ಚ್ರಿಕ್, ಚ್ರಿಕ್ ಎಂದು ಸದ್ದು ಮಾಡುವ ಈ ಹುಳುವಿನ ಹೆಸರು ‘ಕುಂಬಾರ ಹುಳು’. ದೇಹಕ್ಕಿಂತ ತಲೆಯೇ ದೊಡ್ಡದಾಗಿರುವುದರಿಂದ ಈ ಹುಳುಗಳು ಭಯಾನಕವಾಗಿ ಕಾಣಿಸುತ್ತವೆ. ಕುಂಬಾರ ಹುಳುವಿನ ವಿಶೇಷತೆಯ ಕುರಿತು ಸಿದ್ಧರಾಮ ಕೂಡ್ಲಿಗಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
–
ಬೆಳಿಗ್ಗೆ ಕಂಪೌಂಡಿನಲ್ಲಿ ಕಸ ಬಳೆದು, ನೀರು ಹಾಕಲು ನಲ್ಲಿಯ ಬಳಿ ಇಟ್ಟಿದ್ದ ಬಕೆಟ್ ನೋಡಿದೆ. ಅದರಲ್ಲಿ ಇನ್ನೂ ಸ್ವಲ್ಪ ನೀರಿತ್ತು. ಆ ನೀರಿನಲ್ಲಿ ಈ ಭೀಕರಾಕಾರದ ಹುಳು ಹೊರಬರಲು ಒದ್ದಾಡುತ್ತಿತ್ತು.
–
ನನಗೆ ತಕ್ಷಣ ಗೊತ್ತಾಯಿತು ಇದನ್ನು ಸ್ಥಳೀಯವಾಗಿ “ಕುಂಬಾರ ಹುಳು” ಎಂದು ಕರೆಯಲಾಗುತ್ತೆ. ಇಂಗ್ಲೀಷಿನಲ್ಲಿ Mole Cricket ಎಂದು ಕರೆಯಲಾಗುತ್ತೆ. ಈ cricket ಅನ್ನೋ ಹುಳುಗಳೇ ತಲೆ ಗುಂಯ್ ಎನ್ನುವಂತೆ ಶಬ್ದ ಮಾಡೋದು.
–
ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಆಕಸ್ಮಾತ್ ಆಗಿ ಈ ಹುಳು ಸೇರಿಕೊಂಡರೆ ಒಂದು ಮೂಲೆಯಲ್ಲಿ ಕುಳಿತು ಕಿವಿ ಗುಂಯ್ ಅನ್ನುವ ಹಾಗೆ, ತಲೆ ಚಿಟ್ಟು ಹಿಡಿಯುವ ಹಾಗೆ ಅರಚುತ್ತಿರುತ್ತದೆ. ನಡು ನಡುವೆ ಅಂತರ ಬಿಟ್ಟು ಚ್ರಿಕ್, ಚ್ರಿಕ್ ಎಂದು ಸದ್ದು ಮಾಡುವ ಈ ಹುಳುವನ್ನು ನೋಡಿದರೆ ಭಯ ಆಗುವಂತಿರುತ್ತದೆ. ಆದರೆ ಇದು ನಿರುಪದ್ರವಿಯಾದರೂ ಇದರ ಸದ್ದೇ ನಮಗೆ ಇರಿಟೇಟ್ ಆಗುವಂತಿರುತ್ತದೆ.

–
ದೇಹ ರಚನೆ :
ದೇಹಕ್ಕಿಂತ ತಲೆಯೇ ದೊಡ್ಡದಾಗಿರುವುದರಿಂದ ಈ ಹುಳುಗಳು ಭಯಾನಕವಾಗಿ ಕಾಣಿಸುತ್ತವೆ. ಅಲ್ಲದೆ ಇದರ ದೇಹ ರಚನೆ ಮೃದುವಾಗಿದ್ದು, ರೆಕ್ಕೆಗಳು ಚಿಕ್ಕವಾಗಿರುತ್ತವೆ. ಸ್ವಲ್ಪ ದೂರದವರೆಗೆ ಮಾತ್ರ ಹಾರುವ ಶಕ್ತಿಯನ್ನು ಪಡೆದುಕೊಂಡಿರುವ ಈ ಹುಳುಗಳು ಸಾಮಾನ್ಯವಾಗಿ ಮಣ್ಣಿನಲ್ಲಿ ಹುದುಗಿರುತ್ತವೆ.
