ಹೆಂಡತಿಗೆ ಬುದ್ಧಿ ಹೇಳಲಾರದವ ಇವನೆಂತ ಗಂಡನೋ…ರಾಮರಾಯರು ತಮ್ಮ ಅಸಹಾಯಕತೆಗೆ ಮರುಗಿ ಒಮ್ಮೆ ಜೋರಾಗಿ ನೆಲವನ್ನು ಗುದ್ದಿದರು. ಪುಟ್ಟ ತಲೆಗೆ ಇರುವ ಬುದ್ಧಿ ಈ ದೊಡ್ಡ ತಲೆ ಇರುವವರಿಗೆ ಇಲ್ಲವಾಯ್ತು.ಶೋಭಾ ನಾರಾಯಣ ಹೆಗಡೆ ಅವರ ‘ಮೌನ ಮಾತಾಗಿತ್ತು’ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಕೊಟ್ಟಿಗೆಯಲ್ಲಿ ಗೌರಿ ಒಂದೇ ಸಮನೇ ಅಂಬಾ… ಅಂತ ಕೂಗುತ್ತಿತ್ತು. ರಾಮರಾಯರು ಆ ಕೂಗನ್ನು ಕೇಳಲಾಗದೇ ತುಂಬಾ ವೇದನೆ ಪಡುತ್ತಾ ಪಡಸಾಲೆಯಲ್ಲಿ ಕೂತಿದ್ದರು. ಮೌನವಾಗಿ ಸೊಸೆ ಸಿಂಚನಾಳ ಈ ನಡೆ ಅವರಿಗೆ ಅರಗಿಸಿಕೊಳ್ಳಲಾಗಲಿಲ್ಲ. ಗೌರಿಯ ಕರು ಅದು ಪುಟ್ಟ ಕರು. ಅದು ಹೋರಿ ಎಂದು ಬೇರೆ ಕಡೆ ಮಾರೋದೇನಿತ್ತು? ಅದಕ್ಕೊಂದು ಮುಷ್ಟಿ ದಾಣಿ, ಹುಲ್ಲು ನೀಡಿದ್ರೆ ಇವರ ಅಪ್ಪನ ಮನೆ ಗಂಟೇನು ಹೋಗುತ್ತೆ? ಕೋಪ ಉಕ್ಕಿ ಬಂತು ಒಮ್ಮೆ.. ಇತ್ತೀಚೆಗೆ ಸ್ವಲ್ಪ ಬಿ.ಪಿ ಬೇರೆ ಶುರುವಾಗಿದೆ.
ಹೋಗಲಿ, ಮಗ ವಿವೇಕನಿಗಾದರೂ ಬುದ್ಧಿ ಬೇಡ್ವಾ? ಚಿಕ್ಕಂದಿನಿಂದ ದನ ಕರುಗಳ ಜೊತೆಯಲ್ಲಿ ಬೆಳೆದವ. ಅವಳಾದರೋ ಪಟ್ಟಣದ ಹುಡುಗಿ. ಇವ ಶುದ್ಧ ಹಳ್ಳಿಯಲ್ಲಿ ಬೆಳೆದವ. ಎಳೆವಯಸ್ಸಿನಲ್ಲಿ ಹಸು ಕರುಗಳ ಮೇಯಿಸುತ್ತಾ, ಶಾಲೆ ಕಾಲೇಜು ಮೆಟ್ಟಿಲು ಹತ್ತಿದವ. ಹೆಂಡತಿಗೆ ಬುದ್ಧಿ ಹೇಳಲಾರದವ ಇವನೆಂತ ಗಂಡನೋ…ತಮ್ಮ ಅಸಹಾಯಕತೆಗೆ ಮರುಗಿ ಒಮ್ಮೆ ಜೋರಾಗಿ ನೆಲವನ್ನು ಗುದ್ದಿದರು.ಕೈಗೆ ಕರೆಂಟ್ ಶಾಕ್ ಕೊಟ್ಟ ಹಾಗಾಯಿತು. ಸರ್ರನೆ ಎತ್ತಿ ಮೆತ್ತಗೆ ನೀವಿಕೊಂಡರು..
