‘ಮುಖವಾಡ ಧರಿಸುವ ಗುಳ್ಳೆನರಿಗಳು…ಎಚ್ಚರವಿರಲಿ ಈ ಉದರ ನಿಮಿತ್ತಂ ಬಹುಕೃತ ವೇಷಧಾರಿಗಳ ಬಗೆಗೆ’…ನಿವೃತ್ತ ಶಿಕ್ಷಕಿ, ಲೇಖಕಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿ ಬಂದ ಕವಿತೆಯನ್ನು ತಪ್ಪದೆ ಮುಂದೆ ಓದಿ….
ನಿಜಮುಖವನೆಲ್ಲಿ ಹುಡುಕಲಿ
ಈಗ
ಜಗದ ತುಂಬೆಲ್ಲ ಮುಖವಾಡಗಳಿರಲು
ಸ್ವಭಾಷೆ,ತಾಯ್ನೆಲದ ಬಂಧುತ್ವದ ನೆಪಹೂಡಿ
ಮನೆಬಾಗಿಲಿಗೆ ಬಂದು
ಟೊಪ್ಪಿ ಹಾಕುವರು
ಸಭ್ಯತೆಯ ಸೋಗಿನಲ್ಲಿ
ಹುಸಿವೇಷ ಧರಿಸಿ
ಮುಗುದರೆಲ್ಲರಿಗೆ ಈ ಜಗ
ಸೋಗಿಲ್ಲದಂತೆ ತೋರಲು
ಸೋಗೆಗರಿ ಮರೆಯಲ್ಲಿ
ಬಹು ವರ್ಣರಂಜಿತವಾಗಿ
ದೇವನಾ ಪರಿಯಲ್ಲಿ ಶುದ್ಧತೆಯ
ಮೆರೆಯುತಲಿ
ಬಡವರ ಹೊಟ್ಟೆಯ ತುತ್ತನು
ಕಸಿದು ಬಿಡುವರು
ಮಾನವತೆಯ ನುಂಗಿ
ನೀರು ಕುಡಿದು
ದಿನವಿಡೀ ದುಡಿದು ಬದುಕುವ
ಕೃಷಿಕರು ಕಾರ್ಮಿಕರು
ಮುಖವಾಡವಿಲ್ಲದೆ
ದುಡಿವ ಶ್ರಮ ವರ್ಗ
ದೇವನಿಗೆ ಪ್ರಿಯರಹರು
ಊಟವೂ ಉಪವಾಸವೂ
ಅವನಿಚ್ಛೆ ಎನುತಲಿ
ಉದರಪೋಷಣೆಗಾಗಿ
ಬಹುತೆರ ಛದ್ಮವೇಷ ತಾಳಿ
ಮುಖವಾಡ ಧರಿಸುವ
ಗುಳ್ಳೆನರಿಗಳು
ದುಡಿಮೆಯ ಶ್ರಮಕೆ
ಮೈತೆತ್ತಲಾರದೆ
ನಂಬಿಕೆ ದ್ರೋಹದಲಿ
ಎಗ್ಗಿಲ್ಲದೆ ಸುಳಿದು ಸುತ್ತಾಡಿ
ರಾಹುಗ್ರಸ್ತರಾಗಿಹರು ಸಾಮಾಜಿಕ ಸ್ವಾಸ್ಥ್ಯಕೆ!
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಲೇಖಕಿ, ಕೊಡಗು