–
ಸಂತಾನೋತ್ಪತ್ತಿ :
ಪಾಪ ಈ ಗಂಡು ಹುಳು ಹೆಣ್ಣಿನ ಮಿಲನಕ್ಕಾಗಿ ಕರೆಯುವಿಕೆಯೇ ಈ ಸದ್ದು. ಅಂದ ಹಾಗೆ ಈ ಹುಳುವಿನ ಕರೆಗೆ ಹೆಣ್ಣು ಬಂದರೆ ಮಿಲನದ ನಂತರ ಮಣ್ಣಿನ ಗುಳಿಯಲ್ಲಿ ಸರಿಸುಮಾರು 60-70 ಮೊಟ್ಟೆಗಳನ್ನಿಡುತ್ತದೆ. 10-40 ದಿನಗಳ ನಂತರ ಇವು ಮರಿಯಾಗುತ್ತವೆ.
–
ಆಹಾರ :
ಗಿಡಗಳ ಬೇರು, ಹುಲ್ಲು, ಕೆಲವೊಮ್ಮೆ ಸಣ್ಣಪುಟ್ಟ ಕೀಟಗಳನ್ನೂ ಇವು ಭಕ್ಷಿಸುತ್ತವೆ.
–
ವರ್ತನೆ :
ಸಾಮಾನ್ಯವಾಗಿ ಮನುಷ್ಯ 0-88 ಡೆಸಿಬಲ್ ನಷ್ಟು ಶಬ್ದವನ್ನು ಕೇಳುವ ಸಾಮರ್ಥ್ಯವನ್ನು ಪಡೆದಿರುತ್ತಾನೆ. ಅದರ ನಂತರದ್ದು ಅತೀವವಾದ ಶಬ್ದ ಹಾಗೂ ಅದು ಕಿವಿಯ ಮೇಲೂ ಪರಿಣಾಮ ಬೀರುತ್ತದೆ. ಈ ಗಂಡು ಹುಳುಗಳು ಹೆಣ್ಣನ್ನು ಕರೆಯಲು ಮಣ್ಣಿನಲ್ಲಿ ಒಂದು ಗುಳಿಯನ್ನು ತೋಡಿ, ಅಲ್ಲಿಂದ ಕೂಗಲು ಶುರು ಮಾಡುತ್ತವೆ. ಅದು ಹೇಗೆಂದರೆ ಒಮ್ಮೊಮ್ಮೆ 60-80ರಷ್ಟು ಡೆಸಿಬಲ್ ಗಳಷ್ಟು ಸದ್ದು ಮಾಡುತ್ತವೆ. ಸುತ್ತಲಿನ 20 ಮೀಟರ್ ಗಳಷ್ಟು ವ್ಯಾಪ್ತಿಯಲ್ಲಿ ಆ ಸದ್ದು ಹರಡುತ್ತಿರುತ್ತದೆ. ಇದೆಲ್ಲ ಹೆಣ್ಣನ್ನು ಕರೆಯುವ ವಿಧಾನ. ಒಮ್ಮೊಮ್ಮೆ ಇವುಗಳ ಕೂಗಿಗೆ 20-30 ಹೆಣ್ಣು ಹುಳುಗಳು ಬಂದುಬಿಡುತ್ತವೆ. ನಮಗೆ ತಲೆ ಚಿಟ್ಟು ಹಿಡಿಸುವ ಈ ಹುಳುಗಳ ಅರಚುವಿಕೆ ಹೆಣ್ಣು ಹುಳುಗಳಿಗೆ ಮಧುರ ಹಾಡಿನಂತೇ ಕೇಳಿಸುತ್ತದೆ.
–
ವಿಶೇಷತೆ :
ಜಗತ್ತಿನಾದ್ಯಂತ ಹರಡಿರುವ ಈ ಹುಳುಗಳ ಬಗ್ಗೆ ಒಂದಿಷ್ಟು ವಿಶೇಷತೆ : ಜಾಂಬಿಯಾ ದೇಶದಲ್ಲಿ ಈ ಹುಳುಗಳನ್ನು ನೋಡಿದರೆ “ಅದೃಷ್ಟ” ಎಂಬ ನಂಬಿಕೆ ಇದೆ. ಲ್ಯಾಟಿನ್ ಅಮೆರಿಕೆಯಲ್ಲಿ ಈ ಹುಳುಗಳು ಮಣ್ಣನ್ನು ಹೊಕ್ಕರೆ ಮಳೆ ಬರುವ ನಿರೀಕ್ಷೆ ಎಂದು ನಂಬಲಾಗುತ್ತದೆ. ಜಪಾನಿನ ಜಾನಪದ ನಂಬಿಕೆಯಂತೆ ವ್ಯಕ್ತಿಯ ಪಾಪಗಳನ್ನು ಈ ಹುಳುಗಳು, ಮೊಟ್ಟೆಗಳು ಸ್ವರ್ಗಕ್ಕೆ ತಿಳಿಸುತ್ತವೆ ಎಂಬ ನಂಬಿಕೆಯಿದೆ.

ಫೋಟೋ ಕೃಪೆ : google
–
ಆಹಾರವಾಗಿ :
ಪಶ್ಚಿಮ ಜಾವಾ, ವಿಯೆಟ್ನಾಂ, ಥೈಲ್ಯಾಂಡ್ ಗಳಲ್ಲಿ ಇದನ್ನು ಆಹಾರವಾಗಿ ಬಳಸಲಾಗುತ್ತದೆ. ಅನ್ನದ ಜೊತೆಗೆ ಇದನ್ನು ಹುರಿದು ಕೊಡಲಾಗುತ್ತದೆ. ಫಿಲಿಪೈನ್ಸ್ ನಲ್ಲಿ ಇದೊಂದು ಸ್ವಾದಿಷ್ಟ ಆಹಾರ.
–
ಕೆಲವು ಕೀಟಗಳು, ಹುಳುಗಳು ವರ್ಣರಂಜಿತವಾಗಿ ಮನಸೆಳೆದರೆ, ಕೆಲವು ಈ ರೀತಿ ಭಯಾನಕವಾಗಿರುತ್ತವೆ. ವರ್ಣರಂಜಿತವಾಗಿರುವ ಕೀಟಗಳನ್ನು ಕೆಲವು ದೇಶಗಳಲ್ಲಿ ಮುದ್ದಿನ ಮರಿಯಂತೆ ಸಾಕುತ್ತಾರೆ. ಇಂಥವುಗಳನ್ನು ಸ್ವಾದಿಷ್ಟ ಆಹಾರ ಎಂದು ಭಕ್ಷಿಸಲಾಗುತ್ತದೆ.
–
ಏನೇ ಅನ್ನಿ ಈ ಹುಳುಗಳ ಪ್ರಪಂಚವೇ ವಿಚಿತ್ರ ಹಾಗು ವಿಭಿನ್ನ. ಬಗೆದಷ್ಟೂ ಕುತೂಹಲಕಾರಿ ಇವುಗಳ ವಿವರ. ಕುಂಬಾರ ಹುಳುವಿನ ಬೆನ್ನು ಹತ್ತಿ ತಲೆಯೆಲ್ಲ ಕುಂಬಾರನ ಮಡಕೆಯಂತಾಗಿ ಅದರಲ್ಲಿ ಈ ಹುಳು ಚ್ರಿಕ್, ಚ್ರಿಕ್ ಎಂದು ಗುಂಗು ಹಿಡಿಸಿಬಿಟ್ಟಿತು.
–
ಮಾಹಿತಿ : ವಿವಿಧ ಮೂಲಗಳಿಂದ
- ಫೋಟೋ ಮತ್ತು ಬರಹ : ಸಿದ್ಧರಾಮ ಕೂಡ್ಲಿಗಿ