‘ಅಪ್ಪ, ಗೌರಿ ಹುಲ್ಲು ತಿಂತಿಲ್ಲ. ಅಕ್ಕಚ್ಚು ಕುಡೀತಿಲ್ಲ, ಕಣ್ಣೀರು ಸುರಿಸ್ತಿದೆ’ ಅಂತ ಹೇಳಿದ ವಿವೇಕ್ ಅಪ್ಪನ ಬಳಿ. ಅಷ್ಟರಲ್ಲಿ ಸಿಂಚನಾ ಏನೂ ಆಗಲ್ಲ. ಒಂದೆರಡು ದಿನ ಹೀಗೇ. ಹಸಿವು ಆದರೆ ತನ್ನಂತಾನೇ ತಿನ್ನುತ್ತೆ ಬಿಡಿ ಅಂದಳು ಕಟುವಾಗಿ. ಸೊಸೆಯ ಮಾತು ಕೇಳಿ ರಾಮರಾಯರ ಕಂಗಳು ಒದ್ದೆ ಆಯಿತು. ನಾ ಏನ್ ಮಾಡ್ಲಿ ಹೇಳು.ಈಗೆಲ್ಲಾ ನಿಮ್ದೇ ನಿರ್ಧಾರ. ಏನು ಬೇಕಾದರೂ ಮಾಡಿ ಅಂದರು ಮಗನ ಮುಖ ನೋಡದೇ. ಅಪ್ಪನಿಗೆ ಕೋಪ ಬಂದರೆ ಹೀಗೇ. ಏನೂ ಉಪಯೋಗ ಇಲ್ಲ ಎಂದರಿತ ವಿವೇಕ್ ತನ್ನ ಕೆಲಸಕ್ಕೆ ಹೊರಟು ಹೋದ.
ಅತ್ತ ಗೌರಿ,ಹುಲ್ಲು, ನೀರು ಮುಟ್ಟುತ್ತಿಲ್ಲ ತನ್ನ ಕಂದನ ಅಗಲಿಕೆಯಿಂದ..ಇತ್ತ ಗೌರಿಯ ವೇದನೆ ನೋಡಲಾರದೇ ರಾಮರಾಯರು ಕೂಡ ಮನ ನೋಯಿಸಿಕೊಂಡು ಒಂಟಿಯಾಗಿ ಎಲ್ಲೋ ಯೋಚಿಸುತ್ತ ಕುಳಿತು ಬಿಡುತ್ತಿದ್ದರು.
ಐದು ವರ್ಷದ ಮೊಮ್ಮಗ ಪೃಥ್ವಿ ಅಜ್ಜ ಸುಮ್ಮನೆ ಕುಳಿತಿರೋದು ನೋಡಿ, ‘ಅಜ್ಜ …ಯಾಕೆ ಒಂತರಾ ಇದೀರಾ? ನನ್ನ ಜೊತೆಗೆ ಆಡೋಕು ಬರ್ತಿಲ್ಲ ನೀವು. ನಮ್ಮ ಮನೆ ಗೌರಿ ಅಂಬಾ ಯಾಕೆ ಅಷ್ಟು ಕೂಗ್ತಿದೆ, ಅದಕ್ಕೆ ಹುಷಾರು ಇಲ್ವಾ?’ ಅಂತ ಮುದ್ದು ಮುದ್ದಾಗಿ ಕೇಳಿದಾಗ ಮೊಮ್ಮಗನ ಅಪ್ಪಿಕೊಂಡು ‘ಇಲ್ಲ ಪಾಪು…ಗೌರಿ ಅಂಬಾನ ಪಾಪು ಕಳೆದು ಹೋಗಿದೆ. ಅದಕ್ಕೆ ಅದು ಕೂಗ್ತಿದೆ’ ಅಂತ ಅವನಿಗೆ ತಿಳಿ ಹೇಳಿದರು. ಅವರ ಮನಸ್ಸಿಗೆ ತುಂಬಾ ನೋವುಂಟು ಆಗಿತ್ತು. ವಿವೇಕ್ ಮತ್ತೆ ಸಿಂಚನಾಳಿಗೆ ಮಾತ್ರ ಇದರ ಪರಿವೆಯೇ ಇರಲಿಲ್ಲ. ಇದಾಗಿ ಒಂದೆರಡು ದಿನ ಕಳಿದಿರಬಹುದು. ಬೆಳ್ಳಂಬೆಳಗ್ಗೆ ಸಿಂಚನಾ ‘ರೀ ನಮ್ಮ ಪಾಪು ಕಾಣ್ತಿಲ್ಲ, ನೋಡಿದ್ರಾ’… ಅಂತ ಭಯದಿಂದ ಮನೆ ತುಂಬಾ ಹುಡುಕಾಡ ತೊಡಗಿದಳು. ‘ಏ ಯಾಕೆ ಹಂಗೆ ಅರಚುತ್ತೀಯಾ, ಇಲ್ಲೇ ಎಲ್ಲಾದ್ರೂ ಇರ್ತಾನೆ ಬಿಡು’ ಅಂತ ಅಂದ ವಿವೇಕ್. ‘ಇಲ್ಲಾರಿ, ಮನೆ ಒಳಗೆ ಹೊರಗೆ ಎಲ್ಲಾ ಹುಡುಕಿದೆ ಕರೆದೆ ಎಲ್ಲೂ ಇಲ್ಲ. ನಮ್ಮ ಪಾಪು’.. ಎಂದಳು ಅಳುತ್ತಾ.
‘ಏನಾಯ್ತು ಅಂತ ಅಳ್ತಿದೀಯಾ ಈಗ’ ಎಂದ ಕೋಪದಿಂದ. ‘ಇಲ್ಲೇ ಎಲ್ಲೋ ಇರ್ತಾನೆ ನೋಡೋಣ’ ಅಂತ ಹುಡುಕತೊಡಗಿದ ವಿವೇಕ್. ‘ತಾಯಿ ಕರುಳು ನಿಮಗೆಲ್ಲಿ ಅರ್ಥ ಆಗಬೇಕು’ ಅಂತ ಸಿಂಚನಾ ಬಿಕ್ಕತೊಡಗಿದಳು. ಮೊಮ್ಮಗ ಕಳೆದು ಹೋಗಿದಾನೆ ಎಂಬ ನೋವಲ್ಲೂ ನಗು ಉಕ್ಕಿ ಬಂತು ರಾಮರಾಯರಿಗೆ, ತಡೆದುಕೊಳ್ಳಲು ಆಗಲಿಲ್ಲ. ‘ಏನಮ್ಮಾ, ತಾಯಿ ಕರುಳು ನಿನಗೆ ಮಾತ್ರ ಇರೋದಾ?. ನಮ್ಮ ಗೌರಿ ಏನು ಪಾಪ ಮಾಡಿತ್ತು ತಾಯಿ?. ಒಂದೆರಡು ದಿನ ಹಾಗೇ. ಹಸಿವು ಆದರೆ ತಿನ್ನುತ್ತೆ ಅಂದ್ಯಲ್ಲ ತಾಯಿ. ಈಗ ನಿನಗೆ ಮಾತ್ರ ತಾಯಿ ಕರುಳಿನ ನೋವು ಗೊತ್ತಾಗ್ತಿದೆಯಾ?’ … ಅಂತ ಕಟುಕಿದಾಗ ‘ಮಾವ ಪ್ಲೀಸ್, ನನ್ನ ಕ್ಷಮಿಸಿ ಬಿಡಿ. ಮತ್ತೆ ಕರುನ ಮನೆಗೆ ವಾಪಸ್ ತರೋಣ. ಬೇಗ ನನ್ನ ಮಗುನ ಹುಡುಕಿ ಕೊಡಿ ಮಾವಾ’… ಅಂತ ಅಳುತ್ತಾ ಅವರ ಕಾಲಿಗೆ ಬಿದ್ದಳು ಸಿಂಚನಾ.
ಅಮ್ಮೋರೆ, ಅಮ್ಮೋರೆ ಅಂತ ಹಿತ್ತಲ ಬಾಗಿಲಿನಲ್ಲಿ ಬಂದ ಕೂಗಿಗೆ ಎಲ್ಲರೂ ಧಾವಿಸಿ ಬಂದರು. ನೋಡಿದರೆ ಕೆಲಸ ಮಾಡುವ ರಂಗಿ ಕೂಗುತ್ತಾ ನಿಂತಿದ್ದಳು. ಅವಳ ಒಂದು ಕೈಯಲ್ಲಿ ಪೃಥ್ವಿ, ಇನ್ನೊಂದು ಕೈಯಲ್ಲಿ ಗೌರಿಯ ಪುಟ್ಟ ಕರು . ಸಿಂಚನಾ ಓಡಿ ಹೋಗಿ ಪೃಥ್ವಿಯನ್ನು ಬಾಚಿ ತಬ್ಬಿಕೊಂಡಳು. ಅತ್ತ ಕೊಟ್ಟಿಗೆಯಲ್ಲಿ ಇದ್ದ ಗೌರಿ ಕರುವನ್ನು ನೋಡಿ ಕುಣಿಯಲಾರಂಭಿಸಿತು. ಇವ ಎಲ್ಲಿ ಸಿಕ್ಕಿದ ನಿಂಗೆ ಅಂತ ವಿವೇಕ್ ರಂಗಿಯನ್ನು ಕೇಳಿದ. ‘ಅಯ್ಯೋ ಒಡೀರೆ, ನಮ್ಮ ಮನಿಗೆ ಬಂದು ನಮ್ಮ ಕರುನ ಕೊಡು ರಂಗಿ, ಪಾಪ ನಮ್ಮ ಮನೆ ಗೌರಿ ರಾಶಿ ಅಳ್ತಿದಾಳೆ ಅಂತ ಚಿಕ್ಕ ಯಜಮಾರ್ರದು ಒಂದೇ ಹಠ. ಯಾರ ಜೊತಿ ಬಂದೆ ಮಗ ಅಂದ್ರೆ ನಾನೊಬ್ಬನೇಯ ಅಂದ್ರು. ಮನೇಲಿ ಹೇಳಿಲ್ಲ ಹಾಗೇ ಬಂದವ್ರೆ ಅಂದ್ಕೊಂಡು ಬಿರನೇ ಓಡಿ ಬಂದೆ ಒಡಿಯ’… ಅಂದ್ಲು ರಂಗಿ. ರಾಮರಾಯರಿಗೂ ಖುಷಿ.. ಕರು ವಾಪಸ್ ಬಂದಿದ್ದು. ಮೊಮ್ಮಗ ಸಿಕ್ಕಿದ್ದು ಪುಟ್ಟ ತಲೆಗೆ ಇರುವ ಬುದ್ಧಿ ಈ ದೊಡ್ಡ ತಲೆ ಇರುವವರಿಗೆ ಇಲ್ಲವಾಯ್ತು. ಮೊಮ್ಮಗನ ಮೇಲೆ ಹೆಮ್ಮೆ ಆಯಿತು. ಖುಷಿಯಿಂದ ಯಕ್ಷಗಾನ ಪದ ಹಾಡುತ್ತಾ ಕರುವನ್ನು ತಾಯಿ ಗೌರಿಯ ಬಳಿ ಬಿಟ್ಟಾಗ ಗೌರಿ ಚಂಗನೆ ನೆಗೆನೆದು ಕರುವನ್ನು ಬಿಟ್ಟೂ ಬಿಡದೇ ನೆಕ್ಕಿ ನೆಕ್ಕಿ ಇಡುವ ಆ ಸಂಭ್ರಮ ನೋಡಿ ರಾಮರಾಯರ ಕಣ್ಣಂಚಿನಲ್ಲಿ ಆನಂದ ಭಾಷ್ಪ ಸುರಿಯಿತು. ಸಿಂಚನಾ ಕೂಡಾ ಗೌರಿ ನನ್ನ ಕ್ಷಮಿಸು ಅಂತ ಗೌರಿಯ ಮುಖ ಸವರಿದಾಗ ಗೌರಿಯ ಮುಖದಲ್ಲಿ ಮಿಂಚಿದ ಕಳೆಯ ಮೌನವೇ ಮಾತಾಗಿತ್ತು.
- ಶೋಭಾ ನಾರಾಯಣ ಹೆಗಡೆ
