ಒಂದು ವಾರದಲ್ಲೇ ಸತ್ತ ಚೇತನವೆಲ್ಲ ಮರುಹುಟ್ಟು ಪಡೆದಂತೆ… ನಗುವ ರಾಗರಂಜಿತ ತಳಿರಸಿರಿ ರಾಧೆಯ ಮದರಂಗಿ ಹಸ್ತದಂತೆ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಬೆತ್ತಲಾಗಿತ್ತು ಮರ…ಬಳಿಗೆ ಹೋಗಲಿಕ್ಕೇ ಬೇಸರ
ಒರಟೊರಟು
ನೆರಳಿನಾಸರೆಗೆ ಎಲೆಗಳ ಸಮೃದ್ಧಿಯಿಲ್ಲ..
ಬುಡವೋ ತರಗೆಲೆಗಳದೇ
ಸಾಮ್ರಾಜ್ಯ..
ಕಾಲಿಡಲೂ ಭಯ
ಏಕೋ ಗ್ರೀಷ್ಮ ಕೆಡುಕೆನಿಸಿತು
ಎಷ್ಟು ದಿನ..
ಒಂದು ವಾರದಲ್ಲೇ ಸತ್ತ ಚೇತನವೆಲ್ಲ ಮರುಹುಟ್ಟು ಪಡೆದಂತೆ
ನಗುವ ರಾಗರಂಜಿತ ತಳಿರಸಿರಿ ರಾಧೆಯ ಮದರಂಗಿ ಹಸ್ತ
ಕೃಷ್ಣನ ಶ್ಯಾಮಲ ವಕ್ಷ ಸ್ಥಳದ ಮೇಲೆ ಸರಿದಾಡಿದಂತೆ
ಅವನ ಮೇಲುದವನ್ನು ನವಿರಾಗಿ ಸರಿಸಿದಂತೆ ಹಸಿರು ತೆರೆಗಳ
ಒಡಲಲ್ಲಿ ಮುಳುಗೇಳುತ್ತಾ ರೋಮಾಂಚನಗೊಳಿಸುವ
ತಂಗಾಳಿ….
ಆ ಉಸಿರು
ಈ ಹಸಿರು
ಆ ಕೆಂಪು
ಈ ಪಚ್ಚೆ
ಯಾವ ಅಕ್ಕಸಾಲಿಗರ
ಮೋಹಕ ಆಭರಣವೋ
ಕಲ್ಪನೆಯೋ
ನಿಜವೋ…ನಿಧಾನವಾಗಿ
ತಿಳಿಹಸಿರೊಡಲಲ್ಲಿ ಹೊಮ್ಮಿ ನಗುವ ಮುಗುಳು…
ಕಣ್ತಣಿಯಿತೆನುವಂತಿಲ್ಲ
ಬಣ್ಣಗಳ ಚಿತ್ತಾರ
ಕಂಪುಗಳ ಸವಿ ಮೇಳ
ದುಂಬಿ ಝೇಂಕಾರ
ಇದು ಯಾರ ಹುನ್ನಾರ
ಹಸಿರು ತಲ್ಪದಲಿ ಒರಗಿದ್ದ
ಹೂ ಕೂಸಿಗೆ ಕೋಗಿಲೆಯ
ಲಾಲಿ ಹಾಡು
ಕಾಜಾಣದ ಶಿಳ್ಳೆ
ಅಲರ ತೂಗುವ ಕೈ..
ತಂದನೇ ಗೋಪಾಲ ಇಲ್ಲಿಗೆ
ನಂದನವ..
ಕೇಳುತಿದೆ ಗೋಪಿಯರ
ಕಾಲಂದುಗೆಯ ಸದ್ದು…
ಬಾರೇ ಗೆಳತಿ ತೆರಳುವ ನಾವೂ
ಎಸೆಯಬೇಕಿದೆ
ಚಿಂತೆಯ ಬೊಂತೆಯ
ಆ ಯಮುನೆಯ ಒಡಲಲ್ಲಿ
ನಂದಗೋಪಾಲನ
ಆನಂದ ಸದನದಲ್ಲಿ
ತೊಳೆದುಕೊಳ್ಳುವ
ಮಾಸಿದ ಮನಸುಗಳ
ನಾಳೆಗಳ ಪುನರುಜ್ಜೀವನಕ್ಕಾಗಿ…
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
