‘ದ್ವೀಪವ ಬಯಸಿ’ ಕೃತಿ ಪರಿಚಯ

ಎಂ ಆರ್ ದತ್ತಾತ್ರಿ ಅವರ ‘ದ್ವೀಪವ ಬಯಸಿ’ ಕೃತಿಯಲ್ಲಿ 254 ಪುಟದ ಕಥೆಯಿದ್ದು, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಸಾಫ್ಟ್ ವೇರ್ ಇಂಜಿನಿಯರ್ ಗಳ ಬದುಕಿನ ಝಲಕು ಈ ಕೃತಿಯಲ್ಲಿ ಸಿಗುತ್ತದೆ. ಕೃತಿಯ ಕುರಿತು ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ದ್ವೀಪವ ಬಯಸಿ
ಲೇಖಕರು : ಎಂ ಆರ್ ದತ್ತಾತ್ರಿ
ಪ್ರಕಾಶಕರು : ಛಂದ ಪುಸ್ತಕ

ಎಂ ಆರ್ ದತ್ತಾತ್ರಿ ಸರ್ ರಚಿಸಿರುವ ‘ದ್ವೀಪವ ಬಯಸಿ’ ಓದಿದೆ. ವಸುಧೇಂದ್ರ ಸರ್ ಅವರ ಛಂದ ಪುಸ್ತಕ ಇದನ್ನು ಪ್ರಕಟಿಸಿದೆ. 2011 ರಲ್ಲಿ ಮೊದಲ ಮುದ್ರಣವಾದ ಈ ಕೃತಿ 2021 ರಲ್ಲಿ ಎರಡನೇ ಮುದ್ರಣವನ್ನು ಕಂಡಿದೆ. ಇದಕ್ಕೆ ಈಗಾಗಲೇ ‘ಸೂರ್ಯ ನಾರಾಯಣ ಚಡಗ ಪ್ರಶಸ್ತಿ’ ಮತ್ತು ‘ಅಮ್ಮ ಪ್ರಶಸ್ತಿ’ ಗಳು ದೊರೆತಿವೆ.

ಛಂದ ಪ್ರಕಟಿಸಿರುವ ಬಹುತೇಕ ಕೃತಿಗಳು ಸೊಗಸಾದವು, ಉತ್ತಮ ಗುಣಮಟ್ಟ ಮತ್ತು ಕಥಾ ವಸ್ತುವಿನಿಂದ ವಿಶಿಷ್ಟವಾದವು. ಈ ಕೃತಿಯೂ ಅದಕ್ಕೆ ಹೊರತಲ್ಲ ಎನ್ನಬಹುದು. ದತ್ತಾತ್ರಿ ಅವರ ಬರಹದ ಶೈಲಿಯಲ್ಲಿ ನನಗೆ ಬಹಳ ಇಷ್ಟವಾಗಿದ್ದು, 254 ಪುಟದ ಕಥೆಯ ಆರಂಭದಿಂದಲೂ, ಕೊನೆಯವರೆಗೆ ಉಳಿಸಿಕೊಂಡು ಬಂದಿರುವ ಶಿಸ್ತು, ಸಂಯಮ, ಶಾಸ್ತ್ರೀಯವಾದ ಭಾಷೆ, ಗಾಂಭೀರ್ಯ ಮತ್ತು ತನ್ಮಯತೆ. ಇದು ಹೊಸದಾಗಿ ಬರೆಯುತ್ತಿರುವ ನನ್ನಂಥವರಿಗೆ ಕಲಿಕೆಯಾಗಿದೆ.

ನಿರೂಪಕ ಶ್ರೀಕಾಂತ ಮತ್ತು ಅವನ ಹೆಂಡತಿ ವಾಣಿ, ಅಮೆರಿಕದ 9/11 ಉಗ್ರರ ದಾಳಿಯಿಂದ, ವಿಮಾನಗಳ ವಿಳಂಬ, ರದ್ದು ಮುಂತಾದ ತೊಂದರೆಯಿಂದ ಸಿಂಗಾಪುರ್ ನಲ್ಲಿ ಸಿಕ್ಕಿಕೊಂಡು, ಅಂತೂ ಲಾಸ್ ಏಂಜಲೀಸ್ ತಲುಪಿದಲ್ಲಿಂದ ಕಥೆ ಆರಂಭವಾಗುತ್ತದೆ.

ಅಲ್ಲಿಂದ ಬಹುತೇಕ flash back ಗಳಲ್ಲಿ ಕಥೆ ಇಷ್ಟಿಷ್ಟೇ ತೆರೆದುಕೊಳ್ಳುತ್ತದೆ. ಅಮ್ಮನಿಲ್ಲದ ನಿರೂಪಕ ಬಾಲಕನಾಗಿದ್ದಾಗ ಊರಿನಲ್ಲಿ ಡ್ಯಾಮ್ ಕಟ್ಟಿಸುವ ಸಲುವಾಗಿ ಜನರನ್ನು ಜಾಗ ಖಾಲಿ ಮಾಡುವಂತೆ ಸರ್ಕಾರ ಒತ್ತಡ ಹಾಕುತ್ತಿದೆ. ಆದರೆ ಅಪ್ಪ ಎಲ್ಲಿಯೂ ಹೋಗಲಾರೆ ಎಂದು ಹಠ ಹಿಡಿಯುತ್ತಾನೆ. ಊರಿಗೆ ಊರೇ ಖಾಲಿಯಾದರೂ ನಿಲುವು ಬದಲಿಸದ ಅಪ್ಪ, ಮುಂದಿನ ಓದಿಗಾಗಿ ಪಟ್ಟಣ ಸೇರಿಬಿಡುವ ನಿರೂಪಕ; ಆಗ ಅವನ ಪುಟ್ಟ ತಮ್ಮ ಕೃಷ್ಣ ಭಯಭೀತನಾಗಿ ಒಂಟಿಯಾಗಿಬಿಡುತ್ತಾನೆ. ಪರಿಪರಿಯಾಗಿ ಬೇಡಿಕೊಂಡರೂ ಕರಗದ ಅಪ್ಪ ಮತ್ತು ಅಣ್ಣನಿಂದ ಬೇಸತ್ತು, ಒಂದಿನ ಊರು ಬಿಟ್ಟು ಹೋಗಿಬಿಡುತ್ತಾನೆ. ನನಗಂತೂ ಈ ಭಾಗ ಬಹಳ ಕಾಡಿತು.

ಇಲ್ಲಿ ಕಂಪನಿಗಳ ಮಾಲೀಕರ ರಾಜಕೀಯ, struggle for existence, survival of the fittest ಎನ್ನುವುದನ್ನು software ಕಂಪನಿಗಳ ಒಳಗನ್ನು ಬಿಚ್ಚಿಟ್ಟು ಚೆನ್ನಾಗಿ ವಿವರಿಸಿದ್ದಾರೆ. ಮುಂದೆ ಅಮೆರಿಕದಲ್ಲಿ ಅಲ್ಲಿನ ಸ್ಥಳೀಯ ಸ್ನೇಹಿತರು, family friends ಆಗಿಬಿಡುವ ಭಾರತೀಯರು, ಅನೈತಿಕವಾಗಿ ವಲಸೆ ಬಂದ ಇತರ ದೇಶದ ಕಾರ್ಮಿಕರು, ಅವರುಗಳ ದೈನಂದಿಕ ಹೋರಾಟಗಳು ಎಲ್ಲದರ ನಡುವೆ ಮತ್ತೆ ಪರಕೀಯರಾಗುವುದು, ನೆಲೆ ನಿಲ್ಲಲಾಗದೆ ವಾಪಸ್ ಮರಳುವ ನಿರ್ಧಾರ.

ಬಯಸಿ ಬಂದ ದ್ವೀಪದಲ್ಲಿ, ನೀರು ಕುತ್ತಿಗೆಯವರೆಗೆ ಬಂದ ಮೇಲಾದರೂ ಏನಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಳ್ಳಬೇಕು ಎಂದು ಹೆಣಗುವ ನಿರೂಪಕನಲ್ಲಿ, ತಾನು ಅಪ್ಪನಂತಾಗಬಾರದು ಎನ್ನುವ ಸುಪ್ತ ಪ್ರಜ್ಞೆ ಕಾಡಿತೋ ಏನೋ ಅನಿಸುತ್ತದೆ.

‘ನೀರಿನಲ್ಲಿ ಕಲಸಿಹೋದ ಕಾಗದದಲ್ಲಿ ತುಣುಕು ಪದವೊಂದು ಉಳಿದುಹೋದಂತೆ’ ಎನ್ನುವ ಈ ಸಾಲು ಅದೆಷ್ಟು ಮಾರ್ಮಿಕವಾಗಿದೆ. ಇಂತಹ ಹಲವು ಉಪಮೆಗಳು, ಚಿತ್ರಣಗಳನ್ನು ತೋರಿಸುವ ಈ ಕೃತಿ ಬಿಡುವಿನಲ್ಲಿ ಕುಳಿತು ಓದಲು ಚೆನ್ನಾಗಿದೆ. ಆಗಾಗ ಸ್ವಲ್ಪ ಮಂದಗತಿಯಲ್ಲಿ ಸಾಗುತ್ತಿದೆ ಅನಿಸಿದರೂ ಇಲ್ಲಿ ಬರುವ ವಿಚಾರಗಳೆಲ್ಲಾ ಕಥೆಗೆ ಪೂರಕವಾಗಿವೆ. ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ software engineer ಗಳ ಬದುಕಿನ ಝಲಕು ಸಿಗುತ್ತದೆ.

ಲೇಖಕರಿಗೆ ಮತ್ತು ಪ್ರಕಾಶಕರಿಗೆ ಅಭಿನಂದನೆಗಳು!
ಈ ಕೃತಿಯು ಎಲ್ಲಾ ಪುಸ್ತಕ ಮಳಿಗೆಗಳಲ್ಲೂ ಲಭ್ಯವಿದೆ.


  • ಪೂರ್ಣಿಮಾ ಮಾಳಗಿಮನಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW