ವಿದೇಶಿ ಸಂಸ್ಕೃತಿಯ ದಾಸರಾಗಿರುವುದಲ್ಲದೇ ವಿದೇಶಿಗರನ್ನು ಮೀರಿಸುವಷ್ಟು ಬದಲಾಗಿದ್ದಾರೆ ಈಗಿನ ಯುವಪೀಳಿಗೆಯವರು. ನೀನು ಹೆಚ್ಚಾ ಅನ್ನುವ ಆಹಂ ಕಾರಣಕ್ಕೆ ಮದುವೆಯಾದ ಒಂದೆರಡು ತಿಂಗಳುಗಳ ಬಳಿಕ ವಿಚ್ಛೇದನದ ಕಡೆಗೆ ಹೊರಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬದುಕುವ ಮನಸ್ಸುಗಳಿಗೆ ಮದುವೆ ಬಂಧನವೇ ಸರಿಯೇ? ಕತೆಗಾರ್ತಿ ಬಿ.ಆರ್.ಯಶಸ್ವಿನಿ ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…
ಮದುವೆಯ ಈ ಬಂಧ ಅನುರಾಗದ ಅನುಬಂಧ ಏಳೇಳು ಜನುಮದಲೂ ತೀರದ ಸಂಬಂಧ ಎಂತಹಾ ಅರ್ಥಪೂರ್ಣ ಸಾಲುಗಳು. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಾಲುಗಳ ಮಹತ್ವ ತಿಳಿಯದೇ ವಿಚ್ಛೇದನ ದಾರಿ ಹಿಡಿಯುತ್ತಿರುವುದರಿಂದ ವಿಷಾದನೀಯ ಸಂಗತಿ.
ಎರಡು ಮನಸ್ಸುಗಳ ಬೆರೆತು ಪ್ರೀತಿಯ ಕಡಲಲ್ಲಿ ತೇಲಿ ಬದುಕಿನ ಪಯಣದಲ್ಲಿ ಜೊತೆಯಾಗಿ ಸಾಗಿ ಸಂತೃಪ್ತ ಜೀವನ ಪಡೆಯಲು ಪಾರಂಪರಿಕವಾಗಿ ಸಾಗಿ ಬಂದ ಸಂಪ್ರದಾಯವೇ ಈ ಮದುವೆ. ನಮ್ಮ ತಾತ, ಅಜ್ಜಿಯ ಮದುವೆ ಕಥೆಯನ್ನು ಒಮ್ಮೆ ಕೇಳಿದಾಗ ಆಗಿನ ಕಾಲದಲ್ಲಿ ನಡೆಯುತ್ತಿದ್ದ ಮದುವೆ ಹೇಗಿರುತ್ತಿತ್ತು ಎಂದು ಅವರು ವಿವರಿಸಿದರು. ಆ ಕಾಲದಲ್ಲಿ ಸಂಬಂಧಗಳ ಮಹತ್ವ, ದಾಂಪತ್ಯದ ಬಂಧಗಳಿಗೆ ಎಷ್ಟು ಗೌರವ ಕೊಡುತ್ತಿದ್ದರೆಂದು ತಿಳಿಯಿತು.
ಆಗೆಲ್ಲಾ ಬರಿ ಬಂಧುಬಳಗದವರನ್ನು ಮಾತ್ರ ಮದುವೆಗೆ ಕರೆಯುತ್ತಿದ್ದರು. ಒಂದು ಐವತ್ತು ಮಂದಿ ಇದ್ದರೆ ಹೆಚ್ಚು ಅಷ್ಟೆ, ಇಲ್ಲ ಇದಕ್ಕಿಂತ ಕಡಿಮೆ ಜನ ಇರುತ್ತಿದ್ದರು. ಇದು ಮದುವೆ ನಡೆಯುವ ಸಂದರ್ಭಕ್ಕಾದರೆ ಇದಕ್ಕಿಂತ ಮುಂಚೆ ನಡೆಯಬೇಕಾದ ಕಾರ್ಯ ಹುಡುಗ ಹುಡುಗಿಯನ್ನು ನೋಡುವುದು.

