ಮದುವೆಯಲ್ಲಿ ಒಗಟುಗಳು- ಶ್ರೀಕಾಂತ ಕಡಕೋಳ



ಹಿಂದೆ ಮದುವೆಗಳಲ್ಲಿ ವಧು ಒಗಟಿನ ರೂಪದಲ್ಲಿ ಗಂಡನ ಹೆಸರು ಹೇಳುವ ಪರಿಪಾಠ ಇತ್ತು. ಮುಹೂರ್ತ ಮುಗಿದು ಎಲ್ಲ ಶಾಸ್ತ್ರ ಮುಗಿದ ನಂತರ ‘ಉರುಟಣೆ’ ಎಂಬ ಒಗಟು ಹಾಕಿ, ಹೆಸರು ಹೇಳುವ ಕಾರ್ಯಕ್ರಮವಿರುತ್ತಿತ್ತು.

ವರನ ಕಡೆಯ ಹಿರಿಯ ಹೆಂಗಸರೊಬ್ಬರು ವರನ ಹತ್ತಿರ ಕುಳಿತುಕೊಂಡು ಅರಿಷಿಣ, ಕುಂಕುಮ, ಹೂವಿನ ಹಾರ, ತುರಾಯಿ, ಪನ್ನೀರು, ಅತ್ತರ್, ಪೆನ್, ನ್ಯೂಸ ಪೇಪರ್ ಮುಂತಾದವುಗಳನ್ನು ತಮ್ಮ ಬಳಿ ಇಟ್ಟುಕೊಂಡು, ಒಂದೊಂದಾಗಿ ವಧುವಿನ ಕೈಗೆ ಕೊಟ್ಟು ಅದಕ್ಕೆ ಸಂಬಂಧಿಸಿದ ಒಗಟು ಹೇಳಲು ಸೂಚಿಸುತ್ತಿದ್ದರು. ವಧುಗಳು ಕೂಡ ಜಾಣೆಯರು. ಎಲ್ಲಾ ಸಂಬಂಧಿಸಿದ ವಸ್ತುಗಳ ಒಗಟುಗಳನ್ನು ಮೊದಲೇ ಬಾಯಿಪಾಠ್ ಮಾಡಿಟ್ಟುಕೊಂಡಿರುತ್ತಿದ್ದರು. ಒಗಟುಗಳು ಹೆಚ್ಚಾಗಿ ರಾಮಾಯಣ, ಮಹಾಭಾರತ, ಇನ್ನಿತರ ಪುರಾಣಕ್ಕೆ ಸಂಬಂಧಿಸಿದ ತುಣುಕುಗಳಾಗಿರುತ್ತಿದ್ದವು. ಮದುವೆಗೆ ಬಹಳ ಮುಂಚೆಯೇ ವಧು ತಮ್ಮ ಬಂಧು,ಸ್ನೇಹಿತೆಯರಿಂದ ಒಗಟು ಸಂಗ್ರಹಿಸಿ ಬಾಯಿಪಾಠ್ ಮಾಡಿಕೊಂಡಿರುತ್ತಿದ್ದರು.

ನಮ್ಮ ಅಕ್ಕ ಅವಳ ಮದುವೆ ಸಮಯದಲ್ಲಿ ಒಗಟಿನ ನೊಟಬುಕ್ ನನ್ನ ಕೈಗೆ ಕೊಟ್ಟು, ಸರಿಯಾಗಿ ಬಾಯಿಪಾಠವಾಗಿದೆಯೋ… ಇಲ್ಲವೊ… ಎಂದು ಪರೀಕ್ಷಿಸಿಕೊಳ್ಳುತ್ತಿದ್ದಳು. ಉರುಟಣೆ ಕಾರ್ಯಕ್ರಮದಲ್ಲಿ ವಧು ಪಟ ಪಟನೆ ಒಗಟು ಹೇಳುತ್ತಿರುವಾಗ ಚಪ್ಪಾಳೆಗಳ ಸುರಿಮಳೆಯಾಗುತ್ತಿತ್ತು. ನನಗೆ ಪೆನ್ ಕುರಿತಾಗಿ ವಧು ಹೇಳುತ್ತಲಿದ್ದ ಒಗಟು ಇನ್ನೂ ನೆನಪಿದೆ “ಇಂಗ್ಲೀಷ್ನಲ್ಲಿ ಕೋಳಿಗೆ ಅನ್ನುವರು ‘ಹೆನ್’, ಅದರ ಮರಿಗೆ  ‘ಚಿಕನ್’ ಅನ್ನುವರು.



ರಾಯರಿಗೆ ಕೊಡುವೆನು ಫೌಂಟನ್ ಪೆನ್. ಆದರೆ ದಿನ ಕಳೆದಂತೆ ಉರುಟಣೆ ಸಂಪ್ರದಾಯ ನಿಂತು ಹೋಯಿತಾದರೂ, ಒಗಟು ಹಾಕಿ ಗಂಡ, ಹೆಂಡತಿ ಹೆಸರು ಹೇಳುವ ಪರಿಪಾಠ ಇನ್ನೂ ಕೆಲವೆಡೆಗಳಲ್ಲಿ ಮುಂದುವರೆದಿದೆ. ನನ್ನ ಅಕ್ಕನ ಮಗನ ಮದುವೆಯಲ್ಲಿ ಎಲ್ಲಾ ಹಿರಿಯ, ಕಿರಿಯ ದಂಪತಿಗಳನ್ನು ಸುತ್ತಲೂ ಕೂಡ್ರಿಸಿ ಪ್ರತಿ ದಂಪತಿಗಳು ಸರದಿ ಪ್ರಕಾರ ಒಗಟು ಹಾಕಿ ಹೆಸರು ಹೇಳಬೇಕು ಎನ್ನುವ ಕಾರ್ಯಕ್ರಮ. ಮೊದಲ ಒಗಟು ನಮ್ಮ ಅಕ್ಕನಿಂದಲೇ ಪ್ರಾರಂಭವಾಯಿತು. ವಿವಿಧ ರೀತಿಯ ಒಗಟುಗಳು ಮಜವಾಗಿದ್ದವು :

  • ಎಲ್ಲರ ಮನೆಯ ಬಾಗಿಲಿಗೆ ಇರುವದು ಚೌಕಟ್ಟು,—–ರಾಯರಿಗೆ ಕೊಡುವೆನು,ಹಲ್ಲಿನ ಸೆಟ್ಟು.
  • ಸೀತಾ ಮಾತೆಗೆ ಶ್ರೀರಾಮ ಚಂದ್ರನು ದೊರೆತಿದ್ದು ಜನಕರಾಯನ ನಗರದಲ್ಲಿ, ನನ್ನ ಹೆಂಡತಿ……. ದೊರೆತಿದ್ದು ಧಾರವಾಡದ ಸುಭಾಸ ರೊಡಿನಲ್ಲಿ.
  • ಬಕ್ಕ ತಲೆಯ ತನ್ನ ಗಂಡನ ಕುರಿತು ನಮ್ಮ ಮಾಮಿ ಹೇಳಿದ್ದು–ನಮ್ಮ ಮನೆಯ ಪಡಸಾಲೆಯಲ್ಲಿರುವದು ಕಪಾಟು…….ರಾಯರ ತಲೆ ಸಪಾಟು.
  • ಮೀಸೆ,ಗಡ್ಡ ನುಣುಪಾಗಿ ಶೇವ್ ಮಾಡುವ ಗಂಡನ ಕುರಿತು–ಊರಾಚೆ ಇರುವುದು ಮನೋಹರವಾದ ಗುಡ್ಡ……ರಾಯರಿಗೆ ಇಲ್ಲ ಮೀಸೆ,ಗಡ್ಡ.
  • ನಮ್ಮ ಕರೀ ಹೊಲದಾಗ ಬೆಳೀತದ ಬರೀ ಹುಲ್ಲು,ಕರಕೀ………..ರಾಯರು ಇದ್ದಾರ ಭಾಳ ಬೆರಕಿ.
  • ಬರೀ ಮಾತು ಬ್ಯಾಡಾ ಕೊಡಸ್ರಿ ರೇಶ್ಮಿ ಸೀರಿ ಅಂದ್ರ…….,ರಾಯರು ತಿರಗಸ್ತಾರ ಅತ್ಲಾಗ ಮಾರಿ.

ನಮ್ಮಾಕೆಯ ಸರದಿ ಬಂತು, ಅವಳಿಗೆ ಒಗಟಿನ ಗಂಧವಿಲ್ಲಾ. ಬರೀ, ನನ್ನ ಹೆಸರು ಹೇಳಿ ಸುಮ್ಮನಾದಳು. ಆದ್ದರಿಂದ ಆ ಕ್ಷಣದಲ್ಲೇ ನನ್ನ ಬಾಯಿಂದ ಉದುರಿದ ಒಗಟು”ನನ್ನವಳಿಗೆ ಒಗಟು ಹಾಕಿ
ಹೆಸರು ಹೇಳುವುದು ತುಂಬಾ ಕಷ್ಟ, ಆದರೂ…ನನಗೆ ತುಂಬಾ ಇಷ್ಟ” ಎಂದು ಹೇಳಿ ಮುಗಿಸಿದೆ.

ಹೀಗೆ ಇನ್ನೂ ಅನೇಕ ಮಜವಾಗಿರುವ ಒಗಟುಗಳು. ಆದರೆ ಇಷ್ಟೇ ನೆನಪಿನಲ್ಲಿರೊದು . ಯಾರಿಗೆ ನೆನಪಿವೆ ಅವರುಗಳು ಸೇರಿಸಿ ಮುಂದುವರಿಸ್ತಿರಾ??

  • ಶ್ರೀಕಾಂತ ಕಡಕೋಳ, ಧಾರವಾಡ.
5 1 vote
Article Rating

Leave a Reply

1 Comment
Inline Feedbacks
View all comments
ರಘುರಾಂ

ಚೆನ್ನಾಗಿದೆ ಸರ್

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW