ಘಮಘಮಿಸುವ ಸಬ್ಬಸಿಗೆ ಸಾರು ಮಾಡುವ ಬಗೆ ಗೊತ್ತಿದೆಯೇ? ಇಲ್ಲವಾದರೆ ಸಿದ್ಧರಾಮ ಕೂಡ್ಲಿಗಿ ಅವರು ಹೇಳಿಕೊಟ್ಟಿದ್ದಾರೆ, ತಪ್ಪದೆ ಮಾಡಿ ರುಚಿ ಹೇಗಿತ್ತು ಹೇಳಿ….
ಮಧ್ಯಾಹ್ನದ ಅಡುಗೆ ಏನು ಮಾಡಬೇಕೆಂದು ಬೆಳಿಗ್ಗೆ ಯೋಚಿಸುತ್ತಿರುವಾಗಲೇ… “ಸೊಪ್ಪು ಮಾರುವವರು” ಬಂದರು. ಪ್ರತಿದಿನವೂ ಮನೆಯ ಬಳಿ ಪುಟ್ಟಿ ಹೊತ್ತು ಬರುವ ಈ ಶ್ರಮಜೀವಿಗಳು ಅನ್ನ ಕೊಡುವ ತಾಯಂದಿರಂತೆಯೇ. ಅವರ ಬಳಿ ನನಗೆ ಇಷ್ಟವಾದ ಘಮಗುಡುವ “ಸಬ್ಬಸಿಗೆ” ಸೊಪ್ಪನ್ನು ಖರೀದಿಸಿದೆ. ಈ ತಾಯಂದಿರ ಹತ್ತಿರ ಏನೇ ಸೊಪ್ಪು, ತರಕಾರಿ ಖರೀದಿಸಿದರೂ ನಾನೆಂದೂ ಚೌಕಾಸಿ ಮಾಡೋದಿಲ್ಲ. ಹೊಟೇಲ್ ಗಳಲ್ಲಿ ಹೇಳಿದಷ್ಟು ದರದ ತಿಂಡಿ ತಿಂದು, ಮೇಲೆ ಟಿಪ್ಸ್ ಕೊಡುವ ನಾವು ಇಲ್ಲಿ ಕಷ್ಟಜೀವಿಗಳಿಗೆ ಒಂದೋ, ಎರಡೋ ರೂಪಾಯಿಗಳ ಚೌಕಾಸಿ ಮಾಡೊದು ಸುತಾರಾಂ ನನಗೆ ಇಷ್ಟವಾಗೋದಿಲ್ಲ.

–
ಘಮಘಮಿಸುವ ಸಬ್ಬಸಿಗೆ ನೋಡಿದೊಡನೆ ಒಳ್ಳೆಯ ಸಾರು ಮಾಡಬೇಕೆನ್ನುವ ಹುಮ್ಮಸ್ಸು ಬಂತು ನೋಡಿ. ಮೊದಲಿಗೆ ಬೇಳೆಯನ್ನು ಕುದಿಸಿಕೊಂಡೆ. ಸಬ್ಬಸಿಗೆಯನ್ನು ಚೆನ್ನಾಗಿ ನೀರಲ್ಲಿ ತೊಳೆದು, ಅದರೆ ಹಿಂಭಾಗವನ್ನಷ್ಟೇ ಕತ್ತರಿಸಿ ಇಟ್ಟುಕೊಂಡೆ. ಬೆಳ್ಳುಳ್ಳಿಯನ್ನು ಚೆನ್ನಾಗಿ ಹುರಿದು (ಸ್ವಲ್ಪ ಹೊತ್ತಿಸಿದರೆ ಸಾರು ಘಮಗುಡುತ್ತದೆ) ಜೀರಿಗೆ ಸಾಸ್ವೆ ಹಾಕಿ, ಮೊದಲೇ ನೆನೆಸಿ ಇಟ್ಟಿದ್ದ ಹುಣಸೆ ಹಣ್ಣನ್ನು ಹಿಂಡಿದೆ. ಈಗ ಅದಕ್ಕೆ ಸಣ್ಣಗೆ ಕತ್ತರಿಸುತ್ತಲೇ ಸಬ್ಬಸಿಗೆಯನ್ನು ಕುದಿಯಲು ಹಾಕಿದೆ. ನಂತರ ಖಾರ, ಉಪ್ಪು, ಅರಿಶಿಣ, ಸ್ವಲ್ಪ ಬೆಲ್ಲ ಹಾಕಿ ಚೆನ್ನಾಗಿ ಕುದಿಯಲು ಬಿಟ್ಟೆ. ಸಬ್ಬಸಿಗೆಯ ಘಮ ಪಾತ್ರೆಯಿಂದ ನನ್ನ ಮೂಗಿನ ಬಳಿ ಸುಳಿದಾಡಿ, ಅಡುಗೆ ಮನೆಯ ಬಾಗಿಲನ್ನು ದಾಟಿ, ಹೊರಗಿನ ಕೋಣೆಯಲ್ಲಿ ಹರಡತೊಡಗಿತು. ಚೆನ್ನಾಗಿ ಕುದ್ದ ನಂತರ, ಚೆನ್ನಾಗಿ ಬೆಂದ ಬೇಳೆಯನ್ನು ನುಣ್ಣಗೆ ಮಾಡಿ ಹಾಕಿದೆ. ಈಗ ನೋಡಿ ಸಾರು ಕುದಿಯತೊಡಗಿದಂತೆಲ್ಲ ನನ್ನ ರಸನೆಯನ್ನು ಆಸ್ವಾದಿಸುವ ಇಂದ್ರಿಯಗಳು ಜಾಗೃತಗೊಂಡವು. ಚೆನ್ನಾಗಿ ಕುದ್ದ ನಂತರ ರೊಟ್ಟಿಯೊಂದಿಗೆ ಈ ಸಾರನ್ನು ಬಾಯಲ್ಲಿರಿಸಿಕೊಂಡೆ. ಆಹಾ ! ಬಲ್ಲವರೇ ಬಲ್ಲರು ಈ ಸಾರಿನ ರುಚಿಯ ಎಂಬಂತೆ ನಿಧಾನವಾಗಿ ಆಸ್ವಾದಿಸಿದೆ. ಅಲ್ಲಿಗೆ ಸಬ್ಬಸಿಗೆ ಸಾರು, ರೊಟ್ಟಿಯೊಂದಿಗೆ ಈ ದಿನದ ಭೂರಿ ಭೋಜನ ಸಂಪನ್ನಗೊಂಡಿತು.

–
ಇನ್ನು ಈ ಸಬ್ಬಸಿಗೆ ಬಗ್ಗೆ ಒಂದಿಷ್ಟು ಮಾಹಿತಿ ನೋಡಿದೆ. ಆಂಗ್ಲ ಭಾಷೆಯಲ್ಲಿ Dill ಎಂದು ಕರೆಯಲ್ಪಡುವ ಸಬ್ಬಸಿಗೆಯನ್ನು ರಷ್ಯಾ ಹಾಗೂ ಉಕ್ರೇನ್ ದೇಶಗಳಲ್ಲಿ ಅತಿ ಹೆಚ್ಚು ಬಳಸಲ್ಪಡುತ್ತದೆ. ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಹೆಚ್ಚಿದ್ದು ಆರೋಗ್ಯಕ್ಕೆ ಉತ್ತಮವಾಗಿದೆ. ಹೀಗಾಗಿ ವಾರಕ್ಕೊಮ್ಮೆಯಾದರೂ ಈ ಸೊಪ್ಪನ್ನು ಬಳಸುವುದು ಉತ್ತಮ.
ಸಬ್ಬಸಿಗೆ ಮೂಳೆಗಳಿಗೆ ಉತ್ತಮ. ಇದರಲ್ಲಿನ ಹೇರಳವಾದ ಕ್ಯಾಲ್ಸಿಯಂ ಅಂಶ ಮೂಳೆಗಳನ್ನು ಬಲಪಡಿಸುತ್ತದೆ. ವಿಟಮಿನ್ ಬಿ ಇರುವುದರಿಂದ ಮಾನಸಿಕ ಒತ್ತಡವನ್ನು ನಿಯಂತ್ರಿಸುತ್ತದೆ.
ಸಬ್ಬಸಿಗೆ ಸೊಪ್ಪಿನ ರಸ ಹಾಗೂ ಜೇನನ್ನು ಬೆರೆಸಿ ಸೇವಿಸುವುದರಿಂದ ಅಜೀರ್ಣ ಸಂಬಂಧಿ ಕಾಯಿಲೆಗಳು ಗುಣವಾಗುತ್ತವೆ. ಚರ್ಮ ಸಂಬಂಧಿ ಅಲರ್ಜಿಗೆ ಸಬ್ಬಸಿಗೆ ಸೊಪ್ಪು ಹಾಗೂ ಅರಿಶಿಣವನ್ನು ಅರೆದು ಹಚ್ಚುವುದರಿಂದ ಗುಣವಾಗುತ್ತದೆ.
ಮಾಹಿತಿ : ವಿವಿಧ ಮೂಲಗಳಿಂದ
- ಸಿದ್ಧರಾಮ ಕೂಡ್ಲಿಗಿ