ಆಗೆಲ್ಲಾ ಯಾವ ಫೋಟೋನೂ ಇಲ್ಲ, ಯಾವ ಫೋನ್ ಇಲ್ಲ, ಮನೆಯ ಹಿರಿಯರು ಯಾರನ್ನು ನೋಡಿ ಮದುವೆ ನಿಶ್ಚಯ ಮಾಡುತ್ತಾರೋ ಅವರ ಒಪ್ಪಿಗೆಯೇ ಅಂತಿಮ ತೀರ್ಮಾನವಾಗಿರುತ್ತಿತ್ತು. ಹುಡುಗನಿಗೋ ಅಥವಾ ಹುಡುಗಿಗೋ ಒಪ್ಪಿಗೆನಾ ಅಂತ ಕೇಳುತ್ತಿರಲಿಲ್ಲವಂತೆ.
ಒಂದೊಂದು ಮದುವೆಗಳಲ್ಲಿ ಹುಡುಗ, ಹುಡುಗಿ ಹಸೆಮಣೆಗೆ ಬಂದಾಗಲೇ ನೋಡುತ್ತಿದ್ದರಂತೆ. ಈ ರೀತಿ ಮದುವೆಯಾದ ನಮ್ಮ ಪೂರ್ವಿಕರು, ಹಿರಿಯರ ಮದುವೆಗಳು ಒಂದು ಪವಿತ್ರ ಬಂಧವಾಗಿರುತ್ತಿತ್ತು. ಇವರೆಲ್ಲರೂ ಸಂಬಂಧಗಳಿಗೆ, ಹಿರಿಯರಿಗೆ ಗೌರವ ಕೊಟ್ಟು ಬದುಕುತ್ತಿದ್ದರಿಂದ ಅವರುಗಳ ಮದುವೆ ಎಂಬ ಪವಿತ್ರ ಬಂಧ ಬದುಕಿನ ಕೊನೆ ಘಳಿಗೆವರೆಗೂ ಜೊತೆಯಾಗಿರುತ್ತಿತ್ತು.
ಕೆಲವು ವರ್ಷಗಳ ನಂತರ ಟಿವಿಗಳು ಲಗ್ಗೆ ಇಟ್ಟಾಗಿನಿಂದ ಕಾಲ ಬದಲಾಯಿತು. ದೃಶ್ಯ ಮಾಧ್ಯಮದಲ್ಲಿ ಹರಿದಾಡುವ ದೃಶ್ಯಗಳಿಗೆ ಮರುಳಾದ ಜನರು ದೃಶ್ಯಗಳಲ್ಲಿ ಕಂಡಂತೆ ಬದುಕಲು ಶುರುಮಾಡಿದರು. ಮದುವೆಯಾಗು ಹುಡುಗನ ತಲೆ ಎತ್ತಿ ನೋಡಿರದ ಹುಡುಗಿ ಅವಳು ತಲೆ ಎತ್ತಿ ಹುಡುಗನನ್ನು ನೋಡಲು ಶುರುಮಾಡಿದಳು. ಇನ್ನು ಸ್ವಲ್ಪ ಮುಂದುವರೆದು ಫೋನ್ ಗಳು ಬಂದಾಗ ಮಾತುಗಳು ವಿನಿಮಯವಾಗಲೂ ಪ್ರಾರಂಭವಾಯಿತು. ಇಷ್ಟೆಲ್ಲಾ ಮುಂದುವರೆದು ಅಲ್ಪಸ್ವಲ್ಪ ಮದುವೆ ಎನ್ನುವುದು ಬಂಧ ಎನ್ನುವಂತಲೇ ಇತ್ತು. ಸಂಬಂಧಗಳಿಗೂ ಅಲ್ಪಸ್ವಲ್ಪ ಗೌರವ ಇತ್ತು.

