‘ಮೊದಲ ರಾತ್ರಿ’ ಸಣ್ಣಕತೆಗಳು

ಅದ್ರಿಕಾಳ ಮೊದಲ ರಾತ್ರಿಗೆ ಒಂದಲ್ಲ ಒಂದು ವಿಘ್ನಗಳು ಬರುತ್ತಲೇ ಇದ್ದವು. ಕೊನೆಗೆ ಅದ್ರಿಕಾಳ ಕಣ್ಣಲ್ಲಿ ಕಣ್ಣೀರ ಕಾರಂಜಿ ಹರಿಯಿತು. ಮುಂದೇನಾಯಿತು ಗುರು ಮೂರ್ತಿ ಅವರ ‘ಮೊದಲ ರಾತ್ರಿ’ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ಅದು ಪ್ರಥಮ ರಾತ್ರಿ. ಮದುವೆಯಾದ ಎಲ್ಲರೂ ಬಯಸುವ ರಾತ್ರಿ. ಮನಮೆಚ್ಚಿದವನಿಗೆ ದೇಹವನ್ನು ಅರ್ಪಿಸುವ ಸುಖದ ರಾತ್ರಿ. ಈ ಪ್ರಥಮ ರಾತ್ರಿಯ ಬಗ್ಗೆ ಹಲವು ಕನಸುಗಳನ್ನು ಹೊತ್ತು ಆ ರಾತ್ರಿಗಾಗಿ ಕಾತುರತೆಯಿಂದ ಕಾದಿದ್ದಳು ಅದ್ರಿಕಾ.

ತನ್ನ ಗೆಳತಿಯರ ಜೊತೆ ತನ್ನ ಮದುವೆಯ ಬಗ್ಗೆ, ತನ್ನ ಮೊದಲ ರಾತ್ರಿಯ ಬಗ್ಗೆ ತನ್ನಲ್ಲಿ ಬಚ್ಚಿಟ್ಟುಕೊಂಡಿದ್ದ ಆಸೆಗಳನ್ನು ಹೇಳಿಕೊಂಡು ಸಂಭ್ರಮಿಸಿದ್ದಳು ಅದ್ರಿಕಾ. ಮದುವೆಯಾದ ದಿನದ ರಾತ್ರಿಯೇ ತನ್ನ ಮೊದಲ ರಾತ್ರಿ ಎಂದು ಬಯಸಿದ್ದ ಅದ್ರಿಕಾಳಿಗೆ ಆ ರಾತ್ರಿ ಮೊದಲ ರಾತ್ರಿಯಾಗಲಿಲ್ಲ. ಗಂಡನ ಬಿಗಿ ಅಪ್ಪಗೆಯಲ್ಲಿ ಬೆಚ್ಚಗೆ ಮಲಗಬೇಕೆಂಬ ಅವಳ ಆಸೆಗೆ ತಣ್ಣೀರು ಎರಿಚಿದರು ಅತ್ತೆ.

ಪ್ರಸ್ತಕ್ಕೆ ಮೂರ್ಹತ ಚೆನ್ನಾಗಿಲ್ಲ, ವಾರದ ನಂತರ ಮಾಡಲು ನಿಶ್ಚಿಯಿಸಿದರು, ಮನೆ ಪುರೋಹಿತರ ಮಾತನ್ನು ಕೇಳಿ. ಗಂಡ ಎದಿರುಗೆ ಇದ್ದರು, ಚಿಕ್ಕಮ್ಮನ ಪಕ್ಕ ಮಲಗಿದಳು ಅದ್ರಿಕಾ. ಗಂಡ ಎದುರಿಗೆ ಬಂದಾಗ ನಾಚಿ ನೀರಾಗುತ್ತಿದ್ದವಳು ವಾರದಲ್ಲಿ ಕದ್ದು ಮುಚ್ಚಿ ತನ್ನ ಗಂಡನಿಗೆ ತುಟಿಗಳನ್ನು ನೀಡಿ, ಅಷ್ಟಕ್ಕೆ ಖುಷಿಪಟ್ಟಿದ್ದಳು ಅದ್ರಿಕಾ. ಅತ್ತೆ ನಿಶ್ಚಯಿಸಿದ ಮೊದಲ ರಾತ್ರಿಯ ದಿನ ಬಂತು. ಆ ದಿನದ ಮಧ್ಯಾಹ್ನದಿಂದ ಮನೆಯಲ್ಲಿ ಸಡಗರ.ರೂಮು ಹೊಕ್ಕ ನಾಲ್ಕೈದು ಹೆಂಗಸರು ಹೊರ ಬಂದಿದ್ದೆ ಸಾಯಂಕಾಲದ ಮೇಲೆ. ರೂಮಿನಿಂದ ಮಲ್ಲಿಗೆ ಗುಲಾಬಿಯ ಪರಿಮಳ ಸೂಸುತಿತ್ತು. ರೂಮು ಮದುವಣಗಿತ್ತಿಯಂತೆ ಶೃಂಗರಗೊಂಡಿತ್ತು.

ಶ್ವೇತ ವರ್ಣದ ಸೀರೆಯುಟ್ಟು, ಕೆಂಪು ಕುಪ್ಪಸವನ್ನು ತೊಟ್ಟು, ಕಾಲಲ್ಲಿ ಗೆಜ್ಜೆ ಹಾಕಿ, ಕೈತುಂಬಾ ಬಳೆಗಳ ಘಲ್ ಘಲ್ ಅನಿಸುತ್ತಾ, ತುಟಿಗೆ ಗುಲಾಬಿ ರಂಗನ್ನು ಸವರಿ, ಹಣೆಗೆ ಕೆಂಪು ತಿಲಕವನ್ನಿಟ್ಟು ತನ್ನ ದೇಹವನ್ನು ಗಂಡನಿಗೆ ಅರ್ಪಿಸಲು ಕ್ಷಣ ಗಣನೆಯಲ್ಲಿದ್ದಳು. ಶುರುವಿನಲ್ಲಿ ಎದೆ ಡವ ಡವ ಅನ್ನ ತೊಡಗಿತು. ಹೊಸ ಬಾಳಿಗೆ, ಹೊಸ ಲೋಕಕ್ಕೆ ತನ್ನ ಕರೆದ್ಯೊಯಲು ಬರುವರೆಂದು ಬೆಳ್ಳಿಲೋಟದಲ್ಲಿ ಬಾದಮಿ ಹಾಲನ್ನು ಹಿಡಿದು ನಿಂತಿದ್ದಳು.

ತಾನು ಇಪ್ಪತೈದು ವರ್ಷಗಳಿಂದ ಕಾಪಾಡಿಕೊಂಡ ಬಂದ ತನ್ನ ಕನ್ಯಾತ್ವವನ್ನು ಅವನಿಗಾಗಿ ಅರ್ಪಿಸಲು ಕಾದು ಕುಳಿತ ಅದ್ರಿಕಾಳಿಗೆ ಈ ದಿನ ನಿನ್ನ ಮೊದಲ ರಾತ್ರಿ ಇಲ್ಲ ಎಂದು ಬೇಜಾರಿನಿಂದ ತಲೆ‌ಸವರಿದರು ಅತ್ತೆ. ಏಕೆ ಅತ್ತೆ? ತಲೆ ಎತ್ತಿ ಕೇಳಿದಳು ಅದ್ರಿಕಾ. ಅಜ್ಜಿ ಹೋಗಬಿಟ್ಟರಂತೆ. ಹತ್ತು ದಿನ ನಮಗೆ ಸೂತಕ. ಈ ಸೂತಕದಲ್ಲಿ ಪ್ರಸ್ತ ಮಾಡುವಂತಿಲ್ಲ. ಇನ್ನೂ ಏನಿದ್ದರು ವೈಕುಂಠ ಸಮಾರಾಧನೆ ಆದ ನಂತರ ಮೂರ್ಹತ ಹುಡುಕಬೇಕು ಎಂದು ಸಪ್ಪೆ ಮೊರೆ ಹಾಕಿದ ಅದ್ರಿಕಾಳನ್ನು ಸಮಾಧಾನ ಪಡಿಸಿದರು.

ಫೋಟೋ ಕೃಪೆ : google

ಮೊದಲ ರಾತ್ರಿಯ ಕನಸು ನುಚ್ಚು ನೂರಾಯಿತು. ಆ ಹೊಸ ಮೂರ್ಹತ ಎಂದೊ? ಏನೊ? ಚಿಂತೆಗಿಡಾದಳು ಅದ್ರಿಕಾ. ತನ್ನ ಮೊದಲ ರಾತ್ರಿಕ್ಕೆಂದು ಮಾಡಿದ್ದ ಹೂವಿನ ಅಲಂಕಾರವೆಲ್ಲವನ್ನು ರೂಮಿನಿಂದ ಹೊರಹಾಕುವಾಗ ತನ್ನ ಮೈಭಾರಕ್ಕೆ ಬಾಡಬೇಕಾದ ಹೂವುಗಳು, ವ್ಯರ್ಥವಾಗಿ ಬಾಡಿ ಹೋದವಲ್ಲ ಎಂದು ಬೇಜಾರು ಪಟ್ಟುಕೊಂಡಳು.
ಸಾಯುವ ಅಜ್ಜಿ ಇಂದೆ ಸಾಯಬೇಕಿತ್ತೆ? ಇನ್ನೂ ಒಂದು ದಿನ ಬದುಕಿದ್ದರೆ ಗಂಟೇನು ಹೋಗುತಿತ್ತು ಎಂದು ಅಜ್ಜಿಯನ್ನು ಬೈದು ಕೊಂಡಳು.

ಮಗ ಮತ್ತು ಸೊಸೆಯ ಮೊದಲ ರಾತ್ರಿ ಮುಂದೂಡಿದಕ್ಕೆ ವ್ಯಥೆಪಟ್ಟರು ಅತ್ತೆ. ಈ ಬಾರಿ ಮನೆಯಲ್ಲಿ ಬೇಡ ಯಾವುದಾದರು ಹೋಟೆಲ್ ನಲ್ಲಿ ಮಾಡಲು ನಿಶ್ಚಯಿಸಿದರು. ಮೊದಲ ರಾತ್ರಿಯ ಆಸೆ ಮತ್ತೆ ಚಿಗಿರಿತು ಅದ್ರಿಕಾಳಿಗೆ. ತನ್ನ ಮೊದಲ ರಾತ್ರಿಯ ಆಸೆಗಳನ್ನು ಗಂಡನಲ್ಲಿ ಹಂಚಿಕೊಂಡಳು. ಈ ಬಾರಿ ತಾನು ಸೀರೆಯುಟ್ಟು, ಗ್ಲಾಸ್ ನ್ನು ಹಿಡಿದು ನಿಮ್ಮ ಬಳಿ ಬರುವುದಿಲ್ಲ. ಮಾರ್ಡನ್ ಹುಡುಗಿಯಂತೆ ನೈಟಿ ತೊಟ್ಟು ಬರುವೆ ಎಂದು ತನ್ನ ಕಲ್ಪನಾ ಲೋಕದ ಮೊದಲ ರಾತ್ರಿಯ ಕನಸುಗಳನ್ನು ಗಂಡನಲ್ಲಿ ಹಂಚಿಕೊಂಡಳು.

ಅದೇನೊ ಅಂದು ಹೋಟೆಲ್ ಮುಂದೆ ನಡೆದ ರಾಜಕೀಯ ಬಡಿದಾಟದಿಂದಾಗಿ ಆ ಹೋಟೆಲ್ ನ್ನು ದಿನದ ಮಟ್ಟಿಗೆ ಮುಚ್ಚಿದರು ಪೋಲಿಸರು. ಆಸೆಯ ಮೊದಲ ರಾತ್ರಿಯೂ ನಡೆಯಲಿಲ್ಲ, ಮೊದಲ ರಾತ್ರಿ ಎಂಬುದು ಮರೀಚಿಕೆ ಆಗ ತೊಡಗಿತು ಅದ್ರಿಕಾಳ ಪಾಲಿಗೆ. ಮಗಳ ಮೊದಲ ರಾತ್ರಿಗೆ ಒಂದಲ್ಲ ಒಂದು ಅಡಚಣೆಯಾಗಿ ರದ್ದಾಗುವುದ ಕಂಡ ಅದ್ರಿಕಾಳ ಅಪ್ಪ- ಅಮ್ಮ ತಮ್ಮ ಮನೆಯಲ್ಲೆ ಮೊದಲ ರಾತ್ರಿ ಮಾಡಲು ಅವಳ ಅತ್ತೆ ಮಾವರನ್ನು ಒಪ್ಪಿಸಿದರು. ಅಪ್ಪ ಅಮ್ಮರ ಮನೆಯಲ್ಲಿ ಈ ಬಾರಿ ಖಂಡಿತವಾಗಿಯೂ ತನ್ನ ಮೊದಲ ರಾತ್ರಿಯ ಆಸೆ ಈಡೇರುತ್ತದೆಂದು ಬಲವಾಗಿ ನಂಬಿದಳು ಅದ್ರಿಕಾ. ಸೊಸೆ ಮಗನ ಮೊದಲ ರಾತ್ರಿ ಯಾವ ವಿಘ್ನ ವಿಲ್ಲದೆ ಜರುಗಲಿ ಎಂದು ಅತ್ತೆ ಮುಂಜಾನೆ ಎದ್ದು ತಲೆ ಸ್ನಾನ ಮಾಡಿ ಆ ತಿರುಪತಿ ತಿಮ್ಮಪ್ಪಕ್ಕೆ ಮುಡುಪನ್ನು ಕಟ್ಟಿಟ್ಟರು.

ಹಸಿರು ಗದ್ದೆಗಳ ಮಧ್ಯೆ ಕಾರು ಓಡುತಿತ್ತು. ಮಳೆ ಹನಿಗಳು ನೆಲವನ್ನು ಮುಟ್ಟಿ ಸಂಭ್ರಮಿಸುತ್ತಿದ್ದವು. ಮಳೆಯ ನಡುವೆ ಕಾರು ಅದ್ರಿಕಾಳ ತವರಿನತ್ತ ಓಡುತಿತ್ತು. ಮಳೆಯ ವೇಗ ಹೆಚ್ಚಾಯಿತು, ಕಾರಿನ ವೇಗ ಕಡಿಮೆಯಾಯಿತು. ರಭಸದ ಮಳೆಯಿಂದಾಗಿ ಕಾರು ಓಡದೆ ನಿಂತು ಬಿಟ್ಟಿತು. ಮುಂದೆ ದಾರಿ ಇಲ್ಲ, ದೊಡ್ಡ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿದೆ ಎಂದು ಬೈಕ್ ಸವಾರನೊಬ್ಬ ಹೇಳಿ ಹೊರಟಾಗ.

ಅವಳ ಮೊದಲ ರಾತ್ರಿಯ ಆಶಾಗೋಪರ ಕುಸಿದು ಹೋಯಿತು. ಹಲವು ಕನಸುಗಳ ಹೊತ್ತು ತವರಿಗೆ ಹೊರಟಿದ್ದ ಅದ್ರಿಕಾಳ ಕಣ್ಣಲ್ಲಿ ಕಣ್ಣೀರ ಕಾರಂಜಿ ಹರಿಯಿತು. ಹೆಂಡತಿಯ ಸಮಾಧಾನ ಪಡಿಸಿದ. ಆದರೂ ತನ್ನಾಸೆ ನೆರವೇರಲಿಲ್ಲ ಎಂಬ ಸಂಕಟದಲ್ಲಿದ್ದಳು ಅದ್ರಿಕಾ. ಕತ್ತಲು ರಸ್ತೆಯ ಆವರಿಸಿತು .ಮಳೆ ಜಿನುಗುತಿತ್ತು. ಈ ರಾತ್ರಿ ಕಾರಿನಲ್ಲಿಯೇ? ಕೇಳಿದಳು ಅದ್ರಿಕಾ. ನೋಡುವ ಎಂದು ಕಾರಿನಿಂದ ಕೆಳಗಿಳಿದ, ದೂರದಲ್ಲಿ ಬೆಳಕಿನ ಮಿನುಗು ಕಂಡ. ಆ ಗುಡಿಸಿಲಿನಲಿ ಮಂದ ಬೆಳಕು. ಆ ಮಂದ ಬೆಳಕಿನಲ್ಲಿ ಅಜ್ಜಿ ಒಬ್ಬಳೇ.ಆ ಗುಡಿಸಲೇ ಇಬ್ಬರಿಗೆ ಆಶ್ರಯ ನೀಡಿದ್ದು. ತಾನು ಮಾಡಿದ ಗಂಜಿಯನ್ನು ಇಬ್ಬರಿಗೂ ಕೊಟ್ಟಳು. ಇಬ್ಬರು ಗಂಜಿ ಕುಡಿದರು.

