- ಮನೋರೋಗದ ಬಗೆಗೆ ತಪ್ಪುಕಲ್ಪನೆಗಳು: ಮಾನಸಿಕ ರೋಗಗಳ ಬಗೆಗೆ ಬಹುಪಾಲು ಜನರಲ್ಲಿ ಈ ರೀತಿಯ ತಪ್ಪು ಕಲ್ಪನೆಗಳಿವೆ. ‘ಮನೋರೋಗಕ್ಕೆ ಮದ್ದಿಲ್ಲ’ ‘ಮನೋರೋಗವೆಂದರೆ ಹುಚ್ಚು’ ‘ಮನೋರೋಗಳು ದೆವ್ವ ಪೀಡೆಗಳ ಪ್ರಭಾವದಿಂದ ಉಂಟಾಗುತ್ತವೆ.’ ‘ಅತಿಯಾದ ಚಿಂತೆ ಮಾತ್ರ ಮನೋರೋಗ್ಕಕೆ ಕಾರಣ’ ‘ಮನೋರೋಗಿಗಳು ಪಾಪಿಗಳು’ ಮತ್ತು ಮನೋರೋಗಗಳು ಮಾಟ ಮಂತ್ರಗಳ ಫಲ ಮುಂತಾದವು.

- ವಿಶ್ವಮಾನಸಿಕ ಆರೋಗ್ಯ ದಿನಾಚರಣೆ ಇತಿಹಾಸ: ಮಾನಸಿಕ ಆರೋಗ್ಯದ ಬಗೆಗೆ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸುವುದು ಬಹಳ ಅತ್ಯವಶ್ಯಕ ಎಂಬುದನ್ನು ಮನಗಂಡು 1948 ರಲ್ಲಿ ‘ವಿಶ್ವಮಾನಸಿಕ ಆರೋಗ್ಯ ಒಕ್ಕೂಟ’ ಸ್ಪಾಪನೆಯಾಯಿತು. 1992 ರಲ್ಲಿ ಮೊದಲ ಬಾರಿಗೆ ಒಕ್ಕೂಟದ ವತಿಯಿಂದ ವಿಶ್ವಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು. ನಂತರದ ವರ್ಷಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಪ್ರತಿವರ್ಷ ಅಕ್ಟೋಬರ್ 10 ರಂದು ವಿಷಯ ಆಧಾರಿತ ಅಭಿಯಾನದೊಂದಿಗೆ ವಿಶ್ವಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
- 2025 ರ ವಿಶ್ವಮಾನಸಿಕ ದಿನಾಚರಣೆ ಧ್ಯೇಯವಾಕ್ಯ: 2025ರ ಸಾಲಿನ ವಿಶ್ವಮಾನಸಿಕ ದಿನಾಚರಣೆ ಧ್ಯೇಯವಾಕ್ಯ “ದುರಂತ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಮಾನಸಿಕ ಆರೋಗ್ಯ ಮತ್ತು ಅದರ ಸೇವೆಗಳ ಲಭ್ಯತೆ” ಕುರಿತಾಗಿದೆ. ಮಾನಸಿಕ ಆರೋಗ್ಯ ತುರ್ತು ಸೇವೆಗಳ ಲಭ್ಯತೆಯ ಕುರಿತು ಜಾಗೃತಿ ಮೂಡಿಸುವುದು ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುವವರಿಗೆ ತುರ್ತು ಸೇವೆ ಸೌಲಭ್ಯಗಳನ್ನು ಒದಗಿಸುವಂತಹ ವ್ಯವಸ್ಥೆಗಳನ್ನು ಬಲಪಡಿಸುವುದು ವಿಶ್ವಮಾನಸಿಕ ದಿನಾಚರಣೆಯ ಉದ್ದೇಶವಾಗಿದೆ.
- ಮಾನಸಿಕ ಆರೋಗ್ಯ ಮೂಲಭೂತ ಮಾನವ ಹಕ್ಕು: ಮಾನಸಿಕ ಆರೋಗ್ಯವನ್ನು ಮೂಲಭೂತ ಮಾನವ ಹಕ್ಕು ಎಂದು ಪರಿಗಣಿಸಲಾಗಿದೆ. ಇದು ವೈಯಕ್ತಿಕ ಮಾನಸಿಕ ಯೋಗ ಕ್ಷೇಮದ ಅಗತ್ಯತೆಯನ್ನು ಒಳಗೊಂಡಿದೆ. ಪ್ರತಿಯೊಬ್ಬ ವ್ಯಕ್ತಿಯು ಗುಣಮಟ್ಟದ ಮಾನಸಿಕ ಆರೋಗ್ಯ ಆರೈಕೆ ಸೌಲಭ್ಯವನ್ನು ಮತ್ತು ಮಾನಸಿಕ ಆರೋಗ್ಯ ರಕ್ಷಣೆಯನ್ನು ಪಡೆಯುವ ಹಕ್ಕು ಹೊಂದಿರುತ್ತಾನೆ. ಆದ ಕಾರಣ ಸರ್ಕಾರಗಳು ಎಲ್ಲಾರಿಗೂ ಮಾನಸಿಕ ಆರೋಗ್ಯ ಸುರಕ್ಷತೆ ಮತ್ತು ಸೇವಾ ಸೌಲಭ್ಯಗಳನ್ನು ಒದಗಿಸುತ್ತವೆ.
- ಮಾನಸಿಕ ಚಿಕಿತ್ಸೆ ಮತ್ತು ಸೇವಾ ಸೌಲಭ್ಯಗಳು: ದೈಹಿಕ ರೋಗಗಳನ್ನು ಗುಣಪಡಿಸಲು ಚಿಕಿತ್ಸೆ ನೀಡುವಂತೆ ಮಾನಸಿಕ ರೋಗಗಳನ್ನು ಚಿಕಿತ್ಸೆ ನೀಡಿ ಗುಣಪಡಿಸಬಹುದು.
- ಮಾನಸಿಕ ಚಿಕಿತ್ಸೆಗಳು: ಮನೋರೋಗಗಳನ್ನು ಗುಣಪಡಿಸಲು ಮನೋಚಿಕಿತ್ಸೆ, ವರ್ತನಾ ಚಿಕಿತ್ಸೆ, ಸಂಜ್ಞಾನಾತ್ಮಕ ಚಿಕಿತ್ಸೆ, ತಾರ್ಕಿಕ ಸಂವೇಗಾತ್ಮಕ ವರ್ತನಾ ಚಿಕಿತ್ಸೆ, ನಿರ್ದೇಶಿತ ವರ್ತನಾ ಚಿಕಿತ್ಸೆ, ಕೌಟುಂಬಿಕ ಚಿಕಿತ್ಸೆ, ಬೆಂಬಲಾತ್ಮಕ ಚಿಕಿತ್ಸೆ, ಸಮೂಹ ಚಿಕಿತ್ಸೆಗಳನ್ನು ಮತ್ತು ಆಪ್ತಸಲಹೆಯನ್ನು ಮನೋಶಾಸ್ತ್ರಜ್ಞರು ನೀಡುತ್ತಾರೆ. ಮನೋರೋಗಿಗಳಿಗೆ ಔಷಧಿ ಚಿಕಿತ್ಸೆಗಳನ್ನು ಮನೋವೈದ್ಯರು ನೀಡುವರು. ಆದ ಕಾರಣ ಮಾನಸಿಕ ರೋಗಗಳಿಂದ ಬಳಲುವ ವ್ಯಕ್ತಿಗಳು ಹಿಂಜರಿಕೆ ಇಲ್ಲದೆ ಮಾನಸಿಕ ಆಸ್ಪತ್ರೆಗಳಿಗೆ ಹೋಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಮನೋರೋಗಗಳನ್ನು ಗುಣಪಡಿಸಿಕೊಳ್ಳಬಹುದು.
ಮಾನಸಿಕ ಆರೋಗ್ಯ ಸುರಕ್ಷತೆಯನ್ನು ಕಾಪಾಡುವ ಮತ್ತು ಸೇವಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿವೆ. ಅವುಗಳು ಕೆಳಕಂಡಂತಿವೆ.
- ಮನೋಚೈತನ್ಯ ಕ್ಲಿನಿಕ್ ಕಾರ್ಯಕ್ರಮ: ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ 2014ರಲ್ಲಿ “ಮನೋಚೈತನ್ಯ ಕ್ಲಿನಿಕ್” ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮದಡಿಯಲ್ಲಿ ಪ್ರತಿ ಮಂಗಳವಾರ ತಾಲ್ಲೂಕು ಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಆರೈಕೆ ಕುರಿತಾಗಿ ಶಿಬಿರಗಳನ್ನು ಆರೋಗ್ಯ ಇಲಾಖೆವತಿಯಿಂದ ಆಯೋಜಿಸಲಾಗುತ್ತದೆ. ಈ ಶಿಬಿರದಲ್ಲಿ ಮನೋವೈದ್ಯರು ಮತ್ತು ಮನೋಶಾಸ್ತ್ರ ತಜ್ಞರು ಭಾಗವಹಿಸಿ ಮಾನಸಿಕ ರೋಗಿಗಳಿಗೆ ಮನೋಚಿಕಿತ್ಸೆ, ಔಷದಿ ಮತ್ತು ಆಪ್ತ ಸಮಾಲೋಚನ ಸೇವೆಗಳನ್ನು ಒದಗಿಸುತ್ತಾರೆ. ಈ ಸೌಲಭ್ಯವನ್ನು ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರು ಉಪಯೋಗಿಸಿ ಕೊಳ್ಳಬೇಕು.
- ಮಾತೃಚೈತನ್ಯ ಕಾರ್ಯಕ್ರಮ: ಗರ್ಭಿಣಿ ಮತ್ತು ಬಾಣಂತಿಯರ ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಅವರುಗಳಿಗೆ ಸೂಕ್ತ ಮಾನಸಿಕ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನಾ ಸೇವಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ದೇಶದಲ್ಲೆ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು 2022ರಲ್ಲಿ “ಮಾತೃ ಚೈತನ್ಯ ಕಾರ್ಯಕ್ರಮ”ವನ್ನು ಪ್ರಾರಂಭಿಸಿದರು. ಪ್ರಾಥಮಿಕ ಮತ್ತು ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಈ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯು ಪ್ರತಿವಾರ ನಿಗಧಿತ ದಿನದಂದು ಆಯೋಜಿಸುವುದು. ಮನೋವೈದ್ಯರು ಮತ್ತು ಮನೋಶಾಸ್ತ್ರÀಜ್ಞರು ಗರ್ಭಿಣಿ ಮತ್ತು ಬಾಣಂತಿಯರಿಗೆ ಮಾನಸಿಕ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಸೂಕ್ತ ಆಪ್ತಸಲಹೆ ಮತ್ತು ಚಿಕಿತ್ಸೆಯನ್ನು ನೀಡುವರು.
- ಮಾನಸಧಾರ ಕೇಂದ್ರ: ಮಾನಸಿಕ ಅಸ್ವಸ್ಥರು, ಮಾದಕ ವ್ಯಸನಿಗಳು ,ಮದ್ಯಪಾನ ಅವಲಂಬಿತರು, ಗೀಳುಚಟ ವಿಕಾರಗಳಿಂದ ಬಳಲುವವರು, ಧೀರ್ಘಕಾಲಿಕ ಮಾನಸಿಕ ರೋಗ ಮತ್ತು ಬುಧ್ದಿಮಾಂದ್ಯತೆಯ ಸಮಸ್ಯೆಯವರಿಗೆ ಹಗಲು ಆರೈಕೆ ಮತ್ತು ಪುನರ್‍ವಸತಿ ಸೇವಾ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಮಾನಸಧಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರದಲ್ಲಿ ಮನೋವೈದ್ಯರು ಮತ್ತು ಮನೋಶಾಸ್ತ್ರಜ್ಞರು ಮಾನಸಿಕ ರೋಗಿಗಳಿಗೆ ಆಪ್ತಸಮಾಲೋಚನೆ, ಮನೋಚಿಕಿತ್ಸೆ ಹಾಗೂ ಬದುಕಿನ ನಿರ್ವಹಣೆಗಾಗಿ ವ್ಯತ್ತಿಪರ ತರಬೇತಿಗಳನ್ನು ನೀಡುವರು.
- ಟೆಲಿಮಾನಸ್: ಇದು ರಾಷ್ಟ್ರೀಯ ಟೆಲಿಮಾನಸಿಕ ಆರೋಗ್ಯ ಕಾರ್ಯಕ್ರಮವಾಗಿದ್ದು, ಇದು ಮಾನಸಿಕ ಆರೋಗ್ಯ ಸೇವಾ ಸೌಲಭ್ಯವನ್ನು ಉಚಿತವಾಗಿ ದಿನದ 24ಗಂಟೆಗಳು ಒದಗಿಸುವ ಮಾನಸಿಕ ಆರೋಗ್ಯ ಸಹಾಯವಾಣಿಯಾಗಿದೆ (ಸಹಾಯವಾಣಿ ಸಂಖ್ಯೆ: 14416) ಪರೀಕ್ಷೆ ಒತ್ತಡ ,ಮಾದಕ ಮತ್ತು ಮದ್ಯ ವ್ಯಸನಿಗಳು, ಕೌಟುಂಬಿಕ ಸಮಸ್ಯೆ, ಖಿನ್ನತೆ, ಮುಂತಾದ ಮಾನಸಿಕ ರೋಗಗಳಿಂದ ಬಳಲುವವರಿಗೆ ಮಾನಸಿಕ ಆರೋಗ್ಯ ವಿಷಯ ಪರಿಣಿತರು ಆಪ್ತಸಲಹೆ ಸೇವೆಯನ್ನು ಒದಗಿಸುವರು. ಮಾನಸಿಕ ರೋಗಿಗಳ ಗೌಪ್ಯತೆಯನ್ನು ಕಾಪಾಡಲಾಗುವುದು. ಈ ಕೇಂದ್ರದಲ್ಲಿ ಆಪ್ತ ಸಲಹೆ ಸೇವೆಯನ್ನು ಕನ್ನಡ, ಹಿಂದಿ. ಇಂಗ್ಲೀಷ್, ಮಲಯಾಳಂ, ಬಂಗಾಳಿ ಭಾಷೆಗಳಲ್ಲಿ ಒದಗಿಸುವರು.
- ಒನ್‍ಸ್ಟಾಪ್ ಕೇಂದ್ರ: ಇದು ಕೇಂದ್ರ ಸರ್ಕಾರದ ಮಿಷನ್ ಶಕ್ತಿ ಯೋಜನೆಯಡಿಯಲ್ಲಿ ಸ್ಥಾಪಿತವಾದ ಕೇಂದ್ರವಾಗಿದೆ. ಈ ಕೇಂದ್ರದಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ದಿನದ 24ಗಂಟೆಗಳು ಮನೋಶಾಸ್ತ್ರಜ್ಞರು ಉಚಿತ ಮಾನಸಿಕ ಆಪ್ತ ಸಮಾಲೋಚನಾ ಸೇವಾ ಸೌಲಭ್ಯಗಳನ್ನು ಒದಗಿಸುವರು. ಇದು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಆಭಿವೃಧ್ಧಿ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
- ಕರ್ನಾಟಕ ಮೆದುಳು ಆರೋಗ್ಯ ಉತ್ತೇಜಿಸುವಿಕೆ ಕೇಂದ್ರ: ಈ ಕೇಂದ್ರದಲ್ಲಿ ಧೀರ್ಘಕಾಲಿಕ ಮಾನಸಿಕ ರೋಗಗಳಾದ ಡಿಮೆನ್ಷಿಯಾ, ಮರೆವಿನ ಕಾಯಿಲೆ, ಹಾಗೂ ಮೆದುಳಿನ ನ್ಯೂನ್ಯತೆಗಳಿಂದ ಉಂಟಾಗುವ ರೋಗಗಳಾದ ಪಾಶ್ರ್ವವಾಯು, ಮೂರ್ಚೆ ರೋಗಗಳಿಂದ ಬಳಲುವವರಿಗೆ, ಚಿಕಿತೆ,್ಸ ಆಪ್ತಸಮಾಲೋಚನೆ, ಮನೋಶಿಕ್ಷಣ ಸೇವಾ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಸರ್ಕಾರವು ಪ್ರತಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ “ಕರ್ನಾಟಕ ಮೆದುಳು ಆರೋಗ್ಯ ಉತ್ತೇಜಿಸುವಿಕೆ ಕೇಂದ್ರ”ವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರದಲ್ಲಿ ಮನೋವೈದ್ಯರು, ಮನೋಶಾಸ್ತ್ರಜ್ಞರು, ನರರೋಗಶಾಸ್ತ್ರಜ್ಞರು ಮತ್ತು ವಾಕ್‍ಚಿಕಿತ್ಸಕರುಗಳು ಮಾನಸಿಕ ರೋಗಿಗಳಿಗೆ ಮತ್ತು ರೋಗಿಗಳನ್ನು ಆರೈಕೆ ಮಾಡುವ ಕುಟುಂಬದ ಸದಸ್ಯರುಗಳಿಗೆ ಮನೋಶಿಕ್ಷಣ, ತರಭೇತಿ ಮತ್ತು ಆಪ್ತಸಮಾಲೋಚನ ಸೌಲಭ್ಯಗಳನ್ನು ಒದಗಿಸುವರು.
- ಜಿಲ್ಲಾ ಆಸ್ಟತ್ರೆಗಳ ಮನೋಚಿಕಿತ್ಸೆ ವಿಭಾಗದ ಸೇವೆಗಳು: ಪ್ರತಿಯೊಂದು ಜಿಲ್ಲಾ ಆಸ್ಟತ್ರೆಗಳಲ್ಲಿ ಪ್ರತ್ಯೇಕವಾದ ಮನೋಚಿಕಿತ್ಸೆ ವಿಭಾಗಗಳಿರುತ್ತವೆ. ಈ ವಿಭಾಗದಲ್ಲಿ ಮನೋವೈದ್ಯರು ಮತ್ತು ಮನೋಶಾಸ್ತ್ರಜ್ಞರು ಕಾರ್ಯವನ್ನು ನಿರ್ವಹಿಸುವರು. ಇಲ್ಲಿ ಮಾನಸಿಕ ರೋಗಿಗಳಿಗೆ ಒಳರೋಗಿ ಮತ್ತು ಹೊರರೋಗಿ ಚಿಕಿತ್ಸೆ ಸೌಲಭ್ಯಗಳು ದೊರೆಯುತ್ತವೆ.
ಜಾಗೃತಿ ಕಾರ್ಯಕ್ರಮಗಳ ಆಯೋಜಿಸುವಿಕೆ:
• ಸ್ವಯಂ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ಇಲಾಖೆಗಳು ಮಾನಸಿಕ ಆರೋಗ್ಯ ಮತ್ತು ಸೇವಾ ಸೌಲಭ್ಯಗಳ ಕುರಿತಾಗಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಯುವ ಸಮುದಾಯಕ್ಕೆ ಜಾಗೃತಿಯನ್ನು ಮೂಡಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಶಾಲೆ, ಕಾಲೇಜು, ಕಾರ್ಖಾನೆಗಳಲ್ಲಿ, ಉದ್ಯೋಗಿಗಳು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮತ್ತು ಸಮುದಾಯಗಳಲ್ಲಿ ಆಯೋಜಿಸಬೇಕು.
• ಸಮೂಹ ಮಾದ್ಯಮಗಳು ಮಾನಸಿಕ ಆರೋಗ್ಯ ಕ್ಷೇತ್ರದ ವಿಷಯ ಪರಿಣಿತರೊಂದಿಗೆ ಮಾನಸಿಕ ಆರೋಗ್ಯದ ಕುರಿತಾಗಿ ಸಂವಾದ ಕಾರ್ಯಕ್ರಮಗಳು ಮತ್ತು ಚರ್ಚೆಯನ್ನು ಆಯೋಜಿಸಿ ಸಾರ್ವಜನಿಕರಿಗೆ ಮಾನಸಿಕ ಆರೋಗ್ಯ ಮತ್ತು ಸೇವಾ ಸೌಲಭ್ಯಗಳ ಕುರಿತು ಅರಿವನ್ನು ಮೂಡಿಸುವುದು.
ವಿವಿಧ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಮುಖಾಂತರ ದೊರೆಯುವಂತಹ ಮಾನಸಿಕ ಚಿಕಿತ್ಸೆ ಮತ್ತು ಆರೈಕೆ, ಸೇವಾ ಸೌಲಭ್ಯಗಳ ಬಗ್ಗೆ ಸಾರ್ವಜನಿಕರು ಅರಿವನ್ನು ಹೊಂದಿ ಮಾನಸಿಕ ಸಮಸ್ಯೆಗಳು ಎದುರಾದಾಗ ಭಯ ಪಡದೆ ಸೂಕ್ತ ಚಿಕಿತ್ಸೆಗಳನ್ನು ಪಡೆದುಕೊಂಡು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮಾನಸಿಕ ಆರೋಗ್ಯವಿದ್ದರಷ್ಟೆ ಸಂಪೂರ್ಣ ಆರೋಗ್ಯ ಮತ್ತು ಸಂತೃಪ್ತ ಜೀವನ.
-
ಡಾ. ಸುರ್ಮ. ಎಸ್ – ಮನೋಶಾಸ್ತ್ರಜ್ಞರು, ಮನೋವಿಜ್ಞಾನ ಅಧ್ಯಯನ ವಿಭಾಗ, ಕರಾಮುವಿ, ಮೈಸೂರು.