ಆದರೆ ಈಗ ಪೂರ್ತಿಯಾಗಿ ವಿದೇಶಿ ಸಂಸ್ಕೃತಿಯ ದಾಸರಾಗಿರುವುದಲ್ಲದೇ ವಿದೇಶಿಗರನ್ನು ಮೀರಿಸುವಷ್ಟು ಬದಲಾಗಿದ್ದಾರೆ ಈಗಿನ ಯುವಪೀಳಿಗೆಯವರು. ಮದುವೆಗೂ ಮುನ್ನ ಫೋನಿನಲ್ಲಿ ಮಾತಾಡುತ್ತಾರೆ. pre-wedding photo shoot ಮಾಡಿಸುತ್ತಾರೆ. ಸಿನಿಮಾ , ಪಾರ್ಕ್ ಆಂತ ಸುತ್ತಾಡುತ್ತಾರೆ. ಕೇಳಿದ ಜನರಿಗೆ ಇಬ್ಬರೂ ಒಬ್ಬರಿಗೊಬ್ಬರು ಅರಿತುಕೊಳ್ಳಲು ಅಂತ ಹೇಳುತ್ತಾರೆ. ಇದೆಲ್ಲಾ ಸರಿ ಒಪ್ಪಿಕೊಳ್ಳೋಣ. ಆದರೆ ಏನು ಒಂದು ಇಷ್ಟವಾಗದೇ ಹೋದರೆ ಸಹಿಸಿಕೊಳ್ಳದೆ ಮದುವೆಗಿಂತ ಮುಂಚೆಯೇ ಅಥವಾ ಮದುವೆಯಾದ ಒಂದೆರಡು ತಿಂಗಳುಗಳ ಬಳಿಕ ವಿಚ್ಛೇದನದ ಕಡೆಗೆ ಹೊರಡುತ್ತಾರೆ. ಇಂತಹ ಮನಸ್ಸಿನವರಿಗೆ ಮದುವೆ ಎನ್ನುವುದು ಬಂಧನವೇ ಆಗಿಬಿಟ್ಟಂತೆ ಇರುತ್ತದೆ.
ಹಾಗಾದರೆ ಮದುವೆಯ ಬಂಧ ಎನ್ನುವುದಕ್ಕೆ ನಿಜವಾಗಿಯೂ ಯಾವುದು ಸರಿ ? ನಮ್ಮ ಪೂರ್ವಿಕರ ನಿಶ್ಚಯದ ಮದುವೆಯೋ ಅಥವಾ ಯುವ ಪೀಳಿಗೆಯವರ ಮದುವೆಯೋ ?
ಅಲ್ಲಿ ಒಬ್ಬರಿಗೊಬ್ಬರು ಮದುವೆಯಾಗುವವರೆಗೂ ನೋಡದೆ, ಮಾತಾಡದೆ ಇದ್ದು ದಾಂಪತ್ಯಕ್ಕೆ ಕಾಲಿಟ್ಟಾಗ ಬಹು ದಿನಗಳವರೆಗೂ ಅನ್ಯೋನ್ಯತೆ ಇದ್ದ ಪೂರ್ವಿಕರ ಮದುವೆಯ ಬಂಧ ಸರಿನಾ? ಅಥವಾ ಒಬ್ಬರಿಗೊಬ್ಬರು ಅರಿತುಕೊಳ್ಳಲು ಫೋನಿನಲ್ಲಿ ಮಾತಾಡಿ, ಸುತ್ತಾಡಿ ಮದುವೆಯ ಬಂಧಕ್ಕೆ ಒಳಗಾಗಿ ನಂತರ ದೂರವಾಗುವ ಇಂದಿನ ಯುವ ಪೀಳಿಗೆಯವರ ಮದುವೆಯ ಬಂಧ ಸರಿನಾ?.
ಈ ಪ್ರಶ್ನೆಯನ್ನು ಆಯಾ ಕಾಲಮಾನದವರನ್ನು ಕೇಳಿದಾಗ ದೊರಕುವ ಉತ್ತರ ನಮ್ಮದೆ ಸರಿ ಅಂತ. ಹಿರಿಯರು ನಮ್ಮದು ಸರಿ ಎಂದರೆ ಯುವಜನಾಂಗದವರು ನಮ್ಮದೇ ಸರಿ ಎನ್ನುತ್ತಾರೆ. ಇದಲ್ಲ ಈ ಪ್ರಶ್ನೆಗೆ ಉತ್ತರ.
ತಂದೆತಾಯಿಯರು ಮಕ್ಕಳನ್ನು ಮುದ್ದಾಗಿ ಮನೆಯಲ್ಲಿ ಬೆಳಸಿರುತ್ತಾರೆ. ತವರು ಮನೆಯಲ್ಲಿ ಹೇಗಿರುತ್ತಾರೋ ಹಾಗೆ ಗಂಡನ ಮನೆಯಲ್ಲಿ ಆರಾಮಾಗಿ ಇರಲು ಬಯಸಿದಾಗಲೇ ಘರ್ಷಣೆಗಳು ಜರುಗುತ್ತವೆ. ಇದಕ್ಕೆ ಕಾರಣ ನಾನು ಹೆಚ್ಚಾ, ನೀನು ಹೆಚ್ಚಾ ಅನ್ನುವ ಆಹಂ ಕಾರಣ. ಇಂತಹ ಪರಿಸ್ಥಿತಿಯಲ್ಲಿ ಬದುಕುವ ಮನಸ್ಸುಗಳಿಗೆ ಮದುವೆ ಎನ್ನುವುದು ಬಂಧನವೇ ಸರಿ.
ಹುಡುಗ, ಹುಡುಗಿ ಇಬ್ಬರಿಗೂ ನಾವಿಬ್ಬರೂ ಒಂದೇ ಎನ್ನುವ ಭಾವನೆ ಇರಬೇಕು. ಹುಡುಗಿ ತನ್ನ ತವರು ತೊರೆದು ಗಂಡನ ಮನೆಗೆ ಕಾಲಿಟ್ಟಾಗ ಆಕೆಗೆ ಇದು ನನ್ನ ಪ್ರಪಂಚ ಇಲ್ಲಿರುವವರೆಲ್ಲಾ ನನ್ನವರು ಎನ್ನುವ ಭಾವನೆ ಬೆಳಸಿಕೊಳ್ಳಬೇಕು. ಹೊಸದಾಗಿ ಬೇರೆ ಜಾಗಕ್ಕೆ ಬಂದಾಗ ಹೊಂದಿಕೊಳ್ಳುವುದು ಕಷ್ಟ ನಿಜ. ಆದರೆ ನಮ್ಮ ಗುಣ ಸ್ವಭಾವಗಳಿಂದ ಅಲ್ಲಿರುವವರ ಮನಸ್ಸನ್ನು ಗೆಲ್ಲಬೇಕೆ ಹೊರತು ಅಹಂಕಾರದಿಂದ ಅಲ್ಲ.
ಅಹಂಕಾರ ಹೆಚ್ಚಾಗಿದ್ದಾಗ ಸಂಬಂಧಗಳ ನಡುವೆ ಬಿರುಕು ಮೂಡುತ್ತದೆ. ಯಾವತ್ತು ದ್ವೇಷದಿಂದ, ಹಠದಿಂದ ಏನನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಪ್ರೀತಿಯಿಂದ ಪಡೆದಿದ್ದು ಶಾಶ್ವತವಾಗಿ ಇರುತ್ತದೆ. ಈಗೆಲ್ಲಾ ಇದ್ದರೆ ಮಾತ್ರ ಮದುವೆ ಎನ್ನುವುದು ಬಂಧವಾಗಿರುತ್ತದೆ. ಈ ರೀತಿ ಹೊಂದುಕೊಳ್ಳದವರಿಗೆ ಮದುವೆ ಎನ್ನುವುದು ಬಂಧನವೇ ಆಗಿರುತ್ತದೆ.
ಒಳ್ಳೆಯ ಗುಣ, ನಡೆತೆ, ಪ್ರೀತಿ ಹೊಂದಾಣಿಕೆಯಿಂದ ಇದ್ದರೆ ಮಾತ್ರ ಒಂದೊಳ್ಳೆ ಪವಿತ್ರವಾದ ಬಂಧ ಸೃಷ್ಟಿಯಾಗುತ್ತದೆ.
ಸಂಪ್ರದಾಯವಾಗಲಿ, ಆಧುನಿಕತೆಯಾಗಲಿ—ಮದುವೆಯನ್ನು ಬಂಧವಾಗಿಸುವುದೂ, ಬಂಧನವಾಗಿಸುವುದೂ ಮನುಷ್ಯನ ಗುಣಸ್ವಭಾವವೇ ಆಗಿದೆ.
- ಬಿ.ಆರ್.ಯಶಸ್ವಿನಿ
