳ್ಳುತ್ತಾ ಬರುತ್ತದೆ. ಬಾಲ ಭದ್ರವಾಗಿ ಮರಕ್ಕೆ ಹಿಡಿದಿದ್ದರಿಂದ ಜಾನುವಾರು ಇನ್ನೂ ಗಾಬರಿಯಾಗಿ ತಪ್ಪಿಸಿಕೊಳ್ಳಲು ಜೋರಾಗಿ ಎಳೆದೂ ಎಳೆದೂ ಪ್ರಯತ್ನಿಸುತ್ತದೆ. ಈ ಜಗ್ಗಾಟದಲ್ಲಿ ಕೆಲವೊಮ್ಮೆ ಬಾಲವೇ ತುಂಡಾಗುತ್ತದೆ. ಬುಡದವರೆಗೂ ಸುತ್ತಿಕೊಂಡರೆ ಬಾಲ ತುಂಡಾಗದಿರುವುದರಿಂದ ಕೊಸರಾಡಿ ಕೊಸರಾಡಿ ಜಾನುವಾರುಗಳು ಜೀವಕ್ಕೇ ಅಪಾಯ ತಂದುಕೊಳ್ಳುತ್ತವೆ. ಅಳಿದುಳಿದ ಬಾಲದೊಂದಿಗೆ “ಬದುಕಿದೆಯಾ ಬಡಜೀವವೇ” ಅನ್ನುತ್ತ ತುಂಡಾದ ಬಾಲದಿಂದ ರಕ್ತ ಸುರಿಸುತ್ತಾ ಜಾನುವಾರುಗಳು ಮನೆಗೆ ಓಡಿಬರುತ್ತವೆ!
ಜಾನುವಾರುಗಳ ಬಾಲವೇನೂ ಸುಮ್ಮನೆ ಎಳೆದಾಕ್ಷಣಕ್ಕೆ ತುಂಡಾಗುವಂಥದ್ದಲ್ಲ. ಬೆನ್ನು ಹುರಿಯ ಮೂಳೆಯ ಕೊಂಡಿಗಳು ಬಲವಾದ ಸ್ನಾಯುಗಳ ಹಿಡಿತದೊಂದಿಗೆ ಭದ್ರವಾಗಿರುತ್ತವೆ. ಜೊತೆಗೆ ಚರ್ಮದ ಹೊದಿಕೆ ಬೇರೆ. ಆದರೂ 300 ರಿಂದ 500 ಕಿಲೋ ತೂಗುವ ಜಾನುವಾರು ಜಗ್ಗತೊಡಗಿದಾಗ ಬಾಲ ಕಿತ್ತು ಬರುವುದರ ಜೊತೆಗೆ ಪುಟ್ಟ ಗಿಡವಾದರೆ ಅದೂ ಸಹಿತ ಕೀಳಬಹುದು. ಸ್ವಲ್ಪ ಗಟ್ಟಿಯಾದ ಮರವಾದರೆ ಬಾಲವಷ್ಟೇ ಹರಿದು ಬರುತ್ತದೆ. ಕಿತ್ತು ಹೋದ ಬಾಲ ಮರಕ್ಕೆ ಸುತ್ತಿಕೊಂಡೇ ಇರುತ್ತದೆ.

ಫೋಟೋ ಕೃಪೆ : ಗೂಗಲ್
ಹಾಗಿದ್ದರೆ ಮರಸುತ್ತು ಹಿಡಿಯದಂತೆ ಏನು ಮಾಡಬಹುದು? ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಆದರೂ ಜಾನುವಾರುಗಳಿಗೆ ಮೈ ತುರಿಕೆ ಬಾರದಂತೆ, ಉಣ್ಣೆ- ಹೇನುಗಳು ಆಗದಂತೆ, ಚರ್ಮ ರೋಗಗಳು ಇಲ್ಲದಂತೆ ನೋಡಿಕೊಳ್ಳಬೇಕು. ಚರ್ಮದ ಆರೋಗ್ಯ ಉತ್ತಮವಾಗಿರಬೇಕು. ಬೆಟ್ಟಕ್ಕೆ ಜಾನುವಾರನ್ನು ಬಿಟ್ಟಾಗ ಮನೆಗೆ ಬರದಿದ್ದರೆ ಅಪಾಯವನ್ನು ಊಹಿಸಿ ಹುಡುಕಲು ಹೋಗಬೇಕು. ಮೇಯಲು ಬಿಟ್ಟಾಗ ತುರಿಸಿಕೊಳ್ಳಲು ಮರಕ್ಕೆ ಮೈ ಉಜ್ಜುವ ಅಗತ್ಯ ಬಾರದಂತೆ ನೋಡಿಕೊಳ್ಳಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಸುಮ್ಮನೆ ಯಾರೋ ಹೇಳಿದರು ಎಂದು ಮೌಢ್ಯಕ್ಕೆ ಬಲಿಯಾಗುವುದಕ್ಕಿಂತ ಒಂದಿಷ್ಟು ವಿಚಾರ ಮಾದುವ ಶಕ್ತಿಯನ್ನೂ ಸಹ ಬೆಳೆಸಿಕೊಳ್ಳಬೇಕು.
ಈ ಕುರಿತು ಸಾಕಷ್ಟು ಮಾಹಿತಿ ವಿನಿಮಯ ಮಾಡಿಕೊಂಡ ಉತ್ತರ ಕನ್ನಡ ಜಿಲ್ಲೆಯ ಪಶುವೈದ್ಯರಿಗೆ ( ಅದರಲ್ಲೂ ಡಾ: ಗೋವಿಂದ ಭಟ್ಟ ಮತ್ತು ಡಾ:ಪಿ ಎಸ್.ಹೆಗಡೆಯವರಿಗೆ) ನಾನು ಋಣಿ. ಓದುಗರಲ್ಲಿ ವಿನಂತಿಯೆಂದರೆ ಈ “ಮರಸುತ್ತು” ಅಪರೂಪದ ಘಟನೆಯಾಗಿರುವುದರಿಂದ ಇದರ ಛಾಯಾ ಚಿತ್ರಗಳು ಸಿಗುವುದು ಅಪರೂಪ. ಇಂತಹ ಚಿತ್ರಗಳು ಇದ್ದಲ್ಲಿ ಹಂಚಿಕೊಳ್ಳಿ. ಜಾಸ್ತಿ ಚಿತ್ರಪಟಗಳಿದ್ದರೆ ಇನ್ನೂ ಉತ್ತಮವಾಗಿ ಅರ್ಥ ಮಾಡಿಕೊಳ್ಳಬಹುದು. ಏನಂತಿರಿ?
- ಡಾ. ಎನ್.ಬಿ.ಶ್ರೀಧರ – (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ.
