ಜಾನಪದ ಲೋಕದಲ್ಲಿ ಒಂದು ಸುತ್ತು

ಜಾನಪದದ ಬೇರುಗಳನ್ನು ಕಳೆದುಕೊಳ್ಳುತ್ತಿರುವ ನಮ್ಮ ತಲೆಮಾರಿನ , ಅದು ಕೇವಲ ಮ್ಯೂಸಿಯಂ ನಲ್ಲಿ ನೋಡಬೇಕಾಗಿ ಬರುವ ನಮ್ಮ ಮುಂದಿನ ಪೀಳಿಗೆಗೆ ಇದೊಂದು ಅಪೂರ್ವ ಜಾನಪದ ಮಾಯಕದ ಲೋಕವೇ ಸರಿ.ರಘುನಾಥ್ ಕೃಷ್ಣಮಾಚಾರ್ ಅವರು ಜಾನಪದ ಲೋಕದ ಕುರಿತು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಕರ್ನಾಟಕದಲ್ಲಿ ಗ್ರಾಮೀಣ ಹಿನ್ನೆಲೆಯಿಂದ ಬಂದ, ಮೊದಲ ತಲೆಮಾರಿನ ಕನ್ನಡದ ಐ.ಎ.ಎಸ್ ಅಧಿಕಾರಿಗಳು ಮತ್ತು ಅಪೂರ್ವ ಲೇಖಕರೂ ಆಗಿದ್ದ ಎಚ್.ಎಲ್. ನಾಗೇಗೌಡರ, ಕನಸಿನ ಕೂಸು ರಾಮನಗರದ ಬಳಿ ಇರುವ ಈ ಜಾನಪದ ಲೋಕ. ಈ ಸಲ ಮೈಸೂರಿನಿಂದ ಮರಳಿ ಬರುವಾಗ, ನನ್ನ ಅಣ್ಣನ ಮಗಳು ಹರಿಣಿ ಮತ್ತು ಅವಳ ಮಗ ಟೀನು( ಶ್ರೇಯಸ್) ಅದರ ಪ್ರಸ್ತಾಪ ಮಾಡಿದ್ದರಿಂದ , ಅದನ್ನು ಒಮ್ಮೆ ನೋಡಿಯೇ ಬಿಡೋಣ ಎಂದು ಒಳಹೊಕ್ಕ ಮೇಲೆ , ಕರ್ನಾಟಕದ ಜನಪದ ಲೋಕವೇ ನಮ್ಮ ಕಣ್ಮುಂದೆ ಬಿಚ್ಚಿಕೊಂಡಿತು.

ಅಲ್ಲಿ ಹೋದ ಕೂಡಲೇ ನಮ್ಮ ಕಣ್ಣಿಗೆ ಬಿದ್ದುದು ವಿವಿಧ ಜಾನಪದ ನೃತ್ಯಗಳಲ್ಲಿ ,ಉಪಕರಣಗಳನ್ನು ಬಳಸಿಕೊಂಡು ನರ್ತಿಸುವ ಕಲಾವಿದರ ಚಿತ್ರ. ಕಂಸಾಳೆ, ವೀರಗಾಸೆ ಕುಣಿತದ, ಬುಡುಬುಡಿಕೆಯವರು, ಇತ್ಯಾದಿ. ಸ್ವಲ್ಪ ಮುಂದೆ ಹೆಜ್ಜೆ ಹಾಕಿದ ಕೂಡಲೇ, ನೆಲದ ಮೇಲೆ ಕುಳಿತು ಜನಪದ ಹಾಡುಗಳನ್ನು ಹಾಡುತ್ತಿದ್ದ ಕಲಾವಿದ ಮಹಿಳೆಯರು.

ಎಚ್.ಎಲ್. ನಾಗೇಗೌಡರ

ಮುಂದೆ ಹೋದರೆ ಗ್ರಾಮೀಣ ಭಾಗದ ಮನೆಗಳಲ್ಲಿ ಒಂದು ಕಾಲದಲ್ಲಿ ಮನೆಮಾತಾಗಿದ್ದ ಬೀಸೊಕಲ್ಲು, ಒಳಗೆ ಅಡುಗೆ ಮನೆಯಲ್ಲಿ ನೇತು ಹಾಕುತ್ತಿದ್ದ ಮಡಕೆಗಳು, ಧಾನ್ಯ ತುಂಬಿಸಿ ಇಡುತ್ತಾ ಇದ್ದ ಕಣಜ, ಪೆಟ್ಟೆಗಳು, ಮಜ್ಜಿಗೆ ಕಡೆಯುತ್ತಿದ್ದ ಹೆಣ್ಣಿನ ಚಿತ್ರ.ಅಡುಗೆ ಮನೆಯಲ್ಲಿ ಒಲೆ. ಉಪ್ಪಿನಕಾಯಿ ಹಾಕಿಡುವ ಜಾಡಿ, ಮಂತು, ಮರದ ಸೌಟುಗಳು ಇತ್ಯಾದಿ.

ಮುಂದೆ ಎಚ್.ಎಲ್. ನಾಗೇಗೌಡರ ಜೀವನ ಮತ್ತು ಸಾಧನೆಗಳಿಗೆ ಮೀಸಲಾದ ಒಂದು ಮನೆ.ಅಲ್ಲಿ ಅವರು ಜಾನಪದ ಪ್ರೀತಿ, ಕಲಾವಿದರ ಜೊತೆ ಮಾತುಕತೆ ನಡೆಸುವ ಚಿತ್ರ, ಅವರ ಕೃತಿಗಳನ್ನು ಸಾಲಾಗಿ ಪ್ರದರ್ಶನ ಮಾಡಿದ್ದರು.ಅವರ ದೊಡ್ಡ ಮನೆ ಕಾದಂಬರಿ, ಕುವೆಂಪು ಕಾರಂತರ ಕಾದಂಬರಿಗಳ ಪರಂಪರೆಯ, ಮುಂದುವರಿಕೆಯ ಮಹತ್ವದ ಕೃತಿ. ಅವರ ಪ್ರವಾಸಿ ಕಂಡ ಇಂಡಿಯಾ ಅನುವಾದ ಮಾಡಿದ ಸಂಪುಟಗಳ ಸಾಲು, ಅದರಲ್ಲಿ ಅವರ ಕೈ ಬರಹದ ಮೂಲ ಪ್ರತಿ, ಅವರ ಕೌಟುಂಬಿಕ ಚಿತ್ರಗಳು, ಅವರಿಗೆ ಬಂದ ಪ್ರಶಸ್ತಿಗಳು, ಕುವೆಂಪು ಮತ್ತು ಕಾರಂತರ ಜೊತೆಗಿನ ಅವರ ಚಿತ್ರಗಳು.ನನ್ನ ಗಮನ ಸೆಳೆದವು. ಅವರನ್ನು ಲೇಖಕರು ಮಾತ್ರ ಎಂದು ತಿಳಿದಿದ್ದ ನನಗೆ, ಅವರ ವಿಸ್ತೃತವಾದ ಕೊಡುಗೆ ಬೆರಗು ಮೂಡಿಸಿತು.
ಅಲ್ಲಿಂದ ಮುಂದೆ ಹೋದರೆ ಗಿರಿಜನರ ಲೋಕ. ಉತ್ತರ ಕನ್ನಡದ ಹಾಲಕ್ಕಿ ಜನಜೀವನದ ಚಿತ್ರ , ಮತ್ತು ದಕ್ಷಿಣ ಕನ್ನಡದ ಕುಡಿಯರು, ಗೌಳಿಗರು,ಅವರ ಜನಪದ ನೃತ್ಯಗಳು, ಪ್ರಸಿದ್ಧ ಹಾಡುಗಾರ್ತಿ ಸುಕ್ರಿ ಬೊಮ್ಮ ಗೌಡ ಅವರು ಹಾಡುತ್ತಿದ್ದ ಚಿತ್ರ. ದಕ್ಷಿಣ ಕನ್ನಡದ ಭೂತದ ಕೋಲ , ಸಿರಿ, ಯಕ್ಷಗಾನದ ಚಿತ್ರಗಳು.

ಈ‌ ಎಲ್ಲವನ್ನೂ ನೋಡಿ ಬೆರಗಾದ ಅಲ್ಲಿಗೆ ಬಂದ, ದೇಶಿಯ, ವಿದೇಶಿಯರು ಸಾಲಾಗಿ ನಿಂತು, ಭಾವ ಚಿತ್ರಗಳನ್ನು ತೆಗೆಸಿಕೊಳ್ಳುತ್ತಿದ್ದರು. ಎಲ್ಲದಕ್ಕೂ ಮುಖ್ಯವಾಗಿ ಜಾನಪದ ಅಧ್ಯಯನದಲ್ಲಿ ಆಸಕ್ತಿ ಇರುವವರಿಗೆ ಗ್ರಂಥಾಲಯ, ಅವರಿಗಾಗಿ ಜಾನಪದ ಕೋರ್ಸ್ ಗೆ ಪ್ರವೇಶದ ಸೂಚನಾ ಫಲಕ.ಉಳಿದುಕೊಳ್ಳಲು ಅತಿಥಿಗೃಹಗಳಿಂದ, ಕೂಡಿದ್ದು, ಸಾಮಾನ್ಯರನ್ನು, ಅಧ್ಯಯನ ಆಸಕ್ತಿ ಇರುವವರನ್ನು ಏಕಕಾಲಕ್ಕೆ ಸೆಳೆಯುವ ಕೇಂದ್ರ ವಾಗಿದೆ.

ಅಲ್ಲಲ್ಲಿ ಜಾನಪದ ಹಾಡುಗಳು, ಒಗಟುಗಳನ್ನು ಬರೆಯಲಾಗಿದೆ. ಈ ಎಲ್ಲವೂ ಜಾನಪದದ ಬೇರುಗಳನ್ನು ಕಳೆದುಕೊಳ್ಳುತ್ತಿರುವ ನಮ್ಮ ತಲೆಮಾರಿನ , ಅದು ಕೇವಲ ಮ್ಯೂಸಿಯಂ ನಲ್ಲಿ ನೋಡಬೇಕಾಗಿ ಬರುವ ನಮ್ಮ ಮುಂದಿನ ಪೀಳಿಗೆಗೆ ಇದೊಂದು ಅಪೂರ್ವ ಜಾನಪದ ಮಾಯಕದ ಲೋಕವೇ ಸರಿ.

ಇದನ್ನು ಕರ್ನಾಟಕದ ಜಾನಪದ ಪರಿಷತ್ ನಿರ್ವಹಣೆ ಮಾಡುತ್ತಿದೆ. ಎದುರಿಗೆ ಹಾಕಿರುವ ಸೂಚನಾ ಫಲಕದಲ್ಲಿ ಅಲ್ಲಿ ಲಭ್ಯವಿರುವ ಮಾಹಿತಿಯನ್ನು ಒಳಗೊಂಡಿದೆ. ಒಂದು ಗಂಟೆಗೂ ಮಿಕ್ಕು ಅಲ್ಲಿ ಕಳೆದ ಕಾಲ ,ನಮಗೆ ಕಳೆದು ಹೋಗುತ್ತಿರುವ ಒಂದು ಜಾನಪದ ಲೋಕವನ್ನು ,ನಮ್ಮ ಕಣ್ಮುಂದೆ ತೆರೆದು ತೋರಿಸಿತು ಎಂದರೆ ಅದು ಉತ್ಪ್ರೇಕ್ಷೆ ಅಲ್ಲ. ಇದರ ಕನಸುಕಂಡು ಸಾಕ್ಷಾತ್ಕಾರಕ್ಕೆ ಕಾರಣರಾದ ಎಚ್. ಎಲ್ ನಾಗೇಗೌಡರು ,ಈ ಹೊತ್ತಿನ ಸರಕಾರಿ ಹಿರಿಯ ಅಧಿಕಾರಿಗಳಿಗೆ ಒಂದು ಮಾದರಿ. ಇದು ಜೀವಂತವಾಗಿ ಉಳಿಯಲು ಸಹಕರಿಸುತ್ತಿರುವ, ಕರ್ನಾಟಕ ಸರ್ಕಾರ ಅದರ ಪ್ರತಿನಿಧಿಯಾಗಿರುವ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರ ಈ ಕಾರ್ಯ ಸ್ತುತ್ಯಾರ್ಹ.‌

This slideshow requires JavaScript.

 

ಮಗ್ಗುಲಲ್ಲೇ ಗ್ರಾಮೀಣ ಘಮಲು ಹೊತ್ತ ಕಾಮತ್ ಹೊಟೆಲ್. ರುಚಿಕರವಾದ ವಿಭಿನ್ನ ಪ್ರಾದೇಶಿಕ ಆಹಾರಗಳು, ಬಡಿಸುವ ಪದ್ಧತಿ, ಧಾರಾಳತೆ, ಆತಿಥ್ಯದ ಸ್ವರೂಪ ಮುಂತಾದವುಗಳ ಮೂಲಕ ಗ್ರಾಮೀಣ ಸಂಸ್ಕೃತಿಯನ್ನು ಮರುಸೃಷ್ಟಿಸಿರುವ ಪರಿ ಅನನ್ಯ . ಇದನ್ನು ಹೆಚ್ಚು ಹೆಚ್ಚು ಜನರು ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಆಗಮಿಸಿ, ಅವರಲ್ಲಿ ಕೂಡಾ ಇಂತಹ ಜಾನಪದ ಲೋಕಗಳನ್ನು ಸೃಷ್ಟಿಸುವರೆಂದು ಆಶಿಸೋಣ.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು,  ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW