ಶಾಂತಳಿಗೆ ಕೋಪ ಅದೆಲ್ಲಿಂದ ಉಕ್ಕಿ ಬಂತೋ ಏನೋ ಆ ಹುಚ್ಚನಂತೆ ರಭಸವಾಗಿ ನಮ್ಮ ಕಡೆಗೆ ಬಂದು ನಮ್ಮ ಮೂವರನ್ನು ಪಟಪಟನೆ ತಲೆಗೆ ಹೊಡೆದೆ ಬಿಟ್ಟಳು. ಒಂದು ಕ್ಷಣ ಇಡೀ ಕೋಣೆಯಲ್ಲಿ ನೀರವ ಮೌನ. ಮುಂದೇನಾಯಿತು ತಪ್ಪದೆ ಓದಿ ಲೇಖಕಿ ಮತ್ತು ಶಿಕ್ಷಕಿಯಾದ ಸರ್ವಮಂಗಳ ಜಯರಾಮ್ ಅವರ ಶಿಕ್ಷಣ ವೃತ್ತಿ ಆರಂಭದ ದಿನಗಳನ್ನು ಮೆಲಕು ಹಾಕುವ ಇಂದಿನ ‘ಚೌಚೌ ಬಾತ್’ ಅಂಕಣದಲ್ಲಿ ‘ಹುಚ್ಚ ಹೊಡೆದ ಕಹಿ ನೆನಪು’.
ಆಗ ನಾನಿನ್ನು ಪ್ರಥಮ ಪಿ.ಯು.ಸಿ.ಯಲ್ಲಿ ಓದುತ್ತಿದ್ದೆ. ಸುಮಾರು ಹದಿನಾರು ಹದಿನೇಳರ ವಯಸ್ಸು. ಆಗಿನ ಕಾಲದ ಮಕ್ಕಳಾದ ನಮ್ಮಲ್ಲಿ ಮುಗ್ಧತೆ ಎಷ್ಟಿತ್ತೆಂದರೆ ರಸ್ತೆಯಲ್ಲಿ ಜಾರಿ ಯಾರಾದರೂ ಬಿದ್ದರೆ, ಶಿಕ್ಷಕರು ವಿದ್ಯಾರ್ಥಿಗಳನ್ನು ಬೈದರೆ, ಹಿರಿಯರು ಮಕ್ಕಳನ್ನು ಹೊಡೆದರೆ ಪಕ್ಕನೆ ನಕ್ಕು ಬಿಡುತ್ತಿದ್ದೆವು. ಪಾಪ ಅವರಿಗೆ ನೋವಾಗಿರಬಹುದು, ಅವಮಾನ ವಾಗಿರಬಹುದು,ಸಮಾಧಾನ ಮಾಡಬೇಕು ಎಂಬ ಸಾಮಾನ್ಯ ಜ್ಞಾನವೂ ಇರುತ್ತಿರಲಿಲ್ಲ. ಒಟ್ಟಿನಲ್ಲಿ ನಗಲು ಒಂದು ನೆವ ಬೇಕಿತ್ತಷ್ಟೇ.

ಫೋಟೋ ಕೃಪೆ : google
ತುಮಕೂರಿನ ರೈಲ್ವೆ ಸ್ಟೇಷನ್ ರೋಡಿನ ಗರ್ಲ್ಸ್ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದೆ, ಒಮ್ಮೆ ಸಾಯಂಕಾಲ ನಮ್ಮ ಹಾಸ್ಟೆಲ್ ನಲ್ಲಿದ್ದ ನಾಲ್ಕೈದು ಜನ ಹುಡುಗಿಯರು ಸೇರಿಕೊಂಡು ಹತ್ತಿರದ ಸ್ಟೇಡಿಯಂ ಬಳಿಗೆ ಪಾನಿಪುರಿ ತಿನ್ನಲು ಹೋಗಿದ್ದೆವು. ಹೋಗುವಾಗ ದಾರಿಯಲ್ಲಿ ಮಾತಾಡುತ್ತಾ, ನಗುತ್ತಾ ನಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದೆವು. ನಮ್ಮ ಹಾಸ್ಟೆಲ್ನ ಹಿಂಭಾಗದಲ್ಲಿದ್ದ ಸ್ಟೇಡಿಯಂ ನ ಮೂಲೆಯಲ್ಲಿ ಒಂದು ತಳ್ಳು ಗಾಡಿಯಲ್ಲಿ ಪಾನಿಪೂರಿ ಚುರುಮುರಿ ಅಂಗಡಿ ಇತ್ತು. ಕಾಲೇಜು ಮುಗಿಸಿ ಸಂಜೆ ಹಾಸ್ಟೆಲ್ ಗೆ ಬಂದರೆ ಏನಾದರೂ ಕುರುಕಲು ತಿಂಡಿ ಬೇಕೆನಿಸುತ್ತಿತ್ತು. ನಮ್ಮ ಸಂಜೆಯ ಸಣ್ಣ ಹಸಿವನ್ನು ನೀಗಿಸಿಕೊಳ್ಳಲು ಪಾನಿಪೂರಿ ಚುರುಮುರಿಯನ್ನೇ ಅವಲಂಬಿಸಿದ್ದೆವು. ಚುರುಮುರಿ ಒಂದು ಪ್ಲೇಟ್ ಗೆ ಒಂದು ರೂಪಾಯಿ, ಪಾನಿಪುರಿ ಒಂದು ಪ್ಲೇಟ್ಗೆ ಎರಡು ರೂಪಾಯಿ, ಆದರೆ ಆ ಕಾಲಕ್ಕೆ ಅದು ದುಬಾರಿಯೇ ಆಗಿತ್ತು. ನನಗೇನೋ ಅಪ್ಪ ಊರಿಗೆ ಹೋದಾಗ ಅವರು ಬಂದಾಗ ಹಣ ಕೊಟ್ಟು ಹೋಗುತ್ತಿದ್ದರು. ಆದರೆ ಉಳಿದವರಿಗೆ ಹಣ ಅಷ್ಟು ಸುಲಭವಾಗಿ ದೊರೆಯುತ್ತಿರಲಿಲ್ಲ. ಅಲ್ಲಿದ್ದವರೆಲ್ಲ ಅಂದರೆ ಹಾಸ್ಟೆಲ್ನಲ್ಲಿದ್ದವರು ಬಹುತೇಕ ಎಲ್ಲರೂ ಬಡತನದ ಕುಟುಂಬಗಳಿಂದಲೇ ಬಂದವರು. ಒಂದು ರೂಪಾಯಿಗೂ ಬಾಯಿ ಬಾಯಿ ಬಿಡುವ ಕಾಲವದಾಗಿತ್ತು. ನನಗೆ ನೆನಪಿರುವಂತೆ ನನ್ನ ರೂಮ್ ಮೇಟ್ ಗಳಿಗೆ ಸುಮಾರು ಸಲ ನಾನೇ ಚುರುಮುರಿ ತಿನ್ನಲು ಕೊಡಿಸುತ್ತಿದ್ದೆ. ಇತ್ತೀಚೆಗೆ ಅವರೆಲ್ಲ ಸಿಕ್ಕಿದಾಗ ಈ ವಿಷಯವನ್ನು ನೆನಪಿಸಿಕೊಂಡು ನಕ್ಕಿದ್ದೆವು. ಹೀಗೆ ಒಂದು ರೂಪಾಯಿಗೂ ತತ್ವಾರದ ಕಾಲದಲ್ಲಿ ಅಂದು ನಾವು ಖುಷಿಯಾಗಿಯೇ ಇದ್ದೆವು. ಈಗಿನ ಕಾಲದ ಮಕ್ಕಳಿಗೆ ಇದ್ದಂತೆ ಹೆಚ್ಚಿನ ಬಯಕೆಗಳು ನಮ್ಮನ್ನು ಕಾಡುತ್ತಿರಲಿಲ್ಲ. ಇರುವುದರಲ್ಲೇ ತೃಪ್ತಿಯಿಂದ ಇದ್ದೆವು.
ಒಂದು ಅಥವಾ ಎರಡು ರೂಪಾಯಿ ಖರ್ಚಿನಲ್ಲಿಯೇ ಲೋ ಬಡ್ಜೆಟ್ ನಲ್ಲಿಯೇ ನಮ್ಮ ಬಯಕೆಗಳು ತಣಿಯುತ್ತಿದ್ದವು. ಅಂದು ಸಂಜೆ ನಾನು ಶಾಂತ, ನಾಗು, ಶ್ವೇತ ನಾಲ್ಕು ಜನರು ಚುರುಮುರಿ ತಿನ್ನಲು ಸ್ಟೇಡಿಯಂ ಕಡೆಗೆ ಹೊರಟಿದ್ದೆವು. ಮಾತಿನಲ್ಲಿ ಮೈಮರೆತಿದ್ದ ನನ್ನ ಗೆಳತಿಯರಿಗೆ ರಸ್ತೆಯ ಕಡೆ ಗಮನ ಇರಲಿಲ್ಲ. ಸ್ವಲ್ಪ ದೂರದಲ್ಲಿ ನಮಗೆ ಎದುರಾಗಿ ಒಬ್ಬ ಹುಚ್ಚ ಬರುತ್ತಿದ್ದ. ರಸ್ತೆಯ ಪಕ್ಕದಲ್ಲಿ ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್,ಪೇಪರ್ ಮುಂತಾದ ವೇಸ್ಟ್ ಗಳನ್ನೆಲ್ಲ ಆಯ್ದುಕೊಂಡು ಒಂದು ಗಂಟಿನ ರೂಪದಲ್ಲಿ ಸುತ್ತಿಕೊಳ್ಳುತ್ತಿದ್ದ. ಕೆದರಿದ ತಲೆ ಹರಿದ ಹಾಗೂ ಗಲೀಜು ಬಟ್ಟೆ, ಕ್ಷೌರ ಕಾಣದ ಗಡ್ಡ , ಸ್ವಚ್ಛತೆಯ ಅರಿವಿಲ್ಲದ ಆತ ಅಸಹ್ಯವಾಗಿ ಕಾಣುತ್ತಿದ್ದ. ನೋಡಿದ ಕೂಡಲೇ ಆತ ಹುಚ್ಚ ಎಂದು ಹೇಳಬಹುದಾದ ವ್ಯಕ್ತಿತ್ವ. ನಾನು ದೂರದಿಂದಲೇ ಆತನನ್ನು ಗಮನಿಸಿದೆ. ಹತ್ತಿರ ಬಂದಂತೆ ಆತನ ವೇಗ ಹೆಚ್ಚಾಗಿ ನಮ್ಮ ಕಡೆಗೆ ಬರುತ್ತಿರುವುದು ಗಮನಕ್ಕೆ ಬಂತು. ನಾನು ತಕ್ಷಣ ಆ ಕೊನೆಯಲ್ಲಿದ್ದವಳು ಈ ಕೊನೆಗೆ ಬಂದೆ, ಅಂದರೆ ಹುಚ್ಚ ನಾನು ಇದ್ದ ಕಡೆಗೆ ನುಗ್ಗುತ್ತಿದ್ದ. ನಾನು ಈ ಕೊನೆಗೆ ಬಂದಿದ್ದರಿಂದ ಶಾಂತ ನನ್ನ ಜಾಗಕ್ಕೆ ಬಂದಳು. ಆಗ ರಭಸವಾಗಿ ಬಂದ ಹುಚ್ಚ ಶಾಂತಳನ್ನು ತಡೆದು ನಿಲ್ಲಿಸಿ ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಗಂಟಿನಿಂದ ಪಟಪಟನೆ ಹೊಡೆಯ ತೊಡಗಿದ. ನಮಗೆಲ್ಲ ಗಾಬರಿಯಾಗಿ ಚೆಲ್ಲಾಪಿಲ್ಲಿ ಯಾದೆವು.

ಇದ್ದಕ್ಕಿದ್ದಂತೆ ಕ್ಷಣಾರ್ಧದಲ್ಲಿ ಈ ಘಟನೆ ನಡೆದು ಹೋಯಿತು. ನಾವೆಲ್ಲ ಭಯಭೀತರಾದೆವು, ಪಾಪ ಶಾಂತ ಅದೆಷ್ಟು ಭಯಪಟ್ಟಿರಬೇಕು, ಆಗ ದಾರಿಹೋಕರು ಒಂದಿಬ್ಬರು ಬಂದು ಹುಚ್ಚನಿಂದ ಶಾಂತಾಳನ್ನು ರಕ್ಷಿಸಿದರು. ದಾರಿಹೋಕರು ಬೇಗನೆ ಬರದೆ ಹೋಗಿದ್ದರೆ ಪಾಪ ಅವಳು ಇನ್ನಷ್ಟು ಕಷ್ಟಕ್ಕೆ ಸಿಲುಕುತ್ತಿದ್ದಳು. ಆ ಹುಚ್ಚ ಅವಳನ್ನು ಹಿಡಿದುಕೊಂಡು ಒಂದೇ ಸಮನೆ ಪಟಪಟನೆ ತಲೆಗೆ ಬಡಿಯುತ್ತಿದ್ದ. ಅದನ್ನು ಬಿಡಿಸಲು ಹೋದರೆ ನಮ್ಮನ್ನು ಹೊಡೆಯುತ್ತಾನೆ ಎಂದು ಹೆದರಿ ನಾವು ಹಿಂದೆ ಸರಿದಿದ್ದೆವು. ಆ ಸಂದರ್ಭದಲ್ಲಿ ಪಾಪ ಅವಳಿಗೆ ಅದೆಷ್ಟು ನೋವಾಗಿರಬಹುದು. ಮಾನಸಿಕವಾಗಿ ಅದೆಷ್ಟು ಕುಗ್ಗಿರಬಹುದು.
ದಾರಿಹೋಕರು ಹುಚ್ಚ ನಿಂದ ರಕ್ಷಿಸಿದ ಮೇಲೆ ಶಾಂತ ಒಂದೇ ಸಮನೆ ಅಳತೊಡಗಿದಳು. ಅವಳನ್ನು ಸಮಾಧಾನ ಪಡಿಸಿ ಹಾಸ್ಟೆಲ್ ಗೆ ಕರೆದುಕೊಂಡು ಬಂದೆವು. ಅವತ್ತಿನ ಚುರುಮುರಿ ಪ್ರೋಗ್ರಾಮ್ ಅಲ್ಲಿಗೇ ಮುಕ್ತಾಯವಾಯಿತು. ಹಾಸ್ಟೆಲ್ ಗೆ ಬರುವ ವೇಳೆಗೆ ಕತ್ತಲಾಗಿತ್ತು. ಶಾಂತ ಅಳು ನಿಲ್ಲಿಸಿ ಮಾಮೂಲಿಯಾಗಿದ್ದಳು. ಏಕೆಂದರೆ ಅಲ್ಲಿನವರಿಗೆ ಈ ವಿಷಯ ತಿಳಿಯಬಾರದೆಂದು ಸುಮ್ಮನಾಗಿದ್ದಳು. ಆದರೆ ಅವಳು ಸುಮ್ಮನಿದ್ದರೂ ನಾವು ಬಿಡಬೇಕಲ್ಲ. ಪ್ರತ್ಯಕ್ಷವಾಗಿ ನೋಡಿದ್ದನ್ನು ಕಣ್ಣಿಗೆ ಕಟ್ಟುವಂತೆ ಹೇಳಿ ಮಜಾ ತೆಗೆದುಕೊಳ್ಳುವುದು ನಮ್ಮ ಆಗಿನ ಖಯಾಲಿ. ಹಾಸ್ಟೆಲ್ ಗೆ ಬಂದ ಕೂಡಲೇ ಎದುರಿಗೆ ಸಿಕ್ಕವರಿಗೆಲ್ಲ ಹೇಳಿಕೊಂಡು ನಗಲು ಶುರು ಮಾಡಿದೆವು. ಶಾಂತ ಎಲ್ಲವನ್ನು ಗಮನಿಸುತ್ತಿದ್ದಳು. ನಮ್ಮನ್ನು ದುರುಗುಟ್ಟಿಕೊಂಡು ನೋಡಿ ಬುಸುಗುಡುತ್ತಿದ್ದಳು. ಆದರೆ ನಾವೇನು ಅಷ್ಟಕ್ಕೇ ಸುಮ್ಮನಾಗಲಿಲ್ಲ. ನಾನು ಶ್ವೇತ, ನಾಗು ಎಲ್ಲರಿಗೂ ಹೇಳಿಕೊಂಡು ನಕ್ಕಿದ್ದೆ ನಕ್ಕಿದ್ದು. ಹೇ ಶಾಂತಾಳಿಗೆ ಹುಚ್ಚ ಹೊಡೆದ ಕಣೆ ಎಂದು ಹೇಳುತ್ತಾ ಬಿದ್ದು ಬಿದ್ದು ನಗುತ್ತಿದ್ದೆವು. ಶಾಂತಾಳ ಕೋಪ ತಾರಕಕ್ಕೇರಿತು. ಪಾಪ ಅವಳಿಗೆ ಹುಚ್ಚನಿಂದ ಹೊಡೆಸಿಕೊಂಡಿದ್ದು ಒಂದು ನೋವಾದರೆ, ನಾವು ಆಡಿಕೊಂಡು ನಗುತ್ತಿದ್ದುದು ಇನ್ನೊಂದು ನೋವು. ಅಷ್ಟಕ್ಕೆ ಸುಮ್ಮನಾಗದೆ ಹಾಸ್ಟೆಲ್ನ ಪ್ರತಿ ರೂಮಿಗೂ ಹೋಗಿ ಹೋಗಿ ಅಲ್ಲಿದ್ದವರಿಗೆಲ್ಲ ಘಟನೆಯನ್ನು ರಸವತ್ತಾಗಿ ವಿವರಿಸ ತೊಡಗಿದೆವು.
ಶಾಂತಾ ಮುಖ ಗಂಟಿಕ್ಕಿಕೊಂಡು ಸುಮ್ಮನೆ ಎಲ್ಲವನ್ನು ನೋಡುತ್ತಿದ್ದಳು. ಅದಿನ್ನೆಷ್ಟು ಜನಕ್ಕೆ ಇವರು ಹೇಳುತ್ತಾರೋ ನೋಡೋಣ ಎಂದುಕೊಂಡು ಕಾದಳು. ನಾವು ಮೂವರು ಪ್ರತಿ ರೂಮಿಗೂ ಹೋಗಿ ಹೇಳಿಕೊಂಡು ನಗಾಡುತ್ತಾ ಮತ್ತೆ ವಾಪಸ್ ನಮ್ಮ ರೂಮಿಗೆ ಬಂದೆವು. ಆಗ ನಮ್ಮ ರೂಮಿನಲ್ಲಿದ್ದ ಇನ್ನಿಬ್ಬರು ಟ್ಯೂಷನ್ ಗೆ ಹೋಗಿದ್ದವರು ಬಂದಿದ್ದರು. ನಾವು ಅವರಿಗೆ ಹೇಳುವುದೋ ಬೇಡವೋ ಎಂದುಕೊಂಡು ಮುಖ ಮುಖ ನೋಡಿಕೊಂಡೆವು. ಏಕೆಂದರೆ ಶಾಂತ ಅಲ್ಲೇ ಇದ್ದು ನಮ್ಮನ್ನೇ ನೋಡುತ್ತಿದ್ದಳು. ನಾವು ಸುಮ್ಮನೆ ಇದ್ದಾಗ ಇವರಿಗೂ ಹೇಳಿಬಿಡ್ರೆ ಇವರಿಬ್ಬರೇ ಅಲ್ವೇ ಬಾಕಿ ಉಳಿದಿರುವುದು ಅಂದಳು. ಅವರಿಬ್ಬರೂ ಏನೆಂಬಂತೆ ನಮ್ಮನ್ನೇ ನೋಡುತ್ತಿದ್ದರು. ಆಗ ನಾವು ಮೂವರು ಸ್ವಲ್ಪ ಧೈರ್ಯ ಮಾಡಿ ಎಲ್ಲರಿಗೂ ಹೇಳಿದ್ದೇವೆ ಇವರಿಗೆ ಮಾತ್ರ ಹೇಳಿಲ್ಲ ಎಂದುಕೊಂಡು ಹೇಳಲು ಬಾಯಿ ತೆರೆದವು. ಶಾಂತಳಿಗೆ ಕೋಪ ಅದೆಲ್ಲಿಂದ ಉಕ್ಕಿ ಬಂತೋ ಏನೋ ಆ ಹುಚ್ಚನಂತೆ ರಭಸವಾಗಿ ನಮ್ಮ ಕಡೆಗೆ ಬಂದು ನಮ್ಮ ಮೂವರನ್ನು ಪಟಪಟನೆ ತಲೆಗೆ ಹೊಡೆದೆ ಬಿಟ್ಟಳು. ಒಂದು ಕ್ಷಣ ಇಡೀ ಕೋಣೆಯಲ್ಲಿ ನೀರವ ಮೌನ. ಏಟು ತಿಂದ ನಾವು ಮೂವರೂ ಗಂಭೀರ ವದನೆಯರಾದೆವು. ಪಾಪ ಶಾಂತ ನಮ್ಮ ತುಂಟಾಟವನ್ನು ಸಂಜೆಯಿಂದ ಅದು ಹೇಗೆ ಸಹಿಸಿಕೊಂಡಿದ್ದಳೋ ಏನೋ. ಅಂತೂ ಇಂತೂ ಅವಳ ಕೋಪ ಬುಗಿಲೆದ್ದಿತ್ತು. ಅಷ್ಟರಲ್ಲಿ ರಾತ್ರಿ ಎಂಟು ಗಂಟೆ ಆಗಿತ್ತು. ಊಟಕ್ಕೆ ಸೈರನ್ ಕೂಗುತ್ತಿತ್ತು. ಪಕ್ಕದ ರೂಮಿನಲ್ಲಿ ಇದ್ದವರೆಲ್ಲ ತಟ್ಟೆ ಹಿಡಿದು ಊಟಕ್ಕೆ ಹೋಗುತ್ತಿದ್ದರು. ವಾರ್ಡನ್ ಆಂಟಿ ಬಂದು ಊಟಕ್ಕೆ ಕರೆದರು. ನಾವೆಲ್ಲರೂ ಮರು ಮಾತಿಲ್ಲದೆ ತಟ್ಟೆ ತೆಗೆದುಕೊಂಡು ಊಟಕ್ಕೆ ಹೋದೆವು. ಆಮೇಲೆ ಎಲ್ಲಾ ಮಾಮೂಲಿ ಆಯಿತು. ನಮಗೆ ಪರಿಚಯ ಇರುವ ಆತ್ಮೀಯ ಗೆಳತಿ ಹೊಡೆದದ್ದಕ್ಕೆ ನಮಗೆ ಅಷ್ಟೊಂದು ನೋವು,ಬೇಸರ ಆಯ್ತು, ಇನ್ನು ಎಂದೂ ಗೊತ್ತಿರದ ಅಪರಿಚಿತ ಹುಚ್ಚನ ಕೈಯಿಂದ ಏಟು ತಿಂದರೆ ಶಾಂತಳಿಗೆ ಅದೆಷ್ಟು ನೋವು,ಸಂಕಟ, ಅವಮಾನ ಆಗಿರಬೇಕು. ಇದನ್ನೆಲ್ಲಾ ನಿಧಾನವಾಗಿ ಅರ್ಥೈಸಿಕೊಂಡು ನಾವು ಮೂವರು ಅಳುತ್ತ ಅವಳನ್ನು ಕ್ಷಮೆ ಕೋರಿದೆವು. ಶಾಂತ ನಸುನಗುತ್ತಾ ಶಾಂತವಾಗಿಯೇ…. “ಬಿಡ್ರೇ ಅದೆಲ್ಲ ಮನಸ್ಸಿಗೆ ಹಚ್ಕೋಬೇಡ್ರಿ” ಎಂದಳು. ಅವಳು ಅದಾಗಲೇ ಅದನ್ನೆಲ್ಲ ಮರೆತಿದ್ದಳು. ನಾವೂ ಕ್ಷಮೆ ಕೋರಿ ನಿರಾಳವಾದೆವು.
- ಸರ್ವಮಂಗಳ ಜಯರಾಂ – ಶಿಕ್ಷಕಿ ಗೌರಿಬಿದನೂರು.
