Manorathangal ಕಥಾ ಆಧಾರಿತ ವೆಬ್ ಸರಣಿಗಳು

Manorathangal ಇತ್ತೀಚೆಗೆ #Zee5 ನಲ್ಲಿ ಬಿಡುಗಡೆಯಾಗಿರುವ ವಾಸುದೇವ ನಾಯರ್ ಅವರ ಕಥಾ ಆಧಾರಿತ ವೆಬ್ ಸರಣಿಯಾಗಿದ್ದು, 9 ಕಥೆಗಳು ಈ ಸರಣಿಯಲ್ಲಿದೆ. ಆತ್ಮಾ ಜಿ ಎಸ್ ಅವರು ಈ ವೆಬ್ ಸರಣಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…

ಯಾವುದೋ ಕೆಲಸಕ್ಕೆಂದು ಹೋದವರು ಕೆಲವೊಮ್ಮೆ ಮತ್ಯಾವುದೋ ಸನ್ನಿವೇಶ, ಸಂಗತಿಗಳಿಗೆ ಸಾಕ್ಷಿಯಾಗುವ ಸಂದರ್ಭದಲ್ಲಿ ಸಿಲುಕಿಕೊಳ್ಳುತ್ತೇವೆ. ಇಂಥ ಘಟನೆಗಳು
ಅನಿರೀಕ್ಷಿತವಾಗಿ ಸಂಭವಿಸಿದರೂ, ಆ ಸಂದರ್ಭದಲ್ಲಿ ಭಾವನಾತ್ಮಕ ಬೆಸುಗೆ ಗೊತ್ತಿಲ್ಲದೆ ಮೂಡುವುದರಿಂದ ಜೇಡರ ಬಲೆಯಂತೆ ಆಗುವುದು ಇದೆ. ಇಂಥದ್ದೇ ಘಟನೆಗಳಿಗೆ ಸಾಕ್ಷಿಯಾಗುವ ಪತ್ರಕರ್ತ ಆ ಸಂದರ್ಭಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾನೆ ಎಂಬ ಕುತೂಹಲಕಾರಿ ಕಥನ ಇರುವುದು “ವಿಲ್ಪನ” ದಲ್ಲಿ.

The sale ಎಂಬ ಅರ್ಥದಲ್ಲಿ ಇದು ಬಳಕೆಯಾಗಿದ್ದು ದುರಂತವೆಂದರೆ ಇಲ್ಲಿ ಕೇವಲ ವಸ್ತುಗಳು ಮಾತ್ರ ಮಾರಾಟಕ್ಕೆ ಇಲ್ಲ, ಭಾವನೆಗಳೂ ಇವೆಯೇನೋ ಎಂಬಂತೆ ಭಾಸವಾಗುತ್ತದೆ. ಆದರೆ ಕೊಳ್ಳುವರು ಮಾತ್ರ ಯಾರು ಇಲ್ಲ.

ಒಂದು ಊರಿಂದ ಮತ್ತೊಂದು ಊರಿಗೆ ಸ್ಥಳಾಂತರಗೊಳ್ಳುವಾಗ ಬೇಡದ ವಸ್ತುಗಳನ್ನು ಮಾರಾಟ ಮಾಡುವ ಸಮಯಕ್ಕೆ ಕೊಡುವ ಜಾಹೀರಾತಿನಿಂದ ಕಥೆ ಆರಂಭವಾಗುತ್ತದೆ. ತನಗೆ ಬೇಕಾದ ವಸ್ತುವನ್ನು ಕೊಳ್ಳಲೆಂದು ಬರುವ ಪತ್ರಕರ್ತನಿಗೆ ಆತನಿಗೆ ಬೇಕಾದ ವಸ್ತು ಮಾರಾಟವಾಗಿದ್ದರು ಮನೆಯೊಡತಿ ಗೀತಾ ಪಾರೇಖ ಆತನನ್ನು ಹೊರಡಲು ಬಿಡುವುದಿಲ್ಲ. ಆತನಂತೆಯೇ ಬೇರೆ ವಸ್ತುಗಳನ್ನು ಕೊಳ್ಳಲು ಬರುವವರಿಗೆ ಇರುವ ವಸ್ತುಗಳನ್ನು ತೋರಿಸುವುದು, ದೂರವಾಣಿ ಕರೆಯನ್ನು ಸ್ವೀಕರಿಸುವ ಮೂಲಕ ತನ್ನ ಅರಿವಿಗೆ ಬಾರದೆ ಆತನೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾನೆ. ಬಂದ ಪ್ರತಿ ಗ್ರಾಹಕರಿಗೂ ಮಾರಾಟಕ್ಕೆ ಇರುವ ವಸ್ತುಗಳನ್ನು ತೋರಿಸುವುದರ ಜೊತೆಯಲ್ಲಿಯೇ ತನ್ನ ಬದುಕಿನ ಸಿಹಿ ಕಹಿ ಘಟನೆಗಳನ್ನು ಪತ್ರಕರ್ತನಿಗೆ ಹೇಳಿಕೊಳ್ಳುತ್ತಾ ನಾಯಕಿ ಹೋಗುವುದನ್ನು ನೋಡಿದಾಗ ವಸ್ತುಗಳನ್ನು ಮಾರುವುದರ ಜೊತೆಯಲ್ಲಿಯೇ ಭಾವನೆಗಳನ್ನೂ ತೋಡಿಕೊಳ್ಳಲು ಸರಿಯಾದ ಜೊತೆಗಾರನನ್ನು ಹುಡುಕುತ್ತಿದ್ದಳೋ ಎಂಬ ಭಾವ ಬರುತ್ತದೆ. ಬದುಕಿಗೆ ಬೇಕಾದಷ್ಟು ಹಣ. ಸ್ಥಾನಮಾನ , ಮಕ್ಕಳು ಯಾರೇ ಇದ್ದರೂ ಕೆಲವೊಮ್ಮೆ ಹೆಣ್ಣು ಒಂಟಿಯೇ. ಅಪರೂಪಕ್ಕೆ ಗಂಡಿಗೆ ಇದೇ ಸ್ಥಿತಿ ಬಂದರೂ ಆತನಿಗೆ ಇರುವ ಜವಾಬ್ದಾರಿಗಳ ನಡುವೆ ಇಂಥದ್ದು ಭಾದಿಸುವುದು ತೀರಾ ಅಪರೂಪ.. ಸ್ತ್ರೀ ಸದಾ ಭಾವಗಳ ನಡುವೆಯೇ ಬಂಧಿ. ಇಂಥ ಭಾವಗಳ ನಡುವೆ ಒಬ್ಬಂಟಿತನ ಅನುಭವಿಸುವ ಹೆಣ್ಣಿನ ಪ್ರತಿನಿಧಿಯಾಗಿ ” ವಿಲ್ಪನ “ದ ನಾಯಕಿ ನಮ್ಮೆದುರು ನಿಲ್ಲುತ್ತಾಳೆ. ತನ್ನನ್ನು ಮಾರಾಟಕ್ಕೆ ಇಟ್ಟಿರುವ ವಸ್ತುವೆಂದು ಪರಿಗಣಿಸಿ ಬೆಲೆ ನೀಡು ಎಂದು ಪತ್ರಕರ್ತ ಸುನಿಲ್ ಗೆ ಹೇಳುವ ನಾಯಕಿ, ಕೊನೆಯಲ್ಲಿ ಮನೆಗೆ ಬರುವ ಗಂಡನನ್ನೇ ಗ್ರಾಹಕ ಎಂದು ಪರಿಗಣಿಸಿ ಮಾತನಾಡುವಲ್ಲಿ ಕಥೆ ಅಂತ್ಯವಾಗುತ್ತದೆ.

#Manorathangal ಇತ್ತೀಚೆಗೆ #Zee5 ನಲ್ಲಿ ಬಿಡುಗಡೆಯಾಗಿರುವ ವಾಸುದೇವ ನಾಯರ್ ಅವರ ಕಥಾ ಆಧಾರಿತ ವೆಬ್ ಸರಣಿಗಳು. ವಿಲ್ಪನ ಈ ಸರಣಿಯಲ್ಲಿ ಬರುವ ಒಂದು ಕಥೆಯ ಉದಾಹರಣೆ. ನಮ್ಮದೇ ಮನೋವ್ಯಾಪಾರದ ವಿವಿಧ ಭಾವಗಳಿರುವ ಇಂಥದ್ದೇ.

9 ಕಥೆಗಳು ಈ ಸರಣಿಯಲ್ಲಿದೆ. ಹಾಗಂತ ಇಲ್ಲಿನ ಕಥೆಗಳಲ್ಲಿ ಒಂದಕ್ಕೊಂದು ಸಂಬಂಧವಿಲ್ಲದ, ಬಿಡಿಬಿಡಿಯಾದ ಕಥೆಗಳು. ವೆಬ್ ಸರಣಿಗಳು ಎಂದರೆ ನಿದ್ದೆಗೆಟ್ಟು ಮುಂದಿನ ಸರಣಿಯಲ್ಲಿ ಏನಾಗುತ್ತದೆಯೋ ಎಂಬಂತೆ ಕೂತು ನೋಡಿದ್ದೂ ಇತ್ತು.ಅಂಥದ್ದರಲ್ಲಿ ಇಲ್ಲಿನ ಕಥಗಳು ಮಾತ್ರ ಒಟ್ಟಿಗೆ ಕೂತು ನೋಡಬೇಕೆನ್ನುವ ಹಪಾಹಪಿ ಸೃಷ್ಟಿಸದೆ ಪ್ರತಿ ಕಥೆಗಳನ್ನೂ ನಮ್ಮೊಳಗೆ ಇಳಿಸಿಕೊಳ್ಳಲು ಒಂದಷ್ಟು ಸಮಯ ಬೇಡುತ್ತದೆ. ಕೇರಳದ ಸುಂದರ ಚಿತ್ರಣ, ಕಣ್ಣಳತೆ ಮೀರಿಯೂ ಕಾಣುವ ಹಸಿರು ಗದ್ದೆಗಳು, ಜನರಿರುವ / ಇಲ್ಲದೇ ಇರುವ ಓಣಿಯ ತಿರುವು ಒಂದೊಂದು ಫ್ರೇಮ್ ಒಂದೊಂದು ರೂಪಕದ ರೀತಿಯಂತೆ ಬಳಕೆಯಾಗಿದೆ. ಕಥೆಗೆ ತಕ್ಕಂತೆಯೇ ಮಮ್ಮುಟ್ಟಿ, ಮೋಹನ್ ಲಾಲ್, ಪಾರ್ವತಿ ಮೆನನ್, ಮಧುಬಾಲಾ ಮೊದಲಾದ ಪ್ರಬುದ್ಧ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಕಥಾ ಸಂಕಲನವನ್ನು ಓದಲು ಕುಳಿತರೆ ಯಾವುದೋ ಒಂದೆರೆಡು ಕಥೆಗಳು ನಮ್ಮ ಮನಸ್ಸಿಗೆ ತಾಕದೆ ಮುಂದಿನ ಕಥೆ ಓದುವಂತೆ ಮಾಡುವ ಹಾಗೆಯೇ ಇಲ್ಲಿಯೂ ಒಂದೆರೆಡು ಕಥೆಗಳು ಮನಸ್ಸಿಗೆ ತಟ್ಟದೇ ಹೋದರೂ ಒಟ್ಟಾರೆ ಸರಣಿಗಳನ್ನು ನೋಡಿದಾಗ ಒಂದೊಳ್ಳೆ ಪುಸ್ತಕವನ್ನು ಓದಿದಷ್ಟೇ ಕುಶಿ ಕೊಡುವುದಂತೂ ಹೌದು. ಕಥೆಗಳನ್ನು ಓದಿದಾಗ ನಮ್ಮದೇ ಕಲ್ಪನಾ ಪ್ರಪಂಚದಲ್ಲಿ ಮುಂದುವರೆಯಲು ಅವಕಾಶ ನೀಡುವಂತೆ ಇಲ್ಲಿಯೂ ಸಾಧ್ಯವಾಗಿದ್ದು, ದೃಶ್ಯ ಮಾಧ್ಯಮಕ್ಕೆ ಕಥೆಗಳನ್ನು ಇಳಿಸಿರುವುದು ಮಿತಿ ಎಂಬ ಭಾವ ಮೂಡಿಸದೆ ಇರುವುದು ಈ ಸರಣಿಯ ವಿಶೇಷವೂ ಹೌದು.

ಇಂದಿನ ವೇಗಕ್ಕೆ, ಚರ್ವಿತ ಚರ್ವಣ ಕತೆಗಳಿರುವ ಸಿನಿಮ / ವೆಬ್ ಸರಣಿ ನೋಡಿ ಬೇಸರ ಬಂದಿರುವವರು ಒಳ್ಳೆಯ ಕಥಾ ಸಂಕಲನ ಓದಿದ ಅನುಭವಕ್ಕೆಂದು ನೋಡಿದಲ್ಲಿ ಮನಸ್ಸಿಗೆ ಮುದ ನೀಡುವುದರಲ್ಲಿ ಸಂಶಯವಿಲ್ಲ.


  • ಆತ್ಮಾ ಜಿ ಎಸ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW