ಯಾವುದೋ ಮೂವಿಯಲ್ಲಿ ಕೇಳಿದ್ದೆ ಈ ಡೈಲಾಗ್ ‘ಜನರ ಭಯವೇ ನಮ್ಮ ಅಸ್ತ್ರ ಆಸ್ತಿ’ ಅಂತ. (ಒಂದೂಚೂರ್ ಬದಲಾಗಿರಬಹುದು) ಪ್ರಾಯಶಃ ಇದು ಸತ್ಯವೇ ಆಗ್ತಿದೆ ಇಂದಿನ ಸಮೂಹ ಮಾಧ್ಯಮಗಳ ಆಟ, ಪಾಠ ಅವರ ತೋರುವಿಕೆಯ ಕಾಟದ ಜೊತೆ ಧೈರ್ಯದ ಬದಲು ಭಯವನ್ನೇ ಹುಟ್ಟಿಸಿ ಬಿಟ್ಟಿದ್ದಾರೆ.
ಒಮ್ಮೆ ವೈರಸ್ ಮನುಷ್ಯನ ದೇಹಕ್ಕೆ ಬಂದು ತೊಲಗಿದ್ದರೆ ಯಾವ್ದೆ ಕಾರಣಕ್ಕೂ ಮತ್ತೊಮ್ಮೆ ಅದು ನಮ್ಮ ದೇಹಕ್ಕೆ ಅಟ್ಯಾಕ್ ಆಗಲ್ಲ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಮಟ್ಟ ಹೆಚ್ಚಿದ್ದರೆ ಯಾವ್ದೆ ವೈರಸ್ ಕೂಡ ತನ್ನ ಕಾರ್ಯ ಕಲಾಪಗಳ ಮಾಡಲು ಸಾಧ್ಯವಾಗದು, ಸಾಮಾನ್ಯ ಜ್ವರ ಬರಬಹುದೇನೋ..? ಜ್ವರ ಮನುಷ್ಯನ ದೇಹಕ್ಕೆ ಬರಲೇ ಬೇಕು ವೈಜ್ಞಾನಿಕವಾಗಿ ಹೇಳ್ಬೇಕಂದ್ರೆ ದೇಹಕ್ಕೆ ಪರಕೀಯ ವಸ್ತುಗಳು ದಾಳಿ ಮಾಡಿದಾಗ ಅಲ್ಲಿ ಉಂಟು ಮಾಡುವ ನಮ್ಮ ದೇಹದಲ್ಲಿರೋ ಬಿಳಿ ರಕ್ತಕಣಗಳಿಗೂ ಘರ್ಷಣೆಯುಂಟಾದಾಗ ಮೈ ಶಾಖವೇರಿ ಜ್ವರವಾಗಿ ಪರಿಣಮಿಸುತ್ತದೆ. ಎಲ್ಲ ಜ್ವರವು ಕರೋನವಾಗಿ ಬದಲಾಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ ಎಂಬ ಕಿರುಸತ್ಯವ ನಾವು ಅರಿತು ಹೆಜ್ಜೆ ಹಾಕಿದರೆ ಮಹಾಮಾರಿ ಏನು ಮಹಾ ಯಮ್ಮಾರಿನು ಕೂಡ ಸದ್ದಿಲ್ಲದೆ ಬಂದ ದಾರಿಗೆ ಸುಂಕವಿಲ್ಲದಂತೆ ಸಾಗಿ ಬಿಡುತ್ತದೆ.
ಬ್ಲಾಕ್ ಫಂಗಸ್ ಕಥೆಯೇ ಇನ್ನು ಮುಗಿದಿಲ್ಲ ಓಡಿಕೊಂಡಿರುವಂತಹ ನಮ್ಮಂತಹವರಿಗೆ ಅದರ ವಿಷಯ ಕೆದಕಿ ತಿಳಿಯಲು ಸೂಕ್ತ ಮಾಹಿತಿ ಸಿಗುತ್ತಿಲ್ಲ. ಆದ್ರೆ ಈ ಟಿವಿಗಳಲ್ಲಿ ಯಾಕೆ ಅದೇ ಮಾರಣಾಂತಿಕ ಎಂದು ಬಿಂಬಿಸುತ್ತಿದ್ದಾರೆ. ಇದರ ಕಥೆಯೇ ಮುಗಿದಿಲ್ಲ. ವೈಟ್ ಫಂಗಸ್ ಬೇರೆ ಲಗ್ಗೆ ಹಾಕಿದ್ಯಂತೆ ,ಎಲ್ಲಿಗೆ ಹೇಗೆ? ಹೋಗಿ ಮುಟ್ಟುತ್ತದೆಯೋ ತಿಳಿದಿಲ್ಲ.

ಫೋಟೋ ಕೃಪೆ : Freepik
ಆದ್ರೆ ಈ ಮಾಧ್ಯಮದವ್ರು ಹೇಳೋ ಮಾತುಗಳ ಕೇಳಿ ಬಿಟ್ಟರೆ ಹೃದ್ರೋಗಿ ಇದ್ದರೆ ಆತ ಅಲ್ಲೇ ಅಂತಿಮ ಯಾತ್ರೆಗೆ ಹೊರಟು ಬಿಟ್ಟಿರುತ್ತಾನೆ.
ನಾ ಕೇಳೋದು ಒಂದೇ ಸಮೂಹ ಮಾಧ್ಯಮಗಳಲ್ಲಿ ಸರಿಯಾದ ಅಂಕಿ ಅಂಶ ತೋರಿಸಿ, ನಿಮಗೆ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸಿ ಧನಾತ್ಮಕವಾಗಿ ಸುದ್ದಿ ಪ್ರಚಾರ ಮಾಡಲು ಬರದೆ ಇದ್ದರು ಪರವಾಗಿಲ್ಲ ಋಣಾತ್ಮಕವಾಗಿ ನುಡಿದು ಅವರಿಲ್ಲಿರೋ ಅಲ್ಪ ಸ್ವಲ್ಪ ಧೈರ್ಯವನ್ನು ಕೊಲ್ಲಬೇಡಿ.
ಜನಸಾಮಾನ್ಯರ ಮಾತು ಕೇಳ್ಬೇಕು, ಅವ್ರು ಸರಿಯಿಲ್ಲ… ಇವ್ರು ಸರಿಯಿಲ್ಲ… ಮೊದಲಾಗಿ ಸರ್ಕಾರನೆ ಸರಿಯಿಲ್ಲ… ಎಂದು ದೂರುತ್ತಲೇ ಇರುತ್ತಾರೆ ಹೊರತು , ಹೊರಗೆ ಹೋಗುವಾಗ ಮಾಸ್ಕ್ ಹಾಕುವರೆ?… ಸಾಮಾಜಿಕ ಅಂತರ ಕಾಪಡಿಕೊಳ್ಳುವರೆ..? ಭಾಗಶಃ ಹಳ್ಳಿಗಳಲ್ಲಿ 75% ಈ ನಿಯಮ ಪಾಲನೆ ಮಾಡಲ್ಲ, ತಪ್ಪುಗಳು ನಮ್ಮಲ್ಲೇ ಇರುವಾಗ ಮತ್ತೋರ್ವವರನ್ನ ದೂರುವುದು ಎಷ್ಟು ಸಮಂಜಸ.

ಫೋಟೋ ಕೃಪೆ : businessinside
ನಮ್ಮ ಜನಗಳು ಎಷ್ಟರಮಟ್ಟಿಗೆ ಹಾಳಾಗಿ ಹೋಗಿದ್ದಾರೆ ಎಂದ್ರೆ ಕುಂತರು ದುಡ್ಡು ಸತ್ತರು ದುಡ್ಡು ಹೀಗೆ ಆಗಿದೆ ಸುಲಿಗೆ, ಉಳ್ಳವರು ಮಣಿಪಾಲ್ ಬಡವರು ಮಣ್ಣಪಾಲ್ ಎಂಬ ಮೀಮ್ಸ್ ಇತ್ತೀಚೆಗೆ ಬಾರಿ ಸದ್ದು ಮಾಡ್ತಾ ಇತ್ತು, ಈ ತರ ಪರಿಸ್ಥಿತಿನಾ ಹುಟ್ಟು ಹಾಕಿದ್ದು ಯಾರು..? ಇಷ್ಟೆಲ್ಲ ತೊಂದರೆಗಳಿಗೆ ಕಾರಣ ಯಾರು..? ವ್ಯವಸ್ಥೆಯ ಕಡೆಗೆ ಒಂದು ಬೆಳ್ಳು ಮಾಡಿ ತೋರಿದರೆ ಉಳಿದ ಬೆರಳುಗಳು ನಮ್ಮನ್ನೇ ತೋರುತ್ತದೆ ಎಂಬ ಸತ್ಯವ ಯಾರು ಒಪ್ಪಿಕೊಳ್ಳುವುದಿಲ್ಲ.
ಇಂತಹ ಹೀನಾಯ ಸ್ಥಿತಿಯಲ್ಲು ಸಹ ದುಡ್ಡಿನ ಗಾಳಿ ಹಿಡಿದಿದೆ, ಆಕ್ಸಿಜನ್ ದಂದೆ,ಬೆಡ್ ದಂದೆ ಇದಕ್ಕೆಲ್ಲ ಅವಕಾಶ ಕೊಟ್ಟಿದ್ದು ಯಾರು ಅನುವು ಮಾಡಿಕೊಟ್ಟಿದ್ದು ಯಾರು..? ಹೆಣ ಹೂಳುವರು ಸಹ ದಂದೆಗೆ ನಿಂತು ಬಿಟ್ಟರು ಇದಕ್ಕೆ ಅನುವು ಕೊಟ್ಟವರ್ಯಾರು..? ಎಲ್ಲವೂ ಪರಿಸ್ಥಿತಿಯ ಪ್ರಭಾವವಷ್ಟೇ..
ನಾನು ಆಗಾಗ ಹೇಳ್ತ ಇರ್ತೀನಿ ” ಶಕ್ತರಾಗಿ ಇದೀವಿ… ಎಂದು ಜಾಸ್ತಿ ಮೆರೆಯೋಕೆ ಹೋಗಬಾರದು. ಕಾಲಚಕ್ರ ತಿರುಗತ್ತಲೇ ಇರುತ್ತದೆ. ಇಂದು ಮೇಲಿದ್ದವರು ಕೆಳಗೆ, ಕೆಳಗೆ ಇದ್ದವರು ಮೇಲೆ ಬಂದೆ ಬರುತ್ತಾರೆ. ಹಣ ಪ್ರತಿಷ್ಠೆ ಮುಖ ನೋಡಿ ಮಣೆ ಹಾಕ್ಬೇಡಿ ”ಎಂದು. ”ಏನಿದೆ ರಿ ಈ ಒಣ ಪ್ರತಿಷ್ಠೆಯಲ್ಲಿ ಈ ಒಣ ಆಡಂಬರದಲ್ಲಿ..?.
ಮಾನವೀಯತೆ ಒಂದೇ ಮನ ಮನಕ್ಕೆ ಕೊಂಡಿ ಹೆಣೆದು ಕೊಡುವುದು. ಈ ಸತ್ಯ ಯಾರಿಗೂ ಅರ್ಥವೇ ಆಗಲ್ಲ. ಅದರಲ್ಲೂ ಹಣದ ಮದವೇರಿ ನಿಂತವರಿಗೆ ತಿಳಿಯಲೇ ಇಲ್ಲ. ತಿಳಿದಿದ್ದರೆ ಇಂದು ಇಂತಹ ಹೀನಾಯ ಪರಿಸ್ಥಿತಿ ಬಂದಿದ್ದರು ನೆರೆಯ ರಾಜ್ಯಗಳು ಕೇರಳ, ಆಂಧ್ರಪ್ರದೇಶದಲ್ಲಿ ಕರೋನ ಇಳಿಮುಖ ಕಂಡ ಹಾಗೆ ನಮ್ಮಲ್ಲೂ ಕಾಣ್ತಾ ಇತ್ತು.
ಆದ್ರೆ ನಮ್ಮಲ್ಲಿ ಉಳ್ಳವರು ಉಳ್ಳದವರ ನಡುವಿನ ಯುದ್ಧವೇ ಮುಗಿದಿಲ್ಲ. ಇನ್ನು ಮಾನವೀಯತೆಯ ದರ್ಶನವಾದ್ರೂ ಎಲ್ಲಿಂದ ಸಾಧ್ಯ. ಹೇಗೆ ಸಾಧ್ಯ..?
ಈಗ ಒಬ್ಬರ ಮೇಲೆ ಒಬ್ಬರು ದೂರು ಹಾಕುತ್ತ ಕೂರುವ ಸಮಯವಲ್ಲ. ಮಾನವೀಯತೆಯ ಮೆರೆಯುವ ಸಮಯ, ಕೈಲಾದಷ್ಟು ಸಹಾಯ ನೀಡುವ ಸಮಯ ನಮ್ಮವರೇ ಎಲ್ಲರೂ ಎಂದು ತಿಳಿದು , ಒಳ್ಳೆ ಮಾತಾಡಬೇಕು. ಅವರು ರೋಗದಲ್ಲೇ ನರಳ್ತಾ ಇದ್ದಾರೆ ಎಂದರು ಸಹ ಒಳ್ಳೆ ಮಾತಾಡಿ, ಋಣಾತ್ಮಕವಾಗಿ ನುಡಿದು ಆತ್ಮಸ್ಥೈರ್ಯ ಕುಗ್ಗಿಸುವ ಬದಲು ಏನಾಗಲ್ಲ ಮೊದಲಿನ ಹಾಗೆ ಹುಷಾರಾಗಿ ಇರ್ತೀರ ಅನ್ನೋ ಒಂದು ಮಾತು ಒಂದು ದಿನದ ಮಾತ್ರೆಯು ಕೊಡದ ಶಕ್ತಿಯನ್ನು ಕೊಡುತ್ತದೆ..
ಧೈರ್ಯ ತುಂಬಿ, ಯಾವ್ ಯಾವ್ದೋ ಟ್ರಸ್ಟ್ ಗೆ ಹಣ ನೀಡೋ ಬದಲು ನಿಮ್ಮ ಸುತ್ತ ಅಳ್ತಾ ಇರೋರನ್ನ ಸಮಾಧಾನ ಮಾಡಿ.
ಮಾನಸಿಕ ಗಟ್ಟಿತನವೊಂದು ಸಾಕು ಸಾವನ್ನು ಗೆದ್ದು ಬರಲು, ಆ ಮಾನಸಿಕ ಗಟ್ಟಿತನವ ನೀಡುತ್ತೀರಿ. ಧನಾತ್ಮಕ ಬದುಕನ್ನ ಜೀವಿಸುತ್ತೀರಿ. ಯಾವ ಕರೋನ ಬಂದ್ರು ಏನು ಆಗಲ್ಲ ಪ್ರತಿ ಮನುಷ್ಯನಿಗೂ ಅವನದೇ ಆದ ಬೆಲೆ ಇದೆ, ಒಂದು ಸಾವು ನಮಗೆ ಲೆಕ್ಕಕ್ಕೆ ಇರದೇ ಇರಬಹುದು ಅದೇ ಜಾಗದಲ್ಲಿ ನಮ್ಮ ಆತ್ಮೀಯರು ನಿಂತರೆ ನಿಂತ ನೆಲವೆ ಕುಸಿದ ಅನುಭವವಾಗುತ್ತದೆ.
- ಅಮೃತ ಎಂ ಡಿ (ಎಂ. ಎಸ್ಸಿ ದ್ವಿತೀಯ ವರುಷ ಗಣಿತಶಾಸ್ತ್ರ ವಿಭಾಗ ವಿದ್ಯಾರ್ಥಿನಿ ) ಮಾಗನಹಳ್ಳಿ.
.