ನೀವು ಗಂಡ ಹೆಂಡತಿ ಒಳಗೆ ಮಲಗಿ, ನಾನು ಹೊರಗೆ ಮಲಗುವೆ ಎಂದು‌ ಮಂದ ಬೆಳಕಿನಲ್ಲಿ ಇಬ್ಬರನ್ನು ಬಿಟ್ಟು ಗುಡಿಸಲಿನ ಬಾಗಿಲನ್ನು ಹಾಕಿಕೊಂಡಳು. ಆ ಮಂದ ಬೆಳಕಿನಲ್ಲಿ, ಬೀಸುವ ತಂಗಾಳಿ ನಡುವೆ, ಆರ್ಭಟಿಸುವ ಗುಡುಗು ಮಿಂಚಿನ ಮಧ್ಯೆ ತನ್ನ ದೇಹ ಸಿರಿಯನ್ನು ಗಂಡನಿಗೆ ಅರ್ಪಿಸಿದಳು ಅದ್ರಿಕಾ. ತಮ್ಮಿಬ್ಬರ ಮೊದಲ ರಾತ್ರಿ ಈ ರೀತಿಯಲ್ಲಿ ಜರುಗುತ್ತದೆಂದು ಕನಸು ಮನಸ್ಸಿನಲ್ಲೂ ಇಬ್ಬರು ಊಹಿಸಿರಲಿಲ್ಲ. ರಾತ್ರಿ ಇಡೀ ದಣಿದರು, ಸಂತೋಷದ ಅಮಲಿನಲ್ಲಿ ತೇಲಾಡಿದರು. ತಾನು ಇಪ್ಪತೈದು ವರ್ಷಗಳ ಕಾಲ ಕಾದುಹಿಡಿದಿದ್ದ ತನ್ನ ಹೆಣ್ತನವನ್ನು ಗಂಡನಿಗೆ ತೃಪ್ತಿಯಾಗಿ ಉಣಬಡಿಸಿದಳು ಅದ್ರಿಕಾ.

ತನ್ನ ಕನಸಿನ ಮೊದಲ ರಾತ್ರಿ ಈ ರೀತಿಯಾಗಿ ಗುಡಿಸಲಿನಲಿ,ಮಳೆ ಗುಡುಗು ಮಿಂಚಿನ ನಡುವೆ‌ ಜರುಗುವುದೆಂದು ಊಹಿಸಿರಲಿಲ್ಲ ಅದ್ರಿಕಾ. ಬೆಳಿಗ್ಗೆ ಅತ್ತೆ ವೆಂಕಟರಮಣಗೆ ಕಟ್ಟಿಟ್ಟ ಮುಡುಪು ವ್ಯರ್ಥವಾಗಲಿಲ್ಲ ಎಂದು ಗಂಡನ ಭುಜಕ್ಕೆ ಒರಗಿದಳು. ಅಜ್ಜಿ ಬೆಳಿಗ್ಗೆ ಕೊಟ್ಟ ಬಿಸಿ ಬಿಸಿ ಕಾಫಿ ಕುಡಿದು ಇಬ್ಬರು ಹೊರಟರು.ಕಾರು ಮನೆಯತ್ತ ಓಡಿತು.ಅದ್ರಿಕಾಳ ಆಸೆಯ ಮೊದಲ ರಾತ್ರಿಯ ಆಸೆ ಈಡೇರಿತು.


  • ಗುರು ಮೂರ್ತಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW