‘ಸಿಂಗಾಪುರ ಕೆಲವು ಟಿಪ್ಪಣಿಗಳು’ಕೃತಿ ಪರಿಚಯ

ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ‘ಸಿಂಗಾಪುರ ಕೆಲವು ಟಿಪ್ಪಣಿಗಳು’ ಪುಸ್ತಕದಲ್ಲಿ ಸಿಂಗಾಪುರ ಸಿಂಗಾಪುರವಾಗಲು ಕಾರಣವಾದ ದೊಡ್ಡ ಹಾಗೂ ಸಣ್ಣಸಣ್ಣ ವಿಚಾರಗಳಿವೆ. ಡಾ. ಸುವರ್ಣಿನಿ ಕೊಣಲೆ ಅವರು ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ..

ಕೃತಿ: ಸಿಂಗಾಪುರ ಕೆಲವು ಟಿಪ್ಪಣಿಗಳು
ಲೇಖಕ: ವಿಶ್ವೇಶ್ವರ ಭಟ್
ಪ್ರಕಾಶನ: ಸಪ್ನ ಪ್ರಕಾಶನ 

ಕೆಲವರಿಗೆ ಸಿಂಗಾಪುರಕ್ಕೆ ಹೋಗಿ ಗೊತ್ತಿರಬಹುದು, ಹಲವರಿಗೆ ಓದಿ ಅಥವಾ ಈಗ ವಿಡಿಯೊಗಳಲ್ಲಿ ನೋಡಿಯಾದರೂ ಗೊತ್ತಿರಬಹುದು. ಆದರೆ ಸಿಂಗಾಪುರವೆಂದರೆ ಗೊತ್ತೇ ಇಲ್ಲ ಎನ್ನುವವರು ವಿರಳ. ಅಮೆರಿಕದಂತೆ. ಆದರೆ ಆ ಅಮೆರಿಕೆಯ ಅಗಾಧ ಭೂಭಾಗದೊಳಗೆ ಅದೆಷ್ಟೋ ಸಾವಿರ ಸಿಂಗಾಪುರಗಳನ್ನು ಸೇರಿಸಬಹುದು. ಅಷ್ಟು ಪುಟಾಣಿ ದೇಶ ಇದು. ನಮ್ಮ ಬೆಂಗಳೂರಿಗಿಂತಲೂ ಚಿಕ್ಕದು ಎನ್ನುತ್ತಾರೆ ಲೇಖಕರು. ಅಲ್ಲಿನ ಸ್ವಚ್ಛತೆ, ಗಗನಚುಂಬಿ ಕಟ್ಟಡಗಳು, ವ್ಯವಸ್ಥೆಗಳು, ಸೌಕರ್ಯಗಳು, ನಿಯಮಗಳ ಕುರಿತು ನಾವು ಕೇಳಿರುತ್ತೇವೆ. ಅಲ್ಲಿನ ಅತ್ಯಾಧುನಿಕತೆಯ ಕುರಿತೂ ಕೇಳಿರುತ್ತೇವೆ. ಒಂದು ಪರ್ಫೆಕ್ಟ್ ದೇಶ/ನಗರ ಅದು ಅನ್ನುವ ಅಭಿಪ್ರಾಯವನ್ನು ಅಲ್ಲಿಗೆ ಹೋಗಿ ಬಂದವರೆಲ್ಲರೂ ಹೇಳುತ್ತಾರೆ. ಆ ವಿವರಣೆಗಳು ಅಚ್ಚರಿ ಮೂಡಿಸುತ್ತವೆ. ಅಂಥದ್ದನ್ನು ನಮ್ಮ ಊರು, ನಗರ, ದೇಶದಲ್ಲಿ ನಾವು ನಿರೀಕ್ಷಿಸಲು ಸಾಧ್ಯವೇ ಇಲ್ಲ ಅನಿಸಿಬಿಡುತ್ತದೆ.

ಆದರೆ ಈ ಕೃತಿ ಬಿಚ್ಚಿಡುವುದು ಈ ಯಾವ ವಿಚಾರಗಳನ್ನೂ ಅಲ್ಲ. ಅಲ್ಲಿಗೆ ಹೋದಾಗ ಅದನ್ನು ನೋಡಬೇಕು, ಇದನ್ನು ತಿನ್ನಬೇಕು ಎಂಬ ವಿಷಯಗಳಂತೂ ಇಲ್ಲವೇ ಇಲ್ಲ.

ಒಂದು ಮಾದರಿ ದೇಶ/ನಗರ ಎಂದು ಜಗತ್ತು ಇಂದು ಯಾವ ಸಿಂಗಾಪುರವನ್ನು ಗುರುತಿಸುತ್ತಿದೆಯೋ, ಯಾವ ದೇಶದಲ್ಲಿ ತನ್ನ ಕಂಪೆನಿಯ ಶಾಖೆಯೊಂದನ್ನು ತೆರೆಯಲು ದೊಡ್ಡ ದೊಡ್ಡ ಸಂಸ್ಥೆಗಳೂ ಬಯಸುತ್ತವೆಯೋ, ಯಾವುದು ಅತ್ಯಂತ ಸುಂದರವಾದ ಕನಸಿನ ನಗರ ಎಂದು ಪರಿಗಣಿಸಲ್ಪಡುತ್ತದೆಯೋ ಅದು ಹಾಗಾಗಲು ಏನು ಕಾರಣ ಎನ್ನುವುದು ಈ ಕೃತಿಯಲ್ಲಿದೆ.

ಕೊಳಕು ಬಂದರು, ಮೀನುಗಾರರ ಹಳ್ಳಿ ಅದಾಗಿತ್ತು. ಉಳಿದ ವ್ಯವಸ್ಥೆ ಸೌಲಭ್ಯಗಳಿರಲಿ ಕುಡಿಯುವ ನೀರಿಗೂ ಪಕ್ಕದ ದೇಶವನ್ನೇ ಅವಲಂಬಿಸಿದ್ದ ಸಿಂಗಾಪುರ ಇಂದು ಕುಡಿಯುವ ನೀರನ್ನು ರಫ್ತು ಮಾಡುತ್ತದೆ ಎಂದರೆ ನಂಬಲು ಸಾಧ್ಯವೇ? ಇಂತಹ ರೂಪಾಂತರ ಹೇಗೆ ಸಾಧ್ಯವಾಯಿತು? ಅದಕ್ಕೆ ಕಾರಣ ಕನಸುಗಾರ ಮತ್ತು ಕನಸನ್ನು ನನಸಾಗಿಸುವ ಛಲ ಹೊಂದಿದ್ದ ಲೀ ಕುನ್ ಯು. ಸಿಂಗಾಪುರದ ಮೊದಲ ಪ್ರಧಾನಿ. ಸತತ 31 ವರ್ಷ ಪ್ರಧಾನಿಯಾಗಿದ್ದ ಅವರು ಈ ಸಿಂಗಾಪುರವನ್ನು ನಿರ್ಮಿಸಿದವರು. ಅವರು ನಿರ್ಮಿಸಿದರು ಎಂದರೆ ಸಾಲದು, ಅವರೊಂದಿಗೆ ಜನರೂ ಕೈಜೋಡಿಸಿದ್ದರಿಂದಲೇ ಇದು ಸಾಧ್ಯವಾಯಿತು.

ಸಿಂಗಾಪುರ ಸಿಂಗಾಪುರವಾಗಲು ಕಾರಣವಾದ ದೊಡ್ಡ ಹಾಗೂ ಸಣ್ಣಸಣ್ಣ ವಿಚಾರಗಳ ಕುರಿತು ಈ ಪುಸ್ತಕದಲ್ಲಿದೆ. ಇದು ನಮಗೆ ಉತ್ತಮ ಬದಲಾವಣೆಗಳಾಗಲು ನಾವು ಏನು ಮಾಡಬೇಕು ಎನ್ನುವ ಹೊಳಹನ್ನು ನೀಡುತ್ತದೆ. ನಮ್ಮ ರಾಜಕಾರಣಿಗಳು, ನಮ್ಮ ನಾಯಕರು, ಮತ್ತು ನಾವು ಸಿಂಗಾಪುರದಿಂದ ಕಲಿಯುವುದು ಬಹಳ ಇದೆ ಅನಿಸಿತು.
ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ ಎನ್ನುತ್ತಾರೆ. ಆದರೆ ಸಿಂಗಾಪುರದಂತಾಗಲು ಅಂತಹುದೇ ಕಠಿಣ ಕ್ರಮದ, ಶ್ರಮದ, ಶಿಸ್ತಿನ, ಛಲದ, ಬದ್ಧತೆಯ, ಕನಸುಗಳ, ನಿಷ್ಠೆಯ ರೂಪಾಂತರ ಪ್ರಕ್ರಿಯೆಗೆ ಒಳಗೊಳ್ಳಲು ನಾವು ಸಿದ್ಧರಾಗಿದ್ದೇವೆಯೇ? ಆ ಮನಸ್ಥಿತಿ ನಮ್ಮಲ್ಲಿದೆಯೇ?
ರಾಷ್ಟ್ರವಾಗಿಯೂ ವೈಯಕ್ತಿಕವಾಗಿಯೂ.


  • ಡಾ. ಸುವರ್ಣಿನಿ ಕೊಣಲೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW